ಅಂಕಣ

ಕರೊನಾ ಮಹಾಮಾರಿ ವಿರುದ್ಧ ಹೋರಾಡಲು ನಮಗೆ ನಾವೇ ಬಂಧುಗಳಾಗೋಣ

ಆಲ್ಬರ್ಟ್ ಐನ್ಸ್​ಸ್ಟೀನ್​ನ ವಿಶ್ವವಿಖ್ಯಾತ ಸೂತ್ರ E=MC2 ಮತ್ತು ಮೇಡಂ ಕ್ಯೂರಿ ಕಂಡು ಹಿಡಿದ ವಿಕಿರಣ ಧಾತುಗಳು ಹಾಗೂ ರಾಬರ್ಟ್ ಓಪನ್ ಹೈಮರ್ ಉತ್ಪಾದಿಸಿದ ಅಣುಬಾಂಬುಗಳನ್ನು ಹಲವಾರು ದೇಶಗಳು ತಯಾರಿಸಿಟ್ಟುಕೊಂಡು ಮೂರನೇ ಮಹಾಯುದ್ಧದ ಭಯಾನಕ ಕರಿನೆರಳು ಜಗತ್ತಿನಾದ್ಯಂತ ಹರಿದಾಡುತ್ತಿದ್ದುದು ಸರ್ವವಿದಿತ. ಮೂರನೇ ಮಹಾಯುದ್ಧಕ್ಕೆ ಯಾವ ಯಾವ ದೇಶಗಳು ಕಾರಣವಾಗಬಹುದು ಎಂಬ ಲೆಕ್ಕಾಚಾರದಲ್ಲಿದ್ದ ಜಗತ್ತಿಗೆ ಇದನ್ನೂ ಮೀರಿಸಬಹುದಾದ ರೀತಿಯಲ್ಲಿ, ಯಾರೂ ನಿರೀಕ್ಷಿಸದ ಹೊತ್ತಿನಲ್ಲಿ ಬಂದಂತಹುದೇ ಕರೊನಾ ವೈರಸ್ ಅಂದರೆ ಕೋವಿಡ್-19.

ಪ್ರಸ್ತುತ ಕರೊನಾ ವೈರಸ್ ಸಂಬಂಧಿ ರೋಗ ಇಡೀ ಭೂಮಂಡಲವನ್ನು ಕಾಮೋಡದಂತೆ ವ್ಯಾಪಿಸಿದೆ. ಈ ಮಾರಣಾಂತಿಕ ಕರೊನಾ ವೈರಸ್ಸಿನ ಮೂಲ ಕಾರಣ ಪ್ರಕೃತಿಯೋ ಅಥವಾ ಮಾನವನೋ ಎಂಬುದು ಈಗ ಮುಖ್ಯವಲ್ಲ. ಅದರಿಂದಾ ಗುತ್ತಿರುವ ದುಷ್ಪರಿಣಾಮ ಮಾತ್ರ ಭಯಾನಕವಾಗಿದೆ. ದೇಶ ದೇಶಗಳು ಬೇರೆಯಾದರೂ ಈ ರಾಕ್ಷಸಿ ಕರೊನಾದ ಗುರಿ ಮಾತ್ರ ಮನುಷ್ಯರೇ. ಇದನ್ನು ಪ್ರಾರಂಭದಲ್ಲಿ ಉದಾಸೀನ ಮಾಡಿದ ಅತಿರಥ ಮಹಾರಥ ದೇಶಗಳು ಇಂದು ನೆಲಕಚ್ಚಿ ತಮ್ಮ ದೇಶದಲ್ಲಿ ಬಲಿಯಾದ ತಮ್ಮದೇ ಪ್ರಜೆಗಳಿಗೆ ತಮ್ಮದೇ ನೆಲದಲ್ಲಿ ಸಂಸ್ಕಾರ ಮಾಡಲೂ ಜಾಗವಿಲ್ಲದಂತಾಗಿ ಪರಿತಪಿಸುತ್ತಿವೆ.

ಒಮ್ಮೆ ಯೋಚಿಸಿ! ನಾವು ಕೂಡ ಇದೇ ಭೂಮಿಯಲ್ಲಿ ಇರುವುದು. ಸುತ್ತೆಲ್ಲ ದೇಶಗಳಲ್ಲಿ ಆಗುತ್ತಿರುವ ಭಯಂಕರ ಸಾವು-ನೋವುಗಳನ್ನು ನೋಡಿದ ನಮ್ಮ ದೇಶ ತ್ವರಿತವಾಗಿ ಎಚ್ಚೆತ್ತುಗೊಂಡು ಮನುಷ್ಯ ಮನುಷ್ಯರ ಮೂಲಕ ಹರಡುವ ಈ ಭಯಂಕರ ಅಂಟುಜಾಡ್ಯದಿಂದ ಪಾರಾಗಲು ಇಡೀ ದೇಶದ ಎಲ್ಲ ತೆರನಾದ ಚಟುವಟಿಕೆಗಳನ್ನು ಲಾಕ್​ಔಟ್ ಮಾಡುವುದರ ಮೂಲಕ ಸ್ತಬ್ಧಗೊಳಿಸಿದೆ. ದೇಶದ ಎಲ್ಲ ಚಟುವಟಿಕೆಗಳನ್ನು ಸ್ತಬ್ಧಗೊಳಿಸುವುದರಿಂದ ಆಗುವ ಆರ್ಥಿಕ ನಷ್ಟದ ಅರಿವು ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿದಿದೆ. ಜೊತೆಗೆ ಎಲ್ಲ ಸಂಪನ್ಮೂಲಗಳಿಗಿಂತ ಶ್ರೇಷ್ಠವಾದುದು ಮಾನವ ಸಂಪನ್ಮೂಲ ಎಂಬುದರ ಅರಿವೂ ಇದೆ. ಮಾನವರೇ ಇಲ್ಲದ ಆರ್ಥಿಕತೆ ಮತ್ತು ಉಳಿದೆಲ್ಲ ಸಾಧನೆಗಳು ಸಾಧ್ಯವೂ ಇಲ್ಲ ಮತ್ತು ಉಪಯೋಗವೂ ಇಲ್ಲ.

ದೇಶದ ಜನತೆಯ ರಕ್ಷಣೆ ಎಲ್ಲಕ್ಕಿಂತ ಬಹುಮುಖ್ಯವೆಂದು ತಿಳಿದ ಸರ್ಕಾರ ಮೂರು ವಾರಗಳ ಕಾಲ ದೇಶವನ್ನೇ ಸ್ಥಬ್ದ ಗೊಳಿಸಿದೆ. ಈ ಸಮಯ ರಜೆಯಲ್ಲಿ ಕಾಲ ಕಳೆಯುವ, ಅಪ್ರಜ್ಞಾ ಪೂರ್ವಕವಾಗಿ ಎಲ್ಲಂದರಲ್ಲಿ ಓಡಾಡುವ ಸಂದರ್ಭವಲ್ಲ. ಈ ಮಹಾಮಾರಿಯನ್ನು ಹೊಡೆದೋಡಿಸಿ ಮಾನವರನ್ನು ರಕ್ಷಿಸುವ ಯಾವ ವೈಜ್ಞಾನಿಕ ತತ್ತ್ವಗಳಾಗಲಿ, ಗಣಿತದ ಸೂತ್ರಗಳಾಗಲೀ, ತಂತ್ರಜ್ಞಾನದ ಅಸ್ತ್ರ ಶಸ್ತ್ರಗಳಾಗಲೀ, ತಾಂತ್ರಿಕರ ತಂತ್ರ-ಮಂತ್ರಗಳಾಗಲೀ ಇದುವರೆಗೆ ಸಂಶೋಧನೆಯಾಗಿಲ್ಲ. ಈ ರೋಗವನ್ನು ಹೊಡೆದೋಡಿಸಬಹುದಾದ ಯಾವ ವೈದ್ಯಕೀಯ ಮದ್ದಾಗಲೀ, ಲಸಿಕೆಯಾಗಲಿ ಇನ್ನೂ ಸಿದ್ಧವಾಗಿಲ್ಲ. ಹೀಗಿರುವಾಗ ಗೀತೆಯಲ್ಲಿ ಹೇಳಿರುವಂತೆ-

ಉದ್ಧರೇತ್ ಆತ್ಮನಾತ್ಮಾನಂ ನ ಆತ್ಮಾನಂ ಅವಸಾದಯೇತ್

ಆತ್ಮೈವ ಹಿ ಆತ್ಮನೋ ಬಂಧುಃ ನ ಆತ್ಮ ಅವಸಾದಯೇತ್

ಇದು ಪಂಚಕೋಶಗಳನ್ನು ಮೀರಿದ ಅನಂತ, ಅವಿನಾಶಿಯಾದ ನಮ್ಮ ಸ್ವಸ್ವರೂಪದ ಬಗೆಗೆ ಮತ್ತು ಅದರ ಅರಿವಿನ ಬಗೆಗೆ ಹೇಳಿರುವ ಮಾತಾದರೂ, ಪಂಚಕೋಶಗಳಲ್ಲಿ ಒಂದಾದ ‘ಅನ್ನಮಯ ಕೋಶ’ವನ್ನು (ಭೌತಿಕ ದೇಹವನ್ನು) ರಕ್ಷಿಸಿಕೊಳ್ಳುವ ಕಾಲ. ಏಕೆಂದರೆ ಈ ದೇಹ ಇರುವುದರ ಮೂಲ ಉದ್ದೇಶವೇ ಸಾಧನೆಯ ಮುಖಾಂತರ ಮರೆತಿರುವ ತನ್ನನ್ನು ತಾನು ತಿಳಿಯುವುದು. ಹಲವಾರು ಜನ್ಮಗಳ ಸಾಧನೆಯ ಪುಣ್ಯ ವಿಶೇಷದಿಂದ ಬಂದಿರುವ ಪವಿತ್ರ ದೇಹವನ್ನು ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಗೀತೆಯ ಮಾತಿನಂತೆ ಈಗ ನಮಗೆ ನಾವೇ ಬಂಧುಗಳು, ತಪ್ಪಿದರೆ ನಮಗೆ ನಾವೇ ಶತ್ರುಗಳು.

ಇತ್ತೀಚೆಗೆ ಪ್ರತಿಯೊಬ್ಬರಿಗೂ ಚಿರಪರಿಚಿತವಾದ ಎರಡು ಶಬ್ದಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕಾಗಿದೆ. ಆ ಎರಡು ಶಬ್ದಗಳೇ ಸಾಮಾಜಿಕ ಅಂತರ (Social distancing) ಮತ್ತು ವೈಯಕ್ತಿಕ ಪ್ರತ್ಯೇಕತೆ(personal Isolation). ‘ಸಾಮಾಜಿಕ ಅಂತರವನ್ನು’ ಕಾಯ್ದುಕೊಳ್ಳುವುದರ ಜೊತೆಗೆ ಮನೆಯಲ್ಲಿ ಕುಟುಂಬ ಸದಸ್ಯರ ಜೊತೆಗೂ ಆದಷ್ಟು ‘ವೈಯಕ್ತಿಕ ಪ್ರತ್ಯೇಕತೆ’ಯನ್ನು ಕಾಯ್ದುಕೊಂಡು ಭಯಂಕರ ಪರಿಣಾಮವನ್ನು ಉಂಟುಮಾಡುವ ಈ ರೋಗದಿಂದ ಮುಕ್ತರಾಗಬೇಕಿದೆ. ಆ ನಿಟ್ಟಿನಲ್ಲಿ ವೈಯಕ್ತಿಕ ಶುಚಿತ್ವ ಮತ್ತು ತನ್ನ ಪರಿಸರದ ಶುಚಿತ್ವಕ್ಕೆ ಆದ್ಯತೆ ನೀಡಬೇಕಾಗಿದೆ. ಇದನ್ನು ಪಾಲಿಸಿದರೆ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ಜೊತೆಗೆ ಬಂಧು ಬಾಂಧವರನ್ನು, ನೆರೆಹೊರೆಯವರನ್ನು ತನ್ಮೂಲಕ ದೇಶವನ್ನೂ ರಕ್ಷಿಸಬಹುದು.

ಆಧುನಿಕ ಮಾನವ ಸುಮ್ಮನೇ ಓಡಾಡುವ ಚಟವನ್ನು ಬಿಟ್ಟು ಜವಾಬ್ದಾರಿಯುತ ಪ್ರಜೆಗಳಂತೆ ವರ್ತಿಸಿ ಸರ್ಕಾರ ಕಾಲಕಾಲಕ್ಕೆ ಆದೇಶಿ ಸುವ ತಜ್ಞರ ನಿಯಮಗಳನ್ನು ಪಾಲಿಸ ಬೇಕಿದೆ. ಪ್ರತಿಯೊಬ್ಬರೂ ಮನೆಯಲ್ಲಿಯೇ ಇದ್ದು ಜನ್ಮಕೊಟ್ಟ ತಂದೆ-ತಾಯಂದಿರ ಸೇವೆ ಮಾಡುತ್ತ, ದೇಶದ ಭವಿಷ್ಯದ ಆಸ್ತಿಯಾಗಿರುವ ಮಕ್ಕಳಿಗೆ ಸಂಸ್ಕಾರವನ್ನು ನೀಡುತ್ತ ಸಂಸ್ಕಾರಯುತ ಕುಟುಂಬದ ಬೇರುಗಳನ್ನು ಭದ್ರಪಡಿಸುವ ಕೈಂಕರ್ಯದಲ್ಲಿ ಪಾಲ್ಗೊಳ್ಳಬೇಕಿದೆ. ಎಲ್ಲ ಸಂಪನ್ಮೂಲಗಳಿಗಿಂತಲೂ ಮಾನವ ಸಂಪನ್ಮೂಲವೇ ಶ್ರೇಷ್ಠವೆಂದು ತಿಳಿದು ಎಲ್ಲವನ್ನೂ ಸ್ತಬ್ಧಗೊಳಿಸಿ ಮನುಷ್ಯರನ್ನು ಕರೊನಾ ಎಂಬ ಮಹಾಮಾರಿಯ ಮೃತ್ಯುಮುಖದಿಂದ ಪಾರಾಗಿಸಲು ಶ್ರಮಿಸುತ್ತಿರುವ ಸರ್ಕಾರಗಳನ್ನು ಅಭಿನಂದಿಸೋಣ. ಜೊತೆಗೆ ತಮ್ಮ ಪ್ರಾಣದ ಹಂಗನ್ನು ತೊರೆದು ಮಹಾಮಾರಿಯ ಎದುರಿಗೆ ಹಗಲಿರುಳೆನ್ನದೆ ಹೋರಾಡುತ್ತಿರುವ ವೈದ್ಯಲೋಕದ ವೈದ್ಯರು, ಶುಶ್ರೂಷಕಿಯರು ಮತ್ತು ಸಿಬ್ಬಂದಿ ವರ್ಗದ ಸೇವೆಯನ್ನು ಗೌರವಿಸಿ ಅವರೆಲ್ಲರಿಗೂ ನಮ್ಮ ಧನ್ಯವಾದಗಳನ್ನು ಅರ್ಪಿಸೋಣ.

(ಲೇಖಕರು ಪೀಠಾಧ್ಯಕ್ಷರು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ)