ಜಗತ್ತಿನಲ್ಲಿ ಗತಿಸಿದ ಯುದ್ಧಗಳಿಂದ ಸತ್ತವರ ಸಂಖ್ಯೆ ಲೆಕ್ಕಕ್ಕೆ ಸಿಗದು. 13ನೆಯ ಶತಮಾನದಷ್ಟು ಹಿಂದೆ ನಡೆದ ಮಂಗೋಲರ ಆಕ್ರಮಣದಲ್ಲಿ ಲಕ್ಷಕ್ಕಿಂತಲೂ ಹೆಚ್ಚು ಚೀನಿಯರು ಆತ್ಮಹತ್ಯೆ ಮಾಡಿಕೊಂಡರು. 17ನೆಯ ಶತಮಾನದಲ್ಲಿ ಚೀನಾದಲ್ಲಿ ನಡೆದ ಕಿಂಗ್ ಮತ್ತು ಮಿಂಗ್ ರಾಜಮನೆತನಗಳ 60 ವರ್ಷಗಳ ಘರ್ಷಣೆಯಲ್ಲಿ ಸುಮಾರು ಎರಡೂವರೆ ಕೋಟಿ ಜನರು ಸತ್ತರು. 1812ರಲ್ಲಿ ರಷ್ಯಾ ಫ್ರಾನ್ಸಿನ ಮೇಲೆ ನಡೆಸಿದ ಆಕ್ರಮಣದಲ್ಲಿ 65 ಲಕ್ಷ ಜನ ಅಸುನೀಗಿದರು. ಒಂದನೆಯ ಮಹಾಯುದ್ಧದಲ್ಲಿ ಎರಡೂವರೆ ಕೋಟಿ ಹಾಗೂ ಎರಡನೆಯ ಮಹಾಯುದ್ಧದಲ್ಲಿ 7 ಕೋಟಿಗಿಂತ ಹೆಚ್ಚಿನ ಜನರು ಪ್ರಾಣ ಕಳೆದುಕೊಂಡರು. ಇಂಥ ಘಟನೆಗಳಿಂದ ಮನುಕುಲ ಮಾತ್ರ ಪಾಠ ಕಲಿಯದೇ ಅದು ಮತ್ತೆ ಮತ್ತೆ ಯುದ್ಧ ಬಯಸುತ್ತಲೇ ಇದೆ. ಲಕ್ಷಾಂತರ ಜನರ ಸಾವನ್ನು ಕಂಡು ತನ್ನ ಗೆಲುವನ್ನು ಸಂಭ್ರಮಿಸಿಕೊಳ್ಳಲಾಗದ ಆಶೋಕನಂಥ ಆರಸ ಮತ್ತೆ ಈ ಜಗತ್ತಿನಲ್ಲಿ ಎಲ್ಲೂ ಹುಟ್ಟಲೇ ಇಲ್ಲ.
ಗತಿಸಿದ ಆಧುನಿಕ ಜಾಗತಿಕ ಯುದ್ಧಗಳು ಅನೇಕ ಸಮುದಾಯಗಳನ್ನು ಇಲ್ಲವಾಗಿಸುವುದರೊಂದಿಗೆ ಅವುಗಳ ಕುಟುಂಬಗಳನ್ನೇ ಸರ್ವನಾಶ ಮಾಡಿದೆ. ಸಾಮಾಜಿಕ ವ್ಯವಸ್ಥೆಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸುವುರೊಂದಿಗೆ ಒಟ್ಟು ರಾಷ್ಟ್ರದ ಅಭಿವೃದ್ಧಿ ಕುಂಠಿತಗೊಳಿಸಿವೆ. ಅವಶ್ಯವಾದ ಮಾನವ ಸಂಪನ್ಮೂಲದ ಪ್ರಾಮಾಣಿಕ ಬಳಕೆಗೂ ತಡೆಯೊಡ್ಡಿದೆ. ಇನ್ನೂ ನಮ್ಮ ಸಾಧನೆ ಸಾರುವ ವಾಸ್ತುಶಿಲ್ಪ, ಕಲಾಸಂಗ್ರಹ ಕೇಂದ್ರಗಳನ್ನು ವಿನಾಶದ ಅಂಚಿಗೆ ತಳ್ಳುತ್ತದೆ. ಯುದ್ಧ ಯೋಧರ ಸಾವೊಂದರಲ್ಲಿಯೇ ಅಂತ್ಯವಾಗುವುದಿಲ್ಲ. ಅದು ಸಮಗ್ರ ದೇಶದ ಸರ್ವಾಂಗೀಣ ಅವನತಿಗೂ ಕಾರಣವಾಗಿ ಬಡತನವನ್ನು ಹೆಚ್ಚಿಸುವುದರ ಮೂಲಕ ಬದುಕುಳಿದವರ ಮನೋಬಲವನ್ನು ಕುಗ್ಗಿಸುತ್ತದೆ. ಉದಾಹರಣೆಗೆ, ಈಗ ಅಫ್ಘಾನಿಸ್ತಾನದ ಶೇಕಡ 67.7ರಷ್ಟು ಯುವಕರು ವಿವಿಧ ಖಿನ್ನತೆಯಿಂದ ಬಳಲುತ್ತಿದ್ದಾರೆ. ಬೋಸ್ನಿಯಾದಲ್ಲಿ ಶೇಕಡ 40ರಷ್ಟು ಜನರು ಬರೀ ದ್ವೇಷದ ಮಾತುಗಳನ್ನು ಆಡುತ್ತಿದ್ದಾರೆ. ಇದೇ ರೀತಿ ರುವಾಂಡಾ, ಲೆಬನಾನ್, ಪ್ಯಾಲಿಸ್ತೀನ್, ಇಸ್ರೇಲ್, ಸೊಮಾಲಿಯಾ, ಉಗಾಂಡ, ಶ್ರೀಲಂಕಾ ಮತ್ತು ಇರಾನ್ ಮೊದಲಾದ ದೇಶಗಳು ಈಗಾಗಲೇ ಜರ್ಜರಿತವಾಗಿವೆ. ಈ ದೇಶಗಳಲ್ಲಿ ಗೆದ್ದವರು ಯಾರು? ಸೋತವರು ಯಾರು? ಇಂದಿಗೂ ಯಾರಿಗೆ ತಿಳಿಯದ ಸಂಗತಿಯಾಗಿದೆ.
ಯುದ್ಧ ಜನರ ಮನಸ್ಸಿನ ಆರೋಗ್ಯವನ್ನು ಹಾಳು ಮಾಡುವುದಲ್ಲದೆ ಭೌತಿಕವಾಗಿ ದೇಶವನ್ನು ಘಾಸಿಗೊಳಿಸುತ್ತದೆ. ಯುದ್ಧ ಉಂಟು ಮಾಡಿದ ಗಾಯಗಳನ್ನು ಗುಣಪಡಿಸುವುದು ಅಸಾಧ್ಯ. ಯುದ್ಧ ಸಾಮಾನ್ಯ ಜನತೆಯ ತಿಳಿವಳಿಕೆಗೆ ನಿಲುಕದ್ದು, ಭಯಾನಕವಾದದು. ಯುದ್ಧಾನಂತರ ಭಯಾನಕ ಕಾಯಿಲೆಗಳು ಹರಡುವುದರಿಂದ ಆಯಾ ದೇಶದ ಅಭಿವೃದ್ಧಿ 20 ವರ್ಷ ಹಿಂದಕ್ಕೆ ತಳ್ಳಲ್ಪಡುತ್ತದೆ. ಆಕ್ರಂದನವೇ ಯುದ್ಧದ ಸ್ಥಾಯಿಭಾವವಾಗಿರುವುದರಿಂದ ಅಂತಾರಾಷ್ಟ್ರೀಯ ಸಂಬಂಧಗಳನ್ನು ಬಲಹೀನಗೊಳ್ಳುತ್ತವೆ. ಚರಿತ್ರೆಯ ಪುಟಗಳನ್ನು ಯುದ್ಧಕಾಲಕ್ಕೂ ಮುನ್ನ ನಾವು ನೋಡದೆ ಹೋದರೆ ವರ್ತಮಾನ ಅರ್ಥವಾಗುವುದಿಲ್ಲ. ವರ್ತಮಾನ ಅರ್ಥವಾಗದಿದ್ದರೆ ಭವಿಷ್ಯ ಕಗ್ಗತ್ತಿಲಿನ ಕಾರ್ಮೋಡವಾಗುತ್ತದೆ.