ಅಂಕಣ

ಆ ಕ್ಷಣ ಅಂಕಣ| ಮಗನಿಗೇ ಚಿತ್ರಹಿಂಸೆ ಕೊಟ್ಟ ತಾಯಿ

ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿದ್ದ ನಟರಾಜ್ ತನ್ನ ಊರಿನವಳೇ ಆದ ಶೀಲಾಳನ್ನು ಲಗ್ನವಾಗಿದ್ದ. ಅನ್ಯೋನ್ಯದಿಂದಿದ್ದ ಈ ಜೋಡಿಗೆ ವಿನಯ್ ಎನ್ನುವ ಮಗನೂ ಸುಧಾ ಎನ್ನುವ ಮಗಳೂ ಇದ್ದರು. ನಟರಾಜನಿಗೆ ಕೊಲ್ಲಿ ರಾಷ್ಟ್ರವೊಂದರ ದೊಡ್ಡ ಕಂಪನಿಯೊಂದರಲ್ಲಿ ಜವಾಬ್ದಾರಿಯುತ ಹುದ್ದೆ ದೊರಕಿದಾಗ ಆತ ತನ್ನ ಕುಟುಂಬವನ್ನೂ ತನ್ನೊಡನೆ ಹೊರದೇಶಕ್ಕೆ ಕರೆದುಕೊಂಡು ಹೋದ. ಎರಡು ವರ್ಷದ ನಂತರ ಶೀಲಾ ಗರ್ಭಿಣಿಯಾದಾಗ ಹೆರಿಗೆಗಾಗಿ ತವರಿಗೆ ಬರಬೇಕಾಯಿತು. ಮೂರನೆಯ ಮಗುವಾಗಿ ನಳಿನಿ ಜನಿಸಿದ ನಂತರ ನಟರಾಜ್ ತನ್ನ ಕುಟುಂಬವನ್ನು ಭಾರತದಲ್ಲೇ ಬಿಡಲು ತೀರ್ವನಿಸಿದ. ‘ನಮ್ಮ ಮಕ್ಕಳು ಕೊಲ್ಲಿ ದೇಶದಲ್ಲಿ ಬೆಳೆಯುವುದು ನನಗಿಷ್ಟವಿಲ್ಲ. ನಮ್ಮ ದೇಶದ ಸಂಸ್ಕೃತಿ, ಆಚಾರ ವಿಚಾರಗಳನ್ನು ಅವರು ಅಳವಡಿಸಿಕೊಳ್ಳಬೇಕು. ಮಕ್ಕಳ ಜತೆಗೆ ನಮ್ಮೂರಿನಲ್ಲಿಯೇ ವಾಸಮಾಡು. ಪ್ರತಿತಿಂಗಳೂ ಹಣವನ್ನು ಕಳುಹಿಸುತ್ತೇನೆ. ನಾನು ವರ್ಷಕ್ಕೆ ಎರಡು, ಮೂರು ಬಾರಿ ಅಲ್ಲಿಗೆ ಬರುವೆ’ ಎಂದು ಪತ್ನಿಗೆ ಹೇಳಿದ.

ಈ ಸಲಹೆಗೆ ಶೀಲಾ ಒಪ್ಪಿದಳು. ಮೂರನೆಯ ಕೂಸಿಗೆ ಆರು ತಿಂಗಳು ತುಂಬಿದ ನಂತರ ಶೀಲಾ ತವರುಮನೆಯಲ್ಲಿ ಇರಲು ಇಚ್ಛಿಸದೆ ಗಂಡನಿದ್ದ ಊರಿನಲ್ಲಿ ಬಾಡಿಗೆಮನೆಯನ್ನು ಹಿಡಿದು ಮಕ್ಕಳ ಜತೆ ವಾಸಿಸತೊಡಗಿದಳು. ಇಬ್ಬರು ಮಕ್ಕಳನ್ನೂ ಒಳ್ಳೆಯ ಶಾಲೆಗೆ ಸೇರಿಸಿದಳು. ಗಂಡನಿಲ್ಲದ ಜೀವನ ಆಕೆಗೆ ಆರಂಭದಲ್ಲಿ ಬೇಸರ ತರಿಸಿದರೂ, ಮಕ್ಕಳ ಪಾಲನೆಯಲ್ಲಿ ಆಕೆಗೆ ಸಮಯ ಕಳೆಯುತ್ತಿದ್ದುದೇ ತಿಳಿಯುತ್ತಿರಲಿಲ್ಲ. ಒಮ್ಮೆ ಆಕೆ ಮದುವೆಯೊಂದಕ್ಕೆ ಹೋಗಿದ್ದಾಗ ಅವಳಿಗೆ ಸತೀಶ್ ಎನ್ನುವವನ ಪರಿಚಯವಾಯಿತು. ಶ್ರೀಮಂತ ಕುಟುಂಬವೊಂದಕ್ಕೆ ಸೇರಿದ್ದು, ದೊಡ್ಡ ಅಂಗಡಿಯೊಂದನ್ನಿಟ್ಟಿದ್ದ 37 ವರ್ಷದ ಸತೀಶ್ ಸ್ಪುರದ್ರೂಪಿಯೂ ಆಗಿದ್ದ. ಇಬ್ಬರು ಮಕ್ಕಳ ತಂದೆಯಾಗಿದ್ದ ಆತ ತನ್ನ ಹೆಂಡತಿಯನ್ನೂ ಶೀಲಾಗೆ ಪರಿಚಯಿಸಿದ. ಕಾಲಕ್ರಮೇಣ ಶೀಲಾ ಮತ್ತು ಸತೀಶ್ ಸನಿಹಕ್ಕೆ ಬಂದರು. ‘ನೀವು ಒಬ್ಬಂಟಿಯಾಗಿ ಮೂವರು ಮಕ್ಕಳನ್ನೂ, ಮನೆಯನ್ನೂ ನಿಭಾಯಿಸುತ್ತಿದ್ದೀರಿ, ಇನ್ನುಮುಂದೆ ನಿಮ್ಮ ಸಹಾಯಕ್ಕೆ ನಾನಿದ್ದೇನೆ’ ಎಂದು ಸತೀಶ್ ಹೇಳಿ ಶೀಲಾಗೆ ಬೇಕಾದ ಸಣ್ಣಪುಟ್ಟ ಸಹಾಯಗಳನ್ನು ಮಾಡಿಕೊಡತೊಡಗಿದ.

ಕೆಲವೇ ವಾರಗಳ ನಂತರ ಸತೀಶ್ ಹಾಗೂ ಶೀಲಾಳ ನಡುವೆ ದೈಹಿಕ ಸಂಪರ್ಕ ಬೆಳೆಯಿತು. ಆರಂಭದಲ್ಲಿ ಶೀಲಾಳ ಮಕ್ಕಳು ಶಾಲೆಗೆ ಹೋದ ಸಮಯದಲ್ಲಿ ಆಕೆಯ ಮನೆಗೆ ಸತೀಶ್ ಬರುತ್ತಿದ್ದ. ನೆರೆಹೊರೆಯವರು ಗಮನಿಸಬಹುದೆಂಬ ಹೆದರಿಕೆಯಿಂದ ರಾತ್ರಿ ವೇಳೆಯಲ್ಲಿ ಮಾತ್ರ ಶೀಲಾಳ ಮನೆಗೆ ಬಂದು ಬೆಳಗಾಗುವಷ್ಟರಲ್ಲಿ ವಾಪಸಾಗುತ್ತಿದ್ದ. ರಾತ್ರಿ ವೇಳೆಯಲ್ಲಿ ಮಕ್ಕಳು ತಮ್ಮ ಕೋಣೆಯಲ್ಲಿ ನಿದ್ರಿಸುತ್ತಿದ್ದರಿಂದ ಅವರಿಬ್ಬರ ವ್ಯವಹಾರ ನಿರಾತಂಕವಾಗಿ ಸಾಗಿತ್ತು.

ಒಂದು ರಾತ್ರಿ ಸತೀಶ್ ಶೀಲಾಳ ಕೋಣೆಯಲ್ಲಿದ್ದಾಗ ಶೀಲಾ ತನ್ನ ಬೆಡ್​ರೂಂ ಬಾಗಿಲ ಅಗುಳಿ ಹಾಕುವುದನ್ನು ಮರೆತಿದ್ದಳು. ರಾತ್ರಿ 11 ಗಂಟೆಗೆ ಕೆಟ್ಟ ಕನಸು ಕಂಡು ಎಚ್ಚರಗೊಂಡ ಎಂಟು ವರ್ಷದ ವಿನಯ್ ಓಡುತ್ತ ತಾಯಿಯ ಕೋಣೆಗೆ ಬಂದ. ಕೋಣೆಯಲ್ಲಿ ತನ್ನ ಅಮ್ಮ ಪರಪುರಷನ ಜೊತೆ ಇರುವುದನ್ನು ಕಂಡು ಗಾಬರಿಯಾಗಿ ಅಳುತ್ತ ರೂಮಿಗೆ ವಾಪಸಾದ. ಬೇಗಬೇಗನೇ ತನ್ನ ಬಟ್ಟೆಗಳನ್ನು ಸರಿಮಾಡಿಕೊಂಡು ಮಕ್ಕಳ ಕೋಣೆಗೆ ಹೋದ ಶೀಲಾ,‘ಇನ್ನೊಬ್ಬರ ಕೋಣೆಯ ಒಳಗೆ ಬರುವ ಮುನ್ನ ಬಾಗಿಲು ತಟ್ಟಿ ಬರಬೇಕು ಎನ್ನುವ ಪರಿಜ್ಞಾನ ನಿನಗಿಲ್ಲವೇ’ ಎಂದು ಮಗನನ್ನು ಗದರಿಸಿ, ಅವನನ್ನು ಹೊಡೆದಳು. ‘ನಮ್ಮ ರೂಮಿನಲ್ಲಿ ನೋಡಿದ್ದನ್ನು ಯಾರಿಗಾದರೂ ಹೇಳಿದರೆ ನಾಲಿಗೆಯನ್ನೇ ಕತ್ತರಿಸುತ್ತೇನೆ’ ಎಂದು ಹೆದರಿಸಿದಳು.

ಈ ಘಟನೆ ನಂತರ ಶೀಲಾಳ ಮನೆಗೆ ರಾತ್ರಿ ವೇಳೆ ಬರುವುದನ್ನು ಸತೀಶ್ ಕಡಿಮೆ ಮಾಡಿದ. ಅವರಿಬ್ಬರೂ ಬೇರೆ ಬೇರೆ ಜಾಗಗಳಲ್ಲಿ ಮಕ್ಕಳಿಗೆ ತಿಳಿಯದ ಹಾಗೆ ಸಂಧಿಸುತ್ತಿದ್ದರು. ಒಂದು ದಿನ ವಿನಯ್ನನ್ನು ಶಾಲೆಯಿಂದ ಶೀಲಾ ಮನೆಗೆ ಕರೆತರುವ ಸಮಯದಲ್ಲಿ ಆ ಬಾಲಕ ಇದ್ದಕ್ಕಿದ್ದಂತೆ ‘ಅಮ್ಮ, ಸತೀಶ್ ಅಂಕಲ್ ಆ ರಾತ್ರಿ ನಿನ್ನ ರೂಮಿನಲ್ಲೇಕಿದ್ದರು?’ ಎಂದು ಕೇಳಿದ. ಕಸಿವಿಸಿಗೊಂಡ ಶೀಲಾ, ‘ಈ ರೀತಿ ಮಾತನಾಡಿದರೆ ಬಾಯಿಗೆ ಬರೆ ಹಾಕುತ್ತೇನೆ’ ಎಂದಳು. ವಿನಯ್ ತನ್ನ ತಂದೆಗೆ ಆ ರಾತ್ರಿ ಕಂಡ ವಿಷಯವನ್ನು ಹೇಳಬಹುದೆಂಬ ಆತಂಕ ಶಿಲಾಳನ್ನು ಕಾಡತೊಡಗಿತು. ಮಾರನೆಯ ಸಂಜೆ ಶೀಲಾಳ ಮನೆಗೆ ಸತೀಶ್ ಬಂದಾಗ, ‘ಅಂಕಲ್, ನೀವೇಕೆ ಪದೇಪದೆ ನಮ್ಮ ಮನೆಗೆ ಬರುತ್ತೀರಿ, ನಿಮ್ಮ ಮನೆ ಇಲ್ಲವೇ?’ ಎಂದು ವಿನಯ್ ಕೇಳಿದ. ಕೋಪಗೊಂಡ ಶೀಲಾ ಕಾಯಿಸಿದ ಮಗಚುವ ಕೈನಿಂದ ಮಗನ ಕಾಲಿಗೆ ಬರೆ ಹಾಕಿ ಆತ ನೋವಿನಿಂದ ಚೀರತೊಡಗಿದಾಗ ಅವನನ್ನು ಕೋಣೆಯಲ್ಲಿ ಕೂಡಿಹಾಕಿದಳು.

ಅದೇ ರಾತ್ರಿ ವಿನಯ್ನ ವರ್ತನೆ ಬಗ್ಗೆ ಸತೀಶ್ ಹಾಗೂ ಶೀಲಾ ರ್ಚಚಿಸಿದರು. ‘ನಾವು ಹೀಗೆಯೇ ಬಿಟ್ಟರೆ ನಿನ್ನ ಮಗ ಒಂದಲ್ಲ ಒಂದು ದಿನ ನಮ್ಮ ಗುಟ್ಟನ್ನು ಅವನ ತಂದೆಗೆ ತಿಳಿಸುತ್ತಾನೆ’ ಎಂದು ಸತೀಶ್ ಹೇಳಿದಾಗ, ‘ನೀನೇ ಏನಾದರೂ ಮಾಡು’ ಎಂದಳು ಶೀಲಾ. ಮಾರನೆಯ ದಿನವೇ ಸತೀಶ್ ವಿನಯ್ನನ್ನು ಶೀಲಾಳ ಮುಂದೆ ವಿವಸ್ತ್ರಗೊಳಿಸಿ ಅವನ ಬೆತ್ತಲೆ ದೇಹಕ್ಕೆ ಸೂಜಿಯಿಂದ ಚುಚ್ಚಿ ಆ ರಾತ್ರಿ ನೋಡಿದ್ದನ್ನು ಯಾರಿಗೂ ಹೇಳದಂತೆ ತಾಕೀತು ಮಾಡಿದ. ಈ ಕೃತ್ಯವನ್ನು ಶೀಲಾ ತನ್ನ ಮೊಬೈಲ್​ನಲ್ಲಿ ಚಿತ್ರೀಕರಿಸಿದಳು. ‘ನಾನು ನಿಮ್ಮ ಬಗ್ಗೆ ಅಪ್ಪನಿಗೆ ಹೇಳುವುದಿಲ್ಲ’ ಎಂದು ಪ್ರಮಾಣ ಮಾಡಿಸಿಕೊಂಡ ನಂತರವೇ ವಿನಯನಿಗೆ ಕಿರುಕುಳವನ್ನು ನಿಲ್ಲಿಸಲಾಯಿತು.

ಕೆಲವೇ ದಿನಗಳ ನಂತರ ವಿನಯ್ ಸತೀಶ್ ತಮ್ಮ ಮನೆಗೆ ಏಕೆ ಬರುತ್ತಿದ್ದಾನೆಂದು ಶೀಲಾಳನ್ನು ಕೇಳಿದಾಗ ಆಕೆ ಸತೀಶನಿಗೆ ದೂರಿತ್ತಳು. ಆತ ವಿನಯ್ನ ಬೆನ್ನಿಗೆ ಉರಿಯುತ್ತಿದ್ದ ಸಿಗರೇಟ್​ನಿಂದ ಸುಟ್ಟ. ಐದು ದಿನಗಳ ತರುವಾಯ ಅ ಬಾಲಕನ ಮರ್ವಂಗಕ್ಕೆ ಉರಿಯುವ ಬಿಸಿಮೇಣವನ್ನು ಹಾಕಿ ವಿಕೃತ ಖುಷಿ ಪಟ್ಟ. ಇದನ್ನೂ ಶೀಲಾ ತನ್ನ ಮೊಬೈಲ್​ನಲ್ಲಿ ಸೆರೆ ಹಿಡಿದಳು. ಈ ಕ್ರೌರ್ಯದ ಫಲವಾಗಿ ವಿನಯ್ಗೆ ತೀವ್ರ ರೀತಿಯ ಗಾಯವಾದ ಕಾರಣ ಅವನನ್ನು ಒಂದು ವಾರ ಶಾಲೆಗೇ ಕಳಿಸಲಿಲ್ಲ. ತನಗಾಗುತ್ತಿದ್ದ ಹಿಂಸೆಯನ್ನು ತಡೆಯಲಾರದೆ ವಿನಯ್ ರೋಸಿಹೋಗಿದ್ದ. ಒಂದು ದಿನ ಶೀಲಾ ಸ್ನಾನಕ್ಕೆ ಹೋಗಿದ್ದಾಗ ವಿನಯ್ ಅವಳ ಮೊಬೈಲ್ ತೆಗೆದುಕೊಂಡು ತನಗೆ ಶಿಕ್ಷೆ ನೀಡಿರುವ ವಿಡಿಯೋಗಳನ್ನು ನೋಡಿದ. ಅದೇ ಫೋನಿನಲ್ಲಿ ಶೀಲಾ ಸತೀಶನೊಡನೆ ಕಾಮಕೇಳಿ ನಡೆಸುವ ಕೆಲ ದೃಶ್ಯಗಳೂ ಇದ್ದವು. ಈ ಎಲ್ಲ ವಿಡಿಯೋಗಳನ್ನೂ ವಿನಯ್ ಪೆನ್​ಡ್ರೖೆವ್​ನಲ್ಲಿ ನಕಲು ಮಾಡಿ, ಮುಚ್ಚಿಟ್ಟುಕೊಂಡ.

ಮೂರು ತಿಂಗಳ ನಂತರ ನಟರಾಜ್ ಊರಿಗೆ ವಾಪಸ್ಸಾದಾಗ ವಿನಯ್ ಖಿನ್ನತೆಯಿಂದ ಇರುತ್ತಿದ್ದುದನ್ನು ಕಂಡು ಮಗನನ್ನು ರಮಿಸಿ ಕಾರಣವನ್ನು ಕೇಳಿದ. ಎದುರಿಗೇ ಇದ್ದ ಶೀಲಾ ಅವನಿಗೆ ಸನ್ನೆಯಿಂದಲೇ ಎಚ್ಚರಿಸಿದಳು. ವಿನಯ್ ಏನನ್ನೂ ಮಾತನಾಡಲಿಲ್ಲ. ಇದನ್ನು ಸೂಕ್ಷ್ಮವಾಗಿ ಗ್ರಹಿಸಿದ ನಟರಾಜ್ ಮಗನನ್ನು ತನ್ನ ಜತೆಯಲ್ಲಿ ರ್ಪಾಗೆ ಕರೆದುಕೊಂಡು ಹೋಗಿ ವಿಚಾರಿಸಿದಾಗ ವಿನಯ್ ನಡೆದ ಎಲ್ಲ ವಿಷಯಗಳನ್ನೂ ತಂದೆಗೆ ತಿಳಿಸಿ ತನ್ನ ದೇಹದ ಮೇಲಿನ ಗಾಯದ ಗುರುತುಗಳನ್ನು ತೋರಿಸಿದ. ಆನಂತರ ತಾನು ತನ್ನ ಅಮ್ಮನ ಮೊಬೈಲ್ ಫೋನಿನಿಂದ ನಕಲು ಮಾಡಿಕೊಂಡಿದ್ದ ವಿಡಿಯೋಗಳಿರುವ ಪೆನ್​ಡ್ರೖೆವ್ ಅನ್ನು ಅಪ್ಪನಿಗೆ ಕೊಟ್ಟು ‘ಇದರಲ್ಲೇನಿದೆ ನೋಡು’ ಎಂದ.

ನಟರಾಜ್ ತನ್ನ ಲ್ಯಾಪ್​ಟಾಪಿನಲ್ಲಿ ಆ ವಿಡಿಯೋಗಳನ್ನು ನೋಡಿ ಕೆಂಡಾಮಂಡಲವಾದ. ಶೀಲಾಳನ್ನು ಮಕ್ಕಳೆದುರೇ ಹಿಗ್ಗಾಮುಗ್ಗಾ ಥಳಿಸಿ, ‘ನಿನ್ನ ಕ್ಷಣಿಕ ಸುಖಕ್ಕಾಗಿ ಒಂಬತ್ತು ವರ್ಷದ ಬಾಲಕನಿಗೆ ಚಿತ್ರಹಿಂಸೆ ಕೊಟ್ಟಿರುವ ನೀನು ರಾಕ್ಷಸಿಯೋ ಅಥವಾ ತಾಯಿಯೋ’ ಎಂದು ಬೈದು ಅದೇ ಕ್ಷಣ ಶೀಲಾಳನ್ನು ಮನೆಯಿಂದ ಹೊರಹಾಕಿದ. ಮಾರನೆಯ ಬೆಳಗ್ಗೆಯೇ ನಟರಾಜ್ ವಿನಯ್ನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಪತ್ನಿ ಮತ್ತು ಸತೀಶ್ ವಿರುದ್ಧ ದೂರು ನೀಡಿ, ಸಬೂತಾಗಿ ವಿಡಿಯೋಗಳಿದ್ದ ಪೆನ್​ಡ್ರೖೆವ್ ಕೊಟ್ಟ.

ಪೋಕ್ಸೋ ಕಾಯ್ದೆಯಡಿಯಲ್ಲಿ ದೂರನ್ನು ದಾಖಲಿಸಿದ ಪೊಲೀಸರು ವಿನಯ್ನನ್ನು ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಿದರು. ಆತನಿಗೆ ದೈಹಿಕ ಗಾಯಗಳಾಗಿರುವುದಲ್ಲದೇ ಮಾನಸಿಕ ಆಘಾತವೂ ಆಗಿದೆ ಎಂದು ವೈದ್ಯರು ವರದಿ ನೀಡಿದರು. ಆನಂತರ ವಿನಯ್ನನ್ನು ಆಪ್ತ ಸಮಾಲೋಚಕರ ಬಳಿ ಕಳುಹಿಸಿದಾಗ ಆತ ತೀವ್ರ ಒತ್ತಡದಲ್ಲಿದ್ದುದು ತಿಳಿದು ಬಂದಿತು. ಪ್ರಕರಣ ದಾಖಲಾದ ಕೂಡಲೇ ನಟರಾಜ್ ಪತ್ನಿಗೆ ವಿವಾಹ ವಿಚ್ಛೇದನದ ನೋಟೀಸ್ ನೀಡಿದ.

ಶೀಲಾ ಮತ್ತು ಸತೀಶ್​ರನ್ನು ಬಂಧಿಸಿ ಅವರ ವಿರುದ್ಧ ಪೊಕ್ಸೋ ಕಾಯಿದೆಯಲ್ಲದೆ ಐಪಿಸಿಯ ವಿವಿಧ ಕಲಂಗಳನ್ನು ಅಳವಡಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಯಿತು. ವಿಶೇಷ ನ್ಯಾಯಾಲಯ ಶೀಲಾಳಿಗೆ ಎರಡು ಬೇರೆ ಬೇರೆ ಆರೋಪಗಳಿಗೆ ಸಂಬಂಧಿಸಿದಂತೆ ತಲಾ ಎಳು ವರ್ಷಗಳ ಕಠಿಣ ಶಿಕ್ಷೆ ವಿಧಿಸಿತು. ವಿನಯ್ನಿಗೆ ಲೈಂಗಿಕ ಶೋಷಣೆ ಮಾಡಿದ ಆರೋಪದ ಮೇಲೆ ಸತೀಶನಿಗೆ 10 ವರ್ಷದ ಜೈಲುವಾಸ ವಿಧಿಸಿತು. ‘ಒಬ್ಬ ಹೆಣ್ಣಿಗಿಂತ ಭಯಾನಕವಾದ ಕೇಡು ಇಲ್ಲ’ ಎಂದು ಗ್ರೀಕ್ ನಾಟಕಕಾರ ಯೂರಿಪಿಡಿಸ್ ಹೇಳಿದ್ದು ಶೀಲಾಳಂತಹವರನ್ನು ಉದ್ದೇಶಿಸಿಯೇ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)