ಅಂಕಣ

ಆ ಕ್ಷಣ ಅಂಕಣ: ಚಾಲಾಕಿ ವೈದ್ಯನ ನುರಿತ ಅಪರಾಧ

ಡಾ.ರಮೇಶ್ ಎಂಬಾತ 2010ರ 6/7ನೇ ಜನವರಿಯ ಮಧ್ಯರಾತ್ರಿ ವೇಳೆ ಕರಾವಳಿ ಜಿಲ್ಲೆಯೊಂದರ ಪೊಲೀಸ್ ಠಾಣೆಗೆ ಹಾಜರಾಗಿ-‘ನಾನು ಪಕ್ಕದ ಜಿಲ್ಲೆಯಲ್ಲಿರುವ ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದೇನೆ. ಇದೇ ಜಿಲ್ಲೆಯಲ್ಲಿರುವ ಸಂಬಂಧಿಕರ ಮನೆಯಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಪತ್ನಿ ನಿರ್ಮಲಾಳೊಡನೆ ನಿನ್ನೆ ಸಂಜೆ

ನನ್ನ ಕಾರಿನಲ್ಲಿ ಮನೆಯಿಂದ ಹೊರಟೆ. ಈ ಊರನ್ನು ತಲುಪಲು ಹತ್ತು ಕಿ.ಮೀ. ಇರುವಾಗ ಕಾರಿನ ಟೈರ್ ಪಂಕ್ಚರ್ ಆಯಿತು. ಕಾರನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ, ಟೈರನ್ನು ಬದಲಾಯಿಸಲು ಹೊರಟೆ. ಕಾರಿನಲ್ಲಿದ್ದ ಪತ್ನಿ ಮೂತ್ರ ವಿಸರ್ಜನೆಗೆಂದು ರಸ್ತೆ ಪಕ್ಕಕ್ಕೆ ಹೋದವಳು ಕೆಲವೇ ಕ್ಷಣಗಳಲ್ಲಿ ‘ಅಯ್ಯೋ’ ಎಂದು ಕಿರುಚಿದಳು. ನಾನು ಅಲ್ಲಿಗೆ ಹೋದಾಗ ಆಕೆ ತಾನು ಮೂತ್ರ ಮಾಡಲು ಕುಳಿತಾಗ ಹಾವೊಂದು ಕಚ್ಚಿತು ಎಂದಳು. ನನ್ನ ಕೈಯಲ್ಲಿದ್ದ ಟಾರ್ಚ್ ಬೆಳಕಿನಿಂದ ಗಾಯ ಎಲ್ಲಾಗಿದೆ ಎಂದು ಪರೀಕ್ಷಿಸಿದೆ. ಅವಳ ಕಾಲಿನ ಬಲಭಾಗಕ್ಕೆ ಗಾಯವಾಗಿತ್ತು. ಕೂಡಲೇ ಇದೇ ಊರಿನಲ್ಲಿರುವ ಖಾಸಗಿ ನರ್ಸಿಂಗ್ ಹೋಂಗೆ ಕರೆದುಕೊಂಡು ಬಂದೆ. ಅಲ್ಲಿದ್ದ ವೈದ್ಯರು ‘ನಮ್ಮ ಆಸ್ಪತ್ರೆಯಲ್ಲಿ ಹಾವಿನ ಕಡಿತಕ್ಕೆ ಮದ್ದಿಲ್ಲ, ದೊಡ್ಡಾಸ್ಪತ್ರೆಗೆ ಕರೆದುಕೊಂಡು ಹೋಗಿ’ ಎಂದರು. ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ನೋಡುವ ಮೊದಲೇ ಆಕೆ ಕೊನೆಯುಸಿರೆಳೆದಳು. ಆದಷ್ಟು ಬೇಗನೇ ಮಹಜರ್ ಮಾಡಿ ಮುಗಿಸಿ. ಪೋಸ್ಟ್​ಮಾರ್ಟಂ ಮಾಡಿಸಿ ಶವವನ್ನು ಕೊಡುವ ವ್ಯವಸ್ಥೆ ಮಾಡಿ, ಅಂತಿಮಸಂಸ್ಕಾರವನ್ನು ನಮ್ಮ ಊರಿನಲ್ಲಿಯೇ ಮಾಡಬೇಕಾಗಿದೆ’ ಎಂದು ಹೇಳಿದ.

‘ನಿಮ್ಮ ಪತ್ನಿ ಆಸ್ಪತ್ರೆಯಲ್ಲಿ ಅಸುನೀಗಿರುವ ಕಾರಣ ಅಲ್ಲಿಂದ ಮೆಡಿಕೋ ಲೀಗಲ್ ವರದಿ ನಮಗೆ ಬರುತ್ತದೆ. ನೀವು ಅಲ್ಲಿಗೇ ಹೋಗಿ. ಬೆಳಕಾದ ಕೂಡಲೇ ಆಸ್ಪತ್ರೆಗೆ ಬಂದು ಪಂಚನಾಮೆ ಮಾಡಿ ಮುಂದಿನ ಕ್ರಮ ಜರುಗಿಸುತ್ತೇವೆ’ ಎಂದು ಹೇಳಿದ ಪೊಲೀಸರು ಆತನನ್ನು ಕಳುಹಿಸಿದರು. ಮಾರನೆಯ ದಿನ ಆಸ್ಪತ್ರೆಯಿಂದ ಬಂದ ಮಾಹಿತಿಯ ಮೇರೆಗೆ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿ ಶವದ ಮಹಜರ್ ಮಾಡಲಾಯಿತು. ಮೃತ ನಿರ್ಮಲಾಳ ಬಲಗಾಲಿನ ಹಿಮ್ಮಡಿಯ ಮೇಲೆ ಎರಡು ತೂತಾದ ಗುರ್ತಗಳಿದ್ದವು. ಇದರ ಹೊರತಾಗಿ ಯಾವುದೇ ಗಾಯಗಳಾಗಿರಲಿಲ್ಲ.

ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ‘ಮೇಲ್ನೋಟಕ್ಕೆ ಇದು ಹಾವು ಕಡಿದು ಸಾವಾಗಿರುವ ಪ್ರಕರಣವೇ ಎನಿಸಿದರೂ ವಿಧಿವಿಜ್ಞಾನ ಪ್ರಯೋಗಶಾಲೆಯಿಂದ ಹೊಟ್ಟೆಯ ಭಾಗಗಳಲ್ಲಿದ್ದ ವಸ್ತುಗಳ (ವಿಸೆರಾ) ರಾಸಾಯನಿಕ ಪರೀಕ್ಷೆಯ ವರದಿ ಬರುವವರೆಗೂ ಸಾವು ಹೇಗಾಯಿತೆಂದು ಅಂತಿಮ ವರದಿ ಕೊಡಲು ಬರುವುದಿಲ್ಲ’ ಎಂದರು. ನಿರ್ಮಲಾಳಿಗೆ ಹಾವು ಕಡಿದ ನಿರ್ದಿಷ್ಟ ಸ್ಥಳ ತೋರಿಸಲು ರಮೇಶ್​ನನ್ನು ಕೇಳಿದಾಗ ಆತ ಪೊಲೀಸರನ್ನು ಕರೆದುಕೊಂಡು ಹೋದ. ಅದು ಜಿಲ್ಲಾ ರಸ್ತೆಯಾಗಿದ್ದು, ರಸ್ತೆಯ ಅಕ್ಕಪಕ್ಕದಲ್ಲಿ ಗಿಡಗಂಟಿಗಳು ಬೆಳೆದಿದ್ದವು. ರಸ್ತೆಯ ಪಕ್ಕದಲ್ಲಿ 10 ಅಡಿ ದೂರದಲ್ಲಿದ್ದ ಪೊದೆಯನ್ನು ತೋರಿಸಿದ ರಮೇಶ್ ‘ನನ್ನ ಪತ್ನಿಗೆ ಹಾವು ಕಡಿದಿದ್ದು ಇಲ್ಲಿಯೇ’ ಎಂದ. ಆ ಭಾಗದಲ್ಲಿ ಹಾವುಗಳು ಓಡಾಡುವ ಸಾಧ್ಯತೆಗಳು ಇದ್ದವು. ತನಿಖಾಧಿಕಾರಿ ಆ ಸ್ಥಳದ ಮಹಜರನ್ನು ಮಾಡಿಕೊಂಡು ಆನಂತರ ಮರಣೋತ್ತರ ಪರೀಕ್ಷೆಯ ಅಂತಿಮ ವರದಿಗಾಗಿ ಪ್ರಕರಣವನ್ನು ಚಾಲ್ತಿಯಲ್ಲಿಟ್ಟು ಶವವನ್ನು ರಮೇಶ್​ನ ವಶಕ್ಕೆ ನೀಡಿದರು. ಒಂದು ತಿಂಗಳ ನಂತರ ಬಂದ ರಾಸಾಯನಿಕ ಪರೀಕ್ಷೆಯ ವರದಿಯಲ್ಲಿ ‘ಮೃತಳ ದೇಹದಲ್ಲಿ ವಿಷವಿದ್ದ ಅಂಶವು ಕಂಡುಬಂದಿದೆ’ ಎಂದು ಬರೆದಿದ್ದ ಕಾರಣ ವೈದ್ಯರು ‘ಸಾವು ಹಾವಿನ ಕಡಿತದಿಂದಾಗಿದೆ’ ಎಂಬ ಅಂತಿಮ ವರದಿ ನೀಡಿದರು. ‘ಆಕಸ್ಮಾತ್ತಾಗಿ ಹಾವು ಕಡಿದು ನಿರ್ಮಲಾ ಸತ್ತಿದ್ದಾಳೆ’ ಎಂದು ಪೊಲೀಸರು ಕಡತದಲ್ಲಿ ದಾಖಲಿಸಿ ಪ್ರಕರಣವನ್ನು ಮುಗಿಸಿದರು.

ಇದಾದ ಎರಡು ತಿಂಗಳ ಬಳಿಕ ಲೋಕೇಶ್ ಎನ್ನುವವನು ರಾಜ್ಯದ ಪೊಲೀಸ್ ಇಲಾಖೆ ಮುಖ್ಯಸ್ಥರನ್ನು ಭೇಟಿಯಾಗಿ ಲಿಖಿತ ಮನವಿ ಸಲ್ಲಿಸಿದ. ತನ್ನ ಸೋದರಿ ನಿರ್ಮಲಾಳನ್ನು ಐದು ವರ್ಷಗಳ ಹಿಂದೆ ಡಾ.ರಮೇಶ್ ಎನ್ನುವವರೊಂದಿಗೆ ಲಗ್ನ ಮಾಡಿಕೊಟ್ಟದ್ದಾಗಿಯೂ ಆರಂಭದಲ್ಲಿ ಪತಿ-ಪತ್ನಿಯರು ಅನ್ಯೋನ್ಯವಾಗಿಯೇ ಇದ್ದರೂ ನಿರ್ಮಲಾಗೆ ಮಕ್ಕಳಾಗದ ಕಾರಣ ರಮೇಶ್ ಅವಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಕೆಲ ಸಮಯದ ಹಿಂದೆ ಬೇರೊಂದು ಮಹಿಳೆಯ ಸಂಪರ್ಕವನ್ನು ಮಾಡಿದ್ದು ಈ ಸಂಬಂಧಕ್ಕೆ ಸೋದರಿ ವಿರೋಧ ಮಾಡಿದ ಕಾರಣ ಅವಳನ್ನು ಕೊಲೆ ಮಾಡಿದ್ದಾನೆ ಎಂದು ದೂರಿ ಈ ಪ್ರಕರಣದ ಮರುತನಿಖೆ ನಡೆಸಬೇಕು ಎಂದು ಕೋರಿದ. ಆತನ ಮನವಿಯನ್ನು ವಿಚಾರಣೆಗಾಗಿ ಸಿಐಡಿಗೆ ನೀಡಲಾಯಿತು. ಸಿಐಡಿ ಅಧಿಕಾರಿಗಳು ಅಸ್ವಾಭಾವಿಕ ಸಾವಿನ ಪ್ರಕರಣವನ್ನು ಮರುತನಿಖೆಗೆ ಕೈಗೆತ್ತಿಕೊಂಡು, ಡಾ.ರಮೇಶ್​ನನ್ನು ಕರೆಸಿಕೊಂಡು ಹೇಳಿಕೆ ಪಡೆದುಕೊಂಡರು. ಆತ ಈ ಮುಂಚೆ ಪೊಲೀಸರ ಮುಂದೆ ಹೇಳಿದ್ದ ಮಾತುಗಳನ್ನೇ ಪುನರುಚ್ಚರಿಸಿದ; ನಿರ್ಮಲಾಳಿಗೆ ಹಾವು ಕಚ್ಚಿದ ಜಾಗವನ್ನು ತೋರಿಸಿದ. ‘ಪಂಕ್ಚರ್ ಆಗಿದ್ದ ಕಾರಿನ ಟೈರನ್ನು ಬದಲಾಯಿಸಿದ ನಂತರ ನಿರ್ಮಲಾಗೆ ಹಾವು ಕಚ್ಚಿತೇ ಅಥವಾ ಮೊದಲೇ?’ ಎಂದು ಕೇಳಿದಾಗ ಆತ ‘ಇನ್ನೇನು ಬದಲಾಯಿಸಿ ಪಂಕ್ಚರ್ ಆದ ಟೈರನ್ನು ಡಿಕ್ಕಿಯಲ್ಲಿಡುವಾಗ ಆಕೆ ಕೂಗಿದಳು’ ಎಂದ. ಪೊಲೀಸರ ಮಾತಿನಂತೆ, ನಿರ್ಮಲಾಳನ್ನು ಕರೆದೊಯ್ದಿದ್ದ ನರ್ಸಿಂಗ್ ಹೋಂ ತೋರಿಸಿದ. ಅಲ್ಲಿನ ದಾಖಲಾತಿಗಳನ್ನು ಪರೀಕ್ಷಿಸಿದಾಗ ಅವು ರಮೇಶ್​ನ ಹೇಳಿಕೆಗೆ ತಾಳೆಹೊಂದುತ್ತಿದ್ದವು. ನಿರ್ಮಲಾಗೆ ತಾವು ಪ್ರಥಮೋಪಚಾರ ನೀಡಿ ಆಕೆ ದೇಹದಲ್ಲಿ ಶೀಘ್ರವಾಗಿ ವಿಷವೇರುತ್ತಿದ್ದುದರಿಂದ ದೊಡ್ಡಾಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದಾಗಿ ಅಲ್ಲಿಯ ವೈದ್ಯರು ಹೇಳಿದರು.

ಡಾ.ರಮೇಶ್ ನೀಡಿರುವ ಹೇಳಿಕೆಯಲ್ಲಿ ಯಾವುದೇ ಸಂಶಯ ಕಾಣಲಿಲ್ಲ ಎಂದುಕೊಂಡ ತನಿಖಾಧಿಕಾರಿ ಲೋಕೇಶ್ ಮಾಡಿದ ಆರೋಪದಲ್ಲಿ ಹುರುಳಿಲ್ಲ ಎಂದು ವರದಿಯನ್ನು ನೀಡುವ ಹಂತಕ್ಕೆ ಬಂದ. ಅಷ್ಟರಲ್ಲಿ ಆತ ಒಂದು ಬಾರಿ ರಮೇಶ್ ವಾಸವಿದ್ದ ಊರಿಗೆ ಹೋಗಿ ಆತನ ನಡತೆಯ ಬಗ್ಗೆ ವಿಚಾರಿಸಲು ತೀರ್ವನಿಸಿದ. ಊರಿನಲ್ಲಿ ವಿಚಾರಿಸಿದಾಗ ರಮೇಶ್ ಮತ್ತು ನಿರ್ಮಲಾರ ವೈವಾಹಿಕ ಜೀವನ ತೀರಾ ಹದಗೆಟ್ಟಿದ್ದು ರಮೇಶ್ ತಾನು ಬೋಧಿಸುತ್ತಿದ್ದ ಕಾಲೇಜಿನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಹಾಗೂ ಮದುವೆ ಮಾಡಿಕೊಳ್ಳುವುದಾಗಿ ಆಕೆಯನ್ನು ನಂಬಿಸಿದ್ದ ಎಂಬ ವಿಷಯ ತಿಳಿದು ಬಂದಿತು. ನಿರ್ಮಲಾ ಸೋದರನೂ ತನ್ನ ಅರ್ಜಿಯಲ್ಲಿ ಇದೇ ವಿಷಯ ಪ್ರಸ್ತಾಪಿಸಿದ್ದರಿಂದ ಈ ನಿಟ್ಟಿನಲ್ಲಿ ತನಿಖೆ ಮುಂದುವರಿಯಿತು.

ರಮೇಶ್ ತನ್ನ ಕಾಲೇಜಿನ ಆಂಬುಲೆನ್ಸ್ ಚಾಲಕ ಚಂದ್ರೇಗೌಡನ ಜತೆಗೆ ಸಲಿಗೆಯಿಂದಿದ್ದಾನೆ ಎಂದು ತಿಳಿದು ಬಂದ ಕಾರಣ ತನಿಖಾಧಿಕಾರಿ ಅವನನ್ನು ಕೂಲಂಕಷವಾಗಿ ವಿಚಾರಣೆ ಮಾಡಿದರು. ಆತ ಪ್ರಕರಣವನ್ನು ಎಳೆಎಳೆಯಾಗಿ ಬಿಡಿಸಿಟ್ಟ. ನಿರ್ಮಲಾ ಗರ್ಭ ಧರಿಸದ ಕಾರಣ ರಮೇಶ್ ಕೃತಕ ಗರ್ಭಧಾರಣೆ ಮೂಲಕ ಮಕ್ಕಳನ್ನು ಪಡೆಯಬೇಕೆಂದು ಬಯಸಿದ. ಆ ಪ್ರಯತ್ನಗಳೂ ವಿಫಲವಾದಾಗ ಅವನಿಗೆ ಆಕೆ ಮೇಲೆ ಅಸಡ್ಡೆ ಮೂಡಿತು. ಇಷ್ಟರಲ್ಲಿ ರೀಟಾ ಎನ್ನುವ ನರ್ಸ್ ಜತೆಗೆ ಸಂಬಂಧ ಉಂಟಾಯಿತು. ರಮೇಶ್ ಆಕೆಯನ್ನು ಮದುವೆ ಮಾಡಿಕೊಳ್ಳಲಿಚ್ಛಿಸಿದ. ಪತ್ನಿ ಜೀವಂತವಿರುವಾಗ ಅವಳನ್ನು ಮದುವೆಯಾಗುವುದು ಸಾಧ್ಯವಿಲ್ಲವೆಂದು ತಿಳಿದು ನಿರ್ಮಲಾಳಿಂದ ವಿಚ್ಛೇದನ ಪಡೆಯಲು ಯೋಚಿಸಿದ. ವಕೀಲರನ್ನು ಸಂರ್ಪಸಿದಾಗ ವಿಚ್ಛೇದನ ಪಡೆದರೆ ನಿರ್ಮಲಾಗೆ ಜೀವನ ನಿರ್ವಹಣೆಗಾಗಿ ಹಣ ಕೊಡಬೇಕಾಗುತ್ತದೆ ಎಂದು ಅವರು ತಿಳಿಸಿದಾಗ ರಮೇಶ್ ಪತ್ನಿಯನ್ನು ಕೊಲೆಗೆ ಯೋಜನೆ ಹಾಕಿದ.

ತಾನೇ ವೈದ್ಯನಾಗಿದ್ದ ಕಾರಣ ಯಾವ ರೀತಿಯಲ್ಲಿ ಕೊಲೆ ಮಾಡಿದರೂ ಪೋಸ್ಟ್​ಮಾರ್ಟ್ಂ ಪರೀಕ್ಷೆಯಲ್ಲಿ ಮರಣದ ಕಾರಣ ತಿಳಿದು ಬರುವುದರಿಂದ ವಿಷಪ್ರಾಶನ ಮಾಡಿಸಿದರೆ ತನ್ನ ಮೇಲೆ ಸಂಶಯ ಬರುವುದಿಲ್ಲ ಎಂದು ರ್ತಸಿದ. ಹಾವಿನ ವಿಷ ದೇಹಕ್ಕೆ ಹೋದರೆ ಕೆಲವೇ ಗಂಟೆಗಳಲ್ಲಿ ಯಾರಾದರೂ ಸಾಯಬಹುದು. ಹಾಗಾಗಿ, ಪತ್ನಿಗೆ ನಾಗರಹಾವು ಕಡಿದು ಸತ್ತರೆ ತನ್ನ ಮೇಲೆ ಅನುಮಾನ ಬರುವುದಿಲ್ಲವೆಂದು ಎಣಿಸಿದ. ಚಂದ್ರೇಗೌಡನ ಸಹಾಯದಿಂದ ಹಾವಾಡಿಗನೊಬ್ಬನನ್ನು ಸಂರ್ಪಸಿ ನಾಗರಹಾವಿನ ವಿಷದ ಸಣ್ಣ ಬಾಟಲನ್ನು ಪಡೆದ. ಆನಂತರ ಪತ್ನಿ ಜೊತೆ ಬೇರೆ ಊರಿನಲ್ಲಿರುವ ಸಂಬಂಧಿಕರ ಮನೆಗೆ ಹೋಗುವ ಯೋಜನೆ ಹಾಕಿ ಮಾರುತಿ ವ್ಯಾನಿನಲ್ಲಿ ಹೊರಟ. ಆಗ ಚಂದ್ರೇಗೌಡ ಮತ್ತಿಬ್ಬರು ಬೇರೊಂದು ಕಾರಿನಲ್ಲಿ ಅವರನ್ನು ಹಿಂಬಾಲಿಸಿದರು.

ಮೊದಲೇ ನಿರ್ಧರಿಸಿದ್ದ ಜಾಗದಲ್ಲಿ ರಮೇಶ್ ವ್ಯಾನನ್ನು ನಿಲ್ಲಿಸಿದಾಗ ಅದನ್ನು ಹಿಂಬಾಲಿಸುತ್ತಿದ್ದ ಚಂದ್ರೇಗೌಡ ಮತ್ತಿಬ್ಬರು ವಾಹನವನ್ನು ಏರಿ ನಿರ್ಮಲಾರನ್ನು ಹಿಂದಿನ ಸೀಟಿಗೆ ಹಾಕಿ ಬಾಯಿಮುಚ್ಚಿ ಆಕೆಯ ಕಾಲುಗಳನ್ನು ಹಿಡಿದುಕೊಂಡರು. ಆಗ ರಮೇಶ್ ಸಿರಿಂಜ್​ನಿಂದ ಹಾವು ಕಡಿಯುವಂತೆಯೇ ಎರಡು ಬಾರಿ ಆಕೆಯ ಕಾಲಿಗೆ ಚುಚ್ಚಿದ. ನಿರ್ಮಲಾಗೆ ತಲೆ ತಿರುಗಿದಂತಾದಾಗ ಇತರರು ಅಲ್ಲಿಂದ ತೆರಳಿದರು.

‘ಮುಗ್ಧ ವ್ಯಕ್ತಿಯನ್ನು ಕೊಲ್ಲುವ ಪಾಪ ಮಾಡಿದವನನ್ನು ಭಗವಂತ ಕ್ಷಮಿಸುವುದಿಲ್ಲ’ ಎಂದು ಬೈಬಲ್ ಉಲ್ಲೇಖಿಸಿದೆ. ಮುಗ್ಧೆ ನಿರ್ಮಲಾಳನ್ನು ಕೊಲೆ ಮಾಡಿದ ರಮೇಶ್ ಕಾನೂನಿನ ಬಾಹುಗಳಿಂದ ಪಾರಾಗಲಿಲ್ಲ. ಅವನಿಗೆ ನ್ಯಾಯಾಲಯ ಏಳುವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತು.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)