ಒಂದು ಸಂಜೆ ಪ್ರಿಯಾಳ ಮನೆಗೆ ನೆರೆಮನೆಯ ಲಕ್ಷ್ಮಿ ಹರಟೆಗೆ ಬಂದಳು. ಲೋಕಾಭಿರಾಮವಾಗಿ ಮಾತನಾಡುತ್ತಾ, ‘ಪ್ರಿಯಾ, ನೀನು ಗಂಡನನ್ನು ಹದ್ದುಬಸ್ತಿನಲ್ಲಿಟ್ಟಿರುವಂತೆ ಕಾಣುತ್ತಿಲ್ಲ, ಆತ ಯಾರ ಜೊತೆಯೋ ಸಂಬಂಧವಿಟ್ಟುಕೊಂಡಿದ್ದಾನೆಂದು ಗುಲ್ಲೆದ್ದಿದೆ’ ಎಂದಳು. ಗಾಬರಿಯಾದ ಪ್ರಿಯಾ, ನಿನಗೆ ಹೇಗೆ ತಿಳಿಯಿತು? ಎಂದು ಕೇಳಿದಾಗ, ‘ನನ್ನ ಗಂಡನೂ ನಿನ್ನ ಗಂಡನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾನಲ್ಲವೇ? ತನ್ನ ಶಾಖೆಯಲ್ಲಿ ಟೈಪಿಸ್ಟ್ ಆಗಿರುವ ಸುಷ್ಮಾ ಎನ್ನುವವಳ ಜೊತೆ ನಿನ್ನ ಪತಿ ಓಡಾಡುತ್ತಿದ್ದಾನೆ ಎಂದು ನನ್ನ ಗಂಡನೇ ಹೇಳಿದ್ದು’ ಎಂದಳು.
ಆ ರಾತ್ರಿ ತಂಗರಾಜ್ ಮನೆಗೆ ಬಂದ ಕೂಡಲೇ ಪ್ರಿಯಾ ಅವನನ್ನು ತರಾಟೆಗೆ ತೆಗೆದುಕೊಂಡು ಸುಷ್ಮಾಳ ಜತೆಗೆ ಆತನ ಸಂಬಂಧವೇನೆಂದು ವಿಚಾರಿಸಿದಳು. ಹೌಹಾರಿದ ತಂಗರಾಜ್, ‘ಇದೇನು ಇದ್ದಕ್ಕಿದ್ದಂತೆ ಹೀಗೆ ಕೇಳುವೆ. ಸುಷ್ಮಾ ನಮ್ಮ ಕಾರ್ಖಾನೆಯ ಮ್ಯಾನೇಜರ್ರ ಸೆಕ್ರೆಟರಿ, ಅವಳೊಂದಿಗೆ ಲಲ್ಲೆ ಹೊಡೆದರೆ ಬಾಸ್ ಸುಮ್ಮನೆ ಬಿಡುವರೇ? ದೇವರಾಣೆಯಾಗಿಯೂ ನಾನು ನಿನ್ನ ಹೊರತಾಗಿ ಯಾರೊಡನೆಯೂ ಸಂಬಂಧವನ್ನಿಟ್ಟ್ಟುಕೊಂಡಿಲ್ಲ, ನಿನ್ನ ಹಾಗೂ ಮಕ್ಕಳ ಜೊತೆ ಖುಷಿಯಾಗಿರುವಾಗ ನನಗೇಕೆ ಬೇರೆಯವರ ಸಹವಾಸ?’ ಎಂದ. ಗಂಡನ ಮಾತು ನಂಬಿದ ಪ್ರಿಯಾ ಸುಮ್ಮನಾದಳು. ಇದಾದ ಒಂದು ತಿಂಗಳ ನಂತರದ ಒಂದು ಸಂಜೆ ಪ್ರಿಯಾಳಿಗೆ ಫೋನ್ ಮಾಡಿದ ತಂಗರಾಜ್, ತನಗೆ ಇದ್ದಕ್ಕಿದ್ದಂತೆ ರಾತ್ರಿಪಾಳಿ ಕೆಲಸಕ್ಕೆ ನೇಮಿಸಲಾಗಿದೆಯೆಂದು ಹೇಳಿ ಆ ರಾತ್ರಿ ಮನೆಗೆ ಬರುವುದಿಲ್ಲವೆಂದ. ಪ್ರಿಯಾ ಬೇಸರವನ್ನು ತೋರಗೊಟ್ಟರೂ ಆತ ಕರ್ತವ್ಯದ ಕಾರಣದಿಂದ ತಾನೇನನ್ನೂ ಮಾಡಲಾಗುವುದಿಲ್ಲವೆಂದ.
ಕೆಲವು ವಾರಗಳ ತರುವಾಯ ಎರಡು ದಿನಗಳ ಕಾಲ ರಾತ್ರಿ ಡ್ಯೂಟಿ ಮಾಡಬೇಕಾಗಿರುವುದಾಗಿ ಹೇಳಿದ ತಂಗರಾಜ್ ಫ್ಯಾಕ್ಟರಿಯಲ್ಲಿಯೇ ತಂಗುವುದಾಗಿ ಹೇಳಿದ. ಆತನ ಬಗ್ಗೆ ಸಂಶಯ ಬಂದರೂ ಪ್ರಿಯಾ ಸುಮ್ಮನಾದಳು. ಇದಾದ ಮುಂದಿನ ವಾರವೂ ಆತ ಅದೇ ಸಬೂಬನ್ನು ಹೇಳಿ ಮನೆಗೆ ಬಾರದಿದ್ದಾಗ ಪ್ರಿಯಾ ತೀವ್ರವಾಗಿ ಸಂಶಯಗೊಂಡು ತನ್ನ ಮಕ್ಕಳನ್ನು ಗೆಳತಿಯ ಮನೆಯಲ್ಲಿ ಇರಿಸಿ, ರಾತ್ರಿಯೇ ಅವನ ಕಾರ್ಖಾನೆಗೆ ಹೋದಳು. ಗೇಟಿನಲ್ಲಿದ್ದ ಕಾವಲುಗಾರಿಗೆ ತನ್ನ ಪರಿಚಯ ಹೇಳಿ ಸೆಕ್ಯೂರಿಟಿ ಸೂಪರ್ವೈಸರ್ನ ಮೂಲಕ ತಂಗರಾಜ್ ಕೆಲಸಮಾಡುತ್ತಿದ್ದ ಶಾಖೆಯನ್ನು ಸಂರ್ಪಸಿದಳು. ತಂಗರಾಜ್ನಿಗೆ ರಾತ್ರಿಪಾಳಿ ಕೆಲಸವನ್ನೇ ಕೊಡುವುದಿಲ್ಲವೆಂದೂ ಆ ದಿನ ಆತ ಬೆಳಗಿನ ಜನರಲ್ ಶಿಫ್ಟಿನಲ್ಲಿಯೇ ಕೆಲಸ ಮಾಡಿ ಸಂಜೆಯೇ ಮನೆಗೆ ಹೋದನೆಂದೂ ಅವರು ಹೇಳಿದರು. ಪ್ರಿಯಾ ಮನೆಗೆ ವಾಪಸ್ಸಾದಳು.
ಮಾರನೆಯ ದಿನ ಗಂಡ ಮನೆಗೆ ಬಂದ ಕೂಡಲೇ ರೌದ್ರಾವತಾರ ತಾಳಿದ ಪ್ರಿಯಾ ಅವನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಳು. ‘ನಾನು ಗೆಳೆಯರ ಜೊತೆ ಇಸ್ಪೀಟ್ ಆಡಲು ಹೋಗುತ್ತಿರುವ ಕಾರಣ ರಾತ್ರಿಪಾಳಿ ಬಗ್ಗೆ ಸುಳ್ಳು ಹೇಳಿದೆ, ದಯಮಾಡಿ ಕ್ಷಮಿಸು’ ಎಂದ ತಂಗರಾಜ್ ಅವಳ ಎರಡೂ ಕೈಗಳನ್ನು ಬಿಗಿಯಾಗಿ ಹಿಡಿದ. ಅವನ ಮಾತಿಗೆ ಬಗ್ಗೆ ನಂಬಿಕೆ ಬರದೇ ಹೋದರೂ ಪ್ರಿಯಾ ಸುಮ್ಮನಾದಳು. ಏನಾದರೂ ಮಾಡಿ ಗಂಡನನ್ನು ರೆಡ್ಹ್ಯಾಂಡ್ ಆಗಿ ಹಿಡಿಯಬೇಕು ಎಂದು ಪ್ರಿಯಾ ನಿರ್ಧರಿಸಿದಳು. ಆದರೆ ತಂಗರಾಜ್ ಚಾಲಾಕಿಯಾಗಿದ್ದ. ಪ್ರಿಯಾ ಎಷ್ಟೇ ಪ್ರಯತ್ನ ಪಟ್ಟರೂ ಅವನನ್ನು ಪ್ರೇಯಸಿಯ ಜೊತೆ ಹಿಡಿಯುವುದು ಆಕೆಗೆ ಸಾಧ್ಯವಾಗಲಿಲ್ಲ.
ಒಂದು ದಿನ ಪ್ರಿಯಾ ಗಂಡನ ಕಾರ್ಖಾನೆಯ ಜನರಲ್ ಷಿಫ್ಟ್ ಮುಗಿಯುವ ವೇಳೆಗೆ ಅಲ್ಲಿಗೆ ಹೋದಳು. ಅಲ್ಲಿದ್ದ ಒಬ್ಬ ಪರಿಚಯಸ್ಥ ಕಾರ್ವಿುಕನನ್ನು ಭೇಟಿಯಾಗಿ ಅವನ ಸಹಾಯದಿಂದ ಸುಷ್ಮಾ ಯಾರೆಂದು ಪತ್ತೆಮಾಡಿದಳು. ಸುಷ್ಮಾ ಕಾರ್ಖಾನೆಯಿಂದ ಹೊರಬರುತ್ತಲೇ ಅವಳ ಎದುರಿಗೆ ಹೋಗಿ ನಿಂತ ಪ್ರಿಯಾ, ನಿನ್ನೊಡನೆ ಸ್ವಲ್ಪ ಮಾತನಾಡಬೇಕು, ಎಂದು ಹೇಳಿ ಆಕೆಯನ್ನು ಬಳಿಯಿದ್ದ ಹೋಟೆಲಿಗೆ ಕರೆದುಕೊಂಡು ಹೋದಳು. 20 ರಿಂದ 22 ವರ್ಷ ವಯಸ್ಸಿನ ಸುಷ್ಮಾ ಸುಂದರಿ ಎನ್ನುವುದನ್ನು ಪ್ರಿಯಾ ಗಮನಿಸದೇ ಇರಲಿಲ್ಲ. ತಾನು ತಂಗರಾಜ್ನ ಪತ್ನಿಯೆಂದು ಪರಿಚಯಿಸಿಕೊಂಡ ಪ್ರಿಯಾ, ತನಗೆ ಇಬ್ಬರು ಮಕ್ಕಳಿದ್ದಾರೆಂದು ಅವಳಿಗೆ ತಿಳಿಸಿ ಮಕ್ಕಳ ಫೋಟೋ ತೋರಿಸಿದಳು. ದಯಮಾಡಿ ನನ್ನ ಗಂಡನ ಸಹವಾಸ ಬಿಟ್ಟು ನನ್ನ ವಿವಾಹವು ಮುರಿಯದಂತೆ ಮಾಡು, ಎಂದು ಕೈಮುಗಿದು ಕೇಳಿದಳು. ಅವಳ ಮಾತುಗಳನ್ನು ಕೇಳಿ ವಿಚಲಿತಳಾದ ಸುಷ್ಮಾ, ‘ಅಕ್ಕ, ತನಗೆ ಮದುವೆಯಾಗಿಲ್ಲ ಎಂದು ತಂಗರಾಜ್ ಹೇಳಿದ ಕಾರಣವೇ ನಾನು ಅವನೊಡನೆ ಸಂಬಂಧ ಬೆಳೆಸಿದೆ. ಆತ ಮದುವೆಯಾಗುವುದಾಗಿ ಮಾತು ಕೊಟ್ಟು ನನ್ನೊಡನೆ ಲೈಂಗಿಕ ಕ್ರಿಯೆಯನ್ನೂ ನಡೆಸಿದ್ದಾನೆ. ನಾನೀಗ ಅವನನ್ನು ಸುಮ್ಮನೆ ಬಿಡುವುದಿಲ್ಲ. ನಾಳೆಯೇ ಪೊಲೀಸ್ ಠಾಣೆಗೆ ಹೋಗಿ ಆತ ನನ್ನನ್ನು ರೇಪ್ ಮಾಡಿದ ಎಂದು ದೂರು ಕೊಡುವೆ, ಆ ಮೋಸಗಾರ ಜೈಲು ಸೇರಲು ನೀವೂ ನನಗೆ ಸಹಾಯ ಮಾಡಬೇಕು’ ಎಂದಳು. ‘ಖಂಡಿತವಾಗಿ ಮಾಡುವೆ, ನಾನೇನೂ ಜೀವನೋಪಾಯಕ್ಕಾಗಿ ತಂಗರಾಜ್ನನ್ನು ಅವಲಂಬಿಸಿಲ್ಲ, ಇಂತಹವರಿಗೆ ಬುದ್ಧಿ ಕಲಿಸದಿದ್ದರೆ ಸ್ತ್ರೀ ಕುಲಕ್ಕೇ ಅನ್ಯಾಯ’ ಎಂದ ಪ್ರಿಯಾ ಮುಂದೇನು ಮಾಡಬೇಕೆಂಬುದನ್ನು ನಿರ್ಧರಿಸಲು ಕೆಲವು ದಿನಗಳ ನಂತರ ಭೇಟಿಯಾಗೋಣವೆಂದು ಹೇಳಿ ಸುಷ್ಮಾಳಿಗೆ ತನ್ನ ಸಂಪರ್ಕದ ವಿವರಗಳನ್ನು ನೀಡಿದಳು. ಆ ರಾತ್ರಿ ತಂಗರಾಜ್ ಮನೆಗೆ ಬಂದ ನಂತರ ಏನೂ ನಡೆಯದಿರುವಂತೆಯೇ ನಟಿಸಿದಳು.
ಮಾರನೆಯ ಸಂಜೆ ಫ್ಯಾಕ್ಟರಿಯಿಂದ ಮನೆಗೆ ವಾಪಸಾದ ಕೂಡಲೇ ತಂಗರಾಜ್ ಪ್ರಿಯಾಳನ್ನು ಹಿಗ್ಗಾಮುಗ್ಗಾ ಥಳಿಸತೊಡಗಿದ. ‘ನೀನು ನಿನ್ನೆ ಸಂಜೆ ನಮ್ಮಕಾರ್ಖಾನೆಗೆ ಬಂದು ನಮ್ಮ ಮ್ಯಾನೇಜರ್ ಸಾಹೇಬರ ಸ್ಟೆನೋ ಸುಷ್ಮಾಳನ್ನು ಭೇಟಿಯಾಗಿ ಮಾತನಾಡಿದೆ ಎಂದು ನನಗೆ ತಿಳಿಯಿತು. ಅವಳೊಡನೆ ಏನು ಮಾತನಾಡಿದೆ?’ ಎಂದು ಕೇಳಿದ. ನಿನ್ನ ಜೊತೆ ಹೊಂದಿರುವ ಅನೈತಿಕ ಸಂಬಂಧಕ್ಕೆ ಮುಕ್ತಾಯ ಹಾಡು ಎಂದು ಸೆರಗೊಡ್ಡಿ ಬೇಡಿಕೊಂಡೆ, ಎಂದು ಪ್ರಿಯಾ ಉತ್ತರಿಸಿದಾಗ ಅವರ ಜಗಳ ತಾರಕಕ್ಕೇರಿತು. ಕಡೆಗೆ ತಂಗರಾಜ್ ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ ಎಂದು ಅವಳ ಕ್ಷಮಾಪಣೆ ಕೇಳಿ ಸುಮ್ಮನಾದ. ಏತನ್ಮಧ್ಯೆ ಸುಷ್ಮಾ ತಂಗರಾಜ್ನಿಂದ ಸಂಪೂರ್ಣವಾಗಿ ದೂರವಾಗಿದ್ದಲ್ಲದೇ ಕೆಲಸಕ್ಕೆ ರಾಜೀನಾಮೆ ನೀಡಿ ಹೊರಟುಹೋದಳು.
ಕೆಲಕಾಲ ತಂಗರಾಜ್ ಹೆಂಡತಿ ಮಕ್ಕಳೊಡನೆ ಸರಿಯಾಗಿಯೇ ಸಂಸಾರ ಮಾಡಿದ. ಆದರೆ ನಾಯಿಯ ಬಾಲ ಡೊಂಕು ಎನ್ನುವಂತೆ ಆತ ಮೂರು ತಿಂಗಳ ನಂತರ ಮತ್ತೊಬ್ಬಳ ಜೊತೆ ಸಂಬಂಧ ಬೆಳೆಸಿದ. ಪ್ರಿಯಾಳ ಸಂಬಂಧಿಕರೊಬ್ಬರು ಅವಳಿಗೆ ಈ ಮಾಹಿತಿ ನೀಡಿದರು. ಆಗ ಆಕೆ ಸುಷ್ಮಾಳನ್ನು ಸಂರ್ಪಸಿ ಅವಳ ಮೂಲಕ ತನ್ನ ಗಂಡನ ವಿರುದ್ಧ ರೇಪ್ ಪ್ರಕರಣ ದಾಖಲಿಸುವುದು ಸೂಕ್ತ ಎಂದು ನಿರ್ಧರಿಸಿದಳು. ಆದರೆ ಸುಷ್ಮಾ ತನ್ನ ಮೊಬೈಲ್ ಸಂಪರ್ಕವನ್ನು ಕಡಿತಗೊಳಿಸಿದ್ದಳು. ಏನಾದರೂ ಮಾಡಿ ತಂಗರಾಜ್ಗೆ ಬುದ್ಧಿ ಕಲಿಸಲೇಬೇಕು ಎಂದು ಪ್ರಿಯಾ ನಿರ್ಧಾರ ಮಾಡಿದಳು. ಈ ಬಗ್ಗೆ ಅವಳು ವಿಚಾರ ಮಾಡತೊಡಗಿದಾಗ ಟೆಲಿವಿಷನ್ನಲ್ಲಿ ಸುದ್ದಿಯೊಂದು ಪ್ರಸಾರವಾಗುತ್ತಿತ್ತು. ಕೇರಳದಲ್ಲಿ ಸ್ವಾಮೀಜಿಯೊಬ್ಬ ತನ್ನ ಶಿಷ್ಯೆಯೊಬ್ಬಳ ಮೇಲೆ ಅತ್ಯಾಚಾರ ಮಾಡಲು ಹೋದಾಗ ಆಕೆ ಅವನ ಮರ್ವಂಗವನ್ನೇ ಕತ್ತರಿಸಿದಳೆಂಬ ಸುದ್ದಿ ಅದಾಗಿತ್ತು.
ಮಾರನೆಯ ರಾತ್ರಿ ತಂಗರಾಜ್ ಮನೆಗೆ ಬಂದಾಗ ಪ್ರಿಯಾ ಅವನೊಡನೆ ಪ್ರೀತಿಯಿಂದ ವರ್ತಿಸಿ ತಾವಿಬ್ಬರೂ ಮೊದಲಿನಂತೆ ಅನ್ಯೋನ್ಯವಾಗಿರೋಣವೆಂದು ಹೇಳಿದಳು. ತಾನು ತಂದಿದ್ದ ಮದ್ಯದ ಬಾಟಲಿಯನ್ನು ಅವನಿಗೆ ಕುಡಿಯಲು ಕೊಟ್ಟಳು. ಏಕಾಏಕಿ ಪತ್ನಿ ಪ್ರೀತಿ ತೋರಿದ್ದನ್ನು ಕಂಡ ಆತ ಕಂಠಪೂರ್ತಿ ಕುಡಿದ. ಊಟಮಾಡಿದ ನಂತರ ಆತ ಬೇಗನೆ ನಿದ್ದೆಗೆ ಜಾರಿದ. ಮಧ್ಯರಾತ್ರಿ ತನ್ನನ್ನು ಯಾರೋ ಎಚ್ಚರಿಸಿದಂತಾದಾಗ ಆತ ಕಣ್ತೆರೆದ. ಅವನ ಪಕ್ಕದಲ್ಲಿ ಪ್ರಿಯಾ ನಿಂತಿದ್ದು ತನ್ನ ಕೈಯಲ್ಲಿನ ಪಾತ್ರೆಯಲ್ಲಿದ್ದ ಬಿಸಿ ನೀರನ್ನು ಅವನ ಮರ್ವಂಗಕ್ಕೆ ಸುರಿದಳು. ನೋವಿನಿಂದ ಚೀರಾಡುತ್ತಾ ಮೇಲೆದ್ದ ತಂಗರಾಜ್ ಮನೆಯಿಂದ ಹೊರಗೆ ಓಡಿ ಬೊಬ್ಬೆ ಹೊಡೆದ. ಇದನ್ನು ಕೇಳಿದ ನೆರೆಹೊರೆಯವರು ಆಂಬುಲೆನ್ಸ್ ತರಿಸಿ ಅವನನ್ನು ಆಸ್ಪತ್ರೆಗೆ ಸೇರಿಸಿದರು. ಆಸ್ಪತ್ರೆಯಲ್ಲಿ ತಂಗರಾಜ್ನ ಮುಖ, ಎದೆ, ತೊಡೆ ಮತ್ತು ಮರ್ವಂಗಗಳು ಸುಟ್ಟಿರುವುದಾಗಿ ಕಂಡ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದರು.
ತಂಗರಾಜ್ನ ಹೇಳಿಕೆ ಮೇರೆಗೆ ಪ್ರಿಯಾಳ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿದರು. ಈ ಪ್ರಕರಣದಲ್ಲಿ ಯಾವುದೇ ಪ್ರತ್ಯಕ್ಷ ಸಾಕ್ಷಿಗಳು ಇರದೇ ಹೋದರೂ ತಂಗರಾಜ್ನ ಹೇಳಿಕೆ ಮತ್ತು ಇತರ ಸಾಂರ್ದಭಿಕ ಸಾಕ್ಷ್ಯಗಳ ಆಧಾರದ ಮೇಲೆಯೇ ಅವಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಯಿತು. ವಿಚಾರಣೆಯ ಆರಂಭಿಕ ಹಂತದಲ್ಲಿಯೇ ಆರೋಪಿ ಪ್ರಿಯಾ ತಾನು ಈ ಕೃತ್ಯ ಮಾಡಿರುವುದಾಗಿ ಒಪ್ಪಿದ್ದರಿಂದ ನ್ಯಾಯಾಧೀಶರು ಆಕೆಗೆ ಮೂರು ವರ್ಷಗಳ ಜೈಲು ಸಜೆ ಕೊಟ್ಟರು. ಜೈಲಿಗೆ ಹೋಗುವ ಮುನ್ನ ಆಕೆ ಇನ್ನು ಮುಂದೆ ತನ್ನ ಗಂಡ ಬೇರೆ ಯಾರೊಡನೆಯೂ ಲೈಂಗಿಕ ಕ್ರಿಯೆ ನಡೆಸದಂತೆ ಅವನಿಗೆ ಬುದ್ದಿ ಕಲಿಸಿದ್ದು ತನಗೆ ತೃಪ್ತಿ ತಂದಿದೆ ಎಂದಳು. ಮಕ್ಕಳೂ ಅವಳೊಂದಿಗೆ ಜೈಲಿನಲ್ಲಿರಬೇಕಾದದ್ದು ದುರ್ದೈವವೇ.
‘ಪ್ರತೀಕಾರ ಹಾಗೂ ಪ್ರೇಮದಲ್ಲಿ ಸ್ತ್ರೀಯರು ಪುರುಷರಿಗಿಂತ ಅಮಾನುಷರಾಗಿರುತ್ತಾರೆ’ಎಂಬ ಜರ್ಮನ್ ತತ್ವಶಾಸ್ತ್ರಜ್ಞ ಫ್ರೆಡರಿಕ್ ನೀಷೆಯ ಮಾತುಗಳನ್ನು ಪ್ರಿಯಾ ಸಾಬೀತುಪಡಿಸಿದಳು.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)