ಅಂಕಣ

ವಿದ್ಯಮಾನ: ಇದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಹೊತ್ತು

ಇತ್ತೀಚೆಗಷ್ಟೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದರು. ಅವರ ಭೇಟಿ ನಮಗೆ ಲಾಭ ತಂದಿತೋ, ಅವರು ಅಮೆರಿಕದಲ್ಲಿ ಶೀಘ್ರದಲ್ಲೇ ಬರಲಿರುವ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು, ಅವರ ಲಾಭಕ್ಕಾಗಿ ಬಂದರೋ ಅದೆಲ್ಲವೂ ಒತ್ತಟ್ಟಿಗಿರಲಿ.

ನಮ್ಮ ದೇಶದ ಸಂವಿಧಾನ ಭಾರತದ ನಾಗರಿಕರೆಲ್ಲರಿಗೂ ವಾಕ್ ಸ್ವಾತಂತ್ರ್ಯ ನೀಡಿದೆ. ನಿಜ, ಆದರೆ ವಿರೋಧಿಸುವುದಷ್ಟಕ್ಕೇ ಈ ಸ್ವಾತಂತ್ರ್ಯವನ್ನು ಸೀಮಿತಗೊಳಿಸಿ, ಟೀಕಿಸುವ ಭರದಲ್ಲಿ ಜಗತ್ತಿನೆದುರು ಬೆತ್ತಲಾಗುತ್ತಿದ್ದೇವೆ ಎನ್ನುವುದನ್ನು ನಮ್ಮ ನಾಯಕರು ಮರೆತಂತಿದೆ. ಏಕೆಂದರೆ, ಅಮೆರಿಕ ಅಧ್ಯಕ್ಷರು ಭಾಷಣ ಮಾಡಿದ ಅಹಮದಾಬಾದ್ ಮೊಟೆರಾ ಕ್ರೀಡಾಂಗಣದ ಪಾರ್ಶ್ವದಲ್ಲಿ ಎತ್ತರದ ಗೋಡೆಯನ್ನು ನಿರ್ವಿುಸಿದ್ದು, ಅದರಾಚೆಗೆ ಇರುವ ಕೊಳೆಗೇರಿಯನ್ನು ಅಧ್ಯಕ್ಷರಿಗೆ ಕಾಣದಂತೆ ಮಾಡಲಾಗಿದೆ ಎನ್ನುವುದು ವಿರೋಧಿಸುವವರ ವಾದವಾಗಿತ್ತು. ಈ ವಿಷಯವನ್ನೇ ದೊಡ್ಡ ಅಪರಾಧ ಎಂಬಂತೆ ಬಿಂಬಿಸಿ, ರಂಪವೆಬ್ಬಿಸಿದರು.

ಆದರೆ ಕ್ರೀಡಾಂಗಣದ ಹತ್ತಿರ ಇದ್ದ ಕೊಳೆಗೇರಿ ಅಕ್ರಮವಾಗಿದ್ದು ಅದನ್ನು ತೆರವುಗೊಳಿಸಲು ಬಹಳ ಹಿಂದೆಯೇ ನೋಟಿಸ್ ನೀಡಲಾಗಿತ್ತು. ಅಲ್ಲದೆ, ಭದ್ರತಾ ಕಾರಣಕ್ಕೆ ಕ್ರೀಡಾಂಗಣದ ಸುತ್ತ ಗೋಡೆ ನಿರ್ವಿುಸುವ ಕಾಮಗಾರಿ ನಿರ್ವಿುಸುವ ಪ್ರಕ್ರಿಯೆಯನ್ನು ಕೂಡ ಬಹಳ ಹಿಂದೆಯೇ ಆರಂಭಿಸಲಾಗಿತ್ತು, ಆದ್ದರಿಂದ ಅಧ್ಯಕ್ಷರ ಭೇಟಿಗೂ, ಈ ಗೋಡೆ ನಿರ್ವಣಕ್ಕೂ ಸಂಬಂಧವಿಲ್ಲ. ಅವರು ಇಲ್ಲಿ ಭಾಷಣ ಮಾಡುವ ಕಾರ್ಯಕ್ರಮ ನಿಗದಿಯಾದ ನಂತರ ಕಾರ್ಯಕ್ರಮಕ್ಕೂ ಮೊದಲು ಕಾಮಗಾರಿ ಮುಗಿಸಬೇಕಾದ ಕಾರಣ ತ್ವರಿತವಾಗಿ ಮಾಡ ಲಾಯಿತು. ಆವರಣ ಗೋಡೆ ನಿರ್ಮಾಣ ಮತ್ತು ಅಧ್ಯಕ್ಷರ ಭೇಟಿ ಕಾಕತಾಳೀಯ ಅಷ್ಟೇ, ಇದು ಅಹಮದಾಬಾದ್ ಮಹಾನಗರಪಾಲಿಕೆಯ ಹೇಳಿಕೆ.

ವಾದ-ವಿವಾದಗಳೇನೇ ಇರಲಿ, ಬಡತನ ನಮ್ಮ ದೇಶದಲ್ಲಿ ಮಾತ್ರವಲ್ಲ, ಬೇರೆ ದೇಶಗಳಲ್ಲೂ ಇದೆ, ಅಷ್ಟೇಕೆ ಅಮೆರಿಕದ ಜನಸಂಖ್ಯೆಯ ಶೇಕಡ 12 ಜನರು, ಆ ದೇಶದ ಮಾನದಂಡದಂತೆ ಬಡವರು. ಅಮೆರಿಕ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದದ್ದು 1776ರಲ್ಲಿ, ಅಂದರೆ ನಮ್ಮ ದೇಶ ಸ್ವಾತಂತ್ರ್ಯ ಪಡೆಯುವುದಕ್ಕೂ 171ವರ್ಷಗಳ ಹಿಂದೆ! ಜಗತ್ತಿನಲ್ಲಿ ಅತ್ಯಂತ ಮುಂದುವರಿದ, ವಿಶ್ವದ ‘ಹಿರಿಯಣ್ಣ’ ಎಂದೆಲ್ಲ ಹೆಗ್ಗಳಿಕೆಗೆ ಪಾತ್ರವಾದ ಅಮೆರಿಕ ತನ್ನಲ್ಲಿರುವ ಕೊರತೆಗಳನ್ನು ಎಂದಿಗೂ ಬೇರೆಯವರ ಎದುರು ಬಿಚ್ಚಿಟ್ಟಿಲ್ಲ.

ಆದರೂ ಸತ್ಯ ಎಂದಿಗೂ ಸತ್ಯವೇ ಎನ್ನುವುದನ್ನು ಮುಚ್ಚಿಡಲಾಗದು. ಆದರೆ ನಾವು? ನಮ್ಮ ದೇಶದ ಹೆಗ್ಗಳಿಕೆಯ ಸಾಧನೆಗಳನ್ನೂ ಎಗ್ಗಿಲ್ಲದೆ ಟೀಕಿಸುತ್ತೇವೆ. ಬಾಹ್ಯಾಕಾಶ ಕ್ಷೇತ್ರವಿರಲಿ, ಇನ್ಯಾವುದೇ ಸಾಧನೆಯಿರಲಿ, ನಾವು ಹೆಮ್ಮೆಯಿಂದ ಹೇಳಿಕೊಳ್ಳುವುದಿಲ್ಲ. ಆದೇ ‘ನಮ್ಮದು ಹಾವಾಡಿಗರ ದೇಶ, ದೇಶದ ತುಂಬ ಬಡವರೇ ತುಂಬಿದ್ದಾರೆ, ಕೊಳೆಗೇರಿಗಳೇ ಎಲ್ಲೆಲ್ಲೂ ಇವೆ’ ಎಂಬ ಋಣಾತ್ಮಕ ವಿಷಯಗಳನ್ನು ವರ್ಣರಂಜಿತವಾಗಿ ಹೊರಜಗತ್ತಿಗೆ ಬಿತ್ತರಿಸುವಲ್ಲಿ ಸಾರ್ಥಕತೆ ಮೆರೆಯುತ್ತೇವೆ. ಸ್ವಾತಂತ್ರ್ಯ ಬಂದ ನಂತರ ದಶಕಗಳಿಂದ ಆಳಿದವರು ಇವುಗಳ ನಿವಾರಣೆಗೆ ಏನು ಮಾಡಿದ್ದಾರೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತಿಲ್ಲ.

ಇಷ್ಟು ಮಾತ್ರವಲ್ಲ, ಜಾಲತಾಣಗಳಲ್ಲಿ ಬಿತ್ತರಗೊಳ್ಳುತ್ತಿರುವ ಕೆಲವು ನುಡಿಮುತ್ತುಗಳು ಹೀಗಿವೆ-ಯಾರೋ ಒಬ್ಬರು ಪುರಾತನ ಶಿಲ್ಪಗಳನ್ನು ಟೀಕಿಸುತ್ತ, ‘ಅಮೆರಿಕ ಅಧ್ಯಕ್ಷರಿಗೆ ತಾಜ್​ವುಹಲ್ ತೋರಿಸುವ ಬದಲು ಕಾಲು ಅಗಲಿಸಿ ಕುಳಿತವರನ್ನು ತೋರಿಸಬೇಕು’ ಎಂಬ ವಿಕೃತ ಮನಸ್ಥಿತಿ ಬಿಚ್ಚಿಡುತ್ತಾರೆ. ಹುಟ್ಟಿ ಬೆಳೆದ ನಮ್ಮ ದೇಶದ ಬಗ್ಗೆ ಹೆಮ್ಮೆಯಿಂದ ಸ್ಮರಿಸುವ ಬದಲು ಎಲ್ಲವನ್ನೂ ಜಾತಿ ಧರ್ಮದ ಪರದೆಯಡಿ ಬಚ್ಚಿಡುತ್ತಾರೆ. ಹಾಗೊಮ್ಮೆ ದೇಶದ ಪ್ರತಿಯೊಂದನ್ನೂ ದ್ವೇಷಿಸಲೇಬೇಕಾದರೆ ಅಂತಹ ದೇಶದಲ್ಲಿ ಇರುವ ಅಗತ್ಯವೇನಿದೆ? ಯಾವುದು ಸ್ವರ್ಗವೋ ಅಲ್ಲಿಗೆ ಹೋಗಬಹುದಲ್ಲ? ಪಾಕಿಸ್ತಾನ ಸ್ವರ್ಗ ಎಂದ ಎಷ್ಟೋ ಜನರು ಇನ್ನೂ ಇಲ್ಲೇ ಇದ್ದಾರೆ.

ತೋರಿಕೆಗೆ ಕಹಿಯೆನಿಸಿದರೂ ಕಟು ವಾಸ್ತವ: ಆರೋಗ್ಯ ಮತ್ತು ಶಿಕ್ಷಣ ಉಚಿತವಿರಲಿ, ಉಳಿದವು ತನ್ನಿಂತಾನೇ ಸಿಗುತ್ತದೆ ಎಂಬ ವಾದವನ್ನು ಯಾವ ಸರ್ಕಾರಗಳೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಅವೆರಡನ್ನು ಹೊರತು ಪಡಿಸಿ ಬೇರೆಲ್ಲ ಉಚಿತವಾಗಿ ನೀಡಿ ಸೋಮಾರಿತನವನ್ನು ಉತ್ತೇಜಿಸುತ್ತಾರೆ. ಹೀಗೆ ಉಚಿತವಾಗಿ ನೀಡುವುದನ್ನು ಪಡೆಯುವ ಮೂಲಕ ಬಡವರು ಬಡವರಾಗಿಯೇ ಉಳಿಯುತ್ತಾರೆ. ಇಂತಹ ಬಡತನವನ್ನೇ ಜಗತ್ತಿನೆದುರು ಬಿಚ್ಚಿಟ್ಟು ತೋರಿಸಬೇಕೆಂದು ಈ ನಾಯಕರೆನಿಸಿಕೊಂಡವರು ಬಯಸುತ್ತಾರೆ.

| ಮೋಹನದಾಸ ಕಿಣಿ ಕಾಪು (ಉಡುಪಿ ಜಿಲ್ಲೆ)