ಅಂಕಣ

ವಿದ್ಯಮಾನ; ದಿಕ್ಕುತಪ್ಪಿರುವ ಪ್ರತಿಭಟನೆ

ಪೌರತ್ವ ತಿದ್ದುಪಡಿ ಕಾಯಿದೆಯಿಂದ ಈ ದೇಶದಲ್ಲಿ ವಾಸಿಸುವ ಮುಸ್ಲಿಮರಿಗೆ ಯಾವುದೇ ತೊಂದರೆಯಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಸ್ಪಷ್ಟಪಡಿಸಿದ್ದಾರೆ. ಈ ಕಾಯಿದೆಯ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಈಗಾಗಲೇ ಹಲವು ಅರ್ಜಿಗಳು ದಾಖಲಾಗಿದ್ದು, ಅವು ವಿಚಾರಣೆಗೆ ಬಾಕಿ ಇವೆ.

ಹೀಗಿರುವಲ್ಲಿ ಅಲ್ಲಿನ ತೀರ್ಪಿಗಾಗಿ ಕಾಯದೆ ಕೆಲವು ರಾಜಕೀಯ ಪಕ್ಷಗಳು, ಸಂಘಟನೆಗಳು ಹಾಗೂ ಬುದ್ಧಿಜೀವಿಗಳು ಜನರನ್ನು ಪ್ರಚೋದಿಸಿ ಪ್ರತಿಭಟನೆ ನಡೆಸಲು ಕುಮ್ಮಕ್ಕು ನೀಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ. ದೆಹಲಿಯ ಶಾಹಿನ್​ಬಾಗ್​ನಲ್ಲಿ ಸಿಎಎ ವಿರೋಧಿ ಪ್ರತಿಭಟನೆ ನಿರಂತರವಾಗಿ ನಡೆಯುತ್ತಿದ್ದು, ಈ ಪ್ರತಿಭಟನೆಯಲ್ಲಿ ತನ್ನ ಹೆತ್ತವರೊಂದಿಗೆ ಭಾಗವಹಿಸಿದ ನಾಲ್ಕು ತಿಂಗಳ ಮಗು ಅಸೌಖ್ಯದಿಂದ ಮೃತಪಟ್ಟಿದೆ.

ಅಲ್ಲದೆ ಅಲ್ಲಿ ನಿರಂತರ ನಡೆಯುತ್ತಿರುವ ಪ್ರತಿಭಟನೆಯಿಂದ ರಸ್ತೆ ಬ್ಲಾಕ್ ಆಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟಾಗಿದೆ. ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದು ಇಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪಾಕಿಸ್ತಾನ ಪರ ಘೊಷಣೆ ಕೂಗಿ ದೇಶವಿರೋಧಿ ಚಟುವಟಿಕೆ ನಡೆಸಲು ಯತ್ನಿಸಿದ್ದಾರೆ. ಇತ್ತೀಚೆಗೆ ಅಮೆರಿಕ ಅಧ್ಯಕ್ಷರ ದೆಹಲಿ ಭೇಟಿ ವೇಳೆ ಎರಡು ಗುಂಪುಗಳ ನಡುವೆ ತೀವ್ರ ಘರ್ಷಣೆಯಿಂದಾಗಿ ವ್ಯಾಪಕ ಹಿಂಸೆ ನಡೆದು ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಪೌರತ್ವ ವಿರೋಧಿ ಪ್ರತಿಭಟನೆ ದಿಕ್ಕುತಪ್ಪಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಕೇವಲ ತೋರಿಕೆಗಾಗಿ ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ಮಾಡಿ ಒಳಗಿಂದೊಳಗೆ ರಾಷ್ಟ್ರವಿರೋಧಿ ಮಸಲತ್ತು ನಡೆಸುತ್ತಿರುವುದು ನಿಧಾನವಾಗಿ ಬೆಳಕಿಗೆ ಬರುತ್ತಿದೆ. ಪ್ರತಿಭಟನೆ ನೆಪದಲ್ಲಿ ಗುಂಡಿನ ದಾಳಿ ನಡೆಸಿ, ವಾಹನ, ಅಂಗಡಿಗಳಿಗೆ ಬೆಂಕಿ ಇಟ್ಟು, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿ ಸಾಮಾಜಿಕ ಸಾಮರಸ್ಯವನ್ನು ಕೆಲವು ಕಿಡಿಗೇಡಿಗಳು ಹಾಳುಮಾಡುತ್ತಿದ್ದಾರೆ.

ಇಂತಹ ಪ್ರತಿಭಟನೆಯಿಂದ ಏನನ್ನು ಸಾಧಿಸಿದಂತಾಯಿತು? ಇಂತಹ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿದ ತಪ್ಪಿತಸ್ಥರು, ಕಾರ್ಯಕ್ರಮದ ಆಯೋಜಕರು, ಬೆಂಬಲಿಸಿದವರು, ಹಣಕಾಸು ನೆರವು ಒದಗಿಸಿದವರು ಹಾಗೂ ಇಂತಹವರನ್ನು ಪ್ರಚೋದಿಸಿದ ರಾಜಕೀಯ ಪಕ್ಷಗಳ ಮುಖಂಡರ ಮೇಲೆ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕು.

| ಎನ್. ರಾಜೇಶ್ ಅಡಿಗ ಮಂಗಳೂರು