ಕಡಿಮೆ ಅಕ್ಷರಗಳಲ್ಲಿ, ಸಂದೇಹ ಉಳಿಯದ ಹಾಗೆ ಯಾವುದೇ ವಿಷಯವನ್ನು ಸಾರರೂಪವಾಗಿ ಪ್ರತಿಪಾದಿಸುವ ಕೆಲವೇ ಅಕ್ಷರಗಳ ಸಮೂಹಕ್ಕೆ ಸೂತ್ರ ಎನ್ನುತ್ತಾರೆ. ಅಂತಹ ಸೂತ್ರಪರಂಪರೆಯಲ್ಲಿ ಆದ್ಯ ಸೂತ್ರಗಳೆಂದು ಪರಿಗಣಿಸಲ್ಪಟ್ಟಿರುವ ಶ್ರೀಜಗದ್ಗುರು ಪಂಚಾಚಾರ್ಯರ ಪಂಚಸೂತ್ರಗಳ ವ್ಯಾಖ್ಯಾನದ ಸಾರ ಸಂಗ್ರಹವೇ ವೀರಶೈವ ಪಂಚಸೂತ್ರಾಣಿ.
| ಪ್ರಶಾಂತ ರಿಪ್ಪನ್ಪೇಟೆ
ಏತಾನಿ ಪಂಚ ಸೂತ್ರಾಣೀ ಪಂಚಾಚಾರ್ಯಕೃತಾನಿ ಚ |
ಆದ್ಯಾನೀತಿ ಪ್ರಸಿದ್ಧಾನಿ ಸೂತ್ರಾಣೀ ಖಲು ಭಾರತೇ ||
ಜಗತ್ತಿನ ಎಲ್ಲ ವಿದ್ಯೆಗಳು ಕೂಡ ಸೂತ್ರ ರೂಪದಲ್ಲಿಯೇ ಪ್ರತಿಪಾದಿಸಲ್ಪಟ್ಟಿದ್ದು, ಆದಿ ಜಗದ್ಗುರು ಪಂಚಾಚಾರ್ಯರು ಪ್ರತಿಪಾದಿಸಿದ ಶಿವಾದ್ವೈತ ಸಿದ್ಧಾಂತವು ಪಂಚಸೂತ್ರಗಳ ವಿಸõತ ಭಾಗವಾಗಿವೆ. ಯೋಗ, ಸಾಂಖ್ಯ, ವ್ಯಾಕರಣಾದಿ ಎಲ್ಲ ಸೂತ್ರಗಳಲ್ಲಿ ಪಂಚಸೂತ್ರಗಳು ಆದ್ಯ ಸೂತ್ರಗಳಾಗಿದ್ದು, ಪಂಚಾಚಾರ್ಯರು ಆದ್ಯ ಸೂತ್ರಕಾರರಾಗಿದ್ದಾರೆ.
ಕ್ರಮವಾಗಿ ಜಗದ್ಗುರು ರೇಣುಕಾದಿ ಪಂಚಾರ್ಯರು ಅಗಸ್ಱ, ದದೀಚಿ, ವ್ಯಾಸ, ಸಾನಂದ ಮತ್ತು ದುರ್ವಾಸ ಮುನಿಗೆ ಪಂಚವರ್ಣ ಸೂತ್ರವನ್ನು ಬೋಧಿಸುವ ಮೂಲಕ ಜೀವಾತ್ಮ, ಪರಮಾತ್ಮ, ಜಗತ್ತು, ಬಂಧ ಮತ್ತು ಮೋಕ್ಷ ಎಂಬ ದಾರ್ಶನಿಕ ವಿಷಯಗಳ ರಹಸ್ಯವನ್ನು ವಿವರಿಸಿದ್ದಾರೆ. ಆ ಪಂಚಸೂತ್ರದ ವಿಸõತ ವ್ಯಾಖ್ಯಾನವನ್ನು ಕಾಶೀ ಜ್ಞಾನಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ‘ವೀರಶೈವ ಪಂಚಸೂತ್ರಾಣಿ’ ಎಂಬ ಗ್ರಂಥದ ಮೂಲಕ ವಿವರವಾಗಿ ವಿಶ್ಲೇಷಿಸಿದ್ದಾರೆ. ಸಂಸ್ಕೃತದಲ್ಲಿ ಅತ್ಯಂತ ಜನಪ್ರಿಯವಾಗಿರುವ ಅನುಷ್ಟುಪ್ ಛಂದಸ್ಸಿನಲ್ಲಿ ಸುಮಾರು ಎರಡೂವರೆ ಸಾವಿರ ಶ್ಲೋಕಗಳನ್ನು ರಚಿಸಿರುವ ಕಾಶೀ ಜಗದ್ಗುರುಗಳ ಸಂಸ್ಕೃತ ಗ್ರಂಥವು ಖ್ಯಾತ ವಿದ್ವಾಂಸ ಡಾ. ಸಿ.ಶಿವಕುಮಾರಸ್ವಾಮಿಗಳಿಂದ ಕನ್ನಡಕ್ಕೆ ಭಾವಾನುವಾದಗೊಂಡು ಓದುಗರ ಕೈಸೇರಲು ಸಿದ್ಧವಾಗಿದೆ.
ನಾಲ್ಕು ವರ್ಷಗಳ ಸತತ ಪ್ರಯತ್ನ: 2019ರಲ್ಲಿ ಕರೊನಾ ಲಾಕ್ಡೌನ್ ಸಂದರ್ಭದಲ್ಲಿ ಆರಂಭವಾದ ಪಂಚಸೂತ್ರ ಬರವಣಿಗೆ ಕಾರ್ಯವು ಸತತ ಎರಡು ವರ್ಷ ಕಾಲ ಪೂಜಾದಿ ನಿತ್ಯಕರ್ಮಗಳಂತೆ ವ್ರತದೋಪಾದಿಯಲ್ಲಿ ಮುಂದುವರಿಸಿದರು. ಹೀಗೆ ರಚನೆಯಾದ ಒಟ್ಟು ಸೂತ್ರಗಳ ಸಂಖ್ಯೆ ಬರೋಬ್ಬರಿ 2539. ಈ ಶ್ಲೋಕಗಳನ್ನು ಪ್ರಸ್ತುತ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಮೊದಲಿಗೆ ಓದಿ ತಮ್ಮ ಅಮೂಲ್ಯ ಸಲಹೆ, ಸೂಚನೆಗಳನ್ನು ನೀಡಿದರು. ಹಾಗೂ ಕಾಶಿಯ ಮಹಾನ್ ಪಂಡಿತರಲ್ಲೋರ್ವರಾದ ಡಾ.ಕಮಲೇಶ್ ಜಾ ರವರು ತಮ್ಮ ವಿದ್ವತ್ ದೃಷ್ಟಿಕೋನಕ್ಕೊಳಪಡಿಸಿ ಅವುಗಳನ್ನು ಮತ್ತಷ್ಟು ಛಂದೋಬದ್ಧಗೊಳಿಸಿದರು. ಹೀಗೆ ಅಂತಿಮಗೊಂಡ ‘ಪಂಚಸೂತ್ರಾಣಿ’ ಸಂಸ್ಕೃತ ಗ್ರಂಥವು ಶ್ರೀಶೈಲ ಜಗದ್ಗುರುಗಳ ಪೀಠಾರೋಹಣದ ದ್ವಾದಶ ವರ್ಧಂತಿ ಮಹೋತ್ಸವದಲ್ಲಿ ಜಗದ್ಗುರು ಪಂಚಾಚಾರ್ಯರ ಸಾನ್ನಿಧ್ಯದಲ್ಲಿ ಬಿಡುಗಡೆಯಾಯಿತು. ಸದ್ಯ ಇದರ ಕನ್ನಡ ಭಾವಾರ್ಥ ಸಹಿತ ಅನುವಾದ ಗ್ರಂಥವು ಬಿಡುಗಡೆಗೆ ಸಿದ್ಧವಾಗಿದೆ.
ಕಾಶೀ ಹಿಂದು ವಿವಿ ಪಠ್ಯವಾಗಿ ಆಯ್ಕೆ: ಮೂಲ ಸಂಸ್ಕೃತ ಗ್ರಂಥ ಲೋಕಾರ್ಪಣೆಯಾದ ನಂತರ ಕಾಶೀ ಜಂಗಮವಾಡಿ ಮಠದಲ್ಲಿ ವಿದ್ವತ್ ಸಭೆಯನ್ನು ಏರ್ಪಡಿಸಿ ಈ ಗ್ರಂಥದ ಕುರಿತು ವಿದ್ವಾಂಸರ ವಿಶ್ಲೇಷಣೆಗೊಳಪಡಿಸಲಾಗಿತ್ತು. ವೀರಶೈವ ಸಿದ್ಧಾಂತವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಲು ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿರುವ ಧರ್ವಗಮ ವಿಭಾಗದ ಶಾಸ್ತ್ರಿ (ಬಿಎ) ಪದವಿಗೆ ‘ವೀರಶೈವ ಪಂಚಸೂತ್ರಾಣಿ’ ಗ್ರಂಥವು ಪಠ್ಯವಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದು, ಗ್ರಂಥದ ಮೌಲ್ಯ ವಿಶ್ವಮಟ್ಟದಲ್ಲಿ ಅನಾವರಣಗೊಂಡಿದೆ. ವೀರಶೈವ ಸಿದ್ಧಾಂತವು ವಿಶ್ವಮಾನ್ಯವಾಗಿ ಬೆಳೆಯುವುದಕ್ಕೆ ಪೂರಕವಾಗಿ ಶ್ರೀಸಿದ್ಧಾಂತ ಶಿಖಾಮಣಿ ಅನೇಕ ಅನ್ಯದೇಶಿಯ ಭಾಷೆಗಳಿಗೆ ಕೂಡ ಅನುವಾದಗೊಂಡಿದೆ. ಕಾಶೀ ಜಗದ್ಗುರುಗಳ ಅನೇಕ ಶಿಷ್ಯರು ರಷ್ಯಾ, ಯೂಕ್ರೇನ್, ಬಾಂಗ್ಲಾದೇಶ, ಜಪಾನ್, ನೇಪಾಳ ಮತ್ತಿತರ ರಾಷ್ಟ್ರಗಳಲ್ಲಿದ್ದು, ವೀರಶೈವ ತತ್ವಾನುಯಾಯಿಗಳಾಗಿದ್ದಾರೆ.
ಪಂಚಸೂತ್ರದ ಒಳ-ಹೊರಗು
ಜೀವೇಶೌ ಬಂಧಮೋಕ್ಷೌ ಚ ಜಗದ್ರೂಪಂ ತಥೈವ ಚ |
ಪಂಚೈತೇ ವಿಷಯ ಮುಖ್ಯಾಃ ಸೂತ್ರೇಣಾತ್ರ ನಿರೂಪಿತಾಃ ||
ಶ್ರೀ ಜಗದ್ಗುರು ಪಂಚಾಚಾರ್ಯರ ಪಂಚ ಸೂತ್ರಗಳು ಪ್ರಾಚೀನ ಕಾಲದಿಂದ ಭಕ್ತರಿಗೆ ಗೋತ್ರ-ಸೂತ್ರದ ಪಟದ ಮೂಲಕ ಪರಿಚಯವಿದ್ದರೂ, ಅವುಗಳ ಅರ್ಥ, ವ್ಯಾಖ್ಯಾನದ ಪರಿಕಲ್ಪನೆ ಇರಲಿಲ್ಲ. ಮೊದಲಿಗೆ ಹೂಲಿ ಪಂಚವಣ್ಣಿಗೆ ಮಠದ ಶ್ರೀಸಿದ್ಧನಂಜೇಶ ಶಿವಾಚಾರ್ಯರು ರಚಿಸಿದ ‘ಪಂಚವರ್ಣ ಸೂತ್ರ’ದ ವ್ಯಾಖ್ಯಾನದ ಹಸ್ತಪ್ರತಿಯು ಕಾಶೀ ಪೀಠದ ಪ್ರಾಚೀನ ಗ್ರಂಥಾಲಯದಲ್ಲಿ ದೊರೆತ ಕಾರಣ ಡಾ.ಚಂದ್ರಶೇಖರ ಜಗದ್ಗುರುಗಳು ಇಂತಹದ್ದೊಂದು ಮಹಾನ್ ಕಾರ್ಯಕ್ಕೆ ಕೈಹಾಕಿದರು.
ಅನೇಕ ವಿದ್ವಾಂಸರ ಜೊತೆಗಿನ ಚರ್ಚೆ, ಹಲವಾರು ಗ್ರಂಥಗಳ ಅಧ್ಯಯನ, ವಿವಿಧ ವಿಷಯಗಳ ಚಿಂತನ-ಮಂಥನದ ಫಲವಾಗಿ ‘ಪಂಚಸೂತ್ರ’ ಕೃತಿರೂಪದಲ್ಲಿ ಹೊರಬಂದಿದೆ ಎನ್ನುತ್ತಾರೆ ಕಾಶೀ ಜಗದ್ಗುರುಗಳು. ಒಟ್ಟು 13 ಅಧ್ಯಾಯಗಳಿಂದ ಕೂಡಿರುವ ‘ಪಂಚಸೂತ್ರಾಣಿ’ ಗ್ರಂಥವು ‘ಹೊಸಚಿಗುರು, ಹಳೆಬೇರು ಕೂಡಿರಲು ಮರ ಸೊಬಗು’ ಎಂಬ ಕವಿವಾಣಿಯಂತೆ ಪಂಚಾಚಾರ್ಯರ ಯುಗ ಯುಗಗಳ ಚರಿತ್ರೆ, ಲೀಲೆ ಜೊತೆಗೆ ಧಾರ್ವಿುಕ ಸತ್ಕ್ರಾಂತಿಯ ವಿವರಗಳು ಹಾಗೂ ದಾರ್ಶನಿಕ ವಿಚಾರಧಾರೆಗಳಿಂದ ಕೂಡಿದೆ. ಕೃತಯುಗದಿಂದ ಕಲಿಯುಗದ ವರ್ತಮಾನ ಪೀಠಾಚಾರ್ಯರವರೆಗಿನ ಸಂಪೂರ್ಣ ಚರಿತ್ರೆಯನ್ನು ದಾಖಲಿಸಲಾಗಿದೆ.
ಪಡ್ವಿಡಿ: (ಪದ+ವಿಧಿ) ಪರಮ ಪದವಿಯನ್ನು ಪಡೆಯುಲು ಇರುವ ವಿಧಿ ಅಥವಾ ನಿಯಮ.
ಸೃಷ್ಟಿ: ಜಗತ್ತಿಗೆ ಬರುವ ಪ್ರತಿ ಜೀವಾತ್ಮನು ಕೂಡ ನೀರಿನ ಮೂಲಕವೇ ಆಗಮಿಸುವ ಸೃಷ್ಟಿಯ ರಹಸ್ಯ.
ಲಂಬನ: ಎಲ್ಲಕ್ಕಿಂತ ಎತ್ತರವಾದದ್ದು ಅಥವಾ ಎಲ್ಲಕ್ಕಿಂತ ಬೃಹತ್ತಾಗಿರುವುದೇ ಪರಮಾತ್ಮನ ಸ್ವರೂಪ.
ಮುಕ್ತಾಗುಚ್ಛ: 36 ತತ್ವಗಳಿಂದ ನಿರ್ವಣವಾಗಿರುವ ಈ ಜಗತ್ತನ್ನು ಮುತ್ತಿನಗೊಂಚಲು ಎನ್ನಲಾಗುತ್ತದೆ.
ಪಂಚವರ್ಣ: ಶಿವಯೇವಾತ್ಮ ಎಂಬ ಐದಕ್ಷರದಲ್ಲಿ ಶಿವನೇ ನಿಶ್ಚಿತವಾಗಿ ಆತ್ಮ ಎನ್ನುವ ಮೂಲಕ ಸಂಸಾರ ಬಂಧನವನ್ನು ಕಳೆದು ಮೋಕ್ಷವನ್ನು ಪಡೆಯುವ ಮಾರ್ಗ ಹೇಳಲಾಗಿದೆ.
ಬೆಂಗಳೂರಿನ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಹಮ್ಮಿ ಕೊಳ್ಳಲಾಗಿರುವ ಕಾರ್ಯ ಕ್ರಮದಲ್ಲಿ ಜ.8ರಂದು ಉಜ್ಜಯಿನಿ, ಶ್ರೀಶೈಲ ಮತ್ತು ಕಾಶೀ ಜಗದ್ಗುರುಗಳ ಸಾನಿಧ್ಯದಲ್ಲಿ ‘ವೀರಶೈವ ಪಂಚಸೂತ್ರಾಣಿ’ ಗ್ರಂಥ ಲೋಕಾರ್ಪಣೆಯಾಗಲಿದೆ. ವೀರಶೈವ ಲಿಂಗಾಯತರ ಪಾಲಿಗೆ ಅತ್ಯಂತ ಮೌಲಿಕ ಮತ್ತು ದಾರ್ಶನಿಕ ಪ್ರಂಪಂಚಕ್ಕೆ ಅಮೂಲ್ಯ ಕೊಡುಗೆಯಾಗಿರುವ ನೂತನ ಗ್ರಂಥವನ್ನು ಜಗದ್ಗುರುಗಳ ಸಾನಿಧ್ಯದಲ್ಲಿ ಮೊದಲಿಗೆ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಿ ನಂತರ ಬಿಡುಗಡೆ ಮಾಡಲಾಗುತ್ತಿದೆ.