ಕುವೆಂಪು ಕವಿಯೇ ಅಲ್ಲ ಎಂಬ ಒಂದು ಕಾಲದ ನವ್ಯರ ಮನೋಧರ್ಮ ಬದಲಾಗಿದೆ. ಕುವೆಂಪು ಅವರಿಗೆ ಯಾರೇ, ಯಾವುದೇ ರೀತಿಯ ಅವಮಾನ ಮಾಡಿದರೂ ತಕ್ಷಣ ಕ್ರಮ ಕೈಗೊಳ್ಳಬೇಕು. 2017ರಲ್ಲಿ ಕುವೆಂಪು ಅವರ ನಾಡಗೀತೆಗೆ ಅವಮಾನವಾದ ಆ ಕ್ಷಣದಲ್ಲಿಯೇ ಹಿರಿಯ ಸಾಹಿತಿಗಳಾಗಿದ್ದ ಹಂ.ಪ.ನಾ. ಅವರು ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಿದ್ದರೆ, ಎಡಪಂಥೀಯ ಸಾಹಿತಿಗಳು ಇಂದಿನ ಹಾಗೆ ಹೋರಾಡಿದ್ದರೆ ಅದು ಪಕ್ಷಾತೀತ, ಪಂಥಾತೀತ ನಿಲುವು ಎಂದೆನಿಸುತ್ತಿತ್ತು. ಆದರೆ, 2017ರಲ್ಲಾದ ಘಟನೆಯನ್ನು 5 ವರ್ಷಗಳ ಅನಂತರ ಪಠ್ಯಪುಸ್ತಕಗಳ ಸಂದರ್ಭದಲ್ಲಿ ಕೈಗೆತ್ತಿಕೊಂಡು ಹೋರಾಡುತ್ತಿರುವುದು ನಿಜವಾಗಿಯೂ ಕುವೆಂಪು ಬದುಕು-ಬರಹ-ಆಶಯಗಳ ಸಂರಕ್ಷಣೆಯ ಕಾರಣದಿಂದಲೋ ಅಥವಾ ಪಠ್ಯಪುಸ್ತಕಗಳನ್ನು ತಡೆಯುವುದಕ್ಕಾಗಿಯೋ ಎಂಬ ಪ್ರಶ್ನೆ ಮೂಡುತ್ತದೆ. ಪಠ್ಯಪುಸ್ತಕಗಳನ್ನು ತಡೆಯುವುದಕ್ಕಾಗಿಯೇ ಹೋರಾಟ ಎನ್ನುವುದಾದರೆ ಯಾರ ಸಮಿತಿಯ ಪಠ್ಯಪುಸ್ತಕಗಳು ಕುವೆಂಪು ಆಶಯವನ್ನು ಪ್ರತಿನಿಧಿಸುತ್ತವೆ, ಯಾರದ್ದು ಪ್ರತಿನಿಧಿಸುವುದಿಲ್ಲ ಎಂಬ ವಸ್ತುನಿಷ್ಠ ವಿಶ್ಲೇಷಣೆ ಅಗತ್ಯ.
ಡಾ.ಜಿ.ಎಸ್. ಮುಡಂಬಡಿತ್ತಾಯ ಹಾಗೂ ಪೊ›. ಬರಗೂರು ರಾಮಚಂದ್ರಪ್ಪ ಅವರ ಸಮಿತಿಗಳ ಪಠ್ಯಗಳನ್ನು ತೌಲನಿಕವಾಗಿ ಪರಿಶೀಲಿಸಿದರೆ, ಮುಡಂಬಡಿತ್ತಾಯ ಅವರ ಪಠ್ಯಗಳೇ ಕುವೆಂಪು ಆಶಯವನ್ನು ಸಮರ್ಥವಾಗಿ ಎತ್ತಿಹಿಡಿಯುತ್ತವೆ. ಮುಡಂಬಡಿತ್ತಾಯ ಸಮಿತಿಯ 6-10ನೇ ತರಗತಿಯ ಪ್ರಥಮ, ದ್ವಿತೀಯ, ತೃತೀಯ, ಕನ್ನಡ ಭಾಷಾ ಪಠ್ಯಗಳನ್ನು ಪರಿಶೀಲಿಸಿದರೆ ಅಲ್ಲಿ ಕುವೆಂಪು ಅವರ ಅನಲೆ, ಅಜ್ಜಯ್ಯನ ಅಭ್ಯಂಜನ, ಭರತ ಭೂಮಿ ನನ್ನ ತಾಯಿ, ಕಾಮನಬಿಲ್ಲು ಕನಸು ಕಟ್ಟಿದೆೆ, ನಾನು ಕನ್ನಡ ಕವಿಯಾದೆ ಎಂಬ ಪಾಠಗಳಿರುವುದು ಕಂಡುಬರುತ್ತದೆ. ಅವುಗಳಲ್ಲಿ ಪೊ›. ಬರಗೂರು ಸಮಿತಿ ಅನಲೆ ಹಾಗೂ ಅಜ್ಜಯ್ಯನ ಅಭ್ಯಂಜನ ಎಂಬ ಪಾಠಗಳನ್ನು ಕೈಬಿಟ್ಟು ಹಸುರು ಮತ್ತು ನನ್ನ ಗೋಪಾಲ ಎಂಬ ಹೊಸ ಪಾಠಗಳನ್ನು ಸೇರಿಸಿದೆ. ರೋಹಿತ್ ಚಕ್ರತೀರ್ಥ ಸಮಿತಿಯು ಹಸುರು, ನನ್ನ ಗೋಪಾಲ ಪಾಠಗಳನ್ನು ಉಳಿಸಿಕೊಂಡು ಹೊಸದಾಗಿ ಬಹುಮಾನ ಮತ್ತು ಬೊಮ್ಮನಹಳ್ಳಿಯ ಕಿಂದರಜೋಗಿ ಎಂಬ ಎರಡು ಪಾಠಗಳನ್ನು ಸೇರಿಸಿದೆ.
ಪ್ರಸ್ತುತ 2022ರ ಪರಿಷ್ಕೃತ ಪಠ್ಯಗಳಲ್ಲಿ ಕುವೆಂಪು ಅವರ ಬಹುಮಾನ, ಹಸುರು, ಭರತ ಭೂಮಿ ನನ್ನ ತಾಯಿ, ಬೊಮ್ಮನಹಳ್ಳಿಯ ಕಿಂದರಜೋಗಿ, ನನ್ನ ಗೋಪಾಲ, ಕಾಮನಬಿಲ್ಲು ಕನಸು ಕಟ್ಟಿದೆ, ನಾನು ಕನ್ನಡ ಕವಿಯಾದೆ ಎಂಬ ಪಾಠಗಳನ್ನು ರೋಹಿತ್ ಚಕ್ರತೀರ್ಥ ಸಮಿತಿಯು ಮಕ್ಕಳ ಓದಿಗಾಗಿ ಇಟ್ಟಿದೆ. ಮುಡಂಬಡಿತ್ತಾಯ ಸಮಿತಿಯ ಪಠ್ಯವನ್ನು ಬರಗೂರು ಸಮಿತಿ ಏಕೆ ಕೈಬಿಟ್ಟಿತೋ ತಿಳಿಯದು. ಆದರೆ ‘ಪೆರಿಯಾರ್’ ಎಂಬ ಪಾಠವನ್ನು ಓದಿದಾಗ ಸೈದ್ಧಾಂತಿಕ ಕಾರಣ ಇರಬಹುದೆ? ಎಂಬ ಅನುಮಾನ ಮೂಡುತ್ತದೆ. ಏಕೆಂದರೆ ಸಮಾಜ ವಿಜ್ಞಾನ ಪಠ್ಯ ಒಂದರಲ್ಲಿ ಬರಗೂರು ಸಮಿತಿ ಪೆರಿಯಾರ್ ಎಂಬ ಪಾಠಭಾಗವನ್ನು ಸೇರಿಸಿದೆ. ಅದರಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ ‘ರಾಮಾಯಣ ಮಹಾಕಾವ್ಯದಲ್ಲಿ ಬರುವ ರಾವಣನನ್ನು ದ್ರಾವಿಡ ನಾಯಕನೆಂದು ಬಿಂಬಿಸಿ, ರಾಮನನ್ನು ವೈದಿಕ ವರ್ಗದ ದೇವರೆಂದು ತಿರಸ್ಕರಿಸಿದರು’ ಎಂದಿದೆ. ಆದರೆ, ಕುವೆಂಪು ಅವರ ಮನೆಯಲ್ಲಾಗಲಿ, ಜಾತಿಯಲ್ಲಾಗಲಿ, ರಾಜ್ಯದಲ್ಲಾಗಲಿ, ದೇಶದಲ್ಲಾಗಲಿ ರಾಮನನ್ನು ದೇವರು ಎಂದು ಸ್ವೀಕರಿಸಿದ್ದಾರೆಯೇ ವಿನಹ ರಾವಣನನ್ನಲ್ಲ. ನಮ್ಮ ಕರ್ನಾಟಕದ ಒಕ್ಕಲಿಗ ಸಮುದಾಯವು ರಾಮನನ್ನು ದೇವರೆಂದು ಸ್ವೀಕರಿಸಿರುವ, ಶಿವನನ್ನು ದೇವರೆಂದು ಸ್ವೀಕರಿಸಿರುವ, ದಾಸಯ್ಯ, ಜೋಗಯ್ಯರೆಂಬ ಸಮರಸದ ಪರಂಪರೆಯನ್ನು ಹೊಂದಿದೆಯೇ ಹೊರತು ಮತೀಯ ವಾದವನ್ನಾಗಲಿ, ಜಾತಿಯವಾದವನ್ನಾಗಲಿ ಅಲ್ಲ. ಏಕೆಂದರೆ ರೈತಾಪಿ ಮೂಲದ ಸಮುದಾಯಗಳು -ಅದು ಹವ್ಯಕ ಬ್ರಾಹ್ಮಣ ಸಮುದಾಯ ಆದಿಯಾಗಿ ದಲಿತ ಸಮುದಾಯವರೆಗಿನ ಜನರು- ಕೂಡಿ ಬಾಳುವ, ದುಡಿದು ಗಳಿಸುವ, ಹಂಚಿ ಉಣ್ಣುವ, ಶಿವಪ್ರಜ್ಞೆಯ ರಾಮರಾಜ್ಯ ನಿರ್ವಣದ ಜನಸಮುದಾಯ. ಅದರ ಪ್ರಜ್ಞೆ ಕನ್ನಡಪ್ರಜ್ಞೆಯನ್ನು ರೂಪಿಸಿದೆ. ಹಾಗಾಗಿಯೇ ಕನ್ನಡದ ನಾಗಚಂದ್ರ, ಕುಮಾರ ವಾಲ್ಮೀಕಿ, ಮುದ್ದಣ, ಕುವೆಂಪು ಅವರಾದಿಯಾಗಿ ವೀರಪ್ಪ ಮೊಯಿಲಿ ಅವರ ವರೆಗೆ ಕನ್ನಡದ ಕವಿಗಳು ಕಾವ್ಯಕ್ಕೆ ಹಾಗೂ ಬದುಕಿಗೆ ರಾಮನನ್ನು ನಾಯಕನ್ನಾಗಿ ಸ್ವೀಕರಿಸಿದ್ದಾರೆಯೇ ವಿನಹ ರಾವಣನನ್ನಲ್ಲ.
‘ಅನಲೆ’ ಪಾಠ ರಾವಣನನ್ನು ಕುರಿತಾದ ಶ್ರೀ ರಾಮಾಯಣ ದರ್ಶನಂ ಕಾವ್ಯದ ಭಾಗ. ದೇಜಗೌ ಅವರ ಗದ್ಯಾನುವಾದವನ್ನು ಜಿ.ಎಸ್. ಮುಡಂಬಡಿತ್ತಾಯ ಸಮಿತಿ ಪಠ್ಯಕ್ಕೆ ಸೇರಿಸಿತ್ತು. ಬಿಜೆಪಿ ಸರ್ಕಾರ ರಚಿಸಿದ ಸಮಿತಿಯ ಈ ಪಠ್ಯವನ್ನು ಕಾಂಗ್ರೆಸ್ ಸರ್ಕಾರ ರಚಿಸಿದ ಬರಗೂರು ರಾಮಚಂದ್ರಪ್ಪ ಸಮಿತಿಯು ಕೈಬಿಟ್ಟಿದೆ. ಈ ಪಾಠವನ್ನು ಕೈಬಿಡಬಾರದಾಗಿತ್ತೆನಿಸುತ್ತಿದೆ. ಏಕೆಂದರೆ ಇಲ್ಲಿ ರಾವಣ, ವಿಭೀಷಣ ಹಾಗೂ ಅನಲೆಯರ ನಡುವಿನ ಸೊಗಸಾದ ಸಂಭಾಷಣೆ ಇದೆ. ರಾವಣನ ಆತ್ಮವಿಮರ್ಶೆ, ಅನಲೆಯ ಮುಂದೆ ಕರಗಿ ಮನುಷ್ಯನಾಗುವ ಹೃದಯರ್ಸ³ ಚಿತ್ರವಿದೆ. ರಾವಣನು ರಾಮನಾಗುವ ಪ್ರಕ್ರಿಯೆ ಪ್ರಾರಂಭವಾದಂತೆನಿಸುತ್ತದೆ. ರಾವಣತ್ವವನ್ನು ಕಳೆದುಕೊಂಡು ರಾಮತ್ವಕ್ಕೆ ಏರುವ ರಾವಣ ಮಹಾಕವಿ ಕುವೆಂಪು ಅವರ ದರ್ಶನ. ಅದು ಸಂಪೂರ್ಣವಾಗಿ ಪೆರಿಯಾರ್ ಅವರ ರಾಜಕೀಯ ಸಿದ್ಧಾಂತಕ್ಕೆ ವಿರುದ್ಧವಾದುದು. ಆ ಕಾರಣಕ್ಕಾಗಿ ‘ಅನಲೆ’ ಪಾಠವನ್ನು ಬರಗೂರು ಸಮಿತಿ ಕೈಬಿಟ್ಟಿತೆ? ಅದನ್ನು ಆ ಸಮಿತಿಯವರೇ ಸ್ಪಷ್ಟಪಡಿಸಬೇಕು. ‘ಅನಲೆ’ ಪಾಠ ಕುವೆಂಪು ಅವರ ದರ್ಶನದ ಸಾರಸಂಗ್ರಹವಾಗಿದೆ.
‘ಅನಲೆ’ ಪಠ್ಯದಲ್ಲಿ ‘ಹೆಣ್ಣುಮಕ್ಕಳಿಲ್ಲದ ಅಣ್ಣನ ಅಕ್ಕರೆಯ ಅರಗಿಳಿಯಾಗಿದ್ದ, ಚೆಲುವಕಣಿಯಾದ ತನ್ನ ಮಗಳ ಹಿಂದೆಯೇ ನಡೆದನು’ ವಿಭೀಷಣ ಅಣ್ಣ ರಾವಣನನ್ನು ನೋಡುವುದಕ್ಕಾಗಿ. ಅಲ್ಲಿ ‘ಮಂಡೋದರಿಯ ಪ್ರೇಮಕೈಂಕರ್ಯದ ಮುದ್ದಿನಿಂದ ಮುಗ್ಧನಾಗಿ ಮಲಗಿದ್ದು, ಮಲಗಿದ್ದರೂ ಲೋಕಾಕ್ರಮಣ ವಿಕ್ರಮವನ್ನು ಬಿಡೆನೆಂಬ ಮುಖಮುದ್ರೆಯಿಂದಿದ್ದ ರಾವಣನನ್ನೇ ನೋಡುತ್ತ ವಿಭೀಷಣ ವೇತ್ರಾಸನದಲ್ಲಿ ಕುಳಿತನು. ಆಗ ರಾವಣನು ಕಿರುನಗೆಯಿಂದ ನಾಚಿಕೆಯನ್ನು ಮರೆಮಾಡಿ ಮೆಲ್ಲನೆ ‘ಅನಲಾ’ ಎಂದು ಕರೆದನು. ಆತ ಅನಲೆಯನ್ನು ಕುರಿತು ‘ಏನಿಲ್ಲ! ನನ್ನನ್ನು ನೀನಗಲಿದಂತೆ ಕನಸಾಯಿತಕ್ಕ!’ ಎಂದನು. ‘ನಕ್ಕರೂ ರಾವಣನ ಕಣ್ಣುಗಳಲ್ಲಿ ನೀರು ಮುಕ್ಕಳಿಸಿತು.’ ವಿಭೀಷಣ ಒಳಗೊಳಗೆ ಬೆಂದು ಹೋದನು. ಮತ್ತೆ ಅಕ್ಕರೆಯ ಸುಳಿಗೆ ಸಿಕ್ಕಿದ ರಾವಣ ಕಣ್ಣು ಬಿಟ್ಟು ಬಿಕ್ಕಳಿಸುತ್ತಾ
ರಾವಣ: ಅಕ್ಕ, ನಿನ್ನಯ್ಯ ನನ್ನನ್ನು ಬಿಟ್ಟುಹೋದರೆ?
ಅನಲಾ: ನನ್ನನ್ನು ಪಡೆದ ನಿನ್ನ ತಮ್ಮ ನಿನ್ನನ್ನು ಬಿಡುವನೆ!
ರಾವಣ: ಅವನು ಬಿಡುವುದನ್ನು ನೀನೇ ನೋಡುತ್ತೀಯೆ ಅಕ್ಕಾ
ಅನಲಾ: ದೊಡ್ಡಯ್ಯ, ಸುಳ್ಳಾಡಬೇಡ. ಬರಿದೆ ಶಂಕೆ ಏಕೆ? ಹೊತ್ತಾರೆಯಿಂದ ನಿನ್ನ ಬಳಿಯೇ ಕುಳಿತಿದ್ದಾನೆ ನೋಡು.
ರಾವಣ: ಈ ಕುಲದ್ರೋಹಿಯನ್ನು, ಈ ಗೃಹವೈರಿಯನ್ನು ನನ್ನ ಬಳಿಗೆ ಬಿಟ್ಟವರಾರು? ಮೇಲೆ ಗರುಕೆ ಮುಸುಕಿ ಮನೋಹರವಾಗಿರುವ ತಿಪ್ಪೆ ಇವನು’
ಎಂದು ವ್ಯಗ್ರನಾಗುತ್ತಾನೆ. ಮರುಕ್ಷಣದಲ್ಲಿ ಅವಿಂದ್ಯನ ಮಾತಿನ ಬಳಿಕ, ತಮ್ಮನನ್ನು ಕುರಿತು ಶಾಂತತೆಯಿಂದ ನುಡಿದನು- ‘ಅನಲೆ ನಿನ್ನ ಮಗಳಲ್ಲ, ನನ್ನವಳು, ಇವಳು ನನ್ನನ್ನು ಕಾಪಾಡುವ ದೇವಿ.’ ಆ ಮಾತಿನಲ್ಲಿ ಅಣ್ಣನ ಆತ್ಮೋದ್ಧಾರವನ್ನು ಕಂಡ ವಿಭೀಷಣ ‘ಆ ಪುಣ್ಯ ನನಗಿರಲಿ’ ಎಂದನು. ಎಲ್ಲರ ಮುಖಗಳಲ್ಲಿ ತಿಳಿನಗೆ ಸುಳಿಯಿತು. ಮೈತ್ರಿ ಸಂಚಾರವಾಯಿತು. ‘ಅನಲೆಯ ಮುದ್ದು ಚಲುವೊಂದೆ ನನ್ನಲ್ಲಿ ಪುಣ್ಯವನ್ನು ಪ್ರಚೋದಿಸುವ ಶಕ್ತಿ’ ಎಂದುಕೊಂಡ ರಾವಣನು ಅಂತಮುಖಿಯಾದನು ಎಂದಿದ್ದಾರೆ ಕುವೆಂಪು. ಮುಂದಿನ ಸಂಭಾಷಣೆಯಲ್ಲಿ ಹೀಗಿದೆ-
ಅನಲಾ: ಮನ್ನಿಸು, ತಂದೆಯೊಡನಿದ್ದು ಧರ್ಮವನ್ನು ಸೇವಿಸುತ್ತೇನೆ.
ರಾವಣ: ಇಲ್ಲಿದ್ದೇ ಧರ್ಮವನ್ನು ಸೇವಿಸು.
ಅನಲಾ: ಧರ್ಮವನ್ನು ಹೊರಗಟ್ಟಿದ ಮೇಲೆ ಹೇಗೆ ಸೇವಿಸಲಿ?
ರಾವಣ: ನನ್ನಂಥವರನ್ನು ನಿನ್ನಂಥವರು ತೊರೆದರೆ ಧರ್ಮ ಉದ್ಧಾರವಾಗುವುದೇ?
ಅನಲಾ: ಅಯ್ಯ ಹೇಳಿದಂತೆ ನಡೆಯುತ್ತೇನೆ.
ವಿಭೀಷಣ: ಮಗಳೇ, ದೊಡ್ಡಯ್ಯ ಹೇಳಿದುದು ನಿಜ, ನಿನೀಲ್ಲಿರುವುದೇ ಸರಿ
ಎಂಬ ಸಂಭಾಷಣೆಯಲ್ಲಿ ರಕ್ತಸಂಬಂಧ ಹಾಗೂ ಧರ್ಮಸಂಬಂಧದ ಸೂಕ್ಷ್ಮಗಳೆರಡು ಮನೋಜ್ಞವಾಗಿ ಮೂಡಿವೆ. ಪ್ರೀತಿಯಿಂದ ಕರಗಿ ಮುಗ್ಧನಾಗಿ ಮನುಷ್ಯನಾಗುವ ಕುವೆಂಪು ಅವರ ಶ್ರೀ ರಾಮಾಯಣ ದರ್ಶನವನ್ನು ಪೊ›. ಬರಗೂರು ರಾಮಚಂದ್ರಪ್ಪ ಸಮಿತಿ ಕೈಬಿಟ್ಟಿದ್ದು ಮನುಷ್ಯತ್ವಕ್ಕೂ, ಮಕ್ಕಳ ಮಾನಸಿಕ ವಿಕಾಸಕ್ಕೂ ಆದ ನಷ್ಟ. ವರ್ಗ ಸಂಘರ್ಷ, ನಿರಂತರ ಸರ್ವಾಧಿಕಾರದ ಕಮ್ಯುನಿಸ್ಟ್ ಸಿದ್ಧಾಂತದ ನೆಲದಲ್ಲಿ ಕುವೆಂಪು ಅವರ ಆತ್ಮಶ್ರೀ, ಪುಣ್ಯಶ್ರೀ, ಧರ್ಮಶ್ರೀಗಳನ್ನು ಬಿತ್ತುವುದನ್ನು ಎಡಪಂಥೀಯ ಚಿಂತಕರು, ಸಾಹಿತಿಗಳು, ರಾಜಕಾರಣಿಗಳು, ಸರ್ಕಾರಗಳು ಎಂದಾದರೂ, ಎಲ್ಲಿಯಾದರೂ ಒಪ್ಪಿದ್ದಾರೆಯೇ? ಹಾಗಾಗಿ ‘ಅನಲೆ’ ಪಾಠವನ್ನು ಅವರು ಉಳಿಸಿಕೊಳ್ಳಬೇಕೆಂದು ಬಯಸುವುದು ತಪ್ಪಾಗುತ್ತದೆ.
ಸದ್ಯಕ್ಕೆ ನಮ್ಮ ಮುಂದಿರುವ ಪ್ರಶ್ನೆ - ರಾವಣನನ್ನು ನಾಯಕನೆಂದು ಬಿಂಬಿಸುವ ಪೊ›. ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯಪುಸ್ತಕಗಳು ನಮ್ಮ ಮಕ್ಕಳಿಗೆ ಬೇಕೋ? ಅಥವಾ ರಾಮನನ್ನು ನಾಯಕನೆಂದು ಬಿಂಬಿಸುವ ಮುಡಂಬಡಿತ್ತಾಯ, ರೋಹಿತ್ ಚಕ್ರತೀರ್ಥ ಸಮಿತಿಯ ಪಠ್ಯಪುಸ್ತಕಗಳೋ?
ಕುವೆಂಪು ಅವರ ಬದುಕು - ಬರಹದ ಆದರ್ಶ ನಾಯಕ ರಾಮನೇ ಹೊರತು ರಾವಣನಲ್ಲ. ರಾವಣನನ್ನು ರಾಮನನ್ನಾಗಿಸಿದವರು ಕುವೆಂಪು.
(ಲೇಖಕರು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು)