ಅಂಕಣ

ಚರ್ಮದ ಹೊಳಪಿಗೆ ಯೌವನ ಕಾಪಾಡಲು ವರುಣ ಮುದ್ರೆ

ಶರೀರದಲ್ಲಿ ನೀರಿನ ಅಂಶ ಕೊರತೆಯಾದರೆ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ದೇಹದ ಆರೋಗ್ಯದಲ್ಲಿ ಚರ್ಮದ ಬಣ್ಣ, ಗುಣ, ಕಾಂತಿ ಇತ್ಯಾದಿಗಳ ಪಾತ್ರ ಪ್ರಮುಖವಾದುದು. ಚರ್ಮದ ಸಂರಕ್ಷಣೆ ನಿರ್ವಹಣೆಯಲ್ಲಿ ಅಗತ್ಯ ಕಾಳಜಿ ವಹಿಸಬೇಕು. ಇದಕ್ಕಾಗಿ ಉತ್ತಮ ಆಹಾರ, ದೇಹದ ಶುಚಿತ್ವ ಹಾಗೂ ಯೋಗ ಮುದ್ರೆಗಳನ್ನು ಅಳವಡಿಸಿಕೊಳ್ಳಬೇಕು.

ವಿಶೇಷವಾಗಿ ವರುಣ ಮುದ್ರೆಯಲ್ಲಿ ಒಣ ಚರ್ಮ ಬಾಧೆ ಕಡಿಮೆಯಾಗಿ, ಶರೀರದಲ್ಲಿ ತೇವಾಂಶದ ರಕ್ಷಣೆಯಾಗುತ್ತದೆ. ದೇಹದಲ್ಲಿ ಕಂಡು ಬರುವ ನೀರಿನ ಕೊರತೆಯನ್ನು ನಿವಾರಿಸುವ ಈ ಮುದ್ರೆಯಲ್ಲಿ ಹೆಬ್ಬೆರಳು ಹಾಗೂ ಕಿರುಬೆರಳು ಮುಖ್ಯ ಪಾತ್ರ ವಹಿಸುತ್ತದೆ. ಹೆಬ್ಬೆರಳು ಅಗ್ನಿತತ್ತ್ವವನ್ನು ಕಿರುಬೆರಳು ಜಲತತ್ತ್ವವನ್ನು ಹೊಂದಿದೆ. ದೇಹದಲ್ಲಿ ಶೇ.70 ರಷ್ಟು ಅಂಶ ನೀರಿದೆ. ಈ ನೀರಿನಲ್ಲಿ ದುಗ್ಧರಸ, ರಕ್ತ, ಕಣ್ಣೀರು, ಲಾಲಾರಸ, ಲೋಳೆ/ಸಿಂಗಳ (ಮ್ಯೂಕಸ್) ಜೀರ್ಣದ್ರವಗಳು, ಕಣ್ವ ಹಾಮೋನು, ವೀರ್ಯ , ಮಿದುಳುಬಳ್ಳಿಯ ದ್ರವ ಇತ್ಯಾದಿಗಳಿವೆ. ಜಲವರ್ಧಕ ಮುದ್ರೆಯಾದ ವರುಣಮುದ್ರೆಯ ಅಭ್ಯಾಸದಿಂದ ರಸಧಾತುಗಳು ಹೆಚ್ಚುತ್ತವೆೆ. ಬಾಯಿಯ, ಕಣ್ಣುಗಳ ಶುಷ್ಕತೆಯನ್ನು ಈ ಮುದ್ರೆಯ ಅಭ್ಯಾಸದಿಂದ ಸರಿಪಡಿಸಬಹುದು. ಜೀರ್ಣಾಂಗಗಳ ಭಾಗಗಳಾದ ಬಾಯಿ, ಗಂಟಲು, ಕರಳುಗಳಲ್ಲಿನ ನೀರಿನ ಅಂಶದ ಕೊರತೆಯನ್ನು ಈ ಮುದ್ರೆಯಿಂದ ಸರಿಪಡಿಸಬಹುದು. ನಮ್ಮ ಪ್ರತಿ ಚಟುವಟಿಕೆಯಲ್ಲಿ ಜೀವಕೋಶಗಳ ಪೋ›ಟೋಪ್ಲಾಸಮ್ ಹೊರಗಿರುವ ದ್ರವ ಪದಾರ್ಥ, ದುಗ್ಧರಸದ್ದೇ ಪ್ರಮುಖ ಪಾತ್ರ. ಇದರಲ್ಲಿ ನೀರಿನ ಅಂಶ ಕಡಿಮೆಯಾದರೆ ಆರೋಗ್ಯಕ್ಕೆ ಧಕ್ಕೆಯಾಗುತ್ತದೆ.

ಮುದ್ರೆಯ ವಿಧಾನ: ಹೆಬ್ಬೆರಳಿಗೆ ಕಿರು ಬೆರಳ ತುದಿಯನ್ನು ಸೇರಿಸಿ ಮಾಡುವಂತಹ ಸುಂದರ ಮುದ್ರೆಯಿದು. ಉಳಿದ ಬೆರಳುಗಳು ನೇರವಾಗಿರಲಿ. 20 ರಿಂದ 30 ಯಾ 40 ನಿಮಿಷಗಳವರೆಗೆ ಈ ಮುದ್ರೆಯನ್ನು ಅಭ್ಯಾಸ ಮಾಡಿ. ತುಂಬಾ ಕಫ ಮತ್ತು ಶೀತದಿಂದ ಬಳಲುತ್ತಿರುವವರು ಈ ವರುಣ ಮುದ್ರೆಯನ್ನು 10 ನಿಮಿಷಗಳಿಗಿಂತ ಹೆಚ್ಚು ಹೊತ್ತು ಮಾಡದಿರುವುದು ಒಳ್ಳೆಯದು.

ವರುಣ ಮುದ್ರೆಯಲ್ಲಿ ಇಷ್ಟ ದೇವರು ಅಥವಾ ‘ಓಂ ವರುಣ ದೇವಾಯ ನಮಃ’ ಎಂದು 108 ಬಾರಿ 48 ದಿನ ಪಠಿಸಿ.

ಪ್ರಯೋಜನ: ಚರ್ಮ ರೋಗಗಳ ನಿಯಂತ್ರಣಕ್ಕೆ ವರುಣ ಮುದ್ರೆ ರಾಮ ಬಾಣ. ರಕ್ತವನ್ನು ಶುದ್ಧೀಕರಿಸಿ ಚರ್ಮವನ್ನು ಸುಂದರವಾಗಿಸುತ್ತದೆ. ದೇಹದ ಆರೋಗ್ಯದಲ್ಲಿ ಚರ್ಮದ ಬಣ್ಣ, ಗುಣ, ಕಾಂತಿ ಇತ್ಯಾದಿಗಳು ಅಗತ್ಯವಾಗಿದೆ. ಚರ್ಮದ ಸಂರಕ್ಷಣೆ, ನಿರ್ವಹಣೆಯಲ್ಲಿ ಕಾಳಜಿ ವಹಿಸಬೇಕು. ಇದಕ್ಕಾಗಿ ಉತ್ತಮ ಆಹಾರ, ದೇಹದ ಶುಚಿತ್ವ ಹಾಗೂ ಯೋಗ, ಮುದ್ರೆಗಳನ್ನು ಅಳವಡಿಸಿ ಕೊಳ್ಳಬೇಕು. ವಿಶೇಷವಾಗಿ ಈ ವರುಣ ಮುದ್ರೆಯು ಒಣ ಚರ್ಮ ಬಾಧೆಯನ್ನು ಕಡಿಮೆ ಮಾಡಿ ಶರೀರದಲ್ಲಿ ತೇವಾಂಶವನ್ನು ಕಾಪಾಡುತ್ತದೆ. ತ್ವಚೆಯನ್ನು ಮೃದುಗೊಳಿಸಿ ಹೊಳಪನ್ನು ಕೊಡುತ್ತದೆ. ಚರ್ಮ ಸುಕ್ಕುಗಟ್ಟುವುದನ್ನು ತಡೆದು ಯೌವನವನ್ನು ಕಾಪಾಡಿ ಮುಪ್ಪನ್ನು ಮುಂದೂಡುತ್ತದೆ. ಪಾದದಲ್ಲಿ ಸಣ್ಣ ಬಿರುಕುಗಳು ಕಂಡಲ್ಲಿ ಈ ಮುದ್ರೆ ಮಾಡಿ ಪರಿಹಾರ ದೊರಕಿಸಿಕೊಳ್ಳಬಹುದು. ಮೊಡವೆ ಸಮಸ್ಯೆ ನಿವಾರಣೆಯಾಗುತ್ತದೆ. ಪ್ರಯಾಣ ಮಾಡುವಾಗ ಬಾಯಾರಿಕೆ ಆಗುತ್ತಿದ್ದರೆ, ವರುಣ ಮುದ್ರೆ ಮಾಡಿದರೆ ಶರೀರದಲ್ಲಿ ತೇವಾಂಶದ ಅನುಭವ ಉಂಟಾಗಿ ದಾಹ ನೀಗುತ್ತದೆ. ಒಣಕೆಮ್ಮು ನಿಯಂತ್ರಣಕ್ಕೆ ಬರುತ್ತದೆ ಹಾಗೂ ಕಣ್ಣು ಉರಿ ನಿವಾರಣೆಯಾಗುತ್ತದೆ. ಮಾಂಸ ಖಂಡಗಳಲ್ಲಿ ಬರುವ ಬಿಗಿತ ನಿವಾರಣೆಯಾಗುತ್ತದೆ. ಸಂಧಿವಾತ/ಕೀಲುನೋವು ಸಮಸ್ಯೆಯ ನಿಯಂತ್ರಣಕ್ಕೂ ಈ ಮುದ್ರೆ ಸಹಕಾರಿ.

ವಿಶೇಷ ಸೂಚನೆ: ಮುದ್ರೆಗಳನ್ನು ಕುಳಿತಾಗ, ನಿಂತಾಗ, ಪ್ರಯಾಣಿಸುವಾಗ, ಮಲಗಿದ್ದಾಗ, ಟಿ.ವಿ ವೀಕ್ಷಿಸುವಾಗ.. ಹೀಗೆ ಯಾವಾಗ ಬೇಕಾದರೂ ಮಾಡಬಹುದು. ಆದರೆ ವಿಶೇಷವಾಗಿ ಪದ್ಮಾಸನ, ಸ್ವಸ್ತಿಕಾಸನ, ಸುಖಾಸನ ಅಥವಾ ವಜ್ರಾಸನ ಹಾಕಿ ಧ್ಯಾನಾವಸ್ಥೆಯಲ್ಲಿ ಕುಳಿತು ಮಾಡುವುದರಿಂದ ಹೆಚ್ಚು ಲಾಭ. ಮುದ್ರೆಗಳನ್ನು ಮಾಡುವಾಗ ಮನಸ್ಸು ನಿರ್ಮಲವಾಗಿರಲಿ. ಕೈಗಳು ಸಡಿಲವಾಗಿರಲಿ. ಗುರುಮುಖೇನವೇ ಕಲಿತು ಅಭ್ಯಾಸ ಮಾಡಿ.