ಅಂಕಣ

ವನವಾಸಿ ಸ್ವಾಭಿಮಾನದ ಸಂಕೇತ ಬಿರಸಾ ಮುಂಡಾ

ಬಿರಸಾ ಮುಂಡಾ ಗೆರಿಲ್ಲಾ ಪಡೆಯನ್ನು ಕಟ್ಟಿದ. ಎರಡು ವರುಷ ಭೂಗತನಾಗಿ ತನ್ನ ಸೈನ್ಯಕ್ಕೆ ತರಬೇತಿ ಕೊಟ್ಟ. 1899 ಡಿಸೆಂಬರ್​ನಲ್ಲಿ ಬ್ರಿಟಿಷರ ವಿರುದ್ಧ ಬಂಡಾಯದ ಕರೆ ನೀಡಿದ. ಬ್ರಿಟಿಷರ ಕಚೇರಿ, ಕಟ್ಟಡಗಳು ಮತ್ತು ಕ್ರಿಶ್ಚಿಯನ್ ಮಿಷನರಿಗಳ ಮೇಲೆ ಬಿರಸಾನ ಸೈನಿಕರು ಗೆರಿಲ್ಲಾ ದಾಳಿ ಮಾಡಿದರು. ಬ್ರಿಟಿಷರಿಗೆ ದಾಳಿ ಯಾರು ಮಾಡಿದ್ದು, ಯಾರನ್ನು ಬಂಧಿಸಬೇಕು ಎಂಬುದೇ ತಿಳಿಯಲಿಲ್ಲ.

ಭಾರತ ತನ್ನ ಅಸ್ತಿತ್ವವನ್ನು ಮರೆತು, ಹತಾಶವಾಗಿದ್ದ ಸಂದರ್ಭದಲ್ಲಿ ರಾಷ್ಟ್ರವನ್ನು ಬಡಿದೆಬ್ಬಿಸಿದವರಲ್ಲಿ ವನವಾಸಿಗಳ ಪಾತ್ರವೂ ಮುಖ್ಯವಾದದ್ದು. ರಾಜಸ್ಥಾನದ ಪೂಂಜಾಭಿಲ್, ನಾಗಾಲ್ಯಾಂಡಿನ ಜಾದೋನಾಂಗ್, ರಾಣಿ ಗಾಯಿಡಿನ್ ಲಿಯೂ, ಆಂಧ್ರದ ಅಲ್ಲೂರಿ ಸೀತಾರಾಮರಾಜು, ಬಿಹಾರದ ಸಿದ್ಧು ಕಾನ್ಹೋ, ತಿಲಕಾ ಮ್ಹಾಜೀ, ಜತರಾಭಗತ, ಕೇರಳದ ತಲಕ್ಕಲ್ ಚಂದು, ಕರ್ನಾಟಕದ ಸುರಪುರದ ವೆಂಕಟಪ್ಪ ನಾಯಕ ಮುಂತಾದವರು ಹೆಮ್ಮೆಯಿಂದ ಸ್ಮರಿಸಬೇಕಾದ ಸ್ವಾಭಿಮಾನಿ ವನವಾಸಿ ಹುತಾತ್ಮರು. ಅಂಥವರಲ್ಲಿ ಸ್ವಾತಂತ್ರ್ಯ ಸೇನಾನಿ ವನವಾಸಿ ಕ್ರಾಂತಿಕಾರಿ ಭಗವಾನ್ ಬಿರಸಾ ಮುಂಡಾ ಹೆಸರು ಅಗ್ರಗಣ್ಯವಾದುದು.

ಈಗಿನ ಜಾರ್ಖಂಡ್ ಮತ್ತು ದಕ್ಷಿಣ ಬಿಹಾರ ಪ್ರದೇಶಗಳನ್ನು ‘ಛೋಟಾ ನಾಗಪುರ’ ಎಂದು ಕರೆಯುತ್ತಾರೆ. ಈ ಪ್ರದೇಶಗಳು ದಟ್ಟವಾದ ಅರಣ್ಯ ಮತ್ತು ಬೆಟ್ಟಗಳಿಂದ ಕೂಡಿದ್ದು ಇಲ್ಲಿ 90 ಪ್ರತಿಶತ ವನವಾಸಿಗಳಾದ ಮುಂಡಾ ಹಾಗೂ ಉರಾಂವ್ ಸಮುದಾಯದವರು ವಾಸಿಸುತ್ತಾರೆ. ಮುಂಡಾ ಎಂದರೆ ಮುಖ್ಯಸ್ಥ ಎಂದು ಅರ್ಥ. ಅವರ ಭಾಷೆ ಮುಂಡಾರಿ. ಛೋಟಾ ನಾಗಪುರದ ಉಲಿಹಾತು ಗ್ರಾಮದಲ್ಲಿ 1875 ನವೆಂಬರ್ 15ರಂದು ಬಿರಸಾ ಮುಂಡಾ ಜನನ. ತಂದೆ ಸುಗನ ಮುಂಡಾ, ತಾಯಿ ಕಾರ್ವಿುಹಾತು. ಕಲಿಕೆಯಲ್ಲಿ ಬಿರಸಾ ಚುರುಕಾಗಿದ್ದ ಕಾರಣ ಅವನನ್ನು ಜರ್ಮನ್ ಮಿಷನರಿ ಶಾಲೆಗೇ ಸೇರಿಸಲು ಪಾಲಕರು ಮುಂದಾದರು. ಆದರೆ ಅಲ್ಲಿ ಕ್ರಿಶ್ಚಿಯನ್ನರಿಗೆ ಮಾತ್ರವೇ ಅವಕಾಶವಿತ್ತು. ಹಾಗಾಗಿ, ಬಿರಸಾನ ಕುಟುಂಬ ಕ್ರೖೆಸ್ತಮತಕ್ಕೆ ಮತಾಂತರವಾಯಿತು. ಬಿರಸಾನ ಜುಟ್ಟನ್ನು ಕತ್ತರಿಸಲಾಯಿತು. ಇದು ಆ ಎಳೆಯ ಮನಸ್ಸಿಗೆ ಆಘಾತವನ್ನು ಮಾಡಿತು.

ಇಂದು ಜಯಂತಿ 

ಮಿಷನರಿಯ ವಂಚನೆ: ಒಂದು ರವಿವಾರ ಚಾಯಬಾಸದ ರ್ಚಚಿನಲ್ಲಿ ಜನರು ಪ್ರಾರ್ಥನೆಗಾಗಿ ಸೇರಿದ್ದರು. ಹೆಚ್ಚಿನವರು ಮುಂಡಾ ಜನರೇ ಇದ್ದರು. ಫಾದರ್ ನೋಟ್ರೋಸ್ ಈಶ್ವರನ ರಾಜ್ಯದ ಬಗ್ಗೆ ಹೇಳುತ್ತ ಭೂತಖೇತ್, ಸಹನಾಯಿ ಮುಂತಾದ ಮುಂಡಾ ಜನರ ಹಳ್ಳಿಗಳ ಸುತ್ತಲಿನ ಕಾಡನ್ನು ಮಿಷನರಿಗೆ ಒಪ್ಪಿಸುವಂತೆ ಹೇಳಿದ. ಇದನ್ನು ವಿರೋಧಿಸಿದಾಗ ಸಿಟ್ಟಾದ ಫಾದರ್ ಮುಂಡಾ ಜನರನ್ನು ವಂಚಕರು, ಕಳ್ಳರು, ಅಪ್ರಾಮಾಣಿಕರು ಎಂದು ನಿಂದಿಸಿದ. ತನ್ನ ಜನಾಂಗದವರ ನಿಂದನೆ ಕೇಳಿದ 14 ವರ್ಷದ ಬಿರಸಾನ ರಕ್ತ ಕುದಿಯಹತ್ತಿತು. ಅವನು ಎದ್ದು ನಿಂತು ‘ನೀವು ಯಾರನ್ನು ವಂಚಕರು, ಕಳ್ಳರು, ಅಪ್ರಾಮಾಣಿಕರು ಎನ್ನುತ್ತೀರಿ? ನಾವು ವನವಾಸಿಗಳು ಇದುವರೆಗೆ ಯಾರಿಗೂ ವಂಚಿಸಿಲ್ಲ. ನೀವೂ ಬಿಳಿಯರು, ಆಳುವವರೂ ಬಿಳಿಯರು. ಹಾಗಾಗಿ ನೀವು ಅವರ ಪಕ್ಷ ವಹಿಸುತ್ತೀರಿ’ ಎಂದು ಗದರಿದ. ಈ ಘಟನೆ ನಂತರ ಬಿರಸಾನನ್ನು ಮಿಷನರಿ ಶಾಲೆಯಿಂದ ಹೊರಹಾಕಲಾಯಿತು. ಬಿರಸಾ ಮುಂದೆ ವೇದ, ರಾಮಾಯಣ, ಮಹಾಭಾರತ, ಉಪನಿಷತ್ ಅಧ್ಯಯನ ಮಾಡಿದ್ದಲ್ಲದೆ ಚೈತನ್ಯ ಮಹಾಪ್ರಭುಗಳ ಸಂಪರ್ಕಕ್ಕೆ ಬಂದ. ಈ ಸಾಧನೆಗಳಿಂದ ಅವನ ಜೀವನದಲ್ಲಿ ಮಹತ್ವಪೂರ್ಣ ಬದಲಾವಣೆ ಆಯಿತು.

ಬ್ರಿಟಿಷರ ಮತ್ತು ಮಿಷನರಿಗಳ ಪಿತೂರಿ: 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಿಂದ ಎಚ್ಚೆತ್ತ ಬ್ರಿಟಿಷರು, ಯುರೋಪಿನಿಂದ ರೋಮನ್ ಕ್ಯಾಥೊಲಿಕ್ ಮಿಷನ್ ಮತ್ತು ಜರ್ಮನ್ ಲೂಥರನ್ ಚರ್ಚ್ ಮಿಷನರಿಗಳ ಒಂದು ತಂಡವನ್ನು ಛೋಟಾ ನಾಗಪುರಕ್ಕೆ ಕರೆಸಿಕೊಂಡರು. ಮಿಷನರಿಗಳು ಮುಂಡಾ ಹಾಗೂ ಉರಾಂವ್ ಜನರಿಗೆ ಶಿಕ್ಷಣ, ಆಸ್ಪತ್ರೆ ಸೇರಿ ಸಣ್ಣಪುಟ್ಟ ಸಹಾಯ ಮಾಡುತ್ತ ಅವರನ್ನು ಮತಾಂತರ ಮಾಡಲಾರಂಭಿಸಿದರು.

ಭಾರತದ ಅರಣ್ಯಸಂಪತ್ತಿನ ಮೇಲೆ ಹಿಡಿತ ಸಾಧಿಸಿ ಹಣ ಸಂಪಾದಿಸಲು 1865ರಲ್ಲಿ ಭಾರತೀಯ ಅರಣ್ಯ ಕಾನೂನನ್ನು ತಂದು ಅರಣ್ಯದ ಮೇಲೆ ಅವರಿಗಿದ್ದ ಹಕ್ಕನ್ನು ಕಸಿದರು. ಬುಡಕಟ್ಟು ಜನರು ಕ್ರಿಶ್ಚಿಯನ್ ಮತಕ್ಕೆ ಮತಾಂತರವಾದರೆ ಅವರ ಭೂಮಿ ಮತ್ತು ಇತರ ಅಧಿಕಾರಗಳು ಸಿಗುವುದಾಗಿ ಮಿಷನರಿಗಳು ನಂಬಿಸಿ ಗ್ರಾಮಕ್ಕೆ ಗ್ರಾಮವನ್ನೇ ಮತಾಂತರ ಮಾಡಿದರು. ಕಾಡಿನಲ್ಲಿ ಸಿಗುವ ಗಡ್ಡೆಗೆಣಸು, ಜೇನು, ಹಣ್ಣುಹಂಪಲು ಹಾಗೂ ಇನ್ನಿತರ ಕಾಡಿನ ಉತ್ಪನ್ನಗಳನ್ನು ಮಾರಿ ಜೀವನ ನಡೆಸುತ್ತಿದ್ದ ವನವಾಸಿಗಳಿಗೆ ಈ ಕಾನೂನಿನಿಂದ ಜೀವನ ಮಾಡುವುದೇ ಕಷ್ಟವಾಯಿತು.

ಇದರ ಜೊತೆಗೆ ಇಂಗ್ಲಿಷ್ ಪ್ರಚಾರ, ಪ್ರಸಾರ ಹೆಚ್ಚಾಯಿತು. ಎಲ್ಲ ಪತ್ರಗಳು ಇಂಗ್ಲಿಷಿನಲ್ಲಿಯೇ ಬರಲಾರಂಭಿಸಿದವು. ಇಂಗ್ಲಿಷ್ ಬಾರದ ಮುಂಡಾ ಜನಾಂಗದವರು ಮೋಸಹೋದರು. ಮಿಷನರಿಗಳ ಶಾಲೆಯಲ್ಲಿ ಮುಂಡಾ ಜನರ ಭಾಷೆ, ಸಂಸ್ಕೃತಿ, ಪದ್ಧತಿಗಳ ಬಗ್ಗೆ ಕೀಳರಿಮೆ ಬರುವಂತೆ ಬೋಧಿಸಲಾಯಿತು. ಇತ್ತ ಮಿಷನರಿಗಳು ನೀಡಿದ ಭೂಮಿ ಮತ್ತು ಅಧಿಕಾರದ ಆಶ್ವಾಸನೆಗಳು ಸುಳ್ಳಾದವು. ವನವಾಸಿಗಳ ಸಹನೆ ಮಿತಿ ಮೀರಿತ್ತು. ಮತಾಂತರಗೊಂಡ ಮುಂಡಾ ಸಮುದಾಯದವರು ಪಾದ್ರಿಯನ್ನು ಪ್ರಶ್ನಿಸಲಾರಂಭಿಸಿದರು. ಅನೇಕ ಕುಟುಂಬಗಳು ಮರಳಿ ಮಾತೃಧರ್ಮಕ್ಕೆ ಬಂದವು. ಬಿರಸಾನ ಕುಟುಂಬವೂ 1890ರಲ್ಲಿ ಪುನಃ ಮಾತೃಧರ್ಮಕ್ಕೆ ಬಂದಿತು.

ಬಿರಸಾ ತನ್ನ ಸಮುದಾಯದ ಸಾಮಾಜಿಕ ವ್ಯವಸ್ಥೆ, ಸಂಸ್ಕೃತಿ, ಪರಂಪರೆಯ ಪುನರುತ್ಥಾನಕ್ಕೆ ಸಂಕಲ್ಪ ಮಾಡಿ ಯುವಜನರನ್ನು ಸಂಘಟಿಸಿ ಬ್ರಿಟಿಷರ ವಿರುದ್ಧ ಹೋರಾಡಲು ಅವರಲ್ಲಿ ಚೈತನ್ಯ ತುಂಬಲು ತನ್ನನ್ನು ‘ದೇವರ ಅವತಾರ’ ಎಂದು ಘೊಷಿಸಿಕೊಂಡ. ‘ಬ್ರಿಟಿಷರು ಹಾಗೂ ಮಿಷನರಿಗಳು ಒಂದೇ. ಅವರು ನಮ್ಮ ಸಮಾಜವನ್ನು ದುರ್ಬಲಗೊಳಿಸುತ್ತಿದ್ದಾರೆ. ಅವರು ಮೊದಲು ನಮ್ಮ ಹೆಸರು ಬದಲಿಸಿ, ನಮ್ಮ ಜುಟ್ಟು ಕತ್ತರಿಸಿ ಶಿಲುಬೆಯನ್ನು ಹಾಕುತ್ತಾರೆ. ನಂತರ ನಮ್ಮ ಉಡುಗೆ-ತೊಡುಗೆ ಬದಲಾಗುತ್ತದೆ. ಹೀಗೇ ಆದರೆ ಮುಂಡಾ ಜನಾಂಗ ಈ ಭೂಮಿಯಿಂದ ಮಾಯವಾಗುತ್ತದೆ’ ಎಂದು ತನ್ನ ಪ್ರವಚನದಲ್ಲಿ ಹೇಳಿ ಎಚ್ಚರಿಸುತ್ತಿದ್ದ.

ಸಶಸ್ತ್ರ ಹೋರಾಟ: 1894ರಲ್ಲಿ ಬರಗಾಲ ಬಂದಿತ್ತು. ಬ್ರಿಟಿಷ್ ಶಾಸನ ಮತ್ತೊಂದು ಆದೇಶ ಹೊರಡಿಸಿ, ಕಾಡುಗಳನ್ನು ‘ರಕ್ಷಿತ ಅರಣ್ಯ’ ಎಂದು ಘೊಷಿಸಿತು. ಈ ನೀತಿಯ ವಿರುದ್ಧ ಜನರನ್ನು ಸಂಘಟಿಸಿ, ಬಿರಸಾ ಸ್ವಾತಂತ್ರ್ಯ ಹೋರಾಟವನ್ನೇ ಪ್ರಾರಂಭಿಸಿದ.19 ವರ್ಷದ ಯುವ ನೇತಾರ ಬಿರಸಾ ಮುಂಡಾನ ಮಾತಿನಿಂದ ಪ್ರೇರಣೆ ಪಡೆದು ಅನೇಕ ಕಡೆ ಬ್ರಿಟಿಷರ ವಿರುದ್ಧ ಆಂದೋಲನಗಳು ನಡೆದವು. ಶಾಸನದ ವಿರುದ್ಧ ಜನರನ್ನು ಎತ್ತಿಕಟ್ಟಿದ ಆರೋಪದ ಮೇಲೆ ಬಿರಸಾಗೆ 2 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿತು ಬ್ರಿಟಿಷ್ ಸರ್ಕಾರ. ಕೇವಲ 20 ವರ್ಷ ವಯಸ್ಸಿನಲ್ಲಿ ಬಿರಸಾ ಒಬ್ಬ ಮಹಾಪುರುಷನಾಗಿ ಪರಿಗಣಿಸಲ್ಪಟ್ಟ. ‘ವಿಶ್ವದ ತಂದೆ ಭಗವಾನ್ ಬಿರಸಾ’ ಎಂಬ ಘೊಷಣೆ ಎಲ್ಲೆಲ್ಲೂ ಮೊಳಗತೊಡಗಿತು.

1897 ನವೆಂಬರ್ 30ರಂದು ಜೈಲಿನಿಂದ ಹೊರಬಂದ ಬಿರಸಾ ಹೋರಾಟದ ಸ್ವರೂಪವನ್ನೇ ಬದಲಿಸಿದ. ಗೆರಿಲ್ಲಾ ಪಡೆಯನ್ನು ಕಟ್ಟಿದ. ಎರಡು ವರುಷ ಭೂಗತನಾಗಿ ತನ್ನ ಸೈನ್ಯಕ್ಕೆ ತರಬೇತಿ ಕೊಟ್ಟ. 1899 ಡಿಸೆಂಬರ್​ನಲ್ಲಿ ಬ್ರಿಟಿಷರ ವಿರುದ್ಧ ಬಂಡಾಯದ ಕರೆ ನೀಡಿದ. ಬ್ರಿಟಿಷರ ಕಚೇರಿ, ಕಟ್ಟಡಗಳು ಮತ್ತು ಕ್ರಿಶ್ಚಿಯನ್ ಮಿಷನರಿಗಳ ಮೇಲೆ ಬಿರಸಾನ ಸೈನಿಕರು ಗೆರಿಲ್ಲಾ ದಾಳಿ ಮಾಡಿದರು. ಬ್ರಿಟಿಷರಿಗೆ ದಾಳಿ ಯಾರು ಮಾಡಿದ್ದು, ಯಾರನ್ನು ಬಂಧಿಸಬೇಕು ಎಂಬುದೇ ತಿಳಿಯಲಿಲ್ಲ. ಬಿರಸಾನ ಸುಳಿವು ನೀಡಿದವರಿಗೆ 500 ರೂಪಾಯಿಗಳ ಬಹುಮಾನ ಘೊಷಿಸಿದರು ಬ್ರಿಟಿಷರು. ಗುಪ್ತಚರರ ಸಹಾಯದಿಂದ 1900 ಮಾರ್ಚ್ 3 ರಂದು ಬಿರಸಾನನ್ನು ಬಂಧಿಸಲಾಯಿತು. ಬ್ರಿಟಿಷರ ಹಿಂಸೆ ತಾಳಲಾರದೆ ಅವನ ಆರೋಗ್ಯ ಹದಗೆಟ್ಟಿತು. 25 ವರ್ಷದ ಬಿರಸಾ ಮುಂಡಾ ತನ್ನ ಜನರಿಗೆ ಮತ್ತು ಇಡೀ ಭಾರತಕ್ಕೆ ಸ್ವಾಭಿಮಾನದ ಪಾಠ ಕಲಿಸಿ 1900ರ ಜೂನ್ 9ರಂದು ಹುತಾತ್ಮನಾದ.

ಬಿರಸಾನಂಥ ಅನೇಕ ವನವಾಸಿಗಳ ಶೌರ್ಯ ಪರಾಕ್ರಮವನ್ನು ನಮ್ಮಿಂದ ಮುಚ್ಚಿಡಲಾಗಿದೆ ಏಕೆ? ಈ ವ್ಯಕ್ತಿಗಳು ನಮ್ಮ ಪಠ್ಯಪುಸ್ತಕದಲ್ಲಿಲ್ಲ ಏಕೆ? ಬ್ರಿಟಿಷರು ತಮಗೆ ಬೇಕಾದ ಹಾಗೆ ನಮ್ಮ ಚರಿತ್ರೆ ಬರೆಯಿಸಿದರು. ವನವಾಸಿಗಳಿಗೆ ಸೂಕ್ತವಾದ ಅನುಕೂಲತೆಗಳನ್ನು ಮಾಡಿಕೊಡಲು ಸರ್ಕಾರಗಳು ವಿಫಲವಾಗಿವೆ. ಇದನ್ನೇ ಬಂಡವಾಳವಾಗಿಟ್ಟುಕೊಂಡು ಇಂದಿಗೂ ಮಿಷನರಿಗಳು ಅವ್ಯಾಹತವಾಗಿ ಮತಾಂತರ ಮಾಡುತ್ತಿವೆ.

ಇವೆಲ್ಲದರ ಮಧ್ಯೆ ಆಶಾಕಿರಣದಂತೆ ಕೆಲವು ಸಂಸ್ಥೆಗಳು ವನವಾಸಿಗಳ ಮಧ್ಯೆ ಸೇವಾಕಾರ್ಯ ಮಾಡುತ್ತಿವೆ. ಅವರಿಗೆ ಆರೋಗ್ಯ, ಶಿಕ್ಷಣ, ಗುಡಿಕೈಗಾರಿಕೆ- ಹೀಗೆ ವನವಾಸಿಗಳ ಮೂಲಸಂಸ್ಕೃತಿಯನ್ನು ಅಳಿಸದೇ ಸೇವೆಮಾಡುತ್ತಿರುವ ಸಂಸ್ಥೆಗಳಲ್ಲಿ ಅಗ್ರಮಾನ್ಯವಾದದ್ದು ‘ವನವಾಸಿ ಕಲ್ಯಾಣ ಆಶ್ರಮ’. ಸ್ವಾಭಿಮಾನಿ ಹಾಗೂ ಆತ್ಮನಿರ್ಭರ ವನವಾಸಿಗಳನ್ನಾಗಿ ಮಾಡುತ್ತಿರುವ ಈ ಸಂಸ್ಥೆಯ ಕೆಲಸ ಅಭಿನಂದನೀಯ. ಇದು ಭಗವಾನ್ ಬಿರಸಾ ತೋರಿಸಿದ ದಾರಿಯೇ ಆಗಿದೆ. ವನವಾಸಿ ಸ್ವಾತಂತ್ರ್ಯ ಹೋರಾಟಗಾರರ ಗೌರವಾರ್ಥವಾಗಿ ಹಾಗೂ ಭಗವಾನ್ ಬಿರಸಾ ಮುಂಡಾ ಜಯಂತಿ ಅಂಗವಾಗಿ ನವೆಂಬರ್ 15 ಅನ್ನು ‘ಗಿರಿಜನ ಸ್ವಾಭಿಮಾನ ದಿನ’ ಎಂದು ಆಚರಿಸಲಾಗುತ್ತದೆ. ಬನ್ನಿ, ಸ್ವಾಭಿಮಾನಿ ವನವಾಸಿಗಳಿಗೆ ಶುಭಕೋರೋಣ, ಅವರಿಂದ ಪ್ರೇರಣೆ ಪಡೆಯೋಣ.

(ಲೇಖಕರು ಸಾಫ್ಟ್​ವೇರ್ ತಂತ್ರಜ್ಞರು ಹಾಗೂ ಸಾಮಾಜಿಕ ಕಾರ್ಯಕರ್ತರು)