ಅಂಕಣ

ಅನೀತಿಯ ಕಾಲದಲ್ಲಿ ಮೌಲ್ಯವಂತಿಕೆಯ ನೆನಪು!

(ಲೇಖಕರು ಬಿಜೆಪಿಯ ಹಿರಿಯ ವಕ್ತಾರರು)

ನಾವು ನಮ್ಮ ಹಮ್ಮು ಬಿಮ್ಮು ಅಹಂಕಾರವನ್ನು ಬಿಡುವುದರಿಂದ, ವಿನೀತರಾಗುವುದರಿಂದ ಚಿಕ್ಕವರಾಗುವುದಿಲ್ಲ, ಬದಲಾಗಿ ದೊಡ್ಡವರಾಗುತ್ತೇವೆ. ನಾವು ಚಿಕ್ಕವರೆಂದು ಭಾವಿಸುವ ಪ್ರತಿ ಸಂದರ್ಭದಲ್ಲೂ ನಾವು ದೊಡ್ಡವರಾಗುತ್ತೇವೆ. ಸಣ್ಣವರಾಗಿ ದೊಡ್ಡವರಾಗುವುದರಲ್ಲಿ ಸುಖವಿದೆ, ಸಂತೋಷವಿದೆ.

ರಾಜ್ಯದ ವಿವಿಧ ಒಂಭತ್ತು ಹೊಸ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಅಥವಾ ವಿಲೀನ ಮಾಡುವ ಪ್ರಸ್ತಾಪ ವ್ಯಾಪಕ ಚರ್ಚೆಗೆ ಎಡೆ ಮಾಡಿಕೊಟ್ಟ ಬಳಿಕ ಕೆಲವು ವಿವಿಗಳು ನೀಡುವ ಅಥವಾ ದುಡ್ಡಿದ್ದವರು ಖರೀದಿಸುವ ಗೌರವ ಡಾಕ್ಟರೇಟ್ ಕುರಿತು ಹಲವೆಡೆ ಸ್ವಾರಸ್ಯಕರ ಚರ್ಚೆ ನಡೆದಿದ್ದನ್ನು ನಾವು ನೋಡಿದ್ದೇವೆ. ಹುಟ್ಟಿನಿಂದ ಶೆಟ್ಟಿ, ಭಟ್ಟ ಇತ್ಯಾದಿಗಳು ದುಡ್ಡಿನಿಂದ ‘ಗೌಡಾ’ ಆಗುವ ಕುರಿತು ಹಿಂದೊಮ್ಮೆ ರಾಜ್ಯದ ಪ್ರತಿಷ್ಠಿತ ಪತ್ರಿಕೆಯೊಂದರಲ್ಲಿ ಸ್ವಾರಸ್ಯಕರ ಚರ್ಚೆ ನಡೆದಿತ್ತು. ಅಂಥ ‘ಗೌಡಾ’ಗಳ ಕುರಿತು ನನ್ನ ಬಳಿಯೂ ಸ್ವಾರಸ್ಯಕರ ಮಾಹಿತಿ ಇದೆ, ಕ್ಲುಪ್ತ ಕಾಲದಲ್ಲಿ ಆ ಬಗ್ಗೆ ಪ್ರತ್ಯೇಕವಾಗಿ ಚರ್ಚೆ ಮಾಡೋಣ. ಸದ್ಯಕ್ಕೆ ಒಂದು ವಿಚಾರ ಲಹರಿಯ ಹರಿವಿಗೆ ಒಂದು ಪೂರಕ ಉಪಧಾರೆಯಾಗಿ ಅದನ್ನು ಇಟ್ಟುಕೊಳ್ಳೋಣ.

ಕ್ರಿಕೆಟ್ ಲೋಕದಲ್ಲಿ ದ ಗ್ರೇಟ್ ವಾಲ್ ಎಂಬ ಬಿರುದಿಗೆ ಪಾತ್ರವಾಗಿರುವ ರಾಹುಲ್ ದ್ರಾವಿಡ್ ಅವರಿಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್ ನೀಡಲು ಮುಂದೆ ಬಂದಾಗ ಅದನ್ನು ನಯವಾಗಿ ತಿರಸ್ಕರಿಸಿದರು. ಇಲ್ಲಿ ಆ ಸಂಗತಿಯನ್ನು ಬೇರೆ ರೀತಿಯಲ್ಲಿ ನೋಡೋಣ. ಸಮಾರಂಭವೊಂದರಲ್ಲಿ ಭಾಷಣವನ್ನು ಮಾಡುತ್ತ ‘ಗೌಡಾ’ ತಿರಸ್ಕರಿಸುವುದಕ್ಕೆ ಅವರು ಕೊಟ್ಟ ಕಾರಣ ಮತ್ತು ವಿವರಣೆ ಅದ್ಭುತವಾಗಿದೆ. ‘ನನ್ನ ಪತ್ನಿ ವೃತ್ತಿಯಿಂದ ಡಾಕ್ಟರ್. ಈ ಪದವಿಯನ್ನು ಪಡೆಯಲು ಅದೆಷ್ಟೋ ದಿನ ಹಗಲು, ರಾತ್ರಿ ನಿದ್ದೆಗೆಟ್ಟಿದ್ದಾಳೆ. ನನ್ನ ತಾಯಿ ಕಲಾ ನಿಕಾಯದ ಆರ್ಟ್ ಪ್ರೊಫೆಸರ್, ಈ ಪದವಿ ಪಡೆಯಲು ಅವರು ಸುದೀರ್ಘ 50 ವರ್ಷಗಳನ್ನು ಸವೆಸಿದ್ದಾರೆ. ನಾನು ಕ್ರಿಕೆಟ್ ಆಟದಲ್ಲಿ ಸಾಕಷ್ಟು ಪರಿಶ್ರಮಪಟ್ಟಿದ್ದೇನೆ ನಿಜ, ಆದರೆ ಓದಿನಲ್ಲಲ್ಲ. ಹೀಗಾಗಿ ನಾನು ಹೇಗೆ ಆ ಪದವಿಯನ್ನು ಪಡೆಯಲು ಅರ್ಹನಾಗುತ್ತೇನೆ ಹೇಳಿ?’ ಎಂಬುದು ದ್ರಾವಿಡ್ ವಾದ.

ಮುಂದುವರೆದು, ಐನ್​ಸ್ಟೀನ್ ಜೀವನದ ಒಂದು ಘಟನೆಯನ್ನು ದ್ರಾವಿಡ್ ಉದಾಹರಿಸಿದರು. 1952ರಲ್ಲಿ ನೀವು ನಮ್ಮ ದೇಶದ ಪ್ರಧಾನಿ ಆಗಿ ಎಂದು ಇಸ್ರೇಲ್ ಸರಕಾರ ಐನ್​ಸ್ಟೀನ್ ಅವರಿಗೆ ಆಹ್ವಾನ ನೀಡುತ್ತದೆ. ಆಗ ಆ ಆಹ್ವಾನಕ್ಕೆ ಐನ್​ಸ್ಟೀನ್ ಅವರ ಪ್ರತಿಕ್ರಿಯೆ ಹೀಗಿತ್ತು. ’ 'I am noob student of physics' ಅಂದರೆ ನಾನು ಈಗಷ್ಟೇ ಕಣ್ಣು ಬಿಡುತ್ತಿರುವ ಭೌತ ಶಾಸ್ತ್ರದ ವಿದ್ಯಾರ್ಥಿ. ಸರಕಾರ, ಆಡಳಿತ, ರಾಜಕೀಯದ ಬಗ್ಗೆ ನನಗೇನು ಜ್ಞಾನ ಇದೆ?’ ಎಂದು ಮುಗ್ಧವಾಗಿ ಪ್ರಶ್ನೆ ಮಾಡುತ್ತಾರೆ. ಪ್ರಧಾನಿ ಪಟ್ಟ ಅಲಂಕರಿಸಬೇಕೆಂಬ ಇಸ್ರೇಲ್ ಸರಕಾರದ ಪ್ರಸ್ತಾಪವನ್ನು ಐನ್​ಸ್ಟೀನ್ ಅತ್ಯಂತ ನಯ- ವಿನಯದಿಂದ ನಿರಾಕರಿಸಿದರು.

ಅದೇ ರೀತಿ ಈ ಹಿಂದಿನ ಸೋವಿಯತ್ ಒಕ್ಕೂಟದ ಖ್ಯಾತ ಗಣಿತಜ್ಞ ಗ್ರೆಗೊರಿ ಪೆರೆಲ್ಮನ್ ಒಂದಲ್ಲ ಮೂರು ಬಾರಿ ರೇಖಾ ಗಣಿತ ಕ್ಷೇತ್ರದಲ್ಲಿ ಅವರ ಸಾಧನೆ ಗುರುತಿಸಿ ನೀಡಲಾದ ನೊಬೆಲ್ ಪ್ರಶಸ್ತಿಗೆ ಸಮನಾದ ಪ್ರಶಸ್ತಿಗಳನ್ನು ಕಡ್ಡಿ ಮುರಿದಂತೆ ನಿರಾಕರಿಸುತ್ತಾರೆ. ಅಷ್ಟು ಮಾತ್ರವಲ್ಲ, ಪ್ರಶಸ್ತಿ ನಿರಾಕರಣೆಗೆ ಅವರು ನೀಡಿದ ಕಾರಣ ಬಹಳ ಆಸಕ್ತಿಕರವಾಗಿದೆ. ‘ನಾನು ಚಿಕ್ಕವನಿದ್ದಾಗ ಬಹಳ ಬಡತನವಿತ್ತು. ಅಂದು ತಾಯಿಯ ದುಡಿಮೆಯನ್ನೇ ನಾವು ಆಶ್ರಯಿಸಿದ್ದೆವು. ಪೈಸೆ ಪೈಸೆ ಲೆಕ್ಕ ಹಾಕುತ್ತಿದ್ದೆವು. ತಾಯಿಯ ದುಡಿಮೆಯ ಹಣವನ್ನು ಉಳಿಸಲು ನಮಗಿರುವ ಅಲ್ಪಸ್ವಲ್ಪ ಗಣಿತದ ಕೌಶಲವನ್ನೆಲ್ಲ ಬಳಸುತ್ತಿದ್ದೆವು. ಈಗ ಅಗತ್ಯಕ್ಕೆ ತಕ್ಕಷ್ಟು ಹಣ ಸಂಪಾದನೆ ಮಾಡಿದ್ದಾಗಿದೆ. ಪ್ರಶಸ್ತಿ ಜೊತೆಗೆ ಬರುವ ಅಷ್ಟು ದೊಡ್ಡ ಮೊತ್ತ ಪಡೆದು ನಾನೇನು ಮಾಡಲಿ? ಪ್ರಶಸ್ತಿ ಪಡೆದು ಪ್ರಾಣಿ ಸಂಗ್ರಹಾಲಯದ ಪ್ರಾಣಿ ಆಗಲೇ? ವಸ್ತು ಸಂಗ್ರಹಾಲಯದ ವಸ್ತು ಆಗಲೇ?’ ಎಂದು ಪ್ರಶ್ನೆ ಮಾಡಿದ್ದರು.

ಇಂಥ ಶ್ರೇಷ್ಠರನ್ನೆಲ್ಲ ನೋಡಿ ನಾನು ನತಮಸ್ತಕನಾಗಿದ್ದೇನೆ, ನನ್ನ ಬಗ್ಗೆಯೇ ನನಗೆ ನಾಚಿಕೆ, ಮುಜುಗರ ಆಗುತ್ತಿದೆ ಎಂದು ದ್ರಾವಿಡ್ ಮಾತು ಮುಂದುವರೆಸಿದರು. ನಾನು ಈಗ ಉಲ್ಲೇಖಿಸಿದ ವ್ಯಕ್ತಿಗಳ ತೀರ್ವನ, ನಡವಳಿಕೆಗಳು ವಿಧೇಯ ನಡವಳಿಕೆಗಳು. ನಾವು ನಮ್ಮ ಹಮ್ಮು ಬಿಮ್ಮು ಅಹಂಕಾರವನ್ನು ಬಿಡುವುದರಿಂದ, ವಿನೀತರಾಗುವುದರಿಂದ ಚಿಕ್ಕವರಾಗುವುದಿಲ್ಲ, ಬದಲಾಗಿ ದೊಡ್ಡವರಾಗುತ್ತೇವೆ ಎಂಬುದನ್ನು ಇವು ಸದಾ ನನಗೆ ನೆನಪಿಸುತ್ತ ಇರುತ್ತವೆ. ನನ್ನ ಸೀಮಿತ ಅನುಭವದ ಪ್ರಕಾರ, ನಾವು ಚಿಕ್ಕವರೆಂದು ಭಾವಿಸುವ ಪ್ರತಿ ಸಂದರ್ಭದಲ್ಲೂ ನಾವು ದೊಡ್ಡವರಾಗುತ್ತೇವೆ. ಸಣ್ಣವರಾಗಿ ದೊಡ್ಡವರಾಗುವುದರಲ್ಲಿ ಸುಖವಿದೆ, ಸಂತೋಷವಿದೆ.

ಎಲ್ಲರೂ ನೊಬೆಲ್ ಪ್ರಶಸ್ತಿ ಬಹಳ ದೊಡ್ಡದು, ಎಲ್ಲ ಪ್ರಶಸ್ತಿಗಳಿಗಿಂತಲೂ ದೊಡ್ಡದು ಎಂದುಕೊಂಡಿದ್ದೇವೆ. ಅಂತಹ ಪ್ರಶಸ್ತಿಯನ್ನೂ ತಿರಸ್ಕರಿಸಿದ ಇಬ್ಬರು ಮಹಾನುಭಾವರಿದ್ದಾರೆ. ಜೇನ್ ಪಾಲ್ ಸಾರ್ತ್ರೆ ಅವರಿಗೆ ಸಾಹಿತ್ಯಕ್ಕೆ ನೊಬೆಲ್ ಬಂದಿತ್ತು. ಲೀ ಡಕ್ ಡೊ ಅವರಿಗೆ ವಿಯೆಟ್ನಾಂ ಯುದ್ಧ ಕೊನೆಗೊಳಿಸಿದ್ದಕ್ಕೆ ನೊಬೆಲ್ ಶಾಂತಿ ಪ್ರಶಸ್ತಿ ಘೊಷಿಸಲಾಗಿತ್ತು. ಆ ಇಬ್ಬರೂ ಸ್ವಯಂ ಸ್ಪೂರ್ತಿಯಿಂದ ಎಲ್ಲ ಪ್ರಶಸ್ತಿಗಳನ್ನು ನಿರಾಕರಿಸಿದ್ದರು. ಸಣ್ಣವರೆನಿಸಿಕೊಳ್ಳಲು ದೊಡ್ಡವರಾಗಬೇಕಿಲ್ಲ... ಹೀಗೆ ಅವರ ಮಾತಿನ ಧಾಟಿ ಮುಂದುವರೆಯುತ್ತಾ ಹೋಗುತ್ತದೆ. ದ್ರಾವಿಡ್ ಮಾತಿಗೆ ಪೂರಕವಾಗಿ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಮುನ್ನೆಲೆಗೆ ಬಂದದ್ದು ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ ಅವರ ಸರಳತೆ, ಪ್ರಾಮಾಣಿಕತೆ ಕುರಿತ ಕೆಲ ದೃಷ್ಟಾಂತಸಹಿತ ಉದಾಹರಣೆಗಳು.

ಮುಖ್ಯಮಂತ್ರಿಯಂತಹ ಉನ್ನತ ಸ್ಥಾನದಿಂದ ಕೆಳಗಿಳಿದ ನಂತರ ವೈಭವೋಪೇತ ಬಂಗಲೆಯಿಂದ ನಿರುಮ್ಮಳವಾಗಿ ಬೆಂಗಳೂರಿನ ಆಂಡ್ರಿ ರಸ್ತೆಯ ಬಾಡಿಗೆ ಮನೆಗೆ ಬಂದರು. ಜೀವನೋಪಾಯಕ್ಕಾಗಿ ಮತ್ತೆ ಕರಿಕೋಟು ಹಾಕಿಕೊಂಡು ಹೈಕೋರ್ಟಿನಲ್ಲಿ ವಕೀಲ ವೃತ್ತಿ ಶುರು ಮಾಡಿದರು. ಆ ಬಗ್ಗೆ ಅವರ ಕೆಲ ಹಿತೈಷಿಗಳು ಕೊಂಕು ತೆಗೆದದ್ದೂ ಇದೆಯಂತೆ. ಆದರೆ ಕಡಿದಾಳ್ ಅದಕ್ಕೆ ಸೊಪ್ಪು ಹಾಕಿದವರಲ್ಲ. ರಾಜ್ಯದ ಮುಖ್ಯಮಂತ್ರಿಯಾದರೂ ಜೀವನೋಪಾಯಕ್ಕಾಗಿ ಏನನ್ನೂ ಮಾಡಿಕೊಳ್ಳದ ಇವರಿಗೆ ವಕೀಲಿ ವೃತ್ತಿ ಮಾಡುವುದು ಕಡಿಮೆ ಎಂದೆನಿಸಲಿಲ್ಲ.

ಹಾಗೆ ವಕೀಲಿ ವೃತ್ತಿ ಮಾಡುತ್ತಿರುವಾಗ ಒಂದು ದಿನ ಸಾಯಂಕಾಲ ಕಡಿದಾಳ್ ಅವರು ಕೋಣೆಯ ಬಾಗಿಲು ಮುಚ್ಚಿಕೊಂಡು ಕಕ್ಷಿದಾರೊಂದಿಗೆ ಚರ್ಚೆ ಮಾಡುತ್ತಿದ್ದಾಗ ಸರ್ ಎಂ. ವಿಶ್ವೇಶ್ವರಯ್ಯ ಕಡಿದಾಳ್ ಅವರ ಭೇಟಿಗೆ ಬಂದಿರುತ್ತಾರೆ. ಅಂಗಳದಲ್ಲಿ ಆಟ ಆಡುತ್ತಿದ್ದ ಮಕ್ಕಳು ಓಡೋಡಿ ಬಂದು ಯಾರೋ ವಿಶ್ವೇಶ್ವರಯ್ಯ ಅಂತ ಬಂದಿದ್ದಾರೆ ಎಂದಾಗ, ಪರಿಚಿತರಾದ ತಾಲೂಕು ಮ್ಯಾಜಿಸ್ಟ್ರೇಟ್ ವಿಶ್ವೇಶ್ವರಯ್ಯ ಎಂದು ಭಾವಿಸಿ ಅರ್ಧ ಗಂಟೆ ಕಾಯಲು ಹೇಳುತ್ತಾರೆ. ಕೆಲಸ ಮುಗಿಸಿ ಹೊರಗೆ ಬಂದು ನೋಡಿದರೆ ಸಾಕ್ಷಾತ್ ಸರ್ ಎಂ. ವಿಶ್ವೇಶ್ವರಯ್ಯ! ಅವರನ್ನು ಕಂಡಕೂಡಲೇ ಕಡಿದಾಳ್ ಕಳವಳಕ್ಕೀಡಾಗುತ್ತಾರೆ. ಕುಗ್ಗಿಹೋಗುತ್ತಾರೆ. ‘ಹೇಳಿ ಕಳಿಸಿದ್ದರೆ ನಾನೇ ನಿಮ್ಮಲ್ಲಿಗೆ ಬರುತ್ತಿದ್ದೆ’ ಎನ್ನುತ್ತಾರೆ. ಆಗ ವಿಶ್ವೇಶ್ವರಯ್ಯ ಹೇಳಿದ ಮಾತು, ‘ನಾನೊಬ್ಬ ನಿವೃತ್ತ ನೌಕರ. ಮಾಡುವುದಕ್ಕೆ ಏನೂ ಕೆಲಸವಿಲ್ಲ, ಎಲ್ಲದಕ್ಕಿಂತ ಮುಖ್ಯವಾಗಿ ಬಹಳ ವರ್ಷಗಳ ನಂತರ ಇಡೀ ಮೈಸೂರು ರಾಜ್ಯ ಕಂಡ ಅತ್ಯಂತ ಪ್ರಾಮಾಣಿಕ ವ್ಯಕ್ತಿ ನೀವು. ನಿಮ್ಮನ್ನು ಭೇಟಿ ಮಾಡುವುದೇ ನಮಗೆ ಪ್ರೇರಣೆ, ಭಾಗ್ಯ’ ಎನ್ನುತ್ತಾರೆ.

1957ರ ಹೊತ್ತಿಗೆ ನಡೆದ ಒಂದು ಘಟನೆ. ಅಂದಿನ ರಾಜ್ಯಪಾಲರಾಗಿದ್ದ ಜಯಚಾಮರಾಜ ಒಡೆಯರ್, ಬೆಂಗಳೂರು ಅರಮನೆಗೆ ಸೇರಿರುವ ಪ್ಯಾಲೇಸ್ ಆರ್ಚರ್ಡ್ಸ್​​ನ ಒಂದು ಎಕರೆ ಭೂಮಿಯನ್ನು ಕಡಿದಾಳ್ ಹೆಸರಿಗೆ ಮಾಡಿಕೊಡುವ ಪ್ರಸ್ತಾಪವನ್ನು ತಮ್ಮ ಕಾರ್ಯದರ್ಶಿಯಾಗಿದ್ದ ಮಹದೇವಯ್ಯನವರ ಮೂಲಕ ಮುಂದಿಡುತ್ತಾರೆ. ಅದಕ್ಕುತ್ತರವಾಗಿ ಮಹಾರಾಜರ ಔದಾರ್ಯಕ್ಕೆ ಕೃತಜ್ಞತೆಗಳನ್ನೂ ಹೇಳಿ ಮಹಾರಾಜರ ಧಾರಾಳತನವನ್ನು ದುರುಪಯೋಗ ಪಡಿಸಿಕೊಳ್ಳಬಾರದೆಂಬ ಉದ್ದೇಶದಿಂದ, ಭೂಮಿಯ ಅಗತ್ಯ ತನಗಿಲ್ಲ ಎಂದು ಹೇಳಿ ಆ ಪ್ರಸ್ತಾಪವನ್ನು ನಯವಾಗಿ ತಿರಸ್ಕರಿಸುತ್ತಾರೆ. ಹಾಗೆ ಮಾಡಿದಾಗ ಮಂಜಪ್ಪನವರ ಬಳಿ ಒಂದು ಸೈಟೂ ಇರದೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಅವರೆಷ್ಟು ಸೂಕ್ಷ್ಮಗ್ರಾಹಿ ಆಗಿದ್ದರು ಎಂಬುದಕ್ಕೆ ಒಂದು ಪ್ರಸಂಗವನ್ನು ಉದಾಹರಿಸಬೇಕು. ಕಡಿದಾಳ್ ಮುಖ್ಯಮಂತ್ರಿ ಆಗಿದ್ದಾಗ ಗ್ರಾಮವೊಂದಕ್ಕೆ ಭೇಟಿ ಕೊಡುತ್ತಾರೆ. ಆಗ ಗೇಣಿ ಮಾಡುತ್ತಿದ್ದ ಮಹಿಳೆ ತನ್ನ ಬವಣೆ ತೋಡಿಕೊಂಡಿದ್ದನ್ನು ಕಂಡು ಗೇಣಿ ಶಾಸನ ತರುತ್ತಾರೆ. ಈಗ ರಾಜಕಾರಣದಲ್ಲಿ ಜಾತಿಯದ್ದೇ ಪಾರಮ್ಯ. ಉಳಿದ ಅರ್ಹತೆಯೆಲ್ಲ ನಂತರ. ಆದರೆ ಸಾರ್ವಜನಿಕ ಕ್ಷೇತ್ರಕ್ಕೆ ಕಾಲಿಟ್ಟ ಮೇಲೆ ತಮ್ಮ ಹೆಸರಿನ ಜೊತೆ ಸೇರಿಕೊಂಡ ಜಾತಿ ಸೂಚಕ ಗೌಡ ಎಂಬ ಪದವನ್ನು ತಾವೂ, ತಮ್ಮ ಅಣ್ಣ ತಮ್ಮಂದಿರಾದ, ತಮ್ಮಯ್ಯ, ಅಣ್ಣಯ್ಯ, ನಾಗಪ್ಪ, ಶ್ರೀನಿವಾಸ್ ಇವರುಗಳ ಹೆಸರಿನ ಜೊತೆ ಸೇರಿಕೊಂಡಿದ್ದ ಗೌಡ ಎಂಬ ಪದವನ್ನು ತೆಗೆಸಿಹಾಕಿದ್ದರು.

ಇಷ್ಟೆಲ್ಲಾ ಉದಾಹರಣೆ, ವಿವರಣೆ ಪೀಠಿಕೆಗೆ ಕಾರಣ ಇತ್ತೀಚೆಗೆ ರಾಜ್ಯದ ಗುತ್ತಿಗೆದಾರರ ಸಂಘ ರಾಜ್ಯ ಸರಕಾರಕ್ಕೆ ಅಧಿಕೃತವಾಗಿ ಸಲ್ಲಿಕೆ ಮಾಡಿರುವ ಒಂದು ಬೇಡಿಕೆ. ಈ ಹಿಂದೆ ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್ ಮಾಡಿದ ಆರೋಪಗಳು ಗೊತ್ತೇ ಇದೆ. ಪೇ ಸಿಎಂ ಪ್ರಚಾರ, 40 ಪರ್ಸೆಂಟ್ ಆರೋಪ ಇವೆಲ್ಲ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿತ್ತು. 40 ಪರ್ಸೆಂಟ್ ಕಮಿಷನ್ ಆರೋಪದ ರಾಜಕಾರಣವು ನಾಗಮೋಹನ ದಾಸ್ ಆಯೋಗ, ಅದರ ವರದಿ ಇತ್ಯಾದಿಗಳ ಹೆಸರಲ್ಲಿ ಮುಂದುವರೆದಿದೆ. ಆದರೆ ಈಗ ಗುತ್ತಿಗೆದಾರರ ಸಂಘ ಈ ಹಿಂದೆ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ಮಾಡಿದಂತೆ ಸರಕಾರದ ಮೇಲೆ ಪರ್ಸೆಂಟೇಜ್ ಆರೋಪ ಮಾಡಲಿಲ್ಲ, ಬದಲಿಗೆ ಕಮಿಷನ್ ಸ್ವಲ್ಪ ಕಡಿಮೆ ಮಾಡಿ ಎಂದು ಬೇಡಿಕೆ ಇಟ್ಟಿದೆ. ಇದಕ್ಕಿಂತ ನಾಚಿಕೆಗೇಡು ಮತ್ತೊಂದು ಬೇಕಾ?

ಇನ್ನು ಈ ಸಲದ ಬಜೆಟ್ ಮತ್ತು ಅದರ ವಾಸ್ತವಿಕತೆ/ ಅವಾಸ್ತವಿಕತೆಗಳ ವಿಚಾರವನ್ನು ಮುಂದೆ ಚರ್ಚೆ ಮಾಡೋಣ. ಇಲ್ಲಿ ವ್ಯಕ್ತಿಗತ ಪ್ರಾಮಾಣಿಕತೆ, ಅಪ್ರಾಮಾಣಿಕತೆ ಮಾತು ಹೇಗೂ ಇರಲಿ, ಒಂದು ರಾಜ್ಯದ ವ್ಯವಸ್ಥೆಯೇ ಹೇಗೆ ಎತ್ತ ಸಾಗಿದೆ ಎಂಬುದಷ್ಟೇ ಇಲ್ಲಿ ಗಮನಿಸಬೇಕಿರುವ ವಿಷಯ.