ಅಂಕಣ

ಕರೊನಾ ಲಸಿಕೆ, ಔಷಧಗಳು ಪೇಟೆಂಟ್​ಮುಕ್ತವಾಗಲಿ

ಬ್ಲರ್ಬ್

(( ಪೇಟೆಂಟ್ ವ್ಯವಸ್ಥೆಯಿಂದ ಔಷಧಗಳ ಕೊರತೆ ಉಂಟಾಗುತ್ತದೆ ಹಾಗೂ ಔಷಧಗಳು ಅತ್ಯಂತ ದುಬಾರಿಯಾಗುತ್ತವೆ. ವಿಶ್ವ ವ್ಯಾಪಾರ ಸಂಘಟನೆಯ ಪೇಟೆಂಟ್ ವ್ಯವಸ್ಥೆ ಬಹುರಾಷ್ಟ್ರೀಯ ಔಷಧ ಕಂಪನಿಗಳ ಪರವಾಗಿಯೇ ಇದೆ. ಪೇಷಂಟ್​ಗಳ ಕಾಳಜಿ ಅದಕ್ಕಿಲ್ಲ.))

ಕರೊನಾ ಮಹಾಮಾರಿ ಜಗತ್ತನ್ನೇ ತಲ್ಲಣಗೊಳಿಸುತ್ತಿದೆ. ಚೀನಾದ ವೂಹಾನ್ ನಗರದಲ್ಲಿ 2019ರ ನವೆಂಬರ್ ತಿಂಗಳಿನಲ್ಲಿ ಪ್ರಾರಂಭವಾದ ಈ ಸೋಂಕು ವೇಗವಾಗಿ ಜಗತ್ತಿನಲ್ಲೆಲ್ಲ ಹರಡಲು ಪ್ರಾರಂಭಿಸಿತು. 2020 ಮಾರ್ಚ್ 11ರಂದು ವಿಶ್ವ ಆರೋಗ್ಯ ಸಂಸ್ಥೆ ಕರೊನಾವನ್ನು ಪ್ಯಾಂಡಮಿಕ್ (ಮಹಾಮಾರಿ) ಎಂದು ಘೊಷಿಸಿತು. ಈ 14 ತಿಂಗಳ ಅಲ್ಪಾವಧಿಯಲ್ಲಿ ಕರೊನಾ ಜಗತ್ತಿನಾದ್ಯಂತ 16 ಕೋಟಿಗೂ ಅಧಿಕ ಜನರನ್ನು ಅಂಟಿಕೊಂಡಿದೆ ಹಾಗೂ 33 ಲಕ್ಷಕ್ಕೂ ಅಧಿಕ ಜನರ ಪ್ರಾಣ ಹೋಗಿದೆ. ಅಂದರೆ ತಿಂಗಳಿಗೆ ಸರಾಸರಿ ಒಂದು ಕೋಟಿಗೂ ಅಧಿಕ ಜನರು ಸೋಂಕಿತರಾಗುತ್ತಿದ್ದಾರೆ ಹಾಗೂ ತಿಂಗಳಿಗೆ ಸರಾಸರಿ 2,38,000 ಜನ ಮರಣ ಹೊಂದುತ್ತಿದ್ದಾರೆ. ಈ ಅಂಕಿಸಂಖ್ಯೆಗಳು ಕರೊನಾ ಹರಡುತ್ತಿರುವ ವೇಗ ಹಾಗೂ ಅದರಿಂದ ಉಂಟಾಗುತ್ತಿರುವ ಮರಣ ಪ್ರಮಾಣದ ಅಗಾಧತೆಯನ್ನು ತೋರಿಸುತ್ತದೆ.

ಕರೊನಾದ ಕೆಲವು ಪ್ರಮುಖ ಲಕ್ಷಣಗಳು

1) ಅದು ಪ್ರಬಲವಾದ ಅಂಟುಜಾಡ್ಯ. ವ್ಯಕ್ತಿಯಿಂದ ವ್ಯಕ್ತಿಗೆ, ಗಾಳಿ ಮೂಲಕ ವೇಗವಾಗಿ ಹರಡುತ್ತದೆ. ಶ್ರೀಮಂತರು, ಬಡವರು ಎಂಬ ಭೇದವಿಲ್ಲದೆ ಎಲ್ಲರನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಜಗತ್ತಿನ ಒಂದು ಶ್ರೀಮಂತ ರಾಷ್ಟ್ರ ಮತ್ತು ವೈದ್ಯಕೀಯ ವಿಜ್ಞಾನ ಹಾಗೂ ಸೌಲಭ್ಯಗಳಲ್ಲಿ ಅಗ್ರಮಾನ್ಯ ದೇಶ ಎನಿಸಿಕೊಂಡ ಅಮೆರಿಕ ಪ್ರಾರಂಭದಿಂದಲೂ ಕರೊನಾ ಪೀಡಿತರ ಸಂಖ್ಯೆಯಲ್ಲಿ ಹಾಗೂ ಮರಣ ಪ್ರಮಾಣದಲ್ಲಿ ನಿರಂತರವಾಗಿ ಮೊದಲ ಸ್ಥಾನದಲ್ಲಿ ಇರುವುದು ಆಶ್ಚಯರ್å ತರಿಸುತ್ತದೆ.

2) ಕರೊನಾ ವೈರಾಣು ಬಹಳ ವೇಗವಾಗಿ ರೂಪಾಂತರ ಹೊಂದುತ್ತದೆ. ಕಳೆದ 14 ತಿಂಗಳಲ್ಲಿ ಬ್ರೆಜಿಲ್ ರೂಪಾಂತರ, ದಕ್ಷಿಣ ಆಫ್ರಿಕಾ ರೂಪಾಂತರ, ಬ್ರಿ್ರನ್ ರೂಪಾಂತರ ಹಾಗೂ ಈಗ ಭಾರತದ ರೂಪಾಂತರ- ಇಷ್ಟು ರೂಪಾಂತರಗಳನ್ನು ಹೊಂದಿದೆ. ರೂಪಾಂತರಿತ ಕರೊನಾ ವೈರಾಣುಗಳು ಹೆಚ್ಚು ಉಗ್ರ ರೂಪ ಪಡೆಯುತ್ತಿರುವುದನ್ನು ಗಮನಿಸುತ್ತಿದ್ದೇವೆ. ಭಾರತದಲ್ಲಿ ಕರೊನಾ ಮೊದಲ ಅಲೆಯಲ್ಲಿ ಆಮ್ಲಜನಕಕ್ಕೆ ಹೆಚ್ಚು ಬೇಡಿಕೆ ಇರಲಿಲ್ಲ. ಆದರೆ ಎರಡನೇ ಅಲೆಯಲ್ಲಿ ಉಸಿರಾಟದ ಸಮಸ್ಯೆ ತೀವ್ರ ಸ್ವರೂಪ ತಳೆದಿದೆ, ಹಾಗಾಗಿ ಆಮ್ಲಜನಕಕ್ಕೆ ವಿಪರೀತ ಬೇಡಿಕೆ ಹೆಚ್ಚಿದೆ, ಇದಕ್ಕೆ ರೂಪಾಂತರಿತ ಕರೊನಾ ವೈರಾಣುವೇ ಕಾರಣ ಎನ್ನಲಾಗುತ್ತಿದೆ. ಮೂರನೇ ಅಲೆಯಲ್ಲಿ ಚಿಕ್ಕ ಮಕ್ಕಳೇ ವಿಪರೀತ ಬಾಧೆಗೆ ಒಳಗಾಗುತ್ತಾರೆ ಎಂದೂ ಹೇಳಲಾಗುತ್ತಿದೆ.

3) ಕರೊನಾ ವೈರಾಣು ಭೂಮಿಯಲ್ಲಿ ವಿಪರೀತ ವೇಗವಾಗಿ ಹರಡುತ್ತದೆ. ಇಂದು ಬ್ರೆಜಿಲ್​ನಲ್ಲಿ ಕಂಡುಬರುವ ವೈರಾಣು ನಾಕೇ ದಿನಗಳಲ್ಲಿ ಇಂಡೋನೇಷ್ಯಾದಲ್ಲಿ ಪ್ರತ್ಯಕ್ಷವಾಗುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಕಂಡುಬರುವ ವೈರಾಣು ಎರಡೇ ದಿನಗಳಲ್ಲಿ ಯುರೋಪ್​ನಲ್ಲಿ ಪ್ರತ್ಯಕ್ಷವಾಗುತ್ತದೆ.

ಈ ಎಲ್ಲ ಕಾರಣಗಳಿಂದ ‘ಜಗತ್ತಿನ ಪ್ರತಿಯೊಬ್ಬರೂ ಸುರಕ್ಷಿತರಾಗುವವರೆಗೆ ಯಾರೂ ಸುರಕ್ಷಿತರಲ್ಲ’.

ಶ್ರೀಮಂತ ದೇಶಗಳು ಉತ್ಪಾದನೆಯಾದ ಎಲ್ಲ ಕರೊನಾ ಲಸಿಕೆಗಳನ್ನು ತಾವೇ ಸಂಗ್ರಹಿಸಿಕೊಂಡು ಅಲ್ಲಿನ ಜನರಿಗೆ ಸಂಪೂರ್ಣವಾಗಿ ಚುಚ್ಚುಮದ್ದು ನೀಡಿ, ತಾವು ಕರೊನಾದಿಂದ ಸುರಕ್ಷಿತರು ಎಂದು ಬೀಗುವುದು ಮೂರ್ಖತನ. ಬೇರೆ ಯಾವುದೋ ಒಂದು ವ್ಯಾಕ್ಸಿನ್ ಸಿಗದ ಬಡ ದೇಶದಲ್ಲಿ ಕರೋನಾ ವೈರಾಣು ಭಯಂಕರ ರೂಪ ತಳೆದು ಶ್ರೀಮಂತ ದೇಶಗಳಿಗೂ ವ್ಯಾಪಿಸಿ ಮತ್ತೆ ಸಮಸ್ಯೆ ಸೃಷ್ಟಿಸುವ ಸಾಧ್ಯತೆ ಇದ್ದೇ ಇದೆ. ಆದ್ದರಿಂದ ಜಗತ್ತಿನ ಎಲ್ಲಕಡೆ ಏಕಕಾಲಕ್ಕೆ ಕರೊನಾ ನಿಮೂಲನೆ ಮಾಡುವುದು ಅತ್ಯಗತ್ಯ. ಇವತ್ತಿನ ಮಟ್ಟಿಗೆ ಹೇಳುವುದಾದರೆ ವ್ಯಾಕ್ಸಿನೇಷನ್ ಒಂದೇ ಕರೊನಾ ವಿರುದ್ಧ ಹೋರಾಡಲು ನಮಗಿರುವ ಪ್ರಬಲ ಆಯುಧ.

ಜಗತ್ತಿನ ಎಲ್ಲರಿಗೂ ಚುಚ್ಚುಮದ್ದು ನೀಡಬೇಕು ಹಾಗೂ ಅತಿ ಶೀಘ್ರವಾಗಿ ಈ ಕೆಲಸ ನಡೆಯಬೇಕು. 2021ರ ಡಿಸೆಂಬರ್ ಒಳಗೆ ಈ ಗುರಿ ಸಾಧಿಸಬೇಕು. ಇದು ಸಾಧ್ಯವಾಗಬೇಕಾದರೆ ಕರೊನಾ ವ್ಯಾಕ್ಸಿನ್​ಗಳ ಉತ್ಪಾದನೆ ಈಗಿರುವುದಕ್ಕಿಂತ ಹತ್ತಾರು ಪಟ್ಟು ಹೆಚ್ಚಾಗಬೇಕು. ಇಂದಿನ ಪೇಟೆಂಟ್ ವ್ಯವಸ್ಥೆಯಲ್ಲಿ ಅದು ಸಾಧ್ಯವಿಲ್ಲ. ಬ್ಲೂಮ್​ಗ್ ಸುದ್ದಿಸಂಸ್ಥೆ ಈಚೆಗೆ ಪ್ರಕಟಿಸಿರುವ ವರದಿ ಪ್ರಕಾರ, ಶೇಕಡ 75ರಷ್ಟು ಜನಸಂಖ್ಯೆಗೆ ಚುಚ್ಚುಮದ್ದು ನೀಡಿ ಸಾಮೂಹಿಕ ರೋಗನಿರೋಧಕ ಶಕ್ತಿ -Herd Immunity - ಪಡೆಯಲು ಈಗಿನ ವ್ಯಾಕ್ಸಿನೇಷನ್ ವೇಗದಲ್ಲಿ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಬ್ರಿಟನ್ ಹಾಗೂ ಅಮೆರಿಕ- ಈ ಶ್ರೀಮಂತ ದೇಶಗಳಿಗೆ ಮೇ ತಿಂಗಳಿನಿಂದ ಮೂರರಿಂದ ಐದು ತಿಂಗಳು ಸಾಕು. ಅಂದರೆ ಈ ವರ್ಷದ ಅಕ್ಟೋಬರ್ ವೇಳೆಗೆ ಅವು ಸಾಮೂಹಿಕ ರೋಗ ನಿರೋಧಕ ಶಕ್ತಿ ಪಡೆಯುತ್ತವೆ.

ಇದಕ್ಕೆ ಪ್ರತಿಯಾಗಿ ಮಧ್ಯಮ ಆದಾಯದ ಹಾಗೂ ಬಡದೇಶಗಳಾದ ಬ್ರೆಜಿಲ್​ಗೆ 11 ತಿಂಗಳು, ಭಾರತಕ್ಕೆ 2.6 ವರ್ಷ, ಇಂಡೋನೇಷ್ಯಾಕ್ಕೆ 4.6ವರ್ಷ ಹಾಗೂ ದಕ್ಷಿಣ ಆಫ್ರಿಕಾಕ್ಕೆ 3.9 ವರ್ಷ ಬೇಕು.

ಬ್ಲೂಮ್​ಗ್ ಅಧ್ಯಯನ ವರದಿಯಿಂದ ತಿಳಿದು ಬರುವುದು

? 2021ರ ಅಂತ್ಯದೊಳಗೆ ಕರೊನಾ ಮಹಾಮಾರಿಯ ನಿಯಂತ್ರಣ ಸಾಧ್ಯವಿಲ್ಲ.

? 2026ರವರೆಗೆ ಜಗತ್ತು ಕರೊನಾದಿಂದ ಪ್ರಾಣಹಾನಿ ಹಾಗೂ ಆರ್ಥಿಕ ಹಾನಿಗಳನ್ನು ಅನುಭವಿಸುತ್ತಲೇ ಇರಬೇಕು. ಅದು ಇನ್ನೂ ಹೆಚ್ಚು ಉಗ್ರ ರೂಪವನ್ನೂ ಪಡೆಯಬಹುದು.

ಈ ಭಯಾನಕ ಪರಿಸ್ಥಿತಿಯಿಂದ ಪಾರಾಗಲು ಕರೊನಾ ಲಸಿಕೆಗಳು, ಔಷಧಗಳು ಹಾಗೂ ಇತರೆ ತಂತ್ರಜ್ಞಾನಗಳನ್ನೂ ವಿಶ್ವ ವ್ಯಾಪಾರ ಸಂಸ್ಥೆ-ಡಬ್ಲ್ಯುಟಿಒದ ಟ್ರಿಪ್ಸ್ ಒಪ್ಪಂದದಲ್ಲಿರುವ ಪೇಟೆಂಟ್ ವ್ಯವಸ್ಥೆಯಿಂದ ಮುಕ್ತಗೊಳಿಸಬೇಕು.

ಡಬ್ಲ್ಯುಟಿಒ ಪೇಟೆಂಟ್ ಒಪ್ಪಂದದ ಪ್ರಕಾರ ಒಂದು ಔಷಧ ಅಥವಾ ವ್ಯಾಕ್ಸೀನನ್ನು ಕಂಡುಹಿಡಿದ ಕಂಪನಿಗೆ ಎಲ್ಲ ಸದಸ್ಯ ರಾಷ್ಟ್ರಗಳೂ ‘ಪ್ರಾಡಕ್ಟ್ ಪೇಟೆಂಟ್’ ನೀಡಬೇಕಾದುದು ಕಡ್ಡಾಯ. ಪೇಟೆಂಟ್ ಪಡೆದ ಕಂಪನಿ ತನ್ನ ಉತ್ಪನ್ನದ ಮೇಲೆ 20 ವರ್ಷಗಳವರೆಗೆ ಏಕಸ್ವಾಮ್ಯ ಪಡೆಯುತ್ತದೆ. ಅಂದರೆ 20 ವರ್ಷಗಳವರೆಗೆ ಪೇಟೆಂಟ್ ಪಡೆದ ಔಷಧ/ವ್ಯಾಕ್ಸೀನನ್ನು ಕಂಪನಿಯ ಅನುಮತಿ ಇಲ್ಲದೆ ಯಾರೂ ಉತ್ಪಾದಿಸುವಂತಿಲ್ಲ. ಅಲ್ಲದೆ ಪೇಟೆಂಟ್​ದಾರ ತನ್ನ ಉತ್ಪನ್ನವನ್ನು ಯಾವ ಬೆಲೆಗೆ ಬೇಕಾದರೂ ಮಾರಬಹುದು, ಪೇಟೆಂಟ್ ಪಡೆದ ಔಷಧ/ವ್ಯಾಕ್ಸೀನನ್ನು ಬೇರೆ ಯಾವುದಾದರೂ ಕಂಪನಿ ಉತ್ಪಾದನೆ ಮಾಡಲು ಬಯಸಿದರೆ ಪೇಟೆಂಟ್​ದಾರ ಕಂಪನಿಗೆ ಅದು ಕೇಳಿದಷ್ಟು ರಾಯಲ್ಟಿ ಹಣ ನೀಡಿ ಅನುಮತಿ ಪಡೆಯಬೇಕು. ಹೀಗೆ ಪೇಟೆಂಟ್ ವ್ಯವಸ್ಥೆಯಿಂದ ಔಷಧಗಳ ಕೊರತೆ ಉಂಟಾಗುತ್ತದೆ ಹಾಗೂ ಔಷಧಗಳು ಅತ್ಯಂತ ದುಬಾರಿಯಾಗುತ್ತವೆ. ಡಬ್ಲ್ಯುಟಿಒ ಪೇಟೆಂಟ್ ವ್ಯವಸ್ಥೆ ಬಹುರಾಷ್ಟ್ರೀಯ ಔಷಧ ಕಂಪನಿಗಳ ಪರವಾಗಿಯೇ ಇದೆ. ಪೇಷಂಟ್​ಗಳ ಕಾಳಜಿ ಅದಕ್ಕಿಲ್ಲ.

ಕರೊನಾ ಮಹಾಮಾರಿಯ ವಿಶೇಷ ಸಂದರ್ಭದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ದೇಶಗಳು 2020ರ ಅಕ್ಟೋಬರ್ ತಿಂಗಳಲ್ಲಿ ಡಬ್ಲ್ಯುಟಿಒಗೆ ಜಂಟಿ ಮನವಿಯನ್ನು ಕೊಟ್ಟಿವೆ. ಆ ಮನವಿಯಲ್ಲಿ ಕರೊನಾ ಮಹಾಮಾರಿಯನ್ನು ಅತ್ಯಂತ ಶೀಘ್ರವಾಗಿ ನಿಗ್ರಹಿಸುವ ಸಲುವಾಗಿ ಕರೊನಾ ಸಂಬಂಧಿತ ವ್ಯಾಕ್ಸೀನ್​ಗಳು ಹಾಗೂ ಔಷಧಗಳ ಮೇಲೆ ಪೇಟೆಂಟ್ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ಕೂಡಲೇ ತೆಗೆದು ಹಾಕಬೇಕು, ಕರೊನಾ ಪತ್ತೆ ಹಚ್ಚುವ ಉಪಕರಣಗಳು ಹಾಗೂ ಇತರ ಉಪಕರಣಗಳನ್ನು ಕಾಪಿರೈಟ್, ಇಂಡಸ್ಟ್ರಿಯಲ್ ಡಿಸೈನ್, ಟ್ರೇಡ್ ಸೀಕ್ರೆಟ್ ಮುಂತಾದ ವಿವಿಧ ಐ.ಪಿ.ಆರ್. ನಿರ್ಬಂಧಗಳಿಂದ ವಿನಾಯಿತಿ ನೀಡಬೇಕು ಎಂದು ಆಗ್ರಹ ಮಾಡಲಾಗಿದೆ.

ಕರೊನಾ ವ್ಯಾಕ್ಸೀನ್/ಔಷಧಗಳನ್ನು ಪೇಟೆಂಟ್ ಒಪ್ಪಂದದ ನಿರ್ಬಂಧಗಳಿಂದ ಮುಕ್ತಗೊಳಿಸುವುದರಿಂದ ಜಗತ್ತಿನ ನೂರಾರು ಕಂಪನಿಗಳು ವ್ಯಾಕ್ಸೀನ್/ಔಷಧಗಳನ್ನು ಉತ್ಪಾದಿಸುವುದು ಸಾಧ್ಯವಾಗುತ್ತದೆ ಹಾಗೂ ಅವುಗಳ ಬೆಲೆಗಳೂ ಕಡಿಮೆಯಾಗುತ್ತವೆ. ಇದರಿಂದ ಜಗತ್ತಿನ ಬಹುಸಂಖ್ಯಾತ ಬಡ ದೇಶಗಳಿಗೆ ಕರೊನಾ ವ್ಯಾಕ್ಸೀನ್ ಮತ್ತು ಇತರ ಔಷಧಗಳನ್ನು ಅಗತ್ಯ ಪ್ರಮಾಣದಲ್ಲಿ, ಅವುಗಳ ಜೇಬಿಗೆ ಎಟುಕುವ ಬೆಲೆಗಳಲ್ಲಿ ಪೂರೈಕೆ ಮಾಡಬಹುದು. ಅದರಿಂದ ಅತ್ಯಂತ ಶೀಘ್ರವಾಗಿ ಕರೊನಾ ಮಹಾಮಾರಿಯಿಂದ ಮುಕ್ತಿ ಪಡೆಯುವುದು ಸಾಧ್ಯವಾಗುತ್ತದೆ.

ಭಾರತ-ದಕ್ಷಿಣ ಆಫ್ರಿಕಾದ ಈ ಮನವಿಗೆ ಈಗಾಗಲೇ ಡಬ್ಲ್ಯುಟಿಒದ ನೂರಕ್ಕೂ ಹೆಚ್ಚು ದೇಶಗಳು ಬೆಂಬಲ ವ್ಯಕ್ತಪಡಿಸಿವೆ. ಅಮೆರಿಕ, ಫ್ರಾನ್ಸ್ ಮತ್ತು ಇಟಲಿ ಕೂಡ ಬೆಂಬಲಿಸಿವೆ. ಭಾರತದ ಜನತೆಯ ಪರವಾಗಿ ಸ್ವದೇಶಿ ಜಾಗರಣ ಮಂಚ್ ವಿಶ್ವ ವ್ಯಾಪಾರ ಸಂಘಟನೆಗೆ ಇಂಥದೇ ಮನವಿ ನೀಡಲು ಮುಂದಾಗಿದೆ. ಇದಕ್ಕಾಗಿ ಎಲ್ಲರೂ ಆನ್​ಲೈನ್ ಮನವಿಯನ್ನು ಸಹಿ ಮಾಡಿ ಕಳಿಸಬೇಕಾಗಿದೆ. ನಾವೆಲ್ಲರೂ ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗೋಣ-ಸಫಲರಾಗೋಣ.

(ಸಂರ್ಪಸಿ: 098452-19608, 944884-6035, 096202-28023)

(ಲೇಖಕರು ಸ್ವದೇಶಿ ಜಾಗರಣ ಮಂಚ್ ಮುಖಂಡರು)