‘ಆಪರೇಷನ್ ಸಿಂಧೂರ’ ನಿಲುಗಡೆಗೆ ಬಂದು ಒಂದು ತಿಂಗಳು ಪೂರ್ಣಗೊಂಡಿದೆ. ಟಾಮ್ ಕೂಪರ್, ಜಾನ್ ಸ್ಪೆನ್ಸರ್ ಅವರುಗಳಂತಹ ಜಾಗತಿಕವಾಗಿ ಮಾನ್ಯರಾದ ಸಮರ ವಿಶ್ಲೇಷಕರು ಇದನ್ನು ‘ಭಾರತದ ನಿರ್ಣಾಯಕ ವಿಜಯ’ ಎಂದು
ಇದೇ ದಿನಗಳಲ್ಲಿ ಪಾಕಿಸ್ತಾನ ಸಹ ತನ್ನ ಮಿತ್ರದೇಶಗಳಿಂದ ಸಹಾನುಭೂತಿ ಗಳಿಸಿಕೊಳ್ಳುವ ಪ್ರಯತ್ನ ನಡೆಸಿದೆ. ಆ ಪ್ರಯತ್ನದಲ್ಲಿ ಅದರ ಪ್ರಧಾನಮಂತ್ರಿ ಮತ್ತು ಸೇನಾ ದಂಡನಾಯಕ ಜತೆಯಾಗಿ ತೊಡಗಿರುವುದು ವಿಶೇಷ. ಇಬ್ಬರೂ ಟರ್ಕಿ, ಇರಾನ್ ಮತ್ತು ಅಜರ್ವೈಜೈನ್ಗಳಿಗೆ ಭೇಟಿ ನೀಡಿ ತಮ್ಮ ಪರವಾದ ಮಾತುಗಳನ್ನು ಸಾರ್ವಜನಿಕವಾಗಿಯೇ ಆಡಿದ್ದಾರೆ. ಪ್ರಧಾನಮಂತ್ರಿ ಶೆಹಬಾಜ್ ಷರೀಫ್ ಅಜರ್ವೈಜೈನ್ನ ರಾಜಧಾನಿ ಬಕೂನಲ್ಲಿ ಹೇಳಿದ ಮಾತುಗಳು ಹೀಗಿವೆ: ‘‘ನಮ್ಮ ವೀರ ಸೇನಾ ದಂಡನಾಯಕ ಆಸಿಮ್ ಮುನೀರ್ ಅವರು ಬೆಳಗಿನ ಒಂಬತ್ತೂವರೆಗೆ ನನಗೆ ಕರೆ ಮಾಡಿ ‘ಪ್ರಧಾನಮಂತ್ರಿಗಳೇ, ದೇವರು ನಮಗೆ ವಿಜಯವನ್ನು ದಯಪಾಲಿಸಿದ್ದಾನೆ, ಶತ್ರು ಕದನವಿರಾಮಕ್ಕಾಗಿ ನಮ್ಮ ಮುಂದೆ ಬೇಡುತ್ತಿದ್ದಾನೆ. ಈ ವಿಷಯದಲ್ಲಿ ನಿಮ್ಮ ಆದೇಶವೇನು?’ ಎಂದು ಕೇಳಿದರು’. ಇದನ್ನು ಕೇಳಿದ ಅಝೇರಿ ಅಧ್ಯಕ್ಷ ಮೆಲ್ಲಗೆ ಚಪ್ಪಾಳೆ ತಟ್ಟಿದರು, ಟರ್ಕಿ ಅಧ್ಯಕ್ಷ ಎದೆಯ ಮೇಲೆ ಕೈ ಇಟ್ಟುಕೊಂಡರು! ಯಾಕೆಂದರೆ ಏನು ನಡೆಯಿತೆಂದು ಅವರೆಲ್ಲರಿಗೂ ಗೊತ್ತೇ ಇತ್ತು. ಪಾಕಿಸ್ತಾನದಲ್ಲಿ ಸೇನಾ ದಂಡನಾಯಕ ಪ್ರಧಾನಮಂತ್ರಿಗಳ ‘ಆದೇಶ’ವನ್ನು ಪಡೆದುಕೊಂಡು ಅದರಂತೆ ನಡೆದುಕೊಳ್ಳುವುದಿಲ್ಲ ಎನ್ನವುದು ಜಗತ್ತೇ ನೋಡಿ ತಿಳಿದುಕೊಂಡಿರುವ ಸತ್ಯ. ಜತೆಗೆ ಭಾರತ ಕದನವಿರಾಮಕ್ಕಾಗಿ ಬೇಡುತ್ತ ನಿಲ್ಲಲಿಲ್ಲ, ಬದಲಿಗೆ ಹಾಗೆ ಮಂಡಿಯೂರಿದ್ದು ಪಾಕಿಸ್ತಾನ ಎಂದೂ ಅಷ್ಟರಲ್ಲಾಗಲೇ ಎಲ್ಲೆಡೆ ಆಧಾರಗಳೊಂದಿಗೇ ಸುದ್ದಿ ಹರಡಿಹೋಗಿತ್ತು. ಆದಾಗ್ಯೂ ಪ್ರಧಾನಿ ಷರೀಫ್ ತನ್ನ, ತನ್ನ ಸೇನೆಯ, ತನ್ನ ದೇಶದ ಮಾನವನ್ನು ಉಳಿಸಿಕೊಳ್ಳಲು ಪ್ರಯತ್ನಿಸುವುದು ಸಹಜವೇ. ಆದರೆ ಅಸಹಜ ಹಾಗೂ ಅಕ್ಷಮ್ಯವೆನಿಸುವುದು ಷರೀಫ್ರ ಮಾತುಗಳನ್ನು ಕೆಲವರು ಭಾರತೀಯರೂ ಪುನರುಚ್ಚರಿಸತೊಡಗಿದ್ದು. ಪ್ರಧಾನಮಂತ್ರಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಶರಣಾಗತರಾದರು ಎಂಬರ್ಥದ ‘ನರೇಂದರ್ ಸರಂಡರ್!’ ಎಂಬ ಎರಡು ಪದಗಳು ಇತ್ತೀಚೆಗಷ್ಟೇ ದೇಶದಲ್ಲಿ ಕೇಳಿಬಂದವು! ಅದಕ್ಕೆ ವೈರೋಧಾಭಾಸಿಕ ಹಿನ್ನೆಲೆಯಾಗಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಮತ್ತೆ ನಮ್ಮ ಕೈಗೆ ತೆಗೆದುಕೊಳ್ಳುವ ಅವಕಾಶವನ್ನು ಪ್ರಧಾನಿ ಮೋದಿ ಹಾಳುಮಾಡಿಕೊಂಡರು ಎಂಬ ‘ಆಪಾದನೆ’ಯೂ, ಯಾಕೆ ಹಾಗೆ ಮಾಡಿದರು ಎಂಬ ಪ್ರಶ್ನೆಯೂ ದೊಡ್ಡದಾಗಿಯೇ ಕೇಳಿಬಂದಿತ್ತು! ಈ ಆರೋಪ, ಆಪಾದನೆ, ಪ್ರಶ್ನೆಗಳಿಗೇನಾದರೂ ಅರ್ಥವಿದೆಯೇ?
ಮೊದಲಿಗೆ, ಮೇ 6-7ರ ರಾತ್ರಿ ಆರಂಭವಾದ ಭಾರತದ ಕಾರ್ಯಾಚರಣೆ ಮೇ 10ರ ಸಂಜೆ ನಿಲುಗಡೆಗೆ ಬಂದ ಬಗೆಯನ್ನೇ ವಿಶ್ಲೇಷಿಸೋಣ. ‘ಆಪರೇಷನ್ ಸಿಂಧೂರ’ಕ್ಕೆ ಪ್ರತಿಯಾಗಿ ತಾನು ಆರಂಭಿಸಿದ ಕ್ಷಿಪಣಿ ದಾಳಿಗೆ ಪಾಕಿಸ್ತಾನ ಇಟ್ಟ ಹೆಸರು ‘ಆಪರೇಷನ್ ಬುನಿಯಾನ್-ಉನ್-ಮರ್ಸೂಸ್’ ಎಂದು. ‘ಅಭೇದ್ಯ ಕಟ್ಟಡ’ ಎಂಬರ್ಥದ ಆ ಕಾರ್ಯಾಚರಣೆಯನ್ನು ಆ ದೇಶ ಆರಂಭಿಸಿದ್ದು ಮೇ 9ರ ರಾತ್ರಿ ಹತ್ತೂವರೆಯ ಹೊತ್ತಿಗೆ. ಅದಕ್ಕೆ ಮೊದಲು ಟರ್ಕಿ ನಿರ್ವಿುತ ಡ್ರೋನ್ಗಳಿಂದಲೇ ದಾಳಿ ನಡೆಸುತ್ತಿದ್ದ ಪಾಕಿಸ್ತಾನ ತನ್ನ ಹೊಸ ಕಾರ್ಯಾಚರಣೆಯನ್ನು ಆರಂಭಿಸಿದ್ದು ನಮ್ಮ ರಾಷ್ಟ್ರೀಯ ರಾಜಧಾನಿ ದೆಹಲಿಯತ್ತ ಬ್ಯಾಲಿಸ್ಟಿಕ್ ಮಿಸೈಲ್ ಪ್ರಯೋಗಿಸುವ ಮೂಲಕ. ಆ ಕ್ಷಿಪಣಿಯನ್ನೇನೋ ನಮ್ಮ ಆಕಾಶ್ ತೀರ್ ವಾಯು ಸುರಕ್ಷಾ ವ್ಯವಸ್ಥೆ ಹರಿಯಾಣದ ಸಿರ್ಸಾ ಬಳಿ ಹೊಡೆದುರುಳಿಸಿತು. ದೆಹಲಿಯ ಮೇಲೆ ಕ್ಷಿಪಣಿಯಿಂದ ಎರಗುವ ಪಾಕಿಸ್ತಾನದ ಪ್ರಯತ್ನ ವಿಫಲವಾಯಿತೇನೋ ನಿಜ, ಆದರೆ ಅದು ಕಳೆದ 3 ದಿನಗಳಿಂದಲೂ ನಡೆಯುತ್ತಿದ್ದ ಘರ್ಷಣೆಯನ್ನು ದೊಡ್ಡ ಹಂತಕ್ಕೇರಿಸುವ ಪಾಕಿಸ್ತಾನಿ ಮನೋಭಾವವನ್ನು ಬಯಲುಮಾಡಿತು. ಅದುವರೆಗೆ ಭಾರತ ತನ್ನ ದಾಳಿಗೆ ಗುರಿಯಾಗಿಸಿಕೊಂಡಿದ್ದು ಭಯೋತ್ಪಾದಕ ನೆಲೆಗಳು ಮತ್ತು ಚೀನಿ ನಿರ್ವಿುತ ವಾಯುರಕ್ಷಣಾ ವ್ಯವಸ್ಥೆಗಳನ್ನು ಮಾತ್ರ. ಆದರೆ ಪಾಕಿಸ್ತಾನ ನೇರವಾಗಿ ದೆಹಲಿಯನ್ನೇ ಗುರಿಯಾಗಿಸಿಕೊಂಡು, ನಾಗರಿಕರನ್ನು ಕೊಲ್ಲುವುದು ತನ್ನ ಇರಾದೆ ಎಂದು ತೋರಿಸಿಕೊಂಡಿತು. ಅದು ಆ ದಿನಗಳ ಸಂಘರ್ಷದ ಮಿತಿಯನ್ನು ಅತಿಯಾಗಿ ಉಲ್ಲಂಘಿಸುವ ಕ್ರಮವಾಗಿತ್ತು. ಹೀಗಾಗಿ ಆ ಬಗೆಯ ಇನ್ನೊಂದು ಪ್ರಯತ್ನ ಕೈಗೊಳ್ಳುವ ಪಾಕಿಸ್ತಾನದ ಸಾಮರ್ಥ್ಯವನ್ನೇ ಕುಗ್ಗಿಸಿಬಿಡುವ ಅಗತ್ಯವನ್ನು ಭಾರತ ಮನಗಂಡಿತು. ತನ್ನ ನಾಗರಿಕರ ರಕ್ಷಣೆಗಾಗಿ ಭಾರತ ಆ ಕ್ರಮಕ್ಕೆ ಮುಂದಾಗಲೇಬೇಕಾಗಿತ್ತು ಮತ್ತು ಅದು ತಕ್ಷಣವೇ ಆಗಬೇಕಿತ್ತು.
ಆ ಪ್ರಕಾರ ರಾತ್ರಿ ಒಂದೂವರೆಯ ಹೊತ್ತಿಗೆ ಪಾಕಿಸ್ತಾನದ ಪ್ರಮುಖ ವಾಯುನೆಲೆಗಳು, ಕ್ಷಿಪಣಿ ಮತ್ತು ಡ್ರೋನ್ ಉಡಾವಣಾ ವ್ಯವಸ್ಥೆಗಳ ಮೇಲೆ ಭಾರತ ಬ್ರಹ್ಮೋಸ್ ಕ್ಷಿಪಣಿಗಳ ಮೂಲಕ ದಾಳಿಯೆಸಗಿತು. ಪ್ರಾರಂಭಿಕ ದಾಳಿಗಳಲ್ಲೇ ಪಾಕಿಸ್ತಾನದ ವಾಯುಸೇನೆಯ 20% ಸೌಲಭ್ಯಗಳು ನಷ್ಟವಾದವು ಮತ್ತು ಆ ದೇಶದ ವಾಯುಸೇನೆ ಸ್ವಾಡ್ರನ್ ಲೀಡರ್ ಸೇರಿದಂತೆ ಹಲವರು ತರಬೇತಿ ಹೊಂದಿದ ವೈಮಾನಿಕರನ್ನೂ ಕಳೆದುಕೊಂಡಿದ್ದರಿಂದಾಗಿ ತನ್ನ ಕಾದುವ ಸಾಮರ್ಥ್ಯದಲ್ಲಿ 60% ಇಳಿಕೆಯನ್ನು ಕಂಡಿತು. ಅಲ್ಲಿಗೆ ಆರಂಭವಾದ ಮೂರೇ ತಾಸುಗಳಲ್ಲಿ ಬುನಿಯಾನ್-ಉನ್ ದಯನೀಯವಾಗಿ-ಮರ್ಸೂಸ್ ಮುಗಿದುಹೋಯಿತು!
ಹೀಗೆ ‘ಅಭೇದ್ಯ ಕಟ್ಟಡ’ದಲ್ಲಿ ಭಾರಿ ಬಿರುಕುಗಳು ಉಂಟಾದದ್ದೇ ಭಾರತದ ದಾಳಿ ಹೀಗೇ ಮುಂದುವರಿದರೆ ತನ್ನ ಕಾದುವ ಸಾಮರ್ಥ್ಯ ಪೂರ್ಣವಾಗಿ ಕುಗ್ಗಿಹೊಗಬಹುದೆಂಬ ಕರಾಳ ಭವಿಷ್ಯವನ್ನು ಕಂಡ ಪಾಕಿಸ್ತಾನ ಕದನ ನಿಲುಗಡೆಗಾಗಿ ಮೊರೆಯಿಡುವ ಪ್ರಯತ್ನ ಆರಂಭಿಸಿತು. ತನ್ನ ಅಳಿದುಳಿದ ಆತ್ಮಾಭಿಮಾನದಿಂದಲೋ ಏನೋ ಕದನವಿರಾಮಕ್ಕಾಗಿ ಭಾರತದ ಮುಂದೆ ನೇರವಾಗಿ ಬೇಡಿಕೆ ಸಲ್ಲಿಸಲು ಹಿಂಜರಿದ ಪಾಕಿಸ್ತಾನ ಅಮೆರಿಕಾದ ಮೊರೆಹೋಯಿತು. ವರದಿಗಳ ಪ್ರಕಾರ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರನ್ನು ಸಂರ್ಪಸಿದ್ದು ಸೇನಾ ದಂಡನಾಯಕ ಜ. ಆಸಿಮ್ ಮುನೀರ್!
ಪಾಕಿಸ್ತಾನದ ಬೇಡಿಕೆಗೆ ಸ್ಪಂದಿಸಿದ ವ್ಯಾನ್ಸ್ ಪ್ರಧಾನಿ ಮೋದಿಯವರನ್ನು ಸಂರ್ಪಸಿ ಕದನವಿರಾಮದ ‘ಸಲಹೆ’ ನೀಡಿದ್ದು ಕೇವಲ ಪಾಕಿಸ್ತಾನದ ಹಿತವನ್ನು ಬಯಸಿ ಅಲ್ಲ, ತಮ್ಮ ದೇಶದ ಹಿತಾಸಕ್ತಿಯನ್ನೂ ಗಮನದಲ್ಲಿಟ್ಟುಕೊಂಡು. ಭಾರತದ ಬ್ರಹ್ಮೋಸ್ ಏಟಿಗೆ ನೂರ್ ಖಾನ್ ವಾಯುನೆಲೆಯಲ್ಲಿದ್ದ ಅಮೆರಿಕಾದ ಮರೀನ್ಗಳು, ವಾಯುಸೇನಾ ಅಧಿಕಾರಿಗಳು ಹಾಗೂ ಅಮೆರಿಕಾದ ಉಪಕರಣಗಳೂ ಬಲಿಯಾಗಿದ್ದವು. ಉಪಾಧ್ಯಕ್ಷರ ಸಲಹೆ ಅಥವಾ ವಿನಂತಿಗೆ ಭಾರತದ ಪ್ರತಿಕ್ರಿಯೆ ‘ಕದನವಿರಾಮಕ್ಕಾಗಿ ಬೇಡಿಕೆ ಪಾಕಿಸ್ತಾನದಿಂದಲೇ ಬರಬೇಕು’ ಎನ್ನುವುದಾಯಿತು. ಪರಿಣಾಮವಾಗಿ ಭಾರತವನ್ನೇ ನೇರವಾಗಿ ಸಂರ್ಪಸಬೇಕು ಎನ್ನವ ‘ಸಲಹೆ’ಯನ್ನು ಪಾಕಿಸ್ತಾನಕ್ಕೆ ನೀಡುವ ಒತ್ತಡಕ್ಕೆ ಅಮೆರಿಕಾ ಒಳಗಾಯಿತು ಮತ್ತು ಭಾರತದ ಮುಂದೆ ನೇರವಾಗಿ ಮಂಡಿಯೂರುವ ಒತ್ತಡಕ್ಕೆ ಪಾಕಿಸ್ತಾನ ಒಳಗಾಯಿತು. ಪರಿಣಾಮವಾಗಿ ಪಾಕಿಸ್ತಾನಿ ಸೇನೆಯ ಡಿಜಿಎಂಓ (ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕ) ಮೇ.ಜ. ಕಾಶಿಫ್ ಅಬ್ದುಲ್ಲಾ ಮೇ 10ರ ಬೆಳಗ್ಗೆ ಹತ್ತು ಗಂಟೆಯ ಸುಮಾರಿಗೆ ಭಾರತೀಯ ಸೇನೆಯ ಡಿಜಿಎಂಓ ಲೆ.ಜ. ರಾಜೀವ್ ಘಾಯ್ ಅವರನ್ನು ಸಂರ್ಪಸುವ ಪ್ರಯತ್ನ ಆರಂಭಿಸಿದರು. ಅದರಲ್ಲಿ ಅವರು ಕೊನೆಗೂ ಯಶಸ್ವಿಯಾದದ್ದು ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ. ‘ವಿಚಾರವಿನಿಮಯ’ಕ್ಕೆ ನಿಗದಿಯಾದ ಸಮಯ ಮಧ್ಯಾಹ್ನ 3:30 ಮತ್ತು ಅದು ಆರಂಭವಾದದ್ದು 3:35ಕ್ಕೆ. ಕದನವಿರಾಮದ ಪಾಕಿಸ್ತಾನಿ ಬೇಡಿಕೆಯನ್ನು ಒಪ್ಪಿ ಅದಕ್ಕಾಗಿ ಭಾರತ ನಿಗದಿಪಡಿಸಿದ ಸಮಯ ಸಂಜೆ ಐದು ಗಂಟೆ. ಅಲ್ಲಿಯವರೆಗೂ ಬೊಲಾಗಿ, ಪೇಷಾವರ್ ಸೇರಿದಂತೆ ಇನ್ನಷ್ಟು ಪಾಕಿಸ್ತಾನಿ ವಾಯುನೆಲೆಗಳ ಮೇಲೆ ಭಾರತದ ದಾಳಿ ಮುಂದುವರಿದೇ ಇತ್ತು!
ಅಷ್ಟೂ ಸಮಯ ಭಾರತ ಮತ್ತು ಅಮೆರಿಕಾಗಳ ನಡುವೆಯೂ ಸಂಪರ್ಕವಿದ್ದ ಸಾಧ್ಯತೆ ಇದ್ದೇ ಇದೆ. ಆದರೆ ಒಟ್ಟಾರೆಯಾಗಿ ನಾವು ಗಮನಿಸಬೇಕಾದ್ದೆಂದರೆ ಕಾರ್ಯಾಚರಣೆ ನಿಲ್ಲಿಸುವ ಬೇಡಿಕೆ ಬಂದದ್ದು ಪಾಕಿಸ್ತಾನದಿಂದ ಮತ್ತು ಅದಕ್ಕೆ ಸಮ್ಮತಿಸಿ ಕಾರ್ಯರೂಪಕ್ಕೆ ತರುವವರೆಗೂ ಭಾರತ ಯಾವುದೇ ಪ್ರತಿರೋಧದ ಭಯವಿಲ್ಲದೆ ಪಾಕಿಸ್ತಾನದ ಮೇಲೆ ದಾಳಿಯೆಸಗುತ್ತಲೇ ಇತ್ತು ಎನ್ನವುದನ್ನು ಆನಂತರ ಏಳೂವರೆಯ ನಂತರ ಪಾಕಿಸ್ತಾನ ಒಂದಷ್ಟು ಡ್ರೋನ್ಗಳನ್ನು ಇತ್ತ ಹಾರಿಸತೊಡಗಿದ್ದು ಚೀನಿ ಒತ್ತಾಯದಿಂದ. ರಾಜತಾಂತ್ರಿಕ ವಿಧಾನದಿಂದ ಚೀನಾವನ್ನು ಭಾರತ ಕಟ್ಟಿಹಾಕಿದ ಮೇಲೆ ಪಾಕಿಸ್ತಾನದ ಆ ತರಲೆ ನಿಂತುಹೋಯಿತು.
‘ನರೇಂದರ್ ಸರಂಡರ್’ ಎಂದು ಕೂಗುತ್ತಿರುವವರಿಗೆ ಇದೆಲ್ಲವೂ ಗೊತ್ತಿಲ್ಲದ ಸಾಧ್ಯತೆಯೇ ಇಲ್ಲ. ಹಾಗಿದ್ದೂ ಅವರು ಹಾಗೆ ಹೇಳುತ್ತಿರುವುದೇಕೆ? ದೇಶದೊಳಗೆ ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಮೋದಿಯವರನ್ನು ವಿರೋಧಿಸುವ ಇವರುಗಳು ಅದನ್ನು ವಿದೇಶ ಮತ್ತು ರಕ್ಷಣಾ ನೀತಿಗಳಿಗೂ ವಿಸ್ತರಿಸುತ್ತಿದ್ದಾರೆಯೇ? ಆದರೆ ತಮ್ಮ ಆ ವರ್ತನೆಯಿಂದ ದೇಶದ ಹಿತಕ್ಕೆ ಧಕ್ಕೆ ತರುತ್ತಿದ್ದೇನೆ, ದೇಶದ ರಕ್ಷಣಾಪಡೆಗಳನ್ನು ಅವಮಾನಿಸುತ್ತಿದ್ದೇವೆ ಎನ್ನವ ಅರಿವು ಇವರಿಗಿಲ್ಲವೇ?
ಇನ್ನು ಪಿಓಕೆಯನ್ನು ಮತ್ತೆ ವಶಕ್ಕೆ ತೆಗೆದುಕೊಳ್ಳುವ ಅವಕಾಶವನ್ನು ಪ್ರಧಾನಿ ಮೋದಿ ಕೈಬಿಟ್ಟರು ಎನ್ನುವ ಟೀಕೆಯತ್ತ ಹೊರಳೋಣ. ಪಿಓಕೆಯನ್ನು ನಾವು ನಮ್ಮದಾಗಿಸಿಕೊಳ್ಳೇಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಆ ಮಾತನ್ನು ತಕ್ಷಣಕ್ಕೆ ಈಡೇರಿಸಲಾಗದ ಸ್ಥಿತಿಯನ್ನು ಹಿಂದಿನ ಸರ್ಕಾರಗಳು ನಿರ್ವಿುಸಿಬಿಟ್ಟಿವೆ! ಮೊದಲಿಗೆ ಸೇನೆಯ ಸಲಹೆ ಮತ್ತು ವಿನಂತಿಯನ್ನು ಧಿಕ್ಕರಿಸಿ ಕಾಶ್ಮೀರದ ಒಂದು ದೊಡ್ಡ ಭಾಗವನ್ನು 1947-48ರಲ್ಲಿ ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟದ್ದೇ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಅದನ್ನೇ ಮುಂದುವರಿಸಿದ ನೆಹರು ಕಾಶ್ಮೀರದ ಇನ್ನಷ್ಟು ಪ್ರದೇಶಗಳನ್ನು ಬಿಟ್ಟುಕೊಡುವ ಒಪ್ಪಂದಕ್ಕೆ 60ರ ದಶಕದಲ್ಲಿ ಸಿದ್ಧರಾಗಿದ್ದರು. ಆ ಪ್ರಕಾರ ಶ್ರೀನಗರ ಭಾರತದಲ್ಲೇ ಉಳಿಯುವ, ವುಲಾರ್ ಸರೋವರ ಸೇರಿದಂತೆ ಪಶ್ಚಿಮ ಕಾಶ್ಮೀರ ಪಾಕಿಸ್ತಾನಕ್ಕೆ ಹೋಗುವ ಒಪಂದದ ಹತ್ತಿರಕ್ಕೆ ನೆಹರು ಮತ್ತು ಪಾಕಿಸ್ತಾನಿ ಅಧ್ಯಕ್ಷ ಇಸ್ಕಂದರ್ ಮಿರ್ಜಾ 1956-57ರಲ್ಲಿ ಬಂದಿದ್ದರು. ಆದರೆ ಆ ಬಗ್ಗೆ ಪಾಕಿಸ್ತಾನಿ ಸೇನೆಯಲ್ಲೇ ಅಸಮ್ಮತಿ ಮೂಡಿತು. ಜ. ಅಯೂಬ್ ಖಾನ್ ಕ್ಷಿಪ್ರಕ್ರಾಂತಿ ನಡೆಸಿ ಮಿರ್ಜಾರನ್ನು ಲಂಡನ್ಗೆ ಗಡೀಪಾರು ಮಾಡಿದ ಮೇಲೆ ಆ ಮಾತುಕಥೆಯೂ ನಿಂತುಹೋಯಿತು. ಆದರೆ ಅಂತಹದೇ ಮಾತುಕಥೆಯನ್ನು ಅದೇ ಅಯೂಬ್ ಖಾನ್ ಅದೇ ನೆಹರು ಜತೆ ನಡೆಸಿದ ಸೂಚನೆ 1963ರ ಫೆಬ್ರವರಿ 9ರಂದು ವಿದೇಶ ಮಂತ್ರಿ ಜುಲ್ಪಿಕಾರ್ ಆಲಿ ಭುಟ್ಟೋ ಅಮೆರಿಕಾದ ವಿದೇಶಾಂತ ಕಾರ್ಯದರ್ಶಿ ಡೀನ್ ರಸ್ಕ್ ಅವರಿಗೆ ಕಳುಹಿಸಿದ ಟೆಲಿಗ್ರಾಮ್ಲ್ಲಿ ಸಿಗುತ್ತದೆ.
ನಂತರದ ವರ್ಷಗಳಲ್ಲಿ ಚೀನಾ ಮತ್ತು ಪಾಕಿಸ್ತಾನಗಳ ನಡುವೆ ಮೈತ್ರಿಯೇರ್ಪಟ್ಟು ಎರಡೂ ದೇಶಗಳನ್ನು ಸಂರ್ಪಸುವ ಕಾರಾಕೊರಂ ರಸ್ತೆಯನ್ನು ಚೀನೀಯರು 1970ರ ದಶಕದ ಆದಿಭಾಗದಲ್ಲಿ ನಿರ್ವಿುಸಿದರು. ಅದೇ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಶಿಮ್ಲಾ ಒಪ್ಪಂದವಾಯಿತು. ಲಿಖಿತ ಒಪ್ಪಂದದ ಹೊರತು ಇಂದಿರಾ ಗಾಂಧಿ ಮತ್ತು ಭುಟ್ಟೋ ತೆಗೆದುಕೊಂಡ ತೀರ್ವನದ ಪ್ರಕಾರ ಎರಡೂ ದೇಶಗಳು ತಂತಮ್ಮ ಹತೋಟಿಯಿರುವ ಕಾಶ್ಮೀರದ ಭಾಗಗಳನ್ನು ತಮ್ಮೊಳಗೇ ಅಂತರ್ಗತಗೊಳಿಸಿಕೊಳ್ಳಬಹುದೆಂದಾಯಿತು. ಅಲ್ಲಿಗೆ ಪಿಓಕೆ ಮೇಲೆ ಪಾಕಿಸ್ತಾನದ ಹಕ್ಕು ಹಾಗೂ ಹಿಡಿತ ಇನ್ನಷ್ಟು ಬಲವಾಯಿತು. ನಂತರ, ಕಾಶ್ಮೀರವನ್ನು ಶಾಶ್ವತವಾಗಿ ಹಂಚಿಕೊಳ್ಳಲು ನೆಹರು ಪಾಕಿಸ್ತಾನಿ ನಾಯಕರೊಂದಿಗೆ 1956-57 ಹಾಗೂ 1963ರಲ್ಲಿ ನಡೆಸಿದಂಥ ಮಾತುಕಥೆಗಳು 1987ರಲ್ಲಿ ರಾಜೀವ್ ಗಾಂಧಿ ಮತ್ತು ಜಿಯಾ-ಉಲ್-ಹಕ್ ನಡುವೆ ನಡೆದವು. ಆದರೆ ಜಿಯಾ ಹತ್ಯೆಯಿಂದಾಗಿ ಅದೂ ಯಶಸ್ವಿಯಾಗಲಿಲ್ಲ. ಆದರೆ ಪಾಕಿಸ್ತಾನ ಪಿಓಕೆಯ ಮೇಲೆ ತನ್ನ ಹಿಡಿತವನ್ನು ಮತ್ತೂ ಬಿಗಿಯಾಗಿಸಿತು ಮತ್ತು ಅಲ್ಲಿ ಕಾನೂನುಪಾಲನೆಯ ‘ಗುತ್ತಿಗೆ’ಯನ್ನು ಚೀನಾಗೆ ನೀಡಿತು. ಆ ಪ್ರಕಾರ ಏಳುಸಾವಿರದಿಂದ ಹನ್ನೊಂದು ಸಾವಿರ ಚೀನೀ ಸೈನಿಕರು 2007ರಿಂದ ಗಿಲ್ಗಿಟ್-ಬಾಲ್ಟಿಸ್ತಾನ್ನಲ್ಲಿದ್ದಾರೆ.
ಇದಕ್ಕೆ ಯುಪಿಎ ಸರ್ಕಾರದ ಸಮ್ಮತಿಯೂ ಇರಬಹುದು ಎಂಬ ಅನುಮಾನ ಉಂಟುಮಾಡುವುದು 2008ರಲ್ಲಿ ಚೀನಿ ಕಮ್ಯೂನಿಸ್ಟ್ ಪಾರ್ಟಿಯ ಇಂಟರ್ನ್ಯಾಷನಲ್ ಲಿಯಾಸನ್ ಡಿಪಾರ್ಟ್ವೆುಂಟ್ ಮತ್ತು ಕಾಂಗ್ರೆಸ್ ನಡುವೆ ಆದ ಒಪ್ಪಂದ. ಹೀಗೆ ಪಿಓಕೆ ಮೇಲೆ ಪಾಕಿಸ್ತಾನದ್ದಷ್ಟೇ ಅಲ್ಲ ಚೀನಾದ ಹಿಡಿತವೂ ಬಲವಾಗುವಂತೆ ನಮ್ಮದೇ ಸರ್ಕಾರಗಳು ಮಾಡಿ ಪ್ರಸಕ್ತ ಸರ್ಕಾರದ ಕೈಗಳನ್ನು ಕಟ್ಟಿಹಾಕಿರುವಾಗ ಮೋದಿ ಏಕಾಏಕಿ ಆ ಪ್ರದೇಶವನ್ನು ವಶಕ್ಕೆ ತೆಗೆದುಕೊಳ್ಳಲಾದೀತೆ? ಅದಕ್ಕಾಗಿ ವ್ಯವಸ್ಥಿತ ಯೋಜನೆ ಬೇಡವೇ? ಒಟ್ಟಾರೆ ಮೋದಿ ಸರ್ಕಾರದ ಮೇಲೆ ಹೊರಿಸಲಾಗುತ್ತಿರುವ ಈ ಎರಡು ‘ಆಪಾದನೆ’ಗಳನ್ನು ಕೇಳಿದಾಗ ನನಗೆ ನೆನಪಾದದ್ದು ಕನ್ನಡಿಗರೆಲ್ಲರಿಗೂ ಗೊತ್ತಿರುವ ಪುರಂದರದಾಸರ ಅತಿ ಪ್ರಸಿದ್ಧ ರಚನೆ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)