ಇದು ಕಾಲ್ಗಾ-ಪುಲ್ಗಾ...
ಏನಿದೆ ಇಲ್ಲಿ ಎಂದು ಕೇಳಿದರೆ ಏನೂ ಇಲ್ಲ, ಅಷ್ಟಾ್ಯಕೆ ಇತ್ತೀಚಿನವರೆಗೆ ಕರೆಂಟ್ ಎಂದರೆ ಕೆಳಗೆ ಹೋಗಿ ಎನ್ನುವ ಮಟ್ಟಿಗೆ ಜನ, ಎಲ್ಲ ಬಿಟ್ಟು ಬದುಕಿದ್ದ ಜಾಗ ಈಗ ತನ್ನ ಮೌನಕ್ಕೇ ಪ್ರಸಿದ್ಧಿ. ಆದರೆ ಇದು ಎಷ್ಟು ಕಾಲ ಉಳಿಯಲಿದೆ ಎಂಬುದು ಪ್ರಶ್ನೆ. ಏಕೆಂದರೆ, ಕಾಲ್ಗಾ-ಪುಲ್ಗಾ ಪ್ರಸಿದ್ಧಿಗೆ ಬರುತ್ತಿದ್ದಂತೆ ಇಲ್ಲಿ ಪ್ಲಾಸ್ಟಿಕ್ಕು, ಧೂಮಪಾನ ಹಾವಳಿ ಆರಂಭವಾಗಿದೆ.
ಸರಿ ಹೊತ್ತಿಗೆ ಸ್ವಿಚ್ ಅದುಮಿದರೆ ಕರೆಂಟೂ ಇಲ್ಲ. ತಡವಾಗಿಬಿಟ್ಟಿದೆ ಊಟಕ್ಕೆ ಹೋಟೆಲಿದೆಯಾ ಅದೂ ಇಲ್ಲ. ಕೂಗಿದರೆ ಜನವೂ ಇಲ್ಲದ ಈ ನೆಲ ದೇವಭೂಮಿ ಹಿಮಾಚಲದ ಅಗಾಧ ಪರ್ವತದ ಬೆಟ್ಟದ ಅಡಿಯಲ್ಲಿ ನಿರುಮ್ಮಳವಾಗಿ ಹರಡಿಕೊಂಡಿದೆ. ಶತಮಾನಗಳಿಂದ ಸುಲಭಕ್ಕೆ ಕಣ್ಣಿಗೇ ಬೀಳದಿದ್ದ ಈ ಅವಳಿ ಊರುಗಳು ಕೀರಗಂಗಾ ಟ್ರೇಲ್ಗೆ ಹೊರಡುವ ಚಾರಣಿಗರ ಕಾರಣ ಕ್ರಮೇಣ ಗೂಗಲ್ ಸೇರಿ ಈಗ ಎಲ್ಲೆಡೆಯಿಂದ ಜನ ದಾಂಗುಡಿಯಿಡುತ್ತಿದ್ದಾರೆ. ಊರು ಬದಲಾಗುತ್ತಿದೆ. ಮನೆಗಳು ಬಣ್ಣ ಕಾಣುತ್ತಿವೆ, ಹಂತ ಹಂತವಾಗಿ ಎರಡೆರಡು ಮಹಡಿಯ ದೇವದಾರು ಮರಗಳ ಮನೆಗಳು ಎದ್ದು ನಿಲ್ಲುತ್ತಿವೆ. ಇರುವ ಮನೆಗಳೆಲ್ಲ ಒಂದೇ ಕೋಣೆಯಲ್ಲಿ ಬೆಚ್ಚನೆಯ ದಿರಿಸು, ಹಾಸಿಗೆ ಎರಡನ್ನೂ ಒದಗಿಸಿ ಚೆಂದನೆಯ ಕುಟುಂಬ ವಾತಾವರಣದ ಅನುಭವ ನೀಡಲು ಪೇಯಿಂಗ್ ಗೆಸ್ಟ್ಗಳಿಗೆ ಕಾಯುತ್ತ ನಿಂತಿವೆ.
ದೇಶದಲ್ಲಿ ಏನು ನಡೆಯುತ್ತಿದೆ ಎಂದರೆ ನೋಡಲು ಟಿ.ವಿ. ಮೊದಲೇ ಇಲ್ಲ. ವೆಬ್ ಸೀರೀಸ್ ನೋಡೊಕೆ ಸಿಗ್ನಲ್ಲೇ ಇಲ್ಲ. ‘ಆಯ್ತು ಇದೆಲ್ಲ ಬೇಡಾ ಬಂದು ಉಳಿಯುತ್ತೇನೆ ಜಾಗ ಕೊಡಿ’ ಎಂದರೆ, ‘ಸದ್ಯಕ್ಕೆ ಅದೂ ಇಲ್ಲ. ಮುಂದಿನ ತಿಂಗಳವರೆಗೆ ಬುಕಿಂಗ್ ಇದೆ’ ಎನ್ನುವ ಮಾತು ಬರುತ್ತದೆ. ಸರಿ ಹಾಗಾದರೆ ಬೇರೆನಿದೆ ಇಲ್ಲಿ? ಏನೂ ಇಲ್ಲ. ಎರಡು ತೀರಾತೀ ತೀರ ಶಾಂತವಾದ ಅವಳಿ ಊರುಗಳು, ತಮ್ಮನ್ನು ಬಳಸಿ ನಿಂತಿರುವ ಪರ್ವತಗಳಿಂದ ಜಗತ್ತಿನ ಇತರ ರಗಳೆಗಳಿಂದ ಮುಕ್ತವಾಗಿ ಉಳಿದುಬಿಟ್ಟಿವೆ. ಅದಕ್ಕಾಗೇ ಜನ ಯಾರನ್ನೂ ಹೇಳದೆ ಕೇಳದೆ ಇಲ್ಲಿಗೆ ಲಗೇಜ್ ಸಮೇತ ಹೊರಟು ಬಂದು ಬಿಡುತ್ತಿದ್ದಾರೆ. ಏನೂ ಇಲ್ಲದಿದ್ದರೆ ಕಡೆಗೆ ಕೈ, ಕಾಲಿಗೆ ಅಡರುವ ಸೇಬಿನ ತೋಟದ ಅರೆಗೆ ತಮ್ಮದೊಂದು ಟೆಂಟು ಹಾಕಿಕೊಂಡು ಕಾಲು ಚಾಚಿ ಕೂತುಬಿಡುತ್ತಾರೆ. ಅಗಾಧ ಹುಲ್ಲುಗಾವಲು ಮತ್ತು ಪರ್ವತಗಳ ಬುಡಕ್ಕೆ ಟೆಂಟುಗಳ ಸರಣಿ ಹೆಚ್ಚುತ್ತಿದೆ.
ದೇಶಿಯರಿಗಿಂತ ಇಂತಹದ್ದನ್ನೆಲ್ಲ ಇದ್ದಂತೆ ಅನುಭವಿಸಿ ಅಷ್ಟೇ ನಿರುಮ್ಮಳವಾಗಿ ಮಾತುಕಥೆಯಿಲ್ಲದೆ ಮೌನವಾಗಿ ಎದ್ದು ಹೋಗಿ ಬಿಡುವ ವಿದೇಶಿಯರು ಇದನ್ನು ಹೆಚ್ಚು ಇಷ್ಟಪಡತೊಡಗಿದ್ದಾರೆ. ಕಾರಣ ಅವರ ಬೇಡಿಕೆಗಳು ಕಡಿಮೆ ಮತ್ತು ಲಗೇಜು ಇರುವುದೇ ಇಲ್ಲ. ಇದ್ದವರು ಅದನ್ನೆಲ್ಲ ಹೊತ್ತು ಬೆಟ್ಟ ಹತ್ತುವುದಾಗುವುದಿಲ್ಲ. ಅದಕ್ಕೆ ಭಾರತೀಯ ಪ್ರವಾಸಿಗರಿಗೆ ಪೊರ್ಟರು, ಹೆಲ್ಪರು ಇತ್ಯಾದಿ ಸೇರಿಕೊಳ್ಳುತ್ತ ದಾರಿ ಮತ್ತು ಅವಳಿ ಊರು ಎರಡೂ ಕೊಂಚ ಕೊಂಚವಾಗಿ ನೆಮ್ಮದಿ ಕಳೆದುಕೊಳ್ಳತೊಡಗಿವೆ.
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಪಾರ್ವತಿ ವ್ಯಾಲಿ ಕೊನೆಯ ತುದಿಯಿಂದ, ಈಚೆಗಿನ ಕಣಿವೆಗೆ ಉರುಳಿ ಬೀಳಲಿರುವ ಊರಿನಂತಿರುವ ಬರಶೈಣಿ ಇಂತಹದ್ದಕ್ಕೆಲ್ಲ ಹೇಳಿ ಮಾಡಿಸಿದ ಹೆಡ್ಕ್ವಾರ್ಟರು. ದೊಡ್ಡ ಊರೇನಲ್ಲ. ಆದರೆ ಈ ಬರಶೈಣಿಗೆ ಬುಂಥರ್ ಅಥವಾ ಮಂಡಿ ಜಿಲ್ಲೆಯ ಯಾವುದೇ ಪ್ರದೇಶದಿಂದ ವಾಹನ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ಬೇಕೆಂದರೆ ಮ್ಯಾಗಿ ಮತ್ತು ಬ್ರೆಡ್ ಆಮ್ಲೇಟ್, ಚಹಾಕ್ಕೆ ಹೋಟೆಲಿವೆ, ಬಾಡಿಗೆ ಬೈಕಿನವರು ಕಾದು ನಿಂತಿರುತ್ತಾರೆ. ಉಳಿದೆಲ್ಲಕ್ಕಿಂತ ಮಿಗಿಲು ಇಲ್ಲಿ ಮಾನವ ಶಕ್ತಿಯ ಅಗಾಧ ಲಭ್ಯತೆ ಅಗ್ಗವಾಗಿ, ನೈಸರ್ಗಿಕ ಶಕ್ತಿಯ ಅಗಾಧತೆ ಗೋಚರವಾಗುತ್ತದೆ. ಹಾಗಾಗಿ ಇದು ಉಳಿದ ಚಾರಣ ಪ್ರವಾಸಕ್ಕೆ ಈ ಭಾಗದಲ್ಲಿ ಹೆಡ್ಕ್ವಾರ್ಟರು.
ಇದಕ್ಕಿಂತ ದೊಡ್ಡ ಊರು ಬೇಕೆಂದರೆ ಇದಕ್ಕೂ ಹದಿನಾಲ್ಕು ಕಿ.ಮೀ. ಮೊದಲೇ ಸಿಗುವ ಕಾಸೋಲ್ ಒಂದು ಬಗೆಯಲ್ಲಿ ರಾಜಧಾನಿ ಇದ್ದಂತೆ. ಉಳಿದಂತೆ ಕಾಲ್ಗಾ ಬರಶೈಣಿಯಿಂದ ಕೇವಲ ನಾಲ್ಕು-ಐದು ಕಿ.ಮೀ. ದೂರದ ದಾರಿ. ಸೇಬು ಮತ್ತು ಪೈನ್ವೃಕ್ಷಗಳ ಮಧ್ಯೆ ಹಾವು ಹೆಣೆದಂತೆ ಸಾಗುತ್ತ ಅಚಾನಕ್ ಆಗಿ ತೆರೆದುಕೊಳ್ಳುವ ಕಣಿವೆಯ ಮೇಲ್ಭಾಗಕ್ಕೆ ಎದುರುಗೊಳ್ಳುವ ಹಸಿರು ಹಳ್ಳಿ ಅಪ್ಪಟ ಸೇಬಿನ ತೋಟಗಳ ನಾಡು. ಚಿಕ್ಕಚಿಕ್ಕ ನಾಜೂಕು ಸೇಬಿನ ಮರಗಳ ಅಗಾಧ ತೋಟದ ಸುತ್ತ ಹಚ್ಚ ಹಸಿರು ಪರ್ವತ ಮತ್ತು ಅದರ ಅಡಿಗೆ ಹೊಂದಿಕೊಂಡ ಬಣ್ಣಬಣ್ಣದ ಮನೆಗಳು ಕಾಲ್ಗಾದ ಕಂಪನ್ನು ಹೆಚ್ಚಿಸುತ್ತವೆ.
ಬರಶೈಣಿಯಿಂದ ಹೊರಬಂದು ತೋಷ್ ಎನ್ನುವ ಹಳ್ಳಿಯ ಬಲ ಮಗ್ಗುಲಿನಿಂದ ಹಾಯ್ದು ಹೋಗುವಾಗ ಕಾಲ್ಗಾದ ಎತ್ತರದ ಅಂದಾಜು ಅರಿವಾಗುತ್ತದೆ. ಸರಿಸುಮಾರು ಐನೂರು ರೂಪಾಯಿಯಿಂದ ಸಾವಿರದವರೆಗೆ ಹೋಮ್್ಟೇ ಮಾದರಿಯ ಆತಿಥ್ಯ ಲಭ್ಯ. ಇದು ಊಟ, ಉಪಾಹಾರ, ಚಹಾ ಮತ್ತು ರೊಟ್ಟಿಯ ಪ್ಯಾಕೇಜು. ಅಲ್ಲಿ ಲಭ್ಯ ಇರೋದಷ್ಟೇ ಮೆನು. ಮತ್ತೇನು ಇದೆಯಾ ಎಂದು ಕೇಳುವಂತಿಲ್ಲ. ಉಳಿದಂತೆ ಆಯಾ ವಸತಿಯ ಮನೆಗಳವರು ನೀಡುವ ಸೌಲಭ್ಯ, ನೀವು ಮಾತಾಡುವ, ವ್ಯವಹರಿಸುವ ಕೌಶಲ್ಯದಿಂದ ದರ ನಿಗದಿಯಾಗುತ್ತದೆ. ಎಲ್ಲ ಮನೆಗಳಲ್ಲೂ ಕಾಮನ್ಬೆಡ್ ವ್ಯವಸ್ಥೆ ಇದ್ದು ಅಲ್ಲೊಂದಿಲ್ಲೊಂದು ಖಾಸಗಿ ರೂಮುಗಳೂ ಈಗೀಗ ಸಿದ್ಧವಾಗಿವೆ. ಯಾವ ಕಡೆಯಿಂದ ಊರು ಪ್ರವೇಶಿಸಿದರೂ ಮುಖ್ಯ ಬಂದು ನಿಲ್ಲುವುದು ತೋಟದೆದುರಿನ ಆಕಾಶದೆತ್ತರಕ್ಕೆ ಮುಖ ಮಾಡಿದ ಹಸಿರು ಪರ್ವತ ಮತ್ತು ಹುಲ್ಲುಗಾವಲಿಗೆ.
ಕಾಲ್ಗಾದಿಂದ ಮತ್ತೊಂದು ಗಂಟೆಯ ಚಾರಣದ ದಾರಿ ಪುಲ್ಗಾಕ್ಕೆ ಮುಟ್ಟಿಸುತ್ತದೆ. ಅಲ್ಲಿಂದಲೇ ಅಡ್ಡ ದಾರಿ ತುಳಿದು ನಾಲ್ಕೈದು ಕಿ.ಮೀ. ಮೇಲಕ್ಕೆ ಏರುವುದಾರೆ ಇನ್ನಷ್ಟು ಚಳಿಗಾಳಿಯ ತುಲ್ಗಾ ಎಂಬ ಇನ್ನೊಂದು ಊರು ಕೂಡ ಸಿಗುತ್ತದೆ. ಅದು ಏರುಮುಖ ದಾರಿಯಾಗಿದ್ದು ಕ್ರಮಿಸುವಿಕೆ ಉತ್ಸಾಹವನ್ನು ಸ್ವಲ್ಪ ಕುಂದಿಸುತ್ತದೆ. ಅದಕ್ಕೂ ಇದಕ್ಕೂ ವ್ಯತ್ಯಾಸವಿಲ್ಲ. ಇನ್ನು ಅವಳಿ ಊರಾದ ಕಾಲ್ಗಾ ಪಕ್ಕದ ಪುಲ್ಗಾ ಕೂಡ ಇದರ ವಿವರಣೆಗಿಂತ ಹೊರತಾಗಿಲ್ಲ. ಮನೆ ಮತ್ತು ಜನಗಳು ಬದಲಾಗುತ್ತಾರೆ. ಆದರೆ ಪರಿಸರ ಥೇಟ್ ಪಡಿಯಚ್ಚು.
ಅದೇ ಸೇಬಿನ ತೋಟ, ಬಣ್ಣದ ಕಟ್ಟಿಗೆಯ ಮನೆಗಳು, ಸಹಜ ವಾಸದ ವ್ಯವಸ್ಥೆ, ಅತ್ಯುತ್ತಮ ಪರಿಸರದ ಜೊತೆಗೆ ಸುಲಭಕ್ಕೆ ತಲುಪಲು ಸಾಧ್ಯವಾಗದ ಪರಿಸ್ಥಿತಿ ಕಾಲ್ಗ-ಪುಲ್ಗಾವನ್ನು ಶುದ್ಧವಾಗಿ ಇರಿಸಿದೆ ಎಂದರೆ ತಪ್ಪಿಲ್ಲ. ಬರಶೈಣಿಗೆ ಮುಕ್ತಾಯವಾಗುವ ರಸ್ತೆ ಸೌಲಭ್ಯ ನಂತರ ಕಾಲ್ಗದಿಂದ ತುಲ್ಗಾವರೆಗೂ ಕಾಲ್ದಾರಿಯೇ. ಯಾವ ಕಾರಣಕ್ಕೂ ಇದನ್ನು ರಸ್ತೆಯನ್ನಾಗಿ ಪರಿವರ್ತಿಸುವ ಸಾಧ್ಯತೆಯೂ ಇಲ್ಲ ಎನ್ನಿಸುವಷ್ಟು ಪರ್ವತದ ಸೆರಗಿನ ಮತ್ತು ಕಣಿವೆ ಕೊರಕಲಿನಲ್ಲಿ ಹಾಯ್ದು ಹೋಗುತ್ತದೆ. ಆದರೆ ತುಲ್ಗಾ ಮಾತ್ರ ಅಪ್ಪಟ ಏರು ಪರ್ವತದ ಕಡಿದಾದ ಕಾಲುದಾರಿ, ನೇರ ಚಾರಣಿಗರಿಗೆ ಮಾತ್ರ ಅದು. (ಚಳಿಗಾಲದಲ್ಲಿ ಹಿಮ ಹೊತ್ತು ನಿಲ್ಲುವ ಇದರ ಕತೆಯೇ ಬೇರೆ)
ಇದೆಲ್ಲದರ ಜೊತೆಗೆ ಸಿಗರೇಟು, ಬೀಡಿಗಳನ್ನು ಬಿಡಿ, ಈಗೀಗ ಚಾರಣ, ಪ್ರವಾಸ ಎಂದರೆ ರಾತ್ರಿಗೆ ಕಡ್ಡಾಯ ಇರಲೇ ಬೇಕೆನ್ನಿಸುವ ಯಾವ ವ್ಯಸನಕಾರಕಗಳು ಇಲ್ಲಿ ಲಭ್ಯವಿಲ್ಲ. ಸ್ಥಳೀಯರೂ ನವಿರಾಗಿ ಈ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸುತ್ತಾರೆ. ಎಷ್ಟೇ ದುಡ್ಡು ಕೊಡುತ್ತೇನೆಂದರೂ ತಂದು ಕೊಡುವ ಸುಲಭದ ದಂಧೆಗಿಳಿದದ್ದೂ ಇಲ್ಲ ಇಲ್ಲಿಯವರೆಗೂ. ಹಾಗಾಗಿ ಸ್ಥಳ ಮತ್ತು ಪರಿಸರ ಎರಡೂ ವಿಭಿನ್ನ ಎನ್ನಿಸುತ್ತದೆ. ಆದರೆ ಪ್ಲಾಸ್ಟಿಕು, ತಾವೇ ಒಯ್ಯುವ ಮದ್ಯ, ಸಿಗರೇಟುಗಳಿಂದ ಕೆಲವರು ಗಲಿಬಿಲಿ ಉಂಟು ಮಾಡುತ್ತಿದ್ದು ಅಲ್ಲಲ್ಲಿ ಮನಸ್ತಾಪಕ್ಕೂ ಕಾರಣವಾಗಿದ್ದಿದೆ. ಪ್ರವಾಸಿಗರಾಗಿ ಕೆಲವನ್ನು ನಾವಾಗೇ ರೂಢಿಸಿಕೊಂಡ ನಮ್ಮ ಅಶಿಸ್ತು ನಮ್ಮದೇ ನಷ್ಟಕ್ಕೆ ಕಾರಣವಾಗುತ್ತಿರುವ ಉದಾಹರಣೆ ಇದು.
ಕಾಲ್ಗಾ-ಪುಲ್ಗಾ ಎಂದಿನಂತೆ ಸ್ವಚ್ಛ ಮತ್ತು ಚೆಂದದ ಪರಿಸರವಾಗಿ ಉಳಿಯಬೇಕೆಂದರೆ ಇದ್ದಂತೆ ಇರುವುದಕ್ಕೆ ಬಿಟ್ಟರೆ ಮಾತ್ರ ಸಾಧ್ಯ. ಆದರೆ ನಮ್ಮಲ್ಲಿ ಪ್ರವಾಸ ಎನ್ನುವುದರ ಪರಿಕಲ್ಪನೆ ಎಂದರೆನೇ ಬರೀ ಮಜಾ, ಬಿಯರು, ಕಿವಿಗಡಚಿಕ್ಕುವ, ಎದೆಬಡಿತ ನಿಲ್ಲುವಂತಹ ಮ್ಯೂಸಿಕ್ಕಿನ ಮೋಜು ಎಂಬರ್ಥದಲ್ಲೇ ತಂಡಗಳು ಹೊರಡುತ್ತಿರುವ ಕಾಲದಲ್ಲಿ ಪ್ರವಾಸದ ಪರಿಕಲ್ಪನೆಯೇ ಹಾಳಾಗುತ್ತಿದೆ. ಕಾಲ್ಗಾ ಪುಲ್ಗಾ ಸದ್ಯಕ್ಕೆ ನೆಮ್ಮದಿಯಾಗಿವೆ. ಅಂದಹಾಗೆ ಅಲೆಮಾರಿಗೆ ಮಾತ್ರ ದಕ್ಕಬಹುದಾದ ತುಲ್ಗಾ ಮೇಲ್ಗಡೆ ಇನ್ನೂ ಅದ್ಭುತ ಇವೆ ಪರ್ವತ ಪ್ರದೇಶದಲ್ಲಿ. (ಲೇಖಕರು ಕತೆಗಾರರು)