ಅಂಕಣ

ದೇಶದ ಸಂಪನ್ಮೂಲ ರಕ್ಷಣೆಗೆ ದಿಟ್ಟ ಹೆಜ್ಜೆ ಉಮ್ಮೀದ್

(ಲೇಖಕರು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಖಾತೆ ಸಚಿವರು)

ವಕ್ಪ್ ತಿದ್ದುಪಡಿ ಮಸೂದೆ 2025ರ ‘ಉಮ್ಮೀದ್’ ಒಂದು ಧರ್ಮದ ವಿರುದ್ಧವಾಗಿರದೆ, ದೇಶದ ಸಾರ್ವಜನಿಕ ಸಂಪನ್ಮೂಲಗಳ ಸಂರಕ್ಷಣೆಗಾಗಿ ತೊಟ್ಟ ಪಣವಾಗಿದೆ. ವಕ್ಪ್​ನಲ್ಲಿ ಪಾರದರ್ಶಕತೆ ಜತೆಗೆ ಧಾರ್ವಿುಕ ಸಿದ್ಧಾಂತವನ್ನೂ ಗೌರವಿಸುತ್ತ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುತ್ತದೆ. ‘ವೈವಿಧ್ಯತೆಯಲ್ಲಿ ಏಕತೆ’ ಎಂಬ ಭಾರತದ ವಿಶಿಷ್ಟ ಧ್ಯೇಯದಂತೆ ಒಂದು ಸಮುದಾಯದ ಒಳಗಿನ ವೈವಿಧ್ಯತೆಯನ್ನು ಗೌರವಿಸುತ್ತದೆ. ಹಾಗಾಗಿಯೇ ಇದಕ್ಕೆ ಸರ್ವ ಭಾರತೀಯರೂ ಮನ್ನಣೆ-ಗೌರವ ತೋರಿದ್ದಾರೆ. ಲೋಕಸಭೆ-ರಾಜ್ಯಸಭೆಯಲ್ಲಿ ಬಿಲ್ ಪಾಸ್ ಆಗುತ್ತಲೇ ಸ್ವತಃ ಮುಸ್ಲಿಂ ಮಹಿಳೆಯರೇ ಸಂಭ್ರಮಿಸಿ ಉಮ್ಮೀದ್ ಅನ್ನು ಒಪ್ಪಿಕೊಂಡಿದ್ದಾರೆ.

ಈವರೆಗೂ ಭಾರತೀಯ ಸಂವಿಧಾನ, ನ್ಯಾಯಾಂಗ ವ್ಯವಸ್ಥೆಯಿಂದ ಅಂತರ ಕಾಯ್ದುಕೊಂಡಿದ್ದ ವಕ್ಪ್ ಮಂಡಳಿ ಆಡಳಿತದಲ್ಲಿ ಪಾರದರ್ಶಕತೆ ಕೊರತೆ ಬಹುದೊಡ್ಡ ಸಮಸ್ಯೆಯಾಗಿತ್ತು. ಇತ್ತೀಚಿನ ದಿನಗಳಲ್ಲಿ ಬಲಾಢ್ಯರಿಂದ ವಕ್ಪ್ ಆಸ್ತಿ ಕಬಳಿಕೆ, ದುರ್ಬಳಕೆ ಬಹುವಾಗಿತ್ತು. ಇನ್ನೊಂದೆಡೆ ವಕ್ಪ್ ಸಹ ಮಿತಿಮೀರಿದ ವಿವಾದ, ದೂರುಗಳನ್ನು ಸೃಷ್ಟಿಸಿತ್ತು. ದೇಶ ಮತ್ತು ಸಮಾಜದ ಹಿತದೃಷ್ಟಿಯಿಂದ ಇದಕ್ಕೆಲ್ಲ ಮೂಗುದಾರ ಹಾಕುವ ಅಗತ್ಯ-ಅನಿವಾರ್ಯತೆ ಎದುರಾಗಿ ಉಮ್ಮೀದ್ ಜಾರಿಗೊಂಡಿದೆ. ಒಂದೇ ಒಂದು ಸಮುದಾಯ ಮತ್ತು ಧರ್ಮಕ್ಕೆ ಅನ್ವಯಿಸುವಂತಹ ವಕ್ಪ್ ಕಾಯ್ದೆ ಜಗತ್ತಿನ ಯಾವ ಮುಸ್ಲಿಂ ರಾಷ್ಟ್ರಗಳಲ್ಲೂ ಇಲ್ಲ. ಪಾಕಿಸ್ತಾನ, ಸೌದಿ ಅರೇಬಿಯಾ, ಈಜಿಪ್ಟ್, ಕುವೈತ್, ಒಮಾನ್, ಬಾಂಗ್ಲಾದೇಶ, ಟರ್ಕಿಯಲ್ಲಿ ವಕ್ಪ್ ನಿರ್ವಹಣೆ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ಲೇಷಣೆಗೆ ಒಳಪಡಿಸಿದ್ದು, ಎಲ್ಲೆಡೆ ವಕ್ಪ್ ಆಸ್ತಿಗಳನ್ನು ಸರ್ಕಾರದ ಕಾನೂನಿನ್ವಯವೇ ನಿರ್ವಹಿಸಲಾಗುತ್ತಿದೆ. ಆದರೆ, ಭಾರತದಲ್ಲಿ ಮಾತ್ರ ವ್ಯತಿರಿಕ್ತವಾಗಿದೆ. ಹೀಗಾಗಿ ವಸಾಹತುಶಾಹಿ ವಕ್ಪ್ ಶಾಸನ ರದ್ದತಿ ತುರ್ತು ಅಗತ್ಯವಾಗಿತ್ತು.

ಭಾರತ ಜಾತ್ಯತೀತ ರಾಷ್ಟ್ರ ನಿಜ. ಆದರೆ, ಈ ದೇಶದ ಸಂವಿಧಾನ ಮತ್ತು ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ಪ್ರತಿಪಾದಿಸಲು ವಕ್ಪ್ ಅನ್ನು ಭಾರತೀಯ ನೆಲದ ಕಾನೂನು ಚೌಕಟ್ಟಿನೊಳಗೆ ತರಬೇಕಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರ ‘ಉಮ್ಮೀದ್’ ಜಾರಿಗೊಳಿಸುವ ಮೂಲಕ ಅದನ್ನು ಸಾಕಾರಗೊಳಿಸಿದೆ. ವಕ್ಪ್ ಕಾಯ್ದೆಯ ನ್ಯೂನತೆಗಳನ್ನು ನಿವಾರಿಸಿ ವಕ್ಪ್ ವ್ಯಾಖ್ಯಾನಕ್ಕೆ ‘ಉಮ್ಮೀದ್’ ಎಂಬ ಹೊಸ ಸ್ಪರ್ಶ ನೀಡಿದೆ. ವಕ್ಪ್ ಕಾಯ್ದೆ ತಿದ್ದುಪಡಿ ಮಸೂದೆ ರೂಪಿಸುವ ಮುನ್ನ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಸಾಕಷ್ಟು ಬಾರಿ ಸಮಾಲೋಚನೆ ನಡೆಸಿದೆ. ರಾಜ್ಯ ವಕ್ಪ್ ಮಂಡಳಿಗಳು ಮಾತ್ರವಲ್ಲದೆ ಮುಸ್ಲಿಂ ಸಮುದಾಯದ ಶ್ರೀಸಾಮಾನ್ಯರ ಜತೆಗೂ ರ್ಚಚಿಸಿದೆ. ವಕ್ಪ್ ಕಾಯ್ದೆ, ಅಧಿಕಾರ ಹೇಗೆ ದುರ್ಬಳಕೆ ಆಗುತ್ತಿದೆ? ಬಲಾಢ್ಯರು ಯಾವ ಯಾವ ರೀತಿ ವಕ್ಪ್ ಆಸ್ತಿ ಕಬಳಿಸುತ್ತಿದ್ದಾರೆ? ವಕ್ಪ್ ಸಹ ತನ್ನ ಆಸ್ತಿ ನಿರ್ವಹಣೆಯಲ್ಲಿ ಹೇಗೆ ಲೋಪವೆಸಗುತ್ತಿದೆ? ಎಂಬುದರ ಕುರಿತು ಜನಪ್ರತಿನಿಧಿಗಳು, ಮಾಧ್ಯಮ ಮತ್ತು ಕಾನೂನು ತಜ್ಞರ ಅಭಿಪ್ರಾಯ ಎಲ್ಲವನ್ನೂ ಪರಿಗಣಿಸಿಯೇ ‘ಉಮ್ಮೀದ್’ ಜಾರಿಗೆ ತರಲಾಗಿದೆ.

ಭಾರತದಲ್ಲಿ ಬ್ರಿಟಿಷ್ ಕಾಲದಿಂದಲೂ ವಕ್ಪ್ ಆಸ್ತಿಗಳೆಂದು ಘೊಷಿಸಲಾದ ಸರ್ಕಾರಿ ಭೂಮಿಗಳ ಬಗ್ಗೆಯೂ ವಿವಾದಗಳಿದ್ದು, ಇದಕ್ಕೆ ಪರಿಹಾರ ಎನ್ನುವಂತೆ ಜಾರಿ ಬಂದಿರುವ ಉಮ್ಮೀದ್ ಅನ್ವಯ ಆಸ್ತಿ ಸಮೀಕ್ಷೆ ಅಧಿಕಾರವನ್ನು ಕಲೆಕ್ಟರ್, ಉಪ ಕಲೆಕ್ಟರ್ ಮಟ್ಟದ ಅಧಿಕಾರಿಗಳಿಗೆ ವರ್ಗಾಯಿಸುತ್ತದೆ. ವಿವಾದಗಳು ಎದುರಾದಲ್ಲಿ ವಕ್ಪ್ ಟ್ರಿಬ್ಯೂನಲ್​ನಿಂದ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲೂ ಅವಕಾಶವಾಗಿ ಪ್ರಕರಣಗಳು ಶೀಘ್ರ ಇತ್ಯರ್ಥವಾಗುತ್ತವೆ. ವಕ್ಪ್​ನಲ್ಲಿ ಸೆಕ್ಷನ್ 40 ರದ್ದುಪಡಿಸಿ, ಏಕಪಕ್ಷೀಯ ಅಧಿಕಾರಕ್ಕೆ ಅಂತ್ಯ ಹಾಡಿ ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ. ಸರ್ಕಾರಗಳಿಂದಲೇ ವಕ್ಪ್ ಆಸ್ತಿ ಆಡಿಟ್ ಕಡ್ಡಾಯಗೊಳಿಸಿ ಆರ್ಥಿಕ ಪಾರದರ್ಶಕತೆ ತರುತ್ತದೆ. ಕೇಂದ್ರ ಮತ್ತು ರಾಜ್ಯ ವಕ್ಪ್ ಮಂಡಳಿಗಳಲ್ಲಿ ಕನಿಷ್ಠ ಇಬ್ಬರು ಮುಸ್ಲಿಮೇತರ ಸದಸ್ಯರು ಹಾಗೂ ಮಹಿಳಾ ಸದಸ್ಯರ ಸೇರ್ಪಡೆ ಕಡ್ಡಾಯಗೊಳಿಸಿ ಮುಸ್ಲಿಂ ಸಮುದಾಯದಲ್ಲಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುತ್ತದೆ.

ವಕ್ಪ್ ಆಡಳಿತದಲ್ಲಿ ಬಲಾಢ್ಯರ ಹಸ್ತಕ್ಷೇಪವನ್ನು ಕೊನೆಗಾಣಿಸಿ ಎಲ್ಲ ವರ್ಗಗಳ ದುರ್ಬಲರಿಗೂ ಅವಕಾಶ ಕಲ್ಪಿಸುತ್ತದೆ. ಶಿಯಾ, ಸುನ್ನಿ, ಬೋಹ್ರಾ, ಆಗಾಖಾನಿ ಮುಂತಾದ ಉಪ ವರ್ಗಗಳ ಪ್ರತಿನಿಧಿತ್ವದೊಂದಿಗೆ ಮುಸ್ಲಿಂ ಸಮುದಾಯದೊಳಗಿನ ವೈವಿಧ್ಯತೆಯನ್ನು ಗೌರವಿಸಿದೆ. ಹೀಗೆ ವಕ್ಪ್ ಮಂಡಳಿಗಳ ದಕ್ಷತೆ ಹೆಚ್ಚಿಸುವ ಜತೆಗೆ ವಕ್ಪ್ ಉದ್ದೇಶಿತ ಸಮಾಜಸೇವೆ ಹಾಗೂ ಮುಸ್ಲಿಂ ಸಮಾಜದ, ದೇಶದ ಸಂಪನ್ಮೂಲ ಸಂರಕ್ಷಣೆಗೆ ಒತ್ತು ನೀಡುವ ಮಹೋನ್ನತ ಉದ್ದೇಶದಿಂದಲೇ ಉಮ್ಮೀದ್ ಜಾರಿಯಾಗಿದೆ. ದಶಕದ ಹಿಂದೆ ಲೋಕಸಭೆ ಚುನಾವಣೆ ವೇಳೆ ಮುಸ್ಲಿಂ ವೋಟ್ ಸೆಳೆಯಲೆಂದು ಯುಪಿಎ ಸರ್ಕಾರ ದಿಢೀರ್ ವಕ್ಪ್ ಕಾನೂನು ತಿದ್ದುಪಡಿ ಮಾಡಿತು. ಅದರ ಫಲವಾಗಿ ವಕ್ಪ್ ಮಂಡಳಿಗಳು ದೇಶದೆಲ್ಲಡೆ ಆಸ್ತಿ ವೃದ್ಧಿಸಿಕೊಳ್ಳಲು ಸೆಕ್ಷನ್ 40ನ್ನು ವ್ಯಾಪಕವಾಗಿ ಬಳಕೆ ಮಾಡಿಕೊಂಡಿವೆ. ಇದು ಮುಸ್ಲಿಂ ಸೇರಿದಂತೆ ಎಲ್ಲ ಸಮುದಾಯಗಳ ಮಧ್ಯೆ ತೀವ್ರ ಅಸಮಾಧಾನ, ಅಸಂಗತತೆ ಸೃಷ್ಟಿಸಿದೆ.

ಯುಪಿಎ ಸರ್ಕಾರ ವಕ್ಪ್ ಅನ್ನು ಸಂತುಷ್ಟಗೊಳಿಸಲು ತೆಗೆದುಕೊಂಡ ಕ್ರಮದಿಂದಾಗಿ ದೆಹಲಿಯ ಲುಟಿಯೆನ್ಸ್ ವಲಯದ 123 ವಿವಿಐಪಿ ಆಸ್ತಿಗಳೂ ವಕ್ಪ್ ಪಾಲಾಗಿವೆ. ಒಂದು ಶತಮಾನದ (1913ರಿಂದ 2013) ಅವಧಿಯಲ್ಲಿ 18 ಲಕ್ಷ ಎಕರೆ ಭೂಮಿ ಹೊಂದಿದ್ದ ವಕ್ಪ್ ನಂತರದಲ್ಲಿ ಕಾಂಗ್ರೆಸ್ ಕೃಪಾಶೀರ್ವಾದದಿಂದ ಒಂದೇ ದಶಕದಲ್ಲಿ (2013ರಿಂದ 2025) ಮತ್ತೆ 21 ಲಕ್ಷ ಎಕರೆ ಹೆಚ್ಚುವರಿ ಭೂಮಿ ಪಡೆದು 39 ಲಕ್ಷ ಎಕರೆಗೆ ವಿಸ್ತರಿಸಿಕೊಂಡಿದೆ. ಭಾರತದಲ್ಲಿ ವಕ್ಪ್ ಮಂಡಳಿಯಡಿ 3,56,051 ಎಸ್ಟೇಟ್, 8,72,328 ಸ್ಥಿರ ಆಸ್ತಿ, 16,713 ಚರಾಸ್ತಿಗಳು ನೋಂದಣಿಯಾಗಿವೆ. ದೇಶದಲ್ಲಿ ಅಂದಾಜು 1.2 ಲಕ್ಷ ಕೋಟಿ ರೂ. ಮೌಲ್ಯದ 39 ಲಕ್ಷ ಎಕರೆ ಆಸ್ತಿಗಳನ್ನು ನಿಯಂತ್ರಿಸುತ್ತಿರುವ ವಕ್ಪ್ ಕಡಿಮೆ ಎಂದರೂ 12 ಸಾವಿರ  ಕೋಟಿ ರೂ. ಆದಾಯದಲ್ಲಿರಬೇಕಿತ್ತು.

ಆದರೆ, ತೀರಾ ಕನಿಷ್ಠ 168 ಕೋಟಿ ರೂ. ಆದಾಯ ಹೊಂದಿದೆ. ಬಲಾಢ್ಯರಿಗೆ ನೆಪಕ್ಕೆ ಎನ್ನುವಂತೆ ಕೇವಲ 1 ರೂ. , 2 ರೂ. 5 ರೂ., 10ರೂ. ಒಂದಂಕಿ ದರದಲ್ಲಿ 20 ಸಾವಿರ ಆಸ್ತಿಗಳನ್ನು ಲೀಸ್ ನೀಡಿದೆ. ಇಂಥ ಅಕ್ರಮ, ಆಸ್ತಿ ವ್ಯಾಜ್ಯ ಸಂಬಂಧಿತವಾಗಿ ಕೇಂದ್ರ ಅಲ್ಪಸಂಖ್ಯಾತರ ಸಚಿವಾಲಯದಲ್ಲಿ ಒಟ್ಟಾರೆ 40,951 ಪ್ರಕರಣಗಳಿವೆ. ಮುಸ್ಲಿಂ ಸಮುದಾಯದಿಂದಲೇ 9942 ದೂರುಗಳು ದಾಖಲಾಗಿವೆ ಎಂಬುದು ಗಮನಾರ್ಹ. 2013ರಲ್ಲಿ ಯುಪಿಎ ಸರ್ಕಾರ ಎರಡೂ ಸದನಗಳಲ್ಲಿ ಕೇವಲ ಐದೂವರೆ ತಾಸು ರ್ಚಚಿಸಿ ರಾತ್ರೋರಾತ್ರಿ ತರಾತುರಿಯಲ್ಲಿ ವಕ್ಪ್ ತಿದ್ದುಪಡಿ ತಂದಿತ್ತು. ಆದರೆ, ನಮ್ಮ NDA ಸರ್ಕಾರ ಉಮ್ಮೀದ್ ಜಾರಿಗೆ ಒಂದು ಪಾರದರ್ಶಕ ನಡೆಯನ್ನೇ ಅನುಸರಿಸಿದೆ. ಸದನದಲ್ಲಿ 16 ತಾಸು ನಿರಂತರ ಚರ್ಚೆ ನಡೆಸಿದೆ. ಇದಕ್ಕೂ ಮುನ್ನ 38 ಸಭೆಗಳನ್ನು ನಡೆಸಿ ಸುದೀರ್ಘ 113 ಗಂಟೆಗಳ ಕಾಲ ಸಮಗ್ರ ಸಮಾಲೋಚನೆ ನಡೆಸಿದೆ. ಇದಕ್ಕೆ ದೇಶಾದ್ಯಂತ ಸುಮಾರು ಒಂದು ಕೋಟಿ ಆನ್​ಲೈನ್ ಸಲಹೆಗಳು ಬಂದಿವೆ. ಇವೆಲ್ಲವನ್ನೂ ಆಧರಿಸಿಯೇ ಉಮ್ಮೀದ್ ರಚಿಸಿದ್ದು, ಯುಪಿಎ ಅವಧಿಯಲ್ಲಾದ ಪ್ರಮಾದವನ್ನು ನಾವಿಂದು ಸರಿಪಡಿಸಿದ್ದೇವೆ.

ರಾಜ್ಯದ ಬಾಬಾಬುಡನ್​ಗಿರಿ ದತ್ತಪೀಠ ಪ್ರದೇಶ, ರಾಜಧಾನಿಯ ವಿಧಾನಸೌಧ ಜಾಗ, ವಿಜಯಪುರ-ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಇರುವ ಪುರಾತನ, ಐತಿಹಾಸಿಕ ಮಠ ಮಾನ್ಯಗಳ ಪ್ರದೇಶ, ಅನೇಕ ದಶಕಗಳಿಂದಲೂ ಉಳುಮೆ ಮಾಡಿಕೊಂಡು ಬಂದಿರುವ ರೈತರ ಭೂಮಿ ಅಷ್ಟೇ ಏಕೆ, ಹುಬ್ಬಳ್ಳಿಯಲ್ಲಿ ಬಡ ಮುಸ್ಲಿಮರೇ ನೆಲೆಸಿರುವ ಒಂದು ಏರಿಯಾವನ್ನೇ ತನ್ನದೆನ್ನುತ್ತ ವಿವಾದ ಸೃಷ್ಟಿಸಿದೆ. ವಕ್ಪ್​ನ ಇಂಥ ಭೂಕಬಳಿಕೆ ನೀತಿಗೆ ಹಾವೇರಿ ಜಿಲ್ಲೆ ಹರನಗಿರಿ ಗ್ರಾಮದಲ್ಲಿ ಯುವ ರೈತ ರುದ್ರಪ್ಪ ಬಾಳಿಕಾಯಿ ಆತ್ಮಹತ್ಯೆ ಮಾಡಿಕೊಂಡ ದುರಂತ ನಮ್ಮ ಕಣ್ಮುಂದಿದೆ. ಇದೇ ಜಿಲ್ಲೆಯ ಕಡಕೋಳ ಗ್ರಾಮದಲ್ಲಿ ವಕ್ಪ್ ನೋಟಿಸ್ ಕಿಚ್ಚು ಹಚ್ಚಿತ್ತು. ಈ ಮಧ್ಯೆ ರಾಜ್ಯದಲ್ಲಿ ಸುಮಾರು 16,689 ಎಕರೆ ತನ್ನ ಆಸ್ತಿಯೇ ಒತ್ತುವರಿಯಾಗಿವೆ ಎನ್ನುತ್ತಿರುವ ವಕ್ಪ್ ವಾದ ನಿಜಕ್ಕೂ ವಿಪರ್ಯಾಸ ಮತ್ತು ಪ್ರಶ್ನಾರ್ಹವಾಗಿದೆ.

ದೇಶಾದ್ಯಂತ ಹೀಗೆ ನಾನಾ ಅವಾಂತರ, ಅಕ್ರಮ, ಅನ್ಯಾಯಗಳಿಗೆ ಕಾರಣವಾಗುತ್ತಿದ್ದ ವಕ್ಪ್ ನಿಯಂತ್ರಣಕ್ಕಾಗಿ ‘ಉಮ್ಮೀದ್’ ಜಾರಿಗೆ ಬಂದಿದೆ. ಆದರಿದು ಮುಸ್ಲಿಂ ಸಮುದಾಯದ ಒಂದೇ ಒಂದು ದರ್ಗಾ, ಮಸೀದಿಗಳಿಗೂ ಧಕ್ಕೆ ತರುವುದಿಲ್ಲ. ಬದಲಾಗಿ ಮುಸ್ಲಿಂ ಸಮಾಜದ ಎಲ್ಲ ವರ್ಗಗಳ ಮಹಿಳೆಯರು, ಬಡವರು ಮತ್ತು ದುರ್ಬಲರಿಗೆ ಬಲ ತುಂಬಲಿದೆ. ಒಟ್ಟಾರೆಯಾಗಿ ‘ಉಮ್ಮೀದ್ ಜಾರಿ’ ದೇಶದ ಸಂಪನ್ಮೂಲ ಸಂರಕ್ಷಣೆ-ಸೌಹಾರ್ದತೆಯತ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇರಿಸಿದ ಐತಿಹಾಸಿಕ ಮತ್ತು ಕ್ರಾಂತಿಕಾರಿ ಹೆಜ್ಜೆಯಾಗಿದೆ.

ನ್ಯಾಯ ಕಲ್ಪಿಸುವ ಪ್ರಬಲ ಶಕ್ತಿ

ಭಾರತದ ವಕ್ಪ್ ತಿದ್ದುಪಡಿ ಮಸೂದೆ ‘ಉಮ್ಮೀದ್’ ವಕ್ಪ್ ಆಸ್ತಿ-ಆಡಳಿತದಲ್ಲಿ ಪಾರದರ್ಶಕತೆ, ಸಮಾನತೆ ಮತ್ತು ದಕ್ಷತೆಗೆ ಪ್ರತೀಕವಾದಂಥ ಉದಾತ್ತ ಗುರಿಯನ್ನು ಹೊಂದಿದೆ. ದೇಶದಲ್ಲಿ ದೀರ್ಘಕಾಲದಿಂದಲೂ ಇರುವ ಅಸಾಂವಿಧಾನಿಕ, ಅನಿಯಂತ್ರಿತ ಮತ್ತು ಅಪಾರದರ್ಶಕ ಆಡಳಿತ ವ್ಯವಸ್ಥೆಯನ್ನು ತಹಂಬದಿಗೆ ತರುವ ಮಹೋನ್ನತ ಉದ್ದೇಶದ್ದಾಗಿದೆ. ಮುಸ್ಲಿಂ ಸಮುದಾಯದೊಳಗಿನ ವೈವಿಧ್ಯತೆಯನ್ನು ಗೌರವಿಸುವ ವಿಶಿಷ್ಟ ವಿಧಿಯಾಗಿರುವ ಇದು ಮುಸ್ಲಿಂ ಮಹಿಳೆಯರ ಹಕ್ಕು ಪ್ರತಿಪಾದಿಸುವ ಪ್ರಬಲ ಶಕ್ತಿಯಾಗಿದೆ.