ಅಂಕಣ

ಭೂಮಿ ತಾಯಿ ನಂಬಿ ಕೆಟ್ಟವರಿಲ್ಲ; ವಿಜಯವಾಣಿ ಕ್ಲಬ್​ನಲ್ಲಿ ಪ್ರಗತಿಪರ ರೈತ

ಕೃಷಿಯಿಂದ ಸಂಕಷ್ಟ ಎಂದು ಬಿಂಬಿತವಾಗುತ್ತಿರುವ ಹೊತ್ತಿನಲ್ಲಿ, ಅನೇಕರು ಅದರಿಂದ ವಿಮುಖರಾಗುತ್ತಿದ್ದಾರೆ. ಆದರೆ ಮಣ್ಣಿನಿಂದ ಚಿನ್ನದ ಬೆಳೆ ಬೆಳೆದು ಲಕ್ಷಾಂತರ ರೂ. ಸಂಪಾದಿಸಬಹುದು ಎಂದು ತೋರಿಸಿಕೊಟ್ಟವರು ಪ್ರಗತಿಪರ ರೈತ ಕುಮಾರಸ್ವಾಮಿ. ಬೆಂಗಳೂರಿನಿಂದ 130 ಕಿ.ಮೀ. ದೂರದ, ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಸಾತೇನಹಳ್ಳಿ ಗ್ರಾಮದ ತಮ್ಮ ಐದು ಎಕರೆ ಜಮೀನಿನಲ್ಲಿ ಸಾವಯವ ಕೃಷಿಯಿಂದ ವರ್ಷಕ್ಕೆ 60 ಲಕ್ಷ ರೂ. ಸಂಪಾದಿಸಬಹುದು ಎಂಬುದನ್ನು ಸಾಧಿಸಿರುವವರು. ತಮ್ಮ ಜೀವನದ ಏಳುಬೀಳುಗಳ ಜತೆಗಿನ ಸಾಧನೆಯನ್ನು ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ 24*7 ಕ್ಲಬ್​ಹೌಸ್ ಸಂವಾದದಲ್ಲಿ ಹಂಚಿಕೊಂಡಿದ್ದಾರೆ.

ಕೃಷಿಯಲ್ಲಿ ಆಸಕ್ತಿ ಮೂಡಿದ ಸಂದರ್ಭ

ರೈತ ಕುಟುಂಬದಲ್ಲಿ ಜನಿಸಿದರೂ ಕುಟುಂಬದ ಅನೇಕರು ಸರ್ಕಾರಿ ಹುದ್ದೆಯಲ್ಲಿದ್ದರಿಂದ ನನಗೂ ಅಧಿಕಾರಿ ಆಗಬೇಕು ಎನ್ನಿಸಿತು. ಈ ಸಮಯದಲ್ಲಿ ನಮ್ಮ ದೊಡ್ಡಪ್ಪನವರ ಸಹಾಯ, ದೇವರಾಜು ಎಂಬ ಗಣಿತ ಶಿಕ್ಷಕರಿಂದ ಉತ್ತಮ ಗಣಿತ ಕಲಿತೆ. ಏಳನೇ ತರಗತಿಯಲ್ಲಿ ಶೇ.72 ಅಂಕ ಪಡೆದರೂ ಎಸ್​ಎಸ್​ಎಲ್​ಸಿಯಲ್ಲಿ ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಆದೆ. ಕಷ್ಟಪಟ್ಟು ಶುಲ್ಕ ಹೊಂದಿಸಿ ವಿಜ್ಞಾನದಲ್ಲಿ ಪಿಯುಸಿ ಸೇರಿ ತೇರ್ಗಡೆ ಹೊಂದಿದೆ. ಇಂಜಿನಿಯರಿಂಗ್ ಸೇರಲು ಶುಲ್ಕಕ್ಕಾಗಿ ತಂದೆಯವರು ಭೂಮಿ ಮಾರಲು ಮುಂದಾದಾಗ, ಶಿಕ್ಷಣಕ್ಕೆ ಭೂಮಿ ಮಾರುವುದು ಬೇಡ ಎಂದು ಬಿಎಸ್​ಸಿಗೆ ಸೇರ್ಪಡೆಯಾದೆ. ಎಂಎಸ್​ಸಿಗೆ ಸೇರ್ಪಡೆಯಾಗುವವರೆಗೂ ಕೃಷಿಯಲ್ಲಿ ಹೆಚ್ಚೇನೂ ಆಸಕ್ತಿ ಇರಲಿಲ್ಲ. ದನ ಮೇಯಿಸುವುದು, ಹಕ್ಕಿಗಳನ್ನು ಓಡಿಸುವುದು ಮಾತ್ರ ಮಾಡುತ್ತಿದ್ದೆ. ಈ ಸಮಯದಲ್ಲಿ ಊರಿನ ಅಂಚೆ ಕಚೇರಿ ಪೋಸ್ಟ್ ಮಾಸ್ಟರ್- ಪೋಸ್ಟ್ ಮ್ಯಾನ್ ಅವ್ಯವಹಾರ ನಡೆಸಿ ಓಡಿ ಹೋಗಿದ್ದರು. ಊರಿನಲ್ಲಿದ್ದ ಶಿಕ್ಷಿತ ಯಾರು ಎಂದು ಹುಡುಕಿ, ನನಗೆ ಆ ಹುದ್ದೆಯನ್ನು ನೀಡಿದರು. ಮತ್ತೆ ಅಧಿಕಾರಿಯಾಗುವ ಕನಸನ್ನು ಅಲ್ಲಿಯೇ ಬಿಟ್ಟು, ಕೃಷಿಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದೆ. ಈ ಸಮಯದಲ್ಲಿ ಅಂಚೆ ಕಚೇರಿಯಲ್ಲೂ ಉತ್ತಮ ಸಾಧನೆ ಮಾಡಿ ವೇತನ ಹೆಚ್ಚಿಸಿಕೊಂಡೆ. ಕುಟುಂಬವು ಪಾರಂಪರಿಕ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಕಾರಣಕ್ಕೆ ಹೇರಳವಾಗಿ ದವಸ-ಧಾನ್ಯ ಬೆಳೆಯುತ್ತಿದ್ದೆವು. ಸಾಕಷ್ಟು ದನ-ಕರುಗಳಿದ್ದವು. ನಮ್ಮ ಕುಟುಂಬ ಸಾಕಷ್ಟು ಅನುಕೂಲಸ್ಥ ಸ್ಥಿತಿಗೆ ತಲುಪಿ, ಹೊಟ್ಟೆಪಾಡಿಗಾಗಿ ಹೊರಗೆ ಹೋಗುವುದೇ ಬೇಡ ಎನ್ನುವಂತಾಯಿತು. ಈ ಸಮಯದಲ್ಲಿ ನಮ್ಮ ಊರಿನ ಹೈಸ್ಕೂಲಿನಲ್ಲಿ ಗಣಿತ ಶಿಕ್ಷಕರು ಇಲ್ಲದಾಗಿದ್ದರಿಂದ ಆ ಕೆಲಸಕ್ಕೂ ಸೇರಿಕೊಂಡೆ. ಇದೇ ರೀತಿ ಪಾರಂಪರಿಕ ಕೃಷಿಯನ್ನು ಮುಂದುವರಿಸಲು ನಿರ್ಧರಿಸಿದೆ.

ಭೂಮಿ ಮೇಲೆ ನಂಬಿಕೆ ಬೇಕು

ಭೂಮಿಯನ್ನು ಸಂರಕ್ಷಿಸಬೇಕು, ಮುಚ್ಚುವುದರ ಮೂಲಕ ಸೂಕ್ಷಾ್ಮಣುಜೀವಿಗಳು ವಿಕಸಿತಗೊಳ್ಳಲು ಅವಕಾಶ ನೀಡಬೇಕು. ಕೃಷಿ ಮಾಡಲು ರಾಸಾಯನಿಕ ಗೊಬ್ಬರ ಬೇಕೇಬೇಕು ಎಂದು ಅನೇಕರು ತಿಳಿದಿದ್ದಾರೆ, ಆದರೆ ಎಲ್ಲ ಗೊಬ್ಬರವೂ ಭೂಮಿಯಲ್ಲೇ ಸಿಗುತ್ತದೆ ಎಂದು ತಿಳಿಯಬೇಕು. ರಸ್ತೆ ಬದಿಯಲ್ಲಿ ಅನೇಕ ಗಿಡಗಳು ತಾನೇತಾನಾಗಿ ಬೆಳೆದಿರುವಾಗ ಭೂಮಿಯಲ್ಲಿ ಏಕೆ ಬೆಳೆಯುವುದಿಲ್ಲ ಎನ್ನುವುದನ್ನು ಯೋಚಿಸಬೇಕು. ಭೂಮಿಯ ಮೇಲೆ ನಂಬಿಕೆ ಇಟ್ಟರೆ ಸಫಲತೆ ಕಟ್ಟಿಟ್ಟ ಬುತ್ತಿ.

ಹಳ್ಳಿಯಲ್ಲಿ ಅನೇಕ ಸಮಸ್ಯೆ

ನೆಲಮಂಗಲದಲ್ಲಿ ಒಂದು ಎಕರೆಯಲ್ಲಿ ಮಾಡುತ್ತಿದ್ದ ಬೆಳೆಯನ್ನು ಐದು ಎಕರೆಯಲ್ಲಿ ಮಾಡಲು ಮುಂದಾದಾಗ ಕೆಲಸಗಾರರ ಕಷ್ಟ ಅನುಭವಿಸಿದೆ. ಇದರಿಂದಾಗಿ 10 ಲಕ್ಷ ರೂ. ಕಳೆದುಕೊಂಡೆ. ಕೇವಲ ತರಕಾರಿ ಬೆಳೆಯುವುದರಿಂದಲೇ ಲಾಭವಾಗುವುದಿಲ್ಲ. ಮಿಶ್ರ ಬೆಳೆ ಬೆಳೆಯಲು ಆರಂಭಿಸಿದೆ. ಒಂದು ಎಕರೆಯಲ್ಲಿ ತರಕಾರಿ, ಎರಡು ಎಕರೆಯಲ್ಲಿ ತೋಟಗಾರಿಕೆ, ಒಂದೂವರೆ ಎಕರೆಯಲ್ಲಿ ಮೇವಿನ ಬೆಳೆಗಳು, 10 ಗುಂಟೆಯಲ್ಲಿ ಆಹಾರ, 22 ಗುಂಟೆಯಲ್ಲಿ ಔಷಧೀಯ ಸಸ್ಯ, 2 ಗುಂಟೆಯಲ್ಲಿ ಹೂ ಬೆಳೆದುಕೊಂಡೆ. ಬದುವಿಗೆ ತೇಗ, ಸಿಲ್ವರ್ ಮರಗಳನ್ನು ಹಾಕಿ ಪ್ರಯತ್ನಿಸಿದೆ. ಈಗ ಐದು ಎಕರೆ ಜಮೀನಿನಲ್ಲಿ ಈ ರೀತಿ ಬದಲಾವಣೆ ಮಾಡಿದ್ದೇನೆ. ಸಸಿಗಳು ಅಪಾರ ಫಲವತ್ತತೆಯಿಂದ ಕೂಡಿದ್ದರಿಂದ, ಅಪಾರ ಲಾಭಕ್ಕೆ ಕಾರಣವಾಯಿತು. ತೆಂಗಿನ ಗರಿಗಳನ್ನು ಬಳಸಿ ಭೂಮಿಗೆ ಹೊದಿಕೆಯಾಗಿಸಿದೆ. ಒಂದು ವರ್ಷಕ್ಕೆ ಐದು ಎಕರೆಯಲ್ಲಿ ಅರವತ್ತು ಲಕ್ಷ ರೂ.ನಂತೆ ಪ್ರತಿ ತಿಂಗಳಿಗೆ ಐದು ಲಕ್ಷ ರೂ. ಆದಾಯ ಗಳಿಸಬಹುದು. ಈ ಪದ್ಧತಿಯಲ್ಲಿ ಕೃಷಿ ವಿಫಲವಾಗಲು ಸಾಧ್ಯವೇ ಇಲ್ಲ.

ರಾಸಾಯನಿಕ ಕೃಷಿಯಿಂದ ಸಾಲಗಾರ

13 ವರ್ಷ ಪಾರಂಪರಿಕ ಕೃಷಿ ನಡೆಸಿ, ಅಂಚೆ ಕಚೇರಿಯಲ್ಲಿ ಬಡ್ತಿ ಪಡೆದು ಊರಿನಿಂದ ಹೊರನಡೆದೆ. ಇದೇ ವೇಳೆ ರಾಸಾಯನಿಕ ಬಳಸಿ ವಾಣಿಜ್ಯ ಬೆಳೆ ಬೆಳೆಯಲು ಆರಂಭಿಸಿದೆ. 10 ವರ್ಷ ಈ ಕೃಷಿ ಮಾಡಿ 13 ಲಕ್ಷ ರೂ. ಸಾಲಗಾರ ಆದೆ. ಈ ವೇಳೆ ಬ್ಯಾಂಕ್​ನಲ್ಲಿ ಮಂಜೂರಾಗಿದ್ದ ಸಾಲ ಕೊಡಿಸಿಕೊಡುವಂತೆ ಪುಟ್ಟಣ್ಣಯ್ಯ ಅವರ ಬಳಿಗೆ ಹೋದಾಗ, ಸುಭಾಷ್ ಪಾಳೇಕರ್ ಅವರ ಕೃಷಿ ಪದ್ಧತಿ ಬಗ್ಗೆ ಸ್ವಾಮಿ ಆನಂದ್ ಬರೆದಿರುವ ನೈಸರ್ಗಿಕ ಕೃಷಿ ಪುಸ್ತಕ ನೀಡಿದರು. ಮೊದಲು ನೀವು ಕೆಲಸಕ್ಕೆ ರಾಜೀನಾಮೆ ನೀಡಿ, ಈ ಕೃಷಿ ಮಾಡಿ ಎಂದು ಹೇಳಿದರು. ಕೆಲಸಕ್ಕೆ ರಾಜೀನಾಮೆ ನೀಡಿ ಊರಿಗೆ ವಾಪಸಾದೆ. ಆದರೆ ಕುಟುಂಬದಲ್ಲಿ ವ್ಯವಸಾಯ ಮಾಡಲು ಬಿಡಲಿಲ್ಲ. ಕೃಷಿ ಮಾಡಿದರೆ ಜೀವನ ನಡೆಸುವುದು ಕಷ್ಟ, ಕೇಂದ್ರ ಸರ್ಕಾರದ ನೌಕರಿ ಬಿಟ್ಟು ಬರಬೇಡ ಎಂದು ಎಲ್ಲರೂ ಒತ್ತಾಯಿಸಿದ್ದರು. ಮತ್ತೊಂದೆಡೆ ಸಾಲ ಕೊಟ್ಟವರು ನನ್ನ ಮೇಲೆ ಕೇಸ್ ಹಾಕಿದರು. ಒಂದೆಡೆ ಪ್ರಕರಣ ಎದುರಿಸುವುದು, ಮತ್ತೊಂದೆಡೆ ಪ್ರವಾಸಕ್ಕೂ ಹಣವಿರುತ್ತಿರಲಿಲ್ಲ. ಹಾಗೂ-ಹೀಗೂ 2005ರಲ್ಲಿ ಅಂಚೆ ನಿವೃತ್ತಿ ಸೌಲಭ್ಯ ಸಿಕ್ಕಿತು. ಮತ್ತೊಂದೆಡೆ ಟ್ರಾ್ಯಕ್ಟರ್ ಸಾಲ ಲಭಿಸಿ ಹಣ ಸಿಕ್ಕಿತು. ಊರಿನ ಜಮೀನನ್ನು ಬಿಟ್ಟು ಕುಟುಂಬ ಸಮೇತ ಹೊರನಡೆದೆ.

ಗುತ್ತಿಗೆ ಕೃಷಿಯಿಂದ ಕಷ್ಟ ನಷ್ಟ

ರಾಸಾಯನಿಕ ಬಳಸದೆಯೇ ಕೃಷಿ ಮಾಡಬೇಕು ಎಂದು 5 ಎಕರೆ ಜಮೀನನ್ನು ಗುತ್ತಿಗೆಗೆ ಪಡೆದು ನೈಸರ್ಗಿಕ ಕೃಷಿ ಆರಂಭಿಸಿದೆ. ಸುಭಾಷ್ ಪಾಳೇಕರ್ ಮಾದರಿಯಲ್ಲೆ ಕೃಷಿ ಮಾಡಿದೆ. ಸುತ್ತಮುತ್ತ ಬೆಳೆಯುತ್ತಿದ್ದ ರೇಷ್ಮೆ ಕಡ್ಡಿಗಳು, ಎಳ್ಳು ಕಡ್ಡಿಗಳು, ತೆಂಗಿನ ಗರಿಗಳನ್ನು ಜಮೀನಿನಲ್ಲಿ ಕಾಲುವೆ ಮಾಡಿಸಿ ಮುಚ್ಚಿಸಿದೆ. ಆಶ್ಚರ್ಯ ಎನ್ನುವ ರೀತಿಯಲ್ಲಿ ಬೆಳೆ ಬಂತು. ಇದೆಲ್ಲವನ್ನೂ ನೋಡಿ ಅನೇಕ ವಿದೇಶಿಗರು ಪ್ರವಾಸ ಬಂದು ವೀಕ್ಷಿಸುತ್ತಿದ್ದರು. ಅಲ್ಲಿನ ಜಮೀನಿನ ಮಾಲೀಕ ತಾನೇ ಬೆಳೆಯುತ್ತೇನೆ ಎಂದು ಅಲ್ಲಿಂದ ಖಾಲಿ ಮಾಡಿಸಿದ. 10 ವರ್ಷದಲ್ಲಿ 8 ಕಡೆಗಳಿಂದ ಖಾಲಿ ಮಾಡಿಸಿದರು. ಆನಂತರ ಹಣದ ಮುಗ್ಗಟ್ಟು ಎದುರಾಗಿ, ಪಾಲುದಾರಿಕೆಯಲ್ಲಿ ರಾಸಾಯನಿಕ ಪದ್ಧತಿಯಲ್ಲೆ ಬಾಳೆ ಬೆಳೆಯಲು ಒಪ್ಪಿದೆ. ಬಾಳೆ, ಮಂಗಳೂರು ಸೌತೆ ಬಿತ್ತಿದಾಗ ಇದ್ದ ಬೆಲೆ, ಕಟಾವಿಗೆ ಬರುವ ವೇಳೆಗೆ ತೀರಾ ಕಡಿಮೆಯಾಯಿತು. ಏಕಬೆಳೆ ಮಾಡುವುದರಿಂದ ನಷ್ಟ ಎಂದು ಅರಿತು, ತರಕಾರಿ ಕಡೆ ಗಮನಹರಿಸಿದೆ. ಈ ಸಂದರ್ಭದಲ್ಲಿ ಅಮೆರಿಕ ಕೃಷಿಕನೊಬ್ಬನ ಪುಸ್ತಕ ಸಿಕ್ಕಿತು. ಸಾವಿರ ಎಕರೆ ಇದ್ದ ಜಮೀನು ರಾಸಾಯನಿಕ ಕೃಷಿಯಿಂದಾಗಿ 5 ಎಕರೆಗೆ ಇಳಿದಿತ್ತು. ಅಲ್ಲಿನ ಮಾರುಕಟ್ಟೆಗೆ ಸಾವಯವ ತರಕಾರಿ ಬೆಳೆಯಲು ಆರಂಭಿಸಿ ಅಭಿವೃದ್ಧಿಯಾಗಿದ್ದ ಪದ್ಧತಿ ಪ್ರೇರೇಪಣೆ ನೀಡಿತು. ಮಾರುಕಟ್ಟೆಗೆ ಅವಶ್ಯವಿದ್ದಷ್ಟೆ ಬೆಳೆಯಲು ಚಿಂತನೆ ನಡೆಸಿ, 2.5 ಗುಂಟೆಯಲ್ಲೆ 30 ವಿಧದ ತರಕಾರಿ ಬೆಳೆಯಲು ಆರಂಭಿಸಿದೆ.

ನೆಲಮಂಗಲದಲ್ಲಿ ಸಿಕ್ತು ಎಕರೆಗೆ ಲಕ್ಷ ರೂ.

ವಿವಿಧ ಕಾರಣಕ್ಕೆ ನೆಲಮಂಗಲಕ್ಕೆ ಬಂದೆ. ಒಂದು ಎಕರೆಯನ್ನು 16 ಭಾಗ ಮಾಡಿಕೊಂಡು ತಲಾ ಎರಡೂವರೆ ಗುಂಟೆಯಂತೆ ವಿಂಗಡಿಸಿಕೊಂಡು ಪ್ರತಿ ವಾರ ಒಂದೊಂದು ಭಾಗಕ್ಕೆ ಸಸಿ ನೆಡಲು ಆರಂಭಿಸಿದೆ. ನಿರಂತರವಾಗಿ ತರಕಾರಿ ಸಿಗುತ್ತಿದ್ದರಿಂದ ಪ್ರತಿದಿನ ಮೂರೂವರೆ ಸಾವಿರ ರೂ. ಆದಾಯ ಬರಲು ಆರಂಭ ಆಯಿತು. 100 ಅಡಿ ಉದ್ದದ ಬೆಡ್​ನಲ್ಲಿ ತಲಾ ಒಂದು ಅಡಿಯಲ್ಲಿ ಮೊದಲು ಮೆಂತ್ಯೆ ಸೊಪು್ಪ, 2 ಅಡಿ ಅಂತರದಲ್ಲಿ ಟೊಮ್ಯಾಟೊ ನೆಡುವುದು. ಎರಡೂ ಕಡೆ ಒಂದು ಅಡಿ ಅಂತರದಲ್ಲಿ 200 ಗಡ್ಡೆ ಕೋಸು. 25 ಅಡಿ ಅಂತರದಲ್ಲಿ 3 ಹೀರೆ ಗಿಡ, 1 ನುಗ್ಗೆ ಗಿಡದಂತೆ 1 ಬೆಡ್​ನಲ್ಲಿ 400 ಗಿಡ ನೆಡಲು ಆರಂಭಿಸಿದೆ. ಜಿಗ್​ಜಾಗ್ ಮಾದರಿಯಲ್ಲಿ 1 ಕಡೆ ಹರಳು, ಮತ್ತೊಂದರಲ್ಲಿ ಚೆಂಡು ಹೂವಿನ ರೀತಿಯಲ್ಲಿ ಬಲೆ ಬೆಳೆ ಆರಂಭಿಸಿದೆ. ಶತ್ರುಕೀಟಗಳನ್ನು ನಿಯಂತ್ರಿಸಲು ಮುಸುಕಿನ ಜೋಳ, ಎಣ್ಣೆಕಾಳು ಬೆಳೆದೆ. ತರಕಾರಿಗಳಿಗೆ ಕೀಟ ಬರುತ್ತದೆ ಎಂದು ಅನೇಕರು ಹೇಳಿದ್ದರೂ ಈ ವಿಧಾನದಿಂದಾಗಿ ಕೀಟಗಳ ಬಾಧೆ ನನಗೆ ಆಗಲಿಲ್ಲ. ಅನೇಕ ದೇಶದವರು ಆಗಮಿಸಿ ಜಮೀನನ್ನು ನೋಡಿ, ತಿಂಗಳಿಗೆ 1 ಲಕ್ಷ ರೂ. ಆದಾಯ ಎಂದು ಜಾಲತಾಣದಲ್ಲಿ ಪ್ರಚಾರ ಮಾಡಿದರು. ಆ ಜಮೀನಿನ ಮಾಲೀಕ ಲಾಭದಾಸೆಗೆ ಬಿದ್ದು, ಕಳೆ ಔಷಧ ಹೊಡೆದು ಬೆಳೆಯನ್ನು ಹಾಳು ಮಾಡಿದ. ಇನ್ನು ಮುಂದೆ ಯಾರದ್ದೇ ಜಮೀನಿನಲ್ಲೂ ಕೃಷಿ ಮಾಡಬಾರದು ಎಂದು ನಿರ್ಧರಿಸಿ, ಊರಿಗೆ ವಾಪಸಾಗಿ ನನ್ನ ಪಾಲಿನ 5 ಎಕರೆ ಜಮೀನಿನಲ್ಲಿ ಕೃಷಿ ಮಾಡಲು ಆರಂಭಿಸಿದೆ.

ಆತ್ಮಹತ್ಯೆ ಆಲೋಚನೆ ಮಾಡಲಿಲ್ಲ

ಭೂಮಿಯಲ್ಲಿ ಉತ್ಪಾದನೆ ಮಾಡಿ ಸಾಲ ತೀರಿಸುತ್ತೇನೆ ಎಂದು ನಂಬಿಕೆ ಇಟ್ಟಿದ್ದೆ. ಎಷ್ಟೇ ಕಷ್ಟ ಬಂದರೂ ಆತ್ಮಹತ್ಯೆ ಯೋಚನೆ ಮಾಡಲಿಲ್ಲ. ರೈತರು ಒಂದು ಬೆಳೆ ಮಾಡುವುದರಿಂದ ಹಾಗೂ ಮಧ್ಯವರ್ತಿಗಳಿಗೆ ಹರಾಜು ಮಾಡುವುದರಿಂದ ನಷ್ಟ ಅನುಭವಿಸುತ್ತಿ ದ್ದಾರೆ. ಆಫ್ರಿಕಾದಿಂದ ಮಲ್ಲಿಕಾರ್ಜುನ ಕೋರೆ ಎನ್ನುವವರು ನನ್ನ ಕುರಿತು ಕೃತಿಗಳನ್ನು ಹೊರತರಲು ಮುಂದಾಗಿದ್ದಾರೆ.

ಬಿಸಿಲಿನ ಹೊಂದಾಣಿಕೆ ನೋಡಿ: ನನ್ನ ತೋಟದಲ್ಲಿ ತೆಂಗು ನಡುವೆ ಬಾಳೆ, ಅಡಕೆ ಬೆಳೆಯುತ್ತಿದ್ದೇನೆ ಅದಕ್ಕೆ ವೀಳ್ಯದೆಲೆ ಮಾಡಲು ನಿರ್ಧರಿಸಿದ್ದೇನೆ. ನಾಲ್ಕು ತೆಂಗು ನಡುವೆ ಒಂದು ಜಾಯಿಕಾಯಿ, ಎರಡೂ ಬದಿ ಕೊಕೊ, ಅದರ ನಡುವೆ ವೆನಿಲಾ ನೀಡಿದ್ದೇನೆ, ಬಾಳೆಯನ್ನು ಜಿಗ್​ಜಾಗ್ ಮಾಡಿ ದಾಗ ನಡುವೆ ಉಳಿಯುವ ಜಾಗದಲ್ಲಿ ಏಲಕ್ಕಿ ಬೆಳೆದಿದ್ದೇನೆ. ಇಷ್ಟೆಲ್ಲ ಬೆಳೆ ಬೆಳೆಯಲು ಬಿಸಿಲಿನ ಹೊಂದಾಣಿಕೆಯನ್ನು ನೋಡಬೇಕು.

ಏಕಬೆಳೆ ಬೇಡ: ಪ್ರತಿ ರೈತನೂ ಏಕಬೆಳೆ ಹಾಗೂ ಒಂದು ಜಮೀನಿಗೆ ಒಂದೇ ಬಾರಿಗೆ ಬೆಳೆ ಬಿತ್ತುವುದನ್ನು ಬಿಡಬೇಕು. ಒಂದು ಎಕರೆಯನ್ನು ತಲಾ ಎರಡೂವರೆ ಗುಂಟೆಯಂತೆ 16 ಭಾಗ ಮಾಡಿ, ನಿರಂತರ ತರಕಾರಿ ಲಭಿಸುತ್ತದೆ. ಮಾರುಕಟ್ಟೆಗೆ ಹೋಗದೆ, ನೇರವಾಗಿ ಗ್ರಾಹಕರಿಗೆ ತಲುಪಿಸಲು ಮುಂದಾದರೆ ನಷ್ಟವಾಗುವುದೇ ಇಲ್ಲ. ಪ್ರತಿಯೊಬ್ಬರಿಗೂ ಆಹಾರ ಬೇಕಾಗಿರುವುದರಿಂದ ಲಾಭ ಖಚಿತ.

ಹೊಸ ಮಾರುಕಟ್ಟೆ ಕಂಡುಕೊಳ್ಳಿ: ನಾವು ಬೆಂಗಳೂರು ಹತ್ತಿರ ಇರುವವರು ಮಾರುಕಟ್ಟೆ ಕಂಡುಕೊಳ್ಳುತ್ತೇವೆ. ಆದರೆ ದೂರದೂರಿನವರು ಪ್ರತಿ ಹಳ್ಳಿ, ಮನೆಗೂ ಸೊಪ್ಪು ತರಕಾರಿ ನೀಡಬೇಕು. ಅಲ್ಲೇ ನಿಮಗೆ ಮಾರುಕಟ್ಟೆ ಸೃಷ್ಟಿಯಾಗುತ್ತದೆ.

ಕೃಷಿ ಗುರುಕುಲ ಚಿಂತನೆ: ಒಂದು ತಿಂಗಳು ಆನ್​ಲೈನ್ ತರಬೇತಿ, 10 ದಿನ ಜಮೀನಿನಲ್ಲೆ ನೈಸರ್ಗಿಕ ತರಬೇತಿ ಕೇಂದ್ರ. ಮುಂದೆ ಕೃಷಿ ಗುರುಕುಲ ಮಾಡಿ, ನಾವು ಹೇಳಿದ ಎಲ್ಲ ಬೆಳೆಯನ್ನೂ ಬೆಳೆಯಲು ತರಬೇತಿ ನೀಡಿ ಅಲ್ಲಿ ಬಂದ ಆದಾಯವನ್ನು ಅವರಿಗೇ ನೀಡುವ ಯೋಜನೆ ಇದೆ. ಕಲಿಯಲು ಆಸಕ್ತಿ ಇರುವವರು ಸದುಪಯೋಗಪಡಿಸಿಕೊಳ್ಳಬಹುದು. ಕುಮಾರಸ್ವಾಮಿಯವರ ದೂರವಾಣಿ ಸಂಖ್ಯೆ 94480 73063 (ರಾತ್ರಿ 8 ಗಂಟೆ ನಂತರ ಕರೆ ಮಾಡಬಹುದು)