ತೈವಾನ್ ಕುರಿತಾಗಿ ಚೀನಾದ ನೀತಿಗಳನ್ನು 2021-22ರಲ್ಲಿ ಅವಲೋಕಿಸುತ್ತಿದ್ದ ವಿಶ್ಲೇಷಕರು 2025ರ ಹೊತ್ತಿಗೆ ಆ ದ್ವೀಪವನ್ನು ಆಕ್ರಮಿಸಿಕೊಳ್ಳಲು ಆ ಕಮ್ಯೂನಿಸ್ಟ್ ದೈತ್ಯ ಯುದ್ಧ ಆರಂಭಿಸಬಹುದೆಂದು ಲೆಕ್ಕಹಾಕಿದ್ದುಂಟು. ಚೀನಿ ಯುದ್ಧವಿಮಾನಗಳು, ಒಮ್ಮೊಮ್ಮೆ 150ಕ್ಕಿಂತಲೂ ಹೆಚ್ಚು, ತೈವಾನ್ನ ವಾಯುಪ್ರದೇಶವನ್ನು ಉಲ್ಲಂಘಿಸುವುದು ಸಾಮಾನ್ಯವಾಗಿದ್ದ ದಿನಗಳು ಅವು. ಚೀನಾದ ಆ ನಡವಳಿಕೆಗಳು ತೈವಾನ್ನ ಪ್ರತಿಕ್ರಿಯಾ ಸಾಮರ್ಥ್ಯವನ್ನು ಪರೀಕ್ಷಿಸುವುದಷ್ಟೇ ಅಲ್ಲ, ಅಮೆರಿಕಾ ಮತ್ತು ಜಪಾನ್ಗಳು ಯಾವ ಮಟ್ಟದಲ್ಲಿ ಆ ದ್ವೀಪರಾಷ್ಟ್ರದ ಬೆಂಬಲಕ್ಕೆ ನಿಲ್ಲಬಹುದೆಂದು ನೋಡುವುದೂ ಆಗಿತ್ತು. ಆಗಿನ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಹೇಳಿಕೆಗಳನ್ನು ನೀಡುತ್ತ ತೈವಾನಿಗರಲ್ಲಿ ಒಮ್ಮೆ ಆಶಾಭಾವನೆಯನ್ನು ಉಂಟುಮಾಡಿದರೆ ಮತ್ತೊಮ್ಮೆ ನಿರಾಸೆಯನ್ನೂ ಉಕ್ಕಿಸುತ್ತಿದ್ದರು. ತನ್ನ ಸುರಕ್ಷೆ ತನ್ನದೇ ಜವಾಬ್ದಾರಿ ಎಂದು ತಿಳಿದ ತೈವಾನ್ ರಕ್ಷಣಾ ಕಸರತ್ತುಗಳನ್ನು ನಡೆಸುವುದನ್ನು ತನ್ನ ಬದುಕಿನ ಭಾಗವಾಗಿಸಿಕೊಂಡಿತು.
ಅದೇ ದಿನಗಳಲ್ಲಿ ಅಧ್ಯಕ್ಷ ಬೈಡೆನ್ರ ನೀತಿನಿಲುವುಗಳು ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ರ ಉತ್ಸಾಹ ಹೆಚ್ಚಿಸಿದ್ದನ್ನೂ ಕಾಣಬಹುದು. ಮೊದಲಿಗೆ, ಅವರ ಅಧ್ಯಕ್ಷಾವಧಿಯಲ್ಲಿ ಅಮೆರಿಕಾ, ಜಪಾನ್, ಆಸ್ಟ್ರೇಲಿಯಾ ಮತ್ತು ಭಾರತವನ್ನೊಳಗೊಂಡ ‘ಕ್ವಾಡ್’ ಸಂಘಟನೆ ಮಹತ್ವ ಕಳೆದುಕೊಂಡಿತ್ತು. ಅದರ ಬದಲಿಗೆ ಬೇರೆ ಸಂಘಟನೆಗಳು ಸೃಷ್ಟಿಯಾಗತೊಡಗಿದವು. 2021ರ ಸೆಪ್ಟೆಂಬರ್ 15ರಂದು ಏಕಾಏಕಿ ಆಸ್ಟ್ರೇಲಿಯಾ, ಬ್ರಿಟನ್ ಮತ್ತು ಅಮೆರಿಕಾಗಳನ್ನೊಳಗೊಂಡ ‘ಆಕಸ್’ (AUKUS- Australia, United Kingdom, United States) ಅವತರಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇದರ ಪ್ರಕಾರ ಆಸ್ಟ್ರೇಲಿಯಾಗೆ ನ್ಯೂಕ್ಲಿಯರ್ ಸಬ್ವೆುರೀನ್ಗಳನ್ನು ಅಮೆರಿಕಾ ಮತ್ತು ಬ್ರಿಟನ್ ತಯಾರಿಸಿ ಕೊಡುವ ವ್ಯವಸ್ಥೆಯಾಯಿತು. ಇದರಿಂದಾಗಿ ಅಂತಹದೇ ಸಬ್ವೆುರೀನ್ಗಳಿಗಾಗಿ ಆ ದೇಶ ಫ್ರಾನ್ಸ್ನೊಂದಿಗೆ ಮಾಡಿಕೊಂಡಿದ್ದ ಅರವತ್ತು ಸಾವಿರ ಡಾಲರ್ಗಳ ವಹಿವಾಟು ರದ್ದಾಯಿತು.
ಹೇಳಿಕೇಳಿ ಫ್ರಾನ್ಸ್ ಹಿಂದೂಮಹಾಸಾಗರ ಮತ್ತು ಪೆಸಿಫಿಕ್ ಸಾಗರಗಳಲ್ಲಿ ಒಂದು ಮಹತ್ವದ ಸೇನಾ ಹಾಗೂ ಆರ್ಥಿಕ ಶಕ್ತಿ. ಈ ಪ್ರದೇಶದಲ್ಲಿನ ತನ್ನ ಹಲವಾರು ದ್ವೀಪಗಳಲ್ಲಿ ಫ್ರಾನ್ಸ್ ತನ್ನ ಸೇನಾನೆಲೆಗಳನ್ನು ಹೊಂದಿದೆ. ಇಂತಹ ಮಹತ್ವದ ಸ್ಥಾನದಲ್ಲಿರುವ ತನ್ನನ್ನು ನಿರ್ಲಕ್ಷಿಸಿ, ತನಗೆ ಯಾವ ಸುಳಿವನ್ನೂ ನೀಡದೆ ‘ಆಕಸ್’ ಸಂಘಟನೆಯನ್ನು ಸ್ಥಾಪಿಸಿದ್ದು ಸಹಜವಾಗಿಯೇ ಫ್ರಾನ್ಸ್ನ್ನು ಕೆರಳಿಸಿತು. ಜತೆಗೆ ಆಸ್ಟ್ರೇಲಿಯಾ ಜತೆಗಿನ ಭಾರಿ ವಹಿವಾಟು ಏಕಾಏಕಿ ಕೈಬಿಟ್ಟದ್ದೂ ಫ್ರಾನ್ಸ್ ಅನ್ನು ರೊಚ್ಚಿಗೆಬ್ಬಿಸಿತು. ಅದು ಅಧ್ಯಕ್ಷ ಇಮ್ಯಾನುಯೇಲ್ ಮ್ಯಾಕ್ರೋ ಅವರ ಮಾತುಗಳಲ್ಲಿ ಮುಕ್ತವಾಗಿಯೇ ಹೊರಬಂತು. ಹೀಗೆ ಪಶ್ಚಿಮದ ಒಕ್ಕೂಟದಲ್ಲಿ ದೊಡ್ಡ ಬಿರುಕು ಉಂಟಾದದ್ದು ಚೀನಾಗೆ ಖುಷಿಯ ವಿಷಯವೇ.
ಇದು ಸಾಲದು ಎಂಬಂತೆ ಬೈಡೆನ್ರ ಅಮೆರಿಕಾ ತನ್ನ ಜತೆ ಆಸ್ಟ್ರೇಲಿಯಾ, ಜಪಾನ್ ಮತ್ತು ಫಿಲಿಪ್ಪೀನ್ಸ್ಗಳನ್ನು ಸೇರಿಸಿಕೊಂಡು ‘ಸ್ಕ್ವಾಡ್' (Squad) ಎಂಬ ಅನೌಪಚಾರಿಕ ಕೂಟವನ್ನು 2024ರ ಮೇನಲ್ಲಿ ಕಟ್ಟಿಕೊಂಡಿತು. ಇದು ಅದಾಗಲೇ ಇದ್ದ ‘ಕ್ವಾಡ್’ ಅನ್ನು ಅಪ್ರಸ್ತುತಗೊಳಿಸುವ ನಡೆಯಾಗಿತ್ತು. ‘ಕ್ವಾಡ್’ನಲ್ಲಿ ಭಾರತ ಇತ್ತು, ಆದರೆ ‘ಸ್ಕ್ವಾಡ್’ನಲ್ಲಿ ಭಾರತದ ಬದಲಿಗೆ ಫಿಲಿಪ್ಪೀನ್ಸ್ ಬಂದಿತ್ತು! ಚೀನಾ ವಿರುದ್ಧದ ಯಾವುದೇ ಸಂಘಟನೆಯಲ್ಲಿ ಭಾರತದ ಪಾತ್ರ ಮಹತ್ವದ್ದು ಎಂಬ ಹಿಂದಿನ ಡೊನಾಲ್ಡ್ ಟ್ರಂಪ್ ಆಡಳಿತದ ನಿಲುವನ್ನು ನಿರ್ಲಕ್ಷಿಸಿ ಬೈಡೆನ್ ಆಡಳಿತ ಸೃಷ್ಟಿಸಿದ ಈ ಹೊಸ ಕೂಟ ತನ್ನ ವಿರುದ್ಧದ ದೇಶಗಳಲ್ಲಿ ಐಕ್ಯಮತವಿಲ್ಲ ಎಂಬ ನಂಬಿಕೆಯನ್ನು ಚೀನಾಗೆ ಮೂಡಿಸಿತು. ಪರಿಣಾಮವಾಗಿ ಪೂರ್ವ ಮತ್ತು ದಕ್ಷಿಣ ಚೀನಾ ಸಮುದ್ರಗಳಲ್ಲಿ ಅಧ್ಯಕ್ಷ ಷಿ ಜಿನ್ಪಿಂಗ್ರ ಉದ್ಧಟತನವೂ ಹೆಚ್ಚಿತು.
ಬೈಡೆನ್ ಆಡಳಿತ ಎಸಗಿದ ಈ ಅನಾಹುತಗಳನ್ಜು ಸರಿಪಡಿಸುವುದು ಈಗ ಅಧ್ಯಕ್ಷ ಟ್ರಂಪ್ರ ಜವಾಬ್ದಾರಿ. ಇದನ್ನು ನಿರ್ವಹಿಸುವಲ್ಲಿ ಮೊದಲ ಅಧ್ಯಕ್ಷಾವಧಿಯಲ್ಲಿ ತಾವು ತಳೆದ ನಿಲುವುಗಳು ಪ್ರಯೋಜನಕಾರಿಯಲ್ಲ ಎಂದರಿಯುವ ಒತ್ತಡಕ್ಕೆ ಅವರು ಒಳಗಾಗಿದ್ದಾರೆ. ಚೀನಾ ವಿಷಯದಲ್ಲಿ ಸುತ್ತುಬಳಸಿನ ಮಾತು ವ್ಯರ್ಥ, ನೇರ ನುಡಿ ಮತ್ತು ಅಗತ್ಯವಾದರೆ ನೇರ ಕಾರ್ಯಾಚರಣೆಯೇ ಸಮಸ್ಯೆಗೆ ಸರಿಯಾದ ಪರಿಹಾರ ಎಂದವರು ತಿಳಿದಂತಿದೆ. ‘ತೈವಾನ್ ಮೇಲೆ ಚೀನಾ ಆಕ್ರಮಣ ಮಾಡಿದರೆ ನಿಮ್ಮ ನಿಲುವೇನು?’ ಎಂದವರು ಆಸ್ಟ್ರೇಲಿಯಾ ಮತ್ತು ಜಪಾನ್ಗಳನ್ನು ಇದೇ ಜುಲೈ 13ರಂದು ನೇರವಾಗಿ ಕೇಳಿದ್ದನ್ನು ನಾವು ನೋಡಬೇಕಾದ್ದು ಈ ಹಿನ್ನೆಲೆಯಲ್ಲಿ.
ಮೇಲೆ ಉಲ್ಲೇಖಗೊಂಡ ಪ್ರಶ್ನೆಯನ್ನು ಆಸ್ಟ್ರೇಲಿಯಾ ಮತ್ತು ಜಪಾನ್ಗಳಿಗಷ್ಟೇ ಟ್ರಂಪ್ ಕೇಳಿದ್ದು ಯಾಕೆ? ಆಸ್ಟ್ರೇಲಿಯಾ ಮಹಾ ಸೇನಾಶಕ್ತಿಯೇನೂ ಅಲ್ಲ. ಜಪಾನ್ ಸಹ ತನ್ನ ರಕ್ಷಣೆಗಾಗಿ ಅಮೆರಿಕಾವನ್ನೇ ಮುಖ್ಯವಾಗಿ ಅವಲಂಬಿಸಿರುವ ದೇಶ. ಆದರೆ ಅವೆರಡರ ಮುಂದಷ್ಟೇ ಪ್ರಶ್ನೆಯಿತ್ತ ಟ್ರಂಪ್ರ ನಡೆಯಲ್ಲಿ ಹಲವು ಒಳ ಅರ್ಥಗಳಿವೆ. ಫಿಲಿಪ್ಪೀನ್ಸ್ ಅನ್ನು ಕೇಳದೇ ಹೋದದ್ದು ಹಿಂದಿನ ಅಧ್ಯಕ್ಷ ಬೈಡೆನ್ ಸೃಷ್ಟಿಸಿದ ‘ಸ್ಕ್ವಾಡ್'’ ಅನ್ನು ತಾನು ಪುರಸ್ಕರಿಸುವುದಿಲ್ಲ ಎಂದು ಸೂಚಿಸಲು. ಹಾಗೆಯೇ ಭಾರತವನ್ನು ಕೇಳದೇ ಹೋದದ್ದು ವಾಷಿಂಗ್ಟನ್ ಮತ್ತು ನವದೆಹಲಿಗಳ ನಡುವೆ ಚೀನಾ ಕುರಿತಾಗಿ ಈಗಾಗಲೇ ಸಹಮತ ಏರ್ಪಟ್ಟಿದೆ ಎನ್ನವುದರ ಸೂಚನೆ! ಈ ವಿಷಯದ ಕುರಿತಾಗಿ ಮುಂದೆ ವಿಸõತವಾಗಿ ಪರಿಶೀಲಿಸೋಣ. ಅದಕ್ಕೆ ಮೊದಲು ಟ್ರಂಪ್ರ ಪ್ರಶ್ನೆಗೆ ಆಸ್ಟ್ರೇಲಿಯಾ ಮತ್ತು ಜಪಾನ್ ಹೇಗೆ ಪ್ರತಿಕ್ರಿಯಿಸಿದವು ಎಂದು ನೋಡೋಣ.
ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಆಂಟನಿ ಆಲ್ಬನೀಸಿ ಚೀನಾದ ಶಾಂಘೖನಲ್ಲಿ ನಿಂತು ತೆಗೆದ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ಹೇಳುವುದು ತಮ್ಮ ದೇಶದ ಅರ್ಥವ್ಯವಸ್ಥೆಯ ಉನ್ನತೀಕರಣಕ್ಕಾಗಿ ತಾವು ಚೀನಾಗೆ ಭೇಟಿ ನೀಡುತ್ತಿರುವುದು ಎಂದು, ಆಸ್ಟ್ರೇಲಿಯನ್ನರ ಪ್ರತಿ ನಾಲ್ಕು ಉದ್ಯೋಗಗಳು ಸೃಷ್ಟಿಯಾಗುವುದು ಚೀನಾದ ಸಹಕಾರದಿಂದ ಎಂದೂ ಅವರು ಹೇಳುತ್ತಾರೆ. ಒಟ್ಟಾರೆ ಅವರ ಮಾತಿನ ಮತ್ತು ಆ ವಿಡಿಯೋವನ್ನು ಪೋಸ್ಟ್ ಮಾಡಿದ ಅರ್ಥ ತಮಗೆ ಚೀನಾ ಮುಖ್ಯ, ಅದನ್ನು ತಾವು ಬಿಡಲಾಗುವುದಿಲ್ಲ ಎಂದು.
ಆಂಟನಿ ಆಲ್ಬನೀಸಿ ಅವರ ಈ ನಡೆ ಹಿಂದಿನ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಅವರ ನಡೆಯಿಂದ ಭಿನ್ನ. ಕೋವಿಡ್ ಮಹಾಮಾರಿ ಮತ್ತು ಆ ದಿನಗಳ ಚೀನಿ ಆರ್ಥಿಕ ನೀತಿಗಳಿಂದಾಗಿ ತಮ್ಮ ದೇಶಕ್ಕೆ ಅಪಾರ ಹಾನಿಯಾದದನ್ನು ಮಾರಿಸನ್ ತೀವ್ರವಾಗಿ ಟೀಕಿಸಿದ್ದರು ಮತ್ತು ಚೀನಾ ಜತೆ ಸಂಬಂಧಗಳನ್ನು ಮಿತಗೊಳಿಸಲು ಕ್ರಮಗಳನ್ನು ಕೈಗೊಂಡಿದ್ದರು. ಆದರಿಂದು ಆಲ್ಬನೀಸಿ ಬೇರೆಯೇ ದಿಕ್ಕಿನಲ್ಲಿ ಸಾಗುತ್ತಿರುವಂತಿದೆ. ಅವರ ಈ ನಡೆಗೆ ಹೊರನೋಟಕ್ಕೆ ಕಾಣಸಿಗಬಹುದಾದ ಒಂದು ಕಾರಣವೆಂದರೆ ಬೈಡೆನ್ ಆಡಳಿತ ಕಟ್ಟಿದ ‘ಆಕಸ್’ ಸಂಘಟನೆಯನ್ನು ತಾವು ಪುನರ್ಪರಿಶೀಲಿಸುವುದಾಗಿ ಟ್ರಂಪ್ ಹೇಳಿದ್ದು. ಆ ಸಂಘಟನೆಯ ಭಾಗವಾಗಿ ಆಸ್ಟ್ರೇಲಿಯಾಗೆ ನ್ಯೂಕ್ಲಿಯರ್ ಸಬ್ವೆುರೀನ್ಗಳು ದೊರೆಯುತ್ತಿದ್ದವು. ಅವು ಸಿಗುತ್ತವೆ ಎಂದು ನಂಬಿ ಆ ದೇಶ ಹಿಂದೆ ಫ್ರಾನ್ಸ್ ಜತೆ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದುಮಾಡಿ ಪ್ಯಾರಿಸ್ನ ಸಿಟ್ಟಿಗೆ ಗುರಿಯಾಗಿತ್ತು. ಈಗ ನ್ಯೂಕ್ಲಿಯರ್ ಸಬ್ವೆುರೀನ್ಗಳು ಅಮೆರಿಕಾದಿಂದಲೂ ಸಿಗುವುದು ಅನುಮಾನ ಎಂದೆನಿಸಿದರೆ ಆ ದೇಶದ ಪ್ರಧಾನಮಂತ್ರಿಗೆ ತಲೆ ಕೆಟ್ಟು ಹೋಗುವುದಿಲ್ಲವೇ? ಹಾಗಾಗಿ, ಮತ್ತೆ ಫ್ರಾನ್ಸ್ನ ಬಳಿಗೇ ಹೋಗುವುದೇ? ಅದೆಂತಹ ಅವಮಾನ! ಒಟ್ಟಿನಲ್ಲಿ ‘ಆಕಸ್’ ಅನ್ನು ಪುನರ್ವಿಮಶಿಸುವ, ಮಾತನ್ನಾಡುವ ಮುನ್ನ ಟ್ರಂಪ್ ಸ್ವಲ್ಪ ವಿವೇಚನೆ ತೋರಬೇಕಿತ್ತು.
ಇಷ್ಟಾಗಿಯೂ ಆಸ್ಟ್ರೇಲಿಯಾ ಪೂರ್ಣವಾಗಿ ಚೀನಾ ಕಡೆ ಸರಿಯುತ್ತದೆ ಎಂದಲ್ಲ. ನಿಜ ಹೇಳಬೇಕೆಂದರೆ ಆಸ್ಟ್ರೇಲಿಯಾಗೆ ಚೀನಾ ಆರ್ಥಿಕವಾಗಿ ಅನುಕೂಲಕರವಾಗಿ ಕಾಣುತ್ತಿರಬಹುದು. ಅದರೆ ರಾಜತಾಂತ್ರಿಕವಾಗಿ ಮತ್ತು ಮುಂದೆ ಸಾಮರಿಕವಾಗಿಯೂ ಆಸ್ಟ್ರೇಲಿಯಾಗೆ ಕಂಟಕ ಚೀನಾವೇ. ಆಸ್ಟ್ರೇಲಿಯಾಗೆ ಹತ್ತಿರದ ಸೊಲೋಮನ್ ದ್ವೀಪಗಳು ಮತ್ತಿತರ ಪೆಸಿಫಿಕ್ ದ್ವೀಪಗಳಲ್ಲಿ ಆಸ್ಟ್ರೇಲಿಯಾದ ಪ್ರಭಾವವನ್ನು ಕುಗ್ಗಿಸಿ ತನ್ನ ದೇಶದ ಪ್ರಭಾವವನ್ನು ವೃದ್ಧಿಸಲು ಕಳೆದ ಒಂದು ದಶಕದಿಂದಲೂ ಚೀನಿ ಅಧ್ಯಕ್ಷ ಜಿನ್ಪಿಂಗ್ ಕಾರ್ಯಪ್ರವೃತ್ತರಾಗಿಯೇ ಇದ್ದಾರೆ. 2022ರ ಮಾರ್ಚ್ವರೆಗೆ ಪ್ರಧಾನಿಯಾಗಿದ್ದ ಸ್ಕಾಟ್ ಮಾರಿಸನ್ ಚೀನಾದ ವಿರುದ್ಧ ಕಿಡಿಕಾರಲು ಮತ್ತು ಚೀನಾ ವಿರುದ್ಧದ ಯಾವುದೇ ಬಲಿಷ್ಠ ಆರ್ಥಿಕ ಅಥವಾ ಸೇನಾ ಸಂಘಟನೆ ಸೇರಲು ಉತ್ಸುಕತೆ ತೋರಲು ಅದೂ ಒಂದು ಪ್ರಬಲ ಕಾರಣವಾಗಿತ್ತು.
ಈಗಲೂ ಪರಿಸ್ಥಿತಿ ಸುಧಾರಿಸಿಲ್ಲ. ಚೀನಾದ್ದು ಅದೇ ನೀತಿ. ಚೀನಾದ ಹುನ್ನಾರಕ್ಕೆ ಟ್ರಂಪ್ ತಮ್ಮ ಅರ್ತಾಕ ಆಮದುಸುಂಕ ನೀತಿಯಿಂದ ಪೋ›ತ್ಸಾಹ ನೀಡುತ್ತಿದ್ದಾರೆ. ಆಸ್ಟ್ರೇಲಿಯಾವಷ್ಟೇ ಅಲ್ಲ, ಅದರ ಅಧೀನದಲ್ಲಿರುವ, ಜನರೇ ಇಲ್ಲದ ಕೆಲವು ದ್ವೀಪಗಳ ಮೇಲೂ ಆಮದುಸುಂಕ ವಿಧಿಸುವ ಅರ್ಥಹೀನ ಧಮಕಿಗಳನ್ನು ನೀಡುವ ಮೊದಲು ಟ್ರಂಪ್ ವಿವೇಚನೆ ತೊರಬೇಕಿತ್ತು. ತನಗೆ ಆರ್ಥಿಕ ಹಾನಿಯುಂಟುಮಾಡುವ ದೇಶದಿಂದ ದೂರ ಸರಿದು ಅನುಕೂಲವನಿಸುವ ಕಡೆಗೆ ಸರಿಯುವುದು ದೇಶಗಳ ನೀತಿ. ಇದು ಮನುಷ್ಯ ಸ್ವಭಾವ ಸಹ. ‘ವ್ಯಕ್ತಿಯೊಬ್ಬ ತನ್ನ ತಂದೆಯ ಕೊಲೆಗಾರನನ್ನು ಕ್ಷಮಿಸಬಹದು, ಆದರೆ ತನ್ನ ಆಸ್ತಿಯನ್ನು ಲಪಟಾಯಿಸಿದವನನ್ನು ಕ್ಷಮಿಸಲಾರ’ ಎಂದು ಮೆಕಿಯಾವೆಲ್ಲಿ ಐದು ಶತಮಾನಗಳ ಹಿಂದೆಯೇ ಹೇಳಿದ್ದಾನೆ. ಆ ರಾಜತಂತ್ರ ನಿಪುಣನ ಮಾತು ವ್ಯಕ್ತಿಗಳ ಸಮೂಹಗಳಾದ ದೇಶಗಳಿಗೂ ಅನ್ವಯಿಸುತ್ತದೆ.
ಆದಾಗ್ಯೂ ಚೀನೀ ಆರ್ಥಿಕ ಸಖ್ಯ ತನ್ನ ದೇಶಕ್ಕೆ ಮಾರಕ ಎಂದು ಪ್ರಧಾನಿ ಆಲ್ಬನೀಸಿ ಅರಿಯುವ ಕಾಲ ದೂರವೇನೂ ಇಲ್ಲ. ಆ ದೂರವನ್ನು ಇನ್ನಷ್ಟು ಕಡಿಮೆಗೊಳಿಸುವ ಕೆಲಸವನ್ನು ಟ್ರಂಪ್ ಮತ್ತವರ ಸಹಯೋಗಿಗಳು ಮಾಡಬೇಕು. ಜಪಾನ್ನದೂ ಸರಿಸುಮಾರು ಇದೇ ಕಥೆವ್ಯಥೆ. ಜಪಾನ್ನ ಸುರಕ್ಷೆಯ ಕುರಿತಾಗಿ ಅಮೆರಿಕಾದ ಜವಾಬ್ದಾರಿಯ ಬಗ್ಗೆ ಅರ್ತಾಕ ಮಾತುಗಳನ್ನಾಡುವ, ಬಿಲಿಯನ್ಗಟ್ಟಲೆ ಹಣ ಕೇಳುವ, ಆಮದುಶುಲ್ಕವನ್ನೂ ವಿಧಿಸುವ ಮಾತುಗಳನ್ನಾಡುವ ಮೊದಲು ಟ್ರಂಪ್ ಯೋಚಿಸಬೇಕಿತ್ತು. ಅವರ ಮಾತುಗಳಿಂದ ರೋಸಿದ ಜಪಾನಿ ಶಿಗೇರು ಇಷಿಗಾ ಹೇಳಿದ್ದು, ‘ಅಮೆರಿಕಾ ಮೇಲಿನ ಅವಲಂಬನೆಯನ್ನು ಜಪಾನ್ ಕಡಿಮೆ ಮಾಡಿಕೊಳ್ಳಬೇಕು’ ಎಂದು.
ಅವರ ಈ ಮಾತನ್ನು ತೈವಾನ್ ಪ್ರಶ್ನೆ ಕುರಿತಾಗಿ ಟ್ರಂಪ್ ಕೇಳಿದ ಪ್ರಶ್ನೆಗೆ ಉತ್ತರವಾಗಿ ನೋಡಬಹುದು. ಇಷ್ಟಾಗಿಯೂ, ತೈವಾನ್ ಪ್ರಶ್ನೆ ಮುಂದೆ ತನಗೂ ದೊಡ್ಡ ಪ್ರಶ್ನೆಯಾಗಿ ಎದುರು ನಿಲ್ಲಬಹುದು ಎಂದು ಜಪಾನ್ಗೆ ಅರಿವಾಗಲು ಹೆಚ್ಚು ಕಾಲ ಬೇಕಾಗದು. ಆಗ ತನಗೆ ಅಮೆರಿಕಾ ಸಖ್ಯ ಅತ್ಯಗತ್ಯ ಎಂದು ಜಪಾನ್ ಅರಿಯುವುದು ನಿಶ್ಚಿತ. ಅದಕ್ಕೆ ಪೂರ್ವಭಾವಿಯಾಗಿ ಜಪಾನ್ನ ವಿಶ್ವಾಸವನ್ನು ಮತ್ತೆ ಗಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ಟ್ರಂಪ್ ಮಾಡಬೇಕು. ಅದನ್ನವರು ಮಾಡುತ್ತಾರೆ ಎನ್ನುವುದೂ ನಿಶ್ಚಿತ."Trump always chickens out' ಎಂದು ಯಾರು ಎಷ್ಟೇ ಹೇಳಲಿ, ಸನ್ನಿವೇಶದ ಅಗತ್ಯಕ್ಕೆ ತಕ್ಕಂತೆ ತಮ್ಮ ಮಾತು ಮತ್ತು ಕೃತಿಗಳನ್ನು ಬದಲಾಯಸಿಕೊಳ್ಳುವುದು ಟ್ರಂಪ್ರ ಅಭ್ಯಾಸ. ಮೊದಲ ಅಧ್ಯಕ್ಷಾವಧಿಯಲ್ಲೂ ಅವರದನ್ನು ಮಾಡಿದ್ದಾರೆ, ಈ ಅವಧಿಯಲ್ಲೂ ಮಾಡುತ್ತಾರೆ. ಇನ್ನು ಭಾರತದ ಬಗ್ಗೆ ಹೇಳಲು ಪ್ರತ್ಯೇಕ ಲೇಖನವೇ ಅಗತ್ಯ. ಅದನ್ನು ಮುಂದಿನವಾರ ತೆಗೆದುಕೊಳ್ಳೋಣ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)