ರಷ್ಯನ್ ನಿಯೋಗದಲ್ಲಿ ಇಂತಹ ಯಾವ ಗೊಂದಲವಾಗಲೀ, ಅನಿಶ್ಚಿತತೆಯಾಗಲೀ ಇರಲಿಲ್ಲ. ಅಧ್ಯಕ್ಷ ಪುತಿನ್ ಅವರ ನಡೆನುಡಿಯಲ್ಲಿ ಕಂಡುಬಂದದ್ದು ಆತ್ಮಾಭಿಮಾನವಷ್ಟೇ ಅಲ್ಲ, ರಷ್ಯಾದ ಬಗೆಗಿನ ಗೌರವ. ಅದನ್ನು ವಿದೇಶ ಮಂತ್ರಿ ಸೆರ್ಗೆಯಿ ಲ್ಯಾವ್ರೋವ್ ಪ್ರದರ್ಶಿಸಿದ್ದು ಇನ್ನೊಂದು ಪರಿಣಾಮಕಾರಿ ಬಗೆಯಲ್ಲಿ. ಅವರು ತೊಟ್ಟ ಜಾಕೆಟ್ ಮೇಲೆ ಕಂಡ ಅಕ್ಷರಗಳು CCCP. ಅವು ರೋಮನ್ ಲಿಪಿಯ ಇಂಗ್ಲಿಷ್ ಅಕ್ಷರಗಳಲ್ಲ, ಸಿರಿಲಿಕ್ ಲಿಪಿಯ ರಷ್ಯನ್ ಅಕ್ಷರಗಳು. ಇಂಗ್ಲಿಷ್ನಲ್ಲಿ ಅವುಗಳ ಅರ್ಥ USSR ಅಂತ! ಇದರ ಮೂಲಕ ಲ್ಯಾವ್ರೋವ್, ಅಧ್ಯಕ್ಷ ಟ್ರಂಪ್ಗೆ ನೀಡಿದ ಸಂದೇಶ- ಮೂರೂವರೆ ದಶಕಗಳ ಹಿಂದೆ ಮರೆಯಾಗಿಹೋಯಿತೆಂದು ಜಗತ್ತು ತಿಳಿದಿರುವ ಬೃಹತ್ ಯುಎಸ್ಎಸ್ಆರ್ ಅಥವಾ ಸೋವಿಯೆತ್ ಯೂನಿಯನ್ ರಶಿಯನ್ನರ ಹೃದಯದಲ್ಲಿ ಇನ್ನೂ ಜೀವಂತವಾಗಿದೆ ಎಂದು. ಇಂದಿನ ಯೂಕ್ರೇನ್ ಆ ಯುಎಸ್ಎಸ್ಆರ್ನ ಭಾಗವಾಗಿತ್ತು ಎನ್ನುವುದನ್ನು ನಾನು ನಿಮಗೆ ನೆನಪಿಸಬೇಕಿಲ್ಲವಷ್ಟೇ?
ಮಾತುಕತೆಯಲ್ಲಿ ಅಧ್ಯಕ್ಷ ಪುತಿನ್ ತಮ್ಮ ನಿಲುವುಗಳನ್ನು ನೇರವಾಗಿ ಮುಂದಿಟ್ಟರು. ಅವೇನೂ ಹೊಸವಲ್ಲ. ನ್ಯಾಟೋ ಕನಸನ್ನು ಯೂಕ್ರೇನ್ ಮರೆತು ಬಿಡಬೇಕು ಮತ್ತು ಆ ದೇಶದಲ್ಲಿ ರಷ್ಯನ್ ಸೇನೆ ಆಕ್ರಮಿಸಿಕೊಂಡಿರುವ ಪ್ರದೇಶಗಳಲ್ಲಿ ಬಹುಪಾಲು, ಮುಖ್ಯವಾಗಿ ರಷ್ಯನ್ನರು ಬಹುಸಂಖ್ಯಾತರಾಗಿರುವ ಪೂರ್ವದ ದಾನ್ಬಾಸ್ ಹಾಗೂ ದಕ್ಷಿಣದ ಕ್ರಿಮಿಯಾ ಪರ್ಯಾಯದ್ವೀಪ ಮಾಸ್ಕೋದ ಹಿಡಿತದಲ್ಲೇ ಉಳಿಯಬೇಕು, ಜತೆಗೆ ಆ ಎರಡೂ ಪ್ರದೇಶಗಳನ್ನು ಸಂರ್ಪಸಲು ಅಝೆೊವ್ ಸಮುದ್ರತಟದ ನೀಳ ಪ್ರದೇಶವೂ ರಷ್ಯಾದಲ್ಲೇ ಇರಬೇಕು ಎನ್ನುವುದು. ಪುತಿನ್ ಮಾಸ್ಕೋದಲ್ಲಿ ಕೂತು ಅದೆಷ್ಟೋ ಸಲ ಹೇಳಿದ್ದ ಮಾತುಗಳನ್ನು ಅಮೆರಿಕದ ಅಧ್ಯಕ್ಷರಿಗೆ ಅವರ ನೆಲದಲ್ಲೇ ಕೂತು ನೇರವಾಗಿ ಹೇಳಿದರು. ಇವುಗಳಿಗೆ ಇಲ್ಲವೆನ್ನುವ ಮಾತುಗಳು ಟ್ರಂಪ್ರಿಂದ ಬರಲಿಲ್ಲ. ಯುದ್ಧವನ್ನು ನಿಲ್ಲಿಸುವ, ಆ ಮೂಲಕ ಯೂಕ್ರೇನ್ನ ಸ್ವತಂತ್ರ ಅಸ್ತಿತ್ವ ವನ್ನು ಕಾಪಾಡುವ ಕನಸಿನಲ್ಲಿ ಮಾತುಕತೆಗೆ ಬಂದ ಟ್ರಂಪ್ರಿಗೆ ರಷ್ಯಾ ನೀಡಿದ ಸಂದೇಶ ಏನು ಎಂಬುದನ್ನು ನಾನು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ. ಜತೆಗೆ ಆಂಕರೇಜ್ನಿಂದ ವಾಷಿಂಗ್ಟನ್ಗೆ ಹಿಂತಿರುಗುವ ಟ್ರಂಪ್ರ ಜತೆ ಮಾತುಕತೆ ನಡೆಸಲು ತುದಿಗಾಲಿನಲ್ಲಿ ನಿಂತಿದ್ದ ಯೂಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯವರಿಗೂ ಈ ಸಂದೇಶ ತಲುಪಿರಲಿಕ್ಕೆ ಸಾಕು.
ಎರಡೂಮುಕ್ಕಾಲು ತಾಸುಗಳವರೆಗೆ ನಡೆದ ಟ್ರಂಪ್- ಪುತಿನ್ ಮಾತುಕತೆ ಟ್ರಂಪ್ ಬಯಸಿದ್ದ ಫಲಿತಾಂಶಗಳನ್ನು ತರಲಿಲ್ಲ ಎನ್ನುವುದು ಅದು ಮುಗಿದ ಮರುಕ್ಷಣವೇ ಜಗತ್ತಿನ ಮುಂದೆ ತೆರೆದುಕೊಂಡಿತು. ಸಂಕ್ಷಿಪ್ತ ಪತ್ರಿಕಾಗೋಷ್ಠಿ, ಸಾಮಾನ್ಯವಾಗಿ ಇರುವಂತಹ ಆದರೆ ಇಲ್ಲದೇ ಹೋದ ಲಂಚ್ ನೀಡಿದ್ದು ಸಂಪುಟಗಟ್ಟಲೆ ಸಂದೇಶಗಳು. ಕೇವಲ ಹತ್ತು ದಿನಗಳ ಹಿಂದೆ ರಷ್ಯಾಗೆ ಯುದ್ಧದ ಬೆದರಿಕೆ ಒಡ್ಡಿದ್ದ ಟ್ರಂಪ್ರಿಗೆ ಒಂದು ಕಾಲದಲ್ಲಿ ತಮ್ಮದಾಗಿದ್ದ ಅಲಾಸ್ಕಾದಲ್ಲಿ ಹೆಚ್ಚಿನದೇನನ್ನೂ ಚಿನ್ನದ ತಟ್ಟೆಯಲ್ಲಿಟ್ಟು ಕೊಡಲು ಅಧ್ಯಕ್ಷ ಪುತಿನ್ ತಯಾರಿರಲಿಲ್ಲ. ಇದೇ ಪುತಿನ್ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ, ಇನ್ನೇನು ಸತ್ತುಹೋಗುತ್ತಾರೆ, ಅಲ್ಲಿಗೆ ಯೂಕ್ರೇನ್ ವಿರುದ್ಧ ರಷ್ಯಾದ ಅಟಾಟೋಪ ನಿಂತುಹೋಗುತ್ತದೆ ಎಂದು ಪಶ್ಚಿಮದ ಘನ ಬೇಹುಗಾರಿಕಾ ಸಂಸ್ಥೆಗಳು ಮೂರು ವರ್ಷಗಳ ಹಿಂದೆ ಹೇಳಿದ್ದವು!
ತಾವು ಆತುರದಲ್ಲಿ ಬೇಡಿಕೊಂಡ ಭೇಟಿ ಪೂರ್ಣವಾಗಿ ತಮ್ಮ ನಿರೀಕ್ಷೆಯಂತೆ ನಡೆಯುವುದಿಲ್ಲವೆಂದು ಟ್ರಂಪ್ಗೆ ಆಗಸ್ಟ್ 13ರ ಹೊತ್ತಿಗೇ ಗೊತ್ತಾಗಿದ್ದಂತೆ ಕಾಣುತ್ತದೆ. ಅಂದು ವರದಿಗಾರರ ಜತೆ ಮಾತನಾಡುತ್ತಾ ಅವರು, ಯೂಕ್ರೇನ್ ಪ್ರಶ್ನೆಯ ಸಮಾಧಾನಕ್ಕಾಗಿ ಆಂಕರೇಜ್ ಮಾತುಕತೆಗಳಾಚೆಗೂ ಕಾಯಬೇಕಾಗುತ್ತದೆ, ಮತ್ತೆ ಒಂದು ಭೇಟಿ ಹಾಗೂ ಮಾತುಕತೆ ಅಗತ್ಯವಾಗಬಹುದು ಎಂದು ಹೇಳಿದ್ದರು. ಅದು ಆ. 15ರಂದು ಅವರಿಗೇ ಸ್ಪಷ್ಟವಾಯಿತು. ಆದರೆ ಅವರಿಗೆ ಅನಿರೀಕ್ಷಿತವಾದದ್ದೆಂದರೆ, ಮತ್ತೆ ಭೇಟಿಯಾಗೋಣ ಎಂಬ ಅವರ ಮಾತಿಗೆ ಪ್ರತಿಯಾಗಿ ಪುತಿನ್ ಮುಂದಿನ ಭೇಟಿ ಮಾಸ್ಕೋದಲ್ಲಿ ಎಂದು, ಅದೂ ಇಂಗ್ಲಿಷ್ನಲ್ಲಿ ಹೇಳಿದ್ದು.
ವಾಷಿಂಗ್ಟನ್ಗೆ ಹಿಂತಿರುಗಿದ ಟ್ರಂಪ್ ರಿಪಬ್ಲಿಕನ್ ಪಕ್ಷದ ಪರವಾಗಿರುವ ಫಾಕ್ಸ್ ನ್ಯೂಸ್ ಸ್ಟುಡಿಯೋದಲ್ಲಿ ಕೂತು ಮುಂದಿನ ಭೇಟಿಯ ಅಗತ್ಯ ಹಾಗೂ ಮಹತ್ವದ ಬಗ್ಗೆ ಅಮೆರಿಕ, ಯೂಕ್ರೇನ್ ಮತ್ತು ಯೂರೋಪ್ ಅನ್ನು ನಂಬಿಸುವ ಪ್ರಯತ್ನದಲ್ಲಿ ತೊಡಗಿದರು. ತಾವು ಅಧ್ಯಕ್ಷರಾದ 24 ತಾಸುಗಳಲ್ಲಿ ರಷ್ಯಾ- ಯೂಕ್ರೇನ್ ಯುದ್ಧವನ್ನು ಅಂತ್ಯಗೊಳಿಸುವುದಾಗಿ ಮತ್ತೆ ಮತ್ತೆ ಘೊಷಿಸಿದ್ದ ಟ್ರಂಪ್ ತಾವು ಶ್ವೇತಭವನ ಪ್ರವೇಶಿಸಿ 24 ವಾರಗಳಾದರೂ ಯುದ್ಧ ಮುಂದುವರೆಯುತ್ತಲೇ ಇರುವುದನ್ನು ನೋಡುತ್ತಾ ಕೂರಬೇಕಾದ ತಮ್ಮ ಪರಿಸ್ಥಿತಿ ರಾಜತಂತ್ರದಲ್ಲಿ ತಾವೆಷ್ಟು ಅಪ್ರಬುದ್ಧರು ಎಂಬ ವಾಸ್ತವವಾದ ಅರಿವಿನ ಏಟನ್ನು ಅವರಿಗೆ ನೀಡಿರುವುದು ನಿಶ್ಚಿತ. ಜತೆಗೆ ಸಮಾನಸ್ಕಂದ ಜಾಗತಿಕ ನಾಯಕರ ಜತೆಗಿನ ಮಾತುಕತೆ ತಮ್ಮನ್ನು ತಾವು ಮಾರಿಕೊಳ್ಳಲು ತಯಾರಾಗಿ ನಿಂತಿರುವ ಪಾಕಿಸ್ತಾನಿಗಳ ಜತೆಗಿನ ‘ಡೀಲ್’ನಂತಲ್ಲ ಎಂಬ ಅರಿವನ್ನೂ ಅವರಿಗೆ ಮೂಡಿಸಿರಲಿಕ್ಕೆ ಸಾಕು. ಹೀಗಾಗಿಯೇ ಜಾಗತಿಕ ವಿದ್ಯಮಾನಗಳ ಕುರಿತಾಗಿನ ಅವರ ಮಾತುಗಳಲ್ಲಿ ಹಿಂದೆಂದೂ ಇಲ್ಲದಿದ್ದಷ್ಟು ಮೃದುತ್ವ ಈಗ ಕಾಣತೊಡಗಿದೆ.
ಆಂಕರೇಜ್ ಶೃಂಗಸಭೆಯಾದ ಮೂರನೆಯ ದಿನಕ್ಕೆ ಟ್ರಂಪ್ರ ಭೇಟಿ ಯೂಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗಾಯಿತು. ಅವರೊಂದಿಗೆ ಫ್ರಾನ್ಸ್, ಜರ್ಮನಿ, ಬ್ರಿಟನ್, ಇಟಲಿ, ಫಿನ್ಲೆಂಡ್ ನಾಯಕರ ಜತೆ ಐರೋಪ್ಯ ಒಕ್ಕೂಟ ಹಾಗೂ ನ್ಯಾಟೋದ ಮುಖ್ಯಸ್ಥರೂ ಸೇರಿದ್ದು ವಿಶೇಷ. ಆದರೆ ಈ ಭೇಟಿಯಲ್ಲೂ ಗಮನಾರ್ಹವಾದುದನ್ನು ನಿರೀಕ್ಷಿಸಲಾಗದು ಎನ್ನುವ ಸ್ಪಷ್ಟ ಸೂಚನೆ ಭೇಟಿಗೆ 24 ತಾಸು ಮೊದಲೇ ಸಿಕ್ಕಿತ್ತು. ವರದಿಗಾರರೊಂದಿಗೆ ಮಾತನಾಡುತ್ತಾ ಟ್ರಂಪ್ ಹೇಳಿದ್ದು ಯುದ್ಧ ನಿಲುಗಡೆ ಝೆಲೆನ್ಸ್ಕಿ ಕೈಯಲ್ಲಿದೆ. ಅವರು ಬಯಸಿದರೆ ನಿಲ್ಲಿಸಬಹುದು, ಇಲ್ಲದಿದ್ದಲ್ಲಿ ಮುಂದುವರೆಸಬಹುದು ಎಂದು. ಅಂದರೆ ಪುತಿನ್ ಬೇಡಿಕೆಗಳು ತಮ್ಮ ಆದೇಶಗಳಾಗಿವೆ ಎನ್ನುವುದನ್ನು ಝೆಲೆನ್ಸ್ಕಿಗೆ ಟ್ರಂಪ್ ಹೇಳಿದ್ದು ಹೀಗೆ. ಹೀಗಾಗಿ ಶ್ವೇತಭವನದಲ್ಲಿ ಮಾತುಕತೆಗಳು ಯಾವ ಹಾದಿಯಲ್ಲಿ ಸಾಗಬಹುದು ಎನ್ನುವ ಸೂಚನೆ ಪಡೆದು ಅದಕ್ಕೆ ತಯಾರಾಗಲು ಯೂರೋಪಿಯನ್ ನೇತಾರರಿಗೆ ಸಮಯಾವಕಾಶ ದೊರೆತಂತಾಯಿತು. ಜತೆಗೆ ಟ್ರಂಪ್ ಆಡಳಿತ ಝೆಲೆನ್ಸ್ಕಿ ವಿಷಯದಲ್ಲಿ ಇನ್ನೊಂದು ಬಗೆಯ ಕಟು ನಿಲುವನ್ನೂ ತಳೆಯಿತು. ಬಂದರೆ ಸರಿಯಾದ ಸೂಟ್ ತೊಟ್ಟು, ಟೈ ಕಟ್ಟಿಕೊಂಡು ಬರಬೇಕು, ಹಿಂದಿನ ಸಲದಂತೆ ಕ್ಯಾಶುವಲ್ ಉಡುಪಿನಲ್ಲಿ ಬಂದರೆ ಈ ಸಲ ಒಳಗೆ ಪ್ರವೇಶವಿಲ್ಲ ಎಂದೂ ಝೆಲೆನ್ಸ್ಕಿಗೆ ನಿಖರ ಸೂಚನೆ ದಕ್ಕಿ ಅವರು ಪಶ್ಚಿಮದ ಸದ್ಗೃಹಸ್ಥನ ಹಾಗೆ ಶ್ವೇತಭವನ ಪ್ರವೇಶಿಸಿದರು.
ಟ್ರಂಪ್ರ ಹೊಸ ಮನಸ್ಥಿತಿಯನ್ನು ಅರಿತ ಯೂರೋಪಿಯನ್ ನೇತಾರರು ಅವರನ್ನು ಉದ್ರೇಕಿಸುವ ಪ್ರಯತ್ನಕ್ಕೆ ಹೋಗಲಿಲ್ಲ. ಜತೆಗೆ, ಅವರನ್ನೆಲ್ಲಾ ಕೂರಿಸಿ ಪುತಿನ್ರೊಂದಿಗೆ ಟ್ರಂಪ್ 40 ನಿಮಿಷ ಮಾತಾಡಿದ್ದು ಎರಡು ಮಹಾಶಕ್ತಿಗಳ ನೇತಾರರ ನಡುವೆ ಸೃಷ್ಟಿಯಾಗಿರುವ ಹೊಸ ‘ಬಾಂಧವ್ಯ’ದ ಪರಿಚಯವನ್ನೂ ಅವರಿಗೆ ನೇರವಾಗಿ ಮಾಡಿಸಿತು. ಹೀಗಾಗಿ ಅವರು ಮಾತುಕತೆ ಸಾಗಿಸಿದ ರೀತಿಯೇ ಬೇರೆ ಬಗೆಯಲ್ಲಿ. ಯೂಕ್ರೇನ್ಗೆ ತಾವು ನೀಡಬಯಸಿರುವ 90 ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳು ಅಮೆರಿಕದಿಂದ ಪೂರೈಕೆಯಾಗಬೇಕು, ಅಂದರೆ ಅಷ್ಟು ಭಾರಿ ಮೊತ್ತದ ಹಣವನ್ನು ಅಮೆರಿಕದ ಜೇಬಿಗೆ ಹಾಕಲು ತಾವು ತಯಾರಾಗಿದ್ದೇವೆ ಎಂದು ಯೂರೋಪಿಯನ್ ನಾಯಕರು ಹೇಳಿದ್ದು ‘ವ್ಯವಹಾರಸ್ಥ’ ಟ್ರಂಪ್ರ ಕಿವಿಗೆ ಸಂಗೀತವೇ ಸರಿ. ಗಂಡಸಿನ ಹೃದಯಕ್ಕೆ ದಾರಿ ಹೊಟ್ಟೆಯ ಮೂಲಕ ಎಂಬ ಮಾತನ್ನು ಜಾಣ ಯೂರೋಪಿಯನ್ ನಾಯಕರು ಟ್ರಂಪ್ ಎಂಬ ವ್ಯವಹಾರಸ್ಥ ಗಂಡಸಿನ ಹೃದಯಕ್ಕೆ ದಾರಿ ಜೇಬಿನ ಮೂಲಕ ಎಂದು ಸರಿಯಾಗಿಯೇ ಬದಲಿಸಿಕೊಂಡರು.
ಹಾಗೆಯೇ ಯೂಕ್ರೇನ್ಅನ್ನು ನ್ಯಾಟೋಗೆ ಸೇರಿಸಿಕೊಳ್ಳುವ ಮಾತನ್ನು ಹಿಂದಕ್ಕೆ ಸರಿಸಿ, ಯೂಕ್ರೇನ್ನ ಪ್ರಾದೇಶಿಕ ಸಮಗ್ರತೆಗೆ ಇನ್ನು ಮುಂದೆ ಧಕ್ಕೆಯೊದಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಅಮೆರಿಕ ಮತ್ತು ಆಸಕ್ತ ಯೂರೋಪಿಯನ್ ದೇಶಗಳು ತೆಗೆದುಕೊಳ್ಳಬೇಕೆಂಬ ಹೊಸ ಪ್ರಸ್ತಾಪವನ್ನು ಮುಂದಿಟ್ಟರು. ಆದರೆ ಇದೊಂದು ಬೋನು ಎನ್ನುವುದನ್ನು ಅರಿಯದ ಪೆದ್ದ ಟ್ರಂಪ್ ಅಲ್ಲ. ಹಾಗೇ ಯೂಕ್ರೇನ್ನ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡುವ ಜವಾಬ್ದಾರಿ ಒಮ್ಮೆ ಲಿಖಿತ ಒಪ್ಪಂದದ ಮೂಲಕ ತೆಗೆದುಕೊಂಡರೆ ಆ ದೇಶದ ವಿದೂಷಕ ಅಧ್ಯಕ್ಷ ಮುಂದೆ ಎಸಗಬಹುದಾದ ಅವಿವೇಕಿ ಸಾಹಸಗಳು ಅಮೆರಿಕ ಮತ್ತು ರಷ್ಯಾಗಳನ್ನು ಅಣ್ವಸ್ತ್ರ ಯುದ್ಧವೊಂದರಲ್ಲಿ ಎದುರುಬದುರಾಗಿ ನಿಲ್ಲಿಸುತ್ತವೆ ಎನ್ನುವುದು ಯಾರಿಗಾದರೂ ಅರ್ಥವಾಗುವ ವಾಸ್ತವ. ಅಂತಹ ವಿನಾಶಕಾರಿ ಹಾದಿಯತ್ತ ಸಾಗುವುದನ್ನು ತಡೆಯಲೆಂದೇ ಅಲ್ಲವೇ ಟ್ರಂಪ್ ತರಾತುರಿಯಲ್ಲಿ ಪುತಿನ್ರನ್ನು ಅಲಾಸ್ಕಾಗೆ ಕರೆದು ಅವರಿಗಾಗಿ ತಮ್ಮ ಸೈನಿಕರು ನಡು ಬಗ್ಗಿಸಿ ರೆಡ್ ಕಾರ್ಪೆಟ್ ಹಾಸುವಂತೆ ಮಾಡಿದ್ದು!
ಒಟ್ಟಿನಲ್ಲಿ ಟ್ರಂಪ್ ಮತ್ತು ಯೂರೋಪಿಯನ್ ನಾಯಕರ ಭೇಟಿ ಬೆಟ್ಟ ಅಗೆದು ಇಲಿ ಹಿಡಿದಂತಹ ಕೆಲಸ. ಆದರೆ ಟ್ರಂಪ್ರ ‘ಧನಾತ್ಮಕ’ ನಡೆಗಳನ್ನು ಹೊಗಳಿ, ಮಾತುಕತೆಗಳು ಫಲಪ್ರದವಾದವು, ಯುದ್ಧ ನಿಲುಗಡೆಗೆ ಇವು ಪರಿಣಾಮಕಾರಿ ಹಾಗೂ ಸ್ಪಷ್ಟ ಹೆಜ್ಜೆ ಎಂದು ಸಾರ್ವಜನಿಕವಾಗಿ ಘೊಷಿಸುವ ರಾಜತಂತ್ರ ನೈಪುಣ್ಯವನ್ನು ಝೆಲೆನ್ಸ್ಕಿ ಜತೆಗೆ ಭಾರಿ ಭಾರಿ ಯೂರೋಪಿಯನ್ ನೇತಾರರೂ ಪ್ರದರ್ಶಿಸಿದರು! ಪರಿಣಾಮವಾಗಿ ತಮಗೆ ದೊಡ್ಡ ದಾಳಿಗಾಗಿ ಅಮೆರಿಕದ ಮುಕ್ತ ಪರವಾನಗಿ ಹಾಗೂ ಇಂಗು ತಿಂದ ಮಂಗಗಳಾದ ಭಾರಿ ಭಾರಿ ಯೂರೋಪಿಯನ್ ನೇತಾರರ ಮೌನ ಸಮ್ಮತಿ ದೊರಕಿತು ಎಂದು ಪುತಿನ್ ತಿಳಿದು ತಮ್ಮ ದಕ್ಷಿಣದ ನೆರೆರಾಷ್ಟ್ರದ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ತೀವ್ರಗೊಳಿಸಿದ್ದಾರೆ.
ಜತೆಗೆ ಮುಂದಿನ ಸುತ್ತಿನ ಮಾತುಕತೆಗೆ ತಾವು ಸಿದ್ಧವೆಂದು ಹೇಳಿ, ಮಾಸ್ಕೋಗೆ ಬರುವಂತೆ ಟ್ರಂಪ್ಗೆ ಅಧಿಕೃತ ಆಹ್ವಾನವನ್ನೂ ಕಳುಹಿಸಿದ್ದಾರೆ. ತಮ್ಮ ನೆಲದಲ್ಲೇ ತಾವು ಆಯೋಜಿಸಿದ ಮಾತುಕತೆಯಲ್ಲೇ ಏನನ್ನೂ ಮಾಡಲಾಗದ ಟ್ರಂಪ್ ಇನ್ನು ಮಾಸ್ಕೋದಲ್ಲಿ ಏನು ಮಾಡಿಯಾರು? ಹೀಗಾಗಿಯೇ ಮುಂದಿನ ಸುತ್ತಿನ ಮಾತುಕತೆಗಳ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಇಂದು ಪುತಿನ್ ರಾಜತಾಂತ್ರಿಕವಾಗಿ ಹಿಂದೆಂದಿಗಿಂತಲೂ ಹೆಚ್ಚು ಬಲವಾಗಿದ್ದಾರೆ, ಯುದ್ಧ ನಿಲುಗಡೆಗೆ ಬರುವುದೇ ಆದರೆ ಅವರಿಚ್ಛೆಯಂತೆಯೇ ಎನ್ನುವುದು ಇಂದಿನ ವಾಸ್ತವ. ಎಷ್ಟೆಲ್ಲಾ ವಿರೋಧಗಳನ್ನು, ಆರ್ಥಿಕ ಸಂಕಟಗಳನ್ನು ಎದುರಿಸಿ, ತಾಳ್ಮೆಯಿಂದ ಯುದ್ಧವನ್ನು ಮುಂದುವರೆಸಿಕೊಂಡು ಬಂದ ಪುತಿನ್ ಇಂದು ಜಾಗತಿಕವಾಗಿ ಎತ್ತರದ ಸ್ಥಾನದಲ್ಲಿ ನಿಂತಿದ್ದಾರೆ. ಹೊಸ ಅಗಸನಂತೆ ಎತ್ತಿ ಎತ್ತಿ ಒಗೆಯಲು ಹೋದ ಟ್ರಂಪ್ ನಿತ್ರಾಣರಾಗಿ ನಿಂತಿದ್ದಾರೆ. ಅಂತರರಾಷ್ಟ್ರೀಯ ರಾಜಕಾರಣ ಮತ್ತು ರಾಜತಂತ್ರದ ವಿದ್ಯಾರ್ಥಿಗಳಿಗೆ ಈ ಇಬ್ಬರು ಕಲಿಸುವ ಪಾಠಗಳು ಅಪಾರ.
ಒಟ್ಟಾರೆಯಾಗಿ ಹೇಳುವುದಾದರೆ, ರಷ್ಯಾ-ಯೂಕ್ರೇನ್ ಯುದ್ಧವನ್ನು ನಿಲುಗಡೆಗೆ ತರಲು ಟ್ರಂಪ್ಗೆ ಸಾಧ್ಯವಾಗಿಲ್ಲ. ಗಾಝಾದಲ್ಲೂ ಶಾಂತಿ ಸ್ಥಾಪಿಸುವುದು ಅವರ ಸಾಮರ್ಥ್ಯಕ್ಕೆ ಮೀರಿದ್ದು ಎನ್ನುವುದನ್ನು ಅಲ್ಲಿನ ಬೆಳವಣಿಗೆಗಳು ಸಾರುತ್ತಿವೆ. ಗಾಝಾ ಪಟ್ಟಣವನ್ನೇ ಇಸ್ರೇಲ್ ತನ್ನ ವಶಕ್ಕೆ ತೆಗೆದುಕೊಳ್ಳಲು ಹೊರಟಿರುವುದಷ್ಟೇ ಅಲ್ಲ, ಲೆಬನಾನ್ನಲ್ಲಿರುವ ಹೆಝೊ್ಬಲ್ಲಾವನ್ನು ಇನ್ನಷ್ಟು ಶಕ್ತಿಹೀನಗೊಳಿಸುತ್ತಲೇ ದಕ್ಷಿಣದ ಯೆಮೆನ್ನಲ್ಲಿ ಹೂತಿಗಳ ಪ್ರಧಾನಮಂತ್ರಿಯನ್ನೇ ಕೊಂದುಹಾಕಿದೆ. ಅಂದರೆ ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸದ್ಯಕ್ಕೆ ಕನಸು. ಟ್ರಂಪ್ ಶಾಂತಿ ಸ್ಥಾಪಿಸಿದ್ದು ಪುಟಗೋಸಿ ಅಝುರ್ಬೈಜಾನ್ ಮತ್ತು ಅಮೇನಿಯಾಗಳ ನಡುವೆ ಮಾತ್ರ. ಭಾರತ- ಪಾಕ್ ನಡುವೆ ತಾವು ಶಾಂತಿ ಸ್ಥಾಪಿಸಿದ್ದಾಗಿ ಅವರು ಬಹುಶಃ ಐವತ್ತು ಬಾರಿ ಹೇಳಿಕೊಂಡು ನಗೆಪಾಟಲಿಗೀಡಾಗಿದ್ದಾರೆ. ಅವರ ಮಾತನ್ನು ಭಾರತ ಮೊದಲಿನಿಂದಲೂ ಅಲ್ಲಗಳೆಯುತ್ತಲೇ ಬಂದಿದೆ. ವಾರದ ಹಿಂದೆ ಪಾಕಿಸ್ತಾನದ ಉಪಪ್ರಧಾನಿ ಇಫ್ತಿಕಾರ್ ಧಾರ್ ಭಾರತದ ಮಾತನ್ನೇ ಪುನರುಚ್ಚರಿಸಿದ್ದಾರೆ.
ಇದೆಲ್ಲದರಿಂದಾಗಿ ಟ್ರಂಪ್ರ ನೊಬೆಲ್ ಶಾಂತಿ ಪುರಸ್ಕಾರದ ಕನಸಿಗೆ ಕಲ್ಲು ಬಿದ್ದಿದೆ. ನಾರ್ವೆಜಿಯನ್ ಪಾರ್ಲಿಮೆಂಟ್ ನಿಯೋಜಿಸಿದ ಐವರ ನೊಬೆಲ್ ಶಾಂತಿ ಸಮಿತಿ ತಾವು ಹೇಳಿಕೊಳ್ಳುವ ಯಾವ ಸಾಧನೆಯನ್ನೂ ನಂಬುತ್ತಿಲ್ಲ ಮತ್ತು ಇರಾನ್ ಮೇಲಿನ ಬಂಕರ್ ಬಸ್ಟರ್ ಬಾಂಬ್ ದಾಳಿಯನ್ನು ಶಾಂತಿ-ವಿರೋಧಿ ಕೃತ್ಯ ಎಂದು ಪರಿಗಣಿಸುತ್ತಿದೆ ಎಂದು ಕಳೆದ ತಿಂಗಳ ಮಧ್ಯಭಾಗದಲ್ಲಿ ಅರಿತೊಡನೇ ಹತಾಶರಾದ ಟ್ರಂಪ್ ನಾರ್ವೆಯ ಅರ್ಥಮಂತ್ರಿ ಜೆನ್ಸ್ ಸ್ಟೋಲ್ಟೆನ್ಬರ್ಗ್ ಅವರಿಗೆ ಕರೆ ಮಾಡಿದರು. ಓಸ್ಲೋ ನಗರದ ರಸ್ತೆಯಲ್ಲಿ ತಿರುಗಾಡುತ್ತಲೇ ಪೋನ್ ಕರೆ ಸ್ವೀಕರಿಸಿದ ಆ ಮಾಜಿ ನ್ಯಾಟೋ ಮುಖ್ಯಸ್ಥ ಅಮೆರಿಕದ ಅಧ್ಯಕ್ಷರಿಗೆ ‘ಸಮಿತಿ ನೇಮಕ ಮಾಡುವುದಷ್ಟೇ ನಾರ್ವೆ ಸರ್ಕಾರದ ಕೆಲಸ, ನಂತರದ್ದೇನಿದ್ದರೂ ಸಮಿತಿಯ ಕೆಲಸಗಳಷ್ಟೇ, ಅದರಲ್ಲಿ ಸರ್ಕಾರ ಮೂಗು ತೂರಿಸಲಾಗದು’ ಎಂದು ಸ್ಪಷ್ಟವಾಗಿ ಹೇಳಿಬಿಟ್ಟರು!
ಇದರ ಮುಂದುವರಿಕೆಯಾಗಿ, ‘ಜಾಗತಿಕವಾಗಿ ಯಾವುದೇ ಮಹತ್ವದ ಶಾಂತಿಸ್ಥಾಪನಾ ಸಾಧನೆ ಟ್ರಂಪ್ ಅವರದಲ್ಲ, ಬದಲಿಗೆ ಅಮೆರಿಕದಲ್ಲೇ ಪತ್ರಿಕಾ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅವರು ವ್ಯಾಪಕವಾಗಿ ಹರಣ ಮಾಡುತ್ತಿದ್ದಾರೆ, ದೇಶದೊಳಗೆ ರಾಜಕೀಯ ವಿರೋಧಿಗಳ
ಈ ನಟುವೆ ಟ್ರಂಪ್ರ 4 ಫೋನ್ ಕರೆಗಳನ್ನು ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸಿಲ್ಲ. ಬದಲಿಗೆ ಚೀನಾಗೆ ಪಯಣಿಸಿ ಪುತಿನ್ ಮತ್ತು ಜಿನ್ಪಿಂಗ್ ಜತೆ ವೇದಿಕೆ ಹಂಚಿಕೊಂಡು ಮೂರೂ ದೇಶಗಳ ನಡುವಿನ ಸ್ನೇಹಸಂಬಂಧಗಳ ಹೊಸಯುಗಕ್ಕೆ ನಾಂದಿ ಹಾಡಿದ್ದಾರೆ. ಇದನ್ನು ವರದಿ ಮಾಡುತ್ತಾ ಅಮೆರಿಕದ ಮಾಧ್ಯಮಗಳೇ ‘ವಿಶ್ವದ 4 ಮಹಾಶಕ್ತಿಗಳಲ್ಲಿ 3 ಈಗ ಒಂದೆಡೆ ಸೇರಿವೆ’ ಎಂದು ಬಣ್ಣಿಸಿವೆ. ಅಂತೂ ಭಾರತ ಇಂದು ಮಹಾಶಕ್ತಿ ಎನ್ನುವುದನ್ನು ಪಶ್ಚಿಮ ಜಗತ್ತೆ ಒಪ್ಪಿಕೊಂಡಂತಾಯಿತು! ಈ ಮಹತ್ವದ ಬೆಳವಣಿಗೆಯ ವಿಶ್ಲೇಷಣೆಗೆ ಪ್ರತ್ಯೇಕ ಲೇಖನವೇ ಅಗತ್ಯ. ಅದನ್ನು ಮುಂದಿನ ವಾರ ಮಾಡೋಣ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)