ಅಲ್ಲದೆ, ಹಾಗೆ ತಾವು ವಿದೇಶಿ ಸರಕುಗಳ ಮೇಲೆ ಅಧಿಕ ಸುಂಕ ವಿಧಿಸಿ ಆ ದೇಶಗಳನ್ನು ಸರಿದಾರಿಗೆ ತರುವ ದಿನ ಅಮೆರಿಕಾಗೆ ‘ಸ್ವಾತಂತ್ರ್ಯ ದಿನ’ವಾಗಿರುತ್ತದೆ ಎಂದೂ ಘೊಷಿಸಿದ್ದರು. ಅದರಂತೆ ತಾವು ಅಧಿಕಾರಕ್ಕೆ ಬಂದ ನಂತರ ಕೆನಡಾ ಮತ್ತು ಮೆಕ್ಸಿಕೋಗಳಿಂದ ಆರಂಭಿಸಿ ಎಲ್ಲ ವಿದೇಶಿ ಸರಕುಗಳ ಮೇಲೆ ಅಧಿಕ ಸುಂಕದ ಘೊಷಣೆ ಮಾಡಿದರು. ಆದರೆ ಅದರ ಅನುಷ್ಠಾನವನ್ನು ಮತ್ತೆ ಮತ್ತೆ ಮುಂದೂಡಿದರು. ಅದಕ್ಕೆ ಅವರು ಕೊಟ್ಟ ಕಾರಣ ಸುಂಕಗಳಿಗೆ ಸಂಬಂಧಿಸಿದಂತೆ ಹಾಗೂ ಅಮೆರಿಕಾದ ಸರಕುಗಳನ್ನು ತಮ್ಮ ಮಾರುಕಟ್ಟೆಗಳಿಗೆ ಬಿಟ್ಟುಕೊಳ್ಳಲು ವಿಚಾರ ಮಾಡಿ ಅಮೆರಿಕಾದೊಂದಿಗೆ ‘ಡೀಲ್’ ಮಾಡಿಕೊಳ್ಳುವ ಅವಕಾಶವನ್ನು ನೀಡುತ್ತಿದ್ದೇನೆ ಎಂದು.
ಸುಮಾರು ಎಪ್ಪತ್ತು ದೇಶಗಳು ‘ಡೀಲ್’ಗಾಗಿ ಮಾತುಕತೆಗೆ ಮುಂದೆ ಬಂದಿವೆ ಎಂದೂ ಅವರ ಆಡಳಿತದ ಹಿರಿಯ ಅಧಿಕಾರಿಗಳು ಹೇಳಿಕೊಂಡರು. ಅಂತಹ ‘ಡೀಲ್’ಗಳನ್ನು ಅಧ್ಯಕ್ಷ ಟ್ರಂಪ್ ನಿಗದಿ ಪಡಿಸಿದ್ದ ಆಗಸ್ಟ್ ಒಂದರ ಕಡೇ ದಿನದೊಳಗೇ ಹಲವಾರು ದೇಶಗಳು ಮಾಡಿಕೊಂಡವು. ಅದರಿಂದಾಗಿ ಅವುಗಳ ಸರಕುಗಳ ಮೇಲೆ ಟ್ರಂಪ್ ಆಡಳಿತ ತಾನು ಹಿಂದೆ ಘೊಷಿಸಿದ್ದ ಸುಂಕದಲ್ಲಿ ಭಾರಿ ರಿಯಾಯಿತಿ ನೀಡಿತು. ಆ ‘ರಿಯಾಯಿತಿ’ಯ ಕೆಲವು ಉದಾಹರಣೆಗಳು- ಬ್ರಿಟನ್ಗೆ 10%, ಐರೋಪ್ಯ ಒಕ್ಕೂಟ ಮತ್ತು ಜಪಾನ್ ಮೇಲೆ 15%, ಇಂಡೋನೇಷ್ಯಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಮೇಲೆ 19%, ವಿಯೆಟ್ನಾಂ ಮೇಲೆ 20%. ಭಾರತ ಯಾವ ‘ಡೀಲ್’ ಅನ್ನೂ ಮಾಡಿಕೊಳ್ಳಲಿಲ್ಲ. ಅದರಿಂದ ಅದರ ಮೇಲೆ 25% ಸುಂಕ.
ತಮ್ಮ ಸುಂಕ ಸಮರಕ್ಕೆ ಟ್ರಂಪ್ ಭಾರತವನ್ನು ಗುರಿಯಾಗಿಸಿಕೊಂಡದ್ದೂ ಅನಿರೀಕ್ಷಿತವಲ್ಲ. ಅಮೆರಿಕಾದ ಸರಕುಗಳ ಮೇಲೆ ಅತ್ಯಧಿಕ ಸುಂಕ ವಿಧಿಸುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದೂ ಅವರು ವರ್ಷದ ಹಿಂದೆಯೇ ಬೇಸರದಿಂದ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ಭಾರತ ಒಂದು ಪ್ರಮುಖ ದೇಶ, ಅದು ಅಮೆರಿಕಾದ ಅತಿ ಮುಖ್ಯ ಸಾಮರಿಕ ಸಹಯೋಗಿಗಳಲ್ಲೊಂದು, ಭಾರತದ ಪ್ರಧಾನಿ ನರೇಂದ್ರ ಮೋದಿ ತಮ್ಮ ಸನ್ಮಿತ್ರ ಎಂದು ಘೊಷಿಸುತ್ತಲೇ ಭಾರತವನ್ನು ‘ಸುಂಕ ಸಾಮ್ರಾಟ’ ಎಂದೂ ಜರೆದಿದ್ದರು!
ಇಷ್ಟಾಗಿಯೂ, ಭಾರತದ ಮತ್ತದರ ಪ್ರಧಾನಿಯವರ ಬಗ್ಗೆ ಟ್ರಂಪ್ ಅಡಿಗಡಿಗೆ ವ್ಯಕ್ತಪಡಿಸುತ್ತಿದ್ದ ಸದ್ಭಾವನೆಗಳಿಂದಾಗಿ ಅವರು ಭಾರತದ ಸರಕುಗಳ ಮೇಲೆ ಅಧಿಕ ಸುಂಕ ವಿಧಿಸುವುದಿಲ್ಲವೆಂಬ ಅಭಿಪ್ರಾಯ ಭಾರತದಲ್ಲಿ ವ್ಯಾಪಕವಾಗಿ ಮೂಡಿತು. ಅದರಲ್ಲೂ ಫೆಬ್ರವರಿ 14ರಂದು ಅವರು ಪ್ರಧಾನಿ ಮೋದಿಯವರನ್ನು ವಾಷಿಂಗ್ಟನ್ಗೆ ಬರಮಾಡಿಕೊಂಡು ಆದರಿಸಿದ ರೀತಿ ಮತ್ತು ಮೋದಿ ಸರ್ಕಾರದ ವಿರುದ್ಧ ಕುಖ್ಯಾತ ಯುಎಸ್ಎಐಡಿ ಎಸಗಿದ್ದ ಕುತಂತ್ರಗಳ ಬಗೆಗೂ ಸಾರ್ವಜನಿಕವಾಗಿಯೇ ಮಾತಾಡಿ, ಆ ಕುರಿತ ವಿವರಗಳನ್ನು ಭಾರತಕ್ಕೆ ನೀಡಿ ತನಿಖೆಗೆ ಸಹಕರಿಸುವುದಾಗಿಯೂ ಟ್ರಂಪ್ ಹೇಳಿದ್ದು ಭಾರತ ಮತ್ತು ಅಮೆರಿಕಾಗಳ ನಡುವೆ ಘನಿಷ್ಟ ಸ್ನೇಹ ಸಹಯೋಗ ಹೊಸದೊಂದು ಮಜಲಿಗೇರುವ ಸೂಚನೆ ನೀಡಿತು. ಅದೇ ಪತ್ರಿಕಾಗೋಷ್ಠಿಯಲ್ಲಿ ಬಂದ ಅಧ್ಯಕ್ಷ ಟ್ರಂಪ್ರ ಸುಂಕ ನೀತಿಯ ಕುರಿತಾಗಿ ಪ್ರಧಾನಿ ಮೋದಿ ಹೇಗೆ ಪ್ರತಿಕ್ರಿಯಿಸುತ್ತಾರೆ, ಅಧ್ಯಕ್ಷರು ಹೇಳಿದ್ದಕ್ಕೆ ಪ್ರಧಾನಿಗಳು ಸಮ್ಮತಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಟ್ರಂಪ್ ನೀಡಿದ ಸ್ಪಷ್ಟ ಉತ್ತರ- ‘ಪ್ರಧಾನಿ ಮೋದಿ ಒಬ್ಬರು ಕಠಿಣ ಸಂಧಾನಕಾರ, ಈ ವಿಷಯದಲ್ಲಿ ನನ್ನ ಮತ್ತು ಅವರ ನಡುವೆ ಸ್ಪರ್ಧೆಯೇ ಇಲ್ಲ!’ ಅವರ ಮಾತಿನ ಅರ್ಥ ತಾವು ಹೇಳಿದ್ದೆಲ್ಲವನ್ನೂ ಮೋದಿ ಒಪ್ಪಿಕೊಳ್ಳುತ್ತಿಲ್ಲ, ಅವರು ತಮ್ಮನ್ನೇ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ ಎಂದು.
ಅದನ್ನು ಹೇಳುವಾಗ ಟ್ರಂಪ್ರ ದನಿಯಲ್ಲಿ ಅಥವಾ ಮುಖಭಾವದಲ್ಲಿ ಬೇಸರ, ಸಿಡುಕು ಇರಲಿಲ್ಲ. ಅವರದನ್ನು ಮೆಚ್ಚುಗೆಯಲ್ಲೇ ಹೇಳಿದರು. ಅಷ್ಟೇ ಅಲ್ಲ, ಬಾಂಗ್ಲಾದೇಶದ ವಿಷಯದಲ್ಲಿ ತಾವು ಕೈಹಾಕುವುದಿಲ್ಲವೆಂದೂ, ಅದನ್ನು ಪ್ರಧಾನಿ ಮೋದಿಯವರಿಗೇ ಬಿಟ್ಟುಬಿಡುವುದಾಗಿಯೂ ಹೇಳಿ, ಉಪಖಂಡದಲ್ಲಿ ಭಾರತದ ಪ್ರಾಧಾನ್ಯವನ್ನು ತಾವು ಒಪ್ಪಿಕೊಂಡದ್ದನ್ನು ಯಾವ ಹಿಂಜರಿಕೆಯೂ ಇಲ್ಲದೆ ಸಾರಿಯೇಬಿಟ್ಟರು. ಭಾರತ ಅಧಿಕ ಸುಂಕದಿಂದ ಬಚಾವಾಯಿತು ಎಂದು ಬಹುತೇಕ ಭಾರತೀಯರು ಹಿರಿಹಿರಿ ಹಿಗ್ಗಿದರು. ಮುಂದುವರಿದು, ಪಹಲ್ಗಾಮ್ ಭಯೋತ್ಪಾದಕ ದಾಳಿಯಾದ ಕೆಲವೇ ತಾಸುಗಳಲ್ಲಿ ಅಧ್ಯಕ್ಷ ಟ್ರಂಪ್ ಪ್ರಧಾನಿ ಮೋದಿಯವರಿಗೆ ಕರೆ ಮಾಡಿ ಸಂತಾಪ ವ್ಯಕ್ತಪಡಿಸಿದ್ದು ಟ್ರಂಪ್ ಆಡಳಿತ ಪೂರ್ಣವಾಗಿ ಭಾರತದ ಪರವಾಗಿದೆಯೆಂಬ ಅಭಿಪ್ರಾಯವನ್ನೂ ಮೂಡಿಸಿತು. ಐದು ವರ್ಷಗಳ ಹಿಂದೆ ಬಾಲಾಕೋಟ್ ದಾಳಿಯನ್ನು ಆಗಲೂ ಅಧ್ಯಕ್ಷರಾಗಿದ್ದ ಟ್ರಂಪ್ ಸಮರ್ಥಿಸಿದ್ದನ್ನು ನೆನಪಿಸಿಕೊಂಡ ಭಾರತೀಯರು ಇಂದು ಪಾಕಿಸ್ತಾನವನ್ನು ಬಗ್ಗುಬಡಿಯಲು ಭಾರತ ಹೊರಟರೆ ಅದಕ್ಕೆ ಟ್ರಂಪ್ ಆಡಳಿತದ ಪೂರ್ಣ ಬೆಂಬಲವಿರುತ್ತದೆಂದೂ ಕಲ್ಪಿಸಿಕೊಂಡು ಉತ್ತೇಜಿತರಾದರು. ಆದರೆ 2025ರ ಏಪ್ರಿಲ್ 9ರಂದು ಎಲ್ಲವೂ ಬದಲಾಗಿಹೋಯಿತು!
ಮೊದಲಿಗೆ, ಮಧ್ಯಪ್ರಾಚ್ಯದಲ್ಲಿ ಅಮೆರಿಕನ್ ಸೇನಾ ಕಾರ್ಯಾಚರಣೆಗಳ ಜವಾಬ್ದಾರಿ ಹೊತ್ತಿರುವ ‘ಸೆಂಟ್ರಲ್ ಕಮ್ಯಾಂಡ್’ನ ಮುಖ್ಯಸ್ಥ ಜ. ಮೈಕೇಲ್ ಕುರಿಲ್ಲಾ ಪಾಕಿಸ್ತಾನವನ್ನು ‘ಭಯೋತ್ಪಾದನೆಯ ವಿರುದ್ಧದ ಸಮರದಲ್ಲಿ ಮಹಾನ್ ಸಹಯೋಗಿ’ ಎಂದು ಬಣ್ಣಿಸಿದರು! ಅಲ್-ಖಯೀದಾ ಮತ್ತು ತಾಲಿಬಾನ್ ವಿರುದ್ಧದ ಸಮರದಲ್ಲಿ ಅಮೆರಿಕಾ ಜತೆ ಇರುವಂತೆಯೇ ನಟಿಸುತ್ತ ಅವೆರಡು ಭಯೋತ್ಪಾದಕ ಸಂಘಟನೆಗಳ ಹಿತ ಕಾಪಾಡಿದ ಪಾಕಿಸ್ತಾನವನ್ನು ಉದ್ದೇಶಿಸಿ ಅಧ್ಯಕ್ಷ ಟ್ರಂಪ್ 2018ರ ಜನವರಿ 1ರಂದು ‘ಭಯೋತ್ಪಾದನೆಯ ವಿರುದ್ಧ ಹೋರಾಡುತ್ತೇವೆ ಎಂದು ನೀವು ನಮ್ಮಿಂದ ಬಿಲಿಯನ್ಗಟ್ಟಲೆ ಹಣ ತೆಗೆದುಕೊಂಡಿದ್ದೀರಿ. ಆದರೆ ಅದಕ್ಕೆ ಪ್ರತಿಯಾಗಿ ನಿಮ್ಮಿಂದ ನಮಗೆ ಸಿಕ್ಕಿದ್ದೇನು? ಸುಳ್ಳುಗಳು ಮತ್ತು ಮೋಸ!’ ಎಂದು ಬೈದು ಆ ದೇಶಕ್ಕೆ ವಾರ್ಷಿಕವಾಗಿ ನೀಡುತ್ತಿದ್ದ ಸೇನಾ ಸಹಾಯಧನದಲ್ಲಿ 90% ಅನ್ನು ಕತ್ತರಿಸಿದ್ದನ್ನು ಮತ್ತು 2021ರ ಆಗಸ್ಟ್ನಲ್ಲಿ ಅಮೆರಿಕನ್ ಸೇನೆ ಅಫ್ಘಾನಿಸ್ತಾನವನ್ನು ತಾಲಿಬಾನ್ಗೇ ಬಿಟ್ಟುಕೊಟ್ಟು ಓಡಿಹೋದಾಗ ಪಾಕಿಸ್ತಾನದ ಸರ್ಕಾರ, ಸೇನೆ, ಐಎಸ್ಐ ಮತ್ತು ಬಹುಪಾಲು ಜನತೆ ಸಂಭ್ರಮಿಸಿದ್ದನ್ನು ಮರೆತ ಕುರಿ ಆಗಿಬಿಟ್ಟರೇ ಜ. ‘ಕುರಿ’ಲ್ಲಾ! ಅವರ ಹೊಗಳಿಕೆಗೆ ಉಬ್ಬಿಹೋದ ಪಾಕಿಸ್ತಾನ ಅವರಿಗೆ ತನ್ನ ಅತ್ಯುನ್ನತ ನಾಗರಿಕ ಗೌರವಗಳಲ್ಲೊಂದಾದ ‘ನಿಶಾನ್-ಎ-ಇಮ್ತಿಯಾಜ್’ ಅನ್ನು ನೀಡಿತು. ಅದಕ್ಕೆ ಕುರಿ ಕೊರಳೊಡ್ಡಿತು. ಅಥವಾ ಪಾಕಿಸ್ತಾನಿಯರು ಹಾಗಂದುಕೊಂಡರು!
ಕುರಿ ಕಥೆ ಹೀಗೆ ಸಾಗಿದ್ದರೆ ಟ್ರಂಪ್ರ ಸಮೀಪವರ್ತಿಗಳು ಭಾರತದತ್ತ ಒಂದಾದ ಮೇಲೊಂದು ವಿಷದ ಬಾಣ ಹಾರಿಸತೊಡಗಿದರು. ರಿಪಬ್ಲಿಕನ್ ಸೆನೆಟರ್ ಲಿಂಡ್ಸೇ ಗ್ರಹಾಮ್ ರಷ್ಯಾದಿಂದ ಭಾರತ ತೈಲ ಆಮದು ಮಾಡಿಕೊಳ್ಳುತ್ತಿರುವುದನ್ನು ಕಟು ಶಬ್ದಗಳಲ್ಲಿ ಖಂಡಿಸಿದರು. ‘ಭಾರತದಿಂದ ಪಡೆದ ಹಣವನ್ನು ರಷ್ಯಾ ಬಳಸುತ್ತಿರುವುದು ಯೂಕ್ರೇನಿಯನ್ನರನ್ನು ಕೊಲ್ಲುವುದಕ್ಕಾಗಿ’ ಎಂದು ಹೇಳಿದ ಅವರು ಭಾರತದ ಆ ಹಣ ‘ಬ್ಲಡ್ ಮನಿ’ ಎಂದು ಬಣ್ಣಿಸಿ ಏನೇನನ್ನೋ ಏನೇನಕ್ಕೋ ಜೋಡಿಸಿ ಅತಿ ಬುದ್ಧಿವಂತಿಕೆ ಮರೆದರು. ಅಷ್ಟೇ ಅಲ್ಲ, ಭಾರತ ಎಸಗುತ್ತಿರುವ ಈ ‘ಅಪರಾಧ’ಕ್ಕಾಗಿ ಅದರ ಮೇಲೆ 500% ಸುಂಕ ವಿಧಿಸುವ ಮಾತನಾಡಿದರು. ಅವರ ಮಾತಿಗೆ ದನಿಗೂಡಿಸಿದ ಶ್ವೇತಭವನದ ಮುಖ್ಯ ಸಲಹೆಗಾರ ಸ್ಟೀಫನ್ ಮಿಲ್ಲರ್ ಮೊನ್ನೆ, ಇದೇ ಭಾನುವಾರ ಚೀನಾದಂತೆ ಭಾರತವೂ ರಷ್ಯಾದಿಂದ ಭಾರಿ ಪ್ರಮಾಣದಲ್ಲಿ ತೈಲ ಖರೀದಿಸುತ್ತಿರುವುದನ್ನು ಖಂಡಿಸಿದ್ದಲ್ಲದೆ ಇನ್ನೂ ಒಂದು ಹೆಜ್ಜೆ ಮುಂದುವರಿದು, ಅಮೆರಿಕಾದ ಘನಿಷ್ಟ ಸಹಯೋಗಿಯಂತ ಭಾರತ ತೋರಿಸಿಕೊಳ್ಳುತ್ತಿದೆ, ಆದರೆ ಅದರ ನೀತಿಗಳು ಅದರ ನಡವಳಿಕೆಗೆ ವಿರುದ್ಧವಾಗಿವೆ. ವಲಸೆಯ ವಿಷಯದಲ್ಲೂ ಭಾರತ ಮೋಸ ಎಸಗುತ್ತಿದೆ ಎಂದೆಲ್ಲ ಆಪಾದಿಸಿದರು.
ರಷ್ಯಾ-ಯೂಕ್ರೇನ್ ಸಮರ ಆರಂಭವಾಗುವುದಕ್ಕೆ ಮೊದಲು ಭಾರತ ತನ್ನ ತೈಲ ಅಗತ್ಯದ 2.5% ಅನ್ನು ಮಾತ್ರ ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿತ್ತು. ಸಮರ ಆರಂಭವಾದ ಮೇಲೆ ಪಶ್ಚಿಮದ ದೇಶಗಳ ವಿರೋಧದಿಂದಾಗಿ ತನ್ನ ತೈಲ ರಫ್ಟು ಕುಗ್ಗಿ ಆದಾಯ ಕಡಿಮೆಯಾಗಬಹುದೆಂದು ಹೆದರಿದ ರಷ್ಯಾ ತೈಲ ಬೆಲೆಯಲ್ಲಿ ಕಡಿತ ಮಾಡಿತು. ಅದರ ಉಪಯೋಗ ಪಡೆದುಕೊಂಡ ಭಾರತ ರಷ್ಯಾದಿಂದ ತೈಲ ಆಮದನ್ನು ವೇಗವಾಗಿ ಹೆಚ್ಚಿಸಿಕೊಂಡಿತು. ಅದನ್ನು ಬೈಡೆನ್ ಆಡಳಿತ ಮೊದಲಿಗೆ ವಿರೋಧಿಸಿದರೂ ನಂತರ ತನಗೆ ಅನುಕೂಲವಾದೆಡೆ ತೈಲ ಆಮದು ಮಾಡಿಕೊಳ್ಳುವ ಭಾರತದ ಹಕ್ಕನ್ನು ಮಾನ್ಯಮಾಡಿತು. ಇಂದು ತನ್ನ ತೈಲ ಅಗತ್ಯದ 35% ಅನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಮೊದಲಿಗೆ ಇದಕ್ಕೆ ಟ್ರಂಪ್ ಅವರ ವಿರೋಧವೇನೂ ಇರಲಿಲ್ಲ. ಆದರೆ ಇಂದು ಅವರ ಸಮೀಪವರ್ತಿಗಳು ಏಕಾಏಕಿ ಅದನ್ನೇ ದೊಡ್ಡ ವಿಷಯವನ್ನಾಗಿ ಮಾಡುತ್ತಿದ್ದಾರೆ.
ಇವರ ನಡುವೆ ಟ್ರಂಪ್ ತಮ್ಮದೇ ದಾರಿಯಲ್ಲಿ ನಡೆದು, ಪಾಕಿಸ್ತಾನದೊಂದಿಗೆ ತಾವು ‘ಡೀಲ್’ ಮಾಡಿಕೊಂಡಿರುವು ದಾಗಿಯೂ, ಆ ಪ್ರಕಾರ ಆ ದೇಶದ ಸರಕುಗಳ ಮೇಲೆ ಕೇವಲ 19% ಅಂದರೆ ಭಾರತದ ಸರಕುಗಳ ಮೇಲೆ ವಿಧಿಸಹೊರಟಿರುವುದಕ್ಕಿಂತಲೂ 6% ಕಡಿಮೆ ಸುಂಕ ವಿಧಿಸುವುದಾಗಿ ಹೇಳಿ ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದರು. ಅಮೆರಿಕಾಗೆ ಇಂದಿನ ಪಾಕಿಸ್ತಾನ ಏನನ್ನು ರಫ್ತು ಮಾಡಬಲ್ಲುದು, ಮಾಡುತ್ತಿದೆ, ಎಂದು ತಲೆ ಸರಿಯಿರುವ ಪಾಕಿಸ್ತಾನಿಯರಿಗೇ ತಿಳಿಯುತ್ತಿಲ್ಲ. ತಮಾಷೆ ಇಷ್ಟಕ್ಕೇ ನಿಲ್ಲಲಿಲ್ಲ. ಪಾಕಿಸ್ತಾನದ ನೆಲದಡಿಯಲ್ಲಿ ಭಾರಿ ಪ್ರಮಾಣದಲ್ಲಿ ತೈಲನಿಕ್ಷೇಪ ಇರುವುದಾಗಿಯೂ, ಅದನ್ನು ಹೊರತೆಗೆಯಲು ಅಮೆರಿಕಾದ ತೈಲ ಶೋಧಕ ಸಂಸ್ಥೆಗಳು ಶೀಘ್ರವೇ ಕಾರ್ಯಾರಂಭ ಮಾಡುವುದಾಗಿಯೂ ಹೇಳಿದ ಟ್ರಂಪ್ ಅಲ್ಲಿಗೇ ನಿಲ್ಲಿಸದೆ, ‘ಮುಂದೊಂದು ದಿನ ಪಾಕಿಸ್ತಾನದಿಂದ ಭಾರತ ತೈಲ ಖರೀದಿಸಬಹುದು’ ಎಂದೂ ಭವಿಷ್ಯ ನುಡಿದುಬಿಟ್ಟರು! ಇದಪ್ಪ ವರಸೆ!
ಇಂದಿನ ಲೆಕ್ಕಾಚಾರಗಳ ಪ್ರಕಾರ ಪಾಕಿಸ್ತಾನದಲ್ಲಿ ಪತ್ತೆಯಾಗಿರುವ ತೈಲ ನಿಕ್ಷೇಪ ಕೇವಲ 353 ಮಿಲಿಯನ್ ಬ್ಯಾರೆಲ್ಗಳು. ಇಂದು ರಷ್ಯಾ ಅಥವಾ ಸೌದಿ ಅರೇಬಿಯಾ ದಿನವೊಂದರಲ್ಲಿ ಹೊರತೆಗೆಯುತ್ತಿರುವ ಪ್ರಮಾಣದಲ್ಲೇ ಈ ಪಾಕಿಸ್ತಾನಿ ತೈಲವನ್ನು ಹೊರತೆಗೆದರೆ ಅದು ನಲವತ್ತು ದಿನಗಳೊಳಗೇ ಬರಿದಾಗುತ್ತದೆ! ಹಾಗಿರುವಾಗ ಪಾಕಿಸ್ತಾನ ಮುಂದೊಂದು ದಿನ ತೈಲ ನಿರ್ಯಾತಕ ದೇಶವಾಗುತ್ತದೆ, ಭಾರತ ಅದರ ಗಿರಾಕಿಯಾಗುತ್ತದೆ ಎಂದು ಟ್ರಂಪ್ ಅವರಿಗೆ ಕನಸು ಬಿದ್ದದ್ದಾದರೂ ಹೇಗೆ? ಇನ್ನೂ ಒಂದೆರಡು ವಿಷಯ ಹೇಳುವುದಾದರೆ ಭಾರತದಲ್ಲಿ ಗುರುತಿಸಲಾಗಿರುವ ತೈಲ ನಿಕ್ಷೇಪ 651 ಮಿಲಿಯನ್ ಬ್ಯಾರೆಲ್ಗಳು. ಪಶ್ಚಿಮ ಏಷ್ಯಾದ ದೇಶಗಳು ಅಥವಾ ರಷ್ಯಾ ಮತ್ತು ಅಮೆರಿಕಾಗಳಿಗೆ ಹೋಲಿಸಿದರೆ ಇದು ನಗಣ್ಯ. ಆದರೆ ಭಾರತದ ನಿಕ್ಷೇಪ ಪಾಕಿಸ್ತಾನಕ್ಕಿಂತಲೂ 298 ಮಿಲಿಯನ್ ಬ್ಯಾರೆಲ್ಗಳು ಹೆಚ್ಚಿಗಿದೆ. ಜತೆಗೆ ಇತ್ತೀಚೆಗೆ ನಿಕೋಬಾರ್ ದ್ವೀಪ ವಲಯದಲ್ಲಿ ಇದೆ ಎಂದು ಹೇಳಲಾಗುವ ತೈಲ ನಿಕ್ಷೇಪದ ಪ್ರಮಾಣದ ಬಗ್ಗೆ ಸ್ಪಷ್ಟವಾಗಿ ತಿಳಿದಲ್ಲಿ ಭಾರತದ ತೈಲಭಂಡಾರ ಗಣನೀಯ ಪ್ರಮಾಣದಲ್ಲಿ ಅಧಿಕವಾಗುತ್ತದೆ.
ಇರಲಿ, ಪಾಕಿಸ್ತಾನದಲ್ಲಿ ಅಗಾಧ ತೈಲ ನಿಕ್ಷೇಪವಿದೆ ಎಂದು ಟ್ರಂಪ್ರಿಗೆ ಮಾತ್ರ ತಿಳಿದಿರಲೂಬಹುದು. ಎಷ್ಟಾದರೂ ಅವರ ಬಳಿ ಅತಿ ಸಶಕ್ತ ಗುಪ್ತಚರ ಸಂಸ್ಥೆಗಳಿವೆ ಅಲ್ಲವೇ? ಆ ಪ್ರಕಾರ ಪಾಕಿಸ್ತಾನದಲ್ಲಿನ ತೈಲ ಭಂಡಾರವನ್ನು ಅಮೆರಿಕಾದ ಸಂಸ್ಥೆಗಳು ಹೊರತೆಗೆದು ತಾವೂ ಲಾಭ ಮಾಡಿಕೊಂಡು ಪಾಕಿಸ್ತಾನದ ಉದ್ದಗಲಕ್ಕೂ ಪೆಟ್ರೋಡಾಲರ್ಗಳನ್ನು ರಾಶಿ ಹಾಕುತ್ತವೆ ಎಂದೇ ಭಾವಿಸೋಣ. ಆದರೆ ಆ ಸಾಧ್ಯತೆ ಎಷ್ಟು? ಪಾಕಿಸ್ತಾನದಲ್ಲಿ ತೈಲ ನಿಕ್ಷೇಪಗಳಿರುವುದು ಬಲೂಚಿಸ್ತಾನದಲ್ಲಿ ಮಾತ್ರ. ಇನ್ನೆಲ್ಲೂ ಒಂದು ಕುಡಿಕೆ ತೈಲವೂ ಪತ್ತೆಯಾಗಿಲ್ಲ. ಬಲೂಚಿಸ್ತಾನ ಹೇಳಿಕೇಳಿ ಚಿನ್ನ, ತಾಮ್ರ, ಯುರೇನಿಯಂ, ಕ್ರೋಮಿಯಂ ಮುಂತಾದ ಹಲವು ಖನಿಜಗಳ ಅಗರ. ಅದನ್ನೆಲ್ಲ ಲೂಟಿ ಹೊಡೆಯಲು ಹಂಚಿಕೆ ಹಾಕಿದ ಚೀನಾ ‘ಚೈನಾ-ಪಾಕಿಸ್ತಾನ ಇಕನಾಮಿಕ್ ಕಾರಿಡಾರ್’-(ಸಿಪೆಕ್) ಎಂಬ ಯೋಜನೆ ರೂಪಿಸಿ ಅದಕ್ಕಾಗಿ 62ರಿಂದ 87 ಬಿಲಿಯನ್ ಡಾಲರ್ಗಳನ್ನು ಚೆಲ್ಲಿದೆ. ಈಗ ಅದೆಲ್ಲ ವ್ಯರ್ಥವಾಗುವ ಸ್ಥಿತಿಯಲ್ಲಿದೆ.
ಬಲೂಚಿ ಸ್ವಾತಂತ್ರ್ಯ ಆಂದೋಲನಕಾರರು ಚೀನೀಯರನ್ನಷ್ಟೇ ಅಲ್ಲ, ಪಾಕಿಸ್ತಾನಿ ಪಂಜಾಬಿಗಳನ್ನೂ ಬಲೂಚಿಸ್ತಾನದಿಂದ ಹೊರಗಟ್ಟುತ್ತಿದ್ದಾರೆ. ಅಲ್ಲಿ ಪಾಕಿಸ್ತಾನಿ ಸೇನೆಯ ವಿರುದ್ಧ ಅವರ ಹಿಂಸಾತ್ಮಕ ಚಟುವಟಿಕೆಗಳು ದಿನನಿತ್ಯದ ದುರಂತ ಕಥೆಗಳು. ಈಗ ಅಲ್ಲಿಗೆ ಟ್ರಂಪ್ ಅಮೆರಿಕನ್ನರನ್ನು ಕಳುಹಿಸಿದರೆ ಏನಾಗಬಹುದು? ‘ನಮ್ಮ ಬಾಂಬ್ಗಳು ಇನ್ನು ಮುಂದೆ ಅಮೆರಿಕನ್ನರನ್ನು ಗುರಿಯಾಗಿಸಿಕೊಳ್ಳುತ್ತವೆ’ ಎಂದು ಪ್ರಮುಖ ಬಲೂಚಿ ನೇತಾರ ಮೀರ್ ಯಾರ್ ಬಲೂಚ್ ಹೇಳಿದ್ದಾರೆ. ಇವರು ಒಂದೂವರೆ ತಿಂಗಳ ಹಿಂದೆಯೇ ಬಲೂಚಿಸ್ತಾನದ ಸ್ವಾತಂತ್ರ್ಯವನ್ನು ಘೊಷಿಸಿದವರು ಎನ್ನುವುದನ್ನು ನೆನಪಿಸಿಕೊಂಡರೆ ಬಲೂಚಿ ವ್ಯವಹಾರಗಳಲ್ಲಿ ಅವರದೆಷ್ಟು ಪ್ರಮುಖ ದನಿ ಎನ್ನುವುದು ಅರ್ಥವಾಗುತ್ತದೆ.
ಈ ವಾಸ್ತವಗಳ ಹಿನ್ನೆಲೆಯಲ್ಲಿ ಟ್ರಂಪ್ರ ಪಾಕಿಸ್ತಾನಿ ತೈಲ ಕನಸಿಗೆ ಈಗಾಗಲೇ ಬೆಂಕಿ ಬಿದ್ದಿದೆ ಎಂದರ್ಥ! ಇದು ನುರಿತ ವ್ಯವಹಾರಸ್ಥ ಟ್ರಂಪ್ ಅವರಿಗೆ ತಿಳಿದಿಲ್ಲವೇ? ಚೆನ್ನಾಗಿಯೇ ತಿಳಿದಿದೆ. ಹಾಗಿದ್ದರೆ ಟ್ರಂಪ್ ಏಕಾಏಕಿ ಭಾರತವನ್ನು ನಿಂದಿಸುತ್ತ, ಅಧಿಕ ಸುಂಕದ ಬೆದರಿಕೆ ಒಡ್ಡುತ್ತ ಪಾಕಿಸ್ತಾನದ ಕಿವಿಯಲ್ಲಿ ಸುಶ್ರಾವ್ಯ ಸಂಗೀತ ಹಾಡುತ್ತಿರುವುದೇಕೆ? ಅದೊಂದು ಕುತೂಹಲಕರ ಕಥೆ. ಅದನ್ನು ಮುಂದಿನ ವಾರ ಪರಿಶೀಲಿಸೋಣ. (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)