ಅಂಕಣ

ಆ ಕ್ಷಣ: ಗಾಬರಿಗೊಳಿಸಿದ ತ್ರಿವಳಿ ಕೊಲೆ

ಡಾ. ಡಿ. ವಿ. ಗುರು ಪ್ರಸಾದ್

ನಿವೃತ್ತ ಬ್ಯಾಂಕ್ ಅಧಿಕಾರಿ 80 ವರ್ಷದ ಭಾಸ್ಕರ್ 75 ವರ್ಷದ ಪತ್ನಿ ಸರಳಾ ಜೊತೆ ಮಹಾನಗರವೊಂದರಲ್ಲಿ ಸ್ವಂತ ಬಂಗಲೆಯಲ್ಲಿ ವಾಸವಿದ್ದರು. ಅವರ ಇಬ್ಬರೂ ಮಕ್ಕಳು ಬೇರೆ ಬೇರೆ ಊರುಗಳಲ್ಲಿರುತ್ತಿದ್ದರು.

ಭಾಸ್ಕರ್​ರ ಅನಾರೋಗ್ಯ ಮತ್ತು ಸರಳಾರ ಬೆನ್ನುಮೂಳೆಯ ಮುರಿತದ ಕಾರಣ ಇಬ್ಬರೂ ಮನೆಯಲ್ಲಿಯೇ ಇರಬೇಕಾಗಿತ್ತು. ಅವರನ್ನು ನೋಡಿಕೊಳ್ಳಲು ಎಲಿಜಬೆತ್ ಎನ್ನುವ ನರ್ಸ್ ಮನೆಯಲ್ಲಿರುತ್ತಿದ್ದಳು. ಒಬ್ಬ ಅಡುಗೆಯವನೂ ಮತ್ತೊಬ್ಬ ಮನೆಕೆಲಸದವಳೂ ಬೆಳಿಗ್ಗೆ ಬಂದು ಸಂಜೆ ವಾಪಸಾಗುತ್ತಿದ್ದರು. ಕಾಲಕಾಲಕ್ಕೆ ಮಕ್ಕಳು ವಿಡಿಯೋ ಕರೆ ಮಾಡಿ ಮಾತಾಪಿತರ ಯೋಗಕ್ಷೇಮ ವಿಚಾರಿಸುತ್ತಿದ್ದರು.

ಮನೆಕೆಲಸದಾಕೆ ಮೋನಾ 2010ರ ಜೂನ್ 23ರ ಬೆಳಗಿನ 7 ಗಂಟೆಗೆ ಭಾಸ್ಕರ್ ಮನೆಯ ಕರೆಗಂಟೆ ಬಾರಿಸಿದಾಗ ಉತ್ತರ ಬರಲಿಲ್ಲ. ಗಾಬರಿಗೊಂಡ ಆಕೆ ಪಕ್ಕದ ಮನೆಯ ಶಂಕರ್​ರನ್ನು ಕರೆದು ನೋಡಲು ಹೇಳಿದಳು. ಮನೆಯ ಬಾಗಿಲು ತಟ್ಟಿದರೂ ಬಾಗಿಲು ತೆರೆಯದಾದಾಗ ಅವರು ಕೊಲ್ಕತ್ತದಲ್ಲಿದ್ದ ಭಾಸ್ಕರರ ಮಗಳು ಸುನಂದಾಳಿಗೆ ವಿಷಯ ತಿಳಿಸಿ ಆಕೆಯ ಸೂಚನೆಯ ಮೇರೆಗೆ ಪೊಲೀಸರಿಗೆ ಸುದ್ದಿಮುಟ್ಟಿಸಿದರು. ಪೊಲೀಸರು ಪಂಚರನ್ನು ಕರೆಸಿ ಮನೆಯ ಮುಂಬಾಗಿಲನ್ನು ಒಡೆದು ಒಳಹೋದಾಗ ಕಂಡ ದೃಶ್ಯವು ಭೀಕರವಾಗಿತ್ತು. ಮನೆಯ ಹಾಲ್​ನಲ್ಲಿ ಎಲಿಜಬೆತ್ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಆಕೆಯ ಕುತ್ತಿಗೆಯನ್ನು ಚಾಕುವಿನಿಂದ ಕತ್ತರಿಸಲಾಗಿತ್ತು. ಸರಳಾರನ್ನು ಅವರು ಮಲಗಿದ್ದ ಹಾಸಿಗೆಯಲ್ಲಿಯೇ ಕುತ್ತಿಗೆಗೆ ಬೆಲ್ಟ್ ಬಿಗಿದು ಉಸಿರುಗಟ್ಟಿಸಿ ಕೊಲ್ಲಲಾಗಿತ್ತು. ಅವರ ಪಕ್ಕದ ಕೋಣೆಯಲ್ಲಿ ಮಲಗಿದ್ದ ಭಾಸ್ಕರ್ ಕುತ್ತಿಗೆಗೆ ಅವರದೇ ಪೈಜಾಮಾದ ಲಾಡಿಯನ್ನು ಬಿಗಿದು ಸಾಯಿಸಲಾಗಿತ್ತು.

ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳು ಕಳ್ಳತನವಾದಂತೆ ಮೇಲ್ನೋಟಕ್ಕೇ ಗೋಚರಿಸುತ್ತಿತ್ತು. ಎಲಿಜಬೆತ್ ಕೋಣೆಯಲ್ಲಿನ ವಸ್ತುಗಳು ಇದ್ದಂತೆಯೇ ಇದ್ದವು. ಅವಳ ಹಾಸಿಗೆಯ ತಲೆದಿಂಬಿನ ಕೆಳಗೆ ಒಂದು ಕಾಂಡೋಮ್ ಪ್ಯಾಕೆಟ್ ಮತ್ತು ಒಂದು ಕಟ್ಟು ಬೀಡಿ ಇದ್ದದ್ದು ಪೊಲೀಸರಿಗೆ ಸಂಶಯ ಬರಿಸಿತು. ಎಲಿಜಬೆತ್ ಯಾರೊಡನೆಯಾದರೋ ಅನೈತಿಕ ಸಂಬಂಧವನ್ನಿಟ್ಟುಕೊಂಡಿದ್ದು ಆ ವ್ಯಕ್ತಿ ಈ ಕೊಲೆಗಳನ್ನು ಮಾಡಿ ಪರಾರಿಯಾಗಿರಬೇಕು ಎಂದು ಊಹಿಸಿದರು.

ಅಪರಾಧ ನಡೆದ ಸ್ಥಳದಲ್ಲಿ ಮನೆಯ ಹೊರಗಿನವರ ಯಾವುದೇ ಬೆರಳಚ್ಚು ಗುರ್ತಗಳು ಸಿಗಲಿಲ್ಲ. ಎಲಿಜಬೆತ್​ಳ ಕೊಲೆಗಾಗಿ ಉಪಯೋಗಿಸಿದ್ದ ಚಾಕು ಅವರದೇ ಮನೆಯ ಅಡುಗೆ ಕೋಣೆಯಿಂದ ತೆಗೆದುಕೊಳ್ಳಲಾಗಿದ್ದು ಅದರ ಮೇಲೆಯೂ ಬೆರಳಚ್ಚು ಗುರುತುಗಳಿರಲಿಲ್ಲ. ರಸ್ತೆಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಹಿಂದಿನ ರಾತ್ರಿ ಸುಮಾರು ಹತ್ತು ಗಂಟೆಯ ವೇಳೆಯಲ್ಲಿ ಮೋಟರ್ ಸೈಕಲ್ ಮೇಲೆ ಒಬ್ಬ ವ್ಯಕ್ತಿ ಮಹಿಳೆಯೊಬ್ಬಳ ಜತೆಗೆ ಭಾಸ್ಕರ್ ಮನೆಯ ಕಾಂಪೌಂಡಿನ ಬಳಿ ಬಂದು ನಿಂತು ಇಬ್ಬರೂ ಇಳಿದು ಹೋಗುತ್ತಿದ್ದ ಹೊರತಾಗಿ ಬೇರೆ ಯಾವ ಸುಳಿವೂ ಸಿಗಲಿಲ್ಲ. ಆ ಜೋಡಿ ಮುಖ ಮುಚ್ಚಿಕೊಂಡಿತ್ತು. ಪೊಲೀಸರು ತ್ರಿವಳಿ ಕೊಲೆ ಪ್ರಕರಣ ದಾಖಲಿಸಿದರು.

ಕೊಲೆಯಾದ ಸಂಜೆಯೇ ಬಂದ ಸುನಂದಾ ‘ಮನೆಯಲ್ಲಿದ್ದ ಐದು ಲಕ್ಷ ರೂ ಬೆಲೆಬಾಳುವ ಆಭರಣ ಕಳ್ಳತನವಾಗಿದೆ. ನನ್ನ ಮಾತಾಪಿತರು ಎಲ್ಲರೊಡನೆಯೂ ಅನ್ಯೋನ್ಯವಾಗಿದ್ದರು. ಎಲಿಜಬೆತ್ ಉತ್ತಮ ಚಾರಿತ್ರ್ಯವುಳ್ಳವಳಾಗಿದ್ದು ಹೆಸರಾಂತ ಸಂಸ್ಥೆಯ ಮೂಲಕ ನಮ್ಮಲ್ಲಿಗೆ ಬಂದಿದ್ದಳು. ಈ ಹಿಂದೆ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಆಕೆ ಸುಮಾರು ನಾಲ್ಕು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಯ ನಡತೆಯ ಬಗ್ಗೆ ನಾವು ಅವಳ ಊರಿನಿಂದ ಪೊಲೀಸ್ ವೆರಿಫಿಕೇಷನ್ ಮಾಡಿಸಿದ್ದೇವೆ’ ಎಂದಳು. ಎಲಿಜಬೆತ್ ಅನೈತಿಕ ಸಂಬಂಧದ ಬಗ್ಗೆ ಪೊಲೀಸರು ಪರಿಶೀಲಿಸಿದಾಗ ನಕಾರಾತ್ಮಕ ಉತ್ತರ ಬಂದಿತು.

ಏತನ್ಮಧ್ಯೆ ಸುನಂದಾ ತಾನು ಎಲಿಜಬೆತ್​ಗೆ ಫೋನ್ ಮಾಡಿದಾಗ ಅದು ಸ್ವಿಚ್ ಆಫ್ ಆಗಿತ್ತು ಎಂದು ತಿಳಿಸಿದಳು. ಆ ಫೋನನ್ನು ಲೋಕೇಷನ್ ಸರ್ಚ್​ಗೆ ಹಾಕಿದಾಗಲೂ ಸ್ವಿಚ್ ಆಫ್ ಆಗಿತ್ತು. ಆ ಫೋನ್ ಸ್ವಿಚ್ ಆನ್ ಆದರೆ ಕೂಡಲೇ ತಿಳಿಸಲು ಪೊಲೀಸರು ಸಂಬಂಧಪಟ್ಟ ಸಂಸ್ಥೆಗೆ ಸೂಚಿಸಿದರು.

ಹಲವು ದಿನಗಳು ಕಳೆದರೂ ಪೊಲೀಸರಿಗೆ ಯಾವುದೇ ಸುಳಿವು ಸಿಗಲಿಲ್ಲ. ಈ ನಡುವೆ, ತನ್ನ ತಾಯಿಯನ್ನು ನೋಡಲು ಕೆಲವು ವಾರಗಳ ಹಿಂದೆ ಪ್ರೀತಿ ಎನ್ನುವ ದೂರದ ಸಂಬಂಧಿ ಬಂದಿದ್ದುದು ಸುನಂದಾಗೆ ನೆನಪಾಯಿತು. ಪ್ರೀತಿಯೇ ಸುನಂದಾಗೆ ಕರೆಮಾಡಿ ‘ನಾನು ನಿನ್ನ ತಾಯಿಯ ಯೋಗಕ್ಷೇಮ ವಿಚಾರಿಸಲು ಬಂದಿದ್ದೆ. ಆ ರಾತ್ರಿ ಅಲ್ಲಿಯೇ ತಂಗಿದ್ದು ಮಾರನೆಯ ಬೆಳಿಗ್ಗೆ ಹೋಗುತ್ತೇನೆ’ಎಂದು ತಿಳಿಸಿದ್ದಳು. ಈ ಮಾಹಿತಿಯನ್ನು ಪೊಲೀಸರಿಗೆ ನೀಡಿದ ಸುನಂದಾ, ಪ್ರೀತಿ ಪಕ್ಕದ ಜಿಲ್ಲೆಯ ನಿವಾಸಿಯೆಂದು ತಿಳಿಸಿ ಅವಳ ವಿಳಾಸ ನೀಡಿದಳು.

ಪೊಲೀಸರು ಪ್ರೀತಿಯ ಮನೆಗೆ ಹೋದಾಗ ಅವಳ ಗಂಡ ಆಕೆ ತನ್ನನ್ನು ಬಿಟ್ಟು ಇನ್ನೊಬ್ಬನ ಜತೆಗೆ ವಾಸಿಸುತ್ತಿದ್ದಾಳೆ, ಅವಳೆಲ್ಲಿದ್ದಾಳೆಂದು ತಿಳಿದಿಲ್ಲ ಎಂದ. ಅದೇ ಸಮಯಕ್ಕೆ ಎಲಿಜಬೆತ್​ಳ ಮೊಬೈಲ್ ಫೋನ್ ಸುಮಾರು ಒಂದು ನಿಮಿಷ ಸ್ವಿಚ್ ಆನ್ ಆಗಿದ್ದು ಅದು ಪ್ರೀತಿಯ ಮನೆಯಿದ್ದ ಊರಿನಲ್ಲಿಯೇ ಇದೆ ಎಂದು ಫೋನ್ ಸಂಸ್ಥೆ ಆ ಫೋನಿನ ಲೊಕೇಷನ್ ನೀಡಿತು. ಪೊಲೀಸರು ಆ ಊರಿನ ಸಣ್ಣ ಹೋಟೆಲ್​ನ ರೂಂ ಒಂದರಲ್ಲಿ ವಿನೋದ್ ಎನ್ನುವ ಯುವಕನ ಜತೆಗೆ ಪ್ರೀತಿಯನ್ನು ಪತ್ತೆಮಾಡಿದರು.

ತಾನು ಆಂಧ್ರಪ್ರದೇಶದಲ್ಲಿ ಕಾರಿನ ಮೆಕ್ಯಾನಿಕ್ ಆಗಿರುವೆನೆಂದು ತಿಳಿಸಿದ ವಿನೋದ್ ತಾವು ಲಿವ್-ಇನ್ ಜೋಡಿಯೆಂದು ಹೇಳಿದ. ಅವರಿದ್ದ ಕೋಣೆಯಲ್ಲಿ ಸರಳಾರಿಂದ ಕದ್ದಿದ್ದ ಒಂದು ನೆಕ್ಲೆೆಸ್ ದೊರಕಿತು. ಅವರಿಬ್ಬರನ್ನೂ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಿದಾಗ ತಾವೇ ಈ ತ್ರಿವಳಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡರು. ತಮ್ಮಿಬ್ಬರ ಜೀವನಕ್ಕೆ ಹಣದ ಅಡಚಣೆಯಾದಾಗ ದೂರದ ಸಂಬಂಧಿ ಸರಳಾರ ನೆನಪಾಗಿ ಅವರ ಮನೆಯಲ್ಲಿ ಕಳ್ಳತನ ಮಾಡಿದರೆ ಸಾಕಷ್ಟು ಹಣ ಸಿಗುವುದೆಂಬ ಯೋಚನೆ ಬಂದಿತು ಎಂದಳು ಪ್ರೀತಿ.

ಮುಂದೆ ಆಕೆ ಹೀಗೆ ಹೇಳಿದಳು: ‘ಅಪರಾಧವು ಬೆಳಕಿಗೆ ಬರಬಾರದೆಂದು ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡೆ. ಹದಿನೈದು ದಿನಗಳ ಮುಂಚೆ ನಾನೊಬ್ಬಳೇ ಭಾಸ್ಕರ್ ಮನೆಗೆ ಬಂದು ಆಂಟಿಯನ್ನು ಮಾತನಾಡಿಸಿ ಆ ರಾತ್ರಿಯನ್ನು ಅಲ್ಲಿಯೇ ಕಳೆದೆ. ರಾತ್ರಿ ಒಂಬತ್ತರ ನಂತರ ವೃದ್ಧ ದಂಪತಿ ಮತ್ತು ಎಲಿಜಬೆತ್ ಹೊರತಾಗಿ ಮನೆಯಲ್ಲಿ ಬೇರಾರೂ ಇರುವುದಿಲ್ಲವೆಂದು ಅರಿತು ಮನೆಯಲ್ಲಿನ ಬೆಲೆಬಾಳುವ ವಸ್ತುಗಳನ್ನು ಎಲ್ಲಿಡಲಾಗಿದೆ ಎಂದು ಗಮನಿಸಿದೆ. ಅಪರಾಧದ ಬಗ್ಗೆ ಯೋಜನೆ ಹಾಕಿ ಅದನ್ನು ವಿನೋದನ ಜತೆಗೆ ರ್ಚಚಿಸಿದೆ. ಇದಾದ ಮೂರು ದಿನಗಳ ನಂತರ ನಾನು ಮತ್ತು ವಿನೋದ ಬಂದು ಅವರ ಮನೆಯ ಬಳಿ ಯಾವುದಾದರೂ ಸಿಸಿಟಿವಿ ಕ್ಯಾಮರಾಗಳಿವೆಯೇ ಎಂದು ಗಮನಿಸಿ ಅದನ್ನು ಹೇಗೆ ತಪ್ಪಿಸಬೇಕೆಂದು ಯೋಚಿಸಿದೆವು.

ಘಟನೆ ನಡೆದ ರಾತ್ರಿ ಹತ್ತು ಗಂಟೆಗೆ ನಾವಿಬ್ಬರೂ ಬಂಗಲೆಯ ಬಳಿಗೆ ಬಂದೆವು. ವಿನೋದ್ ಮೋಟರ್ ಸೈಕಲನ್ನು ದೂರದಲ್ಲಿ ನಿಲ್ಲಿಸಿದ. ನಾವಿಬ್ಬರೂ ಮುಖ ಮುಚ್ಚಿಕೊಂಡಿದ್ದೆವು. ಮೊದಲಿಗೆ ನಾನು ಭಾಸ್ಕರ್ ಮನೆಗೆ ಬಂದು ಕರೆಗಂಟೆ ಬಾರಿಸಿದಾಗ ಎಲಿಜಬೆತ್ ಬಾಗಿಲು ತೆರೆದಳು. ಆಂಟಿ-ಅಂಕಲ್ ಮಲಗಿದ್ದಾರೆ ಎಂದಳು. ‘ಪರವಾಗಿಲ್ಲ, ನಾನು ಇಲ್ಲಿಯೇ ಮಲಗಿದ್ದು ನಾಳೆ ಅವರನ್ನು ಕಾಣುತ್ತೇನೆ’ ಎಂದು ಹೇಳಿ ಹಾಲಿನಲ್ಲಿದ್ದ ಸೋಫಾದ ಮೇಲೆ ಮಲಗಿದೆ. ಸುಮಾರು ಹದಿನೈದು ನಿಮಿಷಗಳ ನಂತರ ವಿನೋದ ಬಂದು ಕರೆಗಂಟೆ ಬಾರಿಸಿದ. ಎಲಿಜಬೆತ್ ಬಾಗಿಲನ್ನು ತೆರೆದಾಗ ಆತ ಅವಳ ಮೇಲೆರಗಿ ಕೆಳಗೆ ಕೆಡವಿದ. ಆಕೆ ಕಿರುಚಿದಾಗ ನಾನು ಮನೆಯ ಟಿವಿ ಶಬ್ದವನ್ನು ಜೋರು ಮಾಡಿದೆ. ವಿನೋದ್ ಅಡುಗೆ ಕೋಣೆಯಲ್ಲಿದ್ದ ಚಾಕುವಿನಿಂದ ಅವಳನ್ನು ಇರಿದು ಕೊಂದ. ವೃದ್ಧ ದಂಪತಿ ಬೇರೆ ಬೇರೆ ರೂಂಗಳಲ್ಲಿ ನಿದ್ರಾಧೀನರಾಗಿದ್ದ ಕಾರಣ ಅವರಿಗೆ ಹಾಲಿನಲ್ಲಿ ಆಗುತ್ತಿದ್ದ ಶಬ್ದ ಕೇಳಲಿಲ್ಲ. ಅವರ ಕೋಣೆಗಳಿಗೆ ಹೋಗಿ ಇಬ್ಬರನ್ನೂ ಉಸಿರುಗಟ್ಟಿಸಿ ಕೊಲೆ ಮಾಡಿದೆವು. ಆನಂತರ ಮನೆಯಲ್ಲಿದ್ದ ವಸ್ತುಗಳನ್ನು ದೋಚಿ ಆ ರಾತ್ರಿ ಎಲಿಜಬೆತ್​ಳ ಹಾಸಿಗೆಯ ಮೇಲೆಯೇ ಮಲಗಿ ಇನ್ನೇನು ಬೆಳಕಾಗುವ ಸಮಯಕ್ಕೆ ಮನೆಯಿಂದ ಹೊರಟುಹೋದೆವು. ಮುಂಜಾಗರೂಕತೆಗಾಗಿ ಕೈಗಳಿಗೆ ಗ್ಲೌಸ್ ಧರಿಸಿದ್ದೆವು. ಬೇರೆಯವರ ಮೇಲೆ ಸಂಶಯ ಬರಲೆಂದು ಎಲಿಜಬೆತ್​ಳ ಮಂಚದ ದಿಂಬಿನ ಕೆಳಗೆ ಕಾಂಡೋಮ್ ಪ್ಯಾಕೆಟ್ ಹಾಗೂ ಬೀಡಿ ಕಟ್ಟನ್ನು ಇಟ್ಟೆವು.’

ಆನಂತರ ಅವರಿಂದ ಮನೆಯಿಂದ ಕದ್ದಿದ್ದ ಹಲವಾರು ವಸ್ತುಗಳನ್ನು ವಶಪಡಿಸಿಕೊಂಡು ಆರೋಪ ಪಟ್ಟಿಯನ್ನು ಸಲ್ಲಿಸಲಾಯಿತು. ಕೇವಲ ಸಾಂರ್ದಭಿಕ ಸಾಕ್ಷ್ಯಾಧಾರದ ಮೇಲೆಯೇ ನ್ಯಾಯಾಲಯ ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿತು.

ತಮ್ಮ ಅಪರಾಧವು ಪತ್ತೆಯಾಗದಿರಲೆಂದು ಅಪರಾಧಿಗಳು ಎಷ್ಟೇ ಎಚ್ಚರಿಕೆ ವಹಿಸಿದರೂ ಯಾವುದಾದರೂ ಕುರುಹಿನಿಂದ ಪತ್ತೆಯಾಗುತ್ತಾರೆ. ಪ್ರೀತಿ ಈ ಹಿಂದೆ ಭಾಸ್ಕರ್ ಮನೆಗೆ ಬಂದಾಗ ಸುನಂದಾಳನ್ನು ಸಂರ್ಪಸದಿದ್ದರೆ ಹಾಗೂ ಎಲಿಜಬೆತ್​ಳ ಮೊಬೈಲ್ ಫೋನನ್ನು ಭಾಸ್ಕರ್ ಮನೆಯಲ್ಲಿಯೇ ಬಿಟ್ಟಿದ್ದರೆ ಈ ಅಪರಾಧದ ಪತ್ತೆ ಕಠಿಣವಾಗುತ್ತಿತ್ತು. ‘ಯಾರನ್ನಾದರೂ ಕೊಲ್ಲಬೇಕಾದರೆ ಪರಿಪೂರ್ಣ ಅಪರಾಧವನ್ನೇ ಮಾಡಬೇಕಾಗುತ್ತದೆ. ಆದರೆ ಇದು ಅತಿ ಕಠಿಣ ಎನ್ನುವುದರ ಕಾರಣದಿಂದಲೇ ನಮ್ಮ ರಕ್ಷಣೆ ಸಾಧ್ಯ’ ಎಂಬ ಹೆಸರಾಂತ ಫ್ರೆಂಚ್ ನಿರ್ದೇಶಕ ಕ್ಲಾಡ್ ಲೇಲೂಕ್​ನ ಮಾತುಗಳು ಸತ್ಯವಲ್ಲವೇ?

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)