ಅಂಕಣ

ನಮ್ಮನ್ನು ಕಲಕುತ್ತಿಲ್ಲವೇಕೆ ಆಕೆಯ ಖಿನ್ನತೆ?; ಸಂವಹನ ಇಲ್ಲದೆ ಚಿಕಿತ್ಸೆ ಅಸಾಧ್ಯ

Webdesk - Ravikanth

| ಡಾ. ಪೂರ್ಣಿಮಾ ಶಶಿಧರಬಾವಿ

‘ಮುಖ ಮುಖವೂ ಮುಖವಾಡ ತೊಟ್ಟುನಿಂತ ಹಾಗಿವೆ, ಆಡುತ್ತಿರುವ ಮಾತಿನೊಳಗೆ ಹೃದಯ ಕಾಣದಾಗಿದೆ...’ ಜಿ.ಎಸ್.ಶಿವರುದ್ರಪ್ಪ ಅವರು ಬೇರೆಯದೆ ಕಲ್ಪನೆಯೊಂದಿಗೆ ಈ ಸಾಲುಗಳನ್ನು ಬರೆದಿರಬಹುದು. ಆದರೆ ಅವರ ಈ ನುಡಿಗಳು ಇಂದಿನ ಸಾಮಾಜಿಕ, ಮಾನಸಿಕ ಸ್ವಾಸ್ಥ್ಯದ ಪ್ರತಿಬಿಂಬದಂತಿದೆ. ಹಾಗೆಯೇ ವ್ಯಕ್ತಿಯ ಮಾನಸಿಕ ಸ್ಥಿರತೆ ಕಾಪಾಡುವ ಅಸ್ವಸ್ಥತೆಯಿಂದ ಸ್ವಸ್ಥವಾಗಿರಲು ನಮ್ಮಲ್ಲಿರುವ ದೌರ್ಬಲ್ಯದ ಮುಖವಾಡ ತೊರೆದು ಹೃದಯವಂತರಾಗಿ, ಸಂವೇದನಶೀಲರಾಗಿ ಮಾನಸಿಕ ಸ್ವಾಸ್ಥ್ಯ ಕಾಪಾಡುವುದು ಇಂದಿನ ದಿನದಲ್ಲಿ ಅನಿವಾರ್ಯಕೂಡ.

ಮಹಿಳೆಯರಲ್ಲಿ ಮಾನಸಿಕ ಖಿನ್ನತೆ ಎಂಬುದರ ಬಗ್ಗೆ ಯಾವ ಉದಾಹರಣೆಯೊಂದಿಗೆ ಪ್ರಾರಂಭಿಸಬೇಕು ಎಂದು ಯೋಚಿಸಿದಾಗ ಖಿನ್ನತೆಗೊಳಗಾಗಿ ಚಿಕಿತ್ಸೆ ಪಡೆದ ನೂರಾರು ಮಹಿಳೆಯರ ಹೆಸರು, ಉದಾಹರಣೆಗಳು ಚಕ ಚಕನೆ ಕಣ್ಮುಂದೆ ಹಾದು ಹೋದವು. ಅರೆ! ಇದು ಕೇವಲ 2 ತಿಂಗಳಲ್ಲಿ ಇದ್ದ ಮಹಿಳೆಯರ ವರದಿ. ಹಾಗಾದರೆ ವಾರ್ಷಿಕವಾಗಿ ಎಷ್ಟಿರಬಹುದೆಂಬ ಕುತೂಹಲಕ್ಕೆ ಜಿಲ್ಲಾವಾರು, ರಾಜ್ಯ, ಅಷ್ಟೇಕೆ ಜಗತ್ತಿನಾದ್ಯಂತ ಖಿನ್ನತೆಗೊಳಗಾದ ಮಹಿಳೆಯರ ಅಂಕಿ-ಅಂಶ ಪರಿಶೀಲಿಸಿದಾಗ ಜಗತ್ತಿನ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.70ರಷ್ಟು ಮಹಿಳೆಯರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ ಹಾಗೂ ಇದು ಗಂಡಸರಿಗಿಂತ ಎರಡು ಪಟ್ಟು ಮಹಿಳೆಯರಲ್ಲೇ ಹೆಚ್ಚು ಎಂದು ನೋಡಿ ಖೇದವಾಯಿತು. ದುರದೃಷ್ಟ ಸಂಗತಿ ಎಂದರೆ ಭಾರತದಲ್ಲಿ ಸರಿಯಾದ ಅಂಕಿ-ಅಂಶಗಳ ವರದಿ ಇಲ್ಲದಿರುವುದು ಮತ್ತು ಎಷ್ಟೊ ಕೇಸುಗಳು ದಾಖಲಾಗದೆ ಚಿಕಿತ್ಸೆ ಸಿಗದೆ ಸಾವಿನೊಂದಿಗೆ ಕೊನೆಗೊಳ್ಳುತ್ತಿರುವುದು. ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವುದರಲ್ಲಿ ಶೇ 5.7ಕ್ಕೂ ಹೆಚ್ಚು ಮಹಿಳೆಯರೇ ಇದ್ದಾರೆ. ಇದರಲ್ಲೂ ಹೆಣ್ಣು ಓಟ ಮುಂದುವರಿಸಿದ್ದಾಳೆ.

ಸ್ಥಿರತೆ ಕಾಪಾಡುವುದು ದುಸ್ತರ

ಒಬ್ಬ ಹೆಣ್ಣು ಮಾನಸಿಕವಾಗಿ ಕುಗ್ಗಿದಾಗ, ಸ್ಥಿಮಿತ ಕಳೆದುಕೊಂಡಾಗ ಅದರ ಪರಿಣಾಮವನ್ನು ಇಡೀ ಕುಟುಂಬ, ನಾಗರಿಕ ಸಮಾಜ ಅನುಭವಿಸಬೇಕಾಗುತ್ತದೆ. ಹೆಣ್ಣು ಅಷ್ಟರಮಟ್ಟಿಗೆ ಆವರಿಸಿದ್ದಾಳೆ. ಚಿಲುಮೆಯಂತಿರುವ ಸದಾ ಕ್ರಿಯಾಶೀಲಳಾದ ಹೆಣ್ಣಿಗೆ ಖಿನ್ನತೆಯೇ ಯಾಕೆ? ಮಹಿಳೆಯರಲ್ಲೇ ಖಿನ್ನತೆ ಹೆಚ್ಚು ಯಾಕೆಂದರೆ ಹೆಣ್ಣು ಹುಟ್ಟಿನಿಂದ ಸಾಯುವವರೆಗೂ ಜೈವಿಕ ಕ್ರಿಯೆಯಲ್ಲಿ ಅನೇಕ ಬದಲಾವಣೆಗೆ ಒಳಪಡುತ್ತಾಳೆ. ಮೊದಲು ಮುಟ್ಟಿನಿಂದ, ಮುಟ್ಟು ಕೊನೆಗೊಳ್ಳುವವರೆಗಿನ ಅವಧಿಯಲ್ಲಿ, ಮಕ್ಕಳ ಹೆರುವ ಮುನ್ನ, ಮಕ್ಕಳನ್ನು ಹೆತ್ತ ನಂತರದ ಹಂತದಲ್ಲಿ ಅನೇಕ ಮಾನಸಿಕ ಬದಲಾವಣೆಗಳಿಗೆ ಒಳಪಡುತ್ತಾಳೆ. ಈ ಏರಿಳಿತಗಳಿಂದ ಮಾನಸಿಕ ಸ್ಥಿರತೆ ಕಾಪಾಡುವುದು ಬಹು ದುಸ್ತರದ ಕೆಲಸ. ಇಂದಿನ ಹೆಣ್ಣು ಮಕ್ಕಳಲ್ಲಿರುವ ಸಾಮಾಜಿಕ ಜಾಲತಾಣ ಬಗೆಗಿರುವ ಅತಿಯಾದ ಆಕರ್ಷಣೆ, ಅತಿಯಾದ ಅವಲಂಬನೆ ಎಲ್ಲರೂ ತಮ್ಮನ್ನು ಗಮನಿಸಬೇಕು ಎನ್ನುವ ಹಂಬಲ. ನಿರೀಕ್ಷಿಸಿದಷ್ಟು ಪ್ರಾಮುಖ್ಯತೆ ಸಿಗದಿದ್ದಾಗ ಅವಳಲ್ಲಾಗುವ ಮಾನಸಿಕ ತುಮುಲಗಳಿಂದ ತಾನಾಗಿಯೇ ತನ್ನನ್ನು ಖಿನ್ನತೆಗೆ ದೂಡಿಕೊಳ್ಳುತ್ತಿದ್ದಾಳೆ. ಮಾನಸಿಕ ಸ್ಥಿಮಿತ ಕಾಪಾಡುವುದರಲ್ಲಿ ಸ್ವಲ್ಪ ಎಡವಿದರೂ ಹೆಚ್ಚು ಅಪಾಯಕ್ಕೆ ಸಿಲುಕುತ್ತಾಳೆ.

ಪರಿಹಾರವೇನು?

ಖಿನ್ನತೆಗೆ ದೂಡುತ್ತಿರುವ ವಿಷಯ, ಸಂಗತಿ, ಜಾಗ ಇವುಗಳ ಬಗ್ಗೆ ಸೂಕ್ಷ್ಮ ಅವಲೋಕನ ಮುಖ್ಯ. ಇದರ ಬಗ್ಗೆ ರ್ಚಚಿಸುವ ಮೂಲಕ ಆಕೆಯೊಂದಿಗೆ ಮೊದಲ ಹೆಜ್ಜೆ ಇಡಬೇಕು. ಈ ರೀತಿಯ ಜೊತೆಗೂಡಿದ ಅನೇಕ ಹೆಜ್ಜೆಗಳನ್ನು ಇಡಬೇಕಾಗುತ್ತದೆ. ಮೊದಲ ಪ್ರಯತ್ನದಲ್ಲಿ ಎಲ್ಲ ಸರಿಮಾಡುತ್ತೇವೆ ಎನ್ನುವ ದುಡುಕು ಬೇಡ. ಉದ್ಯೋಗ ಸ್ಥಳ, ಮನೆ ಸುತ್ತಮುತ್ತಲಿನ ಪರಿಸರ, ಆಗು-ಹೋಗುಗಳ ಅವಲೋಕನವಿರಲಿ. ಆತಂಕ, ಭಯ, ನಿರುತ್ಸಾಹವನ್ನು ಯೋಗಾಭ್ಯಾಸ, ಸಂಗೀತ ಕೇಳುವುದು, ಪ್ರಾಣಾಯಾಮ, ಚಿಕ್ಕ ಚಿಕ್ಕ ಹೊರ ಪ್ರವಾಸ ಮಾಡುವುದು, ಕುಟುಂಬದವರೊಂದಿಗಿನ ಆತ್ಮೀಯ ಕ್ಷಣಗಳನ್ನು ಮೆಲುಕು ಹಾಕುವ ಮೂಲಕ ಇವೆಲ್ಲವನ್ನು ಔಷಧ ರಹಿತವಾಗಿ ತಕ್ಕಮಟ್ಟಿಗೆ ಸರಿಪಡಿಸಬಹುದು. ಖಿನ್ನತೆಯ ಲಕ್ಷಣಕ್ಕನುಗುಣವಾಗಿ ನುರಿತ ಮಾನಸಿಕ ವೈದ್ಯರ ನೆರವಿನಿಂದ ಮಾತ್ರೆಗಳನ್ನು ಸರಿಯಾದ ಕ್ರಮದಲ್ಲಿ ತೆಗೆದುಕೊಳ್ಳಬಹುದು. ಎಲ್ಲಕ್ಕಿಂತ ಹೆಚ್ಚಾಗಿ ನಿನ್ನೊಂದಿಗೆ ನಾವಿದ್ದೇವೆ ಎನ್ನುವ ಭರವಸೆಯ ಮಾತುಗಳು ಆಕೆಗೆ ಮಾನಸಿಕ ಸ್ಥೈರ್ಯ ತುಂಬುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ.

ಪರಸ್ಪರ ಸ್ಪಂದನೆ ಅಗತ್ಯ

ಮಹಿಳೆಯ ಮಾನಸಿಕ ಸ್ಥಿತಿಯಲ್ಲಿ ಹೆಚ್ಚು ಸಂವೇದನಾ ಶೀಲರಾಗಬೇಕಾಗಿದ್ದ ನಾವು ಸಂವೇದನೆಯನ್ನು ಕಳೆದುಕೊಳ್ಳುತ್ತಿರುವುದು ವಿಪರ್ಯಾಸದ ಸಂಗತಿ. ಆಕೆಯ ಖಿನ್ನತೆ, ನಿರುತ್ಸಾಹ ನಮ್ಮನ್ನು ಕಲುಕುತ್ತಿಲ್ಲ. ಬದಲಾಗಿ ಆಕೆಯ ಪರಿಸ್ಥಿತಿಯನ್ನು ವಿಕೃತ ರೀತಿಯಲ್ಲಿ ತಮಾಷೆಯಾಗಿ ಆಡಿಕೊಳ್ಳುವ ಸಂವೇದನಾಹೀನ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಬದಲಾಗಿ ಕುಟುಂಬದವರಾಗಲಿ, ಸ್ನೇಹಿತರಾಗಲಿ, ನಮ್ಮಲ್ಲಿರುವ ದೌರ್ಬಲ್ಯದ ಮುಖವಾಡ ತೊರೆದು ಮುಕ್ತವಾಗಿ ಆಕೆಯೊಂದಿಗೆ ಬೆರೆಯಬೇಕು. Without communication there is no relationship ಎನ್ನುವ ಹಾಗೆ ಪರಸ್ಪರ ಸ್ಪಂದನೆ, ಸಂವಹನ ಇಲ್ಲದೆ ಚಿಕಿತ್ಸೆ ಅಸಾಧ್ಯ.

ಗುರುತಿಸುವ ಬಗೆ ಹೇಗೆ?

ಖಿನ್ನತೆಯನ್ನು ಗುರುತಿಸುವ ಕೆಲಸ ಮೊದಲು ಮನೆಯಿಂದಲೇ ಆಗಬೇಕು. ಗಂಡಸರಿಗಿಂತ ಹೆಂಗಸರಲ್ಲಿ ಗುರುತಿಸುವ ಬಗೆಯು ಭಿನ್ನ ಹಾಗೂ ಚಿಕಿತ್ಸೆಯೂ ಭಿನ್ನ. ನಿರುತ್ಸಾಹ, ಪದೇ ಪದೆ ಅಳುವ ಮನಸ್ಥಿತಿ, ಆತ್ಮಹತ್ಯೆಯ ಯೋಚನೆಗಳು, ಅತಿನಿದ್ರೆ, ಅತಿ ಊಟ ಅಥವಾ ಊಟಮಾಡದೇ ಇರುವುದು, ತಲೆನೋವು, ಸಣ್ಣಪುಟ್ಟ ಖುಷಿಗಳನ್ನು ಆನಂದಿಸದೆ ಹೋಗುವುದು, ಏಕಾಗ್ರತೆಯ ಕೊರತೆ. ತೂಕ ಕಳೆದುಕೊಳ್ಳುವುದು. ಅಂತಮುಖಿ... ಹೀಗೆ ಅನೇಕ ಲಕ್ಷಣಗಳನ್ನು ಗುರುತಿಸಬಹುದು. ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.

ಸಲಹೆ, ಅಭಿಪ್ರಾಯ ಮತ್ತು ಬರಹಗಳಿಗೆ: lalithavijayavani@gmail.com