ಪ್ರತಿವ್ಯಕ್ತಿಗೂ ಅವರವರು ಇಷ್ಟಪಡುವ ವೈದ್ಯರಿರುತ್ತಾರೆ. ಆ ವೈದ್ಯರ ಮೇಲೆ ರೋಗಿಗೆ ಅಪರಿಮಿತವಾದ ವಿಶ್ವಾಸ ಇರುತ್ತದೆ. ಅವರು ನೀಡುವ ಔಷಧದ ಮೇಲೂ ಪರಿಪೂರ್ಣವಾದ ನಂಬಿಕೆ. ಆಪ್ತ ವೈದ್ಯರು ಏನು ಕೊಟ್ಟರೂ ಪರಮೌಷಧವಾಗಿ ಕೆಲಸ ಮಾಡುತ್ತದೆ. ವೈದ್ಯರಾಡುವ ಮಾತೂ ಅದೆಷ್ಟೋ ಬಾರಿ ಸಾಕಾಗುತ್ತದೆ, ಜೀವವನ್ನೇ ಉಳಿಸುತ್ತದೆ. ಚಿಕಿತ್ಸೆ ನೀಡುವ ವೈದ್ಯರ ಸುತ್ತಲಿನ ಪರಿಸರ ಹಾಗೂ ವ್ಯವಸ್ಥೆಗಳೂ ತಮ್ಮದೇ ಆದ ಪ್ರಭಾವ, ಪರಿಣಾಮಗಳನ್ನು ರೋಗಿಯ ಮೇಲೆ ಬೀರುತ್ತವೆ. ಭಯ ಭೀತಿಯ ವಾತಾವರಣ ಸೃಷ್ಟಿಸಿ ರೋಗಿಯನ್ನು ಹೆದರಿಸಿ, ಬೆದರಿಸಿ ಕಾಸು ಪೀಕಿಸಬಹುದೆಂಬುದು ದಯೆಯಿಲ್ಲದ ಅಪ್ರಬುದ್ಧ ಲೆಕ್ಕಾಚಾರ. ರೋಗಿ ಇಂತಿಂತಹ ಚಿಕಿತ್ಸೆಗಳನ್ನು ತೆಗೆದುಕೊಳ್ಳದಿದ್ದಲ್ಲಿ ಬದುಕುವುದು ಕಷ್ಟ ಎಂದು ವೈದ್ಯರು ವಿವರಿಸುತ್ತಿರುವಾಗ ಆ ವೈದ್ಯರೇ ಕುಸಿದು ಪ್ರಾಣ ಕಳೆದುಕೊಂಡ ವಾಸ್ತವ ಘಟನೆಗಳೂ ಇವೆೆ. ಚಿಕಿತ್ಸಾಲಯದಲ್ಲಿ ಖುಷಿಯು ಎಲ್ಲೆಡೆ ತುಂಬಿದ್ದರೆ, ನಯ-ವಿನಯ, ಉತ್ಸಾಹ-ಲವಲವಿಕೆ, ಸಮಾಧಾನ-ಶಾಂತಚಿತ್ತ ಮೇಳೈಸಿದ್ದರೆ ಹೆದರುತ್ತಲೇ ಚಿಕಿತ್ಸೆಗೆ ಬಂದ ರೋಗಿ ನಗುವಿನೊಂದಿಗೆ ಮನೆಗೆ ಹೋಗಲು ಸಾಧ್ಯವಾಗುತ್ತದೆ. ಹೀಗೆ ಸಂಕಷ್ಟದ ದುಸ್ಥಿತಿಯಿಂದ ಸಂತೃಪ್ತಿಯ ಸುಸ್ಥಿತಿಗೆ ಒಯ್ಯಬಲ್ಲ ಶಕ್ತಿ ವೈದ್ಯರಿಗಿದೆ.
ಕೆಲವೊಮ್ಮೆ ಅಪಾರ ಶಿಕ್ಷಣ ಜ್ಞಾನವುಳ್ಳ ರೋಗಿಗಳು ವೈದ್ಯರು ನೀಡಿದ ಔಷಧ ಸಲಹೆಯಲ್ಲಿ ಯಾವ ಔಷಧ ಯಾವುದಕ್ಕೆ ಎಂದು ವಿಚಾರಿಸುವುದಿದೆ. ಈ ರೀತಿಯಲ್ಲಿ ಈ ಕಾಯಿಲೆಗೆ ಇದು, ಇನ್ನೊಂದು ವ್ಯಾಧಿಗೆ ಮತ್ತೊಂದು ಎಂಬಂತೆ ಪಟ್ಟಿನೋಡಿ ಚಿಕಿತ್ಸೆ ನೀಡಿ ಎಲ್ಲರನ್ನೂ ಗುಣಪಡಿಸಲು ಸಾಧ್ಯವಾಗುವುದಿದ್ದರೆ ವೈದ್ಯರ ಅವಶ್ಯಕತೆಯೇ ಇರುತ್ತಿರಲಿಲ್ಲ! ಚಿಕಿತ್ಸೆ ನೀಡಲು ಕಂಪ್ಯೂಟರ್ ಮಾತ್ರ ಸಾಕಿತ್ತು. ಆದರೆ ಪರಿಸ್ಥಿತಿ ಹಾಗಿಲ್ಲ. ಆದುದರಿಂದ ಯಶಸ್ವೀ ಚಿಕಿತ್ಸೆ ಎಂಬುದು ಕೇವಲ ಲೆಕ್ಕಾಚಾರದಲ್ಲೇ ಕೊನೆಗೊಳ್ಳುವುದಿಲ್ಲ. ಅದು ವೈದ್ಯರ ವಿಶೇಷವಾದ ಕಲೆ, ಉತ್ಕೃಷ್ಟ ನೈಪುಣ್ಯತೆ. ಹಲವಾರು ತೊಂದರೆಗಳೊಂದಿಗೆ ಬರುವ ರೋಗಿಯಲ್ಲಿ ಯಾವುದಕ್ಕೆ ಎಷ್ಟು ಆದ್ಯತೆ, ಯಾವ ತೊಂದರೆಗಳಿಗೆ ಪ್ರಾಶಸ್ತ್ಯದ ಚಿಕಿತ್ಸೆ ಎಂಬುದೆಲ್ಲವೂ ವೈದ್ಯರ ಅಂತಃಕರಣ, ಭಾವನೆಗಳು ಸೇರಿ ನಿರ್ಧಾರವಾಗಬೇಕು. ಅವೆಲ್ಲ ಇಲ್ಲವಾದಲ್ಲಿ ತಾಂತ್ರಿಕವಾಗಿ, ಕಾನೂನಾತ್ಮಕವಾಗಿ ಕ್ರಮಬದ್ಧವಾಗಿರುತ್ತದೆ. ಆದರೆ ಚಿಕಿತ್ಸೆಯ ಅಂತಿಮ ಫಲಶ್ರುತಿ ನಿರಾಶಾದಾಯಕ ಆಗಿರುತ್ತದೆ.
ಇವತ್ತಿನ ಚಿಕಿತ್ಸೆಯಿಂದ ನನಗೆ ಗುಣವಾಗುವುದಿಲ್ಲ ಎಂದು ಬೆಳಗ್ಗೆ ಎದ್ದೊಡನೆ ನಿರ್ಧರಿಸಿಯೇ ಚಿಕಿತ್ಸೆಗೆ ಹೊರಡುವ ರೋಗಿಗಳೂ ಇರುತ್ತಾರೆ! ಅವರಿಗೆ ಚಿಕಿತ್ಸೆಯು ಒಳ್ಳೆಯ ಫಲ ನೀಡುವುದಾದರೂ ಹೇಗೆ? ಈ ಚಿಕಿತ್ಸೆಯಿಂದ ನಾನು ಗುಣಮುಖನಾಗುತ್ತೇನೆ ಎಂಬ ಸತ್ ಸಂಕಲ್ಪದೊಂದಿಗೆ ಹೆಜ್ಜೆಯಿಟ್ಟರೆ ಫಲಿತಾಂಶವೂ ಚೆನ್ನಾಗಿರುತ್ತದೆ. ರೋಗಿಯ ಧನಾತ್ಮಕ ನಿರ್ಧಾರ ಉತ್ತಮ ಫಲಿತಾಂಶಕ್ಕೆ ನಾಂದಿ ಹಾಡುತ್ತದೆ. ರಕ್ತದೊತ್ತಡ ಪರೀಕ್ಷಿಸುವಾಗ ಅಭ್ಯಾಸವಿಲ್ಲದ ಪರಿಸರದಲ್ಲಿ ಹೊಸ ವೈದ್ಯರಿಂದ ಆಗಿದ್ದರೆ ಮಾಪನಾಂಕ ಹೆಚ್ಚು ಬರುತ್ತದೆ. ನಿತ್ಯ ನೋಡಿ ಅಭ್ಯಾಸವಿರುವ ಸುಪರಿಚಿತ ಸ್ಥಳದಲ್ಲಿ ಸ್ವಲ್ಪವೇ ಹೊತ್ತಿನ ಮೊದಲು ಮಾಪಕವು ಕಡಿಮೆ ಮಟ್ಟವನ್ನು ತೋರಿಸಿರುತ್ತದೆ! ಕೇವಲ 20-30 ವರ್ಷಗಳ ಹಿಂದೆ ಮನುಷ್ಯರಿಗೆ ಬದುಕಿನ ನೆಮ್ಮದಿ ಇಂದಿಗಿಂತ ಹೆಚ್ಚಿತ್ತು. ಹಾಗಿದ್ದರೆ ಅತ್ಯಾಧುನಿಕ ತಂತ್ರಜ್ಞಾನ, ವಿಜ್ಞಾನಗಳು ನಮ್ಮನ್ನು ಯಾವ ದಿಕ್ಕಿಗೆ ಒಯ್ಯುತ್ತಿವೆ ಎಂಬ ಪ್ರಶ್ನೆಯಿದೆ. ಚಿಕಿತ್ಸೆಗೆ ಲೆಕ್ಕಾಚಾರ, ವಿಜ್ಞಾನಗಳು ಆಧಾರವಾಗಿದ್ದು ವೈದ್ಯರಿಗೆ ಚಿಕಿತ್ಸೆಯ ಹೃದಯಾಂತರಂಗ ರ್ಸ³ ಕಲೆ ಸಿದ್ಧಿಸಿದ್ದರೆ ಮಾತ್ರ ಬದುಕಿನಲ್ಲಿ ಸಿಹಿಸುದ್ದಿಗಳಿರುತ್ತವೆ.