ರಿಯಾಜ್ನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಆತ ಹಲವು ವರ್ಷಗಳ ಹಿಂದೆ ಆಂಧ್ರ ಪ್ರದೇಶದಿಂದ ವಲಸೆ ಬಂದಿದ್ದು ನಗರದ ಬೇರೊಂದು ಬಡಾವಣೆಯಲ್ಲಿ ಚಹಾದಂಗಡಿ ನಡೆಸುತ್ತಿದ್ದ; ಆತ ಒಬ್ಬಂಟಿಯಾಗಿ ವಾಸಿಸುತ್ತಿದ್ದು ಅವನಿಗೆ ಹೆಂಡತಿ ಮಕ್ಕಳು ಇರಲಿಲ್ಲ ಎಂದು ತಿಳಿಯಿತು.
ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಮೃತನನ್ನು ಇರಿದು ಕೊಲ್ಲಲಾಗಿದೆ, ನಂತರ ಆತನ ದೇಹವನ್ನು ರೈಲ್ವೆ ಹಳಿಯ ಮೇಲೆ ಇಡಲಾಗಿದೆ ಎನ್ನುವ ಅಭಿಪ್ರಾಯ ನೀಡಿದರು. ಈ ಮೇರೆಗೆ ಅಸ್ವಾಭಾವಿಕ ಸಾವಿನ ಪ್ರಕರಣವನ್ನು ಕೊಲೆ ಪ್ರಕರಣವನ್ನಾಗಿ ಪರಿವರ್ತಿಸಲಾಯಿತು. ರೇಲ್ವೆ ಪ್ಲಾಟ್ಫಾಮರ್್ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ರಾತ್ರಿ ಸುಮಾರು 1.30ರ ವೇಳೆ ಮೂರು ಜನರು ರೇಲ್ವೆ ಹಳಿಯ ಬಳಿ ಓಡಾಡುತ್ತಿದ್ದುದು ಗೋಚರಿಸಿತು. ಆ ವ್ಯಕ್ತಿಗಳು ಯಾರು, ಅವರಲ್ಲಿ ಮೃತ ರಿಯಾಜ್ ಇರುವನೋ ಎನ್ನುವುದು ಸ್ಪಷ್ಟವಾಗಿ ತಿಳಿದು ಬರುತ್ತಿರಲಿಲ್ಲ. ಮೃತದೇಹ ಸಿಕ್ಕ ರೈಲು ಹಳಿಗಳ ಪಕ್ಕದಲ್ಲಿ ದಟ್ಟವಾದ ಪೊದೆಗಳಿದ್ದವು. ಅಲ್ಲಿ ಹುಡುಕಿದಾಗ ಒಂದು ರಕ್ತಸಿಕ್ತ ಟೀಶರ್ಟ್ ಸಿಕ್ಕಿತು. ಅದು ಕೊಲೆಗಾರನದಿರಬಹುದೆಂದು ಊಹಿಸಿ ಅದನ್ನು ವಶಪಡಿಸಿಕೊಳ್ಳಲಾಯಿತು. ಮೃತನ ಬಳಿ ಸಿಕ್ಕಿದ ಮೊಬೈಲನ್ನು ತಜ್ಞರಿಗೆ ಕೊಟ್ಟು ಆ ಫೋನಿಗೆ ಬಂದುಹೋದ ಕರೆಗಳನ್ನು ಪರಿಶೀಲಿಸಲು ಕೋರಲಾಯಿತು.
ರಿಯಾಜ್ನ ಫೋನಿಗೆ ಕಟ್ಟಕಡೆಯ ಕರೆ ಹಿಂದಿನ ರಾತ್ರಿ ಸುಮಾರು 11.00 ಗಂಟೆಗೆ ಬಂದಿತ್ತು. ಆ ನಂಬರ್ ಕೃಷ್ಣ ಎನ್ನುವವನದ್ದೆಂದು ತಿಳಿಯಿತು. ಅವನನ್ನು ಹುಡುಕಿದಾಗ ಆತ ಬೇರಾರೂ ಆಗಿರದೇ ರಿಯಾಜ್ ನಡೆಸುತ್ತಿದ್ದ ಚಹಾ ಅಂಗಡಿಯಲ್ಲಿ ಕೆಲಸ ಮಾಡುವವನಾಗಿದ್ದ. ಆತನನ್ನು ವಿಚಾರಿಸಿದಾಗ, ‘ಹಿಂದಿನ ರಾತ್ರಿ ಮಾಲೀಕನನ್ನು ಹುಡುಕಿಕೊಂಡು ಮೂವರು ಬಂದು ನಿಮ್ಮ ಮಾಲೀಕರು ನಮ್ಮನ್ನು ಬರಹೇಳಿದ್ದಾರೆ. ಅವರೆಲ್ಲಿ ಎಂದು ಕೇಳಿದರು. ನನಗೆ ತಿಳಿದಿಲ್ಲ ಎಂದಾಗ, ಫೋನ್ ಮಾಡಿ ತಿಳಿದುಕೋ ಎಂದರು. ಅದರಂತೆಯೇ ನಾನು ಮಾಲೀಕರಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ಅವರು ಆ ಅಪರಿಚಿತರ ಜೊತೆ ಮಾತನಾಡಿಸಲು ಹೇಳಿದರು. ನಾನು ಫೋನನ್ನು ಆ ಯುವಕರಲ್ಲೊಬ್ಬರಿಗೆ ನೀಡಿದೆ. ಆ ವ್ಯಕ್ತಿ ಉರ್ದು ಭಾಷೆಯಲ್ಲಿ ಮಾಲೀಕರ ಜೊತೆ ಮಾತನಾಡಿದ. ಮಾಲೀಕ ತಾನಿದ್ದ ಜಾಗವನ್ನು ತಿಳಿಸಿ ಅಲ್ಲಿಗೆ ಬರಲು ತಿಳಿಸಿದರು’ ಎಂದು ವಿವರಿಸಿದ.
ಚಹಾ ಅಂಗಡಿಯ ಬಳಿ ಬಂದಿದ್ದವರು ಸುಮಾರು 20 ರಿಂದ 25 ವರ್ಷ ವಯಸ್ಸಿನವರಾಗಿದ್ದು ಆಟೋದಲ್ಲಿ ಬಂದಿದ್ದರು ಎಂದು ಕೃಷ್ಣ ತಿಳಿಸಿದ. ಮುಂದಿನ ವಿಚಾರಣೆಯಲ್ಲಿ, ರಿಯಾಜ್ ಸಲಿಂಗಕಾಮಿಯಾಗಿದ್ದು ತನ್ನ ಅಂಗಡಿ ಬಳಿ ಸಣ್ಣ ರೂಮನ್ನು ಬಾಡಿಗೆಗೆ ತೆಗೆದುಕೊಂಡಿದ್ದು, ಲೈಂಗಿಕ ತೃಷೆಯನ್ನು ತೀರಿಸಿಕೊಳ್ಳಲು ಬಾಲಕರನ್ನು ಮತ್ತು ಯುವಕರನ್ನು ಕರೆಸಿಕೊಳ್ಳುತ್ತಿದ್ದ ಎಂದು ತಿಳಿದುಬಂತು. ಕೃಷ್ಣ ಕೊಟ್ಟ ಚಹರೆ ಪಟ್ಟಿಯ ಮೇರೆಗೆ ತನಿಖೆ ಮಾಡಿದಾಗ ಪೊಲೀಸರಿಗೆ ಅಮಾನುಲ್ಲಾ ಎನ್ನುವ ವ್ಯಕ್ತಿಯ ವಿವರಗಳು ಲಭ್ಯವಾದವು.
ಅಮಾನುಲ್ಲಾನನ್ನು ಪತ್ತೆ ಮಾಡಿ ವಿಚಾರಿಸಿದಾಗ ಆತ ತಾನು ರಿಯಾಜ್ನ ಮನೆಗೆ ಹೋಗಿಯೇ ಇಲ್ಲ ಎಂದ. ಆತನನ್ನು ಕೃಷ್ಣನ ಸಮ್ಮುಖದಲ್ಲಿ ವಿಚಾರಣೆ ಮಾಡಿದಾಗ, ತಾನು ರಿಯಾಜ್ನ ರೂಮಿಗೆ ಹೋಗಿದ್ದಾಗಿ ಒಪ್ಪಿಕೊಂಡು ತನ್ನ ಜೊತೆ ಬಂದಿದ್ದವರು ಗೆಳೆಯರಾದ ಜೋಸೆಫ್ ಮತ್ತು ರಾಜ ಎಂದ. ಜೋಸೆಫ್ ಮತ್ತು ರಾಜನನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆತಂದರು. ಕೊಲೆಯಾದ ಆ ರಾತ್ರಿ ಏನು ನಡೆಯಿತೆಂದು ಮೂರೂ ಜನರನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅಮಾನುಲ್ಲಾ ಹೀಗೆಂದ: ‘ನಾನೊಬ್ಬ ಕೂಲಿ ಕಾರ್ವಿುಕ. ರಿಯಾಜ್ನ ಮನೆಯ ಬಳಿಯೇ ವಾಸಿಸುತ್ತಿರುವ ಕಾರಣ ಕೆಲವು ವರ್ಷಗಳ ಹಿಂದೆ ಅವನ ಪರಿಚಯವಾಯಿತು. ರಿಯಾಜ್ ನನ್ನನ್ನು ಆಗಿಂದಾಗ್ಗೆ ಕರೆದು ಖರ್ಚಿಗೆಂದು ಒಂದಿಷ್ಟು ಹಣ ಕೊಡುತ್ತಿದ್ದ. ಏಕೆ ನನಗೆ ಹಣ ಕೊಡುವೆ ಎಂದು ಕೇಳಿದರೆ ಸಮರ್ಪಕ ಉತ್ತರ ನೀಡುತ್ತಿರಲಿಲ್ಲ. ನನಗೂ ಹಣದ ಅವಶ್ಯಕತೆ ಇದ್ದ ಕಾರಣ ಅವನನ್ನು ಹೆಚ್ಚು ಪ್ರಶ್ನಿಸಲಿಲ್ಲ. ಕೆಲ ತಿಂಗಳ ನಂತರ ರಿಯಾಜ್ ತನ್ನ ಲೈಂಗಿಕ ತೃಪ್ತಿಗಾಗಿ ನನ್ನನ್ನು ಉಪಯೋಗಿಸಿಕೊಳ್ಳತೊಡಗಿದ. ನಾನು ಹಣದ ಆಸೆಗಾಗಿ ಅವನ ಬಳಿ ಹೋಗುತ್ತಿದ್ದೆ. ಅವನು ನನ್ನನ್ನಲ್ಲದೇ ಬೇರೆ ಹುಡುಗರನ್ನು ಕರೆದುಕೊಂಡು ಬಂದರೆ ಸಾಕಷ್ಟು ಕಮಿಷನ್ ಕೊಡುತ್ತೇನೆ ಎಂದ. ಹೀಗಾಗಿ ನಾನು ಕೆಲವು ಯುವಕರನ್ನು ಅವನಿಗೆ ಪರಿಚಯ ಮಾಡಿಸಿದೆ. ಹಲವು ಬಾಲಕರು ಮತ್ತು ಯುವಕರು ಅವನ ಲೈಂಗಿಕ ತೃಷೆಯನ್ನು ತೀರಿಸುತ್ತಿದ್ದರು.
ಒಂದು ದಿನ ರಿಯಾಜ್ ಮತ್ತು ನಾನು ಇಬ್ಬರೇ ಇದ್ದಾಗ ನನ್ನ ಮದುವೆ ನಿಶ್ಚಯವಾಗಿರುವ ಬಗ್ಗೆ ಅವನಿಗೆ ತಿಳಿಸಿ ‘ಇನ್ನು ಮುಂದೆ ನಿನ್ನ ಜತೆಗೆ ಬರುವುದಿಲ್ಲ’ ಎಂದೆ. ನೀನು ಲಗ್ನವಾಗುವ ಹುಡುಗಿ ಯಾರೆಂದು ರಿಯಾಜ್ ಕೇಳಿದ. ಆಗ ನನ್ನ ಪರ್ಸಿನಲ್ಲಿಟ್ಟುಕೊಂಡಿದ್ದ ಯುವತಿ ನಜ್ನಿನ್ಳ ಫೋಟೋ ತೋರಿಸಿದೆ. ‘ಆಕೆ ತುಂಬಾ ಸುಂದರವಾಗಿದ್ದಾಳೆ’ ಎಂದು ಹೇಳಿ ಆಕೆಯ ಬಗ್ಗೆ ಇನ್ನಷ್ಟು ವಿವರಗಳನ್ನು ರಿಯಾಜ್ ಕೇಳಿದ. ‘ನೀನು ಮದುವೆಯ ನಂತರ ಇವಳನ್ನೂ ನನ್ನ ಬಳಿಗೆ ಕರೆದುಕೊಂಡು ಬಾ. ಆಕೆ ನನಗೆ ಲೈಂಗಿಕ ತೃಪ್ತಿ ಕೊಟ್ಟರೆ ನಿನಗೆ ತುಂಬಾ ಹಣ ಕೊಡುತ್ತೇನೆ’ ಎಂದ. ಈ ಮಾತುಗಳನ್ನು ಕೇಳಿ ನನಗೆ ರಿಯಾಜ್ನ ಮೇಲೆ ರೋಷ ಉಕ್ಕೇರಿತು. ಆತ ನನ್ನನ್ನು ಲೈಂಗಿಕವಾಗಿ ಶೋಷಿಸಿದ್ದಲ್ಲದೇ ನಾನು ಮದುವೆಯಾಗುವವಳ ಮೇಲೆ ಕಣ್ಣು ಹಾಕಿದ್ದು ಕೋಪ ಬರಿಸಿತ್ತು. ಆಗ ನಾನು ಏನನ್ನೂ ಮಾತನಾಡದೆ ಮನೆಗೆ ಹೋದೆ.
ರಿಯಾಜ್ನನ್ನು ಸುಮ್ಮನೆ ಬಿಟ್ಟರೆ ನನ್ನ ಜೀವನವನ್ನು ಹಾಳುಮಾಡುತ್ತಾನೆ ಎಂದು ಭಾವಿಸಿ ಅವನನ್ನು ಕೊಲೆ ಮಾಡಬೇಕೆಂದು ತೀರ್ವನಿಸಿದೆ. ಈ ವಿಷಯವನ್ನು ಗೆಳೆಯರಾದ ಜೋಸೆಫ್ ಮತ್ತು ರಾಜ ಇವರಿಗೆ ಹೇಳಿದೆ. ಅವರು ನನ್ನೊಂದಿಗೆ ಸಹಕರಿಸಲು ಒಪ್ಪಿದರು. ಆನಂತರ ನಾನು ಒಂದು ಹರಿತವಾದ ಚಾಕುವನ್ನು ಖರೀದಿಸಿದೆ. ನಿಗದಿತ ದಿನದಂದು ನಾವು ಮೂರೂ ಜನ ಆಟೋದಲ್ಲಿ ರಿಯಾಜ್ನ ಮನೆಗೆ ಬಂದೆವು. ಅವನು ಅಲ್ಲಿರಲಿಲ್ಲ, ಹೋಟೆಲ್ಗೆ ಹೋಗಿದ್ದಾನೆ ಎಂದು ಭಾವಿಸಿ ಅಲ್ಲಿಗೆ ಹೋದೆವು. ಆತ ಅಲ್ಲಿಯೂ ಇರಲಿಲ್ಲ. ಅಷ್ಟರಲ್ಲಿ ಹೋಟೆಲ್ನಲ್ಲಿ ಕೆಲಸ ಮಾಡುವ ಕೃಷ್ಣ ಸಿಕ್ಕಿ ರಿಯಾಜ್ಗೆ ಫೋನ್ ಮಾಡಿ ಕೊಟ್ಟ. ಅವನಿದ್ದ ಜಾಗಕ್ಕೆ ಹೋದೆವು. ನಾವು ಅವನನ್ನು ಲೈಂಗಿಕವಾಗಿ ತೃಪ್ತಿಪಡಿಸಲು ಬಂದವೆಂದು ಭಾವಿಸಿದ ರಿಯಾಜ್ ನಮ್ಮೆಲ್ಲರಿಗೂ ಮದ್ಯಪಾನ ಮಾಡಿಕೊಂಡು ಬರಲು ಹಣ ಕೊಟ್ಟ. ನಾವು ಬಾರ್ಗೆ ಹೋಗಿ ಮದ್ಯಪಾನ ಮಾಡಿ ಬಂದಾಗ ಆತ ರೇಲ್ವೆ ಹಳಿಯ ಪಕ್ಕದ ಪೊದೆಯ ಬಳಿ ಕಾಯುತ್ತಿದ್ದ. ಕೆಲ ನಿಮಿಷ ರಿಯಾಜ್ನ ಜತೆ ಮಾತನಾಡಿದ ನಂತರ ನಾವು ಮೂರೂ ಜನ ಅವನ ಮೇಲೆರಗಿ ಇರಿದು ಕೊಂದೆವು. ಆನಂತರ ಸಾವನ್ನು ಆತ್ಮಹತ್ಯೆಯೆಂದು ಬಿಂಬಿಸಲು ಅವನ ಶವವನ್ನು ರೈಲ್ವೆ ಹಳಿಯ ಮೇಲೆ ಎಸೆದು ಹೋದೆವು’.
ಅವನಿಂದ ಕೊಲೆಗೆ ಬಳಸಿದ್ದ ಚಾಕುವನ್ನು ವಶಪಡಿಸಿಕೊಳ್ಳಲಾಯಿತು. ಅದರ ಮೇಲಿದ್ದ ರಕ್ತ ರಿಯಾಜ್ನದೆಂದು ಸಾಬೀತಾಯಿತು. ಪೊದೆಯಲ್ಲಿ ಸಿಕ್ಕ ಷರ್ಟ್ ಜೋಸೆಫನದಾಗಿತ್ತು. ಮೂವರನ್ನೂ ಬಂಧಿಸಿ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು. ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ.
‘ಕೇಡು ಬಹ ಕಾಲಕ್ಕೆ ಕೂಡುವವೆ ಬುದ್ಧಿಗಳು ಕೋಡಗವು ಲಂಕೆ ಸುಡುವಾಗ ರಾವಣ ತಾ ಆಡ ಕಾಯ್ದಿಹನೆ ಸರ್ವಜ್ಞ’ ಎಂಬಂತೆ ಗೆಳೆಯನ ಪತ್ನಿಯಾಗುವವಳ ಮೇಲೆ ಆಸೆಪಟ್ಟು ಜೀವವನ್ನೇ ಕಳೆದುಕೊಂಡ ರಿಯಾಜ್.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)