ಅಂಕಣ

ಇಂದು ವಿಶ್ವ ನಗುವಿನ ದಿನ: ನಕ್ಕು ನಕ್ಕು ಹಗುರಾಗಿ! World Laughter Day

World Laughter Day: ‘ನಕ್ಕ ಸಾಯ್ರೋ, ನಕ್ಕ ಸಾಯ್ರಿ, ನಕ್ಕ ಸತ್ರ ನಕ್ಷತ್ರ ಅಕ್ಕೀರಿ...’ ಎಂದು ಜೀವನದಲ್ಲಿ ನಗುವಿನ ಮಹತ್ವವನ್ನು ಸೊಗಸಾಗಿ ವಿವರಿಸಿದವರು ವರಕವಿ ಡಾ. ದ.ರಾ.ಬೇಂದ್ರೆ. ನಗು ಜೀವನವನ್ನು ಆಹ್ಲಾದವಾಗಿಸುತ್ತದೆ, ಜೀವನಪ್ರೀತಿಯನ್ನೂ ಹೆಚ್ಚಿಸುತ್ತದೆ. ಅದರಲ್ಲೂ, ನಗೆ ಕಲಾವಿದರು ಜನರ ಮೊಗದಲ್ಲಿ ನಗು ಅರಳಿಸುವಲ್ಲಿ ನಿಸ್ಸೀಮರು. ಇಂಥ ಕಲಾವಿದರು ಅವರ ಬದುಕಲ್ಲಿ ಪೇಚಿಗೆ ಈಡಾದ ಅಥವಾ ಹಾಸ್ಯದ ಮಿಸೈಲ್ ಎದುರಿಸಿದರೆ ಹೇಗಿರುತ್ತೆ? ಅಂಥ ಕೆಲ ಘಟನೆ ಇಲ್ಲಿವೆ.

ನಾಯಿ ನೆರಳು

ಸುಮಾರು 40 ವರ್ಷಗಳ ಹಿಂದಿನ ಘಟನೆ. ಸರ್ಜಾಪುರದಲ್ಲಿ ನಮ್ಮಜ್ಜಿ ಒಬ್ಬರೇ ವಾಸ ಮಾಡುತ್ತಿದ್ದರು. ಅಜ್ಜಿಯನ್ನು ನೋಡಲು ನಾನು ಒಂದು ಶನಿವಾರ ಸಂಜೆ ಕಡೇ ಬಸ್ಸಿಗೆ ಹೊರಟೆ. ನಾನು ಕಿಟ್​ಬ್ಯಾಗ್ ಹಿಡಿದು ಅಜ್ಜಿಯ ಮನೆಗೆ ಎಂಟ್ರಿ ಕೊಡುವುದಕ್ಕೂ ಅಳಿದುಳಿದ ಅನ್ನಕ್ಕೆ ಮೊಸರು, ಹಾಲನ್ನು ಬೆರೆಸಿ ಆಚೆ ಎಸೆಯಲು ಅಜ್ಜಿ ಮನೆಯಾಚೆ ಬರುವುದಕ್ಕೂ ಸರಿ ಹೋಯಿತು. ನನ್ನ ನೋಡಿದ ಅಜ್ಜಿಗೆ ಖುಷಿಯಾಯಿತು.

‘ಸರಿಯಾದ ಟೈಮಿಗೆ ಬಂದೆ. ನೀನೊಂದು ನಿಮಿಷ ಲೇಟಾಗಿ ಬಂದಿದ್ದರೂ ಈ ಮೊಸರನ್ನ ತಗೊಂಡ್ಹೋಗಿ ಬೀದಿ ನಾಯಿಗೆ ಹಾಕ್ಬಿಡ್ತಿದ್ದೆ’ ಎಂದಳು. ನನಗೆ ಪಾಪಪ್ರಜ್ಞೆ ಕಾಡಲು ಶುರುವಾಯಿತು. ನಾನು ಅಕಸ್ಮಾತ್ ಬಂದಿದ್ದರಿಂದ ವರ್ತನೆಯ ನಾಯಿ ಉಪವಾಸ ಬೀಳುತ್ತಲ್ಲ ಎಂದು ಮರುಗಿದೆ.

ಆಗ ಅಜ್ಜಿ, ‘ನೀನು ಇದನ್ನು ತಿನ್ನು. ಬೀದಿನಾಯಿಗೆ ಬಿಸಿಬಿಸಿಯಾಗಿ ಬೇರೆ ಮಾಡ್ಹಾಕ್ತೀನಿ’ ಎಂದಳು.

**

ಸಾಗರದಲ್ಲಿ ನಾನು ಕೆಲಸ ಮಾಡುತ್ತಿದ್ದಾಗ ಅಕೌಂಟೆಂಟ್ ಸುಬ್ಬರಾಯರು ನಮ್ಮ ಬ್ಯಾಂಕ್​ಗೆ ಬರುತ್ತಿದ್ದರು.

‘ನಮ್ಮ ಮನೆಗೆ ಬನ್ನಿ ಕಾರ್ಗಿಲ್ ದೂರ ಇಲ್ಲ’ ಎಂದು ಹಲವಾರು ಬಾರಿ ಹೇಳಿದ್ದರು. ಒಂದು ಭಾನುವಾರ ಮಧ್ಯಾಹ್ನ ನಾನು ಹೋದಾಗ ಸುಬ್ಬರಾಯರು ಎಲ್ಲೋ ಹೋಗಿದ್ದರು. ಅವರ ಮಡದಿ ಇದ್ದರು.

‘ಬನ್ನಿ, ಬನ್ನಿ, ಬ್ಯಾಂಕ್​ನವರಲ್ವಾ? ನಮ್ಮೆಜಮಾನ್ರು ಹೇಳ್ತಾ ಇದ್ರು. ಈಗ ಬರ್ತಾರೆ ಕೂತ್ಕೊಳ್ಳಿ’ ಎಂದು ಉಪಚರಿಸಿದರು. ಒಂದು ಚಕ್ಕುಲಿಯನ್ನು ಆಕೆ ತಿನ್ನಲು ಕೊಟ್ಟರು. ಅದು ಅಂಗೈ ಅಗಲದ ಗಟ್ಟಿ ಚಕ್ಕುಲಿ. ಮಾನವ ಮುರಿಯಲು ಸಾಧ್ಯವಾಗದಂತಹ ಕಬ್ಬಿಣದ ಗಡುಸಿನ ಚಕ್ಕುಲಿ. ಏನು ಮಾಡಿದರೂ ಮುರಿಯಲು ಆಗಲಿಲ್ಲ. ಅಂಥ ಚಕ್ಕುಲಿ ಸುಬ್ಬರಾಯರು ಹ್ಯಾಗೆ ತಿನ್ನುತ್ತಿದ್ದರು ಎಂಬುದು ಆನಂತರ ಗೊತ್ತಾಯಿತು. ಅವರು ಹಿಂದಿನ ದಿನ ರಾತ್ರಿ ನೀರಿನ ತೊಟ್ಟಿಗೆ ಚಕ್ಕುಲಿಯನ್ನು ಎಸೆಯುತ್ತಿದ್ದರಂತೆ. ಮರುದಿನ ಕಂಬಿಯಿಂದ ಆಚೆಗೆ ಎತ್ತಿ ತಿನ್ನುತ್ತಿದ್ದರಂತೆ.

ಬಂದ ಜಾಗದಲ್ಲಿ ತಟ್ಟೆಯಲ್ಲಿ ಆಹಾರ ಬಿಡುವುದು ಸರಿಯಲ್ಲ ಎಂದು ಕಿಟಕಿ ಆಚೆ ನೋಡಿದೆ. ಒಂದು ನಾಯಿ ನನ್ನನ್ನೇ ನೋಡುತ್ತಿತ್ತು. ಚಕ್ಕುಲಿ ತೋರಿಸಿದೆ. ಅದು ಬಾಯಿ ತೆರೆಯಿತು, ಎಸೆದೆ. ಕ್ರಿಕೆಟ್ ಪಟುವಿನಂತೆ ಬಾಯಲ್ಲೇ ಕ್ಯಾಚ್ ಹಿಡಿಯಿತು. ನನಗೆ ಖುಷಿಯಾಯಿತು.

ಚಕ್ಕುಲಿ ಡಿಸ್​ಪೋಸ್ ಆಯಿತು ಎಂಬ ಆನಂದದಲ್ಲಿದ್ದಾಗ ಮನೆಯಾಕೆ ಕಾಫಿ ತಂದು ತಂದಿಟ್ಟಳು.

ತಟ್ಟೆ ಖಾಲಿ ಇರುವುದು ನೋಡಿ ಆಕೆಗೂ ಸಂತೋಷವಾಯಿತು.

‘ಚಕ್ಲಿ ಹ್ಯಾಗಿತ್ತು?’ ಎಂದು ಕೇಳಿದಳು.

ಮನುಷ್ಯ ಸುಳ್ಳು ಹೇಳಬಾರದು. ಅಂದು ನಾನು ಸುಳ್ಳು ಹೇಳಿದೆ.

‘ತುಂಬ ಚೆನ್ನಾಗಿತ್ತು’ ಎಂದೆ.

‘ಇನ್ನೊಂದೆರಡು ಚಕ್ಲಿ ಕೊಡಲಾ?’ ಎಂದಳು. ಹೆದರಿದ ನಾನು,

‘ಬೇಡ, ಬೇಡ’ ಎಂದೆ.

ನನ್ನ ಗ್ರಹಚಾರಕ್ಕೆ ಆ ನಾಯಿ ಅವರ ಮನೆಯದ್ದೇ ಅಂತೆ. ಅದು ಚಕ್ಕುಲಿಯನ್ನು ಕಚ್ಚಿಕೊಂಡು ಒಳಗಡೆ ಬಂತು. ಚಕ್ಕುಲಿ ಕಡಿಯಲು ಮತ್ತೆ ಮತ್ತೆ ಪ್ರಯತ್ನಿಸಿತು. ನಾನು ರೆಡ್​ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದೆ.

‘ನಿಮಗೆ ಅಂತ ಕೊಟ್ಟಿದ್ದನ್ನ ನಾಯಿಗೆ ಯಾಕೆ ಹಾಕಿದಿರಿ?’ ಎಂದಳು.

‘ಮೂಕಪ್ರಾಣಿ ನನ್ನೇ ನೋಡ್ತಿತ್ತು, ಸ್ಸಾರಿ ಮೇಡಂ’ ಎಂದೆ.

‘ನೀವು ಹಾಗೆ ಮಾಡಬಾರ್ದಾಗಿತ್ತು. ನೆನ್ನೆ ಸಂಜೆ ಅದೇ ಚಕ್ಕುಲಿಯನ್ನು ಇದೇ ನಾಯಿಗೆ ಹಾಕಿದ್ದೆ. ಅದು ತಿನ್ಲಿಲ್ಲ ಅಂತಾನೇ ನಾನು ನಿಮಗೆ ಕೊಟ್ಟಿದ್ದು’ ಎಂದಳು ಆಕೆ!

(ಲೇಖಕರು ನಗೆ ಬರಹಗಾರರು)more

ಇಂಥದ್ದೊಂದು ಸನ್ಮಾನ ಸಮಾರಂಭ!

ಧಬ ಧಬಾ ಧಬ ಧಬಾ ಅಂತ ಬಾಗಿಲು ಬಡೀತಾ ಇದ್ರು ಯಾರೋ. ಯಾರಿರಬಹುದು ಅಂತ ಬಾಗಿಲ ಹತ್ರ ಹೋಗೋ ಅಷ್ಟರಲ್ಲಿ ಯಾರೋ ರಾಕ್ಷಸರಂಥಾ ಹತ್ತಾರು ಜನ ಮನೆಯೊಳಗೆ ನುಗ್ಗಿದರು. ಸ್ವಲ್ಪ ಗಾಬರಿ ಆಯ್ತು. ಆದರೂ ತೋರಿಸಿಕೊಳ್ಳದೆ ‘ಅಲ್ಲ, ಡೋರ್ ಬೆಲ್ ಇತ್ತಲ್ಲ? ಅದ್ಯಾಕಂಗ್ ಬಡೀತಾ ಇದ್ರಿ?’ ಅಂದೆ. ಅವರಲ್ಲೊಬ್ಬ, ‘ಏ, ನಾವು ಅಂಗೆಯ ಸಾ... ಎಲ್ಲ್ ಓದ್ರೂ ಬಡಿಯೋದೆ...!’ ಅಂಗಂದು ಅವನ ಜೋಕಿಗೆ ಅವನೇ ನಕ್ಕ.

‘ಏನ್ ಸಮಾಚಾರ?’ ಹೇಳಿ ಅಂದೆ. ‘ಅಣ್ಣ ಕಳಿಸುದ್ರು ಬಂದೊ’ ಅಂದ ಒಬ್ಬ. ನನಗೆ ಆಗ ಅಣ್ಣ ಯಾರೋ ಗೊತ್ತಾಗಲಿಲ್ಲ. ‘ಅಣ್ಣ ಅಂದ್ರೆ ಯಾರು?’ ಅಂದೆ. ‘ಅಣ್ಣ ಅಂದ್ರೆ ಯಾರ?... ಯಾರ?..’ ಅಂತ ಸಿನಿಮಾ ವಿಲನ್​ಗಳ ಥರಾ ನಕ್ಕ ಒಬ್ಬ. ಉಳಿದವರು ಮತ್ತೆ ನಕ್ಕರು. ಮತ್ತೆ ನಾನು ಅದೇ ಪ್ರಶ್ನೆ ಕೇಳೋದು ಕ್ಷೇಮವಲ್ಲ ಅಂತ ಸುಮ್ಮನಾದೆ.

‘ನಿಮ್ಮನ್ನ ಪಂಕ್ಸನ್​ಗೆ ಕರಿಯಾಕ್ ಬಂದೋ...’ ಅಂದ ಮತ್ತೊಬ್ಬ. ‘ಏನ್ ಫಂಕ್ಷನ್?’ ಅಂದೆ. ‘ನಾಳೆ ಅಣ್ಣ ಬತ್ತಾರೆ, ಅದೆಲ್ಲ ಯೋಳ್ತರೆ ಈಗ ಒಪ್ಕಳಿ ಅಷ್ಟೆಯ’. ನಾನು ‘ಬೇರೆ ಇನ್ನೂ ದೊಡ್ಡೋರು ಯಾರನ್ನಾದ್ರೂ ಕರೀಬಹುದಿತ್ತಲ್ವ?’ ಅಂದೆ. ‘ಅದ್ಯಾಕೆ? ನೀವು ಬರಾಕಿಲ್ವ?’ ಅಂದ. ಇನ್ನು ಮಾತು ಮುಂದುವರಿಸುವುದು ಸರಿಯಲ್ಲ ಅಂದುಕೊಂಡು ಕೊನೆಯ ಪ್ರಶ್ನೆ ಕೇಳಿದೆ, ‘ಫಂಕ್ಷನ್ ಎಲ್ಲಿ? ಯಾವಾಗ?’

‘ಅಣ್ಣಂಗೆ ಈಗ ಬೇಜ್ಜಾನ್ ಕೆಲಸ. ಅದೆಲ್ಲ ಮುಗಿದು ಮ್ಯಾಲೆ ಇಟ್ಕಳ್ಳನ ಅಂದವರೆ ಅಣ್ಣ. ನೀವು ಒಪ್ಕಂಡಿದ್ದು ಭಾಳ ಸಂತೋಸ, ಬತ್ತಿವಿ’ ಅಂದವರೇ ಎಲ್ಲಾ ಹೊರಟೇ ಹೋದ್ರು. (ಅರೇ, ನಾನು ಒಪ್ಕಂಡಿದೀನಿ ಅಂತ ಅದ್ಯಾವಾಗ ಹೇಳ್ದೆ?)

ಮೂರ್ನಾಕು ದಿನ ಆದಮೇಲೆ ಆ ಅಣ್ಣ ಕೂಡ ಮನೆಗೆ ಬಂದ. ಯಥಾ ಮಾಮೂಲಿನಂತೆ ಬಾಗಿಲು ಬಡಿದುಕೊಂಡೇ ಬಂದು ಸೋಫಾ ಮೇಲೆ ಮೈ ಹರಡಿಕೊಂಡು ಕೂತ. ಹತ್ತು ಬೆರಳಿಗೂ ಥರ ತರಾವರಿ ಉಂಗುರ, ಮುಂಗೈಗೆ ಮೂರು ಸರಪಣಿ ಚೈನು. ಸಿಗಾದ ಮೇಲೆ ಕೂತು ಶರ್ಟಿನ ಗುಂಡಿಗಳನ್ನೆಲ್ಲ ಬಿಚ್ಚಿದ. ಆಹಾ! ಬಂಗಾರದ ಅಂಗಡಿ ಬಾಗಿಲು ತೆಗೆದಂಗಾಯ್ತು. ‘ನಮ್ಮುಡುಗ್ರು ಸನ್ಮಾನ ಸಮಾರಂಬ ಇಟ್ಕಂಬುಟ್ಟವೆ. ಈಗ ನನಗೆ ಒಂದತ್ತು ಲಕ್ಸ ಕೈ ಬುಡ್ತದೆ. ಏನೋ ಆಗ್ಲಿ ಅಂತ ಒಪ್ಕಂಡಿವ್ನಿ. ಅವರ್ನ ಚೆನ್ನಾಗ್ ನೋಡ್ಕಬೇಕಲ್ವ ನಾನು? ದಯವಿಟ್ಟಿ ನೀವು ಒಪ್ಕಂಡಿದ್ದು ನನಗೆ ಭಾಳ ಸಂತೋಸ ಆಗದೆ, ಬನ್ನಿ. ಹದ್ಯಕ್ಷತೆಗೆ ಬೇರೆ ಯಾರ್ನಾದ್ರು ಎತ್ತಾಕಂಡ್ ಬರಾನ, ಮುಂದಿನ ಸುಕ್ರುವಾರವೇ ಪಂಕ್ಷನ್. ಮುಗುದ್ ಮ್ಯಾಲೆ ಊಟ... ಬರೀ ಊಟ ಅಲ್ಲ, ಎಲ್ಲ ಇರ್ತದೆ...’ ಅಂದು ಹೊರಟೇಬಿಟ್ಟ. ಇವರ ಕೈಲೆಲ್ಲ ಸನ್ಮಾನ ಮಾಡಿಸಿಕೊಳ್ಳೋದು ಎಂಥಾ ಕರ್ಮ ನನಗೆ ಅನ್ಸಿತ್ತು. ಆದ್ರೆ ಹೇಳಲು ಧೈರ್ಯವಿಲ್ಲದೆ ಒಪ್ಕೊಂಡಿದ್ದೆ. ಅಣ್ಣ ಹೋಗೋವಾಗ ‘ಲೇಯ್, ಅದ ಕೊಡುರ್ಲಾ ಇವ್ರಿಗೆ’ ಅಂದ. ಅವರು ಅದ್ಯಾವುದೋ ಪ್ರಿಂಟ್ ಆಗಿದ್ದ ಐದಾರು ಹಾಳೆ ಕೊಟ್ರು. ಈಸ್ಕೊಂಡೆ. ‘ಚೆನ್ನಾಗ್ ಭಾಷ್ಣ ಮಾಡ್ಬೇಕು ಮೇಷ್ಟ್ರೇ, ಎಲೆಕ್ಸನ್​ಗೆ ನಿಲ್ತಾ ಇವ್ನಿ..ಎಷ್ಟಾನ ಆಗ್ಲಿ, ಟಿಕಿಟ್ ತಂದೇ ತತ್ತೀನಿ’ ಅಂದು ತನ್ನ ಪಟಾಲಂ ಜೊತೆ ಹೊರಟೇ ಹೋದ.

ಅಣ್ಣ ಹೋದ ಮೇಲೆ ನನ್ನ ಕೈಗೆ ಕೊಟ್ಟದ್ದು ಏನು ಅಂತ ಬಿಡಿಸಿ ನೋಡಿದೆ. ಅದು ಅಣ್ಣನ ಬಯೋಡೇಟಾ. ನಾನು ಹೋಗಬೇಕಾಗಿದ್ದು ಸನ್ಮಾನ ಮಾಡಿಸ್ಕೊಳ್ಳೋದಕ್ಕಲ್ಲ. ಅಣ್ಣನಿಗೆ ಅಭಿನಂದನಾ ಭಾಷಣ ಮಾಡೋದಕ್ಕೆ!

(ಲೇಖಕರು ಖ್ಯಾತ ಅಂಕಣಕಾರರು)more

ಲೂಸ್​ ಅಂದ್ಳು ಅಜ್ಜಿ!

ಅದು ಕರೊನಾ ಸಮಯ. ಇಡೀ ಜಗತ್ತು ಬೀಗ ಹಾಕಿಕೊಂಡು ಮನೆಗೆ ಸೀಮಿತವಾಗಿತ್ತು. ನಿರಂತರ ಕಾರ್ಯಕ್ರಮಗಳು ಇರುತ್ತಿದ್ದ ನಮಗೂ ಆಗ ಮನೆಯಲ್ಲಿ ಇರಲು ಬೇಜಾರು. ಉತ್ಕೊಂಡು ತೊಟ್ಕೊಂಡು ಓಡಾಡುತ್ತಿದ್ದ ಸಂಭ್ರಮವೇ ನಿಂತುಹೋಗಿತ್ತು. ಆಗ ಅಮೆರಿಕದಿಂದ ಪರಿಚಯದವರೊಬ್ಬರ ಫೋನ್ ಬಂತು, ‘ತುಂಬ ಬೋರ್ ಆಗ್ತಿದೆ...’ ಅಂದಾಗ, ನಾನು ‘ಇಲ್ಲೂ ಸೇಮ್ ಕಂಡಿಷನ್’ ಅಂದೆ. ಆಗವರು ನಿಮ್ಮದೊಂದು ಕಾರ್ಯಕ್ರಮ ಮಾಡೋಣ ಅಂದ್ರು.

‘ಜನರು ಹೊರಗಡೆ ಬರೊಕ್ಕೇ ಆಗ್ತಾ ಇಲ್ಲ. ಅದು ಹೇಗೆ ಕಾರ್ಯಕ್ರಮ ಮಾಡ್ತೀರಿ. ಅದೂ ಅಮೆರಿಕದಲ್ಲಿ’ ಎಂದು ಕೇಳಿದಾಗ ‘ಆಫ್​ಲೈನ್ ಅಲ್ಲ ಆನ್​ಲೈನ್ ಕಾರ್ಯಕ್ರಮ. ನೀವು ಝುೂಮ್ ಆಪ್​ಲ್ಲಿ ಜಾಯಿನ್ ಆದ್ರೆ ಸಾಕು’ ಎಂದ್ರು. ನನಗೆ ಝೆಡ್ ಫಾರ್ ಝಿಬ್ರಾ ಬಿಟ್ರೆ ಈ ಝುೂಮು ಎಲ್ಲ ಗೊತ್ತೇ ಇರಲಿಲ್ಲ.

ಮಗಳಿಗೆ ಹೇಳಿದೆ. ಅವಳು ‘ಲ್ಯಾಪ್​ಟಾಪ್​ಲ್ಲಿ ಹಾಕಿಕೊಡ್ತೇನೆ. ನೀನೇನೂ ಮುಟ್ಬೇಡ, ಸುಮ್ನೆ ಜಾಯ್್ನ ಆಗು ಸಾಕು’ ಅಂದ್ಳು. ಸರಿ, ಕಾರ್ಯಕ್ರಮ ಮಧ್ಯಾಹ್ನ 12 ಗಂಟೆಗೆ ಅಂತ ನಿಗದಿಯಾಯಿತು. ಆಮೇಲೆ ನಂಗೆ ಗೊತ್ತಾಗಿದ್ದು, ಅಲ್ಲಿ ಮಧ್ಯಾಹ್ನ 12 ಎಂದರೆ ಇಲ್ಲಿ ರಾತ್ರಿ 1 ಗಂಟೆ ಅಂತ! ಅದು ಒಂಥರ ಮಿಡ್​ನೈಟ್ ಮಸಾಲಾ! ತುಂಬ ದಿನದ ನಂತರದ ಕಾರ್ಯಕ್ರಮ ಅಂತ ಭರ್ಜರಿಯಾಗಿ ರೇಷ್ಮೆ ಸೀರೆ ಉಟ್ಕೊಂಡು, ಎರಡು ಇಂಚು ಮೇಕಪ್ ಹಾಕೊಂಡು ರೆಡಿಯಾದೆ. ಮನೆ ಮಹಡಿಯಲ್ಲಿರುವ ಲೈಬ್ರರಿಯಲ್ಲಿ ಲ್ಯಾಪ್​ಟಾಪ್ ಮುಂದೆ ಕುಳಿತೆ. ಮಗಳು ತನ್ನ ಪಾಡಿಗೆ ಹೋಗಿ ಮಲಗಿದಳು. ಲೈವ್ ಶೋಗಳನ್ನು ಮಾಡಿ ಅಭ್ಯಾಸವಿದ್ದ ನಾನು ಜೋರು ಜೋರಾಗಿ ಒಂದು ಗಂಟೆಯ ಕಾಲ ನಿರಂತರವಾಗಿ ಮಾತಾಡಿ, ಭಾಷಣ ಮುಗಿಸಿದೆ! ಅದು ನನ್ನ ಮೊದಲ ಆನ್​ಲೈನ್ ಕಾರ್ಯಕ್ರಮವಾಗಿತ್ತು. ನನ್ನ ಮಾತಿನ ಅಲೆಗಳು ಆ ಕೋಣೆಯ ಕಿಟಕಿಯಿಂದ ಹೊರ ಹೋಗಿ, ಆ ರಸ್ತೆಯ ತುಂಬ ಮಾರ್ದನಿಸಿದ್ದವು. ನಮ್ಮ ಪಕ್ಕದ ಮನೆಯ ಅಜ್ಜಿ ಮರುದಿನ, ‘ಅಯ್ಯೋ ಕಾರ್ಯಕ್ರಮಗಳಿಲ್ಲದೆ ಸುಧಮ್ಮ ಹೆಂಗೇಂಗೋ ಆಡ್ತಿದೆ. ಪಾಪ! ಲೂಸ್ ಆಗಿದ್ದಾಳೆ. ಮಧ್ಯರಾತ್ರಿ ಹೊತ್ತಲ್ಲಿ ರೆಡಿಯಾಗಿ, ರೇಷ್ಮೆ ಸೀರೆ ಉಟ್ಕೊಂಡು ಒಬ್ಬಳೇ ಜೋರ್ ಜೋರಾಗಿ ಮಾತಾಡ್ತಿದ್ಳು...’ ಅಂತ ಓಣಿ ತುಂಬ ಸುದ್ದಿ ಹಬ್ಬಿಸಿಬಿಟ್ಟಿದ್ರು! ಪಕ್ಕದ ಮನೆಯ ಅಜ್ಜಿ ಕಿಟಕಿಯಿಂದ ನಾನು ಮಾತಾಡ್ತಾ ಇರೋದನ್ನ ನೋಡಿದ್ಳೆ ಹೊರತು ನನ್ನ ಮುಂದಿದ್ದ ಲ್ಯಾಪ್​ಟಾಪ್ ಗಮನಿಸಲೇ ಇಲ್ಲ. ಒಮ್ಮೆ ಕಾರ್ಯಕ್ರಮ ಮುಗಿದು ವೇದಿಕೆಯಿಂದ ಕೆಳಗಿಳಿದ ಮೇಲೆ ವ್ಯಕ್ತಿಯೊಬ್ಬ ಅವನ ಸ್ನೇಹಿತನಿಗೆ ಮೊಬೈಲ್ ಕೊಟ್ಟು, ‘ಮೇಡಂ ಜತೆ ನಂದೋದು ಸೆಲ್ಪೀ ಹೊಡಿಯಲೇ ಅಂತ ಮುಖವುಬ್ಬಿಸಿ ನಿಂತ!’ ಆ ವಿಚಿತ್ರ ಸೆಲ್ಪೀ (!) ನೆನಪಿಸಿಕೊಂಡ್ರೆ ನಗು ತಡೆಯಕ್ಕಾಗಲ್ಲ.

(ಲೇಖಕರು ಹಾಸ್ಯ ಕಲಾವಿದರು)