ಕಳೆದ ವರ್ಷಾಂತ್ಯದಲ್ಲಿ ಯೂರೋಪ್ ಮತ್ತು ಅಮೆರಿಕಾ ಸೇರಿದಂತೆ ಬಹುತೇಕ ಪಾಶ್ಚಾತ್ಯ ಜಗತ್ತು ಕರೊನಾ ಸಂಕ್ರಮಣದ ಎರಡನೆಯ ಅಲೆಗೆ ಸಿಲುಕಿದ್ದಾಗ ಕರೊನಾ ಮೇಲೆ ‘ಜಯ’ ಸಾಧಿಸಿದ ಭಾವನೆಯ ಅಲೆಯ ಮೇಲೆ ಭಾರತ ತೇಲುತ್ತಿತ್ತು. ಆ ದಿನಗಳಲ್ಲಿ ಈ ದೇಶದಲ್ಲಿ ದೈನಂದಿನ ಸಂಕ್ರಮಣ ಏರಿಕೆ ಹತ್ತು ಸಾವಿರದ ಆಚೀಚೆ ಇತ್ತು. ಪರಿಣಾಮವಾಗಿ, ಭಾರತ ‘ವ್ಯಾಕ್ಸಿನ್ ಮೈತ್ರಿ ಯೋಜನೆ’ಯಡಿಯಲ್ಲಿ ಸುಮಾರು 95 ದೇಶಗಳಿಗೆ ಆರೂವರೆ ಕೋಟಿ ಲಸಿಕೆಗಳನ್ನು ನೀಡಿತು. ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳ ರಫ್ತಿನ ಮೇಲೆ ಹೇರಿದ್ದ ನಿರ್ಬಂಧವನ್ನು ಸರ್ಕಾರ ವರ್ಷದ ಹಿಂದೆಯೇ ತೆಗೆದುಹಾಕಿತ್ತಷ್ಟೇ. ಅದರ ಜತೆ ರೆಮ್ೆಸಿವಿರ್ ಶೀಶೆಗಳು, ವೈದ್ಯಕೀಯ ಆಮ್ಲಜನಕ ಸೇರಿದಂತೆ ಹಲವು ವೈದ್ಯಕೀಯ ಪರಿಕರಗಳನ್ನು ವಿದೇಶಗಳಿಗೆ ರಫ್ತು ಮಾಡತೊಡಗಿತ್ತು. ‘ವಿಶ್ವದ ಔಷಧ ಕಾರ್ಖಾನೆ’ ಎಂದು ಹೆಸರು ಗಳಿಸಿರುವ ಭಾರತಕ್ಕೆ ಇದಾವುದೂ ಕಷ್ಟದ ಕೆಲಸವಾಗಿರಲಿಲ್ಲ.
ಆದರೆ ಏಪ್ರಿಲ್ ಆರಂಭವಾಗುತ್ತಿದ್ದಂತೇ ದೇಶದಲ್ಲಿ ಸಂಕ್ರಮಣ ನಿಧಾನವಾಗಿ ಏರತೊಡಗಿ, ಕಾಳ್ಗಿಚ್ಚಿನಂತೆ ಹರಡತೊಡಗಿತು, ದೇಶ ಎರಡನೆಯ ಅಲೆಗೆ ಸಿಲುಕಿಹೋಯಿತು. ತಿಂಗಳ ಕೊನೆಯ ಹೊತ್ತಿಗೆ ದೈನಂದಿನ ಸಂಕ್ರಮಣ ಸಂಖ್ಯೆ ನಾಲ್ಕು ಲಕ್ಷಗಳನ್ನು ಸಮೀಪಿಸಿದಾಗ ಭಾರತದ ಸಮಸ್ಯೆ ಜಾಗತಿಕವಾಗಿ ಸುದ್ದಿಯಾಗತೊಡಗಿತು. ಇಲ್ಲಿನ ಜನಸಾಂದ್ರತೆಯಿಂದಲೇ ಭಾರತದಲ್ಲಿ ಕೋವಿಡ್ ಸುನಾಮಿ ಏಳಲಿದೆ ಎಂದು ಹಲವರು ಪಾಶ್ಚಾತ್ಯ ವಿಶ್ಲೇಷಕರು ವರ್ಷದ ಹಿಂದೆ ವ್ಯಕ್ತಪಡಿಸಿದ್ದ ಆತಂಕ ಒಂದಿಡೀ ವರ್ಷ ನಿರಾಧಾರವೆಂಬಂತೆ ಕಂಡುಬಂದದ್ದು ಕೊನೆಗೂ ನಿಜವಾಗತೊಡಗಿತ್ತು.
ಫೆಬ್ರವರಿ-ಮಾರ್ಚ್ನಲ್ಲಿ ಮೂರನೆಯ ಅಲೆಯನ್ನು ಪಶ್ಚಿಮ ಜಗತ್ತು ದಾಟಿ ಬಂದಿದ್ದ ಕಾರಣ ಭಾರತದತ್ತ ತಿರುಗಲು ಅವುಗಳಿಗೆ ಪುರುಸೊತ್ತಾಯಿತು ಎನ್ನಬಹುದಾದರೂ ಭಾರತದಲ್ಲಿನ ಬೆಳವಣಿಗಳಿಗೆ ಜಗತ್ತು ಪ್ರತಿಕ್ರಿಯಿಸಿದ ಬಗೆ ಅಸಾಧಾರಣ. ಕಳೆದ ತಿಂಗಳವರೆಗೂ ಭಾರತ ಹೊರದೇಶಗಳಿಗೆ ಒದಗಿಸುತ್ತಿದ್ದ ವೈದ್ಯಕೀಯ ಸಾಮಗ್ರಿಗಳ ಅಗತ್ಯ ಭಾರತಕ್ಕೇ ಇದೆಯೆಂದು ಅರಿವಾದೊಡನೆ ಅವುಗಳನ್ನು ಭಾರತಕ್ಕೆ ನೀಡುವ ನಿರ್ಣಯವನ್ನು ಸುಮಾರು ನಲವತ್ತಕ್ಕಿಂತಲೂ ಹೆಚ್ಚು ದೇಶಗಳು ಮಾಡಿ, ಸಹಾಯಕ್ಕೆ ಧಾವಿಸಿದವು. ಇವುಗಳಲ್ಲಿ ಅಮೆರಿಕಾ, ಬ್ರಿಟನ್, ಫ್ರಾನ್ಸ್, ಜರ್ಮನಿಗಳಂತಹ ಬೃಹದ್ ರಾಷ್ಟ್ರಗಳಲ್ಲದೇ ರುಮೇನಿಯಾ, ಬೆಲ್ಜಿಯಂ, ಬಹರೀನ್ನಂತಹ ಪುಟ್ಟ ರಾಷ್ಟ್ರಗಳೂ ಇವೆ. ಹದಿನೇಳು ವರ್ಷದ ನಂತರ ಭಾರತ ಮೊಟ್ಟಮೊದಲ ಬಾರಿಗೆ ವಿದೇಶೀ ನೆರವನ್ನು ಸ್ವೀಕರಿಸತೊಡಗಿದೆ. ಇದರರ್ಥ ಭಾರತದ ವಿದೇಶನೀತಿಯಲ್ಲಿ ಬದಲಾವಣೆಯಾಗಿದೆಯೇ? ಈ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸುವ ಮುನ್ನ ಇದುವರೆಗೆ ವಿದೇಶೀ ನೆರವಿನ ಬಗ್ಗೆ ಭಾರತದ ನೀತಿಯ ಪಕ್ಷಿನೋಟ ಅಗತ್ಯವಾಗುತ್ತದೆ.
ಸ್ವಾತಂತ್ರ್ಯ ಗಳಿಸಿದ ಸಮಯದಲ್ಲಿ ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಕೇವಲ 4.17% ಪಾಲು ಹೊಂದಿದ್ದ, ತನ್ನ ಜನರಿಗೆ ಹೊಟ್ಟೆ ತುಂಬ ಅನ್ನ ನೀಡಲೂ ಅಶಕ್ತವಾಗಿದ್ದ ಭಾರತ ವಿದೇಶೀ ನೆರವನ್ನು ಸ್ವೀಕರಿಸುವುದನ್ನು ಆರ್ಥಿಕ ವಿದೇಶ ನೀತಿಯ ಒಂದು ಭಾಗವಾಗಿಸಿಕೊಂಡಿತು. ಭೂಕಂಪ, ಬರಗಾಲ ಅಥವಾ ಪ್ರವಾಹದಂತಹ ಪ್ರಾಕೃತಿಕ ವಿಕೋಪಗಳಿಗೆ ದೇಶದ ಯಾವುದೇ ಭಾಗ ತುತ್ತಾದಾಗ ವಿದೇಶೀ ನೆರವಿಲ್ಲದೇ ಅದನ್ನು ನಿಭಾಯಿಸುವುದು ಅಸಾಧ್ಯ ಎಂಬ ಪರಿಸ್ಥಿತಿ/ಮನಸ್ಥಿತಿ ದೇಶದಲ್ಲಿತ್ತು. 1967-68ರಲ್ಲಿ ದಕ್ಷಿಣ ಕರ್ನಾಟಕವನ್ನು ಕಾಡಿದ ಬರಗಾಲವನ್ನು ಇದಕ್ಕೊಂದು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಅಂದು ತನ್ನ ‘ಪಿಎಲ್-480’ ನೆರವು ನೀತಿಗನುಗುಣವಾಗಿ ಅಮೆರಿಕಾ ಆಹಾರಧಾನ್ಯಗಳು ಮತ್ತು ಹಾಲಿನ ಪುಡಿಯನ್ನು ಪೂರೈಸಿ ಲಕ್ಷಾಂತರ ಕನ್ನಡಿಗರ ಜೀವವುಳಿಸಿದ್ದು ಕೆಲವರಿಗಾದರೂ ನೆನಪಿರಲಿಕ್ಕೆ ಸಾಕು.
1971ರಲ್ಲಿ ಪಾಕಿಸ್ತಾನೀ ಸೇನೆಯ ಪಾಶವೀ ಕೃತ್ಯಗಳಿಂದ ತಪ್ಪಿಸಿಕೊಂಡು ಭಾರತಕ್ಕೆ ಓಡಿಬಂದ ಸುಮಾರು ಒಂದು ಕೋಟಿ ಬಾಂಗ್ಲಾದೇಶೀಯರಿಗೆ ಅನ್ನ ವಸತಿ ನೀಡಲು ತನಗೆ ವಿದೇಶಗಳಿಂದ ನೆರವಿನ ಅಗತ್ಯವಿದೆ ಎಂದು ಇಂದಿರಾ ಗಾಂಧಿ ಸರ್ಕಾರ ಅಧಿಕೃತವಾಗಿ ವಿಶ್ವಸಮುದಾಯಕ್ಕೆ ಹೇಳಿತ್ತು ಮತ್ತು ಸಹಾಯವೂ ಬಂತು. ನಂತರದ ದಿನಗಳಲ್ಲಿ ಪರಿಸ್ಥಿತಿ ನಿಧಾನವಾಗಿ ಬದಲಾಗತೊಡಗಿತು. ನಾಲ್ಕನೆಯ ಪಂಚವಾರ್ಷಿಕ ಯೋಜನೆಯಲ್ಲಿ ಹಸಿರು ಕ್ರಾಂತಿ ಯಶಸ್ವಿಯಾಗಿ ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾದರೂ; ನಂತರದ ವರ್ಷಗಳಲ್ಲಿ ಅದೇ ಬಗೆಯ ಸ್ವಾವಲಂಬನೆ ಹಾಲು ಉತ್ಪಾದನೆ, ಎಣ್ಣೆಕಾಳುಗಳ ಉತ್ಪಾದನೆ ಹಾಗೂ ಮತೊ್ಸೕ್ಯದ್ಯಮದಲ್ಲಿ ಸಾಧಿತ ವಾದರೂ ವಿದೇಶೀ ನೆರವನ್ನು ಸ್ವೀಕರಿಸುವುದನ್ನು ಭಾರತ ನಿಲ್ಲಿಸಲಿಲ್ಲ. 1990ರ ದಶಕದಲ್ಲಿ ನರಸಿಂಹ ರಾವ್-ಮನಮೋಹನ್ ಸಿಂಗ್ ಆರಂಭಿಸಿದ ‘ಎಲ್ಪಿಜಿ’ (ಲಿಬರಲೈಜೇಷನ್- ಪ್ರೆ್ತ್ರವೇಟೈ ಜೇಷನ್- ಗ್ಲೋಬಲೈಜೇನ್) ಆರ್ಥಿಕ ಸುಧಾರಣಾ ಯೋಜನೆಗಳಿಂದಾಗಿ ದೇಶದ ವಾರ್ಷಿಕ ಅಭಿವೃದ್ಧಿ ದರ 1947ರ ನಂತರ ಮೊಟ್ಟಮೊದಲ ಬಾರಿಗೆ 8% ದಾಟಿ ಹೊಸ ಭರವಸೆಗಳನ್ನು ಮೂಡಿಸಿದರೂ ವಿಶೇಷ ಸಂದರ್ಭಗಳಲ್ಲಿ ವಿದೇಶೀ ನೆರವು ಸ್ವೀಕರಿಸುವುದನ್ನು ನಿಲ್ಲಿಸುವ ಮನಸ್ಸು ಭಾರತಕ್ಕಾಗಲಿಲ್ಲ. 1991ರಲ್ಲಿ ಉತ್ತರ ಕಾಶಿಯಲ್ಲಿ, 1993ರಲ್ಲಿ ಮಹಾರಾಷ್ಟ್ರದ ಲಾಟೂರ್ನಲ್ಲಿ, 2001ರಲ್ಲಿ ಗುಜರಾತ್ನ ಭುಜ್ನಲ್ಲಿ ಭೂಕಂಪಗಳಾದಾಗ; 1997ರಲ್ಲಿ ಒರಿಸ್ಸಾ ಮತ್ತು 2002ರಲ್ಲಿ ಪಶ್ಚಿಮ ಬಂಗಾಳಗಳಿಗೆ ಸೈಕ್ಲೋನ್ ಅಪ್ಪಳಿಸಿದಾಗ ಆಗಾಗಿನ ಸರ್ಕಾರಗಳು ವಿದೇಶಗಳಿಂದ ಹರಿದುಬಂದ ನೆರವನ್ನು ಸ್ವೀಕರಿಸಿದವು. ಈ ನೀತಿ ಬದಲಾಯಿಸಲು ಮಹತ್ವದ ನಿರ್ಧಾರವನ್ನು ತೆಗೆದುಕೊಂಡದ್ದು ವಾಜಪೇಯಿ ಸರ್ಕಾರ.
2003ರ ಬಜೆಟ್ ಭಾಷಣದಲ್ಲಿ ವಿತ್ತಮಂತ್ರಿ ಜಸ್ವಂತ್ ಸಿಂಗ್ ಘೊಷಿಸಿದ್ದು ಹೀಗೆ- ‘ಇದುವರೆಗೆ ಅಭಿವೃದ್ಧಿಯಲ್ಲಿ ನಮ್ಮ ಜತೆಗೂಡಿದ ಎಲ್ಲ ದೇಶಗಳಿಗೆ ಕೃತಜ್ಞತೆ ಅರ್ಪಿಸುತ್ತಾ, ಇನ್ನು ಮುಂದೆ ನಾವು ವಿದೇಶೀ ನೆರವನ್ನು ಸ್ವೀಕರಿಸುವುದಿಲ್ಲ, ಬದಲಾಗಿ ವಿದೇಶಗಳಿಗೆ ಅಗತ್ಯವೊದಗಿದಾಗ ನಮ್ಮ ಮಿತಿಯಲ್ಲಿ ನೀಡಬಹುದಾದ ನೆರವನ್ನು ನೀಡುತ್ತೇವೆ.’ ಭಾರತದ ಆರ್ಥಿಕ ವಿದೇಶನೀತಿಯಲ್ಲಿ ಇದೊಂದು ಮೈಲಿಗಲ್ಲು. ಆನಂತರ ಭಾರತ ವಿದೇಶೀ ನೆರವಿಗೆ ಕೈಯೊಡ್ಡಿದ್ದು ಒಂದೇ ಬಾರಿ, ಜುಲೈ 2004ರಲ್ಲಿ ಬಿಹಾರ ಪ್ರವಾಹಕ್ಕೆ ತುತ್ತಾದಾಗ. ಆದರೆ ನಂತರದ ದಿನಗಳಲ್ಲಿ ಯುಪಿಎ ಸರ್ಕಾರ ಅಂದಿನ ಎನ್ಡಿಎ ಸರ್ಕಾರ ಹಾಕಿಕೊಟ್ಟಿದ್ದ ಮಾರ್ಗಕ್ಕನುಗುಣವಾಗಿ ತನ್ನ ನೀತಿಯನ್ನು ಬದಲಾಯಿಸಿಕೊಂಡಿತು. 2005ರಲ್ಲಿ ಕಾಶ್ಮೀರದಲ್ಲಿ ಭೂಕಂಪವಾದಾಗ, 2013ರಲ್ಲಿ ಉತ್ತರಾಖಂಡ ಅನಿರೀಕ್ಷಿತ ಪ್ರವಾಹಕ್ಕೆ ಮತ್ತು 2014ರಲ್ಲಿ ಕಾಶ್ಮೀರ ಪ್ರವಾಹಗಳಿಗೆ ತುತ್ತಾದಾಗ ವಿದೇಶಗಳು ನೀಡಬಂದ ನೆರವನ್ನು ಭಾರತದ ಸರ್ಕಾರಗಳು ನಿರಾಕರಿಸಿದವು. 2018ರಲ್ಲಿ ಮಳೆ ಮತ್ತು ಪ್ರವಾಹದಿಂದಾಗಿ ಕೇರಳ ಅಪಾರ ಹಾನಿ ಅನುಭವಿಸಿದಾಗಲೂ ವಿದೇಶಗಳಿಂದ ಸಹಾಯ ಹಸ್ತ ಮುಂಚಾಚಿ ಬಂದಿತ್ತು. ಅದೆಲ್ಲವನ್ನೂ ಭಾರತ ನಯವಾಗಿಯೇ ನಿರಾಕರಿಸಿತು. ಇದರಲ್ಲಿ ಮುಖ್ಯವಾದುದು ಯುನೈಟೆಡ್ ಅರಬ್ ಎಮಿರೇಟ್ಸ್ ನೀಡಬಂದ 700 ಕೋಟಿ ರೂಪಾಯಿಗಳ ನೆರವು.
ಆದರೆ ಇಂದು ಸುಮಾರು ನಲವತ್ತು ಸಣ್ಣ-ದೊಡ್ಡ ರಾಷ್ಟ್ರಗಳು ಮೆಡಿಕಲ್ ಆಕ್ಸಿಜನ್, ಆಕ್ಸಿಜನ್ ಕಾನ್ಸ್ಂಟ್ರೇಟರ್, ವೆಂಟಿಲೇಟರ್ ಮುಂತಾದ ವೈದ್ಯಕೀಯ ಸಾಮಗ್ರಿಗಳನ್ನು ನೆರವಿನ ರೂಪದಲ್ಲಿ ನೀಡಿವೆ. ಭಾರತ ಅವೆಲ್ಲವನ್ನೂ ಸ್ವೀಕರಿಸಿದೆ. ಭೂತಾನದಂತಹ ಪುಟ್ಟ ದೇಶ ತನ್ನಲ್ಲಿರುವ ಎರಡು ಮೆಡಿಕಲ್ ಆಕ್ಸಿಜನ್ ಪ್ಲಾಂಟ್ಗಳನ್ನು ಪಕ್ಕದ ಪೂವೋತ್ತರ ರಾಜ್ಯಗಳ ಅಗತ್ಯಕ್ಕಾಗಿ ಬಳಸಿಕೊಳ್ಳಲು ನೀಡಿದೆ! ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರೀಂಗ್ಲಾ, ‘ಭಾರತದ ವಿದೇಶ ನೀತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ, ಪ್ರಸಕ್ತ ಸನ್ನಿವೇಶ ಅಭೂತಪೂರ್ವವಾದದ್ದು, ಈ ಸಂಕಟ ಸಮಯವನ್ನು ದಾಟಿಹೋಗಲಷ್ಟೇ ನಾವು ಈ ನೆರವನ್ನು ಸ್ವೀಕರಿಸುತ್ತಿದ್ದೇವೆ’ಎಂದಿದ್ದಾರೆ. ಇಲ್ಲಿ ಇನ್ನೂ ಮುಖ್ಯವಾದದ್ದು ನೆರವು ನೀಡುತ್ತಿರುವ ರಾಷ್ಟ್ರಗಳು ಹೇಳುತ್ತಿರುವ ಮಾತು. ‘ನಮ್ಮ ಸಂಕಟ ಸಮಯದಲ್ಲಿ ಭಾರತ ನಮ್ಮೊಂದಿಗಿತ್ತು, ಭಾರತದ ಸಂಕಟದ ಸಮಯದಲ್ಲಿ ನಾವು ಭಾರತೀಯರ ಜತೆಗಿದ್ದೇವೆ’ ಎಂದು ಅಮೆರಿಕಾ ಹೇಳಿದರೆ, ‘...ಭಾರತ ನಮಗೆ ನೀಡಿದ ಸಹಾಯಕ್ಕಾಗಿ ನಾವೀಗ ಭಾರತದ ಸಹಾಯಕ್ಕೆ ನಿಲ್ಲುತ್ತಿದ್ದೇವೆ. ನಮ್ಮ ಈ ಕೃತ್ಯ ನೀ ನನಗಿದ್ದಾಗ ನಾ ನಿನಗಿರಲೇಬೇಕು ಎನ್ನುವಂತಹ ನೀತಿಯದು’ ಎಂದು ಯೂರೋಪಿಯನ್ ಒಕ್ಕೂಟ ಹೇಳಿದೆ. ಹಾಗಿದ್ದರೆ ಆ ದೇಶಗಳು ನೆನಪಿಸಿಕೊಳ್ಳುತ್ತಿರುವ ಭಾರತ ನೀಡಿದ ಸಹಾಯವೇನು? ಮಾತ್ರೆಗಳು, ಲಸಿಕಾಶೀಶೆಗಳು, ಮೆಡಿಕಲ್ ಆಕ್ಸಿಜನ್ ಹೊರತಾಗಿ ಕೋವಿಡ್ ಲಸಿಕಾ ಶೀಶೆಗಳನ್ನಷ್ಟೇ ನೋಡೋಣ. ತಾನು ಎರಡನೆಯ ಅಲೆಗೆ ತುತ್ತಾಗುವ ಮೊದಲು ಭಾರತ 95 ದೇಶಗಳಿಗೆ 6.60 ಕೋಟಿ ಕೋವಿಡ್ ಲಸಿಕಾಶೀಶೆಗಳನ್ನು ನೀಡಿದೆ. ಇವುಗಳಲ್ಲಿ 3.60 ಕೋಟಿ ಲಸಿಕಾಶೀಶೆಗಳನ್ನು ಭಾರತ ಶ್ರೀಮಂತ ದೇಶಗಳಿಗೆ ಮಾರಾಟ ಮಾಡಿದ್ದರೆ, ಜಾಗತಿಕ ಲಸಿಕಾ ಅಗತ್ಯ ಪೂರೈಸಲು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಕೊಯಲಿಜನ್ ಫಾರ್ ಎಪಿಡೆಮಿಕ್ ಪ್ರಿಪೇರ್ಡ್ನೆಸ್ ಇನ್ನೊವೇಷನ್ಸ್ (ಸಿಇಪಿಐ) ಜಂಟಿಯಾಗಿ ಪ್ರಾರಂಭಿಸಿರುವ ‘ಗ್ಲೋಬಲ್ ಕೊವ್ಯಾಕ್ಸ್ ಫೆಸಿಲಿಟಿ’ಗೆ ಎರಡು ಕೋಟಿ ಲಸಿಕಾಶೀಶೆಗಳನ್ನು ನೀಡಿದೆ. ಇನ್ನುಳಿದ ಒಂದು ಕೋಟಿ ಲಸಿಕಾಶೀಶೆಗಳು ಬಾರ್ಬಡೋಸ್, ಆಂಟಿಗುವಾದಂತಹ ಹಲವಾರು ಬಡ ದೇಶಗಳಿಗೆ ಪುಕ್ಕಟೆ. ‘ಸಹಾಯಕ್ಕೆ ಪ್ರತಿ ಯಾಗಿ ಸಹಾಯ’ ಎಂದು ವಿದೇಶಗಳು ಹೇಳುತ್ತಿರುವುದರ ಹಿಂದಿನ ಕಾರಣ ಇದು.
ಕರೊನಾ ಸಂಕ್ರಮಣದ ಉತ್ಕರ್ಷವನ್ನು ತಡೆಯುವ ವೈದ್ಯಕೀಯ ಪರಿಕರಗಳ ಅಗತ್ಯ ತನಗೇ ಅಧಿಕವಾಗಿದೆ ಎಂಬ ಅರಿವಿನಿಂದ ಇಂದು ಸರ್ಕಾರ ಆ ಸಾಮಗ್ರಿಗಳ ರಫ್ತನ್ನು ಜುಲೈ 2021ರವರೆಗೆ ನಿರ್ಬಂಧಿಸಿದೆ. ಲಸಿಕೆಗಳ ವಿಷಯದಲ್ಲಿ ಈ ನಿರ್ಣಯ ಸರಿಯಾದದ್ದೇ. ಇಲ್ಲಿನ ಬೃಹತ್ ಜನಸಂಖ್ಯೆಗೆ ಲಸಿಕೆ ನೀಡುವುದು ಸುಲಭದ ಹಾಗೂ ಶೀಘ್ರವಾಗಿ ನೆರವೇರುವಂತಹ ಕೆಲಸವಲ್ಲ. ಜನವರಿ 16ರಂದು ಆರಂಭವಾದ ಲಸಿಕೀಕರಣ ವಿಶ್ವದಾಖಲೆಯ ವೇಗದಲ್ಲಿ ಸಾಗಿ ಕೇವಲ 85 ದಿನಗಳಲ್ಲಿ ಹತ್ತು ಕೋಟಿ ಜನರನ್ನು ತಲುಪಿತು. ನಂತರ ಅದರ ನಾಗಾಲೋಟ ಇನ್ನಷ್ಟು ಏರಿ 115 ದಿನಗಳ ನಂತರ ಅದು 17.26 ಕೋಟಿ ಜನರಿಗೆ ತಲುಪಿದೆ. ಇದು ವಿಶ್ವದ ಅನೇಕ ದೇಶಗಳಿಗೆ ಹೋಲಿಸಿದರೆ ದೊಡ್ಡ ಸಂಖ್ಯೆ ಇರಬಹುದು, ಆದರೆ ನಮ್ಮ ಜನಸಂಖ್ಯೆ ಗಾತ್ರವನ್ನೇ ತೆಗೆದುಕೊಂಡರೆ ಕಣ್ಣಿಗೆ ರಾಚುವುದು ನಿರಾಶಾದಾಯಕ ಚಿತ್ರ. ಈಗ ಲಸಿಕೆಯ ಮೊದಲ ಡೋಸ್ ಪಡೆದಿರುವ ಈ 17.26 ಕೋಟಿ ಜನರು ದೇಶದ ಒಟ್ಟು ಜನಸಂಖ್ಯೆಯಲ್ಲಿ 13% ಮಾತ್ರ! ಎರಡೂ ಡೋಸ್ ಪಡೆದಿರುವವರು ಕೇವಲ 2%! ಲಸಿಕೀಕರಣದಲ್ಲಿ ಇನ್ನೂ ಸಾಗಬೇಕಾದ ಹಾದಿ ತುಂಬಾ ದೀರ್ಘವಿದೆ, ಕಠಿಣವಿದೆ. ಹೀಗಾಗಿ ನಾವು ಉತ್ಪಾದಿಸುತ್ತಿರುವ ಲಸಿಕೆಗಳ ಜತೆ ವಿಶ್ವಸಮುದಾಯದಿಂದಲೂ ನಮಗೆ ನೆರವಿನ ಅಗತ್ಯವಿದೆ. ಆ ಬಗ್ಗೆ ಯಾವುದೇ ನಕಾರಾತ್ಮಕ ಆಲೋಚನೆ, ಕೀಳರಿಮೆ ಬೇಡ. ನಮಗೆ ನೆರವು ನೀಡುತ್ತಿರುವ ಯಾವ ದೇಶವೂ ನಮ್ಮಲ್ಲಿ ಕೀಳರಿಮೆ ಬಿತ್ತುತ್ತಿಲ್ಲ, ಅವ್ಯಾವುವೂ ತಾವು ಭಾರತಕ್ಕೆ ಭಿಕ್ಷೆ ನೀಡುತ್ತಿದ್ದೇವೆ ಎಂದು ಹೇಳುತ್ತಿಲ್ಲ. ಯಾಕೆಂದರೆ ಮೊನ್ನೆಮೊನ್ನೆವರೆಗೂ ಅವುಗಳಿಗೆ ನೆರವು ನೀಡುತ್ತಿದ್ದಾಗ ತಾನವುಗಳಿಗೆ ಭಿಕ್ಷೆ ನೀಡುತ್ತಿದ್ದೇನೆ ಎಂದು ಭಾರತ ಹೇಳಿರಲಿಲ್ಲ.
ಆದರೆ ಆ ಮಾತುಗಳನ್ನು ಹೇಳುವವರು ಇಲ್ಲಿಯೇ ಇದ್ದಾರೆ. ಅವರಿಗಿರುವುದು ದೇಶ, ದೇಶವಾಸಿಗಳ ಬಗ್ಗೆ ಕಾಳಜಿ ಅಲ್ಲ, ಬದಲಿಗೆ ಪ್ರಸಕ್ತ ಸರ್ಕಾರವನ್ನು ಹಣಿಯಲು ಕರೊನಾದಂತಹ ಮಹಾಮಾರಿಯನ್ನೂ ಬಳಸಿಕೊಳ್ಳಲು ಹಿಂಜರಿ ಯದ ನರಕರೊನಾಗಳು ಇವರು. ಇರಲಿ, ಅವರ್ಯಾರೂ ಪ್ರಸಕ್ತ ಸರ್ಕಾರವನ್ನು ಬಯಸಿದ್ದವರಲ್ಲ, ಅದಕ್ಕಾಗಿ ಮತ ನೀಡಿದ್ದವರಲ್ಲ. ನಿಜ ಹೇಳಬೇಕೆಂದರೆ 2014ರಲ್ಲಿ ಎನ್ಡಿಎ ಸರ್ಕಾರ ಪ್ರಮಾಣವಚನ ಸ್ವೀಕರಿಸಿದಾಗ ’ಐಕ ಐಛಜಿಚ’ ಎಂದು ಅತ್ತಿದ್ದವರು ಇವರು (ಇವರ ಗೋಳಾಟ ಇಂದು ಈ ಬಗೆಯಲ್ಲಿ ನಿಜವಾಗುತ್ತಿರುವುದು ಕ್ರೂರ ವಿಪರ್ಯಾಸವೇ ಸರಿ). ನಂತರ ಕಲಬುರ್ಗಿ ಹತ್ಯೆ, ಕಠುವಾ ಮತ್ತು ಉನ್ನಾವ್ ಅತ್ಯಾಚಾರ ಪ್ರಕರಣಗಳು, ಸಿಎಎ, ಕೃಷಿ ಕಾಯಿದೆಗಳು ಎಲ್ಲವನ್ನು ಈ ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ ಇವರಿಗೆ ಈಗ ಸಿಕ್ಕಿರುವ ಹೊಸ ಅಸ್ತ್ರ ಕರೊನಾ ಎರಡನೆಯ ಅಲೆ. ಈಗ ದೇಶ ಎದುರಿಸುತ್ತಿರುವುದು ಶತಮಾನಕ್ಕೊಮ್ಮೆ ಎರಗಬಹುದಾದ ಮಹಾ ಸಂಕಟ, ಇದನ್ನು ದೇಶ ಒಟ್ಟಾಗಿ ಎದುರಿಸಬೇಕು ಎಂಬ ಪರಿಜ್ಞಾನವೇ ಇವರಿಗಿಲ್ಲ. ಮೋದಿ-ದ್ವೇಷ, ಬಿಜೆಪಿ-ದ್ವೇಷ ಇವರ ಆಲೋಚನೆಯನ್ನು ಈ ಬಗೆಯಾಗಿ ವಿಕೃತಗೊಳಿಸಿರುವುದು ದುರಂತವೇ ಸರಿ.
ಈ ಸಂಕಟವನ್ನು ಯಾವ ಸರ್ಕಾರವೂ ತಾನಷ್ಟೇ ನಿಭಾಯಿಸಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ಅರಿತವರು ಈ ದೇಶದಲ್ಲಿ ಸಾಕಷ್ಟಿದ್ದಾರೆ. ಕಳೆದ ಎಪ್ಪತ್ತು ವರ್ಷಗಳಲ್ಲಿ ನಮಗೆ ಬಳುವಳಿಯಾಗಿ ಬಂದಿರುವ ವೈದ್ಯಕೀಯ ವ್ಯವಸ್ಥೆ ಕರೊನಾ ಸಂಕ್ರಮಣವನ್ನು ತಡೆಯಲು ಅಸಮರ್ಪಕ ಎಂದು ಸವೋಚ್ಚ ನ್ಯಾಯಾಲಯವೇ ಘೊಷಿಸಿರುವುದನ್ನು ಈ ವಿವೇಕಿಗಳೂ ಸರಿಯಾಗಿಯೇ ಅರ್ಥಮಾಡಿಕೊಳ್ಳುತ್ತಾರೆ. ಈ ದೇಶದ ಭವಿಷ್ಯದ ಬಗ್ಗೆ ಆಶಾಭಾವನೆಯುಂಟಾಗುವುದು ಜಾತಿಮತ, ಪಂಥ ಮತ್ತು ರಾಜಕೀಯ ವಿಚಾರಗಳಾಚೆ ಯೋಚಿಸುವ ಈ ಪ್ರಜ್ಞಾವಂತ ಭಾರತೀಯರಿಂದ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)