ಅಂಕಣ

14 ಸರ್ಕಾರಿ ಹುದ್ದೆ ಗಿಟ್ಟಿಸಿದ ಹಳ್ಳಿಹೈದ ಮಹಾಂತೇಶ

ಒಂದೇ ಒಂದು ಸರ್ಕಾರಿ ಹುದ್ದೆಗಾಗಿ ನಿತ್ಯವೂ ಹರಸಾಹಸ ಪಡುವ ಲಕ್ಷಾಂತರ ಯುವಜನರ ನಡುವೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಜಂಬಗಿ ಬಿ.ಕೆ. ಗ್ರಾಮದ ಮಹಾಂತೇಶ ಬಾಡಗಿ 14 ಸರ್ಕಾರಿ ಹುದ್ದೆಗಳನ್ನು ಪಡೆದುಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅವರ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆ ಹೇಗಿತ್ತು? ಯಶಸ್ಸಿನ ಸೂತ್ರವೇನು ಎಂಬಿತ್ಯಾದಿ ಸ್ಪೂರ್ತಿದಾಯಕ ಮಾಹಿತಿಯನ್ನು ಮಹಾಂತೇಶ ಇಲ್ಲಿ ಹಂಚಿಕೊಂಡಿದ್ದಾರೆ.

| ಹೀರಾನಾಯ್ಕ ಟಿ. ವಿಜಯಪುರ

ಮಹಾಂತೇಶ ಬಾಡಗಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ಕಲಿತು 14 ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗುವ ಮೂಲಕ ಇತರ ಸ್ಪರ್ಧಾಕಾಂಕ್ಷಿಗಳಿಗೆ ಸ್ಪೂರ್ತಿಯಾಗಿದ್ದಾರೆ. ಜಮಖಂಡಿ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ಮುಕ್ತ ವಿವಿಯಲ್ಲಿ ಸ್ನಾತಕೋತ್ತರ ಹಾಗೂ ಬನಹಟ್ಟಿಯ ಜೆಎಸ್​ಎಸ್ ಕಾಲೇಜಿನಲ್ಲಿ ಬಿ.ಇಡಿ. ಪದವಿ ಮುಗಿಸಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಉತ್ತಮ ಫಲಿತಾಂಶ ಪಡೆದಿರುವ ಮಹಾಂತೇಶ್​ಗೆ ಸ್ಪರ್ಧಾತ್ಮಕ ಪರೀಕ್ಷೆಗಳೆಂದರೆ ಬಾಳೆಹಣ್ಣಿನ ಸಿಪ್ಪೆ ಸುಲಿದಷ್ಟೇ ಸುಲಭ. ಇವರು ತುಮಕೂರು ಜಿಲ್ಲೆ ಗುಬ್ಬಿಯ ಮೊರಾರ್ಜಿ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರಾಗಿ ಆರು ತಿಂಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

ರೈತ ಕುಟುಂಬ: ರಾಮಪ್ಪ ಬಾಡಗಿ ಹಾಗೂ ಭಾರತಿ ಬಾಡಗಿ ದಂಪತಿಗೆ ಜನಿಸಿದ ಮೂವರು ಪುತ್ರರಲ್ಲಿ ಮಹಾಂತೇಶ ಎರಡನೇ ಮಗ. ತಮ್ಮ 7 ಎಕರೆ ಜಮೀನಿನಲ್ಲಿ ಕಬ್ಬು ಬೆಳೆಯುತ್ತಿದ್ದಾರೆ. ಮೊದಲ ಸಹೋದರ ಸಂತೋಷ್ ಬಾಡಗಿ ಕೂಡ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಎಫ್​ಡಿಎಯಾಗಿದ್ದಾರೆ. ಕೊನೆಯ ತಮ್ಮ ಎಂ.ಎ.,ಬಿ.ಇಡಿ. ಓದುತ್ತಿದ್ದಾರೆ. ಚಿಕ್ಕಂದಿನಿಂದಲೇ ಓದಿನಲ್ಲಿ ಮುಂದಿರುವ ಮಹಾಂತೇಶ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಆರಂಭಿಸಿದರು.

ಪರೀಕ್ಷೆಗೆ ಸಿದ್ಧತೆ ಹೇಗೆ?: 2014ರಲ್ಲಿ ಬಿ.ಎ ಮುಗಿಸಿ ವಿಜಯಪುರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಆರಂಭಿಸಿದರು. ವಿಜಯಪುರದ ಚಾಣಕ್ಯ ಕರಿಯರ್ ಅಕಾಡೆಮಿಯಲ್ಲಿ ಕೆಎಎಸ್​ಗೆ 3 ತಿಂಗಳು ತರಬೇತಿ ಪಡೆದರು. ನಂತರ ಸ್ನೇಹಿತರೊಂದಿಗೆ ಬಾಡಿಗೆ ರೂಂನಲ್ಲಿದ್ದು ತಯಾರಿ ನಡೆಸುತ್ತಿದ್ದರು. ಹೆಚ್ಚಿನ ಅಭ್ಯಾಸಕ್ಕಾಗಿ ಧಾರವಾಡಕ್ಕೆ ಹೋಗಿ ಅಲ್ಲಿಯೂ ಸ್ನೇಹಿತರೊಂದಿಗೆ ಇದ್ದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿದರು. ಪ್ರತಿದಿನ 12ರಿಂದ 13 ಗಂಟೆ ಅಭ್ಯಾಸ ಮಾಡುತ್ತಿದ್ದರು. 5ರಿಂದ 12ನೇ ತರಗತಿಯ ಪಠ್ಯಪುಸ್ತಕ, ಎನ್​ಸಿಆರ್​ಟಿ ಪಠ್ಯಪುಸ್ತಕಗಳು, ಹಳೆಯ ಪ್ರಶ್ನೆ ಪತ್ರಿಕೆಗಳು, ಜಿಕೆ ಟುಡೆ ವೆಬ್​ಸೈಟ್​ನಿಂದ ಮಾಹಿತಿ ಪಡೆಯುತ್ತಿದ್ದರು. ಜ್ಞಾನ ಸಾಧನಾ, ಸ್ಪರ್ಧಾವಿಜೇತ ಮಾಸ ಪತ್ರಿಕೆ ಓದುತ್ತಿದ್ದರು.

ವಿಜಯವಾಣಿ ವಿದ್ಯಾರ್ಥಿಮಿತ್ರ ಪ್ರೇರಣೆ

ಮಹಾಂತೇಶ್​ಗೆ ‘ವಿಜಯವಾಣಿ ವಿದ್ಯಾರ್ಥಿ ಮಿತ್ರ್ರ ಪ್ರೇರಣೆ ನೀಡಿದೆ. ಚಾಣಕ್ಯ ಕರಿಯರ್ ಅಕಾಡೆಮಿ ಸ್ಥಾಪಕ ನಿಂಗನಗೌಡ ಬಿರಾದಾರ, ಉಪನ್ಯಾಸಕ ಪ್ರದೀಪ ಗುಡ್ಡದ್ ಹಾಗೂ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಮಹಾಂತೇಶ್, ಮುಂದೆ ಕೆಎಎಸ್ ಮಾಡುವ ಗುರಿ ಹೊಂದಿದ್ದಾರೆ. ಅದಕ್ಕಾಗಿ ಹೆಚ್ಚಿನ ಅಭ್ಯಾಸ ಮಾಡುತ್ತಿದ್ದಾರೆ.

ಆಯ್ಕೆಯಾದ ಹುದ್ದೆಗಳು

  • ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1
  • ಕ್ರೖೆಸ್ ಇಂಗ್ಲಿಷ್ ಶಿಕ್ಷಕ
  • ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೖೆಸ್) ಎಫ್​ಡಿಎ
  • ಕ್ರೖೆಸ್ ವಸತಿ ನಿಲಯದಲ್ಲಿ ವಾರ್ಡನ್ 
  • ದೇವರಾಜ ಅರಸು ಹಿಂದುಳಿದ ವರ್ಗದ ಅಭಿವೃದ್ಧಿ ನಿಗಮದಲ್ಲಿ ಎಫ್​ಡಿಎ ಎಸ್​ಡಿಎ 
  • ಅಲ್ಪಸಂಖ್ಯಾತರ ಇಲಾಖೆಯ ಮೆಟ್ರಿಕ್​ಪೂರ್ವ ವಸತಿ ನಿಲಯದಲ್ಲಿ ವಾರ್ಡನ್ 
  • ಮೊರಾರ್ಜಿ ವಸತಿ ಶಾಲೆಯ ವಾರ್ಡನ್
  • ಮೊರಾರ್ಜಿ ವಸತಿ ಶಾಲೆಯ ಎಫ್​ಡಿಎ 
  • ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು ಎಫ್​ಡಿಎ
  • ಮೊರಾರ್ಜಿ ವಸತಿ ಶಾಲೆ ಇಂಗ್ಲಿಷ್ ಶಿಕ್ಷಕ 
  • ಮೊರಾರ್ಜಿ ವಸತಿ ಶಾಲೆ ಸಮಾಜ ವಿಜ್ಞಾನ ಶಿಕ್ಷಕ 
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಇಲಾಖೆ ನಿಲಯಪಾಲಕ 
  • ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನಿಲಯ ಮೇಲ್ವಿಚಾರಕ