ಕವಂಚೂರಿನ ಬೇಲಿ ಮನೆ ಎಂಬ ಕಡೆಮನೆಯಲ್ಲಿ ಒಬ್ಬ ಜಿಪುಣಾಗ್ರೇಸರ ಮುದುಕ ವಾಸಿಸುತ್ತಿದ್ದ. ಆತನ ಜೀವನ ಪೂರ್ತಿ ಏನೂ ಖರ್ಚುಮಾಡದೇ ಹಾಗೇ ಜಿಪುಣತನದಲ್ಲೇ ಕಳೆದು ಹೋಗಿತ್ತು. ಅವನದೊಂದು ಕೈತೋಟವಿತ್ತು. ಅದರಲ್ಲಿ ಒಂದು ಹೊಂಡ ತೋಡಿ ಅದರಲ್ಲಿ ಒಂದು ಕೊಡದಲ್ಲಿ ಚಿನ್ನದ ನಾಣ್ಯಗಳನ್ನೆಲ್ಲ ತುಂಬಿ ಇಟ್ಟಿದ್ದ. ಅದರ ಮೇಲೆ ಒಂದು ಕಲ್ಲು ಹೇರಿ ಮುಚ್ಚಿಟ್ಟಿದ್ದ. ಮತ್ತು ಪ್ರತಿದಿನ ರಾತ್ರಿ ಮಲಗುವ ಮೊದಲು ಅಲ್ಲಿ ಹೋಗಿ ಕಲ್ಲು ತೆಗೆದು ನಾಣ್ಯಗಳನ್ನು ಎಣಿಸಿ, ನೋಡಿ ಸಂತೋಷಪಟ್ಟುಕೊಂಡು ಬಂದು ಮಲಗುತ್ತಿದ್ದ. ಈ ಜಿಪುಣ ರಾತ್ರಿ ತೋಟದಲ್ಲಿ ಏನು ಮಾಡುತ್ತಾನೆ ಎಂಬುದನ್ನು ಒಬ್ಬ ಕಳ್ಳ ಅಡಗಿ ಕೊಂಡು ನೋಡತೊಡಗಿದ. ಯಾವಾಗ ಅಲ್ಲಿ ಚಿನ್ನದ ನಾಣ್ಯಗಳನ್ನು ಬಚ್ಚಿಟ್ಟಿದ್ದಾನೆ ಎಂದು ಗೊತ್ತಾಯಿತೋ ಅದನ್ನು ಎಗರಿಸಲು ಹೊಂಚುಹಾಕಿ ಕುಳಿತ.
ಆ ದಿನ ರಾತ್ರಿ ಗಾಢಾಂಧಕಾರ ಕವಿದಿತ್ತು. ಎಂದಿನಂತೆ ಮಲಗುವ ಮುನ್ನ ಜಿಪುಣ ಮುದುಕ ಬಂದು ನೋಡಿ ಹೋದ ಮೇಲೆ, ಮೆಲ್ಲನೆ ಬಂದ ಕಳ್ಳ ನಾಣ್ಯ ತುಂಬಿದ ಕೊಡವನ್ನು ತೆಗೆದುಕೊಂಡು ಕಲ್ಲನ್ನು ಹಾಗೇ ಮುಚ್ಚಿ, ಅಲ್ಲಿಂದ ಕಾಲುಕಿತ್ತ. ಮಾರನೆಯ ದಿನ ರಾತ್ರಿ ಮಲಗುವ ಮೊದಲು ಜಿಪುಣ ಮುದುಕ ಕೈದೋಟಕ್ಕೆ ಹೋಗಿ ಕಲ್ಲು ಎತ್ತಿ ನೋಡುತ್ತಾನೆ; ಅವನ ನಾಣ್ಯಗಳ ಖಜಾನೆ ಮಾಯವಾಗಿತ್ತು. ಆತ ಎದೆ ಎದೆ ಬಡಿದುಕೊಂಡು ದೊಡ್ಡದಾಗಿ ಅಳತೊಡಗಿದ. ಅದನ್ನು ಕಂಡು ನೆರೆಮನೆಯಾತ ಕೇಳಿದ, ‘ಯಾಕೆ ಅಳುತ್ತಿದ್ದೀಯ?’
ಜಿಪುಣನು ಕೈದೋಟದ ತನ್ನ ಚಿನ್ನದ ಕೊಡದ ಕುಳಿಯನ್ನು ತೋರಿಸಿ, ಹೇಳಿದ, ‘ನನ್ನ ಚಿನ್ನದ ನಾಣ್ಯದ ಕೊಡವನ್ನು ಕಳ್ಳರಾರೋ ಕದ್ದೊಯ್ದಿದ್ದಾರೆ’. ನೆರೆಯಾತ ಹೇಳಿದ; ‘ನೀನು ಚಿನ್ನದ ನಾಣ್ಯಗಳನ್ನು ಮನೆಯಲ್ಲೇ ಇಟ್ಟುಕೊಳ್ಳಬೇಕಾಗಿತ್ತು ಮತ್ತು ಅಗತ್ಯವಾದಾಗ ದಾನ, ಧರ್ಮ, ವಸ್ತು ಮುಂತಾದವುಗಳಿಗಾಗಿ ಸುಲಭವಾಗಿ ಖರ್ಚುಮಾಡಬಹುದಾಗಿತ್ತು’. ‘ಖರೀದಿಗಾಗಿ ಖರ್ಚು ಮಾಡುವುದೆ? ಚಿನ್ನದ ನಾಣ್ಯ ದಾನ ಮಾಡುವುದೆ? ನಾನು ಚಿನ್ನದ ನಾಣ್ಯಗಳನ್ನು ಖರೀದಿಗಾಗಿ ಅಥವಾ ಬೇರೆ ಯಾವ ಉದ್ದೇಶಕ್ಕೂ ಎಂದೂ ಖರ್ಚುಮಾಡುವವನೇ ಅಲ್ಲವಾಗಿದ್ದೆ’.
ಇದನ್ನು ಕೇಳಿ ನೆರೆಮನೆಯಾತ ಕೆಲವು ಕಲ್ಲುಗಳನ್ನು ತೆಗೆದುಕೊಂಡು ಆ ಕುಳಿಯಲ್ಲಿ ಹಾಕಿದ ಮತ್ತು ಹೇಳಿದ; ‘ಹಾಗಿದ್ದರೆ ಇದನ್ನು ಜೋಪಾನವಾಗಿ ನೋಡಿಕೋ. ದಿನವೂ ಎಣಿಸುತ್ತ ಇರು. ನಿನ್ನ ಚಿನ್ನದ ನಾಣ್ಯಗಳು ಯಾವತ್ತೂ ಖರೀದಿಗೆ ಖರ್ಚು ಮಾಡುವುದಲ್ಲವೆಂದಾದರೆ ಅದಕ್ಕೂ ಇದಕ್ಕೂ ಏನೂ ವ್ಯತ್ಯಾಸವಿಲ್ಲ’. ಅಗತ್ಯಕ್ಕಿಂತ ಹೆಚ್ಚು ಹಣ ಸಂಗ್ರಹ ಮಾಡಿ ಇಡುವುದು ಅಧರ್ಮ ಎಂದು ಶಾಸ್ತ್ರ ಹೇಳುತ್ತದೆ. ಅಸ್ತೇಯ (ಕಳ್ಳತನ ಮಾಡದಿರುವುದು) ಮತ್ತು ಅಸಂಗ್ರಹ (ಕೂಡಿಡದಿರುವುದು) ಹನ್ನೊಂದು ನೈತಿಕ ಧರ್ಮಗಳಲ್ಲಿ ಇವೂ ಎರಡು.
ಸ್ತೇಯ ಮತ್ತು ಸಂಗ್ರಹ ಬೇರೆಯವರ ಬದುಕುವ ಹಕ್ಕನ್ನು ಕಸಿದುಕೊಂಡಂತೆ. ಅದಕ್ಕೇ ‘ಮಾ ಗೃಧಃ ಕಸ್ಯಸ್ವಿದ್ಧನಮ್ ಎಂದು ಈಶಾವಾಸ್ಯೋಪನಿಷತ್ತು ಹೇಳುತ್ತದೆ. ಲೋಭಿ ಗಂಟು ಎಂದಿದ್ದರೂ ಕಳ್ಳರ ಪಾಲಾಗುವುದೇ ಅಥವಾ ನಾಶವಾಗುವುದೇ. ಆದ್ದರಿಂದ ಜಿಪುಣನಾಗದಿರು. ಗಳಿಸಿದ್ದನ್ನು ಅಗತ್ಯವಿದ್ದಷ್ಟು ಖರ್ಚುಮಾಡು, ಅಗತ್ಯವಾದಷ್ಟು ಉಳಿತಾಯ ಮಾಡು, ಉಳಿದುದನ್ನು ಇಲ್ಲದವರಿಗೆ ಹಂಚು ಎಂಬ ಹಿರಿಯ ಸಂದೇಶ ಎಂದಿಗೂ ಪ್ರಸ್ತುತವೇ. (ಲೇಖಕರು ಸಾಹಿತಿ, ಪ್ರತಿಕ್ರಿಯಿಸಿ: manollasavv@gmail.com)