ಆಧುನಿಕ ಸೌಲಭ್ಯಗಳಿಂದಾಗಿ ಮನೆ ಕೆಲಸವೂ ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಮುಗಿದುಬಿಡುತ್ತದೆ. ಆಗ ಎದುರಾಗುವುದೇ ಬಿಡುವಿನ ಸಮಯ, ಆಗಲೇ ತನ್ನಂತೆಯೇ ಮನೆಯಲ್ಲಿರುವ ಗೆಳತಿಯರು ಹಾಗೂ ಅವರ ಸ್ನೇಹದತ್ತ ಮನಸ್ಸು ವಾಲತೊಡಗುತ್ತದೆ. ಸ್ನೇಹ ಒಳ್ಳೆಯದೇ, ನಮ್ಮ ಮನಸ್ಸಿನಲ್ಲಿದ್ದುದನ್ನು ಹಂಚಿಕೊಂಡಾಗಲೇ ಮನಸ್ಸು ನಿರಾಳವಾಗುವುದೂ ನಿಜವೇ. ಆದರೆ ನೆನಪಿರಲಿ... ಅತಿಯಾದರೆ ಅಮೃತವೂ ವಿಷ.
ಸುಮ, ಕುಸುಮ ಇಬ್ಬರು ಆಪ್ತ ಸ್ನೇಹಿತೆಯರು, ಎಷ್ಟು ಆಪ್ತರೆಂದರೆ ಒಂದೇ ಬಟ್ಟಲಲ್ಲಿ ಊಟ ಮಾಡುವಷ್ಟು, ಇವಳಿಗೆ ಶೀತ, ಜ್ವರ ಬಂದರೆ ಅವಳು ಚಳಿ, ಚಳಿ ಎನ್ನುತ್ತಾಳೆ, ಅವಳು ಹೊಟ್ಟೆ ನೋವೆಂದರೆ ಇವಳು ಹೊಟ್ಟೆ ಹಿಡಿದುಕೊಳ್ಳುತ್ತಾಳೆ. ಪ್ರತೀ ದಿನ ಗಂಟೆಗಟ್ಟಲೆ ಫೋನಿನಲ್ಲಿ ಮಾತು, ದಿನಕ್ಕೊಮ್ಮೆಯಾದರೂ ಭೇಟಿ, ಪಿಕನಿಕ್, ಟೂರುಗಳಿಗೂ ಸಾಕಷ್ಟು ನಡೆಯಿತು, ಹೇಳಬೇಕಾದ್ದು, ಹೇಳಬಾರದ್ದು ಎಲ್ಲವೂ ಅವರ ಮಾತಿನಲ್ಲಿ ಬರುತ್ತಿತ್ತು. ಗಂಡ, ಮಕ್ಕಳು ನಂತರ, ಸ್ನೇಹಿತೆಗೇ ಮೊದಲ ಸ್ಥಾನ, ಗಂಡನಂತೂ ಈ ಫೋನಿನ ಹಾವಳಿಯಿಂದ ತಲೆ ಮೇಲೆ ಕೈ ಹೊತ್ತು ಕುಳಿತರೆ, ಸಮಯಕ್ಕೆ ಸರಿಯಾಗಿ ಹೊರಡಲಾಗದೆ ಮಕ್ಕಳು ಶಾಲಾ ವಾಹನವನ್ನು ತಪ್ಪಿಸಿಕೊಂಡು ಶಾಲಿಗೆ ಚಕ್ಕರ್ ಕೊಟ್ಟಿದ್ದೂ ಇದೆ. ಅದೊಂದು ಕೆಟ್ಟ ಮುಹೂರ್ತದಲ್ಲಿ ಯಾವುದೋ ಸಣ್ಣ ವಿಷಯಕ್ಕೆ ಇಬ್ಬರಲ್ಲಿ ಮನಸ್ತಾಪ ಏರ್ಪಟ್ಟಿತು. ಇಬ್ಬರಿಗೂ ದೊಡ್ಡ ಆಘಾತ, ಅರಗಿಸಿಕೊಳ್ಳದಾದರು. ಗಂಡ, ಮಕ್ಕಳಿರಲಿ, ಊಟ, ತಿಂಡಿಯೂ ಬೇಡವಾಯಿತು, ಆರೋಗ್ಯವನ್ನೂ ನಿರ್ಲಕ್ಷಿಸಿದರು. ಕದಡಿದ ಮನಸ್ಸಿನ ದೇಹಕ್ಕೆ ಅನಾರೋಗ್ಯವೂ ಕಾಲಿಟ್ಟಿತು, ಒಬ್ಬಳು ಆಸ್ಪತ್ರೆ ಸೇರಿದರೆ ಇನ್ನೊಬ್ಬಳು ಡಿಪ್ರೆಷನ್ಗೆ ಒಳಗಾಗಿ ಮನೆಯಿಂದ ಹೊರಗೆ ಬರಲಿಲ್ಲ.
ಈ ಘಟನೆ ಕೆಲವರಿಗೆ ಉತ್ಪ್ರೇಕ್ಷೆಯಾಗಿ ಕಂಡಿರಬಹುದೇನೋ, ಆದರೆ ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಸುತ್ತಮುತ್ತ ಇಂತಹ ಘಟನೆಗಳು ನಡೆಯುತ್ತಿರುತ್ತದೆ. ಸಿಲ್ಲಿಯಾಗಿ ಶುರುವಾದ ಮಹಿಳೆಯರಿಬ್ಬರ ಸ್ನೇಹ ಗಾಢವಾಗಿ ಮತ್ತದು ಎಲ್ಲಿಂದ ಎಲ್ಲಿಗೋ ಹೋಗಿ ಮುಟ್ಟಿ ಮನೆಯವರ, ಸುತ್ತಮುತ್ತಲಿನವರ ತಲೆಬೇನೆಗೂ ಕಾರಣವಾಗಬಹುದು. ಇದಕ್ಕೆ ಕಾರಣ ಹುಡುಕುತ್ತಾ ಹೊರಟರೆ ಮೊದಲು ಕಣ್ಣಿಗೆ ಕಾಣುವುದೇ ಅವಳ ಬಿಡುವಿನ ಸಮಯ ಮತ್ತು ಬೇರೆ ತೊಂದರೆಗಳಿಲ್ಲದಿರುವುದು.
ಒಂದು ಸರ್ವೆಯ ಪ್ರಕಾರ ಈಗೀಗ ಪತಿಗೆ ಒಳ್ಳೆಯ ಕೆಲಸವಿದ್ದು ಪತ್ನಿಯು ವಿದ್ಯಾವಂತಳಾಗಿದ್ದರೂ ಮನೆ, ಮಕ್ಕಳೆನ್ನುತ್ತಾ ಹೋಮ್ ಮೇಕರ್ ಆಗಿ ಮನೆಯಲ್ಲೇ ಇರುವುದು ಜಾಸ್ತಿಯಾಗುತ್ತಿದೆಯಂತೆ. ಕೆಲಸದವರು ಇರುವುದರಿಂದಲೋ ಇಲ್ಲವೇ ಆಧುನಿಕ ಸೌಲಭ್ಯಗಳಿಂದಾಗಿ ಮನೆ ಕೆಲಸಗಳೂ ಬೇಗ ಬೇಗ ಮುಗಿದುಬಿಡುತ್ತವೆ. ಆಗ ಎದುರಾಗುವುದೇ ಬಿಡುವಿನ ಸಮಯ.
ಆಗಲೇ ಗೆಳತಿಯರು, ಗೆಳತಿಯರ ಸ್ನೇಹದತ್ತ ಮನಸ್ಸು ವಾಲತೊಡಗುತ್ತದೆ. ಅದಕ್ಕೆ ‘ಅನಲಿಮಿಟೆಡ್ ಫೋನ್ ಕಾಲ್ಸ್’ ನೆರವಿಗೆ ಬರುತ್ತದೆ. ಹೆಚ್ಚು ಹೆಚ್ಚು ಸ್ನೇಹಿತರನ್ನು ಪಡೆಯಲು ವಾಟ್ಸ್ಆಪ್, ಫೇಸ್ಬುಕ್ಗಳೂ ಸಹಾಯ ಮಾಡುತ್ತವೆ. ಸ್ನೇಹ ತಪ್ಪಲ್ಲ, ಸ್ನೇಹಿತೆಯರು, ನೆರೆ ಹೊರೆಯವರು ಬೇಕೇ ಬೇಕು. ನಮ್ಮ ಮನಸ್ಸಿನಲ್ಲಿದ್ದದ್ದನ್ನು ಹಂಚಿಕೊಂಡಾಗಲೇ ಮನಸ್ಸು ನಿರಾಳವಾಗುವುದು, ಮನ ಪೂರ್ತಿ ನಕ್ಕಾಗಲೇ ಮನಸ್ಸಿನ ದುಗುಡ ಕಡಿಮೆಯಾಗುವುದು, ಸಂತೋಷ ಹಂಚಿಕೊಂಡಾಗಲೇ ಬೆಟ್ಟದಂತಹ ಸಮಸ್ಯೆಗೂ ಸ್ನೇಹಿತೆಯ ಹತ್ತಿರ ಸುಲಭದ ಉಪಾಯ ಸಿಗಬಹುದು. ಎಷ್ಟೋ ವಿಷಯಗಳು ಗಂಡನ ಹತ್ತಿರ, ಮಕ್ಕಳ ಹತ್ತಿರ ಹೇಳಿಕೊಳ್ಳಲಾಗದ್ದನ್ನು ಸ್ನೇಹಿತೆಯ ಹತ್ತಿರ ಹೇಳಿಕೊಳ್ಳಬಹುದು.
ಆದರೆ ಅದಕ್ಕೂ ಮಿತಿ ಎನ್ನುವುದು ಇರಬೇಕಲ್ಲವೆ? ಅತಿಯಾದರೆ ಅಮೃತವೂ ವಿಷ, ಅತೀ ಸ್ನೇಹ ಮುಂದೊಂದು ದಿನ ಹಾಲಹಲವಾಗಬಹುದು, ಆಗ ಅಲ್ಲಿ ವಿಷ ಅರಗಿಸಿಕೊಳ್ಳಲು ನೀಲಕಂಠನಿಲ್ಲ. ಗಂಡ, ಹೆಂಡತಿಯ ನಡುವಿನ ಸಂಬಂಧವಿರಬಹುದು, ಅತ್ತೆ, ಸೊಸೆಯರ ನಡುವಿನ ವಿಷಯಗಳಿರಬಹುದು, ತಾಯಿ ಮಕ್ಕಳ ನಡುವಿನ ಗುಟ್ಟಿರಬಹುದು, ಕೆಲವೊಂದು ವಿಷಯಗಳು ಮನೆಯ ಹೊಸ್ತಿಲು ದಾಟದಿರುವುದೇ ಲೇಸು. ಸಮಯ ಅತ್ಯಮೂಲ್ಯವಾದದ್ದು, ಬಿಡುವಿನ ವೇಳೆಯನ್ನು ಸದುಪಯೋಗ ಮಾಡಿಕೊಳ್ಳುವಂತಹ ಹವ್ಯಾಸಗಳನ್ನು ರೂಢಿಸಿಕೊಳ್ಳುವುದೇ ಅತೀ ಸ್ನೇಹಕ್ಕೆ ಒಡ್ಡಬಹುದಾದ ಒಡ್ಡು.
ಇತ್ತೀಚೆಗೆ ಪ್ರಸಾರವಾದ ಕೌನ್ ಬನೇಗಾ ಕರೋರ್ಪತಿಯಲ್ಲಿ ರುಮಾ ದೇವಿಯ ಪರಿಚಯ ಮಾಡಿಕೊಡಲಾಯಿತು. ರುಮಾ ದೇವಿ 8ನೇ ತರಗತಿಯವರೆಗೆ ಕಲಿತ ರಾಜಾಸ್ಥಾನದ ಹಳ್ಳಿಯ ಮಹಿಳೆ, ಬಿಡುವಿನ ವೇಳೆಯಲ್ಲಿ ಅಜ್ಜಿಯಿಂದ ಕಲಿತ ಕಸೂತಿಯನ್ನೇ ಬಂಡವಾಳವನ್ನಾಗಿಸಿ ಬಟ್ಟೆ ಮತ್ತು ಉಡುಪಿನ ಮೇಲೆ ಕಸೂತಿ ಮಾಡಿಕೊಡುವ ಉದ್ಯಮ ಶುರು ಮಾಡಿದಾಗ ಹೆಸರು, ಹಣ ಹರಿದು ಬಂತು. ಇವರಿಂದ ಉತ್ತೇಜಿತರಾದ ಗೆಳತಿಯರು, ಹಲವಾರು ಮಹಿಳೆಯರು ಕಸೂತಿಯ ಉದ್ಯಮದಲ್ಲಿ ತೊಡಗಿ ತಮ್ಮ ಆರ್ಥಿಕ ಸಂಕಷ್ಟಗಳನ್ನು ದೂರವಾಗಿಸಿದ್ದಾರೆ. ಈಗ ಸುಮಾರು 22 ಸಾವಿರ ಮಹಿಳೆಯರನ್ನೂ ಸಂಘಟಿಸಿದ ಕೀರ್ತಿ ರುಮಾ ಅವರದ್ದು. ಇದು ರುಮಾಗೆ ಹಲವು ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಶಸ್ತಿಯನ್ನು ತಂದುಕೊಟ್ಟಿದೆ. ಈಗ ಬಿಡುವಿನ ವೇಳೆ ಇಲ್ಲದ ಗೆಳತಿಯರು ಇವರು, ಒಂದು ಕಾಲದಲ್ಲಿ ಗುಂಗಟ್ನ ಹಿಂದೆ ಮುಖ ಮರೆಸಿಕೊಂಡಿದ್ದ ಇವರೀಗ ಸ್ವಾಭಿಮಾನದಿಂದ ರ‍್ಯಾಂಪ್ ವಾಕ್ ಮಾಡುತ್ತಿದ್ದಾರೆ. ಮಹಿಳೆಯ ಬಿಡುವಿನ ವೇಳೆಯೇ ಮನೆ, ಮಕ್ಕಳು, ಮಹಿಳೆಯ ಚಿತ್ರವನ್ನೇ ಬದಲಾಯಿಸಿದ್ದೇ ಇಲ್ಲಿ.
ಮಾಧ್ಯಮ ಮತ್ತು ಸಂಪರ್ಕಗಳಿಂದಾಗಿ ವಿಶಾಲವಾದ ಜಗತ್ತು ಚಿಕ್ಕದಾಗುತ್ತಿದೆ, ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಒಂದೇ ಘಳಿಗೆಯಲ್ಲಿ ಇತರರನ್ನು ಸಂರ್ಪಸಬಹುದು, ಇದನ್ನೇ ಉಪಯೋಗಿಸಿಕೊಂಡು ಆನ್ಲೈನ್ ಬಿಜಿನೆಸ್ ಶುರುಮಾಡಬಹುದು, ಇದನ್ನು ಹವ್ಯಾಸವೆನ್ನಿ, ಬಿಸಿನೆಸ್ ಅನ್ನಿ, ಸಫಲವಾದರೆ ಕಾಸಂತೂ ಹರಿದು ಬರುತ್ತದೆ. ಮಹಿಳೆಯರ ಬಿಡುವಿನ ವೇಳೆಯನ್ನು ಸದುಪಯೋಗ ಮಾಡುವಂತಹ ಹಲವಾರು ಹವ್ಯಾಸ, ಉದ್ಯೋಗಗಳಿವೆ, ಕಣ್ಣು ತೆರೆದು ನೋಡಬೇಕಷ್ಟೇ, ಉಪಯೋಗಿಸಲು ಮನಸ್ಸು ಮಾಡಬೇಕಷ್ಟೇ. ಸ್ನೇಹಿತೆಯರ ಸ್ನೇಹ ಸಶಕ್ತವಾಗಿರಲಿ ಆದರೆ ರಚನಾತ್ಮಕವಾಗಿರಲಿ, ಸಮಯ ಅಮೂಲ್ಯವಾದದ್ದು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಿ.
ಸ್ಮಿತಾ ಮತ್ತು ಶೀತಲ್ ಆಪ್ತ ಸ್ನೇಹಿತೆಯರು. ಅಕ್ಕ, ತಂಗಿಯರಿಲ್ಲದ, ಹೆಣ್ಣು ಮಕ್ಕಳಿಲ್ಲದ ಸ್ಮಿತಾ ಎಲ್ಲಾ ವಿಷಯಗಳನ್ನು ಶೀತಲ್ ಹತ್ತಿರ ಹೇಳಿಕೊಂಡಾಗ ಮನಸ್ಸಿಗೆ ನೆಮ್ಮದಿಯೂ ಸಿಕ್ಕಿತ್ತು. ಒಂದು ಕೆಟ್ಟ ಗಳಿಗೆಯಲ್ಲಿ ಸ್ನೇಹಿತೆಯರು ದೂರವಾದರು, ಅಲ್ಲಿಗೆ ಶೀತಲ್ ಸುಮ್ಮನೆ ಕೂಡಲಿಲ್ಲ. ಸ್ಮಿತಾಳ ಅಂತರಂಗದ ಮಾತುಗಳನ್ನೆಲ್ಲಾ ಡಂಗುರ ಸಾರಿದಳು. ಸ್ಮಿತಾಳೂ ಶೀತಲಳ ಮನೆಯ ನಾಲ್ಕು ಗೋಡೆಯ ಮಧ್ಯೆ ನಡೆದ ವಿಷಯಗಳನ್ನು ಹೊರ ಹಾಕಿದಳು. ಈ ಘಟನೆ ಎಲ್ಲರಿಗೂ ಪುಕ್ಕಟೆ ಮನೋರಂಜನೆ ಕೊಟ್ಟಿದ್ದಂತೂ ಸುಳ್ಳಲ್ಲ. ಮನೆಯೊಳಗಿರಬೇಕಾದ ವಿಷಯ ಎಲ್ಲಾ ಬೀದಿಯಲ್ಲೂ ಹರಿದಾಡಿತು. ಮನೆಯ ವಿಷಯ ಬೀದಿಗೆ ಬಂದಾಗ ಸ್ಮೀತಾಳ ಗಂಡ ಅವಳನ್ನು ಡೈವೋರ್ಸ್ ಮಾಡುವ ಹಂತದವರೆಗೂ ಬಂತು, ಶೀತಲಳ ಮನೆಯವರು ಸ್ವಂತ ಮನೆಯನ್ನೇ ಮಾರಿ ಬೇರೆ ಕಡೆ ಹೋಗಲು ನಿರ್ಧರಿಸಿದರು.
| ಗೀತಾ ಕುಂದಾಪುರ