ಕೆಲವರು ಬೋರಲಾಗಿಡುವುದೂ ಇಲ್ಲ ಹಾಗೆಯೇ ತೆರೆದಿಟ್ಟು ಹೋಗುತ್ತಾರೆ. ಇನ್ನು ಹಲವರಿಗೆ ಹಾಳೆಯ ಮೂಲೆಯನ್ನು ಮಡಚಿಟ್ಟು- ಅದು ಪುಸ್ತಕದ ಕಿವಿಹಿಂಡಿ ಕೊಡುತ್ತಿರುವ ಹಿಂಸೆ ಎಂಬ ತಪ್ಪಿತಸ್ಥ ಭಾವವಿಲ್ಲದೆ- ಮತ್ತೆ ಓದಿಗೆತ್ತಿಕೊಳ್ಳುವ ಅಭ್ಯಾಸ. ಅಂಥವರಿಗೆ ಯಾವ ಬುಕ್ವಾರ್ಕ್ ಕೂಡ ಬೇಕಾಗಿಲ್ಲ. ಆದರೆ ಪುಸ್ತಕದ ಬಗ್ಗೆ ಗೌರವ ಮತ್ತು ಕಾಳಜಿ ಇರುವವರು ಹಾಗೆ ಮಾಡುವುದಿಲ್ಲ. ಆ ಉದ್ದೇಶಕ್ಕಾಗಿಯೇ ಇರುವ ಬುಕ್ವಾರ್ಕ್ ಬಳಸುತ್ತಾರೆ.
ಬೇಕಿದ್ದರೆ ಗಂಧದ ಮರದಿಂದ ಅಥವಾ ಹಸ್ತಿದಂತದಿಂದ ಮಾಡಿದ ಕಲಾತ್ಮಕ ಕುಸುರಿಯುಳ್ಳ ಪಟ್ಟಿ ಇರಬಹುದು; ಸರಳವಾಗಿ ಕಾಗದದಿಂದ ಅಥವಾ ಪ್ಲಾಸ್ಟಿಕ್ನಿಂದ ತಯಾರಿಸಿದ ರಚನೆಯೂ ಇರಬಹುದು. ‘ಉಳ್ಳವರು ಬಂಗಾರಲೇಪದ ಬುಕ್ವಾರ್ಕ್ ಬಳಸುವರು ನಾನೇನ ಮಾಡಲಯ್ಯ ಬಡವನು’ ಎನ್ನುವವರು ಮಾಮೂಲಿ ಕಾಗದದ ಚಿಕ್ಕದೊಂದು ಚೀಟಿಯನ್ನೋ, ಅಂಚೆಯಲ್ಲಿ ಬಂದ ಹಳೆಯ ಪತ್ರವನ್ನೋ, ಇಸ್ಪೀಟ್ ಪ್ಯಾಕ್ನದೊಂದು ಎಲೆಯನ್ನೋ, ದಿನಪತ್ರಿಕೆಯೊಡನೆ ಬರುವ ಜಾಹೀರಾತು ಕಾಗದಗಳನ್ನೋ ಉಪಯೋಗಿಸುವರು. ದೊಡ್ಡದೊಡ್ಡ ಗ್ರಂಥಗಳ ಬೆನ್ನುಹುರಿಗೊಂದು ಬಣ್ಣದ ನೂಲು ಇರುವುದೂ ಈ ಉದ್ದೇಶಕ್ಕೇ. ಅಂತೂ ಬುಕ್ವಾರ್ಕ್ ಬಳಕೆ ಪುಸ್ತಕದ ಬಗೆಗೆ ನಮಗಿರುವ ಗೌರವ ಮತ್ತು ಓದಿನ ಶಿಸ್ತು-ಅಚ್ಚುಕಟ್ಟುತನಗಳ ದ್ಯೋತಕ. ನಿಮಗೆ ಅಚ್ಚರಿಯೆನಿಸಬಹುದು, ಬಾಲ್ಯದಿಂದಲೇ ಪುಸ್ತಕಗಳ ಓದಿಗೆ ಮಹತ್ವ ನೀಡುವ ಅಮೆರಿಕದಲ್ಲಿ ಬುಕ್ವಾರ್ಕ್ಗಳ ಬಗ್ಗೆಯೇ International Friends of Bookmarks ಎಂಬ ಒಂದು ಸಂಘಟನೆ ಇದೆ.
ಅಂಚೆಚೀಟಿ, ನಾಣ್ಯಗಳು, ಬೆಂಕಿಪೊಟ್ಟಣಗಳಂತೆ ವಿಧವಿಧದ ಬುಕ್ವಾರ್ಕ್ಸ್ ಸಂಗ್ರಹಿಸುವವರು, ವಿನಿಮಯ ಮಾಡಿಕೊಳ್ಳುವವರು ಅದರ ಸದಸ್ಯರು. ಅವರಿಗಾಗಿಯೇ Bookmark Collector ಎಂಬ ವಾರ್ತಾಪತ್ರ ಇದೆ. 2016ರಿಂದೀಚೆಗೆ ಪ್ರತಿವರ್ಷ ಫೆಬ್ರವರಿ 25ರಂದು World Bookmark Day ಆಚರಣೆಯೂ ಇದೆ! ಕ್ರಿಸ್ತಶಕ 1584ರಲ್ಲಿ ಕ್ರಿಸ್ಟೋಫರ್ ಬಾರ್ಕರ್ (ಆಸ್ಥಾನ ಮುದ್ರಕನಾಗಿದ್ದವನು) ಆಗಿನ ಬ್ರಿಟನ್ ರಾಣಿ ಒಂದನೆಯ ಎಲಿಜಬೆತ್ಗೆ ರೇಷ್ಮೆಯಂಚಿನ ಬುಕ್ವಾರ್ಕ್ ಉಡುಗೊರೆ ಕೊಟ್ಟಿದ್ದನಂತೆ. Bookmark ಪದದ ಮೊತ್ತಮೊದಲ ಬಳಕೆ ದಾಖಲಾದದ್ದು ಆ ಸಂದರ್ಭದಲ್ಲೇ ಎನ್ನಲಾಗುತ್ತದೆ.
ಇಂತಿರುವ ಬುಕ್ವಾರ್ಕ್ಗೆ ಸೂಕ್ತವಾದೊಂದು ಕನ್ನಡ ಪದ ಹುಡುಕೋಣವೆಂದು ಕಳೆದಬಾರಿ ಕೇಳಿದ್ದು. ‘ಪುಸ್ತಕಗುರುತು’ ಎಂಬ ಪದಶಃ ಅನುವಾದಕ್ಕಿಂತ ಬೇರೆಯದಿರಲಿ ಎಂದು ಸೂಚಿಸಿದ್ದು. ಇಲ್ಲೊಂದು ಸ್ವಾರಸ್ಯಕರ ಉಲ್ಲೇಖ ಮಾಡಬೇಕಿದೆ. ಪುಸ್ತಕ ಎಂಬ ಪದ ಕನ್ನಡದ್ದೇ ಇರಬಹುದು ಎಂದುಕೊಳ್ಳುವಷ್ಟು ನಮಗೆ ಚಿರಪರಿಚಿತ. ಅಥವಾ, ‘ಪುಸ್ತಕಂ ವನಿತಾ ವಿತ್ತಂ ಪರಹಸ್ತಗತಂ ಗತಂ... ’ ಸುಭಾಷಿತದಿಂದಾಗಿ, ಸರಸ್ವತಿಯನ್ನು ‘ವೀಣಾಪುಸ್ತಕಪಾಣಿ’ ಎಂದು ಬಣ್ಣಿಸುವ ಶ್ಲೋಕಗಳಿಂದಾಗಿ, ಪುಸ್ತಕ ಸಂಸ್ಕೃತದ್ದಿರಬಹುದು ಎಂದುಕೊಳ್ಳುತ್ತೇವೆ. ಆದರೆ ಅದು ಭಾರತೀಯ ಮೂಲದ್ದೇ ಅಲ್ಲವೆನ್ನುತ್ತಾರೆ ಪಾ.ವೆಂ.ಆಚಾರ್ಯರು ‘ಪದಾರ್ಥಚಿಂತಾಮಣಿ’ ಗ್ರಂಥದಲ್ಲಿ:
‘‘ಪುಸ್ತಕ ಶಬ್ದಕ್ಕೆ ನಿಜವಾದ ಪುರಾತನ ಪ್ರಯೋಗದ ಉದಾಹರಣೆ ಭಾರತೀಯ ಸಾಹಿತ್ಯದಲ್ಲಿಲ್ಲ. ಪಾಣಿನೀಯ ವ್ಯಾಕರಣದಲ್ಲಿ ಪುಸ್ತ, ಬುಸ್ತ ಎಂಬ ಧಾತುಗಳಿವೆ, ಆದರೆ ಅವು ಪುಸ್ತಕಕ್ಕೆ ಸಂಬಂಧಿಸಿದವಲ್ಲ. ವರಾಹಮಿಹಿರನು ಪುಸ್ತಕ ಪದವನ್ನು ಉಲ್ಲೇಖಿಸಿರುವುದರಿಂದ ಅದು ಕ್ರಿ.ಶ 5ನೆಯ ಶತಮಾನದಲ್ಲಿ ಇಲ್ಲಿ ಪ್ರಚಾರದಲ್ಲಿತ್ತೆಂಬುದು ಖಂಡಿತ. ಆದರೆ ಅಮರಕೋಶದಲ್ಲಿ ಅದು ಕಾಣದು.
ಅನಂತರ ಬಾಣಭಟ್ಟನ ಹರ್ಷಚರಿತ ಮತ್ತು ಆಮೇಲಿನ ಕಾವ್ಯಗಳಲ್ಲಿ ಈ ಪದ ಕಾಣಿಸಿಕೊಂಡಿದೆ. ವಾಸ್ತವಿಕವಾಗಿ ಪುಸ್ತಕ ಪದ ನಮಗೆ ಬಂದದ್ದು ಪ್ರಾಚೀನ ಪಾರಸೀಕ ಭಾಷೆಯಿಂದ. ಅಲ್ಲಿಗೆ ಅದು ತುರ್ಕಿ ಭಾಷೆಯಿಂದ ಬಂದಿರಬಹುದೆಂದು ಹೇಳಲಾಗಿದೆ. ಇರಾಣ ಮತ್ತಿತರ ಮ್ಲೇಚ್ಛ ದೇಶಗಳಲ್ಲಿ ಶಾಶ್ವತ ದಾಖಲೆಗಳನ್ನು ಬರೆದಿಡುವುದಕ್ಕೆ ಉಪಯೋಗಿಸುತ್ತಿದ್ದ ಹದಮಾಡಿದ ಕುರಿ ಚರ್ಮಕ್ಕೆ ‘ಪೋಸ್ತ್’ ಎಂಬ ಪದಬಳಕೆ ಇತ್ತು. ಸುರುಳಿಸುತ್ತಿ ಕಾಪಾಡುತ್ತಿದ್ದ ಇಂಥ ಚರ್ಮಮಯ ದಾಖಲೆಗಳನ್ನು ಭಾರತೀಯರು ಇಡುತ್ತಿದ್ದರೋ ಇಲ್ಲವೋ ತಿಳಿಯದು. ಪೋಸ್ತ್ ಪದವು ಪ್ರಾಕೃತ ಭಾಷೆಯನ್ನು ಹೊಕ್ಕು ಗುಜರಾತಿ, ಹಿಂದಿಗಳಲ್ಲಿ ಅಪಭ್ರಂಶಗೊಂಡು ಪೋಥಾ, ಪೋಥೀ ಮೊದಲಾದ ರೂಪಗಳನ್ನು ಪಡೆಯಿತು. ಪ್ರಾಕೃತದಿಂದ ಕನ್ನಡಕ್ಕೂ ಬಂದು ಪೊತ್ತಗೆ, ಹೊತ್ತಗೆ ಆಯಿತು’.
ಇರಲಿ, ಪುಸ್ತಕಕ್ಕಷ್ಟೇ ಅಲ್ಲ, ಕಂಪ್ಯೂಟರ್ ಬ್ರೌಸರ್ನಲ್ಲೂ ಬುಕ್ವಾರ್ಕ್ ಬಳಕೆಯಿರುವುದರಿಂದ, ‘ಪುಟಗುರುತು’ ಹೆಚ್ಚು ಸೂಕ್ತವಾಗುವ ಕನ್ನಡ ಪದ. ಸೂಚಿಸಿದವರ ಸಂಖ್ಯೆಯ ದೃಷ್ಟಿಯಿಂದಲೂ ಇದನ್ನೇ ಆಯ್ದುಕೊಳ್ಳೋಣ. ಗುರುದತ್ತ ಎನ್., ಶ್ರೀಧರ ಸೊಪ್ಪಿಮಠ, ಜಿ.ಟಿ.ಜಯರಾಮಪ್ಪ, ಸುಜಾತಾ ಕುಲಕರ್ಣಿ, ಡಾ.ಎಚ್.ಎಸ್.ಸುರೇಶ್, ಹಿಮಾ ಹಿರೇಬೆಣಕಲ್, ಎಂ.ಎನ್.ರಮೇಶ್, ಷಡಕ್ಷರಮುನಿಶ್ರೀ, ಅರುಣ ಪೂಜೇರ, ರಮಾನಾಥ ಮೊಸಳೆ, ಸುನೀಲ್ ಪಾಟೀಲ, ಪದ್ಮಾ ಸುರೇಶ್, ಜಿ.ಎಚ್.ಸಂಕಪ್ಪ, ಮೊ.ಬ.ವೀರೇಶ, ಕೃಪಾ ಗೋಖಲೆ, ಕುಮಾರ್ ಟಿ.ಎಸ್, ಮನೋನ್ಮಣಿ ಕೆ.ವಿ., ನಾಗೇಶ ಫಾಟಕ್, ಎನ್.ಎನ್. ವಾಸುದೇವ ರಾವ್, ನರೇಂದ್ರನಾಥ ಮೈಸೂರು, ಶಂಕರ ಕುಮಾರ್, ಶೋಭಾ ತಿಪಟೂರು- ಇವರೆಲ್ಲರಿಗೂ ಅಭಿನಂದನೆಗಳು. ‘ಓದುಗುರುತು’ (ಸುರೇಂದ್ರ ಪೈ, ಪಂಪಾಪತಿ ಕೆ.ಆರ್, ಪಾರ್ವತಿ ರಾಮನ್, ಡಾ.ಸಂಗಮೇಶ ಸುರಭಿ, ವಾದಿರಾಜ ಕುಲಕರ್ಣಿ) ಸಹ ಚೆನ್ನಾಗಿದೆ.
‘ಹಾಳೆಗುರುತು’ ಎಂಬ ಪದವನ್ನೂ ಕೆಲವರು ಸೂಚಿಸಿದ್ದಾರೆ, ಆದರೆ ಕಂಪ್ಯೂಟರ್ ಬ್ರೌಸರ್ಗೆ ಪುಟಗುರುತು ಸರಿಹೊಂದುವಷ್ಟು ಹಾಳೆಗುರುತು ಸರಿಹೋಗದು. ಅದಕ್ಕಿಂತ, ‘ತಡೆಗುರುತು’ (ಸೀತಾ ವ್ಯಾಸಮುದ್ರಿ), ‘ನೆನೆಗುರುತು’ (ಮಂಜುನಾಥ ಡಿ.ಎಸ್) ಅಥವಾ ಸಂಸ್ಕೃತಛಾಯೆಯಿರುವ ‘ಸ್ಮೃಕಾ’ (ರಮೇಶ ಕಾರಂತ) ಮತ್ತು ‘ಪುಟಸ್ಮೃ’ (ನಿತ್ಯಾನಂದ ಬ್ರಹ್ಮಾವರ) ಅರ್ಥಪೂರ್ಣವಾಗಿವೆ.
ಕಳೆದಸಲ ಕೇಳಿದ್ದ ಎರಡನೆಯ ಪದ ಎಚ್ಟಚಜಛಿ. ಅಮೆರಿಕದಲ್ಲಿ ‘ಗರಾಜ್’ ಮತ್ತು ಭಾರತದಲ್ಲಿ ‘ಗ್ಯಾರೇಜ್’. ಉಚ್ಚಾರದಲ್ಲಷ್ಟೇ ಅಲ್ಲ, ಅರ್ಥವ್ಯಾಪ್ತಿಯಲ್ಲೂ ಸ್ವಲ್ಪ ವ್ಯತ್ಯಾಸವಿದೆ. ಭಾರತದಲ್ಲಿ ಗ್ಯಾರೇಜ್ ಎಂದೊಡನೆ ಕಣ್ಮುಂದೆ ಬರುವುದು ವಾಹನಗಳನ್ನು ದುರಸ್ತಿ ಮಾಡುವ ಸ್ಥಳ. ಅಮೆರಿಕದಲ್ಲಾದರೆ ಗರಾಜ್ ಎಂದರೆ ಮನೆಗೆ ಹೊಂದಿಕೊಂಡು ಅಥವಾ ಮನೆಹತ್ತಿರದಲ್ಲೇ ಪ್ರತ್ಯೇಕ ಕಟ್ಟಡದಲ್ಲಿ ವಾಹನಕ್ಕೆ ತಂಗುದಾಣ ವ್ಯವಸ್ಥೆ. ಮನೆಗೆ ಹೊಂದಿಕೊಂಡೇ ಗರಾಜ್ ಇದ್ದರೆ ಅದು ಸಾಮಾನ್ಯವಾಗಿ ಬಳಕೆಗೆ ಬಾರದ/ಬಿಸಾಡಲಿಕ್ಕೆ ಮನಸ್ಸಿಲ್ಲದ ಸರಂಜಾಮುಗಳ ಗೋದಾಮು ಆಗಿರುವುದು, ಕಾಲಿಡಲಿಕ್ಕೂ ಜಾಗವಿಲ್ಲದಷ್ಟು ಅದರೊಳಗೆ ಪೇರಿಸಿಟ್ಟಿರುವುದು, ಬಡಪಾಯಿ ಕಾರು ಬಿಸಿಲು-ಮಳೆ-ಹಿಮಗಳ ಪರಿವೆಯಿಲ್ಲದೆ ಹೊರಗಡೆ ಡ್ರೖೆವ್ವೇಯಲ್ಲಿ ನಿಂತುಕೊಂಡಿರುವುದು ಸಾಮಾನ್ಯ ದೃಶ್ಯ.
ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಅಮೆರಿಕದಲ್ಲಿ ಕುದುರೆಗಾಡಿಯೇ ಪ್ರಧಾನ ಸಾರಿಗೆವ್ಯವಸ್ಥೆ. ಮನೆಪಕ್ಕದಲ್ಲಿ ಚಿಕ್ಕದೊಂದು ಗುಡಿಸಲೇ ಗಾಡಿಗೂ ಕುದುರೆಗೂ ತಂಗುದಾಣ. ಸುಮಾರು 1912ರ ಹೊತ್ತಿಗೆ ಕಾರುಗಳ ಭರಾಟೆ ಆರಂಭ. ಕಾರು ನಿಲ್ಲಿಸಲಿಕ್ಕೊಂದು ಸೂರು ಇರುವ ಜಾಗದ ಅಗತ್ಯ ಬಂತು. ಸಿ.ಜಿ.ಜಾನ್ಸನ್ ಎಂಬಾತನ ಸಂಶೋಧನೆಯಿಂದ 1921ರ ಸುಮಾರಿಗೆ, ಮೇಲಕ್ಕೆ ಮಡಚುತ್ತ ಹೋಗುವ ಬಾಗಿಲುಳ್ಳ ಗರಾಜ್ ಸಾಕಾರಗೊಂಡಿತು. Garage ಎಂಬ ಪದಬಳಕೆ ಆಗಲೇ ಆರಂಭವಾದದ್ದು. ಇದು ಫ್ರೆಂಚ್ ಭಾಷೆಯ Garer ಎಂಬ ಪದದಿಂದ ಬಂದದ್ದು. ವಾಹನಕ್ಕೆ ಆಶ್ರಯ/ರಕ್ಷಣೆ ಎಂದು ಅರ್ಥ. ಇಂಗ್ಲಿಷ್ನಲ್ಲೂ Motor house ಎಂಬ ವಿವರಣೆ. ಹಾಗೆ ನೋಡಿದರೆ ಭಾರತದಲ್ಲಿ ‘ಗ್ಯಾರೇಜ್’ ಕೂಡ ಕೆಟ್ಟುಹೋಗಿರುವ ವಾಹನಕ್ಕೆ ದುರಸ್ತಿಯ ವೇಳೆ ಆಶ್ರಯ ನೀಡುವುದೇ ತಾನೆ?
ಆದ್ದರಿಂದ, ‘ವಾಹನಖಾನೆ’ (ಶಂಕರ್ ಎನ್.ವಿ, ಅಂಜನಾ ತುಮಕೂರು, ಪಾರ್ವತಿ ರಾಮನ್, ಪದ್ಮಾ ಸುರೇಶ್, ಜಿ.ಎಚ್.ಸಂಕಪ್ಪ, ಶ್ರೀನಾಥ್ ಕೆ.ಟಿ., ರೇವತಿ ಜೋಶಿ); ‘ವಾಹನಾಲಯ’ (ಮುರಳಿನಾಥ ಗುಪ್ತ, ಸೌಭಾಗ್ಯಾ ಸುಬ್ರಹ್ಮಣ್ಯ, ವಸುಮತಿ ಮೈಸೂರು); ‘ವಾಹನ ಲಾಯ’ (ಸುಹಾಸ್ ಮಣಿಪಾಲ, ಸತೀಶ ಕಬೇಕೋಡಿ) ಒಳ್ಳೆಯ ಪದಗಳೇ. ಆದರೆ ವಾಹನ, ಖಾನೆ, ಆಲಯ, ಗೃಹ, ನಿವಾಸಗಳೆಲ್ಲ ಅಚ್ಚಕನ್ನಡದವಲ್ಲ ಎನ್ನುವವರಿಗೆ- ‘ಬಂಡಿದಾಣ’ (ಅನಂತಕೃಷ್ಣ ಶಿವಮೊಗ್ಗ, ಡಾ.ರಾಮಪ್ರಸಾದ್ ಕೊಣನೂರು, ಪ್ರಫುಲ್ಲಾ ಕೆ.); ‘ಬಂಡಿಕೊಟ್ಟಿಗೆ’ (ರಾಜೇಂದ್ರ ಶಿವಬಸಪ್ಪ); ‘ಗಾಡಿಕೊಟ್ಟಿಗೆ’ (ಸುಜಾತಾ ಕುಲಕರ್ಣಿ, ರವಿ ನಾಡಿಗ್, ಮಲ್ಲಿಕಾರ್ಜುನ ಹರಳಾಪುರ); ‘ಗಾಡಿಗೂಡು’ (ಸುರೇಖಾ ಹೆಬ್ಬಾರ್); ‘ಗಾಡಿಬೀಡು’ (ಸೀತಾ ಶ್ರೀನಾಥ್)- ಇವುಗಳಲ್ಲಿ ಹೆಚ್ಚು ಕನ್ನಡವಿದೆ. ಉಚ್ಚರಿಸಲಿಕ್ಕೆ ಸುಲಭವಾದ್ದರಿಂದ ನಮ್ಮ ಆಯ್ಕೆ ‘ಬಂಡಿಮನೆ’ (ಗಿರೀಶ್ ಎ.ವಿ., ಕೃಷ್ಣಪ್ರಸಾದ್) ಮತ್ತು ‘ಗಾಡಿಮನೆ’ (ಸುನಂದಾ ಹಾಲಭಾವಿ, ಡಾ.ಎಚ್.ಎಸ್.ಸುರೇಶ್, ಸಬಿತಾ ಶೆಣೈ).
ಕೊನೆಯದಾಗಿ Ragging ಪದಕ್ಕೆ ಬಂದಿರುವ ‘ಹಿಂಸಾ ವಿನೋದ’ (ಹರೀಶ ಕೆ.ಎಸ್, ಎಂ.ಕೆ.ರಮೇಶ್), ‘ಹಿಂಸಾ ರತಿ’(ರಮೇಶ ಕಾರಂತ), ‘ಹಿಂಸಾತ್ಮಕ ಪೀಡನೆ’ (ಶಿವಾನಂದ ಸಂಡೂರ್), ‘ಚಿತ್ತಹಿಂಸೆ’(ಸೀತಾ ಶ್ರೀನಾಥ್) ಪದಗಳಲ್ಲಿ ರ್ಯಾಗಿಂಗ್ನಲ್ಲಿರುವ ಹಿಂಸೆ ಬಿಂಬಿತವಾಗಿದೆ. ‘ವಿಕೃತ ವಿನೋದ’ (ಆರ್.ವಿ. ಮೂರ್ತಿ, ನಳಿನಿ ಭಟ್, ಶಾಂತಿನಿ ಮಂಜುನಾಥ್) ಅದೊಂದು ವಿಕೃತವೆಂದು ಸೂಚಿಸುತ್ತದೆ. ಮಿತಿಮೀರಿದ ರ್ಯಾಗಿಂಗ್ನಲ್ಲಿ ಹಿಂಸೆ, ವಿಕೃತಗಳು ಇರುವುದೇನೋ ಹೌದು. ಆದರೂ ಒಟ್ಟಾರೆಯಾಗಿ ರ್ಯಾಗಿಂಗ್ ಅಂದರೆ ಹಿರಿಯ ವಿದ್ಯಾರ್ಥಿಗಳು ಕಿರಿಯರನ್ನು/ಹೊಸಬರನ್ನು ಗೋಳು ಹೊಯ್ದುಕೊಳ್ಳುವುದು. ಆದ್ದರಿಂದ ‘ಗೋಳುಹೊಯ್ದಾಟ’ (ಪ್ರಮೋದ ಕಟ್ಟಿ, ದತ್ತಾತ್ರಿ ಸಾಮಗ, ಉಷಾಕಿರಣ್ ಅತ್ತಾವರ) ಆಯ್ಕೆ ಮಾಡಬಹುದಾದ ಪದ.
ಕನ್ನಡ ಪದ ಕಟ್ಟುವಿಕೆ ಒಂದು ಕೌಟುಂಬಿಕ ಚಟುವಟಿಕೆ ಆಗಿರುವುದು, ಮನೆಮಂದಿಯೆಲ್ಲ ಒಟ್ಟಾಗಿ ಭಾಗವಹಿಸುತ್ತಿರುವುದು ಕಂಡಾಗ ಸಂತೋಷವಾಗುತ್ತದೆ. ‘ಬೆಳಗೆದ್ದು ಅವಸರವಸರವಾಗಿ ದಿನಪತ್ರಿಕೆ ಮೇಲೆ ಕಣ್ಣಾಡಿಸಿದಾಗ ಸುದ್ದಿಗಳಿಗಿಂತ ಹೆಚ್ಚು ಆಕರ್ಷಿಸಿದ್ದು ಈ ಅಂಕಣ. ಕುಡಿಯಲು ಇಟ್ಟ ಚಹಾ ತಣ್ಣಗಾಗುವುದರ ಅರಿವಿದ್ದರೂ ಇದನ್ನು ಒಮ್ಮೆಲೇ ಪೂರ್ತಿ ಓದಿಬಿಡಬೇಕೆಂಬ ಹಪಹಪಿ.
ಮುಂದುವರಿಯುತ್ತ ಕೊನೆಯಲ್ಲಿ ಕೊಟ್ಟಿದ್ದ ಮೂರು ಆಂಗ್ಲ ಪದಗಳತ್ತ ಚಿತ್ತ. ಅವು ಒಂದೊಮ್ಮೆ ತೀರಾ ಹತ್ತಿರವೆನಿಸಿದರೂ, ಒಂದಷ್ಟು ಸಮಾನಾರ್ಥಕ ಪದಗಳು ಹೊಳೆದರೂ ಆಪ್ತವಾದ ಕನ್ನಡ ಪದ ತಲೆಗೆ ಹೊಳೆಯಲಿಲ್ಲ. ವಾಟ್ಸ್ಆಪ್ನಲ್ಲಿ ನಮ್ಮ ಫ್ಯಾಮಿಲಿ ಗ್ರೂಪ್ಗೆ ಕರೆ ಮಾಡಿದಾಗ ಸಿಂಗಾಪುರದಲ್ಲಿರುವ ದೊಡ್ಡಮಗಳು ಹಾಗೂ ಬೆಂಗಳೂರಿನಲ್ಲಿರುವ ಚಿಕ್ಕಮಗಳಿಬ್ಬರೂ ಏನಮ್ಮಾ ಆರೋಗ್ಯ ಸರಿ ಇಲ್ಲಾ್ವ ಇಷ್ಟು ಬೆಳಗ್ಗೆ ಕರೆ ಮಾಡಿದ್ದೇಕೆ ಎಂದು ಗಾಬರಿಪಟ್ಟರು. ಏನೂ ಇಲ್ಲ ನನಗೆ ಮೂರು ಆಂಗ್ಲ ಪದಗಳಿಗೆ ಅರ್ಥವತ್ತಾದ ಕನ್ನಡ ಪದ ಬೇಕಿತ್ತು ಎಂದೆ! ಆಮೇಲೆ ಮೂವರೂ ಮಾತನಾಡುತ್ತ ಪದಗಳ ಹುಡುಕಾಟ ನಡೆಸಿದೆವು...’ ಎಂದು ಉಡುಪಿಯ ಪೂರ್ಣಿಮಾ ಜನಾರ್ದನ್ ಬರೆದರೆ, ‘ನಾನು ನನ್ನತ್ತೆ ಇಬ್ಬರೂ ಸೇರಿ ಪದಗಳನ್ನು ಹುಡುಕುತ್ತೇವೆ. ಕನ್ನಡದಲ್ಲಿ ಟೈಪ್ ಮಾಡಲು ಅವರಿಗೆ ಕಷ್ಟವಾಗುತ್ತದೆಂದು ನಾನೇ ಟೈಪ್ ಮಾಡಿ ಅವರ ಫೋನ್ಗೆ ಕಳುಹಿಸುತ್ತೇನೆ. ಅವರು ನಿಮಗೆ ಕಳುಹಿಸುತ್ತಾರೆ’ ಎನ್ನುತ್ತಾರೆ ಕೃಪಾ ಗೋಖಲೆ. ‘ಅತ್ತೆಗೊಂದು ಕಾಲ ಸೊಸೆಗೊಂದು ಕಾಲ’ ಎಂಬ ಹಳೆಯ ಗಾದೆ, ಈಗ ‘ಅತ್ತೆಗೂ ಸೊಸೆಗೂ ಒಂದೇ ಕಾಲ(ಮ್) ಅಂತಾಯ್ತು!
1. Bracelet: ಬಳೆಯೆಂದರೆ ಬಳೆಯೂ ಅಲ್ಲ, ಕೈಕಡಗವೆಂದರೆ ಅದೂ ಅಲ್ಲ. ಹಾಗಿದ್ದರೆ ಈ ಹಸ್ತಾಭರಣವನ್ನು ಕನ್ನಡದಲ್ಲಿ ಏನನ್ನೋಣ?
2. Breaking News: ಸುದ್ದಿವಾಹಿನಿಗಳಿಗಂತೂ ಪ್ರತಿಯೊಂದೂ ಬ್ರೇಕಿಂಗ್ ನ್ಯೂಸ್. ಸಮಾಜವನ್ನು ಒಡೆಯುವ, ಭಾಷೆಯನ್ನು ಕಡಿಯುವ ಅವುಗಳಿಗದು ಅನ್ವರ್ಥನಾಮ. ಅಚ್ಚಕನ್ನಡದಲ್ಲಿ ಬ್ರೇಕಿಂಗ್ ನ್ಯೂಸ್ ಸಾಧ್ಯವಿಲ್ಲವೇ?
3. Honeytrap: ‘ಪ್ರಭಾವಿ ಸಚಿವರೊಬ್ಬರು ಹನಿಟ್ರಾ್ಯಪ್ ಖೆಡ್ಡಾಗೆ ಬಿದ್ದಿದ್ದಾರೆ’, ‘ವಿಧಾನಮಂಡಲದಲ್ಲೂ ಹನಿಟ್ರಾ್ಯಪ್ ಸದ್ದು!’ ರೀತಿಯ ಸುದ್ದಿಗಳು ನಿತ್ಯದ ಮಾತಾಗಿವೆ. ಹನಿಟ್ರಾ್ಯಪ್ ಕನ್ನಡದಲ್ಲಿ ಸಿಹಿಯಾಗದೇನು?
ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್ಆಪ್ ಸಂಖ್ಯೆ: +12404010945
(ಲೇಖಕರು ಅಮೆರಿಕದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಮತ್ತು ಅಂಕಣ ಬರಹಗಾರರು)