ಕೆಲವೊಮ್ಮೆ ಕ್ರಾಂತಿಕಾರಿಗಳ ಬದುಕನ್ನು ನೋಡುವಾಗ ಅಚ್ಚರಿ ಎನಿಸುತ್ತದೆ. ಅವರಿಗೆ ತಮ್ಮ ವೈಯಕ್ತಿಕವಾದ ಭವಿಷ್ಯದ ಕುರಿತಂತೆ ಇನಿತೂ ಕಾಳಜಿ ಇರಲಿಲ್ಲ. ಸದಾ ವಿಸ್ತಾರವಾದ ರಾಷ್ಟ್ರದ ಸಾರ್ವಭೌಮತೆ ಕುರಿತಂತೆಯೇ ಚಿಂತಿಸುತ್ತ ಅದಕ್ಕಾಗಿ ತಾನು ಮಾಡಬೇಕಾದ ತ್ಯಾಗಗಳ ಕುರಿತಂತೆ ಆಲೋಚಿಸುತ್ತ ಮೈಮರೆತುಬಿಡುತ್ತಿದ್ದರು. ಅಷ್ಟೇ ಅಲ್ಲ, ಸೂಕ್ತ ಸಮಯ ಬಂದಾಗ ಕಠಿಣವಾದ ಬಂದೂಕಿನ ಹಾದಿಯನ್ನು ತಮ್ಮದಾಗಿಸಿಕೊಂಡು ಹೆಜ್ಜೆಯಿಡುತ್ತ ಬ್ರಿಟಿಷರ ಗುಂಡಿಗೆ ಬಲಿಯಾಗುತ್ತಿದ್ದರು. ಅಥವಾ ನೇಣುಗಂಬದೆದುರು ನಿಂತು ಉರುಳನ್ನು ಚುಂಬಿಸಿ ಕೊರಳಿಗೆ ಧರಿಸಿಕೊಂಡುಬಿಡುತ್ತಿದ್ದರು. ಈ ತ್ಯಾಗ, ಬಲಿದಾನಗಳಿಗೆ ಸಮಾಜದಿಂದ ಗೌರವವಾದರೂ ದೊರೆಯುತ್ತಿತ್ತೇನು? ಖಂಡಿತ ಇಲ್ಲ. ಬ್ರಿಟಿಷರನ್ನು ಭಾರತ ಬಿಟ್ಟು ಓಡಿಸುವುದು ಸಾಧ್ಯವೇ ಇಲ್ಲ ಎಂದು ನಿಶ್ಚಯ ಮಾಡಿಕೊಂಡುಬಿಟ್ಟಿದ್ದ ಅನೇಕ ಮಂದಿ ಈ ವ್ಯರ್ಥ ಪ್ರಯತ್ನಗಳನ್ನು ಮೂದಲಿಸುತ್ತಿದ್ದರು. ಆಳುವ ನಾಯಕರ ಕಡೆಗಣ್ಣ ನೋಟಕ್ಕಾದರೂ ಪಾತ್ರರಾದರೆ ಸಾಕು ಎಂದು ಎಂಜಲು ಸುರಿಸುತ್ತ ಈ ಬಲಿದಾನಿಗಳ ವಿರುದ್ಧವೇ ಕೆಲಸ ಮಾಡುತ್ತಿದ್ದರು. ಇಂಥದ್ದರ ನಡುವೆಯೂ ಏಕಪ್ರಕಾರವಾಗಿ ಮುನ್ನುಗ್ಗುವ ಕ್ರಾಂತಿಕಾರಿಗಳ ಛಾತಿ ನಿಜಕ್ಕೂ ಅಪರೂಪದ್ದು.
ಫಡ್ಕೆಯದ್ದು ಅಂತಹ ರೋಚಕ ಕಥನವೇ. ತಾತನಿಂದ ದೇಶಪ್ರೇಮದ ಸುಧೆಯನ್ನು ಕುಡಿದ ವಾಸುದೇವ ಶಾಲೆಯಿಂದ ದೂರವುಳಿಯಲು ಹೆಚ್ಚು ಬಯಸುತ್ತಿದ್ದ. ಆದರೆ ಆತನಿಗೆ ನಿಜವಾಗಿಯೂ ಶಾಲೆಯ ಮೇಲೆ ಪ್ರೀತಿ ಉಂಟಾಗುವ ವೇಳೆಗೆ ತಂದೆಗೆ ಸಾಕು ಸಾಕಾಗಿತ್ತು. ಮಗನನ್ನು ಶಾಲೆ ಬಿಡಿಸಿ ಕೆಲಸಕ್ಕೆ ಹಚ್ಚುವ ಪ್ರಯತ್ನ ಆರಂಭಿಸಿದರು. ಈ ವೇಳೆಗಾಗಲೇ ಓದುವ ಹಂಬಲವನ್ನು ತೀವ್ರಗೊಳಿಸಿಕೊಂಡಿದ್ದ ವಾಸುದೇವ ಮನೆಬಿಟ್ಟು ಓಡಿಹೋದ. ಓದುತ್ತಲೇ ಕೆಲಸ ಮಾಡಲಾರಂಭಿಸಿದ. ಬ್ರಿಟಿಷರ ಮಿಲಿಟರಿ ಕಚೇರಿಯಲ್ಲಿ ಕಾರಕೂನನಾಗಿ ಕೆಲಸ ನಿರ್ವಹಿಸುತ್ತಿದ್ದ ಅವನ ಬದುಕು ತಿರುವು ಪಡೆದುಕೊಂಡಿದ್ದು ಆ ಒಂದು ಘಟನೆಯಿಂದಾಗಿ. ಮರಣಶಯ್ಯೆಯಲ್ಲಿದ್ದ ತಾಯಿಯನ್ನು ನೋಡಲು ಮೇಲಧಿಕಾರಿಗಳು ರಜೆ ಕೊಡಲಿಲ್ಲ. ಕೆಲವು ದಿನ ಕಾದು ಆನಂತರ ರಾಜೀನಾಮೆಯನ್ನು ಅಧಿಕಾರಿಯ ಮೇಜಿನ ಮೇಲೆಸೆದು ಹೋಗಿಬಿಟ್ಟ ವಾಸುದೇವ. ಸ್ವಲ್ಪ ತಡವಾಗಿತ್ತು. ತಾಯಿ ಆಗತಾನೇ ದೇಹತ್ಯಾಗ ಮಾಡಿದ್ದರು. ಆಕೆಯ ವಾರ್ಷಿಕ ತಿಥಿಯ ಪರಿಸ್ಥಿತಿಯೂ ಹೀಗೇ ಆಯ್ತು. ಆಗ ರಜಾಚೀಟಿ ಎಸೆದೇ ಅವನು ಬಂದಿದ್ದ. ಈ ಒಂದು ಘಟನೆ ಅವನಿಗೆ ಸಾಕಾಯ್ತು. ತನ್ನ ತಾಯಿ ಮತ್ತು ಭಾರತಾಂಬೆಯನ್ನು ಸಮೀಕರಿಸಿ ನೋಡಿದ. ತಾಯಿಯನ್ನು ಕಳೆದುಕೊಂಡಿದ್ದೇನೆ ತಾಯಿ ಭಾರತಿಯನ್ನು ಕಳೆದುಕೊಳ್ಳಲಾರೆ ಎಂದು ನಿಶ್ಚಯಿಸಿದ. ಅದಾಗಲೇ ಮದುವೆಯಾಗಿ ಒಂದು ಮಗುವಿತ್ತು. ಸದಾ ಈ ಚಿಂತನೆಯಲ್ಲೇ ಮೈಮರೆತಿರುತ್ತಿದ್ದ ವಾಸುದೇವ ಸಂಸಾರವನ್ನು ಸಂಭಾಳಿಸಿಕೊಳ್ಳುವುದರಲ್ಲಿ ಸೋತನೆಂದೇ ಹೇಳಬೇಕು. ಈ ಬಗೆಯ ಮಂದಿ ಊರಿಗೆ ಉಪಕಾರಿಯಾಗಿರುವುದು ಹೊಸತೇನೂ ಅಲ್ಲ. ತ್ಯಾಗ ಮತ್ತು ಬಲಿದಾನಗಳ ಹಾದಿಯ ಮೇಲೆ ನಡೆಯುವ ವ್ಯಕ್ತಿ ಮೊದಲು ಕೊಡಲಿ ಏಟು ಕೊಡುವುದು ಪರಿವಾರದ ಸಂಬಂಧಗಳಿಗೇ. ಮೊದಲ ಹೆಂಡತಿಯನ್ನು ಕಳೆದುಕೊಂಡ ನಂತರ ಮಗುವಿನ ಆರೈಕೆಗೆಂದು ಎರಡನೇ ಮದುವೆಯಾಗಬೇಕಾಗಿ ಬಂತು. ಪರಮಸಾಧಿ್ವುಂತಿದ್ದ ಆಕೆ ಎಂದಿಗೂ, ಯಾವುದಕ್ಕೂ ವಾಸುದೇವನನ್ನು ಪೀಡಿಸಿದವಳೇ ಅಲ್ಲ. ಎಂದಾದರೊಮ್ಮೆ ಸಂಸಾರದತ್ತ ಮುಖ ತಿರುಗಿ ಕುಳಿತ ವಾಸುದೇವನಿಗೆ ತನ್ನ ಪತ್ನಿಗೆ ತಾನು ಮಾಡಿದ ದ್ರೋಹದ ಕುರಿತಂತೆ ಅರಿವಾಗಿ ಕಣ್ಣೀರು ಬರುತ್ತಿತ್ತಂತೆ. ಆದರೇನು? ಹಿಡಿದ ಆದರ್ಶದ ಮಾರ್ಗ ಬಲುದೊಡ್ಡದ್ದಲ್ಲವೇ! ಆತ ಎಲ್ಲವನ್ನೂ ಪಕ್ಕಕ್ಕೆ ಸರಿಸಿ ದಾಪುಗಾಲಿಟ್ಟು ನಡೆದ.
ರಾಮೋಶಿಗಳ ಪಡೆಯನ್ನು ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಡುವ ಪ್ರಯತ್ನ ಮಾಡಿದ. ಕಾಡಿನಲ್ಲಿರುತ್ತಿದ್ದ ಈ ರಾಮೋಶಿಗಳನ್ನು ಬ್ರಿಟಿಷರು ದರೋಡೆಕೋರರೆಂಬ ಗುಂಪಿಗೆ ಸೇರಿಸಿಬಿಟ್ಟಿದ್ದರು. ರಾಮೋಶಿಗಳ ಬದುಕು ಅಸಹನೀಯವಾಗಿಬಿಟ್ಟಿತ್ತು. ಇದನ್ನೇ ಮುಂದಿಟ್ಟುಕೊಂಡು ಅವರನ್ನು ಸಂಘಟಿಸಿದ ವಾಸುದೇವ ನೇತೃತ್ವವಹಿಸಿ ಹಳ್ಳಿ-ಹಳ್ಳಿಗಳಲ್ಲಿ ಬ್ರಿಟಿಷರ ಪರವಾಗಿದ್ದ ಜಮೀನ್ದಾರರ ಲೂಟಿ ಮಾಡಲಾರಂಭಿಸಿದ. ಅನೇಕ ಬಾರಿ ಸಿರಿವಂತರನ್ನು ಲೂಟಿ ಮಾಡುವಾಗ ‘ಸ್ವಾತಂತ್ರ್ಯ ಸಿಕ್ಕ ನಂತರ ನಿಮ್ಮ ಹಣವನ್ನೆಲ್ಲ ಮರಳಿ ಕೊಟ್ಟುಬಿಡುವೆ’ ಎಂದು ಹೇಳಿ ಬರುತ್ತಿದ್ದನಂತೆ ಆತ. ದಿನೇದಿನೇ ಬ್ರಿಟಿಷರ ಕಿವಿಗೆ ಅಪ್ಪಳಿಸುತ್ತಿದ್ದ ಈ ದರೋಡೆಯ ಸುದ್ದಿಗಳು ನಿದ್ದೆ ಹಾರಿಸಿದ್ದವು. ದರೋಡೆ ಮಾಡುತ್ತಿರುವುದು ರಾಮೋಶಿಗಳೆಂಬುದು ಎಲ್ಲರಿಗೂ ಗೊತ್ತಿತ್ತು. ಅದರ ನೇತೃತ್ವ ವಹಿಸಿದವರು ಯಾರೆಂಬುದು ಮಾತ್ರ ಯಾರಿಗೂ ಅರಿವಿರಲಿಲ್ಲ.
ಇವಿಷ್ಟನ್ನೂ ಓದಿದ ನಂತರ ವಾಸುದೇವ ಬಲವಂತ ಫಡ್ಕೆ ದಾರಿತಪ್ಪಿದ ದೇಶಭಕ್ತನೆಂದು ಭಾವಿಸಿಬಿಡಬೇಡಿ. ಆತ ಬೌದ್ಧಿಕವಾಗಿಯೂ ಚುರುಕಾಗಿದ್ದ. ಸಿದ್ಧಾಂತಗಳ ಮೇಲೆ ಚರ್ಚೆ ಮಾಡಬಲ್ಲಷ್ಟು ಸಾಮರ್ಥ್ಯ ಬೆಳೆಸಿಕೊಂಡಿದ್ದ. ಸಾರ್ವಜನಿಕವಾಗಿ ‘ಕಾಕಾ’ ಎಂದೇ ಖ್ಯಾತರಾದ ಗಣೇಶ್ ವಾಸುದೇವ ಜೋಷಿ ಮತ್ತು ಗೋವಿಂದ ರಾನಡೆಯವರ ಗರಡಿಯಲ್ಲಿ ಪಳಗಿದವ ಆತ. ಪತ್ರಿಕಾ ವರದಿಗಳನ್ನು, ಬ್ರಿಟಿಷರ ನೀತಿಗಳನ್ನು, ನಮ್ಮ ದೌರ್ಬಲ್ಯವನ್ನು, ಹೋರಾಟದ ಹಾದಿಯನ್ನು ವಿವರವಾಗಿ ರ್ಚಚಿಸುತ್ತಿದ್ದ ವಾಸುದೇವ ರಾಷ್ಟ್ರದ ಮುಕ್ತಿಯ ಹಂಬಲವನ್ನು ತೀವ್ರವಾಗಿಯೇ ಬೆಳೆಸಿಕೊಂಡಿದ್ದ. ಮಿಲಿಟರಿ ಕಚೇರಿಯಲ್ಲೇ ಕೆಲಸಕ್ಕಿದ್ದುದರಿಂದ ಪೊಲೀಸರ ಚಲನ-ವಲನಗಳು, ಗೂಢಚಾರರು ತರುತ್ತಿದ್ದ ಮಾಹಿತಿಗಳು ಇವು ಅವನಿಗೆ ಮೊದಲೇ ಗೊತ್ತಾಗುತ್ತಿತ್ತು. ಹೀಗಾಗಿ ಯೋಜನೆಗಳನ್ನು ರೂಪಿಸುವುದೂ ಅವನಿಗೆ ಸಲೀಸಾಗಿತ್ತು. ಬ್ರಿಟಿಷರ ಕಣ್ಣಳತೆಯ ದೂರದಲ್ಲೇ ಇದ್ದು ಅವರ ಕಣ್ಣುಕೀಳುವ ಸಂಚು ರೂಪಿಸಿದ್ದ ಫಡ್ಕೆಯ ಸಾಮರ್ಥ್ಯ ಎಷ್ಟಿದ್ದಿರಬೇಕು ಒಮ್ಮೆ ಆಲೋಚಿಸಿ ನೋಡಿ.
ಬ್ರಿಟಿಷರ ನಿದ್ದೆ ಫಡ್ಕೆಯ ಕಾರಣಕ್ಕೆ ಹಾರಿಹೋಗಿತ್ತು. ಹಾಗೆ ನೋಡಿದರೆ, ಭಾರತದಲ್ಲಿ ಬ್ರಿಟಿಷರು ನೆಮ್ಮದಿಯ ನಿದ್ದೆ ಮಾಡಿದ್ದು ಕಡಿಮೆಯೇ. 1857ರ ಸಂಗ್ರಾಮದ ನೆನಪು ಅವರನ್ನು ಉದ್ದಕ್ಕೂ ಕಾಡುತ್ತಿತ್ತು. ಈ ಬಾರಿ ಅದು ಮತ್ತೆ ಆಸ್ಪೋಟಿಸಿದರೆ ಬದುಕು ಕಷ್ಟ ಎಂಬುದೂ ಗೊತ್ತಿತ್ತು. ರಾಮೋಶಿಗಳ ಈ ಹೋರಾಟ ಬರಿಯ ದರೋಡೆಯಾಗಿರದೆ ಅದರ ಹಿಂದೆ ಸಮರ್ಥ ಉದ್ದೇಶವನ್ನು ಅವರು ಗುರುತು ಹಚ್ಚಿದ್ದರು. ಹೀಗಾಗಿಯೇ ನಾಯಕನನ್ನು ಹಿಡಿಯುವ ಪ್ರಯತ್ನ ಆರಂಭವಾಯ್ತು. ಸಿಕ್ಕಿಬಿದ್ದ ರಾಮೋಶಿಯೊಬ್ಬ ಬಾಯ್ಬಿಟ್ಟ. ತಮಗೆ ಪ್ರೇರಣೆಕೊಟ್ಟು ನೇತೃತ್ವ ವಹಿಸಿರುವ ನಾಯಕ ಮಿಲಿಟರಿ ಕಚೇರಿಯಲ್ಲೇ ಕೆಲಸ ಮಾಡುತ್ತಿದ್ದಾನೆ ಎಂದುಬಿಟ್ಟ. ಹುಡುಕಾಟ ನಡೆಸಿದಾಗ ಅದು ಫಡ್ಕೆಯೇ ಎಂಬುದು ಅರಿವಾಯ್ತು. ಆದರೆ ಫಡ್ಕೆ ಆ ವೇಳೆಗೆ ಕೆಲಸಕ್ಕೆ ಬರುವುದನ್ನು ನಿಲ್ಲಿಸಿಬಿಟ್ಟಿದ್ದ. ಈಗವನು ಮತ್ತೆ ಮರಳುವಂತೆಯೂ ಇರಲಿಲ್ಲ. ಪತ್ನಿ ಮತ್ತು ಮಗುವನ್ನು ತವರುಮನೆಗೆ ಕಳಿಸಿ ನಿಶ್ಚಿಂತನಾಗಿಬಿಟ್ಟ. ಕಾಡುಜನ ರಾಮೋಶಿಗಳೇ ಅವನಿಗೆ ಆಶ್ರಯ ಮತ್ತು ಅನ್ನ ಕೊಡುವವರಾಗಿಬಿಟ್ಟರು. ಈಗ ಕಾರ್ಯ ಚಟುವಟಿಕೆ ತೀವ್ರವಾಗಿ ಸಾಗಲಾರಂಭಿಸಿತು. ಬ್ರಿಟಿಷರಿಗೂ ಎಷ್ಟರಮಟ್ಟಿಗೆ ಕಿರಿಕಿರಿಯಾಯ್ತೆಂದರೆ ಗವರ್ನರ್ ರಿಚರ್ಡ್ ಟೆಂಪಲ್ ಫಡ್ಕೆಯ ಸುಳಿವು ಕೊಟ್ಟವರಿಗೆ ಸಾವಿರ ರೂಪಾಯಿ ಬಹುಮಾನ ಘೊಷಿಸಿದ. ಮರುದಿನವಾಗುವುದರಲ್ಲೇ ಈ ಘೊಷಣಾ ಭಿತ್ತಿಪತ್ರಗಳ ಬದಿಯಲ್ಲೇ ರಿಚರ್ಡ್ ಟೆಂಪಲ್ ತಲೆತಂದುಕೊಟ್ಟವರಿಗೆ ನಾಲ್ಕುಸಾವಿರ ಬಹುಮಾನ ಎನ್ನುವ ಫಡ್ಕೆಯ ಸಹಿಯಿದ್ದ ಭಿತ್ತಿಪತ್ರಗಳು ರಾರಾಜಿಸಿದವು. ಬ್ರಿಟಿಷರ ಮುಖದಲ್ಲಿ ಆತಂಕದ ರೇಖೆಗಳು ಕಾಣಲಾರಂಭಿಸಿದವು. ಇದು ಪುಣೆಯ ಜನರಲ್ಲಿ ಉತ್ಸಾಹವನ್ನು ತಂದಿತು.
ಫಡ್ಕೆ ಈಗ ಬ್ರಿಟಿಷರಿಗೆ ಮರ್ವಘಾತ ಕೊಡುವ ಹೊತ್ತು. ಆತ ಬ್ರಿಟಿಷರ ಕಚೇರಿಗೆ ಬೆಂಕಿ ಹಚ್ಚುವ ಯೋಜನೆ ರೂಪಿಸಿದ, ಚಾಕಚಕ್ಯತೆಯಿಂದ ಅದನ್ನು ಸಾಧಿಸಿಕೊಂಡೂಬಿಟ್ಟ. ಕಚೇರಿಯೊಳಗಿನ ಗ್ರಂಥಾಲಯದ ಮೂಲಕ ಹಾದುಹೋಗುವ ಯೋಜನೆ ಅವನದ್ದು. ಅದಕ್ಕಾಗಿ ಪಕ್ಕದಲ್ಲೇ ಇದ್ದ ಪುಸ್ತಕದಂಗಡಿಯ ಮಾಲೀಕರ ಮಗನ ಸಂಪರ್ಕ ಬೆಳೆಸಿ ಕಾರ್ಯ ಸಾಧಿಸಿಕೊಂಡ ಫಡ್ಕೆ ಬ್ರಿಟಿಷ್ ಕಚೇರಿ ಉರಿದುಹೋಗುವಂತೆ ಮಾಡಿ ಜನರ ಹೃದಯದಲ್ಲಿ ಸ್ವಾತಂತ್ರ್ಯ ಜ್ವಾಲೆ ಮತ್ತೆ ಜಾಗೃತಗೊಳಿಸಿದ. ಗಾಬರಿಗೊಂಡ ಪೊಲೀಸರು ಬೆಂಕಿಯ ಮೂಲ ಹುಡುಕಿಕೊಂಡು ಬಂದಾಗ ಅದು ಪುಸ್ತಕದಂಗಡಿಗೆ ಬಂದು ನಿಂತಿತ್ತು. ವಾಸುದೇವ ತನ್ನ ಮಗನ ಗೆಳೆತನ ಬೆಳೆಸಿಕೊಂಡು ಈ ಕೃತ್ಯವೆಸಗಿದ್ದಾನೆ ಎಂದರಿವಾದಾಗ ಆತನಿಗೆ ಬೇಸರವಾಗಲಿಲ್ಲ. ಬದಲಿಗೆ ಈ ಕೃತ್ಯಕ್ಕೆ ತನ್ನ ಮಗನನ್ನು ಆರಿಸಿಕೊಂಡ ಎಂದು ಸಂತುಷ್ಟನಾದ. ಯಾವ ಕಾರಣಕ್ಕೂ ಫಡ್ಕೆಯ ವಿರುದ್ಧ ಸಾಕ್ಷಿ ಹೇಳದೆ ‘ಪುಸ್ತಕದಂಗಡಿಯ ಲೆಕ್ಕಾಚಾರಗಳು ಏರುಪೇರಾಗಿತ್ತು. ಅದನ್ನು ಮರೆಮಾಚಲೆಂದು ಕಡತಗಳಿಗೆ ನಾನೇ ಬೆಂಕಿ ಇಟ್ಟೆ. ಹೀಗಾಗುವುದೆಂಬ ಅರಿವಿರಲಿಲ್ಲ’ ಎಂದು ತಾನೇ ಶಿಕ್ಷೆ ಅನುಭವಿಸಿದ. ಆದರೆ ಪ್ರತಿಯೊಬ್ಬ ಬ್ರಿಟಿಷ್ ಅಧಿಕಾರಿಗೂ ಇದು ಹೀಗೆ ನಡೆದದ್ದಲ್ಲವೆಂದು ಗೊತ್ತೇ ಇತ್ತು. ಡೇನಿಯಲ್ ಎಂಬ ಅಧಿಕಾರಿಯನ್ನು ವಿಶೇಷವಾಗಿ ಆಹ್ವಾನಿಸಲಾಯ್ತು. ಆತ ತೋಳದಂತೆ ಫಡ್ಕೆಯ ಹಿಂದೆ ಮುಗಿಬಿದ್ದ. ಅವನಿಂದ ತಪ್ಪಿಸಿಕೊಳ್ಳುತ್ತ ರಾಷ್ಟ್ರಕೈಂಕರ್ಯವನ್ನು ಬಿಡದೇ ನಡೆಸುತ್ತಿದ್ದ ಫಡ್ಕೆ ಒಂದು ಹಂತದಲ್ಲಿ ಆಪ್ತರನ್ನೆಲ್ಲ ಕಳಕೊಂಡು ಭೀಮಾತೀರದ ಗಾಣಗಾಪುರದಲ್ಲಿ ವೇಷ ಮರೆಸಿಕೊಂಡು ಕಾಲಯಾಪನೆ ಮಾಡುತ್ತಿದ್ದ. ಇಲ್ಲಿಯೂ ಸೇನೆಯೊಂದನ್ನು ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಡುವ ಯೋಜನೆ ರೂಪಿಸುತ್ತಿರುವಾಗಲೇ ಡೇನಿಯಲ್ಗೆ ವಾಸುದೇವನ ಇರುವಿಕೆ ಬಗ್ಗೆ ಸುಳಿವು ಸಿಕ್ಕಿತು. ತೀವ್ರಜ್ವರದಿಂದ ಬಳಲುತ್ತಿದ್ದರೂ ಭೀಮೆಯನ್ನು ದಾಟಿ ಗೆಳೆಯನೊಬ್ಬನ ಭರವಸೆ ಮೇರೆಗೆ ಮಂದಿರವೊಂದರಲ್ಲಿ ನಿದ್ರೆಗೆ ಜಾರಿದ. ಆಗ ಅದೇ ಗೆಳೆಯನ ಮೋಸದ ಕಾರಣದಿಂದ ಡೇನಿಯಲ್ನ ವಶವಾದವ ವಾಸುದೇವ! ಮಲಗಿದ ಸಿಂಹವನ್ನು ಹಿಡಿದು ಬ್ರಿಟಿಷರು ಮೆರೆದಾಡಿದರು. ಸಿಂಹದಂತೆಯೇ ಬೋನಿನೊಳಗೆ ಕೂಡಿಹಾಕಿಕೊಂಡು ಅವನನ್ನು ಎಳೆದುಕೊಂಡು ಬಂದರು. ಜನ ಅವನ ದರ್ಶನಭಾಗ್ಯಕ್ಕೆ ಕಾತರದಿಂದ ಕಾಯುತ್ತಿದ್ದರು. ವಾಸುದೇವನಿಗೆ ನೇಣುಶಿಕ್ಷೆ ಘೊಷಣೆಯಾಯಿತು. ಗಣೇಶ್ ವಾಸುದೇವ ಜೋಷಿ ಅವರು ವಾಸುದೇವನ ಪರವಾಗಿ ವಾದಕ್ಕೆಂದು ಎದ್ದುನಿಂತು ಅದನ್ನು ಜೀವಾವಧಿ ಶಿಕ್ಷೆಗೆ ಬದಲಾಯಿಸಿದರು. ದೂರದ ಏಡನ್ನಿನಲ್ಲಿ ಈ ಶಿಕ್ಷೆಯನ್ನು ಅನುಭವಿಸುತ್ತ ಕೆಟ್ಟ ಪರಿಸರದಲ್ಲಿ ಬದುಕು ಸವೆಸುತ್ತ ಅಲ್ಲಿಂದಲೂ ತಪ್ಪಿಸಿಕೊಳ್ಳುವ ವಿಫಲ ಪ್ರಯತ್ನ ಮಾಡಿ ನಾಲ್ಕು ವರ್ಷಗಳ ನಂತರ ಅನಾರೋಗ್ಯ ಪೀಡಿತನಾಗಿ ಪ್ರಾಣಬಿಟ್ಟ!
ಈ ದೇಶದ ಬಹುತೇಕರಿಗೆ ವಾಸುದೇವ ಗೊತ್ತೇ ಇಲ್ಲ. 1857ರ ಸಂಗ್ರಾಮದ ನಂತರ ಬ್ರಿಟಿಷರ ವಿರುದ್ಧ ಸೊಲ್ಲೆತ್ತಲು ಅಂಜುತ್ತಿದ್ದ ಭಾರತೀಯರಿಗೆ ಹೊಸ ವಿಶ್ವಾಸ ತುಂಬಿದವ ಫಡ್ಕೆ. ಸಾಯುವ ಕೊನೆ ಕ್ಷಣದಲ್ಲೂ ಮುಷ್ಟಿಯಲ್ಲಿ ಭಾರತದ ಮೃತ್ತಿಕೆಯನ್ನೇ ಹಿಡಿದುಕೊಂಡಿದ್ದ ವಾಸುದೇವ ಬಲವಂತ ಫಡ್ಕೆಯಂಥವರು ಸ್ಮೃತಿಪಟಲದಿಂದ ದೂರವಾಗಿಬಿಡುತ್ತಾರೆ. ಹುತಾತ್ಮರನ್ನು ಮರೆತ ರಾಷ್ಟ್ರಕ್ಕೆ ಭವಿಷ್ಯವಿಲ್ಲ! ಫಡ್ಕೆಯ ನೆನಪು ನಮ್ಮ ಜವಾಬ್ದಾರಿ.
(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)