ಈ ಬಿರು ಬೇಸಿಗೆಯಲ್ಲಿ ಸಾಧ್ಯವಾದಷ್ಟೂ ತಂಪು ಗುಣ ಹೊಂದಿದ ಆಹಾರದ್ರವ್ಯಗಳು ಮತ್ತು ದ್ರವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ಅಂದರೆ ಹಾಲು, ಬೆಣ್ಣೆ, ಬಸಳೆಸೊಪ್ಪು, ಬೂದುಗುಂಬಳಕಾಯಿ, ಹಾಲುಗುಂಬಳಕಾಯಿ, ಒಂದೆಲಗ, ನೆಲ್ಲಿಕಾಯಿ, ಒಣದ್ರಾಕ್ಷಿ, ಮೆಂತೆಸೊಪ್ಪು, ಖರ್ಜೂರ, ಚಿಕ್ಕು (ಸಪೋಟ), ಸೀತಾಫಲ, ಖರಬೂಜ ದಂತಹ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುತ್ತಾ ಹೋಗಬೇಕು. ಅದರಿಂದ ಈ ಉರಿಗಳೆಲ್ಲಾ ಕಡಿಮೆಯಾಗಲು ಸಹಾಯವಾಗುತ್ತದೆ. ಈ ರೀತಿ ಸಮಸ್ಯೆ ಇರುವವರು ಉಪ್ಪು, ಹುಳಿ, ಖಾರಗಳನ್ನು ಸಾಧ್ಯವಾದಷ್ಟೂ ಕಡಿಮೆ ಸೇವಿಸಬೇಕು. ವಿಶೇಷವಾಗಿ ಹಿರಿಯರಿಗೆ ಬೇಸಿಗೆಯಲ್ಲಿ ಉಷ್ಣವಾಗುವುದರ ಜೊತೆಗೆ ನಿಶ್ಶಕ್ತಿಯೂ ಕಾಡುತ್ತದೆ. ಹಾಗಾಗಿ, ಖರ್ಜೂರದ ಮಿಲ್ಕ್ ಶೇಕ್ ಬಳಸಬೇಕು. ಅಂದರೆ ಮೆತ್ತನೆಯ, ಕಪ್ಪು ಬಣ್ಣದ ಖರ್ಜೂರಗಳ ಬೀಜ ತೆಗೆದು ಹಾಲಿನ ಜೊತೆ ರುಬ್ಬಿ ಹಸಿವಿರುವ ಸಮಯದಲ್ಲಿ ಅಂದರೆ ಮಧ್ಯಾಹ್ನ 12 ಘಂಟೆಯ ಹೊತ್ತಿಗೆ ಸೇವಿಸಿದರೆ ತುಂಬಾ ಅನುಕೂಲವಾಗುತ್ತದೆ. ಬೂದುಗುಂಬಳಕಾಯಿಯಂತೂ ಈ ಕಾಲದಲ್ಲಿ ಅತ್ಯಂತ ಪ್ರಶಸ್ತವಾದ ಆಹಾರದ್ರವ್ಯ. ಏಕೆಂದರೆ ಬೂದುಗುಂಬಳಕಾಯಿಯು ತಂಪುಗುಣವನ್ನು ಹೊಂದಿದ್ದು ನಿಶ್ಶಕ್ತಿ, ದೇಹದಲ್ಲಿ ಉರಿ, ಮಾನಸಿಕ ಒತ್ತಡ, ನಿದ್ರಾಹೀನತೆಗಳನ್ನು ಕಡಿಮೆ ಮಾಡಲು ಅತ್ಯಂತ ಸಹಾಯಕ. ಹಾಗಾಗಿ ನಿತ್ಯವೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೂದುಗುಂಬಳದ ಜ್ಯೂಸ್ ಸೇವಿಸಿದರೆ ಅನುಕೂಲವಾಗುತ್ತದೆ.
ಚರ್ಮ ಸುಡುತ್ತದೆಯೇ?: ಚರ್ಮವೆಲ್ಲಾ ಉರಿಯಾದಂತೆ, ಸುಟ್ಟಗಾಯದಂತೆ ಭಾಸವಾಗುತ್ತದೆ ಎಂಬುದು ಹಲವರ ಸಮಸ್ಯೆ. ಅದಕ್ಕೆ ಗರಿಕೆ ಹುಲ್ಲಿನ ಜ್ಯೂಸ್ ಮಾಡಿಕೊಂಡು ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸುವುದು ಅತ್ಯಂತ ಸಹಾಯಕ. ಇದರಿಂದ ಚರ್ಮದ ಉರಿಯಷ್ಟೆ ಅಲ್ಲದೇ ಬೇಸಿಗೆಯಲ್ಲಿ ಸಹಜವಾಗಿ ಕಾಡುವ ಚರ್ಮರೋಗಗಳು, ತ್ವಚೆ ಕಪ್ಪಾಗುವ ಸಮಸ್ಯೆಗಳು ಕಡಿಮೆಯಾಗುತ್ತವೆ. ಬಹುತೇಕ ಜನರಿಗೆ ನಿತ್ಯವೂ ಕಾಡುವ ಆಸಿಡಿಟಿ ಅಥವಾ ಹೊಟ್ಟೆ ಉರಿಯ ಸಮಸ್ಯೆ ಬೇಸಿಗೆಯಲ್ಲಿ ಹೆಚ್ಚಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಹೊಟ್ಟೆ ಉರಿ, ಹುಳಿತೇಗು, ಎಚ್-ಪೈಲೋರಿ ಬ್ಯಾಕ್ಟೀರಿಯಾದ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಲು ಜ್ಯೇಷ್ಠಮಧುವಿನ ವಿಶೇಷವಾದ ಕಷಾಯ ಸಹಾಯ ಮಾಡುತ್ತದೆ.
ಜ್ಯೇಷ್ಠಮಧುವಿನ ಕಷಾಯ ಮಾಡುವುದು ಹೇಗೆ?: ಒಂದು ಚಮಚದಷ್ಟು ಜ್ಯೇಷ್ಠಮಧುವಿನ ಪುಡಿಗೆ ಒಂದು ಲೋಟ ಹಾಲು ಮತ್ತು ಮೂರು ಲೋಟ ನೀರು ಹಾಕಿ ಸಣ್ಣ ಉರಿಯಲ್ಲಿ ಒಂದು ಲೋಟಕ್ಕೆ ಬತ್ತಿಸಿ ಸೋಸಿ ಬೆಳಗ್ಗೆ ಅಥವಾ ಮಧ್ಯಾಹ್ನ ಆಹಾರ ಸೇವಿಸುವ ಒಂದು ಘಂಟೆ ಮೊದಲು ಸೇವಿಸಿದರೆ ಜ್ಯೇಷ್ಠಮಧುವಿನ ತಂಪುಗುಣದ ಮತ್ತು ಗಾಯ ಗುಣಪಡಿಸುವ ಗುಣಗಳ ಕಾರಣದಿಂದ ಹೊಟ್ಟೆ ಉರಿ, ಅಲ್ಸರ್, ನಿದ್ರಾಹೀನತೆ, ಗಂಟಲು ಉರಿಗಳ ನಿವಾರಣೆಗೆ ತುಂಬಾ ಅನುಕೂಲವಾಗುತ್ತದೆ. ಇದು ಎಲ್ಲಾ ಗ್ರಂಥಿಗೆ ಅಂಗಡಿಗಳು ಮತ್ತು ಆಯುರ್ವೆದ ಅಂಗಡಿಗಳಲ್ಲಿ ಲಭ್ಯವಿರುತ್ತದೆ. ಲಿವರ್ಗೆ ಸಂಬಂಧಿಸಿದ ತೊಂದರೆಗಳ ಕಾರಣದಿಂದ ದೇಹದಲ್ಲಿ ಉರಿ, ತುರಿಕೆಗಳಿದ್ದಾಗ ಲೋಳೆಸರ (ಅಲೊ ವೆರಾ) ಸಹಕಾರಿ. ದಿನಕ್ಕೊಮ್ಮೆ 2 ಚಮಚದಷ್ಟು ಲೋಳೆಸರದ ತಿರುಳನ್ನು ಮಜ್ಜಿಗೆಯ ಜೊತೆ ಅಥವಾ ಹಾಗೇ ಸೇವಿಸಬೇಕು. ಕಾಲು ಉರಿ, ತಲೆ ಬಿಸಿ ಅಥವಾ ಉರಿಗಳಿದ್ದಾಗ ಲೋಳೆಸರದ ತಿರುಳನ್ನು ಹಚ್ಚುವುದರಿಂದಲೂ ತಕ್ಷಣಕ್ಕೆ ಉರಿ ಕಡಿಮೆಯಾಗಲು ಸಹಾಯವಾಗುತ್ತದೆ. ಪಾದದ ಉರಿ, ನಿದ್ರಾಹೀನತೆಗಳಿಂದ ಬಳಲುತ್ತಿರುವವರು ರಾತ್ರಿ ಮಲಗುವ ಮೊದಲು ತುಪ್ಪ ಅಥವಾ ಕೊಬ್ಬರಿ ಎಣ್ಣೆಯಿಂದ ಪಾದಗಳಿಗೆ ಮಸ್ಸಾಜ್ ಮಾಡಿಕೊಂಡು ಮಲಗಿದರೆ ಈ ಸಮಸ್ಯೆಗಳು ಹತೋಟಿಗೆ ಬರುತ್ತವೆ.
ನೀವೂ ಪ್ರಶ್ನೆ ಕೇಳಿ ನಿಮ್ಮ ಆರೋಗ್ಯದ ಸಮಸ್ಯೆಗಳನ್ನು ಸಂಕ್ಷಿಪ್ತವಾಗಿ ಬರೆದು ಈ ವಿಳಾಸಕ್ಕೆ ಕಳಿಸಬಹುದು: ಸಂಪಾದಕರು, ಧನ್ವಂತರಿ ಪ್ರಶ್ನೋತ್ತರ ವಿಭಾಗ, ವಿಜಯವಾಣಿ, ನಂ.24, ಸಾಯಿರಾಂ ಟವರ್ಸ್, ಮೊ ದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು - 18