ಅಂಕಣ

ಸಿಐಎ ಸುಳ್ಳಿಗೆ ಸುಖವಿಲ್ಲ, ಸನಾತನ ಸತ್ಯಕ್ಕೆ ಸಾವಿಲ್ಲ

ಇಂದಿರಾ ಗಾಂಧಿ 1980ರ ಜನವರಿಯಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಸಮಯ ಪ್ರಾದೇಶಿಕ ಹಾಗೂ ಜಾಗತಿಕ ರಾಜಕಾರಣಗಳಲ್ಲಿ ಮಹತ್ವದ ಸಂಕ್ರಮಣ ಕಾಲ. ಹಿಂದಿನ ವರ್ಷದ ಎರಡು ಬೆಳವಣಿಗೆಗಳು ಅಮೆರಿಕಾದ ಹಿತಾಸಕ್ತಿಗಳಿಗೆ ಗಂಭೀರ ಸವಾಲುಗಳನ್ನೊಡ್ಡಿದ್ದವು. 1979ರ ಫೆಬ್ರವರಿಯಲ್ಲಿ ಇರಾನ್​ನಲ್ಲಿ ಇಸ್ಲಾಮಿಕ್ ಕ್ರಾಂತಿಯಾಗಿ ಅಮೆರಿಕಾದ ಹಳೆಯ ಮಿತ್ರ ಅರಸ ರೆಜಾ ಶಾ ಪಹ್ಲವಿಯ ಎತ್ತಂಗಡಿಯಾಗಿ ಕಟ್ಟಾ ಅಮೆರಿಕಾ-ವಿರೋಧಿ ಆಯತೊಲ್ಲಾ ಖೊಮೇನಿ ನೇತೃತ್ವದ ಮೂಲಭೂತವಾದಿ ಸರ್ಕಾರ ತೆಹರಾನ್​ನಲ್ಲಿ ಅಸ್ತಿತ್ವಕ್ಕೆ ಬಂದಿತು, ‘ರೆವಲ್ಯುಷನರಿ ಗಾರ್ಡ್ಸ್’ ಎಂಬ ಇಸ್ಲಾಮಿಕ್ ಸೇನೆ ತೆಹರಾನ್​ನಲ್ಲಿನ ಅಮೆರಿಕಾದ ದೂತಾವಸಕ್ಕೆ ನುಗ್ಗಿ 52 ಅಮೆರಿಕನ್ನರನ್ನು ಒತ್ತೆಯಾಳುಗಳನ್ನಾಗಿಟ್ಟುಕೊಂಡಿತು ಮತ್ತು ಅವರನ್ನು ಬಿಡಿಸಿಕೊಳ್ಳುವ ದಾರಿ ಕಾಣದೆ ಜಿಮ್ಮಿ ಕಾರ್ಟರ್ ಆಡಳಿತ ಕಂಗೆಟ್ಟಿತು.

1979ರ ಅಂತ್ಯದಲ್ಲಿ ಅಫ್ಘಾನಿಸ್ತಾನಕ್ಕೆ ಸೋವಿಯತ್ ಸೇನೆ ಪ್ರವೇಶಿಸಿತು ಮತ್ತು ಅದನ್ನು ಅರಬ್ಬಿ ಸಮುದ್ರವನ್ನು ತಲುಪುವ ರಷ್ಯನ್ನರ ಐತಿಹಾಸಿಕ ಬಯಕೆಯ ಹೊಸ ಪ್ರಯತ್ನ ಎಂದು ರ್ತಸಿದ ಅಮೆರಿಕಾದ ರಕ್ಷಣಾತಜ್ಞರು ಕ್ರಮ್ಲಿನ್​ನ ಯೋಜನೆಗಳನ್ನು ವಿಫಲಗೊಳಿಸುವ ದಾರಿ ಹುಡುಕತೊಡಗಿದರು. ಅಂಥ ಸನ್ನಿವೇಶದಲ್ಲಿ ಈ ವಲಯದ ಪ್ರಮುಖ ಹಾಗೂ ಆಯಕಟ್ಟಿನ ದೇಶವಾದ ಭಾರತದಲ್ಲಿ ಅಮೆರಿಕಾ ಬಗ್ಗೆ ಅಷ್ಟೇನೂ ಒಲವಿಲ್ಲದ ಇಂದಿರಾ ಅಧಿಕಾರಕ್ಕೆ ಬಂದದ್ದು ಸಹಜವಾಗಿಯೇ ವಾಷಿಂಗ್​ಟನ್ ಮುಂದೆ ಇನ್ನಷ್ಟು ಪ್ರಶ್ನೆಗಳನ್ನು ಸೃಷ್ಟಿಸಿತು. ಗೊಂದಲಕ್ಕೆ ಸಿಲುಕಿದ ಕಾರ್ಟರ್ ಆಡಳಿತ ಪಾಕ್ ಸೇನಾ ಸರ್ವಾಧಿಕಾರಿ ಜಿಯಾ-ಉಲ್-ಹಕ್​ರನ್ನು ಅಪ್ಪಿಕೊಂಡು, ಆ ದಿನಗಳಲ್ಲಿ ಅಗಾಧವೆನಿಸಿದ 3.2 ಬಿಲಿಯನ್ ಡಾಲರ್​ಗಳ ಸೇನಾ ನೆರವನ್ನು ಇಸ್ಲಾಮಾಬಾದ್​ಗೆ ನೀಡತೊಡಗಿದ್ದಲ್ಲದೆ ಭಾರತದಲ್ಲಿ ಸೋವಿಯತ್-ಪರ ಇಂದಿರಾ ಸರ್ಕಾರವನ್ನು ಬಲಹೀನಗೊಳಿಸುವ ಉದ್ದೇಶದಿಂದ ಸಿಐಎ/ಯುಎಸ್​ಎಐಡಿ ರಹಸ್ಯ ಚಟುವಟಿಕೆಗಳನ್ನು ಏಕಾಏಕಿ ತೀವ್ರಗೊಳಿಸಿತು.

ಭಾರತದಲ್ಲಿನ ಪ್ರಾದೇಶಿಕ ಹಾಗೂ ಸಾಮಾಜಿಕ ಬಿರುಕುಗಳನ್ನು ದುರುಪಯೋಗಪಡಿಸಿಕೊಂಡು ಈ ದೇಶದ ಪ್ರಾದೇಶಿಕ ಸಮಗ್ರತೆಗೆ ಹಾನಿಯೆಸಗುವ ಕೃತ್ಯವನ್ನು ಅವೆರಡೂ ಸಂಸ್ಥೆಗಳು ಆರಂಭಿಸಿದವು. ರಿಚರ್ಡ್ ನಿಕ್ಸನ್ ಆಡಳಿತ 1971ರಲ್ಲೇ ಆರಂಭಿಸಿದ್ದ ಖಲಿಸ್ತಾನ್ ಆಂದೋಲನವನ್ನು ಉಗ್ರಗೊಳಿಸುವ ಹಾಗೂ ಬಾಂಗ್ಲಾ ವಲಸಿಗರ ನೆಪದಲ್ಲಿ ಅಸ್ಸಾಂನ ಯುವಜನತೆಯನ್ನು ಭಾರತದ ವಿರುದ್ಧ ತಿರುಗಿಸುವ ಸಿಐಎ/ಯುಎಸ್​ಎಐಡಿ ಪ್ರಯತ್ನಗಳು ಈ ದೇಶಕ್ಕೆ ತಲೆನೋವು ತಂದದ್ದು ನಿಜ. ಇಂತಹದೇ ಪ್ರಯತ್ನ ತಮಿಳುನಾಡಿನಲ್ಲಿ ಯಶಸ್ವಿಯಾಗದಿರಲು ಮುಖ್ಯ ಕಾರಣ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್ ಅವರ ಪ್ರಬುದ್ಧ ನೀತಿನಿಲುವುಗಳು.

ಒಂದು ಹಂತದವರೆಗೆ ಇಂದಿರಾ ಸರ್ಕಾರವನ್ನು ಧೃತಿಗೆಡಿಸಿದ್ದು ಕಾಶ್ಮೀರದಿಂದ ಅರುಣಾಚಲ ಪ್ರದೇಶದವರೆಗಿನ ಎಲ್ಲ ಪರ್ವತ ನಾಡುಗಳನ್ನು ಭಾರತದಿಂದ ಪ್ರತ್ಯೇಕಿಸಿ, ನೇಪಾಳ ಮತ್ತು ಭೂತಾನ್​ಗಳನ್ನೂ ಅವುಗಳಿಗೆ ಸೇರಿಸಿ ‘ಹಿಮಾಲಯನ್ ಫೆಡರೇಷನ್’ ಎಂಬ ಹೊಸ ದೇಶವನ್ನು ಸೃಷ್ಟಿಸಿ ಅದನ್ನು ಈ ವಲಯದಲ್ಲಿ ಅಮೆರಿಕಾದ ಭದ್ರನೆಲೆಯನ್ನಾಗಿ ಮಾಡಿಕೊಳ್ಳುವ ಸಿಐಎ ಪ್ರಯತ್ನ. ಇದರ ಬಗ್ಗೆ ಹೆಚ್ಚಿನ ವಿವರಗಳು ಸಾರ್ವಜನಿಕವಾಗಿ ಹೊರಬರದಿದ್ದರೂ, ರೊನಾಲ್ಡ್ ರೀಗನ್ ಆಡಳಿತದ ಮೊದಲ ಅವಧಿಯಲ್ಲಿ ಆ ಕುರಿತಾಗಿ ಇಂದಿರಾ ಸರ್ಕಾರ ದೊಡ್ಡದಾಗಿ ಕೂಗೆತ್ತಿದಾಗ ತಮ್ಮ ಸರ್ಕಾರ ಅಂತಹದನ್ನೇನನ್ನೂ ಮಾಡುತ್ತಿಲ್ಲವೆಂದು ವಿಶ್ವಸಂಸ್ಥೆಯಲ್ಲಿ ಅಮೆರಿಕಾದ ರಾಯಭಾರಿಯಾಗಿದ್ದ ಜೀನ್ ಕಿರ್ಕ್​ಪ್ಯಾಟ್ರಿಕ್ ಹೇಳಿಕೆ ನೀಡಿದ ಮೇಲೆ ವಿಷಯ ತಣ್ಣಗಾಯಿತು. ಜತೆಗೆ ರೀಗನ್ ಆಡಳಿತ ತನ್ನ ಗಮನವನ್ನು ಕುಸಿಯುತ್ತಿದ್ದ ಸೋವಿಯತ್ ಮತ್ತು ಪೂರ್ವ ಯೂರೋಪಿಯನ್ ಕಮ್ಯೂನಿಸ್ಟ್ ಸತ್ತೆಗಳತ್ತ ತಿರುಗಿಸಿತು.

ಭಾರತವನ್ನು ಈ ವಲಯದಲ್ಲಿ ಪ್ರಾದೇಶಿಕ ಶಕ್ತಿಯಾಗಿ ಒಪ್ಪಿಕೊಳ್ಳುವುದರ ಜತೆಗೆ ಈ ದೇಶ ಅಮೆರಿಕಾದ ಹಿತಾಸಕ್ತಿಗಳಿಗೆ ಸವಾಲೊಡ್ಡುವಷ್ಟು ಎತ್ತರಕ್ಕೆ ಬೆಳೆಯದಂತೆಯೂ ನೋಡಿಕೊಳ್ಳುವುದು ರೀಗನ್ ಮತ್ತು ಹಿರಿಯ ಜಾರ್ಜ್ ಬುಷ್ ಆಡಳಿತಗಳ ನಿಲುವಾಯಿತು. ಅದರಲ್ಲೂ ಕಮ್ಯೂನಿಸಂ ಪತನ ಮತ್ತು ಸೋವಿಯತ್ ಛಿದ್ರೀಕರಣಗಳ ಪರಿಣಾಮವಾಗಿ ಭಾರತ ಆರ್ಥಿಕವಾಗಿ ಅಮೆರಿಕಾಗೆ ಹತ್ತಿರವಾಗತೊಡಗಿದ ಹಾಗೂ ವಾಷಿಂಗ್​ಟನ್​ನ ‘ಇಚ್ಛೆ’ಗನುಗುಣವಾಗಿ ಆರ್ಥಿಕ ಉದಾರೀಕರಣ ಕ್ರಮಗಳನ್ನು ಆರಂಭಿಸಿದ ನಂತರ ಭಾರತಕ್ಕೆ ‘ಕೇಡು’ ಬಗೆಯುವ ‘ಉತ್ಸಾಹ’ ಸಿಐಎ/ಯುಎಸ್​ಎಐಡಿಗಳಲ್ಲಿ ಕಡಿಮೆಯಾಯಿತು.

ಮನಮೋಹನ್ ಸಿಂಗ್ ಭಾರತದ ಚುಕ್ಕಾಣಿ ಹಿಡಿದ ಮೇಲೆ ಪರಿಸ್ಥಿತಿ ವಾಷಿಂಗ್​ಟನ್​ಗೆ ಮತ್ತಷ್ಟು ಸಹಯನೀಯವೇ ಆಯಿತು. ಆದಾಗ್ಯೂ, ನವದೆಹಲಿಯ ಹೊಸ ಆರ್ಥಿಕ ನೀತಿಗಳನ್ನು ಮತ್ತು ಭಾರತ-ಅಮೆರಿಕಾ ಸಾಮರಿಕ ಸಹಯೋಗಗಳನ್ನು ಸಮರ್ಥಿಸುವ ಹಾಗೂ ಬೆಂಬಲಿಸುವ ದನಿಗಳನ್ನು ಭಾರತದ ವೈಚಾರಿಕ, ಶೈಕ್ಷಣಿಕ ಮತ್ತು ಮುಖ್ಯವಾಗಿ ಮಾಧ್ಯಮ ಕ್ಷೇತ್ರಗಳಲ್ಲಿ ಬೆಳೆಸುವುದು ಸಿಐಎ/ಯುಎಸ್​ಎಐಡಿ ಅಲ್ಲದೆ ಅಮೆರಿಕಾದ ವಿದೇಶಾಂಗ ಇಲಾಖೆಯ ನಿಲುವಾದದ್ದನ್ನು ನಿರ್ಲಕ್ಷಿಸಲಾಗದು.

ಪ್ರಧಾನಿ ಸಿಂಗ್​ರನ್ನು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಕೈಗೊಂಬೆಯಾಗಿಸಿಕೊಳ್ಳಹೊರಟಿದ್ದು ಮತ್ತು ಚೀನಿ ಕಮ್ಯೂನಿಸ್ಟ್ ಪಕ್ಷ/ಸರ್ಕಾರದೊಂದಿಗೆ ಕಾಂಗ್ರೆಸ್ ಉಚ್ಚ ನಾಯಕತ್ವದ ಸಖ್ಯ ವೃದ್ಧಿಯಾಗುತ್ತಿದ್ದಂತೆ ತನ್ನ ಮೊಟ್ಟೆಗಳನ್ನೆಲ್ಲ ಒಂದೇ ಬುಟ್ಟಿಯಲ್ಲಿಡದೆ ತನ್ನ ‘ಆಯ್ಕೆ’ಗಳನ್ನು ಮುಕ್ತವಾಗಿಯೇ ಇಟ್ಟುಕೊಳ್ಳುವುದು ಅಮೆರಿಕಾದ ಸ್ಪಷ್ಟ ನೀತಿಯಾಯಿತು. ಸಮಯ ಬಂದರೆ ಇರಲಿ ಎಂದು ಕೆಲವರನ್ನು ಬೆಳೆಸುವ ಕೃತ್ಯವೂ ಚುರುಕಾಯಿತು. ಅದಕ್ಕಾಗಿ ಬಳಕೆಯಾದದ್ದು ಮ್ಯಾಗ್ಸೆಸೆ ಪ್ರಶಸ್ತಿ, ಫೋರ್ಡ್ ಫೌಂಡೇಶನ್ ಫೆಲೋಶಿಪ್ ಮುಂತಾದ ಅಮೆರಿಕಾದ ಲಾಗಾಯ್ತಿನ ಗಾಳಗಳು.

ಇದು ಅಮೆರಿಕಾ ದಶಕಗಳಿಂದಲೂ ಪಾಲಿಸಿಕೊಂಡು ಬಂದ ನೀತಿಯಾದರೂ ಇನ್ನಷ್ಟು ಸ್ಪಷ್ಟ ಹಾಗೂ ನಿರ್ಣಾಯಕವಾದದ್ದು ಈ ಶತಮಾನದ ಮೊದಲ ದಶಕದಲ್ಲಿ. ಹಾಗೆ ನೋಡಿದರೆ ಈ ಬೆಳವಣಿಗೆಯನ್ನು 1996ರ ಲೋಕಸಭಾ ಚುನಾವಣೆಗಳ ಮರುಗಳಿಗೆಯೇ ಗುರುತಿಸಬಹುದು. ಪಶ್ಚಿಮದ ಮಾತು ಕೇಳದ ಭಾರತೀಯ ಜನತಾ ಪಕ್ಷ ಆ ಚುನಾವಣೆಗಳಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಮತ್ತು ಮುಂದಿನ ದಿನಗಳಲ್ಲಿ ಆ ಪಕ್ಷದ ಜನಪ್ರಿಯತೆ ವೃದ್ಧಿಯಾಗುತ್ತ ಹೋಗುವ ಸ್ಪಷ್ಟ ಸೂಚನೆ ಕಂಡುಬಂದು ಅಮೆರಿಕಾದ ವಿದೆಶಾಂಗ ಇಲಾಖೆ, ಸಿಐಎ, ಯುಎಸ್​ಎಐಡಿ, ಒಟ್ಟಾರೆ ಅಮೆರಿಕನ್ ಡೀಪ್​ಸ್ಟೇಟ್​ಗೆ ಎಚ್ಚರಿಕೆಯ ಗಂಟೆಗಳಾದವು.

ಬಿಜೆಪಿ ಮತ್ತು ಆರ್​ಎಸ್​ಎಸ್​ನ ನೀತಿನಿಲುವುಗಳು ಮತ್ತು ಕಾರ್ಯಯೋಜನೆಗಳನ್ನು ಅನುಮಾನದಿಂದ ನೋಡಲು ಮತ್ತು ವಿರೋಧಿಸಲು ಭಾರತೀಯರನ್ನು ಪ್ರೇರೇಪಿಸಲೆಂದು ಹೊಸ ಪತ್ರಿಕೆಗಳು ಮತ್ತು ವಾರ್ತಾವಾಹಿನಿಗಳ ಹುಟ್ಟಿಗೆ ವ್ಯವಸ್ಥೆ ಮಾಡಲಾಯಿತು. ಹಾಗೆಯೇ, ಬಿಜೆಪಿ/ಆರ್​ಎಸ್​ಎಸ್ ಒತ್ತುನೀಡುವ ಭಾರತೀಯ ಸಮಾಜೋ-ಧಾರ್ವಿುಕ ಮೌಲ್ಯಗಳಿಗೆ ವಿರುದ್ಧವಾದ ಅಭಿಪ್ರಾಯಗಳನ್ನು ಅಲ್ಲಗಳೆಯುವವರಿಗೆ ಅಂತಾರಾಷ್ಟ್ರೀಯ ಸಾಹಿತ್ಯ, ಸಾಂಸ್ಕೃತಿಕ ಪ್ರಶಸ್ತಿಗಳನ್ನು ನೀಡಿ, ಭಾರತದ ಹೊಸ ದನಿಗಳೆಂದು ಅವರನ್ನು ಜಾಗತಿಕವಾಗಿ ಅಟ್ಟಕ್ಕೇರಿಸಲಾಯಿತು.

ಬಿಜೆಪಿ/ಆರ್​ಎಸ್​ಎಸ್ ನಾಯಕರ ವಿರುದ್ಧ ವೈಚಾರಿಕವಾಗಿ ಹಾಗೂ ಕಾನೂನಾತ್ಮಕವಾಗಿ ನಿಲ್ಲಬಲ್ಲಂತಹವರ ಕೈಗೆ ಫೆಲೋಶಿಪ್ ಹೆಸರಿನಲ್ಲಿ, ಅವರುಗಳೂ ಕಟ್ಟಿಕೊಂಡಿರಬಹುದಾದ ಎನ್​ಜಿಓಗಳಿಗೆ ಡೊನೇಷನ್ ಹೆಸರಿನಲ್ಲಿ ಹಣ ಬೀಳತೊಡಗಿತು. ಅದೇ ದಿನಗಳಲ್ಲಿ ಆರಂಭವಾದ ಇನ್ನೊಂದು ಅನಿಷ್ಟಕಾರಕ ಬೆಳವಣಿಗೆಯೆಂದರೆ ಸಿಐಎ/ಯುಎಡ್​ಎಐಡಿ ಜತೆಗೆ ಅಂತಾರಾಷ್ಟ್ರೀಯ ಎಡಪಂಥೀಯ ಅರಾಜಕತಾವಾದಿ ಜಾರ್ಜ್ ಸೊರೋಸ್ ತನ್ನ ‘ಓಪನರ್ ಸೊಸೈಟಿ ಫೌಂಡೇಶನ್’ (ಓಎಸ್​ಎಫ್) ಮೂಲಕ ಕೈಗೂಡಿಸಿದ್ದು. ಇವೆಲ್ಲವುಗಳ ಆಟಗಳು ಭಾರತದಲ್ಲಿ ಉಗ್ರಗೊಂಡಿದ್ದು ಡೆಮೊಕ್ರಾಟಿಕ್ ಪಕ್ಷದ ಬರಾಕ್ ಹುಸೇನ್ ಒಬಾಮ ಆಡಳಿತವಾಧಿಯಲ್ಲಿ. ಭಾರತದ ಯುಪಿಎ ಸರ್ಕಾರ ಮತ್ತು ಒಬಾಮ ಆಡಳಿತದ ನಡುವೆ ಒಳ್ಳೆಯ ತಾಳಮೇಳಗಳು ಇದ್ದಂತಿವೆ.

ಆದರೆ ಅವು ಭಾರತದ ಹಿತಕ್ಕೆ ಹಾನಿಕಾರಕವಾಗಿದ್ದವು. ಇದಕ್ಕೊಂದು ಉದಾಹರಣೆ, ಎಸ್.ವೈ.ಖುರೇಶಿಯವರ ಮುಖ್ಯ ಚುನಾವಣಾಧಿಕಾರತ್ವದ ಕಾಲದಲ್ಲಿ ಭಾರತದ ಚುನಾವಣಾ ಆಯೋಗ ಮತ್ತು ‘ಇಂಟರ್​ನ್ಯಾಷನಲ್ ಫೌಂಡೇಶನ್ ಫಾರ್ ಎಲೆಕ್ಟೊರಲ್ ಸಿಸ್ಟಮ್ಸ್’ (ಐಎಫ್​ಇಎಸ್) 2012ರ ಮೇ 17ರಂದು ಮಾಡಿಕೊಂಡ ಒಪ್ಪಂದ. ಆ ಒಪ್ಪಂದದ ಪ್ರಕಾರ ಭಾರತದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳು ನಡೆಯಲು ಐಎಫ್​ಇಎಸ್ ಸಹಕರಿಸುವ ಮತ್ತು ಅದಕ್ಕಾಗಿ ಚುನಾವಣಾ ಕಾರ್ಯಕರ್ತರಿಗೆ ತರಬೇತಿ ನೀಡುವ ವ್ಯವಸ್ಥೆಯಿತ್ತು! ಐಎಫ್​ಇಎಸ್ ಏಕಕಾಲದಲ್ಲಿ ಜಾರ್ಜ್ ಸೊರೋಸ್​ನ ಓಎಸ್​ಎಫ್ ಮತ್ತು ಯುಎಸ್​ಎಐಡಿಯಿಂದ ಧಾರಾಳ ಧನಸಹಾಯ ಪಡೆಯುವ ಒಂದು ಎನ್​ಜಿಓ. ಅಂತಹ ಸಂಸ್ಥೆಯ ಮೂಲಕ ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಕೈಯಾಡಿಸಲು ಯುಎಸ್​ಎಐಡಿ ಮತ್ತು ಓಎಸ್​ಎಫ್​ಗಳಿಗೆ ಯುಪಿಎ ಸರ್ಕಾರ ಅವಕಾಶ ಮಾಡಿಕೊಟ್ಟಿತು. ಯುಪಿಎ ಆಡಳಿತಾವಧಿಯಲ್ಲಿ ಜಾರ್ಜ್ ಸೊರೋಸ್ ಕನಿಷ್ಠ ಮೂರು ಬಾರಿ ಭಾರತಕ್ಕೆ ಭೇಟಿ ನೀಡಿದ್ದರು ಎನ್ನುವುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.

ಈ ದುಷ್ಟಶಕ್ತಿಗಳ ಹೂಟಗಳ ನಡುವೆಯೂ 2014ರ ಚುನಾವಣೆಗಳಲ್ಲಿ ಭಾರತೀಯ ಮತದಾರ ಬಿಜೆಪಿ ನೇತೃತ್ವದ ಎನ್​ಡಿಎಗೆ ಬಹುಮತ ನೀಡಿದ. ಅಂದರೆ ಬಿಜೆಪಿ ಮತ್ತೊಮ್ಮೆ ಅಧಿಕಾರ ಹಿಡಿಯದಂತೆ ಯುಎಸ್​ಎಐಡಿ ಮತ್ತು ಓಎಸ್​ಎಫ್ ಅಲ್ಲಿಯವರೆಗೆ ಮಾಡಿದ ಪ್ರಯತ್ನಗಳು ಹೀಗೆ ವಿಫಲಗೊಂಡವು. ಇದರರ್ಥ ಆ ದುಷ್ಟಶಕ್ತಿಗಳು ಸೋಲೊಪ್ಪಿಕಂಡವು ಅಂತಲ್ಲ. ಅವುಗಳ ಸಂಚುಗಳು ಇನ್ನಷ್ಟು ಉಗ್ರವಾದದ್ದನ್ನು 2019 ಮತ್ತು 2024ರ ಚುನಾವಣೆಗಳಲ್ಲಿ ಕಾಣುತ್ತೇವೆ. ಇದರ ವಿವರಗಳು ಆಸಕ್ತಿಕರವಾಗಿವೆ.

‘ಕನ್​ಸೋರ್ಷಿಯಂ ಆಫ್ ಎಲೆಕ್ಷನ್ಸ್ ಆಂಡ್ ಪೊಲಿಟಿಕಲ್ ಪೋ›ಸೆಸ್ ಸ್ಟೆಂಥನಿಂಗ್’ (ಸಿಇಪಿಪಿಎಸ್) ಎಂಬುದೊಂದು ಯುಎಸ್​ಎಐಡಿಗೆ ಸಂಬಂಧಿಸಿದ ಸಂಸ್ಥೆ. ಅದು ಸೊರೋಸ್​ನ ಓಎಸ್​ಎಫ್​ನಿಂದಲೂ ಹಣ ಪಡೆಯುತ್ತದೆ. 1995ರಲ್ಲಿ ಇದನ್ನು ಸ್ಥಾಪಿಸಿದ್ದು ಲೇಖನಸರಣಿಯ ಎರಡನೆಯ ಭಾಗದಲ್ಲಿ ಉಲ್ಲೇಖಿಸಲಾಗಿರುವ ಯುಎಸ್​ಎಐಡಿಯ ಅಕ್ರಮ ಸಂತಾನಗಳಾದ ‘ಇಂಟರ್​ನ್ಯಾಷನಲ್ ರಿಪಬ್ಲಿಕನ್ ಇನ್ಸ್​ಟಿಟ್ಯೂಟ್’ (ಐಆರ್​ಐ) ಹಾಗೂ ‘ನ್ಯಾಷನಲ್ ಡೆಮೋಕ್ರಟಿಕ್ ಇನ್ಸ್​ಟಿಟ್ಯೂಟ್’ (ಎನ್​ಡಿಐ).

ಇವೆರಡರ ಜತೆ ಅದೇ ಯುಎಸ್​ಎಐಡಿಯ ಮತ್ತೊಂದು ಅಕ್ರಮ ಸಂತಾನವಾಗಿ 1987ರಲ್ಲಿ ಜನಿಸಿದ, ಮೇಲೆ ಉಲ್ಲೇಖಿಸಲಾಗಿರುವ ಐಎಫ್​ಇಎಸ್ ಸಹ ಸೇರಿತ್ತು. ಜಾಗತಿಕವಾಗಿ ರಾಜಕೀಯ ಶಿಕ್ಷಣ ಹಾಗೂ ಮತದಾನದ ಕುರಿತಾಗಿ ಜಾಗೃತಿ ಮೂಡಿಸುವುದು ತನ್ನ ಧ್ಯೇಯ ಎಂದು ಸಿಇಇಎಸ್ ಹೇಳಿಕೊಳ್ಳುತ್ತದೆ. ಆದರೆ ಇದು ನಿಜವಾಗಿಯೂ ಮಾಡುವುದು ಅಮೆರಿಕಾದ ಸರ್ಕಾರಗಳ ಕಾಕದೃಷ್ಟಿಗೆ ತುತ್ತಾದ ವಿದೇಶಿ ಸರ್ಕಾರಗಳ ವಿರುದ್ಧ ಆ ದೇಶದ ಮತದಾರರನ್ನೇ ಕೆರಳಿಸುವುದು ಮತ್ತು ಆ ಮೂಲಕ ಚುನಾವಣೆಗಳಲ್ಲಿ ಆ ಸರ್ಕಾರ ಸೋಲುವಂತೆ ಮಾಡುವುದು. ಅದಕ್ಕಾಗಿ ಅದು ಆಯ್ದ ಸುಳ್ಳು ವರದಿಗಳನ್ನು ಸೃಷ್ಟಿಸಿ, ನಕಲಿ ಸಂಶೋಧನಾ ಲೇಖನಗಳನ್ನು ರಚಿಸಲು ಮತ್ತವುಗಳ ಮೂಲಕ ಅಪಪ್ರಚಾರ ಕೈಗೊಳ್ಳಲು ಆಯ್ದ ವ್ಯಕ್ತಿಗಳಿಗೆ ಮತ್ತು ಎನ್​ಜಿಓಗಳು ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಹೇರಳ ಹಣ ನೀಡುತ್ತದೆ. ಆ ಹಣ ಬರುವುದು ಯುಎಸ್​ಎಐಡಿಯಿಂದ. ಆ ಹಣ ಎಷ್ಟು ಎಂದು ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಕನಿಷ್ಠ ಐದು ಬಾರಿ ಪ್ರಸ್ತಾಪಿಸಿದ್ದಾರೆ.

ಸಿಇಪಿಪಿಎಸ್​ಗೆ ಯುಎಸ್​ಎಐಡಿ ಒದಗಿಸಿದ ಹಣ 486 ಮಿಲಿಯನ್ ಡಾಲರ್​ಗಳು! ಇದರಲ್ಲಿ, ಸಿಇಪಿಪಿಎಸ್ ಹೇಳಿಕೊಳ್ಳುವಂತೆ, ಭಾರತದಲ್ಲಿ ‘ಮತದಾನವನ್ನು ವೃದ್ಧಿಸಲು’ 21 ಮಿಲಿಯನ್ ಡಾಲರ್ ಭಾರತಕ್ಕೆ ಬಂದಿದೆ. ಉದ್ದೇಶ ಒಳ್ಳೆಯದೇ. ಆದರೆ ನಿಜವಾದ ಉದ್ದೇಶ ಮೋದಿ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸಿ ಎನ್​ಡಿಎ ವಿರುದ್ಧ ಮತದಾನವನ್ನು ವೃದ್ಧಿಸುವುದು! ಅಂದರೆ ಚುನಾವಣೆಗಳ ಸಂದರ್ಭಗಳಲ್ಲಿ ಎನ್​ಡಿಎ ಸರ್ಕಾರ ಮತ್ತು ಅಭ್ಯರ್ಥಿಗಳ ವಿರುದ್ಧ ಸುಳ್ಳುಗಳನ್ನು ಹೇಳಿ, ಬರೆದು ಅವರ ವಿರುದ್ಧ ಹೆಚ್ಚು ಮತದಾನವಾಗುವಂತೆ ಮಾಡುವುದು! ಮೊನ್ನೆಮೊನ್ನೆ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಇಂತಹ ‘ಘನ ಪ್ರಜಾಪ್ರಭುತ್ವವಾದಿ’ ಕೃತ್ಯದಲ್ಲಿ ತೊಡಗಿದ್ದ ದೇಶದ ಹೆಸರಾಂತ ಆಂದೋಲನಜೀವಿಯೊಬ್ಬನನ್ನು ಜನರೇ ಥಳಿಸಿದ್ದನ್ನು ನೋಡಿದರೆ ಸಿಇಪಿಪಿಎಸ್ ಇಲ್ಲೇನು ಮಾಡುತ್ತಿತ್ತು ಎನ್ನುವುದರ ಪರಿಚಯವಾಗುತ್ತದೆ.

ಈ 21 ಮಿಲಿಯನ್ ಡಾಲರ್​ಗಳ ಸುತ್ತಮುತ್ತಲಿನ ಸುದ್ದಿಗಳಿಗಾಗಿ ಲೇಖನಸರಣಿಯ ಮೊದಲ ಭಾಗಕ್ಕೊಮ್ಮೆ ಹೊಗಿಬನ್ನಿ. ಅಲ್ಲಿ ಹೇಳದ ಒಂದು ವಿಷಯ ನೇಪಾಳಕ್ಕೆ ಸಂಬಂಧಿಸಿದ್ದು. ಯುಎಸ್​ಎಐಡಿ/ಸಿಇಪಿಪಿಎಸ್ ಆ ಹಿಮಾಲಯನ್ ರಾಷ್ಟ್ರದ ಬಗ್ಗೆ ಹೆಚ್ಚಿನ ಧಾರಾಳತನ ತೋರಿಸಿದ್ದು ಕಂಡುಬರುತ್ತದೆ. ಅಲ್ಲಿಗೆ ಹರಿದ ಹಣ 39 ಮಿಲಿಯನ್ ಡಾಲರ್​ಗಳು! ಈ ಹಣದ ದೊಡ್ಡ ಭಾಗ ಖರ್ಚಾಗಿರುವುದು ಆ ಹಿಂದೂ ಬಹುಸಂಖ್ಯಾತ ದೇಶದಲ್ಲಿ ಕ್ರಿಶ್ಚಿಯಾನಿಟಿಯನ್ನು ಪ್ರಚಾರ ಮಾಡುವುದಕ್ಕಾಗಿ.

ಈಗ ಭಾರತಕ್ಕೇ ಹಿಂತಿರುಗೋಣ. ಸಿಇಪಿಪಿಎಸ್​ನ ಕೃತ್ಯಗಳ ಸುಳಿವನ್ನು ಮೇಲೆ ನೀಡಿದ್ದೇನೆ. ಅದು ಸೊರೋಸ್​ನ ಓಎಸ್​ಎಫ್​ನಿಂದ ದೇಣಿಗೆ ಪಡೆಯುತ್ತಿದ್ದುದನ್ನೂ ಹೇಳಿದ್ದೇನೆ. ಈ ಓಎಸ್​ಎಫ್​ನ ಉಪಾಧ್ಯಕ್ಷ ಸಲಿಲ್ ಶೆಟ್ಟಿ ‘ಭಾರತ್ ಜೋಡೋ’ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರ ಜತೆಗಿದ್ದರು. ಆ ಯಾತ್ರೆಯಲ್ಲಿ ಕಾಂಗ್ರೆಸ್ ನೇತಾರನ ಸಲಹೆಗಾರರಾಗಿದ್ದ ವಿಜಯ್ ಮಹಾಜನ್ ರಾಜೀವ್ ಗಾಂಧಿ ಫೌಂಡೇಶನ್​ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ‘ರಾಜೀವ್ ಗಾಂಧಿ ಇನ್ಸ್​ಟಿಟ್ಯೂಟ್ ಆಫ್ ಕಾಂಟೆಂಪೊರರಿ ಸ್ಟಡೀಸ್’ನ ನಿರ್ದೇಶಕರು. ಇವರ ಎನ್​ಜಿಓ ಪ್ರದಾನ್​ಗೆ ಸಿಐಎ/ಯುಎಸ್​ಎಐಡಿಯ ಅಂಗ ಫೋರ್ಡ್ ಫೌಂಡೇಷನ್​ನಿಂದ ದೊಡ್ಡ ಪ್ರಮಾಣದಲ್ಲಿ ಹಣ ಬಂದಿದೆ ಎಂಬ ಸುದ್ದಿ ಕೆಲವಾರಗಳ ಹಿಂದೆ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿತು.

ಈ ವಿವರಗಳೊಂದಿಗೆ, ಮೋದಿಯವರಿಗೆ ರಾಜಕೀಯವಾಗಿ ಹಾನಿಯೆಸಗುವ ಕೃತ್ಯವನ್ನು ಮತ್ತು ಅದಕ್ಕಾಗಿ ಹಣ ಬಳಸುವುದನ್ನು ಯುಎಸ್​ಎಐಡಿ 2019ರ ಚುನಾವಣೆಗಳ ತರುವಾಯ ತೀವ್ರಗೊಳಿಸಿತು ಎಂದು ಅಧ್ಯಕ್ಷ ಟ್ರಂಪ್ ಹೇಳಿದ್ದನ್ನೂ ಮತ್ತು ಯುಎಸ್​ಎಐಡಿಯ ಇಂಡಿಯಾ ವಿಭಾಗದ ಮಿಷನ್ ಡೈರೆಕ್ಟರ್ ವೀಣಾ ರೆಡ್ಡಿ 2024ರ ಚುನಾವಣೆಗಳ ಸಂದರ್ಭದಲ್ಲಿ ಮೋದಿ ಸರ್ಕಾರದ ವಿರುದ್ಧ ಕಾರ್ಯಪ್ರವೃತ್ತರಾಗಿದ್ದರು ಎಂದು ಹಿರಿಯ ವಕೀಲರಾದ ಮಹೇಶ್ ಜೇಠ್ಮಲಾನಿ ಆಪಾದಿಸುವುದನ್ನೂ ಸೇರಿಸಿಕೊಳ್ಳಿ.

ಇವೆಲ್ಲವುಗಳ ಜತೆಗೆ, ರಾಹುಲ್ ಗಾಂಧಿ ತಮ್ಮ ಯಾತ್ರೆಯುದ್ದಕ್ಕೂ ಮೋದಿ ಸರ್ಕಾರದ ವಿರುದ್ಧ ‘ಜನಜಾಗೃತಿ’ ಮೂಡಿಸಲು ಪ್ರಯತ್ನಿಸಿದ್ದು; ದೇಶದೆಲ್ಲೆಡೆ ಸೀಮೆಎಣ್ಣೆ ಚಿಮುಕಿಸಲಾಗಿದೆ, ಇನ್ನು ಕಿಡಿ ಹೊತ್ತಿಸುವುದೊಂದೇ ಬಾಕಿ ಎಂಬಂತಹ ಮಾತುಗಳನ್ನು ಆಡಿದ್ದನ್ನೂ ಸೇರಿಸಿಕೊಳ್ಳಿ. ಕೊನೆಯಲ್ಲಿ, ಯುಎಸ್​ಎಐಡಿ ಕೊಟ್ಟ 480 ಮಿಲಿಯನ್ ಡಾಲರ್​ಗಳಲ್ಲಿ 21 ಮಿಲಿಯನ್​ಗಳನ್ನು ಮೋದಿ ಸರ್ಕಾರದ ವಿರುದ್ಧ ಅಪಪ್ರಚಾರಕ್ಕಾಗಿ ಸಿಇಪಿಪಿಎಸ್ ಸುರಿದಿದೆ ಎನ್ನಲಾಗುವ ವಿಷಯವನ್ನೂ ಸೇರಿಸಿಕೊಳ್ಳಿ. ಇವೆಲ್ಲವನ್ನೂ ಒಟ್ಟುಗೂಡಿಸಿದರೆ ನಮಗೆ ಸಿಗುವ ಚಿತ್ರ ಯಾವುದು?

ಕೊನೆಗೊಂದು ಕೊಸರು- ಈಗ ಬಂದ್ ಆಗಿರುವ ಯುಎಸ್​ಎಐಡಿ ವೆಬ್​ಸೈಟ್​ನಲ್ಲೇ ದಾಖಲಾಗಿದ್ದ ಪ್ರಕಾರ ಭಾರತದಲ್ಲಿ ವಲಸಿಗ ಗಾರ್ವೆಂಟ್ ಕೆಲಸಗಾರರಲ್ಲಿ ಒಂಟಿತನವನ್ನು ದೂರಮಾಡುವ ಮಾರ್ಗೆಪಾಯಗಳನ್ನು ಹುಡುಕಲೂ ಅದು ಹಣ ಚೆಲ್ಲಿದೆಯಂತೆ! ಇದನ್ನೇ ಮಾಡಿರುವ ಆ ಖೂಳ ಸಂಸ್ಥೆ ಕಳೆದೊಂದು ದಶಕದಲ್ಲಿ ನಾನು ಕಂಡ ಅವಾರ್ಡ್ ವಾಪ್ಸಿ ನೌಟಂಕಿ, ಸಿಎಎ ವಿರುದ್ಧದ ಅರ್ಥಹೀನ ಮುಷ್ಕರ, ಅದಾನಿ ವಿರುದ್ಧದ ಅನಗತ್ಯ ಉನ್ಮಾದಗಳ ಹಿಂದೆಯೂ ಇತ್ತು ಎಂಬ ಆಪಾದನೆಗಳಲ್ಲಿ ಸತ್ಯವಿರಲಾರದೆ? ಇಲ್ಲಿಗೆ ಯುಎಸ್​ಎಐಡಿ ಸರಣಿ ಮುಕ್ತಾಯ. (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)