ಅಂಕಣ

ನಮ್ಮನಮ್ಮಲ್ಲಿ: ಕಡು ದುಃಖಕ್ಕೂ ಒಂದು ಆಯುಷ್ಯ ಅಂತ ಇರುತ್ತೆ!

ರವಿ ಬೆಳೆಗೆರೆ

ನಿಮಗೆ ತುಂಬ ದುಃಖವಾಗಿದೆಯಾ? ಒಮ್ಮೆ ಕಣ್ತುಂಬ ಅತ್ತುಬಿಡಿ. ಒಬ್ಬರೇ ಇರಿ. ತಕ್ಷಣ ಆಸರೆಗೆ ಇನ್ನೊಬ್ಬರನ್ನು ಕರೆಯಬೇಡಿ. ಎಡಗೈಗೆ ಎಟಕುವಷ್ಟು ಹತ್ತಿರದಲ್ಲಿ ವ್ಹಿಸ್ಕಿ ಇದೆಯಾ? ಅಪ್ಪಿತಪ್ಪಿ ಕೂಡ ಅದನ್ನು ಮುಟ್ಟಬೇಡಿ. ದುಃಖ ಮರೆಯುವುದಕ್ಕಾಗಿ ವ್ಹಿಸ್ಕಿ ಕುಡಿಯುವುದಿದೆಯಲ್ಲ ಅದು, ಜ್ವರವನ್ನು postpone ಮಾಡುವುದಕ್ಕಾಗಿ ಕ್ರೋಸಿನ್ ತಗೊಂಡ ಹಾಗೆ. ಎರಡು ದಿನ ಬಿಟ್ಟು ಮತ್ತೆ ಬರುತ್ತದೆ ಜ್ವರ. ದುಃಖ ಕೂಡ ಹಾಗೆಯೇ. ನೀವು ಎಷ್ಟೇ ಕಣ್ತಪ್ಪಿಸಿ ಓಡಾಡಿದರೂ, ಯಾರ ಮಧ್ಯಕ್ಕೇ ಹೋಗಿ ಕುಳಿತರೂ ನಿಮಗೇ ಅರಿವಿಲ್ಲದಂತೆ ಕವುಚಿಕೊಂಡು ಮೈಮೇಲೆ ಬಿದ್ದುಬಿಡುತ್ತದೆ ದುಃಖ. ಅದರ ಪಾಡಿಗೆ ಅದನ್ನು ಆಕ್ರಮಿಸಿಕೊಳ್ಳಲು ಬಿಡಿ. ಕ್ಷಣದ ಮಟ್ಟಿಗೆ ದುಃಖ ನಮ್ಮನ್ನು ತತ್ತರಿಸುವಂತೆ ಮಾಡುತ್ತದೆ. ಇಲ್ಲಿಗೆ ಎಲ್ಲವೂ ಮುಗಿದು ಹೋಯಿತೇನೋ ಅನ್ನಿಸಿಬಿಡುತ್ತದೆ. ದಿಕ್ಕು ಕಾಣದಾಗುತ್ತದೆ. ಅವೆಲ್ಲವೂ ಆಗಲಿ. ಅವುಗಳಿಂದ ಕಂಗೆಡುವಂತಾದರೆ, ಅದೂ ಸರಿಯೇ. ಕಂಗೆಟ್ಟುಬಿಡಿ. ಆದರೆ ಅದರಿಂದ ತಕ್ಷಣಕ್ಕೆ ಬಿಡುಗಡೆ ಹೊಂದಲು ಹವಣಿಸಬೇಡಿ. ದುಃಖಕ್ಕೂ ಜ್ವರಕ್ಕೂ ತುಂಬ ಸಾಮ್ಯವುಂಟು. ಆಗೊಮ್ಮೆ ಈಗೊಮ್ಮೆ ಜ್ವರ ಬಂದೇಳುವುದು ದೇಹಕ್ಕೆ ಒಳ್ಳೆಯದು ಅಂತಾರೆ. ಸಂಸ್ಕೃತದಲ್ಲಿ ಬಹುಶಃ ‘ಜ್ವರ’ ಅಂದರೆ ವ್ಯತ್ಯಾಸ. ದುಃಖ ಕೂಡ ಒಂದರ್ಥದಲ್ಲಿ ವ್ಯತ್ಯಾಸವೇ. ಏನನ್ನೋ ಕಳೆದುಕೊಂಡ ದುಃಖ. ಯಾರಿಂದಲೋ ಮೋಸ ಹೋದ ದುಃಖ. ತುಂಬ ಹತ್ತಿರದವರು ಸತ್ತುಹೋದರೆಂಬ ಶೋಕ. ಪರೀಕ್ಷೆಯಲ್ಲಿ ವಿಫಲರಾಗಿ ಬಿಟ್ಟ ನಿರಾಸೆ. ಎಲ್ಲವೂ ಒಂದೇ ರೀತಿಯವು.

ಅವತ್ತಿನ ಮಟ್ಟಿಗೆ, ಆ ಕ್ಷಣದ ಮಟ್ಟಿಗೆ ಪ್ರತಿ ದುಃಖವೂ ಬಲುದೊಡ್ಡ ದುಃಖವೆನಿಸುತ್ತದೆ. ನೆಗಡಿಯಾದಾಗ ಮಾತನಾಡಿಕೊಳ್ಳುತ್ತೀವಲ್ಲ? ‘ಬೇರೆ ಏನಾದರೂ ಆಗಬಹುದು: ಈ ನೆಗಡಿಯೊಂದು ಆಗಬಾರದು ನೋಡಿ’ ಅಂತ. ದುಃಖದ ವಿಚಾರದಲ್ಲೂ ಆ ಮಾತು ಸತ್ಯ. ‘ಇದು ಬಿಟ್ಟು ಬೇರೆ ಯಾವ ತರಹದ ದುಃಖ ಬಂದಿದ್ದರೂ ಸಹಿಸಿಕೊಳ್ಳುತ್ತಿದ್ದೆ’ ಅನ್ನುತ್ತಿರುತ್ತೇವೆ. ಆ ನಿಮಿಷಕ್ಕೆ ಹಾಗನ್ನಿಸುತ್ತಿರುತ್ತದೆ. ಆದರೆ ಪ್ರತಿ ದುಃಖಕ್ಕೂ ತನ್ನದೇ ಆದ ತೀವ್ರತೆ, ಇಂಟೆನ್ಸಿಟಿ, ಗಾಢತೆ ಇರುತ್ತವೆ. ದೊಡ್ಡ ದುಃಖ ಬರುವುದಕ್ಕೆ ಮುಂಚೆ ಚಿಕ್ಕಪುಟ್ಟ ದುಃಖಗಳೇ ಮಹಾ ಅನ್ನಿಸುತ್ತಿರುತ್ತವೆ. ಆದರೆ ಎಂಥ ಕಠೋರವಾದ ದುಃಖಕ್ಕೂ ಒಂದು ಆಯಸ್ಸು ಅಂತ ಇರುತ್ತದೆ. ಇವತ್ತು ಕಣ್ಣೊಳಗೆ ನೆಟ್ಟ ಮುಳ್ಳು ಕಾಡಿದಂತೆ ಕಾಡುವ ದುಃಖ, ನಾಳೆ ಹೊತ್ತಿಗೆ ಕೊಂಚ ಕಡಿಮೆಯಾಗಿರುತ್ತದೆ. ಅದಕ್ಕೇ ಕಣ್ಣೀರು ಕೆಡವಬೇಕು ಅಂತ ಹೇಳಿದ್ದು. ಅಳು ನಮ್ಮನ್ನು ಹಗುರಾಗಿಸುತ್ತದೆ. ಹಾಗೆ ಕೊಂಚ ಹಗುರಾದ ಮೇಲೆ ಆ ದುಃಖದಿಂದ ಬಿಡುಗಡೆ ಪಡೆಯುವ ಮಾರ್ಗ ಆಲೋಚಿಸಿ. ಅದು short term ದುಃಖವಾ,long term ದುಃಖವಾ ಅಂತ ಮೊದಲು ತೀರ್ವನಿಸಿ. short term ದುಃಖಗಳಿಗೆ ಸ್ಥಳ ಬದಲಾವಣೆ, ಓದು, ವ್ಯಾಯಾಮ ಮುಂತಾದವು ಔಷಧಗಳಂತೆ ಕೆಲಸ ಮಾಡುತ್ತವೆ. ಸುದೀರ್ಘ ದುಃಖಗಳಿಗೆ ಬೇರೆಯೇ ದಾರಿ ಹುಡುಕಬೇಕು. ನಮ್ಮ ಜೀವನಶೈಲಿ ಬದಲಿಸಿಕೊಳ್ಳಬೇಕು, ಖಿನ್ನತೆ ಆವರಿಸಿಕೊಳ್ಳಲು ಜಾಗವಿರದಷ್ಟು ನಮ್ಮ ಪ್ರತಿನಿತ್ಯದ ಷೆಡ್ಯೂಲ್ ರೂಪಿಸಿಕೊಂಡು ಬಿಡಬೇಕು. ಆರಂಭದ ಹಂತದಲ್ಲಿ ಅತ್ತು ಹಗುರಾಗುವುದು ಒಳ್ಳೆಯದೇ ಆದರೂ, ಅಳುವುದನ್ನು ರೂಢಿ ಮಾಡಿ ಕೊಂಡುಬಿಡಬೇಡಿ. ಗತಿಸಿ ಹೋದುದಕ್ಕಾಗಿ, ಸರಿಪಡಿಸಲು ಸಾಧ್ಯವಿಲ್ಲದುದಕ್ಕಾಗಿ ತುಂಬ ದಿನ ಅತ್ತು ಪ್ರಯೋಜನವಿಲ್ಲ. ಕ್ರಮೇಣ ನೀವೇ, ಇನ್ನೊಬ್ಬರ ಆಸರೆ ಇಲ್ಲದೆ ದುಃಖದ ಚಿಪ್ಪಿನಿಂದ ಹೊರಬನ್ನಿ. ಹೊಸ ಹವ್ಯಾಸಗಳತ್ತ ಗಮನಹರಿಸಿ. ಹೊಸದೇನನ್ನಾದರೂ ಕಲಿಯಲು, ಸಾಧಿಸಲು ಸಾಧ್ಯವಾ? ನೋಡಿ. ಜೀವನವೆಂಬುದು ಎಷ್ಟೇ ನಿರ್ದಯಿಯಾಗಿ ನಮ್ಮನ್ನು ನಡೆಸಿಕೊಂಡರೂ, ಎಲ್ಲೋ ಒಂದು ಕಡೆ ಇನ್ನೊಂದು option ಅಂತ ಇದ್ದೇ ಇರುತ್ತದೆ. ದುಃಖವೆಂಬುದು short termನದಾಗಿರಬಹುದು, long termನದೂ ಆಗಿರಬಹುದು: ಆದರೆlife time ದುಃಖ ಅಂತ ಯಾವುದೂ ಇರುವುದಿಲ್ಲ. ನಿಮಗೆ ದುಃಖವನ್ನು ಸ್ವಿಚ್ ಆಫ್ ಮಾಡಿದಂತೆ ಮಾಡಿ ದೂರವಿಡುವುದು ಗೊತ್ತಾಗಬೇಕಷ್ಟೆ.

ಕೆಲವು ವಿಷಯಗಳ ಬಗ್ಗೆ ನಾನು particular. ಕರಾರುವಾಕ್ಕಾಗಿ ಹೀಗೇ ಇರಬೇಕು, ಹೀಗೇ ಆಗಬೇಕು ಅಂತ ನಾನು ಹಟ ಮಾಡುವುದು ನನ್ನ ಬರವಣಿಗೆಯ ಬಗ್ಗೆಯೇ. ಆದರೆ ಕೆಲವರಿರುತ್ತಾರೆ, ವಿಪರೀತ ಶಿಸ್ತಿನವರು. ಕನ್ನಡಕ ಇಲ್ಲೇ ಇಡಬೇಕು. ಬೆಂಕಿಪೊಟ್ಟಣ ದೇವರ ಗೂಡಿನ ಪಕ್ಕದಲ್ಲೇ ಇಡಬೇಕು. ಬಾಚಣಿಗೆ ಕನ್ನಡಿಯ ಪಕ್ಕದಲ್ಲೇ ಇರಬೇಕು. ಮನೆಯ ಬೀಗದ ಕೈ ಇಂಥ ಮೊಳೆಗೇ ನೇತಾಡಿಸಬೇಕು: ಹೀಗೆ. ಇವುಗಳಲ್ಲಿ ಕೊಂಚ ಏರುಪೇರಾದರೂ ಸಹಿಸಲಾರರು. ನಾನು ಭಯಂಕರ ಅಶಿಸ್ತಿನ ಮನುಷ್ಯ. ಆದರೆ ಸಂಸ್ಥೆಗಳನ್ನು ಕಟ್ಟಬೇಕೆಂದರೆ ಕೆಲವು ನಿಯಮಗಳನ್ನು ಮಾಡಿಕೊಳ್ಳಲೇಬೇಕು. ಅಂಥ ಕೆಲವು ನಿಯಮಗಳನ್ನು ‘ಪತ್ರಿಕೆ’ ಕಟ್ಟುವಾಗ ಮಾಡಿದೆ. ‘ಪ್ರಾರ್ಥನಾ’ ಸ್ಕೂಲ್ ಕಟ್ಟುವಾಗ ಮಾಡಿದೆ. ಎಷ್ಟು ಸರಳವಾದ, ಆದರೆ ಕರಾರುವಾಕ್ಕಾದ ನಿಯಮಗಳು ಅಂದರೆ, ಅವುಗಳನ್ನು ಪಾಲಿಸುವುದು ಯಾರಿಗೂ ಕಷ್ಟವಲ್ಲ. ಪಾಲಿಸದೆ ಇದ್ದರೆ ಮಾತ್ರ ನಾನು ವಿಪರೀತ upset ಆಗುತ್ತಿದ್ದೆ. ಈಗಲೂ ಆಗುತ್ತೇನೆ. ಉದಾಹರಣೆಗೆ, ದುಡ್ಡು. ಬಂದ ಹಣವನ್ನು ಆಫೀಸಿನಲ್ಲಾಗಲೀ ಶಾಲೆಯಲ್ಲಾಗಲೀ ಇಟ್ಟುಕೊಳ್ಳಬೇಡಿ. ಅವತ್ತಿನದವತ್ತು ಬ್ಯಾಂಕಿಗೆ ಕಳಿಸಿಬಿಡಿ ಅಂತ ಒಂದು ನಿಯಮ ಮಾಡಿದ್ದೇನೆ. ಮಾಡುವ ಪ್ರತಿ ವ್ಯವಹಾರವನ್ನೂ ಚೆಕ್ ಮೂಲಕವೇ ಮಾಡಬೇಕು ಅನ್ನುವುದು ಇನ್ನೊಂದು ನಿಯಮ. ದುಡ್ಡುಕಾಸಿನ ವಿಷಯದಲ್ಲಿ ಒಂದು system ಅಂತ ಇಟ್ಟುಕೊಂಡು ಬಿಟ್ಟರೆ ಅದು ಯಾವತ್ತಿಗೂ, ಯಾರು ಬಂದರೂ ಬದಲಾಗುವುದಿಲ್ಲ. ಸುಳ್ಳೇ ಅನುಮಾನಗಳಿರುವುದಿಲ್ಲ. ಆತಂಕವಿರು ವುದಿಲ್ಲ. ಸಂಸ್ಥೆಯಲ್ಲಿ cash ಇಡಲೇಬಾರದು ಮತ್ತು ಎಲ್ಲ ವ್ಯವಹಾರವನ್ನೂ ಚೆಕ್ ಮೂಲಕವೇ ಮಾಡಬೇಕು ಎಂಬ ನಿಯಮ ಮಾಡಿಕೊಂಡ ಮೇಲೆ ಹಣ ಪೋಲಾಗುವ, ಸೋರಿ ಹೋಗುವ, ಯಾರ ಮೇಲಾದರೂ ತುಂಬ depend ಆಗುವ ಅಥವಾ ಅನುಮಾನ ಪಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸಿಸ್ಟಮ್ ಸರಿಯಾಗಿದೆಯಾ ಅಂತ ನೋಡಿಕೊಳ್ಳಿ. ಅದನ್ನು ಅನುಸರಿಸಿ ಯಾವುದೂ ವ್ಯತ್ಯಾಸವಾಗುವುದಿಲ್ಲ. ನಿಮಗಾದರೂ ನಾನು ಅದನ್ನೇ ಹೇಳುವುದು! ಅಲ್ಲಿ ನೀವಿರುತ್ತೀರೋ ಇಲ್ಲವೋ? ಒಂದು system ಅಂತ ಸ್ಥಾಪಿಸಿ. ಅದು ಶಾಶ್ವತವಾಗಿರುತ್ತದೆ.

(ಲೇಖಕರು ಹಿರಿಯ ಪತ್ರಕರ್ತರು)