ಅಂಕಣ

ರಂಗಭೂಮಿಯ ಸವಾಲು, ಸಾಧ್ಯತೆಗಳು

ಬಾಬುಪ್ರಸಾದ್​ ಮೋಡಿಸ್​

ರಂಗಭೂಮಿಯ ಮಹತ್ವ ಸಾರಲು ಪ್ರತಿ ವರ್ಷ ಮಾರ್ಚ್ 27ರಂದು ವಿಶ್ವ ರಂಗಭೂಮಿ ದಿನ ಆಚರಿಸಲಾಗುತ್ತದೆ. ಮನರಂಜನೆಯಲ್ಲಿ ರಂಗಭೂಮಿಯ ಪ್ರಾಮುಖ್ಯ ಹಾಗೂ ಅದು ಜನರ ಜೀವನದ ಮೇಲೆ ಬೀರುವ ಸಕಾರಾತ್ಮಕ ಪರಿಣಾಮಗಳನ್ನು ಸಾಕ್ಷೀಕರಿಸುತ್ತದೆ. ವಿಶಿಷ್ಟ ಕಲಾ ಪ್ರಕಾರವಾಗಿರುವ ರಂಗಭೂಮಿಯು ನಟನೆ, ಕಥೆ ಹೇಳುವಿಕೆ, ಸಂಗೀತ, ದೃಶ್ಯ ವಿನ್ಯಾಸ ಎಲ್ಲವನ್ನೂ ಒಟ್ಟುಗೂಡಿಸಿ ಪ್ರೇಕ್ಷಕರನ್ನು ವಿಭಿನ್ನ ಲೋಕಕ್ಕೆ ಕರೆದೊಯ್ಯುವ ನೇರ ಪ್ರದರ್ಶನ ಕಲೆ ಆಗಿದೆ. ಈ ನಿಟ್ಟಿನಲ್ಲಿ ರಂಗಭೂಮಿ ಸದ್ಯದ ಪರಿಸ್ಥಿತಿ ಹಾಗೂ ಭವಿಷ್ಯದಲ್ಲಿ ಆಗಬೇಕಿರುವ ಬದಲಾವಣೆ ಮತ್ತು ಬೆಳವಣಿಗೆಗಳ ಕುರಿತು ಹಿರಿಯ ರಂಗಕರ್ವಿುಗಳು ವಿಜಯವಾಣಿಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪ್ರೋತ್ಸಾಹ ಬೇಕಿದೆ

| ಕೆ.ವಿ. ನಾಗರಾಜ ಮೂರ್ತಿ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ

ರಂಗಭೂಮಿ ಕ್ರಿಯಾಶೀಲ ಮಾಧ್ಯಮವಾಗಿದೆ. ವೃತ್ತಿ ರಂಗಭೂಮಿ, ಹವ್ಯಾಸಿ ರಂಗಭೂಮಿ ಮತ್ತು ಗ್ರಾಮೀಣ ಭಾಗದ ಪೌರಾಣಿಕ ರಂಗಭೂಮಿ ಮೂರೂ ಭಿನ್ನ ರೀತಿಯಿಂದ ಕೂಡಿವೆ. ರಂಗಭೂಮಿ ಚಟುವಟಿಕೆಗಳಿಗೆ ಸರ್ಕಾರದ ನೆರವು ಸಂತಸ ಅನ್ನಿಸಿದರೂ, ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ ನೀಡುತ್ತಿರುವ ಅನುದಾನ ಬಹಳ ಕಡಿಮೆ ಇದೆ. ಹೆಚ್ಚಿನ ಆರ್ಥಿಕ ನೆರವು ಹಾಗೂ ಪ್ರೋತ್ಸಾಹದ ಅಗತ್ಯವಿದೆ. ಇಂದಿನ ದಿನಗಳಲ್ಲಿ ಒಂದು ನಾಟಕ ತಯಾರು ಮಾಡಲು ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಆದರೆ ಸರ್ಕಾರ ಕರ್ನಾಟಕ ನಾಟಕ ಅಕಾಡೆಮಿ ಸೇರಿ ಅಕಾಡೆಮಿಗಳಿಗೆ ನೀಡುತ್ತಿರುವ 80 ಲಕ್ಷ ರೂ. ಅನುದಾನ ಬಹಳ ಕಡಿಮೆ ಇದೆ. ಇದರಿಂದ ಹವ್ಯಾಸಿ ರಂಗ ಕಲಾವಿದರಿಗೆ ಏನೇನೂ ಪ್ರಯೋಜನ ಆಗುತ್ತಿಲ್ಲ. ಹಾಗಾಗಿ ಇದನ್ನು ಕನಿಷ್ಠ ಒಂದೂವರೆ ಕೋಟಿ ರೂ.ಗೆ ಏರಿಸಬೇಕು. ಹಣಕಾಸು ಕೊರತೆಯ ಹೊರತಾಗಿಯೂ ರಂಗಭೂಮಿ ಎದುರಿಸುತ್ತಿರುವ ಸಮಸ್ಯೆ ಜಿಲ್ಲಾ ರಂಗ ಮಂದಿರಗಳದ್ದು. ಅವುಗಳ ಪುನಶ್ಚೇತನ ಕಾರ್ಯ ಆಗಬೇಕಿದೆ.

‘ರಂಗಭೂಮಿ ಅಭಿವೃದ್ಧಿ ಪ್ರಾಧಿಕಾರ’ ರಚನೆಗಾಗಿ 1987ರಲ್ಲಿ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಿಗೆ ಮನವಿ ಮಾಡಲಾಗಿತ್ತು. ಆ ಬೇಡಿಕೆ ಈವರೆಗೂ ಈಡೇರಿಲ್ಲ. ಹಾಗಾಗಿ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಈ ಕುರಿತು ಮನವಿ ಮಾಡಲಾಗಿದ್ದು, ಇನ್ನಾದರೂ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ರಂಗಭೂಮಿಗೆ ಅನುದಾನ ಎಷ್ಟು ಮುಖ್ಯವೋ, ರಂಗಮಂದಿರಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಅಷ್ಟೇ ಮುಖ್ಯ. ಹಾಗಾಗಿ ರಂಗಭೂಮಿ ಅಭಿವೃದ್ಧಿ ಪ್ರಾಧಿಕಾರದ ರಚನೆಯಿಂದಾಗಿ ರಂಗ ಮಂದಿರಗಳ ನಿರ್ವಹಣೆ ಆಗುವುದರ ಜತೆಗೆ ರಂಗ ಕಲಾವಿದರಿಗೆ ವೇದಿಕೆ ದೊರೆಯಲಿದೆ.

ಎಐ ಆತಂಕ

| ಶ್ರೀನಿವಾಸ ಜಿ. ಕಪ್ಪಣ್ಣ, ಹಿರಿಯ ರಂಗಕರ್ವಿು

ಯುನೆಸ್ಕೋ ಕರೆಯ ಮೇರೆಗೆ ಪ್ರತಿ ವರ್ಷ ಮಾರ್ಚ್ 27ರಂದು ವಿಶ್ವ ರಂಗಭೂಮಿ ದಿನ ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದ ಈ ಆಚರಣೆ ಸಂದರ್ಭದಲ್ಲಿ ಅತ್ಯಂತ ಹಿರಿಯರಾದ ಹಾಗೂ ರಂಗಭೂಮಿಗೆ ಅತ್ಯುತ್ತಮ ಕೊಡುಗೆ ನೀಡಿರುವ ರಂಗಕರ್ವಿುಯೊಬ್ಬರನ್ನು ಆಯ್ಕೆ ಮಾಡಿ ಅವರ ಮೂಲಕ ಸಂದೇಶ ಕೊಡಿಸುವುದು ಈ ದಿನದ ಮತ್ತೊಂದು ವಿಶೇಷವಾಗಿದೆ. ಅದೇ ರೀತಿ ಈ ಬಾರಿ ಗ್ರೀಕ್ ನಿರ್ದೇಶಕರು ರಂಗಭೂಮಿ ಕುರಿತು ನೀಡಿರುವ ಸಂದೇಶ ಎಚ್ಚರಿಕೆ ಗಂಟೆಯಾಗಿದೆ.

ರಂಗಭೂಮಿಯ ಆರಂಭ ಜನಪದ ರಂಗಭೂಮಿಯಿಂದ. ನಂತರದಲ್ಲಿ ಗ್ರಾಮೀಣ ರಂಗಭೂಮಿ, ಕಂಪನಿ, ಹವ್ಯಾಸಿ ರಂಗಭೂಮಿ ಬೆಳೆದುಬಂತು. ಈ ಎಲ್ಲದರ ಹಿಂದೆ ಮುಖ್ಯವಾದ ವಿಷಯ ಎಂದರೆ ಇದೆಲ್ಲವೂ ಪ್ರತಿಭೆ ಆಧಾರಿತ ಕ್ರಿಯೆ. ಯಾರಿಗೆ ಪ್ರತಿಭೆ ಇರುತ್ತದೋ, ನಟನೆ ಮಾಡಲು, ಹಾಡು ಹೇಳಲು ಸಾಧ್ಯವಾಯಿತೋ ಅವರು ನಟರಾಗಿ ಬೆಳೆದರು. ಆದರೆ ಪ್ರಸ್ತುತ ತಂತ್ರಜ್ಞಾನ ಯುಗದಲ್ಲಿ ಇದು ಸುಲಭ ಸಾಧ್ಯವಲ್ಲ. ಇಂದು ಯಾವುದೇ ಕ್ಷೇತ್ರವನ್ನೂ ಬಿಡದೆ ಎಲ್ಲ ಕಡೆ ಕೃತಕ ಬುದ್ಧಿಮತ್ತೆ (ಎಐ) ಕಾಲಿಡುತ್ತಿದೆ. ಇದು ರಂಗಭೂಮಿಗೂ ಹೊರತಾಗಿಲ್ಲ. ಹಾಗೇನಾದರೂ ಎಐ ತಂತ್ರಜ್ಞಾನ ಈ ಕ್ಷೇತ್ರವನ್ನು ಪ್ರವೇಶಿಸಿದರೆ, ಅದನ್ನು ಕಲಾವಿದರು ಒಪ್ಪಲು ಸಾಧ್ಯವಾದರೆ ಇಡೀ ರಂಗಭೂಮಿಯ ವ್ಯವಸ್ಥೆ ಬದಲಾಗಿ ಹೋಗುತ್ತದೆ. ಏಕೆಂದರೆ ಎಐಗೆ ತಾಂತ್ರಿಕ ಜ್ಞಾನ ಇರುತ್ತದೆ. ಆದರೆ ಹೃದಯದಿಂದ ಯೋಚಿಸುವ, ಬುದ್ಧಿಯಾಗಲಿ, ವಿವೇಚನೆಯಾಗಲಿ ಇರುವುದಿಲ್ಲ. ಇದರಿಂದ ಏನಾಗಬಹುದು ಎಂಬ ಆತಂಕ ಎಲ್ಲೆಡೆ ಇದೆ. ಹಾಗಾಗಿ ರಂಗಭೂಮಿ ಕಲಾವಿದರು ಈ ಎಐ ತಂತ್ರಜ್ಞಾನದಿಂದ ದೂರವಿದ್ದು, ಪ್ರತಿಭೆ ಮತ್ತು ಸಾಮರ್ಥ್ಯದೊಂದಿಗೆ, ಶ್ರದ್ಧೆ ಹಾಗೂ ಗೌರವದಿಂದ ರಂಗಭೂಮಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಬೇಕಿದೆ.

ನಾಟಕಕಾರರ ಕೊರತೆ

ರಂಗಭೂಮಿ ಪ್ರಸ್ತುತ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ ಮತ್ತು ಸವಾಲು ಎಂದರೆ ನಾಟಕ ರಚನೆಕಾರರ ಕೊರತೆ. ಇಂದಿನ ರಂಗಭೂಮಿಯಲ್ಲಿ ಉತ್ತಮ ನಾಟಕ ರಚನೆ ಮಾಡುವವರೇ ಇಲ್ಲವಾಗಿದ್ದಾರೆ. ಈ ನಿಟ್ಟಿನಲ್ಲಿ ನಾಟಕ ರಚನೆ ಹಾಗೂ ರಂಗ ಕಲೆ ಕುರಿತು ತರಬೇತಿ ನೀಡಲು ಕಾರ್ಯಾಗಾರಗಳನ್ನು ಏರ್ಪಡಿಸಬೇಕಿದೆ. ಆ ಮೂಲಕ ರಂಗಭೂಮಿಗೆ ಸಂಬಂಧಿಸಿದಂತೆ ಮಾಹಿತಿ ಒದಗಿಸುವ ಅಗತ್ಯವಿದೆ. ಆಧುನಿಕ ಹಾಗೂ ತಂತ್ರಜ್ಞಾನ ಯುಗದಲ್ಲೂ ರಂಗಭೂಮಿ ಕಲೆ ತನ್ನದೇ ಆದ ಸ್ಥಾನವನ್ನು ಉಳಿಸಿಕೊಂಡು ಬಂದಿರುವುದಕ್ಕೆ ಇತ್ತೀಚೆಗೆ ನಡೆದ ‘ರಂಗ ಪರಿಷೆ’ಯೇ ಸಾಕ್ಷಿಯಾಗಿದೆ. ಅದರ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ ಪ್ರತಿ ವರ್ಷ ರಂಗ ಪರಿಷೆಯನ್ನು ನಡೆಸಲು ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕ್ರಿಯಾಯೋಜನೆಯಲ್ಲಿ ಒಂದೂವರೆ ಕೋಟಿ ರೂ. ಅನುದಾನ ಮೀಸಲಿಡಬೇಕು.