ಅಂಕಣ

ಬದುಕಿನ ಕೌಶಲ ಕಲಿಸುವ ರಂಗ ಶಿಕ್ಷಣ: ವಿಜಯವಾಣಿ ಸೆಲೆಬ್ರಿಟಿ ಕಾರ್ನರ್​ನಲ್ಲಿ ಮಂಡ್ಯ ರಮೇಶ್​

ಶಿಕ್ಷಣದಲ್ಲಿ ರಂಗಭೂಮಿಯ ಪಾತ್ರ ಉಳಿದ ವಿಷಯಗಳಷ್ಟೇ ಮುಖ್ಯವಾದದ್ದು ಎಂದು ಶಿಕ್ಷಣ ವಲಯಕ್ಕಿರಲಿ, ಇತರ ವಿಷಯವನ್ನು ಬೋಧಿಸುವ ಶಿಕ್ಷಕರಿಗೇ ಅರಿವಾದಂತಿಲ್ಲ. ಅಕಸ್ಮಾತ್ ಅದು ಅರಿವಾದರೂ ತಮ್ಮ ವಿಷಯಗಳನ್ನು ಮಕ್ಕಳು ಪ್ರೀತಿಸದೇ ಹೋಗಬಹುದೆಂಬ ಆತಂಕವೂ ಇರಬಹುದು. ರಂಗ ಶಿಕ್ಷಕರಿಗೆ ಕೊಡುವ ಪಿರಿಯಡ್​ಗಳೂ ಕಡಿಮೆ.
  • ಅಪ್ಪ -ಅಮ್ಮ ಗುಡಿಸಲಿನಲ್ಲಿ ಒಟ್ಟಿಗೆ ಸುಟ್ಟುಹೋದದ್ದನ್ನು ನೋಡಿದ ಮಗ
  • ಅಮ್ಮನನ್ನು ಅನುಮಾನಿಸಿ ಅವಳ ಮುಂದೆಯೇ ಇನ್ನೊಬ್ಬಳನ್ನು ಮದುವೆಯಾಗಿ ಓಡಿಹೋದ ಅಪ್ಪನ ದೌರ್ಜನ್ಯ ಕಂಡ ಮಗಳು
  • ಪಾಕ್ ಗಡಿಯಲ್ಲಿ ಮೃತನಾದ ಯೋಧ ಅಪ್ಪ, ಹುಚ್ಚನಾದ ಮಗ
  • ಜಾತಿ ಕಾರಣಕ್ಕಾಗಿ ಊರಿನಿಂದ ಓಡಿಸಿದವರನ್ನು ನೋಡುತ್ತಲೇ ಹೊರಗೆ ಬೆಳೆದ ಯುವಕ
  • ಅಪ್ಪ-ಅಮ್ಮ, ಬಂಧು-ಬಳಗ, ಸ್ನೇಹಿತರು ಯಾರನ್ನೂ ನೋಡದೆ ಮೌನವಾಗಿ ಬೆಳೆದ ಮಹಾಮೌನಿ ಯುವಕ
  • ಪ್ರಿಯಕರನಿಂದ ಮೋಸಹೋಗಿ ಎದೆಯಲ್ಲಿ ಬೆಂಕಿ ಇಟ್ಟುಕೊಂಡ ಯುವತಿ
  • ಬಡತನ ತಾಳಲಾರದೇ ನೇಣುಹಾಕಿಕೊಳ್ಳಲು ಹೋಗಿ ವಿಫಲನಾಗಿ ಖಿನ್ನತೆಯಿಂದ ಬಳಲುತ್ತಿರುವ ಅಂತಮುಖಿ
  • ಗೆಳತಿಯರಿಗಿಂತ ತಾನು ಚಂದವಿಲ್ಲ, ತಾನು ಒಂಟಿ ಅಂತ ನರಳಿ ಪದೇಪದೆ ಉದ್ವೇಗಕ್ಕೊಳಗಾಗುವ ರೈತನ ಮಗಳು
  • ಬೃಹತ್ ಉದ್ಯಮಿ ಅಪ್ಪ - ಬಾಲ್ಯದಲ್ಲೇ ಮಲತಾಯಿ ಆಶ್ರಯದಲ್ಲಿ ಬೆಳೆದು ಮಮತೆಯಿಂದ ವಂಚಿತಳಾಗಿ, ಸಂಬಂಧಿಕರಿಂದಲೇ ದೌರ್ಜನ್ಯಕ್ಕೊಳಗಾಗಿ, ಎಲ್ಲ ಇದ್ದೂ ಏನೂ ಇಲ್ಲದಂತಿರುವ ಶ್ರೀಮಂತ ತರುಣಿ

...ಹೀಗೆ ಅಸಂಖ್ಯ ಅಸಹಾಯಕ ಜೀವಿಗಳಿಗೆ ರಂಗ ತರಬೇತಿಯೆಂಬ ದಿವ್ಯಮಂತ್ರವೇ ಮದ್ದಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತು ಸಹಜವಾಗಿ ಬದುಕುವ ಬಗೆಯನ್ನೂ ಸಮೀಪದಲ್ಲಿ ಕಂಡವ ನಾನು. ಅವರ ವೈಯಕ್ತಿಕ ಬದುಕಿನ ನೋವಿನ ಕಥೆಗಳಿಗೆ ರಂಗ ತಾಲೀಮಿನಲ್ಲಿ ಭಾವಗಳ ಅಭಿವ್ಯಕ್ತಿಯ ನೆಪದಲ್ಲಿ ಅದುಮಿಟ್ಟ ನೋವು, ಹತಾಶೆ, ಆಕ್ರೋಶಗಳು ರಂಗದಲ್ಲಿ ಪಾತ್ರಗಳ ಮೂಲಕ ಬಿಡುಗಡೆಗೊಂಡು ಎಂದಿನ ಸಹಜ ಸ್ಥಿತಿಗೆ ಮರಳಿ ನೆಮ್ಮದಿ ಕಂಡುಕೊಂಡಿದ್ದನ್ನು ಕಣ್ಣಾರೆ ಕಂಡಿದ್ದೇನೆ.

ಅತಿ ಭಾವೋದ್ವೇಗದ ಮನೋಭಾವಗಳನ್ನು ಸಹ ಅಗತ್ಯಕ್ಕೆ ತಕ್ಕಂತೆ ಪ್ರಕಟಿಸಲು ಸಲೀಸಾಗುವ ಸಾಮರ್ಥ್ಯಗಳನ್ನು ರಂಗ ತರಬೇತಿಯಲ್ಲಿ ನಾಟಕ ಕಲಿಕೆಯ ಹೆಸರಿನಲ್ಲಿ ಮಾಡಲಾಗುತ್ತಿರುತ್ತದೆ. ಹಾಗಾಗಿ ಇದು ನಿಸ್ಸಂಶಯವಾಗಿ ಚಿಕಿತ್ಸಕ ಪದ್ಧತಿ!

ತಾನು ಇನ್ನೊಂದು ಪಾತ್ರವಾಗುವುದಕ್ಕೆ ಬೇಕಾದ ತಯಾರಿಯ ಹಿಂದೆ, ಆ ಪಾತ್ರದ ಪೂರ್ಣ ವಿವರಗಳನ್ನು ಕಲೆಹಾಕುವ ಕೌಶಲದೊಂದಿಗೆ ಆತನ ನೆಲೆಯಲ್ಲಿ ಈ ಪಾತ್ರವನ್ನು, ಸಂದರ್ಭವನ್ನು, ವ್ಯವಸ್ಥೆಯನ್ನು ಗಮನಿಸುವ, ವರ್ತಿಸುವ, ಪ್ರತಿಕ್ರಿಯಿಸುವ ಬಗೆಯನ್ನೂ ನಟ ಅಭ್ಯಾಸ ಮಾಡಲೇಬೇಕಾಗುತ್ತದೆ. ನಟನೆಯ ಕಲಿಕೆಯೆಂಬುದೊಂದು ಸುದೀರ್ಘ ಯಾನ. ಅಪರೂಪಕ್ಕೊಮ್ಮೆ ಆಕಸ್ಮಿಕವಾಗಿ ಗೆದ್ದು ಬೀಗುವುದೊಂದು ಭ್ರಮೆ ನಮಗೆ. ಆದರೆ, ಆ ತತ್ತ್ವದ ಹಿಂದೆ ಇರುವ ದರ್ಶನವನ್ನು ತಲೆಮಾರಿಗೆ ದಾಟಿಸುವ ಜವಾಬ್ದಾರಿಗೆ ಇನ್ನೂ ನಾವು ಮನಸ್ಸು ಮಾಡಿಲ್ಲ. ಯಾಕೆಂದರೆ, ರಂಗಭೂಮಿ ನಟನೆ, ರಂಗಶಿಕ್ಷಣ ಮತ್ತು ಶಿಕ್ಷಣದಲ್ಲಿ ರಂಗಭೂಮಿಯ ಮಹತ್ವವನ್ನು ಅರಿಯುವ ಗೋಜಿಗೆ ಸರ್ಕಾರ ಮತ್ತು ಶಿಕ್ಷಣ ಇಲಾಖೆಗಳು ಹೋಗಿಯೇ ಇಲ್ಲ. ಶಿಕ್ಷಕ ಮಾತ್ರವಲ್ಲ ಪ್ರತೀ ಮಗುವಿಗೂ ಸಂವಹನ ಕೌಶಲವನ್ನು ಕಲಿಸಲೇ ಬೇಕಾದ್ದು ಇವತ್ತಿನ ತುರ್ತಾಗಿದೆ. ಪ್ರತೀ ರಂಗಾಟವೂ (Theatre Games) ಮಗುವಿನ, ಸಹಪಾಠಿಗಳ ಮತ್ತು ಮೇಷ್ಟ್ರು ನಡುವಿನ ಸಂಬಂಧವನ್ನು ಹೆಚ್ಚಿಸುತ್ತ, ಬಿರುಕುಗಳನ್ನು ಕಡಿಮೆ ಮಾಡುತ್ತಾ ಸೌಹಾರ್ದ ವಾತಾವರಣ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸದಾ ಮುದುರಿಕೊಂಡೇ ಇರುತ್ತಿದ್ದ ಬಾಲಕ-ಬಾಲಕಿಯರು ನಾಟಕ ಕಲಿಕೆಯ ಪಿರಿಯಡ್ಡಿನಲ್ಲಿ ಚಿಲುಮೆಯಾಗಿ ಸಂಭ್ರಮಿಸಿ ಬದಲಾಗುವುದಕ್ಕೆ ನಾನು ಸಾಕ್ಷಿಯಾಗಿದ್ದೇನೆ. ಈ ಕಾರಣಕ್ಕಾಗಿ, ನಾಟಕ ಮೇಷ್ಟ್ರು- ಮೇಡಂಗಳು ಮಕ್ಕಳೊಂದಿಗೆ ಪೂರ್ಣ ಬೆರೆತು ವಿಶಿಷ್ಟ ಮನೋವೈಜ್ಞಾನಿಕ ಪದ್ಧತಿಯ ರಂಗಾಟಗಳಲ್ಲಿ ಮಕ್ಕಳು ತೊಡಗಿಕೊಳ್ಳುವಂತೆ ಮಾಡಿ ಆಪ್ತತೆಯನ್ನು ಸೃಷ್ಟಿಸಿ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವಂತೆ ಪ್ರೇರೇಪಿಸುತ್ತಾರೆ.

ಆದರೆ, ಶಿಕ್ಷಣದಲ್ಲಿ ರಂಗಭೂಮಿಯ ಪಾತ್ರ ಉಳಿದ ವಿಷಯಗಳಷ್ಟೇ ಮುಖ್ಯವಾದದ್ದು ಎಂದು ಶಿಕ್ಷಣ ವಲಯಕ್ಕಿರಲಿ, ಇತರ ವಿಷಯವನ್ನು ಬೋಧಿಸುವ ಶಿಕ್ಷಕರಿಗೇ ಅರಿವಾದಂತಿಲ್ಲ. ಅಕಸ್ಮಾತ್ ಅದು ಅರಿವಾದರೂ ತಮ್ಮ ವಿಷಯಗಳನ್ನು ಮಕ್ಕಳು ಪ್ರೀತಿಸದೇ ಹೋಗಬಹುದೆಂಬ ಆತಂಕವೂ ಇರಬಹುದು. ರಂಗ ಶಿಕ್ಷಕರಿಗೆ ಕೊಡುವ ಪಿರಿಯಡ್​ಗಳೂ ಕಡಿಮೆ. ಪುಟ್ಟ ನಾಟಕವನ್ನು ಕಟ್ಟಲು ಕನಿಷ್ಠ ಸೌಲಭ್ಯಗಳನ್ನು ಕೊಡಲು ಸಹ ಯಾರೂ ಪೋ›ತ್ಸಾಹಿಸುವುದಿಲ್ಲ. ಏಕೆಂದರೆ, ಕೆಲವರಿಗೆ ಅದರ ಶಕ್ತಿ ಗೊತ್ತಿಲ್ಲ, ಗೊತ್ತಿದ್ದವರಿಗೆ ಅನಗತ್ಯ ಆತಂಕ!

ಹತ್ತಾರು ವರ್ಷಗಳ ಹಿಂದೆ ಆಕಸ್ಮಿಕವಾಗಿ ಒಂದಷ್ಟು ನಾಟಕ ಶಿಕ್ಷಕರನ್ನೂ ಸರ್ಕಾರ ನೇಮಿಸಿತು. ತೀರಾ ಕಡಿಮೆ ಸಂಖ್ಯೆ. ಈಗ ದೊಡ್ಡ ಸಂಖ್ಯೆಯ ಶಿಕ್ಷಕರನ್ನು ನೇಮಿಸುವ ಮನಸ್ಸು ಮಾಡಿದೆಯಂತೆ. ಆದರೆ ಪ್ರಕಟಣೆಯಲ್ಲಿ ಮಾತ್ರ ಯಥಾಪ್ರಕಾರ ಮತ್ತೆ ಈ ನಾಟಕದ ಉಪಾಧ್ಯಾಯರನ್ನು ಕಡೆಗಣಿಸಿದೆ. ನಾಟಕ ಮಾತ್ರವಲ್ಲ ಎಲ್ಲ ವಿಷಯಗಳನ್ನು ನಾಟಕರೂಪದಲ್ಲಿ ಮಕ್ಕಳಿಗೆ ಹೇಳಿಕೊಡುವುದರಿಂದ ವಿಷಯ ಗ್ರಹಿಸಲು ಅನುಕೂಲವಾಗುತ್ತದೆ ಮತ್ತು ಇದು ಮಕ್ಕಳಿಗೆ ಸಂವಹನ ಕೌಶಲ ಹೆಚ್ಚಿಸುವ ಮಾಧ್ಯಮ.

ಸಂಗೀತ, ಕ್ರೀಡೆ... ಹೀಗೆ ಎಲ್ಲ ಶಿಕ್ಷಕರ ಜಾಗ ತುಂಬಲಿ. ನಮ್ಮ ಅಭ್ಯಂತರವೇನೂ ಇಲ್ಲ, ಆದರೆ, ನಾಟಕ ಎನ್ನುವ ಶ್ರೇಷ್ಠ, ಸಂಕೀರ್ಣವಾದ ವಿಷಯದ ಬೋಧನೆ ಮಾಡುವವರನ್ನು ಏಕೆ ಗಮನಿಸುತ್ತಿಲ್ಲ ಅನ್ನುವುದು ನಮ್ಮ ರಂಗಭೂಮಿಯವರ ಒಕ್ಕೊರಲ ಅಭಿಪ್ರಾಯ. ಈ ತಾರತಮ್ಯ ಮತ್ತು ಅನ್ಯಾಯ ಮುಂಚಿನಿಂದಲೂ ಸಾಗಿಯೇ ಬಂದಿದೆ. ಸರ್ಕಾರ ಈಗಲಾದರೂ ಮನಸ್ಸು ಮಾಡಿ ನಾಟಕ ಶಿಕ್ಷಕರನ್ನು ನೇಮಿಸಬೇಕು. ಬೇರೆ ಬೇರೆ ವಿಶ್ವವಿದ್ಯಾನಿಲಯಗಳಲ್ಲಿರುವ ನಾಟಕ ಡಿಪ್ಲೊ್ಲಾಗಳು, ನೀನಾಸಂ, ರಂಗಾಯಣ, ಸಾಣೇಹಳ್ಳಿ, ಎನ್.ಎಸ್.ಡಿ. ಬೆಂಗಳೂರು, ನಟನ ರಂಗಶಾಲೆ, ಅಕ್ಕಪಕ್ಕ ರಾಜ್ಯಗಳಿಂದ ಬಂದ ರಂಗ ಪದವೀಧರರು- ಈ ಎಲ್ಲರನ್ನೂ ಆಹ್ವಾನಿಸಿ ಶಿಕ್ಷಣಕ್ರಮವೊಂದನ್ನು ರೂಪಿಸಿ, ತರಬೇತುಗೊಳಿಸಿ ಪ್ರಾಥಮಿಕ ಶಾಲಾ ಹಂತದಿಂದ ಪದವಿ, ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳವರೆಗೂ ಎಲ್ಲರಿಗೂ ಆಯಾ ಯೋಗ್ಯತಾನುಸಾರವಾಗಿ ರಂಗಶಿಕ್ಷಕರನ್ನು ಕಡ್ಡಾಯವಾಗಿ ನೇಮಿಸುವಂತಾಗಬೇಕು. ಖಾಸಗಿ ವಿದ್ಯಾಸಂಸ್ಥೆಗಳು ಕೂಡ ರಂಗಶಿಕ್ಷಕರನ್ನು ನೇಮಿಸಿಕೊಳ್ಳುವುದರ ಮೂಲಕ ಮಕ್ಕಳ ಕಲಾಪ್ರೌಢಿಮೆಗೆ ಮಾತ್ರವಲ್ಲದೇ ಸಂವಹನ, ಸಂಸ್ಕಾರ ನಿರ್ವಣಕ್ಕೂ ಅವಕಾಶ ಮಾಡಿಕೊಡಬೇಕು. ಎಲ್ಲ ವಿಷಯಗಳಂತೆ ನಾಟಕವನ್ನೂ ಪ್ರಮುಖ ವಿಷಯವಾಗಿ ಅಭ್ಯಾಸ ಮಾಡಲು ಪ್ರಾಯೋಗಿಕ ತರಗತಿಗಳೊಡನೆಯೇ ಸಾಗಬೇಕು.

ವಿವಿಧ ವಿಷಯಗಳ ಬಗ್ಗೆ ಜಾಗೃತಿ, ಸಾಮಾಜಿಕ ಆಂದೋಲನಗಳ ಬಗ್ಗೆ, ವಿಜ್ಞಾನ, ಪುರಾಣ, ಇತಿಹಾಸ, ಜಾನಪದ.. ಹೀಗೆ ಪ್ರತಿಯೊಂದು ವಿಷಯಗಳನ್ನೂ ರಂಗಭೂಮಿ ಮೂಲಕ ಗ್ರಹಿಸುವುದು ವಿದ್ಯಾರ್ಥಿಗಳಿಗೆ ಚಂದದ, ಅರ್ಥಪೂರ್ಣ, ಆಕರ್ಷಕ ಮಾಧ್ಯಮವಾಗುವುದನ್ನು ಸ್ವಾನುಭವದಿಂದ ಕಂಡಿದ್ದೇನೆ. ರಂಗಶಿಕ್ಷಕರ ನೇಮಕ ಇವತ್ತಿನ ತುರ್ತ. ಮರೆಯಾಗುತ್ತಿರುವ ಮನುಷ್ಯ ಸಂಬಂಧಗಳ ಪುನರ್ ಕಟ್ಟುವಿಕೆಗೆ ಮಾತ್ರವಲ್ಲದೇ ವೈಜ್ಞಾನಿಕವಾಗಿಯೂ ರಂಗ ಶಿಕ್ಷಣ ಅತ್ಯವಶ್ಯಕವಾಗಿದೆ.

(ಲೇಖಕರು ಖ್ಯಾತ ರಂಗಕರ್ವಿು)