ಈ ಮಾತು ಹೇಳುವಾಗ ಅವರು ಉಪಯೋಗಿಸಿದ ಭಾಷೆಯು ಸಭ್ಯತೆ ಹಾಗೂ ಪರಸ್ಪರ ಗೌರವದಾಚೆ ಹೋಗಿರುವುದು ಅವರಿಗೇ ಗೌರವ ತರುವಂತಹದಲ್ಲ, ನಿಜ. ಇತರ ಅಧ್ಯಕ್ಷರುಗಳು ಮತ್ತವರ ಆಡಳಿತಗಳ ಪ್ರಮುಖ ಸಹಯೋಗಿಗಳು ಖಾಸಗಿಯಾಗಿ ಆಡಿಕೊಳ್ಳುತ್ತಿದ್ದ ಮಾತುಗಳ ಒಂದಂಶವನ್ನು ಟ್ರಂಪ್ ಸಾರ್ವಜನಿಕವಾಗಿಯೇ ಆಡುತ್ತಿದ್ದಾರೆ. ಇನ್ನು ಖಾಸಗಿಯಾಗಿ ಅವರು ಏನೇನು ಹೇಳಬಹುದು ಎನ್ನುವುದನ್ನು ನಾವು ಕಲ್ಪಿಸಿಕೊಳ್ಳಹೋಗುವುದೇನೂ ಬೇಡ. ಅದಕ್ಕಿಂತಲೂ ದೊಡ್ಡ ವಿಷಯಗಳು ನಮ್ಮ ಮುಂದಿವೆ. ತನಗಾಗಿ ಟ್ರಂಪ್ ತೋಡಿರುವ ಸುಂಕ ಕಮರಿಗೆ ಬೀಳದೇ ತನ್ನನ್ನು ತಾನು ಕಾಪಾಡಿಕೊಳ್ಳುವುದಷ್ಟೇ ತನಗೀಗ ಮುಖ್ಯ, ಬೇರೆಲ್ಲವೂ ಗೌಣ ಎಂದು ಚೀನಾ ಲೆಕ್ಕಹಾಕಿಕೊಂಡು ನಮಗೆ ಗಾಳ ಹಾಕಲು ನೋಡುತ್ತಿದ್ದರೆ, ಬಾಂಗ್ಲಾದೇಶ ಆ ಸ್ವಾರ್ಥಿ ಚೀನಾವನ್ನು ನಂಬಿಕೊಂಡು ನಮಗೇ ಕೇಡೆಣಿಸುವ ಕನಸು ಕಾಣುತ್ತಿದೆ!
ಕುಟಿಲ ಚೀನಾದ ಗಾಳಕ್ಕೆ ಬೀಳದೆ, ಬುದ್ಧಿಗೇಡಿ ಬಾಂಗ್ಲಾದೇಶದ ತಿರುಕನ ಕನಸನ್ನು ಹಳವಂಡವಾಗಿಸುವುದು ಹೇಗೆ ಎನ್ನುವುದು ನಮ್ಮ ಪ್ರಥಮ ಆದ್ಯತೆ. ಇದೇ ಎರಡು ಭಾಗಗಳ ಈ ಲೇಖನದ ಆದ್ಯತೆ ಸಹ. ಟ್ರಂಪಣ್ಣನ ಟ್ಯಾರಿಫ್ ತಗಾದೆ ಸದ್ಯಕ್ಕಂತೂ ನಮಗೇನೂ ದೊಡ್ಡ ತಲೆನೋವಲ್ಲ. ಅದರತ್ತ ನಾವು ಇನ್ನು ಮೂರು ತಿಂಗಳ ನಂತರವೂ ತಿರುಗಬಹುದು. ಫೆಬ್ರವರಿ ಆರಂಭದಿಂದಲೂ ರೋಲರ್ಕೋಸ್ಟರ್ನಲ್ಲಿರುವ ಟ್ರಂಪ್ರ ಸುಂಕ ನೀತಿ ಕಳೆದೊಂದು ವಾರದಲ್ಲಿ ಸುಂಯ್ಯನೆ ಮೇಲೆರಿ ಮತ್ತೆ ಕೆಳಗಿಳಿದಿದೆ. ಎಲ್ಲ ವಿದೇಶಿ ವಸ್ತುಗಳ ಮೇಲಿನ ಆಯಾತ ಸುಂಕ ಇನ್ನು ತೊಂಬತ್ತು ದಿನಗಳವರೆಗೆ ಕೇವಲ 10% ಮಾತ್ರವಿರುತ್ತದೆ, ಅಲ್ಲಿಯವರೆಗೆ ಯಾವುದೇ ದೇಶ, ಪ್ರದೇಶ ಅಥವಾ ಆರ್ಥಿಕ ಒಕ್ಕೂಟ ನಮ್ಮ ಜತೆ ‘ಡೀಲ್’ ಮಾಡಿಕೊಂಡು ನಮ್ಮ ದೇಶದ ವಸ್ತುಗಳ ಮೇಲೆ ಅವು ವಿಧಿಸುವ ಸುಂಕದಲ್ಲಿ ಇಳಿಕೆ ಮಾಡಿದರೆ ನಾವೂ ಅಷ್ಟೇ ಪ್ರಮಾಣದಲ್ಲಿ ಇಳಿಕೆ ಮಾಡುತ್ತೇವೆ, ಇಲ್ಲದಿದ್ದರೆ ಇಲ್ಲ, ಏಪ್ರಿಲ್ 2ರಂದು ಘೊಷಿಸಿದ್ದ ಸುಂಕ ದರವನ್ನೇ ವಿಧಿಸಿಬಿಡುತ್ತೇವೆ ಎಂದು ಟ್ರಂಪ್ ವಾರದ ನಂತರ ಹೇಳಿದರು.
‘ಡೀಲ್’ಗೆ ಮೂರು ತಿಂಗಳ ಕಾಲಾವಕಾಶ! ಜಾಗತಿಕ ಆರ್ಥಿಕ-ರಾಜಕೀಯ ಸಂಬಂಧಗಳೇ ರೋಲರ್ಕೋಸ್ಟ್ಗೇರಿರುವ ಈ ದಿನಮಾನದಲ್ಲಿ ಮೂರು ತಿಂಗಳೆಂದರೆ ಬಲು ದೊಡ್ಡ ಅವಧಿ. ನೋಡೋಣ, ಅಮೆರಿಕದೊಂದಿಗೆ ಎಷ್ಟು ದೇಶಗಳು ಎಷ್ಟು ಪ್ರಮಾಣದಲ್ಲಿ ಡೀಲ್ ಮಾಡಿಕೊಳ್ಳುತ್ತವೋ ಅಥವಾ ಟ್ರಂಪ್ ತಮ್ಮ ಸುಂಕ ಕುಣಿಕೆಯನ್ನೇ ಢೀಲಾ (ಸಡಿಲ) ಮಾಡಿಕೊಳ್ಳುತ್ತಾರೋ.! ಇತರರೆಲ್ಲರಿಗೂ ನೀಡಿರುವ 90 ದಿನಗಳ ಕಾಲಾವಕಾಶವನ್ನು ಟ್ರಂಪ್ ಚೀನಾಗೆ ನೀಡಿಲ್ಲ ಮತ್ತು ಅಂತಹ ‘ದಯೆ’ಯನ್ನು ಚೀನಾ ಬಯಸುತ್ತಲೂ ಇಲ್ಲ ಎನ್ನುವುದು ಗಮನಾರ್ಹ. ನಿಜ ಹೇಳಬೇಕೆಂದರೆ ಉಳಿದ ಜಗತ್ತಿಗೇ ಒಂದು ನೀತಿಯಾದರೆ ಚೀನಾಗೆ ಬೇರೆಯೇ ಒಂದು ನೀತಿಯನ್ನು ಟ್ರಂಪ್ ಅನುಸರಿಸುತ್ತಿರುವುದು ಇದೇ ಮೊದಲಲ್ಲ, ಹಾಗೆಯೇ ಚೀನಾ ಸಹ ಎಲ್ಲರೂ ಹಿಡಿದ ದಾರಿ ಬಿಟ್ಟು ತನ್ನದೇ ದಾರಿ ಹಿಡಿಯುವುದೂ ಇದೇ ಮೊದಲಲ್ಲ ಎನ್ನುವುದನ್ನು ನೆನಪಿಸಿಕೊಂಡೇ ನಾವು ಈ ವಿಷಯದ ಆಳಕ್ಕಿಳಿಯಹೊರಡುವುದು ಸೂಕ್ತ.
ಚೀನೀಯರ ಬದುಕನ್ನು ಹಸನುಗೊಳಿಸುವ ಭರವಸೆಯೊಂದಿಗೆ 1949ರ ಅಕ್ಟೋಬರ್ 1ರಂದು ಚೀನಾದಲ್ಲಿ ಕಮ್ಯೂನಿಸ್ಟ್ ಆಡಳಿತವನ್ನು ಸ್ಥಾಪಿಸಿದ ಮಾವೋ ಝೆದಾಂಗ್ 22 ವರ್ಷಗಳ ನಂತರ 1973ರ ಫೆಬ್ರವರಿ 17ರಂದು, ‘ನಿಮ್ಮ ದೇಶಕ್ಕೆ ರಫ್ತು ಮಾಡಲು ನಮ್ಮ ದೇಶದಲ್ಲಿರುವುದು ಹೆಂಗಸರು ಮಾತ್ರ. ಗರ್ಭಧಾರಣೆಯ ವಯಸ್ಸಿನ ನಮ್ಮ ಹತ್ತು ಮಿಲಿಯನ್ (ಒಂದು ಕೋಟಿ) ಯುವತಿಯರನ್ನು ದಯವಿಟ್ಟು ತೆಗೆದುಕೊಳ್ಳಿ’ ಎಂದು ಅಮೆರಿಕಾದ ಅಂದಿನ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸಿಂರ್ ಅವರನ್ನು ಒತ್ತಾಯಿಸಿದ 28 ವರ್ಷಗಳೊಳಗೆ ಜಗತ್ತಿನ ಮೂರನೆಯ ದೊಡ್ಡ ಅರ್ಥವ್ಯವಸ್ಥೆಯಾಗಿ ಬೆಳೆದದ್ದು, ಅದಾದ ಇನ್ನೊಂದು ದಶಕದೊಳಗೆ ಜಪಾನ್ ಅನ್ನು ಹಿಂದಿಕ್ಕಿ ಜಗತ್ತಿನ ಎರಡನೆಯ ಬೃಹತ್ ಆರ್ಥಿಕ ಶಕ್ತಿಯಾಗಿ ಎದ್ದುನಿಂತದ್ದು ಆಧುನಿಕ ಆರ್ಥಿಕ ಇತಿಹಾಸದ ಒಂದು ಅಭೂತಪೂರ್ನ ಬೆಳವಣಿಗೆ. ಅದಕ್ಕೆ ಕಾರಣ 1978ರಲ್ಲಿ ದೂರಗಾಮಿ ಚಿಂತಕ-ರಾಜಕಾರಣಿ ದೆಂಗ್ ಷಿಯಾವೋಪಿಂಗ್ ಕಮ್ಯೂನಿಸ್ಟ್ ಆರ್ಥಿಕ ನೀತಿಗಳನ್ನು ಕಸದಬುಟ್ಟಿಗೆಸೆದು ಬಂಡವಾಳಶಾಹಿ ಆರ್ಥಿಕ ನೀತಿಗಳನ್ನು ಅಳವಡಿಸಿಕೊಂಡು ಚೀನಾದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಜಾಗತಿಕ ಕೈಗಾರಿಕೋದ್ಯಮಿಗಳನ್ನು ಆಹ್ವಾನಿಸಿದ್ದು.
ಅವರು ನೀಡಿದ ಮುಷ್ಕರವಿಲ್ಲದೆ ಕಡಿಮೆ ಕೂಲಿಗೆ ದುಡಿಯಬಲ್ಲ ಕೆಲಸಗಾರರ ಸೈನ್ಯ ಹಾಗೂ ಸ್ಥಳದ ಆಮಿಷಕ್ಕೆ ಬಲಿಬಿದ್ದ ಪಾಶ್ಚಾತ್ಯ ಮತ್ತು ಜಪಾನಿ ಕೈಗಾರಿಕೋದ್ಯಮಿಗಳು ತಮ್ಮ ಕಾರ್ಖಾನೆಗಳನ್ನು ಚೀನಾಗೆ ನಾ ಮುಂದು ತಾ ಮುಂದು ಎಂದು ವರ್ಗಾಯಿಸಿದ್ದೀಗ ಇತಿಹಾಸ. ಈ ಬಗೆಯಲ್ಲಿ ಉತ್ಪಾದನಾ ಕ್ಷೇತ್ರದಲ್ಲಿ ನಾಗಾಲೋಟ ಹಾಕತೊಡಗಿದ ಚೀನಾವನ್ನು 1995ರ ಜನವರಿ 1ರಂದು ಅಸ್ತಿತ್ವಕ್ಕೆ ಬಂದ ವಿಶ್ವ ವ್ಯಾಪಾರ ಸಂಘಟನೆಯ (ವಿವ್ಯಾಸಂ, ಡಬ್ಲ್ಯೂಟಿಓ) ಸದಸ್ಯನಾಗಿಸಲು ಅತೀವ ಉತ್ಸುಕತೆ ತೋರಿದ್ದು ಅಮೆರಿಕಾದ ಡೆಮೋಕ್ರಾಟಿಕ್ ಅಧ್ಯಕ್ಷ ಬಿಲ್ ಕ್ಲಿಂಟನ್. ವಿವ್ಯಾಸಂನ ಕಡಿವಾಣಗಳಿಗೆ ಸಿಗದೆ ಕಳಪೆ ಹಾಗೂ ಕಡಿಮೆ ಬೆಲೆಯ ವಸ್ತುಗಳನ್ನು ದಂಡಿಯಾಗಿ ಉತ್ಪಾದಿಸಿ ಜಾಗತಿಕ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುತ್ತಿದ್ದ ಚೀನಾವನ್ನು ವಿವ್ಯಾಸಂನೊಳಗೆ ತಂದು ಅದನ್ನು ‘ಜವಾಬ್ದಾರಿಯುತ’ನನ್ನಾಗಿ ಬದಲಾಯಿಸುವುದು ಕ್ಲಿಂಟನ್ರ ಆಶಯವಾಗಿದ್ದಿರಬಹುದು. ಆದರೆ ಬೀದಿಯಲ್ಲಿ ಹೋಗುತ್ತಿದ್ದ ಮಾರಿಯನ್ನು ಮನೆಯೊಳಗೇ ಕರೆತರುತ್ತಿದ್ದೇನೆ ಎಂದವರು ಅರಿಯಲಿಲ್ಲ. ಅಥವಾ ಅವರ ಮೇಲೆ ಅದ್ಯಾರು ಅದ್ಯಾವ ಮಂಕುಬೂದಿ ಎರಚಿದ್ದರೋ.
ಆದರೂ ಚೀನಾ ವಿವ್ಯಾಸಂಗೆ ಸೇರಿದ್ದು 2001ರ ಡಿಸೆಂಬರ್ನಲ್ಲಿ, ತಾನು ಅಮೆರಿಕಾವನ್ನು ಹೊರತುಪಡಿಸಿ ಪಶ್ಚಿಮ ಜಗತ್ತಿನ ಎಲ್ಲ ಶ್ರೀಮಂತ ರಾಷ್ಟ್ರಗಳನ್ನೂ ಹಿಂದೆ ಹಾಕಿ ಜಗತ್ತಿನ ಮೂರನೆಯ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದ್ದೇನೆ ಎಂಬ ಹೆಗ್ಗಳಿಕೆ ಉಂಟಾದಾಗ. ಮುಂದಿನ ಕಥೆ ಇನ್ನೂ ಸ್ವಾರಸ್ಯಕರ. ಚೀನಾವನ್ನು ವಿವ್ಯಾಸಂಗೆ ಎಳೆದುತಂದರೆ ಅದು ಜಾಗತಿಕ ವ್ಯಾಪಾರದಲ್ಲಿ ಜವಾಬ್ದಾರಿಯುತವಾಗಿ ವರ್ತಿಸಬಹುದು ಎಂದು ಕ್ಲಿಂಟನ್ ಮತ್ತು ಅವರಂತಹವರು ನಂಬಿಕೊಂಡಿದ್ದೇನೋ ಸರಿ, ಆದರೆ ಒಮ್ಮೆ ವಿವ್ಯಾಸಂನೊಳಗೆ ಬಂದದ್ದೇ ಕುಟಿಲ ಚೀನಾ ಅದೇ ವಿವ್ಯಾಸಂನ ನಿಯಮಗಳಲ್ಲಿನ ಕೆಲವು ವಿನಾಯಿತಿಗಳನ್ನು ದುರುಪಯೋಗಪಡಿಸಿಕೊಂಡು ತನ್ನ ವಸ್ತುಗಳನ್ನು ಹೇರಳವಾಗಿ ರಫ್ತುಮಾಡುತ್ತ, ಇತರರ ವಸ್ತುಗಳಿಗೆ ಬಾಗಿಲು ಮುಚ್ಚುತ್ತ, ಆ ಮೂಲಕ ಆದಾಯವನ್ನು ಹೆಚ್ಚಿಸಿಕೊಂಡು, ಖರ್ಚನ್ನು ಕಡಿಮೆ ಮಾಡಿಕೊಂಡು ಇನ್ನಷ್ಟು ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದು ಜಪಾನ್ ಅನ್ನೂ ಹಿಂದಕ್ಕೆ ಹಾಕಿಬಿಟ್ಟಿತು. ಚೀನಾದ ಈ ಕುಟಿಲ ನೀತಿಗೆ ಬಲಿಯಾಗುತ್ತಿರುವ ನಮ್ಮದೇ ಒಂದು ಉದಾಹರಣೆ ಹೇಳುತ್ತೇನೆ.
ನಮ್ಮ ಔಷಧಗಳಿಗೆ ಜಗತ್ತಿನಾದ್ಯಂತ ಬೇಡಿಕೆ ಇದೆ, ಎಲ್ಲ ದೇಶಗಳಲ್ಲೂ ನಮ್ಮ ಔಷಧಗಳು ಲಭ್ಯವಿವೆ. ಚೀನಾದಲ್ಲಿ ಮಾತ್ರ ಇಲ್ಲ! ಯಾಕೆಂದರೆ ಯಾವುದೇ ಔಷಧವನ್ನು ನಾವು ಚೀನೀ ಮಾರುಕಟ್ಟೆಗೆ ಕಳುಹಿಸಲು ಹೋದರೆ ಅದರ ಗುಣಮಟ್ಟವನ್ನು ಪರಿಶೀಲಿಸಿ ತನ್ನ ಜನರ ಬಳಕೆಗೆ ಬಿಡಬೇಕೋ ಬೇಡವೋ ಎಂದು ತೀರ್ವನಿಸುವ ಸ್ವಾತಂತ್ರ್ಯ ಚೀನಾಗಿದೆ. ವಿವ್ಯಾಸಂ ನೀಡುವ ಈ ಅವಕಾಶವನ್ನು ಚೀನಾ ಉಪಯೋಗಿಸಿಕೊಳ್ಳುವುದು ಗುಣಮಟ್ಟ ಪರೀಕ್ಷೆಯ ನೆಪದಲ್ಲಿ ದಿನ ದೂಡುವುದು, ಆ ಸಮಯದಲ್ಲಿ ನಮ್ಮ ಔಷಧವನ್ನು ಪರಿಶೀಲಿಸಿ ಅದರ ನಕಲನ್ನು ತಯಾರಿಸಿಬಿಡುವುದು, ಅದಕ್ಕೆ ನಮ್ಮ ಔಷಧಗಳಿಗಿಂತಲೂ ಕಡಿಮೆ ಬೆಲೆ ನಿಗದಿ ಮಾಡಿಬಿಡುವುದು! ಆಗ ಚೀನೀಯರು ನಮ್ಮ ಔಷಧಗಳು ಎದುರಿಗಿದ್ದರೂ ಕೊಳ್ಳುವುದಿಲ್ಲ, ತಮ್ಮದರತ್ತಲೇ ಮುಗಿಬೀಳುತ್ತಾರೆ. ಆಹಾರವಸ್ತುಗಳದ್ದು ಇನ್ನೊಂದು ಕಥೆ. ತಥಾಕಥಿತ ಗುಣಮಟ್ಟ ಪರೀಕ್ಷೆಯಲ್ಲಿ ಅವೆಲ್ಲವೂ ಫೇಲ್ ಆಗುತ್ತವೆ! ತನ್ನ ಜನರು ತಿನ್ನಲು ಇವು ಯೋಗ್ಯ ಅಲ್ಲ ಎಂದು ಚೀನಾ ಹೇಳಿಬಿಡುತ್ತದೆ. ಆಗ ಅವುಗಳನ್ನು ಆ ದೇಶಕ್ಕೆ ಬಲವಂತವಾಗಿ ರಫ್ತುಮಾಡಲು ಯಾವ ದೇಶಕ್ಕೂ ಆಗುವುದಿಲ್ಲ. ವಿವ್ಯಾಸಂನ ನಿಯಮಗಳು ಹಾಗಿವೆ. ವೂಹಾನ್ ನಗರದ ‘ಹಸಿ ಮಾರುಕಟ್ಟೆ’ಯ ವಿಡಿಯೋಗಳನ್ನು ಐದು ವರ್ಷಗಳ ಹಿಂದೆ ಜಗತ್ತೇ ನೋಡಿದೆ.
ಕೊಳಕು ನೀರಿನಲ್ಲಿ ಒಂದಕ್ಕೊಂದು ಸುತ್ತಿಕೊಂಡು ಬಿದ್ದಿರುವ ಹಾವುಗಳನ್ನು, ಬಾವಲಿಗಳನ್ನು ಹುಳಹುಪ್ಡಡಿಗಳನ್ನು ಚಪ್ಪರಿಸಿಕೊಂಡು ತಿನ್ನುವ ಚೀನೀಯರು ಸೇವಿಸಬಹುದಾದ ಗುಣಮಟ್ಟ ಹೊರದೇಶಗಳ ಆಹಾರವಸ್ತುಗಳಿಗಿಲ್ಲವಂತೆ! ವಿವ್ಯಾಸಂನ ನಿಯಮಗಳನ್ನು ದುರುಪಯೋಗಪಡಿಸಿಕೊಳ್ಳುವ, ಅಧಿಕ ಸುಂಕ ವಿಧಿಸದೆಯೂ ಹೊರದೇಶಗಳ ವಸ್ತುಗಳನ್ನು ತನ್ನೊಳಗೆ ಬಿಟ್ಟುಕೊಳ್ಳದ ಚೀನೀ ಕಪಟತನಕ್ಕೆ ಇವು ಎರಡು ಉದಾಹರಣೆಗಳಷ್ಟೇ. ಈ ವಿಧಾನಗಳಿಂದ ತನ್ನ ಡಾಲರ್ ಖಜಾನೆಯನ್ನು ವೃದ್ಧಿಸಿಕೊಳ್ಳುತ್ತ ಹೋದ ಚೀನಾ ಅದರ ಒಂದಂಶವನ್ನು ಬಳಸತೊಡಗಿದ್ದು ವಿದೇಶಗಳಲ್ಲಿ ತನ್ನ ಪರವಾಗಿ ಅಭಿಪ್ರಾಯ ಮೂಡಿಸಬಲ್ಲ ಪತ್ರಕರ್ತರನ್ನು, ಮಾಧ್ಯಮ ಸಂಸ್ಥೆಗಳನ್ನು, ತಥಾಕಥಿತ ವಿಚಾರವಾದಿಗಳು ಮತ್ತು ಥಿಂಕ್ಟ್ಯಾಂಕ್ಗಳನ್ನು ಸಾಕುವುದಕ್ಕಾಗಿ. ಇಂದಿನ ಪ್ರಚಾರಯುಗದಲ್ಲಿ ಅದು ದೊಡ್ಡದಾಗಿ ನಡೆಯುತ್ತದೆ.
ಅಮೆರಿಕ ಮತ್ತು ಚೀನಾಗಳು ಜಗತ್ತಿನ ಅತಿದೊಡ್ಡ ಆರ್ಥಿಕ ಶಕ್ತಿಗಳು, ಒಂದುಕಾಲದ ಮಹಾಶಕ್ತಿಗಳಾದ ಬ್ರಿಟನ್, ಫ್ರಾನ್ಸ್, ಜರ್ಮನಿ, ರಷ್ಯಾದಂತಹ ದೇಶಗಳು ಅವೆರಡು ದೇಶಗಳ ಹತ್ತಿರ ಸುಳಿಯಲೂ ಆಗದಷ್ಟು ಕೆಳಗಿವೆ, ಹೀಗಾಗಿ ಜಾಗತಿಕ ಹಣಕಾಸು ವ್ಯವಸ್ಥೆಯನ್ನು ಸದೃಢವಾಗಿಯೇ ಇರಿಸಿಕೊಳ್ಳುವ ಅವೆರಡು ಮಹಾಶಕ್ತಿಗಳು ಜಿ-2 ಕೂಟವನ್ನು ಸ್ಥಾಪಿಸಿಕೊಳ್ಳಬೇಕು ಎಂದು ಪೀಟರ್ಸನ್ ಇನ್ಸ್ಟಿಟ್ಯೂಟ್ನ ಫ್ರೆಡ್ ಬರ್ಗ್ಸ್ಟೆನ್ ಎನ್ನುವವರು 2005ರಲ್ಲಿ ಪ್ರತಿಪಾದಿಸಿದರು. ಈಗಾಗಲೇ ಇರುವ ಜಿ-7, ಜಿ-20ಗಳಿಗಿಂತ ಈ ಜಿ-2 ಹೆಚ್ಚು ಸಕ್ಷಮವಾಗಿರುತ್ತದೆ, ಅದು ಅಸ್ತಿತ್ವಕ್ಕೆ ಬರಲೇಬೇಕು, ಜಾಗತಿಕ ಅರ್ಥವ್ಯವಸ್ಥೆ, ಹಣಕಾಸು ವ್ಯವಸ್ಥೆಗಳನ್ನು ಅಮೆರಿಕಾ ಮತ್ತು ಚೀನಾಗಳೆರಡೇ ನೋಡಿಕೊಳ್ಳಬಲ್ಲವು ಎಂಬ ಅಭಿಪ್ರಾಯ ಮುಂದಿನ ವರ್ಷಗಳಲ್ಲಿ ದೊಡ್ಡದಾಗಿ ಕೇಳಿಬರತೊಡಗಿತು. ಅದು ಚೀನೀ ಕಿವಿಗೆ ಸಂಗೀತ. ಜಾಗತಿಕ ಆರ್ಥಿಕ-ರಾಜಕೀಯ ಕ್ಷೇತ್ರದಲ್ಲಿ ಕಮ್ಯೂನಿಸ್ಟ್ ಚೀನಾ ಏರಿದ ಅತ್ಯುನ್ನತ ಮಟ್ಟ ಅದು.
ಆದರೆ ಇಂದೇನಾಗಿದೆ? ಅಮೆರಿಕಾದೊಂದಿಗೆ ಸೇರಿ ಜಗತ್ತಿನ ಹಣೆಬರಹವನ್ನು ತಾನು ರಚಿಸುತ್ತೇನೆ ಎಂದು ಕನಸು ಕಂಡ ಚೀನಾ ಇಂದು ಅದೇ ಅಮೆರಿಕಾದ ಆರ್ಥಿಕ ಇಕ್ಕಳದಿಂದ ನುಣುಚಿಕೊಳ್ಳುವುದು ಹೇಗೆ ಅಥವಾ ಕೊಸರಾಡುವ ಹೇಡಿತನ ತನ್ನಲ್ಲಿಲ್ಲ ಎಂದು ತೋರಿಸಿ ಕೋವಿಡ್-19 ನಂತರ ಅಳಿದುಳಿದಿರುವ ಮಾನವನ್ನು ಉಳಿಸಿಕೊಳ್ಳುವುದು ಹೇಗೆ ಎಂದು ತಡಕಾಡುತ್ತಿದೆ. ಅದಕ್ಕಾಗಿ ಇಲ್ಲದ ಧಾಷ್ಟ್ಯರ್ಯವನ್ನು ತೋರುತ್ತಿದೆ. ಆದದ್ದಾದರೂ ಏನು? ಮೊದಲಿಗೆ ಪಶ್ಚಿಮ ಯೂರೋಪ್ನ ತನ್ನ ಅಸಾಂಪ್ರದಾಯಿಕ ಸಾಮರಿಕ-ಆರ್ಥಿಕ ಶಕ್ತಿಗಳನ್ನು ಹೊರಗಿಟ್ಟು ಜಾಗತಿಕ ಆರ್ಥಿಕ-ಹಣಕಾಸು ಕ್ಷೇತ್ರವನ್ನು ನಿರ್ದೇಶಿಸುವಲ್ಲಿ 50% ಅವಕಾಶವನ್ನು ಚೀನಾಗೆ ನೀಡಲು ಅಮೆರಿಕಾ ತಯಾರಿರಲಿಲ್ಲ.
ಪಶ್ಚಿಮ ಯೂರೋಪಿಯನ್ ಸಹಯೋಗಿಗಳು ಮತ್ತು ಜಪಾನ್ ಜತೆ ಸಣ್ಣಪುಟ್ಟ ಕಟಪಟಗಳೇನೋ ಇದ್ದವು, ಆದರೆ ಆ ಕಾರಣಕ್ಕಾಗಿ ಅವುಗಳನ್ನು ದೂರವಿಡಲು ವಾಷಿಂಗ್ಟನ್ನ ವಿವೇಕ ಸಮ್ಮತಿಸಲಿಲ್ಲ. "A known devil is better than an unknown angel' ಎಂಬ ವಿವೇಕವಾಣಿ ಕಿರಿಯ ಜಾರ್ಜ್ ಬುಷ್ ಮತ್ತು ಬರಾಕ್ ಒಬಾಮರ ಕಿವಿಗೂ ಬಿದ್ದಿರಬೇಕು. ಅವರಿಬ್ಬರೂ ತೋರಿದ ತಾಳ್ಮೆ ಅರ್ಥಪೂರ್ಣವೇ ಸರಿ. ಚೀನಾವೇನೂ Unknown Angel ಅಲ್ಲ, ಬದಲಿಗೆ ಪಕ್ಕಾ Known Devil ಎನ್ನುವುದು ಮುಂದಿನ ಕೆಲವೇ ವರ್ಷಗಳಲ್ಲಿ ಬಯಲಾಯಿತು. ಚೀನಾ ಎಂಬ ಹಳದಿ ಘಟಸರ್ಪ ಜಗತ್ತಿಗೇ ಉರುಳಾಗಿ ಸುತ್ತಿಕೊಳ್ಳಲಿದೆ ಎಂದು ಗುರುತಿಸಿ ಜಗತ್ತಿಗೆ ತೋರಿದ್ದು ಮತ್ತು ಅದರ ವಿಷದ ಹಲ್ಲುಗಳನ್ನು ಕಿತ್ತೆಸೆಯುವ ಕೆಲಸವನ್ನು ಆರಂಭಿಸಿದ್ದು ಹಳದಿ ತಲೆಗೂದಲಿನ ಡೊನಾಲ್ಡ್ ಟ್ರಂಪ್, ಎಂಟು ವರ್ಷಗಳ ಹಿಂದೆ.