ಅಂಕಣ

ಹೈಲ್ಯಾಂಡ್ ನಗರಿ ಹಿಮಗಿರಿಯ ಹಿತಾನುಭವ...

ವಿದೇಶ ಪ್ರವಾಸವೆಂದರೆ ಎಷ್ಟು ಖರ್ಚಾಗುತ್ತೆ ಎನ್ನುವ ಮೊದಲ ಪ್ರಶ್ನೆ ಜೊತೆಗೆ, ಕಡಿಮೆ ವೆಚ್ಚದಲ್ಲೂ ಮಾಡಬಹುದಲ್ಲ ಎನ್ನುವ ಮತ್ತೊಂದು ಮುಖವೂ ಇಲ್ಲದಿಲ್ಲ. ಅದರಲ್ಲೂ ಜಗತ್ತಿನ ವೆಚ್ಚದಾಯಕ ಪ್ರವಾಸಿ ದೇಶಗಳಲ್ಲಿ ಒಂದಾಗಿರುವ ಬ್ರಿಟನಿನ ಲಂಡನ್ ಕೆಳತುದಿಯಿಂದ ಮತ್ತೊಂದು ತುದಿಯ ಅದ್ಭುತವಾದ ಸ್ಕಾಟ್ಲೆಂಡ್​ವರೆಗೆ ಹೋಗುವುದೆಂದರೆ ಸುಲಭವಲ್ಲ, ಖರ್ಚು ಸ್ವಲ್ಪ ದುಬಾರಿಯೇ.

ಸರೋವರಗಳು, ಕೋಟೆ ಕೊತ್ತಲ ಸಹಿತ ಚೆಂದ ಹಳ್ಳಿಗಳ ನದಿತೀರದ ನಗರಿ ಸ್ಕಾಟ್ಲೆಂಡ್ ತನ್ನ ನದಿತೀರಗಳು ಮತ್ತು ಕೋಟೆಗಳಿಗೆ ಹೆಸರುವಾಸಿ. ಅದರಲ್ಲೂ ಎಡಿನ್​ಬ್ರಾ ಸೇರಿದಂತೆ ಮೇಲ್ಮುಖವಾಗುವ ಬ್ರಿಟಿಷರ ನಗರಿ ಕೊನೆಗೆ ಇನ್ವರ್​ನೆಸ್, ಲಾಚೊನೆಸ್ (ಸರೋವರ) ಎನ್ನುತ್ತ ಸರೋವರ ಅಥವಾ ಮರಿ ಸಾಗರಗಳ ಆವಾರದೊಳಕ್ಕೆ ತೆರೆದುಕೊಳ್ಳುತ್ತದೆ. ಅದರಲ್ಲೂ ಎಡಿನ್​ಬ್ರಾವರೆಗೆ ಹೋದ ಮೇಲೆ ಕನಿಷ್ಠ ಒಂದೆರಡಾದರೂ ಈ ‘ನೆಸ್’ಗಳನ್ನು ನೋಡದಿದ್ದರೆ ಹೈಲ್ಯಾಂಡ್ ಎನ್ನುವ ಸ್ಕಾಟ್​ಲ್ಯಾಂಡ್​ನ ಪ್ರವಾಸ ಮುಗಿಯಲಾರದು. ಸ್ಕಾಟಿಗರಿಗೆ ಈ ನೆಸ್​ಗಳ ಆಪ್ತತೆ ಎಷ್ಟಿದೆಯೆಂದರೆ, ಒಂದೋ ಆಚೆಗಿನ ಲಾಚೋನೆಸ್ ಮಾತಿನ ಮಧ್ಯೆ ಇರಬೇಕು ಇಲ್ಲ ಕೆಳಗಿನ ಇನ್ವರ್​ನೆಸ್ ಆದರೂ ಇರಲೇಬೇಕು. ಕಾರಣ ಸಂಪೂರ್ಣ ಸ್ಕಾಟ್​ಲ್ಯಾಂಡ್​ಗೆ ಉತ್ತರದಿಂದ ಹರಿಯುವ ನದಿ ಲಾಚೋ ಹಾಗೂ ಕೆಳಗಿನ ಭಾಗ ಆವರಿಸಿರುವ ಇನ್ವರ್​ಗಳ ನೀರಿನ ಬೆಂಬಲವೇ ಸಂಪೂರ್ಣ ರಾಜ್ಯದ ಉಸಿರು.

ಅದರಲ್ಲೂ ಲಾಚೋನೆಸ್​ನ ದಂಡೆಯ ಮೇಲೆ ಇರುವ ಉರ್ಕಾಟ್ ಕೋಟೆ ಇಲ್ಲಿನ ಜನ ಮತ್ತು ಪ್ರವಾಸಿಗಳು ಇಬ್ಬರಿಗೂ ಅದ್ಭುತ (ಜೀರ್ಣಾವಸ್ಥೆಯಲ್ಲಿದ್ದರೂ ಅದನ್ನು ಬಹುಶಃ ಈ ಸ್ಕಾಟ್ಲೆಂಡಿಗರು ಇನ್ನೂ ಇನ್ನೂರು ವರ್ಷ ಕಾಯ್ದುಕೊಂಡಾರು. ನಮ್ಮಲ್ಲಿ ಈಗಲೂ ಅಂಥ ಕೋಟೆ ಕೊತ್ತಲಗಳು ಸಾವಿರದ ಲೆಕ್ಕದಲ್ಲಿವೆ ಆದರೆ ದಿಕ್ಕಿಲ್ಲ ಅಷ್ಟೆ). ಅಲ್ಲಿ ಭೇಟಿ ನೀಡುವವರೆಗೂ ಉರ್ಕಾಟ್ ಮತ್ತು ಲಾಚೋನೆಸ್ ಬಗೆಗಿನ ಕತೆಯನ್ನು ಗೈಡ್ ಕಮ್ ನಮ್ಮ ಡೆೆ ್ರೖವರ್ ಬಾಯಿಯಿಂದ ಕೇಳುತ್ತಿದ್ದರೆ, ಪುಣ್ಯಾತ್ಮ ಯಾವಾಗ ಮುಗಿಸುತ್ತಾನೋ ಎನ್ನುವಂತಿರುತ್ತದೆ.

ಸಾವಿರ ವರ್ಷಗಳಷ್ಟು ಹಳೆಯ ಈ ಉರ್ಕಾಟ್ ಕೋಟೆ, ಆಗಿನ ಕೊನೆಯ ಮತ್ತು ಮೊದಲ ಜಯಕ್ಕೂ ಕಾರಣವಾಗಿ ಬ್ರಿಟಿಷರ ಮಹತ್ವಾಕಾಂಕ್ಷೆಗೆ ನೀರು ಹನಿಸಿದ ಸ್ಥಳ ಇದು. ಸುಮಾರು 1286ರ ಹೊತ್ತಿಗೆ ಮೊದಲ ಎಡ್ವರ್ಡ್ ಆಕ್ರಮಿಸಿ ಕೈಗೆಟುಕಿಸಿಕೊಂಡ ನಂತರ ಹಲವು ಯುದ್ಧದಲ್ಲಿ ಜಯವನ್ನು ಇದು ತಂದು ಕೊಡಲು ಕಾರಣ, ಅದರ ಎತ್ತರವಾದ ಕೋಟೆಯ ಮೇಲಿನಿಂದ ದಾಳಿಗೆ ಅನುಕೂಲವಾಗುವಂತೆ ತಾಂತ್ರಿಕವಾಗಿ ರೂಪಿಸಿದ್ದ ಅದರ ಬುರುಜು.

ಅತಿ ಎತ್ತರದಿಂದಲೇ ನೋಟಕ್ಕೆ ಸಿಲುಕುತ್ತಿದ್ದ ಶತ್ರುಸೇನೆಯನ್ನು ಯಾವ ದಿಕ್ಕಿನಿಂದ ಬಂದರೂ ಕೊನೆಗೆ ಲಾಚೋನೆಸ್ ಮೇಲಿನಿಂದ ತೇಲಿಕೊಂಡು ಬಂದರೂ, ಹೊಡೆದುರುಳಿಸುತ್ತಿದ್ದರು ಇಲ್ಲಿಂದ. ಈ ಕಾರಣದಿಂದಲೇ ಅದಾದ ಮುನ್ನೂರು ವರ್ಷಗಳ ತರುವಾಯ ಆಗಿನ ರಾಜ ಎರಡನೇ ವಿಲಿಯಂ ಆ ಎತ್ತರದ ಬುರುಜಿನ ಅನುಕೂಲ ಬೇರೆಯವರಿಗೆ ದಕ್ಕದಿರಲಿ ಎಂದು ಶಾಶ್ವತವಾಗಿ ಸ್ಪೋಟಿಸಿಬಿಟ್ಟ. ಈಗ ಉಳಿದಿರುವುದು ಬರೀ ಅರ್ಧ ಮಾತ್ರ. ಆದರೆ ಕಣಿವೆಯ ಕೆಳಗಿನ ಭಾಗದಿಂದ ಲಾಚೋನೆಸ್​ನ ತೀರದವರೆಗೂ ಹರಡಿಕೊಂಡ ಉರ್ಕಾಟ್ ಕೋಟೆ ಎಲ್ಲ ರೀತಿಯ ಸುರಕ್ಷತಾ ವೃತ್ತಗಳನ್ನು ಹೊಂದಿದ್ದ ಬಗ್ಗೆ ಅರೆಬರೆ ಗೋಡೆಗಳು ಸಾಕ್ಷಿಯಾಗಿದ್ದು, ಅವನ್ನೆಲ್ಲ ಕಾಯ್ದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಏರುಮುಖ ಮತ್ತು ಇಳಿಜಾರು ಎರಡೂ ರೀತಿಯಲ್ಲಿ ಸೇನೆಯ ಚಲನೆಗೆ ಅನುಕೂಲ ಮಾಡಿಕೊಡುವ ಈ ಕೋಟೆಯ ಯೋಜನೆ ನಿಜಕ್ಕೂ ಅದ್ಭುತ.

ಇಲ್ಲಿಗೆ ಸುಲಭದ ಪ್ರಯಾಣ ಎಂದರೆ, ಎಡನ್​ಬ್ರಾದಿಂದ ಒಂದು ಪ್ಯಾಕೆಜ್ ತೆಗೆದುಕೊಳ್ಳುವುದು. ಕಾರಣ ಎಡಿನ್​ಬ್ರಾ ಅಪ್ಪಟ ಬ್ರಿಟಿಷ್ ಪದ್ಧತಿಗಳ, ದಿನಚರಿಯ ನಾಡು. ಆಹಾರ ಪದಾರ್ಥ ಸೇರಿದಂತೆ ಕೇಂದ್ರ ಲಂಡನ್​ಗೆ ಹೋಲಿಸಿದರೆ ತುಂಬ ವ್ಯತ್ಯಾಸ. ಹಾಗಾಗಿ ಎಡಿನ್​ಬ್ರಾ ಪ್ರವಾಸದ ಮಧ್ಯೆ ಒಂದೆರಡು ದಿನ ಲಾಚೋನೆಸ್ ಪ್ರವಾಸ ಎಂದೇ ಸ್ಥಳೀಯ ಬಸ್ ಅಥವಾ ಟೆಂಪೊ ಮಾದರಿ ವಾಹನಕ್ಕೆ ಆಯ್ಕೆ ಅವಕಾಶ ಇದ್ದು, ಹೆಚ್ಚು ಕಮ್ಮಿ ನಾಲ್ಕರಿಂದ ಐದು ಸಾವಿರ ರೂ.ಗಳಲ್ಲಿ ಒಂದು ದಿನದ ಪ್ರವಾಸ ಸಾಧ್ಯ. ಇದು ಎಲ್ಲದಕ್ಕಿಂತ ನಮಗೆ ಅನುಕೂಲಕಾರಿ. ಗೈಡ್ ಸಹಿತ ಎಲ್ಲವನ್ನೂ ಒಂದು ಸಾಲಿನಲ್ಲಿ ಮುಗಿಸಿಕೊಳ್ಳಬಹುದು.

ಸ್ಕಾಟ್ ತುಂಬ ಸಂಕೀರ್ಣ ಮಾದರಿಯ ರಸ್ತೆ ವಿನ್ಯಾಸ ಹೊಂದಿದ್ದು, ಪರ್ವತ ಮತ್ತು ಕಣಿವೆಗಳ ನಾಡು. ರಸ್ತೆಯ ಒಂದಲ್ಲ ಒಂದು ತುದಿಗೆ ಕಣಿವೆ ಇಣುಕುತ್ತಲೇ ಇದ್ದರೆ, ಎಡಭಾಗದ ಪರ್ವತಗಳ ಸಾಲು ನಮ್ಮನ್ನು ಕತ್ತೆತ್ತಿ ನಿಲ್ಲುವಂತೆ ಮಾಡುತ್ತಲೇ ಇರುತ್ತದೆ. ಅದರಲ್ಲೂ ಪೂರ್ತಿ ದಿನ ಬೇಡುವ ಉರ್ಕಾಟ್ ಕೋಟೆ ಭೇಟಿಗೂ ಮೊದಲು ಒಂದಷ್ಟು ಹೈಲ್ಯಾಂಡ್ ಟೂರ್ ಮಾಡಿಸುತ್ತಾನಲ್ಲ ಅದಕ್ಕೆಲ್ಲ ಒಂದೊಂದು ಜಾಗಕ್ಕೇನೆ ನಿಮಗೆ ದಿನಪೂರ್ತಿ ಬೇಕಾಗುತ್ತದೆ.

ಕೆಲವೆಲ್ಲ ಈಗ ಖಾಸಗಿ ಜಮೀನಿನಲ್ಲಿ ಸೇರಿ ಹೋಗಿದ್ದರೂ, ಒಂದಷ್ಟು ಭಾಗ ಸಾರ್ವಜನಿಕರಿಗೆ ಲಭ್ಯಪಡಿಸಲಾಗಿದ್ದು ವಿಶೇಷವಾಗಿ ಪೋರ್ಟ್ ಅಗುಸ್ಟಾ ಕೋಟೆ ಮತ್ತದರ ಆಸುಪಾಸಿನ ಚಿತ್ರಣಕ್ಕೆ ದಿನವಿಡೀ ಸಾಕಾಗಲಿಕ್ಕಿಲ್ಲ. ಇವೆಲ್ಲ ಊರು ಎನ್ನುವುದಕ್ಕಿಂತ ಹೀಗೆ ಚೆಂದವಾಗಿ ಪೇರಿಸಿಡಲೇ ನಿರ್ವಿುಸಿದ ಸಿನಿಮಾ ಸೆಟ್ಟಿನಂತಿವೆ. ಒಂದು ಸ್ಥಳ ಅಥವಾ ಹಳ್ಳಿಯನ್ನು ಇಷ್ಟು ಚೆಂದ ಅಥವಾ ಹೀಗೂ ಕಾಯ್ದುಕೊಳ್ಳಬಹುದೇ ಎನ್ನುವುದಕ್ಕೆ ಉದಾಹರಣೆಯಾಗಿ ಪೋರ್ಟ್ ಅಗುಸ್ಟಾವನ್ನು ಮರೆಯದೆ, ಸುಮ್ಮನೆ ರಸ್ತೆಯ ಮೇಲೆ ಸುತ್ತಾಡಿಯಾದರೂ ದೂರದಿಂದ ನೋಡಲೇಬೇಕು.

ಎಡಿನ್​ಬ್ರಾದಿಂದ ಒಂದು ದಿನದ ಮಾತ್ರ ಪ್ರವಾಸ ಕೈಗೆತ್ತಿಕೊಂಡ ಕಾರಣ, ಈ ಉರ್ಕಾರ್ಟ್ ಕೋಟೆ ತುದಿಗೊಯ್ಯಲು ಆವತ್ತು ಬೆಳಗ್ಗೆನೆ ಐದೂವರೆಗೆಲ್ಲ ಎಡಿನಬ್ರಾ ಕ್ಯಾಸಲ್ ನಿಲ್ದಾಣಕ್ಕೆ ಕರೆಸಿಕೊಂಡಿದ್ದ ನಮ್ಮ ಏಜೆಂಟು. ನಾನು ದೂರದ, ಸ್ಟೆನ್ ಹೌಸ್ ಅವೆನ್ಯೂದಿಂದ, ಕಾರ್ಲೆ ರಸ್ತೆಯಲ್ಲಿ ಬೆಳಗ್ಗೆ ಆರಂಭವಾಗುವ ಬಸ್ ಸಂಚಾರ ಹಿಡಿದು ಬಂದರೆ, ನಮ್ಮಂತೆ ನೂರಾರು ಜನರನ್ನು, ಹತ್ತಾರು ಬಸ್​ಗಳನ್ನು ನಿಲ್ಲಿಸಿಕೊಂಡಿದ್ದ ಏಜೆಂಟು ಕರಾರುವಕ್ಕಾಗಿ ಆರು ಗಂಟೆಗೆಲ್ಲ ಪ್ರವಾಸ ಹೊರಡಿಸಿದ್ದ. ನಮ್ಮ ಗುಂಪು ಚಿಕ್ಕದಿದ್ದುದಕ್ಕೆ ಟ್ರಾವೆಲರ್ ವ್ಯಾನ್ ನೀಡಿದ್ದ. ಅಡ್ಡ ಉದ್ದ ತಿರುಗು ರಸ್ತೆಯಲ್ಲಿ, ಸಂಪೂರ್ಣ ಅರ್ಥವಾಗದ ಅಸೆಂಟ್​ನಲ್ಲಿ ಅವನು ಗೈಡ್ ಮಾಡುತ್ತಿದ್ದರೆ ನಾನು ಗೂಗಲ್ ನೋಡುತ್ತ ಸ್ಥಳ ಗುರುತಿಸಿಕೊಳ್ಳುತ್ತಿದ್ದೆ.

ಅಲ್ಲದೆ ಇಲ್ಲಿ ಕೇಂದ್ರ ಲಂಡನ್​ನಂತೆ ಸುಲಭ, ಸರಳವಾದ ಸಂಚಾರ ವ್ಯವಸ್ಥೆ ಸಾಧ್ಯವಿಲ್ಲ. ಹಾಗಾಗಿ ಲಾಚೋನೆಸ್ ಪ್ರವಾಸ ಉರ್ಕಾರ್ಟ್​ವರೆಗೂ ಒಯ್ಯಲಿತ್ತು. ಆವತ್ತು ವಿಪರೀತ ಹಿಮಪಾತ ಜೊತೆಗೆ ರಸ್ತೆ ಮೇಲೆ ನಿರಂತರ ಹಿಮ ಉದುರುತ್ತಲೇ ಇದ್ದುದರಿಂದ ದಾರಿಯ ಮೇಲೆ ಲಭ್ಯವಾಗುವ ಹೈಲ್ಯಾಂಡ್ ಟೂರ್​ನ ಖ್ಯಾತ ಆಕರ್ಷಣೆಯಾದ ಬ್ಲಾಕ್ ಮೌಂಟೆನ್ ನಮ್ಮ ನೇರ ಮತ್ತು ಸ್ಪಷ್ಟ ದೃಶ್ಯಕ್ಕೆ ನಿಲುಕದೆ ಹೋಯಿತು. ಇದೂ ಕೂಡ ಉರ್ಕಾಟ್ ಕೋಟೆ ದಾರಿಯ ಮೇಲೆ ಲಭ್ಯವಾಗುವ ವಾತಾವರಣ ಸರಿ ಇದ್ದಾಗ ತುಂಬ ಜನರ ಆಯ್ಕೆಯ ಪ್ರದೇಶ. ಈ ಬ್ಲಾಕ್ ಮೌಂಟೆನ್ ಇರುವುದೇ ರಾಸ್​ವೆಲ್ಲಿಸ್ ಕಣಿವೆಯ ಪರ್ವತ ಪ್ರದೇಶದಲ್ಲಿ. ಅಲ್ಲೆಲ್ಲ ಹಿಮ ಆವರಿಸಿಕೊಂಡ ಕಾರಣ ಕಣಿವೆಯ ಆಳವೂ ದಕ್ಕದೆ ಹೋಯಿತು. ಜೊತೆಗೆ ಆ ದಿನ ಡಿಸೆಂಬರ್ ಕೊನೆ ಆದ್ದರಿಂದ ಚಳಿ ಮೈನಸ್ ಎರಡನ್ನು ತೋರಿಸುತ್ತಿತ್ತು. ಎರಡೇ ನಿಮಿಷದಲ್ಲಿ ಬ್ಲಾಕ್ ಮೌಂಟೆನ್ ದರ್ಶನ ಮುಗಿದಿತ್ತು.

ಎಡಿನ್​ಬ್ರಾದಿಂದ ಲಾಚೋನೆಸ್​ನ, ಬ್ಲಾಕ್​ಗ್ಲೇನ್ (ಕಣಿವೆ) ಮತ್ತು ಬ್ಲಾಕ್​ವೌಂಟೆನ್ ಮೂಲಕ ಬೆನ್​ನೇವಿಸ್, ಗ್ರೇಟ್​ಗ್ಲೇನ್ ಮಾರ್ಗವಾಗಿ ತುಂಬ ಚೆಂದ ಯೋಜಿತ ಹಳ್ಳಿ ಪೋರ್ಟ್ ಅಗುಸ್ಟಾ ತಲುಪಿದರೆ, ಯಾವ ಕಟ್ಟಡ ನೋಡಬೇಕು, ಎಲ್ಲಿ ನೋಡಬೇಕು, ಎಲ್ಲಿ ಚಿತ್ರ ಕ್ಲಿಕ್ಕಿಸಬೇಕು ತಿಳಿಯದ ಅಯೋಮಯ ಸ್ಥಿತಿ.

ಈ ಪ್ರವಾಸ ಅಥವಾ ಲಾಚೋನೆಸ್, ಇನ್ವರ್​ನೆಸ್ ಟ್ರಿಪ್ ಎನ್ನುವ ದಿನವಿಡೀ ಸುತ್ತಾಟ ಏಡಿನ್​ಬ್ರಾದಿಂದ ಬೆಳಗ್ಗೆ ಶುರುವಾದರೂ ಕೊನೆಯಲ್ಲಿ ಒಯ್ದು ನಿಲ್ಲಿಸೋದು, ಅವರ ಎಂದಿನ ಟ್ರಂಪ್ ಕಾರ್ಡ್ ಉರ್ಕಾಟ್ ಕ್ಯಾಸಲ್ ತುದಿಗೇನೆ. ಈ ಪ್ರವಾಸದಲ್ಲಿ ಆಯ್ದುಕೊಳ್ಳಲು ಇರುವ ಇನ್ನೊಂದು ಚೆಂದದ ಅವಕಾಶ ಎಂದರೆ ಹಿಂದಿರುಗಿ ಬರುವಾಗ ನೀವು ಉರ್ಕಾಟ್ ಕ್ಯಾಸಲ್​ನ ತೀರದಿಂದ ಸ್ಟೀಮರ್ ಬೋಟ್​ನಲ್ಲಿ ತೇಲುತ್ತ ಹಿಂದಕ್ಕೆ ಬರುವ ಅವಕಾಶ. ಅದರ ಡೆಕ್ ಮೇಲೆ ನಿಂತು ನದಿಯ ಭಾಗದಿಂದ ಉರ್ಕಾಟ್ ನೋಡಿದಾಗ ಮಾತ್ರವೇ ಗೊತ್ತಾಗುತ್ತದೆ, ಯಾಕೆ ಈ ಉರ್ಕಾಟ್ ಕ್ಯಾಸಲ್ ಸಂಪೂರ್ಣ ಬ್ರಿಟಿಷ ಮತ್ತು ಸ್ಕಾಟ್ಲೆಂಡಿಗರ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಿರಬಹುದು ಎಂದು.

ಪ್ರತಿ ಊರು, ಹಳ್ಳಿ, ನಗರ ಏನೇ ಇರಲಿ ಇಲ್ಲಿನ ಸಂಸ್ಕೃತಿ ಮತ್ತು ಇತಿಹಾಸ ಪ್ರೇರಿತ ಪ್ರವಾಸಗಳು ಸೇರಿದಂತೆ, ಸ್ಥಳೀಯರ ಔಟಿಂಗು ಎಲ್ಲ ತಳಕು ಹಾಕಿಕೊಂಡಿರುವುದೇ ಈ ಕೋಟೆಗಳ ಸ್ಥಳ ಮತ್ತು ಕತೆಗಳ ಜೊತೆಯಲ್ಲಿ. ಪಾಳು ಬಿದ್ದಿದ್ದರೂ ಅದನ್ನೊಂದು ಪ್ರಮುಖ ಪ್ರವಾಸಿತಾಣಕ್ಕೆ ಸೇರಿಸಿ ನಮ್ಮನ್ನೂ ಅಲ್ಲಿವರೆಗೂ ಎಳೆಯುವ ಅವರ ಜಾಣ್ಮೆಗೆ ಮೆಚ್ಚಬೇಕು. ಆದರೆ ಉರ್ಕಾಟ್ ಪ್ರವಾಸ ತಪ್ಪಿಸಿಕೊಂಡರೆ ಅಲ್ಲಿನ ಜೀವನಾಡಿಗಳಾದ ಹಲವು ಸರೋವರಗಳ ದೃಶ್ಯ ತಪ್ಪಿಹೋಗುತ್ತದೆ. ಉರ್ಕಾಟ್ ಕೋಟೆ ಜೊತೆಗೆ ಹೈಲ್ಯಾಂಡ್ ಪ್ರವಾಸ ಎಂದರೆ ಇವೆಲ್ಲವೂ ಬೋನಸ್. ಹಾಗಾಗೇ ಇಲ್ಲಿಗೆ ಹೋಗಲು ಉರ್ಕಾಟ ಪ್ರವಾಸ ಎನ್ನದೆ ಇದನ್ನು ಲಾಚೋನೆಸ್ ಎಂದೇ ಕರೆಯುತ್ತಾ್ತರೆ. ಅಲ್ಲದೆ ಲಾಚೋ ಅವರನ್ನು ಪ್ರಭಾವಿಸಿದ ರೀತಿಯೂ ಹಾಗಿದೆ. ಜತೆಗೆ ಹೋಗುವ ನಮ್ಮನ್ನೂ ಅದು ಪ್ರಭಾವಿಸುವ ರೀತಿ ಕೂಡ ಅದ್ಭುತ. ನೆನಪಿಸಿಕೊಂಡರೆ ಈಗಲೂ ಅಲ್ಲಿ ಹತ್ತಿಳಿದ ಕಲ್ಲುಕೋಟೆ, ಕೊತ್ತಲಗಳ ಸಮೇತ ಕೊನೆಯದಾಗಿ ನೀರಿನ ಮೇಲಿನಿಂದ ನೋಟಕ್ಕೆ ನಿಲುಕುವ ಉರ್ಕಾಟ್ ಕೋಟೆ ಮಾತ್ರವೇ ಮೊದಲು ನೆನಪಾಗುತ್ತದೆ. ಹಾಗಾಗೇ ಈ ಹೈಲ್ಯಾಂಡ್ ಟೂರ್ ಇಂಗ್ಲೆಂಡಿನ ವಿಶೇಷ ಆಕರ್ಷಣೆ. (ಲೇಖಕರು ಕತೆಗಾರರು)