ಸತ್ಯವಂತರಿಗಿದು ಕಾಲವಲ್ಲ |ದುಷ್ಟಜನರಿಗೆ ಸುಭಿಕ್ಷಕಾಲ ||
***
ಬಡವರಿಗೆ ಕಷ್ಟ ಜಾಸ್ತಿ, ಪ್ರಾಮಾಣಿಕರಿಗೆ ಭಯ ಜಾಸ್ತಿ. ದೇವರ ನ್ಯಾಯ ಸರಿ ಇಲ್ಲ ಎಂದು ಕೆಲವೊಮ್ಮೆ ಅನ್ನಿಸುತ್ತಿರುತ್ತದೆ. ತಕ್ಕಡಿಯೆಂದ ಮೇಲೆ ಸಮವಾಗಿ ತೂಗಬೇಕು. ಆದರೆ, ಶ್ರೀಮಂತರು ಶ್ರೀಮಂತರಾಗಿಯೇ ಬದುಕುತ್ತಾರೆ. ಬಡವರು ಬಡವರಾಗಿಯೇ ಸಾಯುತ್ತಾರೆ. ಸುಖ ಪಡುವವರು ಸುಖ ಪಡುತ್ತಲೇ ಇರುತ್ತಾರೆ. ಕಷ್ಟಜೀವಿಗಳು ಕಷ್ಟದಲ್ಲೇ ತೊಳಲಾಡುತ್ತಾರೆ.. ಇದ್ಯಾವ ನ್ಯಾಯ ಎಂಬ ಸಂಕಟ, ಪ್ರಶ್ನೆ ಆಗಾಗ ಮೂಡುತ್ತಿರುತ್ತದೆ. ತಗ್ಗು ಇರುವ ಕಡೆ ನೀರು ಹರಿಯುವುದೇ ವಿನಾ, ಎತ್ತರಕ್ಕೆ ಹರಿಯುವುದಿಲ್ಲ. ಶ್ರೀಮಂತರ ಖಜಾನೆ ದ್ವಿಗುಣವಾಗುವುದು, ಬಡವರ ಬಡತನ ಹೆಚ್ಚುತ್ತಲೇ ಹೋಗುವುದು ಹಾಗೆಯೇ ಎಂಬುದು ಒಂದು ಸಮಜಾಯಿಷಿ.
ಪಾಂಡವರು ಜೀವನಪೂರ್ತಿ ಕಷ್ಟವನ್ನೇ ಅನುಭವಿಸಿದರು. ಕೌರವರು ಸುಖದ ಸುಪ್ಪತ್ತಿಗೆಯಲ್ಲೇ ಜೀವನ ಕಳೆದರು. ಪಾಂಡವರು ಸತ್ಯಸಂಧರಾಗಿ ನಡೆದರೆ, ಕೌರವರು ದ್ವೇಷ, ಅಸೂಯೆ, ದುಷ್ಟಪ್ರವೃತ್ತಿಯನ್ನೇ ಮೈತುಂಬಿಕೊಂಡು, ಪಾಂಡವರನ್ನು ನಾಶ ಮಾಡಬೇಕೆಂದು ಕತ್ತಿ ಮಸೆದರು. ಇದನ್ನೆಲ್ಲ ನೋಡಿದರೆ, ಕಷ್ಟ ಪಡುವವರಿಗೆ ಸುಖ, ನೆಮ್ಮದಿ ಸಿಗುವುದು ಯಾವಾಗಲೂ ಬಹಳ ತಡವಾಗಿ. ಗೆದ್ದೇ ಗೆಲ್ಲುವೆ ಒಂದು ದಿನ, ಗೆಲ್ಲಲೇಬೇಕು ಒಳ್ಳೆತನ ಎಂಬ ಆಶಾವಾದ ಕಷ್ಟದ ಹೊರೆಯನ್ನು ಸ್ವಲ್ಪ ಹಗುರಗೊಳಿಸುವುದೇನೋ ನಿಜ. ಆದರೂ, ಜೀವಮಾನವೆಲ್ಲ ಕಷ್ಟಪಟ್ಟ ಮೇಲೆ ಕೊಟ್ಟಕೊನೆಗೆ ಸುಖವೆನ್ನುವುದು, ಅಪರಾಧ ಕೃತ್ಯ ನಡೆದ ಬಳಿಕ ಪೊಲೀಸರು ಸ್ಥಳಕ್ಕೆ ಬರುವಂಥ ಭಾವನೆ ತರಿಸುವುದು ಸಹಜ.
ತಾರ್ಕಿಕವಾಗಿ ಯೋಚಿಸುವುದಾದರೆ, ಒಬ್ಬ ವ್ಯಕ್ತಿ ಜೀವನದಲ್ಲಿ ಎಷ್ಟು ದೀರ್ಘ ಕಾಲ ಕಷ್ಟಪಟ್ಟಿರುತ್ತಾನೋ, ಅಷ್ಟೇ ಪ್ರಮಾಣದಲ್ಲಿ ಸುಖ-ಸಂತೋಷವೂ ಸಿಗಬೇಕು. ಅದೇ ರೀತಿ ಓರ್ವ ವ್ಯಕ್ತಿ ಎಷ್ಟು ಪ್ರಮಾಣದಲ್ಲಿ ದುಷ್ಟಪ್ರವೃತ್ತಿ ತೋರಿರುತ್ತಾನೋ, ಬೇರೆಯವರಿಗೆ ಉಪಟಳ ನೀಡಿರುತ್ತಾನೋ ಅಷ್ಟೇ ಪ್ರಮಾಣದಲ್ಲಿ ಅವನಿಗೆ ಶಿಕ್ಷೆಯೂ ಆಗಬೇಕು. ಬೇರೆಯವರ ಕಣ್ಣಲ್ಲಿ ಹಾಕಿಸಿರುವಷ್ಟು ನೀರು ಅವನ ಕಣ್ಣಲ್ಲೂ ಬರಬೇಕು. ಆದರೆ, ಆ ರೀತಿ ಆಗಿದ್ದಿದೆಯೇ? ಜೀವನಪೂರ್ತಿ ಮಾಡಿದ ಅಪರಾಧಕ್ಕೆ ಒಂದೇ ದಿನದಲ್ಲಿ ಬರುವ ಸಾವೇ ಶಿಕ್ಷೆಯೇ? ಸಾವೆನ್ನುವುದು ಜೀವ-ಜೀವನದಿಂದ ಮುಕ್ತಿ ಎಂದು ಪರಿಗಣಿಸುವುದಾದರೆ, ಅದು ಶಿಕ್ಷೆ ಹೇಗಾಗುತ್ತದೆ? ಸಾವಿಗೆ ಮುನ್ನ ಆತನೂ ನೋವನ್ನು, ಯಾತನೆಯನ್ನು, ಕಣ್ಣೀರಿನ ಸಂಕಟವನ್ನು ಅನುಭವಿಸಬೇಡವೇ?
ಮಹಾಭಾರತದ ಉದಾಹರಣೆಯನ್ನೇ ನೋಡುವುದಾದರೆ, ಪಾಂಡವರು ಹುಟ್ಟಿದ್ದೇ ಕಾಡಿನಲ್ಲಿ. ಬಾಲ್ಯದಲ್ಲೇ ತಂದೆ ಪಾಂಡುವನ್ನು ಕಳೆದುಕೊಂಡರು. ರಾಜವಂಶದವರಾದರೂ, ಅರಮನೆಯಲ್ಲಿ ಅಡ್ಡಾಡಿಕೊಂಡು ಬೆಳೆಯುವ ಯೋಗ ಅವರಿಗೆ ಇರಲಿಲ್ಲ. ತರುಣಾವಸ್ಥೆಯಲ್ಲಿ ಹಸ್ತಿನಾವತಿಗೆ ಬಂದರೂ, ದುರ್ಯೋಧನ ಉಪಾಯ ಮಾಡಿ ವಾರಣಾವತಕ್ಕೆ ಕಳುಹಿಸಿದ. ಅಲ್ಲಿ ಅರಗಿನ ಮನೆಯ ಬೆಂಕಿಯ ಜ್ವಾಲೆಯಿಂದ ಉಪಾಯ ಮಾಡಿ ತಪ್ಪಿಸಿಕೊಳ್ಳಬೇಕಾಯಿತು. ಅಲ್ಲಿಂದ ಅಜ್ಞಾತವಾಸದಲ್ಲಿ ಬ್ರಾಹ್ಮಣ ವೇಷಧಾರಿಗಳಾಗಿ ಕೆಲವು ಕಾಲ ಕಳೆಯುವಂತಾಯಿತು. ನಡುನಡುವೆ ಬಕಾಸುರ, ಹಿಡಿಂಬನಂಥ ರಾಕ್ಷಸರ ಉಪಟಳ ಎದುರಿಸಿ, ಅವರನ್ನು ಸಾಯಿಸಬೇಕಾಯಿತು. ಸ್ವಯಂವರದಲ್ಲಿ ದ್ರೌಪದಿಯನ್ನು ವರಿಸಿದ ಮೇಲೆ ಇಂದ್ರಪ್ರಸ್ತವನ್ನು ಕಟ್ಟಿಕೊಂಡು ಕೌರವರಿಂದ ಪ್ರತ್ಯೇಕವಾಗಿ ಇರಲು ಪ್ರಯತ್ನಿಸಿದರೂ, ದುರ್ಯೋಧನ, ಶಕುನಿಯ ಕುಟಿಲ ತಂತ್ರದಿಂದಾಗಿ ಪಗಡೆಯಾಟದಲ್ಲಿ ಸರ್ವಸ್ವವನ್ನೂ ಕಳೆದುಕೊಳ್ಳಬೇಕಾಯಿತು. ಮತ್ತೆ 12 ವರ್ಷ ವನವಾಸ.
ಮುಗಿದ ಮೇಲೆ ಮತ್ತೊಂದು ವರ್ಷ ಅಜ್ಞಾತವಾಸ. ಕಾಡಿನ ಜೀವನವೆಂದರೆ, ಹೂವಿನ ಸುಪ್ಪತ್ತಿಗೆಯೇ? ಹಾವು, ಚೇಳುಗಳ ನಡುವೆ, ಕ್ರೂರ ಮೃಗಗಳನ್ನು ಬೇಟೆಯಾಡಿಕೊಂಡು, ಸೊಪು್ಪ-ಸದೆ ತಿಂದುಕೊಂಡು, ರಾಕ್ಷಸರು, ದುಷ್ಟ ಜನಗಳ ಕಾಟ ನಿವಾರಿಸಿಕೊಂಡು ದಟ್ಟಾರಣ್ಯದಲ್ಲಿ ಜೀವನದ ನಡುವಯಸ್ಸನ್ನು ಕಳೆಯುವಂತಾಯಿತು. ಕೊನೆಗೆ ಅಜ್ಞಾತವಾಸದಲ್ಲಿ ಎಲ್ಲರೂ ವೇಷ ಬದಲಿಸಿಕೊಂಡು ಸೇವಕತನದಿಂದ, ನೋವು- ಅವಮಾನಗಳನ್ನು ನುಂಗಿಕೊಂಡು ಇರಬೇಕಾಯಿತು. ಅಷ್ಟಾದ ಮೇಲೂ ಕುರುಕ್ಷೇತ್ರ ಯುದ್ಧದಲ್ಲಿ ಶತ ಕೌರವರನ್ನು ಕೊಂದು, ಸಿಂಹಾಸನವೇರುವ ಹೊತ್ತಿಗೆ ಪಾಂಡವರಿಗೆ ಉಳಿದಿದ್ದಾದರೂ ಏನು? ಹೆಸರಿಗೆ ಸಾಮ್ರಾಜ್ಯ, ವಾಸ್ತವದಲ್ಲಿ ಸ್ಮಶಾನ. ಹದಿನೆಂಟು ಅಕ್ಷೋಹಿಣಿ ಸೈನ್ಯ ಯುದ್ಧದಲ್ಲಿ ನಾಶವಾಗುವುದರೊಂದಿಗೆ ಸುತ್ತಲ ಹತ್ತು ಸಾಮ್ರಾಜ್ಯದಲ್ಲಿ ಯಾವ ಮನೆಯಲ್ಲೂ ಗಂಡಸರಿಲ್ಲ.
ಉಳಿದವರೆಲ್ಲ, ವಿಧವೆಯರು, ವೃದ್ಧ ತಂದೆತಾಯಿಗಳು, ಮಕ್ಕಳು, ಅಂಗವಿಕಲರು ಮಾತ್ರ. ಅಂದರೆ, ಪಾಂಡವರಿಗೆ ಸಿಗಬೇಕಾದ ವಯಸ್ಸಿನಲ್ಲಿ, ಕಾಲದಲ್ಲಿ ಯಾವುದೂ ಸಿಗಲಿಲ್ಲ. ಇಳಿವಯಸ್ಸಿನವರೆಗೆ ಕಾಡುಮೇಡು ಅಲೆದುಕೊಂಡು, ಕಷ್ಟ ಪಟ್ಟು ಕಳೆದ ಮೇಲೆ ಕೊನೆ ಕಾಲದಲ್ಲಿ ಸುಖ ದಕ್ಕಿದರೆ, ಅದನ್ನು ಅನುಭವಿಸುವುದಕ್ಕೆ, ಆಸ್ವಾದಿಸುವುದಕ್ಕೆ ವಯಸ್ಸಾದರೂ ಇರಬೇಕಲ್ಲ, ಮನೋಸ್ಥಿತಿಯಾದರೂ ಇರಬೇಕಲ್ಲ. ಆದರೆ, ಇದು ಕಾಲದ ನಿಯಮ. ಅದೇ ಕೌರವರ ವಿಷಯಕ್ಕೆ ಬಂದರೆ, ಅಪ್ಪ ಧೃತರಾಷ್ಟ್ರ ಹುಟ್ಟುಕುರುಡ, ಅಮ್ಮ ಗಾಂಧಾರಿ ಕಣ್ಣಿಗೆ ಸ್ವಯಂ ಬಟ್ಟೆ ಕಟ್ಟಿಕೊಂಡ ಕೊರಗು ಬಿಟ್ಟರೆ, ಜೀವನದ ಯಾವ ಹಂತದಲ್ಲೂ ಅವರಿಗೆ ಸುಖಲೋಲುಪತೆಗೆ ಕೊರತೆ ಇರಲಿಲ್ಲ. ಹೆಸರಿಗೆ ಧೃತರಾಷ್ಟ್ರ ರಾಜನಾಗಿದ್ದರೂ, ದುರ್ಯೋಧನನೇ ಸೂಪರ್ ಸಿಎಂ, ಸೂಪರ್ ಪಿಎಂಗಳಂತೆ ಎಲ್ಲ ಅಧಿಕಾರ ಸೂತ್ರ ಹೊಂದಿದ್ದ. ಇನ್ನು ದುರ್ಯೋಧನ ಬಾಲ್ಯದಿಂದ ಸಾವಿನವರೆಗೆ ದುಷ್ಟ ಪ್ರವೃತ್ತಿಯ ಅಪರಾವತಾರವಾಗಿ ಬದುಕಿದವನು.
ಜಲಕ್ರೀಡೆ ಆಡುವಾಗ ಭೀಮನನ್ನು ನದಿಯಲ್ಲಿ ಮುಳುಗಿಸಿ ಕೊಲ್ಲಲು ಯತ್ನಿಸಿದ್ದು, ಅರಗಿನ ಮನೆಯಲ್ಲಿ ಪಾಂಡವರನ್ನು ಸುಟ್ಟು ಕೊಲ್ಲಲು ಯತ್ನಿಸಿದ್ದು, ದ್ರೌಪದಿಯನ್ನು ಜುಟ್ಟು ಹಿಡಿದು ಎಳೆದು ತರುವಂತೆ ತಮ್ಮ ದುಶ್ಯಾಸನನಿಗೆ ಆದೇಶಿಸಿ, ತುಂಬಿದ ಸಭೆಯಲ್ಲಿ ವಸ್ತ್ರಾಪಹರಣದ ಮೂಲಕ ಮಾನಭಂಗ ಮಾಡಿದ್ದು, ಶಕುನಿಯ ಕುಟಿಲ ತಂತ್ರದ ಮೂಲಕ ಪಾಂಡವರನ್ನು ತನ್ನ ದಾಸರನ್ನಾಗಿ ಮಾಡಿಕೊಂಡಿದ್ದು, ಕೊನೆಗೆ ದಾಸ್ಯ ಮುಕ್ತಿಗಾಗಿ ವನವಾಸ, ಅಜ್ಞಾತವಾಸದ ಷರತ್ತು ಹಾಕಿದ್ದು, ಕಾಡಿನಲ್ಲೂ ಪಾಂಡವರನ್ನು ನೆಮ್ಮದಿಯಿಂದಿರಲು ಬಿಡದೆ, ಜಯದ್ರಥನ ಮೂಲಕ ಕೆಣಕಿದ್ದು, ಅಜ್ಞಾತವಾಸ ಭಂಗಗೊಳಿಸಲು ವಿರಾಟ ರಾಜ್ಯಕ್ಕೆ ಸೈನ್ಯ ನುಗ್ಗಿಸಿದ್ದು, ಕೊನೆಗೆ ಕುರುಕ್ಷೇತ್ರದಲ್ಲಿ ಭೀಮನ ಗದಾಪ್ರಹಾರದಿಂದ ಜೀವ ಕಳೆದುಕೊಳ್ಳುವವರೆಗೆ ದುರ್ಯೋಧನ ಜೀವನದುದ್ದಕ್ಕೂ ಪಾಂಡವರ ವಿರುದ್ಧ ದ್ವೇಷವನ್ನೇ ಉಸಿರಾಡಿದವನು. ಅಷ್ಟೆಲ್ಲ ತಪ್ಪು, ಮೋಸ, ದ್ರೋಹ, ಅನ್ಯಾಯವೆಸಗಿದ ದುರ್ಯೋಧನನಿಗೆ ದೊರೆತ ಶಿಕ್ಷೆಯಾದರೂ ಎಷ್ಟು?
ಹದಿನೆಂಟು ದಿನಗಳ ಯುದ್ಧದ ಅವಧಿಯಲ್ಲಿ ಬಂಧು ಬಾಂಧವರು, ಮಕ್ಕಳು, ಪರಿವಾರವನ್ನು ಕಳೆದುಕೊಂಡ ನೋವು, ಕೊನೆಗೆ ಸಾವು... ಅಂದರೆ, ಪಾಂಡವರಿಗೆ ಜೀವನಪೂರ್ತಿ ಕೊಟ್ಟ ಕಷ್ಟಕ್ಕೆ ದುರ್ಯೋಧನನಿಗೆ ಶಿಕ್ಷೆ ಹದಿನೆಂಟು ದಿನಗಳಲ್ಲೇ ಮುಗಿದುಹೋಯಿತೇ? ಪಾಂಡವರು ಅನುಭವಿಸಿದ ಒಂದೊಂದು ಹಿಂಸೆ, ಅವಮಾನ, ಯಾತನೆ, ಕಣ್ಣೀರಿಗೆ ಅಷ್ಟೇ ಪ್ರಮಾಣದಲ್ಲಿ ದುರ್ಯೋಧನನೂ ದೀರ್ಘಾವಧಿಯಲ್ಲಿ ಶಿಕ್ಷೆ ಅನುಭವಿಸಬೇಕಿತ್ತಲ್ಲವೇ? ಅಪರಾಧ ಪ್ರವೃತ್ತಿ ಜೀವನಪರ್ಯಂತವಿರುವಾಗ, ಶಿಕ್ಷೆಯನ್ನು ಮಾತ್ರ ಬೇಗನೆ ಮುಗಿಸಲು ಏಕೆ ಧಾವಂತ? ಅಪರಾಧ- ಶಿಕ್ಷೆ, ಕಷ್ಟ-ಸುಖ, ಅನ್ಯಾಯ-ನ್ಯಾಯಗಳ ಪರಿಕಲ್ಪನೆಗೆ ತಾತ್ವಿಕ ನೆಲೆಗಟ್ಟಿನಲ್ಲಿ ಹತ್ತುಹಲವು ಸಮರ್ಥನೆಗಳು, ವಿಮರ್ಶೆಗಳು ಇರಬಹುದು. ಆದರೂ, ಕೆಲವೊಂದು ಚರ್ಚೆಗಳು ಅಪೂರ್ಣವಾಗಿಯೇ ಉಳಿಯುತ್ತವೆ.
ನಮ್ಮ ಚಲನಚಿತ್ರಗಳಲ್ಲೂ ಹಾಗೆಯೇ. ಕಥಾನಾಯಕ ಇಡೀ ಕಥೆಯಲ್ಲಿ ಎಷ್ಟೆಲ್ಲ ಕಷ್ಟ ಪಡುತ್ತಾನೆ. ಖಳನಾಯಕನ ದುಷ್ಟಕೂಟದವರು ನೀಡುವ ಏನೆಲ್ಲ ತೊಂದರೆಗಳನ್ನು ಸಹಿಸಿಕೊಂಡು, ಹೋರಾಡಿ ಕೊಟ್ಟಕೊನೆಗೆ ಎಲ್ಲ ವಿರೋಧಿಗಳನ್ನು ಸೋಲಿಸಿ ಗೆಲುವು ಸಾಧಿಸುತ್ತಾನೆ. ಆದರೆ, ಕಷ್ಟಗಳು ಮುಗಿದು, ಸುಖ ಬಂತೆನ್ನುವ ಹೊತ್ತಿಗೆ ಚಲನಚಿತ್ರವೇ ಶುಭಂ ಆಗಿಹೋಗಿರುತ್ತದೆ. ಅಲ್ಲಿಗೆ ಪ್ರೇಕ್ಷಕರು ಸಾಕ್ಷಿಯಾಗುವುದು ಕಥಾನಾಯಕನ ಕಷ್ಟಕ್ಕೆ ಮಾತ್ರ. ಸಂತೋಷವೆನ್ನುವುದು ಕಲ್ಪನೆಯಲ್ಲಿ ಮಾತ್ರವೇ ಉಳಿದುಹೋಗುತ್ತದೆ! ಈಗೀಗ ಎಲ್ಲರ ಕೈಯಲ್ಲೂ ಸ್ವಲ್ಪ ದುಡ್ಡು ಓಡಾಡುತ್ತಿದೆ. ಆದರೆ, ಬಡತನವೆನ್ನುವುದು ನೂರಕ್ಕೆ ನೂರು ನಿಮೂಲನೆ ಆಗುವುದಕ್ಕೆ ಇನ್ನೆಷ್ಟು ಕಾಲ ಬೇಕೋ? ಈಗಲೂ ಖರ್ಚಿಗೆ ಬಿಡಿಗಾಸಿಲ್ಲದೆ ದಿನದೂಡುವ ಕೋಟ್ಯಂತರ ಕುಟುಂಬಗಳಿವೆ.
ಬಡಕುಟುಂಬಗಳಲ್ಲಿ ಮಕ್ಕಳು ಚೆನ್ನಾಗಿರಲಿ ಎಂದು ಹಿರಿಯರು ಎಷ್ಟೆಲ್ಲ ಕಷ್ಟ ಪಡುತ್ತಾರೆ? ಏನೆಲ್ಲ ತ್ಯಾಗ ಮಾಡುತ್ತಾರೆ? ತಾವು ಅರೆಹೊಟ್ಟೆ ಉಂಡು ಮಕ್ಕಳನ್ನು ಸಾಕುತ್ತಾರೆ, ಓದಿಸುತ್ತಾರೆ. ಇನ್ನೇನು ಮಕ್ಕಳು ವಿದ್ಯಾಭ್ಯಾಸ ಮುಗಿಸಿ, ಒಳ್ಳೆಯ ಕೆಲಸ ಸಂಪಾದಿಸಿ, ಸ್ವಲ್ಪ ದುಡ್ಡುಕಾಸು ನೋಡುವ ಹೊತ್ತಿಗೆ ಅಪ್ಪ-ಅಮ್ಮ ಅಸು ನೀಗಿರುತ್ತಾರೆ. ಅಂದರೆ, ಕಷ್ಟದಲ್ಲೇ ಹುಟ್ಟಿ, ಕಷ್ಟದಲ್ಲೇ ಜೀವನ ದೂಡುವ ಇಂಥವರು, ಒಳ್ಳೆಯ ದಿನಗಳನ್ನು ಕಾಣಲು ಬದುಕಿರುವುದೇ ಇಲ್ಲ. ಹಿಂದಿನ ಜನ್ಮದ ಪಾಪ-ಪುಣ್ಯದ ಫಲ ಈ ಜನ್ಮದಲ್ಲಿ ಎಂಬ ಪುನರ್ಜನ್ಮದ ಸಿದ್ಧಾಂತ ಏನೇ ಇದ್ದರೂ, ಈ ಜನ್ಮದ ಪಾಪ-ಪುಣ್ಯಗಳಿಗೇ ಈ ಜನ್ಮದಲ್ಲೇ ಶಿಕ್ಷೆ-ರಕ್ಷೆ ಎಂಬ ಮಾತು ಅನೇಕರ ಪಾಲಿಗೆ ನಿಜವಾಗುವುದಿಲ್ಲ. ಜೀವನದ ಪ್ರಥಮಾರ್ಧದಲ್ಲಿ ಕಷ್ಟಪಟ್ಟು ಮೇಲೆ ಬಂದು, ಉತ್ತರಾರ್ಧದಲ್ಲಿ ಸುಖ-ನೆಮ್ಮದಿಯನ್ನು ಕಾಣುವ ಸಾಧಕರನೇಕರನ್ನು ಸಮಾಜದಲ್ಲಿ ಕಂಡಿರುತ್ತೇವೆ. ಅದೇ ರೀತಿ ಆರಂಭದಲ್ಲಿ ಎಲ್ಲ ಸುಖವನ್ನೇ ಅನುಭವಿಸಿ, ಇಳಿವಯಸ್ಸಿನಲ್ಲಿ ಬಾಧೆ ಪಡುವವರನ್ನೂ ಕಂಡಿದ್ದೇವೆ.
ಇಂಥವರ ನಡುವೆ ಸಂತೋಷ- ನೆಮ್ಮದಿಯನ್ನೇ ಕಾಣದ ಕಷ್ಟಜೀವಿಗಳನ್ನೂ, ದುಃಖ, ನೋವೆಂದರೇನೆಂದೇ ಅರಿಯದ ಸುಖಪುರುಷರನ್ನೂ ಕಾಣುತ್ತಿರುತ್ತೇವೆ. ಒಟ್ಟಿನಲ್ಲಿ ಈ ಜಗತ್ತೆನ್ನುವುದು ಅತಿರೇಕಗಳ, ವಿಪರೀತಗಳ, ಅಪವಾದಗಳ ಪ್ಯಾಕೇಜ್ ಎಂಬ ಭಾವನೆ ಬರುವುದೂ ಇದೇ ಕಾರಣಕ್ಕೆ. ಏಕೆಂದರೆ, ಈ ಸೃಷ್ಟಿಗೆ ಒಂದು ಸಿದ್ಧಸೂತ್ರವೆಂಬುದಿಲ್ಲ. ಒಂದೇ ಮಾದರಿ ಎಂಬುದಿಲ್ಲ. ಯಾವ ಸೃಷ್ಟಿಯೂ ತದ್ರೂಪಿಯಲ್ಲ. ಫ್ಯಾಕ್ಟರಿಗಳಲ್ಲಿ ಒಂದು ಸಿದ್ಧ ಅಚ್ಚಿನಿಂದ ಉತ್ಪಾದನೆಗೊಳ್ಳುವ ಪಡಿಯಚ್ಚಿನಂತೆ ಮನುಷ್ಯ ಸೃಷ್ಟಿ ನಡೆಯುವುದಿಲ್ಲ. ಹಾಗಾಗಿ ಪ್ರತಿಯೊಂದೂ ವಿಭಿನ್ನ, ವಿಶೇಷ. ಪ್ರತಿಯೊಬ್ಬರ ಜೀವನವೂ ಅಷ್ಟೇ. ಅವನಿಗೆ ಹಾಗೆ? ನನಗೆ ಮಾತ್ರ ಯಾಕೆ ಹೀಗೆ? ಎಂದು ಹಳಿದುಕೊಳ್ಳುವ, ದೇವರನ್ನು ಪ್ರಶ್ನಿಸುವ ಅವಕಾಶ, ಅಧಿಕಾರವೂ ಇದೇ ಕಾರಣಕ್ಕೆ ನಮಗೆ ಇರುವುದಿಲ್ಲ.
ಈ ಎಲ್ಲ ಹಿನ್ನೆಲೆಯಲ್ಲಿ ಪುರಂದರ ದಾಸರ ಸತ್ಯವಂತರಿಗಿದು ಕಾಲವಲ್ಲ | ದುಷ್ಟ ಜನರಿಗೆ ಸುಭಿಕ್ಷ ಕಾಲ|| ಎಂಬ ಕೃತಿಯನ್ನು ಅರ್ಥ ಮಾಡಿಕೊಳ್ಳುವುದಾದರೆ, ಸತ್ಯವಂತರ ಕಷ್ಟ ಚಿರಕಾಲ ಎಂಬಂತೆ ಭಾಸವಾಗುತ್ತದೆ. ದುಷ್ಟ ಜನರ ದರ್ಪ, ದರ್ಬಾರಿಗೂ ಕೊನೆ ಎಂಬುದೇ ಇಲ್ಲ ಎಂಬ ಭಾವನೆ ಮೂಡುತ್ತದೆ. ಆದರೆ, ಕೊನೆಯಲ್ಲಿ ದುಷ್ಟರಿಗೆ ಶಿಕ್ಷೆ, ಸತ್ಯಕ್ಕೆ ಜಯ ಕಟ್ಟಿಟ್ಟ ಬುತ್ತಿ ಆಗಿದ್ದರೂ, ಅಲ್ಲಿಯವರೆಗೆ ಕಾಯುವುದನ್ನು ಬಿಟ್ಟು ಆತುರ ಪಡುವುದು ಸಾಧುವೂ ಅಲ್ಲ, ಸಾಧ್ಯವೂ ಇಲ್ಲ. ಹರಿಸ್ಮರಣೆ ಮಾಡುವಗೆ ಕ್ಷಯವಾಗುವ ಕಾಲ| ಪರಮ ಪಾಪಿಗಳಿಗೆ ಸುಭಿಕ್ಷ ಕಾಲ || ದೇವರು ಬಡವರನ್ನು, ಕಷ್ಟ ಪಡುವವರನ್ನು ಹೆಚ್ಚು ಹೆಚ್ಚು ಪರೀಕ್ಷೆ ಮಾಡುತ್ತಾನಂತೆ. ಏಕೆಂದರೆ, ಅವರಿಗೆ ಗಟ್ಟಿ ಗುಂಡಿಗೆ ಇರುತ್ತದೆ. ಏನೇ ಬಂದರೂ ಎದುರಿಸಿ ಹೋರಾಡುವ ಮನೋಬಲ ಇರುತ್ತದೆ. ಎಷ್ಟೋ ಬಾರಿ ಸಿರಿವಂತರಿಗೆ ಕಷ್ಟ ಬಂದಾಗ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಕಂಡಿದ್ದೇವೆ. ಆದರೆ, ಬಡವರು ಕಷ್ಟ ಎಂದು ಯಾವತ್ತೂ ಹೆದರಿ ಸಾಯುವುದಿಲ್ಲ. ಬಡವರಿಗೆ ಕಿಸೆಯಲ್ಲಿ ಹತ್ತು ರೂ. ಇಲ್ಲದಿದ್ದರೂ, ತಿಂಗಳು ಕಳೆಯಬಲ್ಲರು.
ಆದರೆ, ಶ್ರೀಮಂತ ಖಾಲಿ ಕಿಸೆಯಲ್ಲಿ ಒಂದು ಗಂಟೆಯನ್ನೂ ಕಳೆಯಲಾರ. ಬದುಕು ನಮಗೆ ಹೋರಾಡುವುದನ್ನು ಕಲಿಸುತ್ತದೆ. ಹೋರಾಟ ಬದುಕನ್ನು ಅರ್ಥ ಮಾಡಿಸುತ್ತದೆ. ಹಾಗಾಗಿ ಜೀವ, ಜೀವನ, ಪ್ರಕೃತಿ, ಪರಿಸರದಲ್ಲಿ ಸರಿ-ತಪ್ಪು, ನೋವು-ನಲಿವು, ಸಿರಿತನ-ಬಡತನ, ಪಾಪ-ಪುಣ್ಯ ಎಲ್ಲವೂ ಇದ್ದಾಗಲೇ ತಕ್ಕಡಿ ತೂಗುವುದು. ಯಾವುದೋ ಒಂದು ಮಾತ್ರ ಇರಲಿ, ಇನ್ನೊಂದು ಬೇಡ ಎಂದರೆ, ಅದು ಸೃಷ್ಟಿ ಎನಿಸುವುದಿಲ್ಲ. ಆದರೆ, ನಾವು ಆ ಎರಡರಲ್ಲಿ ಯಾವ ಬದಿ ಇರುತ್ತೇವೆ ಎನ್ನುವುದು ನಮ್ಮ ನಮ್ಮ ಹಣೆಬರಹ, ಪೂರ್ವಜನ್ಮದಿಂದ ಪಡೆದುತಂದ ಪಾಪ-ಪುಣ್ಯಗಳ ಫಲ ಎನ್ನಬಹುದೇನೋ. ಯಾಕೆಂದರೆ, ಬಡವ, ಸಿರಿವಂತ ಎಲ್ಲವೂ ಹುಟ್ಟಿದ ಮೇಲೆ. ಯಾವ ಜೀವವೂ ಅಂಬಾನಿ ಮನೆಯಲ್ಲೇ ಹುಟ್ಟಬೇಕು ಎಂದು ಬಯಸಿ ಹುಟ್ಟಲು ಸಾಧ್ಯವಿಲ್ಲ. ಜನ್ಮವೆನ್ನುವುದು ಭಗವಂತನ ಇಚ್ಛೆ. ಆದರೆ, ಬದುಕಿನಲ್ಲಿ ಏನಾಗಬೇಕೆನ್ನುವುದರಲ್ಲಿ ನಮ್ಮ ಪ್ರಯತ್ನದ ಪಾಲೂ ಇರುತ್ತದೆ. ದುಷ್ಟರಿಗೆ ಶಿಕ್ಷಿಸುವುದಕ್ಕೆ ವ್ಯವಸ್ಥೆ ಇದೆ, ಕಾಲವೇ ಶಿಕ್ಷಿಸುತ್ತದೆ. ಆದರೆ, ನಮ್ಮಲ್ಲಿ ದುಷ್ಟಪ್ರವೃತ್ತಿ ಬೆಳೆಯಲು ಬಿಡದೆ, ಸದಾಚಾರ, ಸದ್ವಿಚಾರಗಳನ್ನು ರೂಢಿಸಿಕೊಂಡರೆ, ಜಗತ್ತಿನಲ್ಲಿ ಓರ್ವ ದುಷ್ಟನ ಸಂಖ್ಯೆ ಕಡಿಮೆ ಆಗುತ್ತದೆ. ಅಷ್ಟನ್ನು ನಾವು ಮಾಡಬಹುದು.