ಅದೊಂದು ಗುರುಕುಲ. ಅಲ್ಲಿ ಇಬ್ಬರು ವಿದ್ಯಾರ್ಥಿಗಳ ನಡುವೆ ವಿದ್ಯಾರ್ಥಿ ನಾಯಕನ ಪಟ್ಟಕ್ಕೆ ಪೈಪೋಟಿ ನಡೆದಿತ್ತು. ಗುರುಗಳಿಗೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಗೊಂದಲವುಂಟಾಗಿ ಅವರ ವಿಶ್ವಾಸವನ್ನು ಪರೀಕ್ಷಿಸುವುದಕ್ಕೆ ಸ್ಪರ್ಧೆಯೊಂದನ್ನು ಏರ್ಪಡಿಸಿದರು. ಇಬ್ಬರಿಗೂ ಒಂದಷ್ಟು ಹಣವನ್ನು ನೀಡಿ, 15 ದಿನದಲ್ಲಿ ಯಾವುದಾದರೂ ವ್ಯಾಪಾರವನ್ನು ಮಾಡಿ, ಕೊಟ್ಟ ಹಣಕ್ಕಿಂತ ಹೆಚ್ಚು ಸಂಪಾದಿಸಿಕೊಂಡು ಬರಬೇಕು ಎಂದು ತಾಕೀತು ಮಾಡಿದರು. ಇಬ್ಬರೂ ಗುರುಗಳ ಆಣತಿಯಂತೆ ಧನವನ್ನು ಪಡೆದು ಪಟ್ಟಣಕ್ಕೆ ಬಂದು ಹೂವಿನ ವ್ಯಾಪಾರ ಮಾಡಲು ಪ್ರಾರಂಭಿಸಿದರು. ಮೊದಲ ವಿದ್ಯಾರ್ಥಿ ಹೂವಿನ ವ್ಯಾಪಾರಕ್ಕೆ ಯೋಜನೆಯೊಂದನ್ನು ರೂಪಿಸಿ, ಕ್ರಮಬದ್ಧವಾಗಿ ಪ್ರಾರಂಭಿಸಿದ. ಎರಡನೆಯವನಲ್ಲಿ ಅಂತಹ ಯೋಚನೆಗಳು ಇರಲಿಲ್ಲ. ವ್ಯಾಪಾರದ ಮೊದಲ ದಿನ ಹೂವುಗಳನ್ನು ಕೊಳ್ಳುವವರಿಲ್ಲದೇ ಇಬ್ಬರ ಹೂವುಗಳೂ ಹಾಳಾಗಿ ಹೋದವು. ಎರಡನೇ ದಿನವೂ ಅಷ್ಟೊಂದು ಸಂಪಾದನೆಯಾಗಲಿಲ್ಲ. ಮೂರನೇ ದಿನ ಎಂದಿನಂತೆ ಮೊದಲ ವಿದ್ಯಾರ್ಥಿ ತನ್ನ ವ್ಯಾಪಾರವನ್ನು ಮುಂದುವರಿಸಿದ. ಆದರೆ ಎರಡನೆಯವನು ಹೂವಿನ ವ್ಯಾಪಾರದ ಮೇಲೆ ನಂಬಿಕೆ ಕಳೆದುಕೊಂಡು ಹಣ್ಣಿನ ವ್ಯಾಪಾರ ಮಾಡತೊಡಗಿದ. ಮತ್ತೆರಡು ದಿನಕ್ಕೆ ಅದು ಸಾಲುತ್ತಿಲ್ಲವೆಂದು ತರಕಾರಿ ಮಾರತೊಡಗಿದ. ಹೀಗೆ ಹದಿನೈದು ದಿನ ಆಗುವಾಗ ನಾಲ್ಕೈದು ಬಗೆಯ ವ್ಯಾಪಾರವನ್ನು ಮಾಡಿ ಮುಗಿಸಿದ್ದ. ಸ್ಪರ್ಧೆಯ ಗಡುವು ಮುಗಿದಿದ್ದರಿಂದ ಇಬ್ಬರೂ ಗುರುಗಳ ಬಳಿ ಮರಳಿ ಬಂದರು.
ಮೊದಲ ವಿದ್ಯಾರ್ಥಿ ಗುರುಗಳು ಕೊಟ್ಟ ಅಸಲನ್ನು ಮಾತ್ರ ಉಳಿಸಿಕೊಂಡಿದ್ದ. ಆದರೆ ಎರಡನೇ ವಿದ್ಯಾರ್ಥಿಯು ಕೊಟ್ಟ ಹಣಕ್ಕಿಂತ ಸ್ವಲ್ಪ ಹೆಚ್ಚು ಸಂಪಾದನೆ ಮಾಡಿದ್ದ. ಗುರುಗಳು ಮೊದಲ ವಿದ್ಯಾರ್ಥಿಯನ್ನು ವಿದ್ಯಾರ್ಥಿಗಳ ನಾಯಕನೆಂದು ಘೊಷಣೆ ಮಾಡಿದರು. ಎರಡನೇ ವಿದ್ಯಾರ್ಥಿಗೆ ಆಘಾತವಾಗಿ ‘ನಾನು ಅವನಿಗಿಂತ ಹೆಚ್ಚು ಸಂಪಾದಿಸಿರುವಾಗ ನನ್ನನ್ನು ಆಯ್ಕೆ ಮಾಡಬೇಕಲ್ಲವೇ? ಎಂದು ಪ್ರಶ್ನಿಸಿದ. ಗುರುಗಳ ನಗುತ್ತ, ‘ನೋಡು, ಆತ ಆತ್ಮವಿಶ್ವಾಸದಲ್ಲಿ ನಂಬಿಕೆ ಇರಿಸಿ ವ್ಯಾಪಾರವನ್ನು ಮಾಡಿದ. ಅವನಲ್ಲಿ ಪ್ರಾಮಾಣಿಕವಾದ ಪ್ರಯತ್ನವಿತ್ತು. ಇಂದಲ್ಲ ನಾಳೆ ಇದರಲ್ಲಿ ಯಶಸ್ವಿಯಾಗುತ್ತೇನೆ ಎಂಬ ವಿಶ್ವಾಸವಿದ್ದಿತ್ತು. ಆದರೆ ವ್ಯಾಪಾರ ಸೋಲಾದರೆ ಎಂಬ ಅಳುಕು ನಿನ್ನಲ್ಲಿತ್ತು. ಹಾಗಾಗಿಯೇ ಪದೇಪದೆ ವ್ಯಾಪಾರವನ್ನು ಬದಲಿಸಿದೆ. ನಿನ್ನ ಬಗ್ಗೆ ನಿನಗೇ ನಂಬಿಕೆ ಇರದಿರುವಾಗ ವಿದ್ಯಾರ್ಥಿ ನಾಯಕನಾಗುವುದಕ್ಕೆ ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದರು.
ಜೀವನ ಎನ್ನುವ ವ್ಯಾಪಾರದಲ್ಲಿ ಪ್ರತಿಯೊಬ್ಬರಿಗೂ ದೃಢಸಂಕಲ್ಪ ಎನ್ನುವುದು ಬಹಳ ಮುಖ್ಯ. ಕೆಲವೊಮ್ಮೆ ಸಾಮಾನ್ಯ ಘಟನೆಗಳಿಂದ ಆತ್ಮವಿಶ್ವಾಸಕ್ಕೆ ಧಕ್ಕೆಯುಂಟಾಗಿ ನಂಬಿಕೆ ಕಳೆದುಕೊಳ್ಳುತ್ತೇವೆ. ನಾವು ಮಾಡುವ ಎಲ್ಲಾ ಕಾರ್ಯದಲ್ಲಿ ಯಶಸ್ಸು ಸಿಕ್ಕೆ ಸಿಗುತ್ತದೆ ಎನ್ನುವ ಖಾತ್ರಿ ಇಲ್ಲ. ಆದರೆ ನಮ್ಮ ನಂಬಿಕೆ ಎಂದಿಗೂ ಸೋಲಬಾರದು. ಭಗೀರಥ ಮಹಾರಾಜ ಸುರಗಂಗೆಯನ್ನು ಭೂಮಿಗೆ ಇಳಿಸುವುದಕ್ಕೆ ಪಟ್ಟ ಕಷ್ಟಗಳೆಷ್ಟು... ಆದರೂ ಸತತ ಪ್ರಯತ್ನ ಹಾಗೂ ನಂಬಿಕೆ ಎಂಬ ಮಂತ್ರದಂಡದಿಂದ ಯಶಸ್ಸನ್ನು ಸಿದ್ಧಿಸಿಕೊಂಡ.
(ಲೇಖಕರು ಸಾಫ್ಟ್ವೇರ್ ಇಂಜಿನಿಯರ್, ಹವ್ಯಾಸಿ ಬರಹಗಾರರು)