ಒಬ್ಬ ವ್ಯಕ್ತಿ ಅಥವಾ ಚಿಕ್ಕ ಕುಟುಂಬದ ಖಾಸಗಿತನಕ್ಕಾಗಿ ಮನೆಯೊಳಗೇ ಪ್ರತ್ಯೇಕ ವಾಸದ ಏರ್ಪಾಡು. ಫ್ರೆಂಚ್ನಲ್ಲಿ appartement ಮತ್ತು ಇಟಾಲಿಯನ್ನಲ್ಲಿ appartimento ಕೂಡ ಇದೇ ಅರ್ಥದಲ್ಲಿ ಬಳಕೆ. ಇವುಗಳ ಮೂಲ, ಒಂದು ಪ್ರತ್ಯೇಕ ವಾಸಸ್ಥಳ ಎಂಬರ್ಥದ appartere ಪದ, ಮತ್ತು ಅದಕ್ಕೂ ಮೂಲ- ಒಂದರೊಳಗಿನ ಭಾಗ ಅಥವಾ ತುಣುಕು ಎಂಬರ್ಥದ partem ಎನ್ನುವ ಲ್ಯಾಟಿನ್ ಪದ. ಅಂದರೆ ಇಲ್ಲಿ ಪ್ರತ್ಯೇಕತೆಯೂ ಇದೆ, ವಿಭಾಗಗಳು ಒಂದರೊಡನೊಂದು ಸೇರಿ ಸಮುಚ್ಚಯವಾಗುವುದು ಅಂತಲೂ ಇದೆ! ಈಗ ವಾಡಿಕೆಯಲ್ಲಿರುವ ಅರ್ಥದಲ್ಲಿ, ‘ಬಾಡಿಗೆಗೆ ಕೊಡಲಿಕ್ಕೆಂದೇ ಇರುವ ಮನೆಗಳು ಒತ್ತೊತ್ತಾಗಿ ಒಂದು ಕಟ್ಟಡದಲ್ಲಿರುವುದು’ ಎಂಬ ರೀತಿಯಲ್ಲಿ Apartment ಮೊತ್ತಮೊದಲಿಗೆ ಆರಂಭವಾದದ್ದು 1863ರಲ್ಲಿ ಪ್ಯಾರಿಸ್ ನಗರದಲ್ಲಿ.
ಬ್ರಿಟಿಷ್ ಇಂಗ್ಲಿಷ್ನ Flat ಎಂಬ ಪದಬಳಕೆಗೆ ಕಾರಣ, ಸಮುಚ್ಚಯದೊಳಗಿನ ಯಾವುದೇ ಮಹಡಿಯ ಯಾವುದೇ ಒಂದು ಘಟಕವನ್ನು ತೆಗೆದುಕೊಂಡರೆ ಅದು ಒಂದು ಅಂತಸ್ತಿನಲ್ಲಷ್ಟೇ ಇರುತ್ತದೆ. ಮನೆಯೊಳಗೆ ಏರು-ಇಳಿ ಮೆಟ್ಟಿಲುಗಳಿರುವುದಿಲ್ಲ. ಸಮತಟ್ಟಾಗಿರುತ್ತದೆ ಆದ್ದರಿಂದ ಫ್ಲ್ಯಾಟ್.
ಇದೆಲ್ಲವನ್ನೂ ಪರಿಗಣಿಸಿದರೆ Apartmentಠಿ ಎಂಬರ್ಥ ಕೊಡುವ ಅಚ್ಚಕನ್ನಡ ಪದ ಅಥವಾ ರಾಷ್ಟ್ರವ್ಯಾಪಿ ಬಳಕೆಗೆ ಅನುಕೂಲವಾಗುವಂತೆ ಸಂಸ್ಕೃತಛಾಯೆಯ ಪದ ಹುಡುಕುವಾಗ ತುಸು ಯೋಚಿಸಬೇಕಾಗುತ್ತದೆ. ಒಟ್ಟು ವಸತಿ ಸಂಕೀರ್ಣಕ್ಕೇ ಅನ್ವಯವಾಗುವಂಥದ್ದು, ಮತ್ತು ಸಮುಚ್ಚಯದೊಳಗಿನ ಒಂದೊಂದು ಘಟಕಕ್ಕೂ ಸರಿಹೊಂದುವಂಥದ್ದು, ಹೀಗೆ ವ್ಯಷ್ಟಿ-ಸಮಷ್ಟಿ ಎರಡಕ್ಕೂ ಹೊಂದುವಂತೆ ಇದ್ದರೆ ಬಹಳ ಒಳ್ಳೆಯದು.
ಜಗದೀಶ ಚಂಪಕಾಪುರ ಅವರು ಸೂಚಿಸಿದ ‘ವಿಭಾಗಸೌಧ’ ಈ ದೃಷ್ಟಿಯಿಂದ ಬಹಳ ರ್ತಾಕವೂ, ಶುದ್ಧಸಂಸ್ಕೃತದ್ದೇ ಆಗಿದ್ದರೂ ಕನ್ನಡಿಗರಿಗೆ ಉಚ್ಚರಣೆಗೆ, ಬರೆಯಲಿಕ್ಕೆ ಕಷ್ಟವಿಲ್ಲದ್ದೂ ಆಗಿದೆ. ‘ಬೆಂಗಳೂರಿನಲ್ಲಿ ಈಗ ಎದ್ದುಕಾಣುವುದು ಎರಡೇ: ಒಂದು ವಿಧಾನಸೌಧ ಮತ್ತು ಎಲ್ಲೆಲ್ಲಿ ಕಣ್ಣುಹಾಯಿಸಿದರೂ ವಿಭಾಗಸೌಧಗಳು!’ ಎಂಬ ಅವರ ಸೋದಾಹರಣ ವ್ಯಾಖ್ಯಾನವಂತೂ ಬೆಂಗಳೂರಿಗೇ ಹೇಳಿಮಾಡಿಸಿದಂತಿದೆ. ಬೇರೆ ನಗರಗಳ ಪರಿಸ್ಥಿತಿಯೂ ಭಿನ್ನವೇನಲ್ಲ. ಅಲ್ಲೆಲ್ಲ ವಿಧಾನಸೌಧ ಇಲ್ಲದಿದ್ದರೂ ವಿಭಾಗಸೌಧಗಳಿಗೇನೂ ಕೊರತೆಯಿಲ್ಲ. ಅಂದಹಾಗೆ ಸೌಧ ಎಂದರೆ ಬೃಹತ್ ಕಟ್ಟಡ ಎಂದೇ ನಾವು ಕಲ್ಪಿಸಿಕೊಳ್ಳುತ್ತೇವಾದರೂ ಸಂಸ್ಕೃತದ ಸೌಧ ಪದ ರೂಪುಗೊಂಡಿದ್ದು ಹೇಗೆ ಗೊತ್ತೇ? ಸುಧಾ ಎಂದರೆ ಸಂಸ್ಕೃತದಲ್ಲಿ ಸುಣ್ಣ ಎಂಬ ಅರ್ಥವೂ ಇದೆ.
ಸುಣ್ಣ ಬಳಿದಿರುವ ಮನೆಯೇ ಸೌಧ! ಅದು ಯಾವುದೇ ಆಕಾರದ್ದು, ಎಷ್ಟೇ ವಿಸ್ತೀರ್ಣ ಮತ್ತು ಎತ್ತರದ್ದು, ಎಷ್ಟೇ ಕುಟುಂಬಗಳು ವಾಸಿಸುವಂಥದ್ದು ಬೇಕಾದರೂ ಇರಬಹುದು. ಒಂದು ಬೃಹತ್ ಸೌಧವನ್ನೇ ವಿಭಾಗಗಳನ್ನಾಗಿ ಮಾಡಲಾಗಿದೆ ಎಂದುಕೊಂಡು ವಿಭಾಗಸೌಧ ಅಂತ ಕರೆದರೆ Apartment ಪದದ ಮೂಲಾರ್ಥವನ್ನು ಹದಿನಾರಾಣೆ ಬಿಂಬಿಸಿದಂತಾಗುತ್ತದೆ. ಒಂದು ಕಟ್ಟಡದ ಇಪ್ಪತ್ತು ಮಹಡಿಗಳಲ್ಲಿ ತಲಾ ನಾಲ್ಕರಂತೆ ಒಟ್ಟು 80 ಮನೆಗಳಿದ್ದರೆ, ಆ ಇಡೀ ಕಟ್ಟಡವನ್ನೇ ವಿಭಾಗಸೌಧ ಎನ್ನಲಿಕ್ಕಡ್ಡಿಯಿಲ್ಲ; ಎಂಬತ್ತು ಮನೆಗಳಲ್ಲಿ ಒಂದೊಂದನ್ನೂ ವಿಭಾಗಸೌಧ ಎನ್ನಲಿಕ್ಕೂ ತೊಂದರೆಯೇನಿಲ್ಲ. ಎಲ್ಲವೂ ಸುಧಾ(ಸುಣ್ಣ) ಬಳಿದುಕೊಂಡವುಗಳೇ ತಾನೆ? ಅಚ್ಚಕನ್ನಡದ್ದಾಗಬೇಕು ಮತ್ತು ಬಹುಮತದ ಆಯ್ಕೆಯಾಗಿರಬೇಕು ಅಂತಾದರೆ ‘ಕೂಡುಮನೆ’ ಪದ ಒಳ್ಳೆಯದಿದೆ.
ಸೂಚಿಸಿರುವವರು: ಎನ್.ಕೆ ಸುಬ್ಬಣ್ಣ, ಜ್ಯೋತಿಮಧು ಭದ್ರಾವತಿ, ಎಂ.ಎನ್. ರಮೇಶ್, ಶ್ರೀಧರ ಸೊಪ್ಪಿಮಠ, ಕಾಡೇಶ ವಿ.ಬಿ, ಗಿರೀಶ ಎ.ವಿ, ಷಡಕ್ಷರಮುನಿ ಸ್ವಾಮೀಜಿ, ಚಂದ್ರಮೌಳಿ ಬಿ.ಆರ್, ಮಂಜುನಾಥ ದುಬಲಗುಂಡಿ, ಸಂಕಪ್ಪ ಎಸ್.ಎಂ, ಪ್ರಕಾಶ ಚಿಕ್ಕೇರಿ, ಹೇಮಂತ ಸಂಪಗಾವಕರ, ಭಾರತಿ ಉಡುಪ, ಸುರೇಖಾ ಶಿವಮೊಗ್ಗ, ಸಂಗೀತಾ, ಮೀನಾಕ್ಷಿ ಟಕ್ಕಳಕಿ, ವಸುಧಾ ನಾಯಕ್, ಎನ್.ಎಚ್ ದೇಶಪಾಂಡೆ, ಲಕ್ಷ್ಮಣ ಬಿ.ಎನ್, ವಿಲಾಸಿನಿ ಭಟ್, ಜಿ.ನಾರಾಯಣ ರಾವ್, ನಟರಾಜು ಬಿ.ಎಸ್, ಸುಜಯಾ ಬಿ.ಜಿ, ಶ್ರೀನಾಥ ಕೆ.ಟಿ, ರವಿಶಂಕರ್ ಮೈಸೂರು, ಪುಷ್ಪಲತಾ ಸಂಪಂಗಿರಾಮನಗರ, ಗಿರೀಶ ಕೆ.ಎಸ್, ವಿಠಲ ಹಲಸಿ, ವಿ.ಪಿ ಹೆಗಡೆ, ಭ.ನಿಂ.ಗೋಪಿನಾಥ್, ಗೌತಮ ಮಾಡಗೇರಿ, ಕಿರಣಕುಮಾರ್ ಎಚ್.ಎ, ಸುನೀತಾ ಎಸ್, ಶಾಂತಿನಿ ಮಂಜುನಾಥ ಮುಂತಾದವರು. ಒಂದುವೇಳೆ ಕೂಡುಮನೆ ಎಂದಾಗ ಮನೆಗಳ ಸಮೂಹ ಎಂಬ ಭಾವನೆ ಬರುತ್ತದಾದರೆ, ಆ ಸಮೂಹದಲ್ಲಿನ ಒಂದೊಂದು ಮನೆಯನ್ನೂ ಏನನ್ನೋಣ? ‘ಪಾಲುಮನೆ’ ಆಗಬಹುದೆಂದವರು ಕೃಷ್ಣ ಬರ್ವೆ ಮತ್ತು ಡಾ.ರವಿ ಕುಲಕರ್ಣಿ.
ಕಳೆದಸಲ ಕೇಳಿದ್ದ ಎರಡನೆಯ ಪದ Laminate.. ನಾಲ್ಕೈದು ಶತಮಾನಗಳ ಹಿಂದಿನಿಂದ ಇಂಗ್ಲಿಷ್ನಲ್ಲಿ ಇದು "to beat or roll into thin plates' ಎಂಬರ್ಥದಲ್ಲಷ್ಟೇ ಬಳಕೆಯಾಗುತ್ತಿದ್ದದ್ದು. ಚಿನ್ನವೇ ಮೊದಲಾದ ಲೋಹಗಳನ್ನು ತೆಳುವಾದ ತಗಡು ಅಥವಾ ರೇಕುಗಳಾಗಿ ಬಡಿಯುವ ಪ್ರಕ್ರಿಯೆ. ಲ್ಯಾಟಿನ್ ಭಾಷೆಯಲ್ಲಿ lamina ಎಂದರೆ ಲೋಹದ ತೆಳು ಹಾಳೆ, ಪದರ, ಅಥವಾ ರೇಕು. ಆದ್ದರಿಂದ laminate ಪದವನ್ನು ಕ್ರಿಯಾಪದವಾಗಿ ಪರಿಗಣಿಸಿದರೆ ಕನ್ನಡದಲ್ಲಿ ‘ರೇಕುಗಟ್ಟು’ ಸೂಕ್ತವಾದೀತೆಂದಿದ್ದಾರೆ ಜಿ.ಕೆ.ಲಕ್ಷ್ಮೀ
ನರಸಿಂಹಯ್ಯ. Lamination ಎಂದು ನಾಮಪದವಾಗಿ ಪರಿಗಣಿಸಿದರೆ ‘ಪದರಲೇಪನ’ ಆಗಬಹುದೆಂದಿದ್ದಾರೆ ಮಧುವಂತಿ ಲಿಂಗದಹಳ್ಳಿ, ಸೀಮಾ ಎಚ್.ಎಸ್, ಪರಮೇಶ್ವರ ಹೆಗಡೆ, ನಾಗಮಣಿ ಎಸ್.ಎನ್, ವಿಜಯಕುಮಾರ ಬಗಾಡೆಕರ, ಆನಂದರಾಮ ಮಡಿ, ಶ್ರೀಲತಾ ಮೈಸೂರು ಮತ್ತು ಕೃಪಾ ಗೋಖಲೆ. ಲೇಪಿಸುವ ಉದ್ದೇಶ ರಕ್ಷಣೆಯದು ಆದ್ದರಿಂದ ‘ರಕ್ಷಾಲೇಪನ’ ಎಂದು ಸೂಚಿಸಿರುವವರು: ರಂಗನಾಥ ಟಿ.ಕೆ, ಉಷಾರಾಣಿ ಬಿ.ಪಿ, ಡಾ.ಹೊನ್ನೇಗೌಡ, ನಾಗೇಂದ್ರ ಭಟ್, ಬದರೀನಾಥ ಇಬ್ರಾಂಪುರ, ಕೆ.ಎ.ಭಟ್ ಮುಂತಾದವರು. ಅದಕ್ಕಿಂತ, ಚಿಕ್ಕದಾಗಿ ಚೊಕ್ಕವಾಗಿ ‘ಸುಲೇಪನ’ ಅಥವಾ ‘ಸುಲೇಪಿಸು’ (ಅನುಕ್ರಮವಾಗಿ ನಾಮಪದ ಮತ್ತು ಕ್ರಿಯಾಪದ) ಸಾಕೆಂದವರು ಬೊ.ನಾ.ಕೃಷ್ಣಮೂರ್ತಿ.
ಸಂಖ್ಯಾದೃಷ್ಟಿಯಿಂದ ನೋಡಿದರೆ ಸುಮಾರು ಇನ್ನೂರಕ್ಕೂ ಹೆಚ್ಚು ಪ್ರವೇಶಿಕೆಗಳು ‘ರಕ್ಷಾಕವಚ’ ಎಂದು ಸೂಚಿಸುವಂಥವು ಬಂದಿವೆ. ಪದವೇನೋ ಒಳ್ಳೆಯದಿದೆ ಆದರೆ ಯಾವುದೇ ಕವಚ ಇರುವುದು ರಕ್ಷಣೆಗೆಂದೇ ಅಲ್ಲವೇ? ಅದಕ್ಕಿಂತ- ಈಗ ನಮಗೆ ಲ್ಯಾಮಿನೇಟ್ ಎಂದೊಡನೆ ಥಟ್ಟನೆ ನೆನಪಾಗುವುದು ದಾಖಲೆಪತ್ರಗಳ ರಕ್ಷಣೆಗಾಗಿ ಹೊದಿಸಿದ ಪ್ಲಾಸ್ಟಿಕ್ನ ಪಾರದರ್ಶಕ ಹಾಳೆ; ಇಂಗ್ಲಿಷ್ನಲ್ಲೂ ಕಳೆದ ಶತಮಾನದಿಂದ ಈ ಅರ್ಥದಲ್ಲೇ ಹೆಚ್ಚಾಗಿ ಬಳಕೆ; ಇದು ಪಾರದರ್ಶಕವೂ ಕವಚವೂ ಆಗಿರುವುದರಿಂದ ‘ದರ್ಶಕವಚ’ ಸೂಕ್ತವೆನ್ನುವ ಸಂಜಯ ಕುಲಕರ್ಣಿ ಮತ್ತು ಜ್ಯೋತಿ ಮಹಾದೇವ್ ಸಲಹೆ ಚೆನ್ನಾಗಿದೆ. ಸೂರ್ಯನಾರಾಯಣ ಎಲ್.ವಿ ಅವರಿಂದ ಬಂದ ‘ಕಾಣುಹೊದಿಕೆ’, ಜಿ.ಎಚ್.ಸಂಕಪ್ಪ ಅವರ ‘ರೇಕುಹೊದಿಕೆ’ ಕೂಡ ಗಮನಾರ್ಹ. ಹಾಗೆಯೇ, ಗೋಪಾಲಕೃಷ್ಣ ಹಂಪೀಹೊಳಿ ಅವರು ಸೂಚಿಸಿರುವ ‘ಪುಷ್ಟಿಕವಚ’ ಸಹ ಯೋಗ್ಯವಾಗಿದೆ. ಅವರೆನ್ನುತ್ತಾರೆ, ‘ನಮ್ಮಜ್ಜನ ಕಾಲದಲ್ಲಿ ಕೆಲವು ದಾಖಲೆಪತ್ರಗಳನ್ನು ಹಾಳೆಯಲ್ಲಿ ಒಂದು ರೀತಿಯಲ್ಲಿ ಮಡಚಿ ಒಳಗೆ ಇಡುತ್ತಿದ್ದರು. ಅಂಥ ಹಾಳೆಗೆ ಪುಷ್ಟಿಪತ್ರ ಎನ್ನುತ್ತಿದ್ದರು. ಅದರ ಆಧಾರದ ಮೇಲೆ ಈ ಪದ ಕಟ್ಟಿದ್ದೇನೆ’. ಅವರು ಹೇಳುವುದರಲ್ಲಿ ಅರ್ಥವಿದೆ. ದಾಖಲೆಪತ್ರಗಳಿಗೆ ಲ್ಯಾಮಿನೇಷನ್ ಮಾಡುವುದೆಂದರೆ ಅವು ಶಿಥಿಲವಾಗದಂತೆ, ಗೆದ್ದಲು ತಿನ್ನದಂತೆ ಪುಷ್ಟಿಯೊದಗಿಸುವುದೇ ಆಗಿದೆ.
ಕೊನೆಯದಾಗಿ Picnic. ಎರಡು ಶತಮಾನಗಳ ಹಿಂದೆ ಇಂಗ್ಲಿಷ್ನಲ್ಲಿ ಇದಕ್ಕೆ ಅರ್ಥವಿದ್ದದ್ದು ‘ಭಾಗವಹಿಸುವ ಪ್ರತಿಯೊಬ್ಬರೂ ಒಂದೊಂದು ತಿಂಡಿ-ತಿನಿಸು ತಂದು ಎಲ್ಲರೂ ಸೇರಿ ಆನಂದಿಸುವ ಸಾಮಾಜಿಕ ಸಮ್ಮಿಲನ, ಸಂತೋಷಕೂಟ’ ಎಂದು. ಅದು ಹೊರಾಂಗಣದಲ್ಲೇ ಆಗಬೇಕೆಂದೇನಿರಲಿಲ್ಲ. ಆಮೇಲೆ ಬೇಸಿಗೆಯ ದಿನಗಳ ಸದುಪಯೋಗಕ್ಕಾಗಿ, ಹೆಚ್ಚು ಜನರ ಸೇರುವಿಕೆಗಾಗಿ, ಆಟೋಟ ಮತ್ತಿತರ ಮನೋರಂಜನೆಯ ಏರ್ಪಾಡಿಗಾಗಿ ಹೊರಾಂಗಣಕ್ಕೆ ವಿಸ್ತರಿಸಲಾಯಿತು. ಉದ್ಯಾನದಲ್ಲಿ ವಿಹಾರ, ಊಟತಿಂಡಿ ಮುಖ್ಯವಾಯಿತು. ನಮ್ಮಲ್ಲಿನ ‘ವನಭೋಜನ’ ಎಂಬ ಚಂದದ ಪದವನ್ನೇ ಬಳಸುವುದೊಳ್ಳೆಯದು ಎಂದಿರುವವರು: ಸಜ್ಜನ್ ತಾಳಿಕೋಟಿ, ಎಸ್.ಜಿ.ನಂಜಪ್ಪನವರ, ಬಸನಗೌಡ ತಿಮ್ಮಾಪುರ, ಶಾಂತಲ ಬಿ.ಜೆ, ರಂಜಿತಾ ಅರುಣ್, ಸೂರ್ಯನಾರಾಯಣ ಕೆ.ಎನ್, ಆಶಾಲತಾ ಜೈನ್, ಎಸ್.ಎಂ ವಿನಾಯಕ, ಬಸಲಿಂಗಪ್ಪ ಚಿಂದಿ, ಉದಯ ಕುಲಕರ್ಣಿ, ಮಂಜು ನಾಯಕ್, ಅಪ್ಪುಕುಮಾರ್ ಪಣಶೆಟ್ಟಿ, ಯಮನಪ್ಪ ಕೊಟ್ನಿಕಲ್, ಗಂಗಾಧರ್ ಬೇಲೂರ್, ಮುರಳೀಧರ ತುಂಬಳ, ನಾಗೇಶ ಗ್ರಾಮಪುರೋಹಿತ, ಮಂಜು ಅರಸಯ್ಯ, ಪಂಪಣ್ಣ ಗೌಡ, ಶಾಂತಾ ಲಡ್ವ, ನಾಗಮ್ಮ ಕುಮಾರ್, ದಯಾನಂದ ಬಿ.ಕೆ ಮುಂತಾದವರು. ‘ತೋಟದೂಟ’ ಅಗಬಹುದೆಂದವರು: ರಾಜಲಕ್ಷ್ಮೀ ರೆಡ್ಡಿ, ಸಿದ್ದನಗೌಡ ಮುದಿಗೌಡ್ರ, ಸುರೇಂದ್ರ ಪೈ, ರಾಜೇಂದ್ರ ಶಿವಬಸಪ್ಪ ಮತ್ತಿತರರು.
ಊಟ ಮುಖ್ಯವಾಗಬೇಕಿಲ್ಲ ಸಂಚಾರವಿಹಾರ ಮುಖ್ಯವಾದ್ದರಿಂದ ‘ಹೊರಸಂಚಾರ’ ಒಳ್ಳೆಯದೆನ್ನುವವರು: ಪಂಪಾಪತಿ ಕೆ.ಆರ್, ಶ್ರೀನಿವಾಸ ಆಚಾರ್, ಅಶ್ವಿನಿ ಶೇಟ್, ಬಿ.ವಿ.ಕುಲಕರ್ಣಿ, ಚ.ರು ಶಂಕರರಾವ್, ಅನ್ನಪೂರ್ಣಾ ಕುಲಕರ್ಣಿ, ಮಂಜುಳಾ ಪ್ರಭು, ಲೋಕೇಶ್ ಚಿತ್ರದುರ್ಗ, ಉಷಾ ಪ್ರಭು, ರಾಜು ತುಮಕೂರು, ಶ್ರೀನಿವಾಸ ಟಿ.ಎನ್, ವಿಜಯಾ, ರಮೇಶ್ ಕಾನಕಟ್ಟೆ, ಯತಿರಾಜ್ ದಾವಣಗೆರೆ, ಯಶೋದಮ್ಮ, ಎಚ್.ಎನ್. ನಾಗರಾಜ್, ರವೀಂದ್ರ ಚೌಡಾಪುರ, ಜಿ.ಆರ್. ಗಂಗರಾಜು, ಹಂಪಾಳಿ ನಾಗಮಣಿ, ಎಂ.ಕೆ ಪ್ರಕಾಶ್, ಶಂಕರನಾರಾಯಣ ಎಚ್.ಆರ್.ಎಸ್, ಸ್ನೇಹಾ ಎಂ, ಚಾರುಹಂಸಿನಿ ಜೈನ್, ಮುರುಘರಾಜೇಂದ್ರ ಚಿಗಟೇರಿ, ರಾಮುಸಾ ಕಾಟವಾ, ಯಶೋದ ಪಾಂಡವಪುರ, ಜೆ.ಎಲ್.ಮೆಂಡಿಗೇರಿ, ಗೀತಾ ಗುರುಸ್ವಾಮಿ, ಮಮತಾ ನಾಗರಾಜ್, ಸೌಭಾಗ್ಯ ಸುಬ್ರಹ್ಮಣ್ಯ, ವಾಸುದೇವ ನಾಯಕ್, ಶಶಿಪ್ರಭಾ ಜಯಪುರ, ಚಂಪಾವತಿ ಜೋಶಿ, ವಿಜಯಕುಮಾರಿ ದಾವಣಗೆರೆ ಮುಂತಾದವರು.
ಈ ಎರಡೂ ಪದಗಳಿಗೆ ಸಿಕ್ಕಾಪಟ್ಟೆ ಪ್ರವೇಶಿಕೆಗಳು ಬಂದಿವೆ. ಇದೇ ಮೊದಲಬಾರಿ ಭಾಗವಹಿಸುತ್ತಿರುವವರ ಹೆಸರುಗಳನ್ನಷ್ಟೇ ನಮೂದಿಸುವುದು ಅನಿವಾರ್ಯವಾಗಿದೆ. ಪದಗಳನ್ನು ಸೂಚಿಸಿದ ಎಲ್ಲರಿಗೂ ಅಭಿನಂದನೆಗಳು. ಉತ್ತರ ಕರ್ನಾಟಕದಲ್ಲಿ ಪ್ರಚಲಿತವಿರುವ ‘ಅಲ್ಲಿಕೇರಿ’ ಆಚರಣೆಯೂ ಪಿಕ್ನಿಕ್ ರೀತಿಯದೇ ಎಂದು ತಿಳಿಸಿರುವ ರಾಜು ಗದಗ ಮತ್ತು ಹುಬ್ಬಳ್ಳಿಯ ಮಿಸ್ಕಿನ್ ಕುಟುಂಬದ ಸದಸ್ಯರಿಗೆ, ‘ಪರಾವು’ ಎಂಬ ಆಚರಣೆಯ ಬಗ್ಗೆ ತಿಳಿಸಿದ ಮೋಹನಕುಮಾರ್ ಸಿ.ಆರ್ ಮತ್ತು ಯಲ್ಲಾಪುರದ ‘ಹೊರೂಟ’ ಆಚರಣೆಯ ಬಗ್ಗೆ ತಿಳಿಸಿದ ಅರ್ಚನಾ ಹೆಬ್ಬಾರ್ ಅವರಿಗೂ ವಿಶೇಷ ಧನ್ಯವಾದಗಳು.
ಕನ್ನಡ ಪದ ಕಟ್ಟುವ ಚಟುವಟಿಕೆಯಲ್ಲಿ ಹಿರಿಯ ನಾಗರಿಕರು, ವಯಸ್ಸು 50 ಮೀರಿದವರೇ ಹೆಚ್ಚಾಗಿ ಭಾಗವಹಿಸುತ್ತಿದ್ದಾರೆ; ಮಕ್ಕಳನ್ನು, ಯುವಜನತೆಯನ್ನು ಇದರತ್ತ ಸೆಳೆಯುವುದು ಹೇಗೆಂದು ಕೆಲವೊಮ್ಮೆ ಯೋಚಿಸಿದ್ದಿದೆ. ಆದರೆ ಓದುಗರೇ ಅದನ್ನು ಸಾಧ್ಯವಾಗಿಸುತ್ತಿರುವವರೂ ಇದ್ದಾರೆನ್ನುವುದು ಸಂತಸದ ಸಂಗತಿ. ಶಿವಮೊಗ್ಗದ ಸರ್ಕಾರಿ ಬಾಲಿಕಾ ಪದವಿಪೂರ್ವ ಕಾಲೇಜಿನಲ್ಲಿ ಗ್ರಂಥಪಾಲಕಿಯಾಗಿರುವ ರಾಧಾಮಣಿ ಅವರು ವಿದ್ಯಾರ್ಥಿನಿಯರಿಗೆ ಕನ್ನಡ ಪುಸ್ತಕಗಳನ್ನು, ಪತ್ರಿಕೆಗಳನ್ನು ಓದುವಂತೆ ಉತ್ತೇಜಿಸುತ್ತಾರೆ. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಜ್ಯೋತಿಕಾ, ಗಗನ, ಕೃತ್ತಿಕಾ, ಪೂಜಾ ಮುಂತಾದವರು ವಿಜಯವಾಣಿಯಲ್ಲಿ ಈ ಅಂಕಣ ಓದುತ್ತಿರುವ, ನಿಘಂಟು ತೆರೆದು ಕನ್ನಡ ಪದಗಳನ್ನು ಹುಡುಕುತ್ತಿರುವ ಛಾಯಾಚಿತ್ರವನ್ನೂ ಅವರು ಕಳುಹಿಸಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ.
ಈ ವಾರದ ಮೂರು ಪದಗಳು:
1. Ground Sump: ನೀರು ತುಂಬಿಸಲಿಕ್ಕೊಂದು ನೆಲಮಾಳಿಗೆ. ಕನ್ನಡ ಪದ ಯಾವುದಾಗಬಹುದು ಸಂಪಿಗೆ?
2. Kitchen Sink: ಕಿಚನ್ಅನ್ನು ಅಡುಗೆಮನೆ ಎನ್ನೋಣ; ಆದರೆ ಇಲ್ಲಿ ಸಿಂಕ್ ಅಂದರೆ ಅಕ್ಷರಶಃ ಮುಳುಗುವುದೇನಲ್ಲ!
3. Sticker: ರಾಜ್ಯದಲ್ಲಿ ಮತ್ತೆ ಜಾತಿಗಣತಿ ಆರಂಭವಂತೆ, ಈ ಬಾರಿ ಮನೆಬಾಗಿಲಿಗೆ ಸ್ಟಿಕ್ಕರ್ ಅಂಟಿಸುತ್ತಾರಂತೆ. ಸ್ಟಿಕ್ಕರ್ ಎನ್ನುವುದಕ್ಕೊಂದು ಕನ್ನಡ ಪದ ಬೇಡವೇ?
ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್ಆಪ್ ಸಂಖ್ಯೆ: +12404010945
(ಲೇಖಕರು ಅಮೆರಿಕದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಮತ್ತು ಅಂಕಣ ಬರಹಗಾರರು)