ಏತನ್ಮಧ್ಯೆ ದೂರು ದಾಖಲಾದ ಕೂಡಲೇ ಬಹುತೇಕ ಆರೋಪಿಗಳು ಪರಾರಿಯಾದರು. ಇದು ಸಾಲದೆಂಬಂತೆ ಹಲವು ಸ್ಥಳೀಯ ವೃತ್ತಪತ್ರಿಕೆಗಳು ಸಂತ್ರಸ್ತೆಯರು ಮತ್ತವರ ಕುಟುಂಬದವರನ್ನು ಸಂರ್ಪಸಿ ಅವರ ಫೋಟೋಗಳನ್ನು ವೃತ್ತಪತ್ರಿಕೆಗಳಲ್ಲಿ ಪ್ರಕಟಿಸುವುದಾಗಿ ಬೆದರಿಸಿ ಅವರ ಬ್ಲಾಕ್ವೆುೕಲ್ ಮಾಡತೊಡಗಿದವು. ಈ ಕಾರಣದಿಂದ ಸಂತ್ರಸ್ತೆಯರು ಹೆದರಿದ್ದರು. ತಮಗಾದ ನೋವನ್ನು ತಾಳಲಾರದೆ ಆರು ಜನ ಸಂತ್ರಸ್ತೆಯರು ಆತ್ಮಹತ್ಯೆ ಮಾಡಿಕೊಂಡರು. ಸಂತ್ರಸ್ತೆಯರ ಹೇಳಿಕೆಗಳ ಮೇರೆಗೆ 16 ಜನರನ್ನು ಆರೋಪಿಗಳೆಂದು ತನಿಖಾಧಿಕಾರಿ ಗುರುತಿಸಿದರು. ಅವರಲ್ಲಿ 11 ಜನರ ಬಂಧನ ಮಾತ್ರ ಸಾಧ್ಯವಾಯಿತು. ಬಂಧಿತರಲ್ಲಿ ಮುಖ್ಯರಾದವರೆಂದರೆ ಫಾರೂಕ್ ಚಿಷ್ಟಿ, ಸಯ್ಯದ್ ಅನ್ವರ್ ಚಿಷ್ಟಿ, ಜರೂರ್ ಚಿಷ್ಟಿ, ಮೊಯಿನುಲ್ಲ, ಪರ್ವೆಜ್ ಅನ್ಸಾರಿ, ಪುರುಷೋತ್ತಮ ಮತ್ತು ಶಂಶು ಚಿಷ್ಟಿ. ಈ ಅತಿಸೂಕ್ಷ್ಮ ಪ್ರಕರಣದ ತನಿಖೆಯನ್ನು ಮಾಡಿದ ತನಿಖಾಧಿಕಾರಿ ಮತ್ತವರ ಟೀಂ ಎಲ್ಲ ಸಾಕ್ಷ್ಯಾಧಾರಗಳನ್ನೂ ಸಂಗ್ರಹಿಸಿದರು. ಏಳು ಜನರನ್ನು ಪರಾರಿಯಾದ ಆರೋಪಿಗಳೆಂದು ತೋರಿಸಿ ಒಟ್ಟು 18 ಜನರ ವಿರುದ್ಧ ಸೆಪ್ಟೆಂಬರ್ 18ರಂದು ಆರೋಪಪಟ್ಟಿ ಸಲ್ಲಿಸಿದರು.
ನ್ಯಾಯಾಲಯದಲ್ಲಿ 11 ಆರೋಪಿಗಳ ವಿರುದ್ಧ ವಿಚಾರಣೆ ಪ್ರಾರಂಭವಾಯಿತು. ಇದೇ ಸಮಯಕ್ಕೆ ಏಳೆಂಟು ಸಂತ್ರಸ್ತೆಯರು ತಾವಿತ್ತ ದೂರುಗಳನ್ನು ಹಿಂಪಡೆದರು. ಆರೋಪಿಗಳು ಅವರಿಗೆ ಬೆದರಿಕೆಯೊಡ್ಡಿದ್ದರೆನ್ನುವುದು ಸ್ಪಷ್ಟವಾಗಿತ್ತು. ಆದರೂ ಸಂತ್ರಸ್ತೆಯರ ರಕ್ಷಣೆಗೆ ಯಾವ ಸೂಕ್ತ ಕ್ರಮಗಳನ್ನೂ ತೆಗೆದುಕೊಳ್ಳಲಿಲ್ಲ ಎಂಬ ಆರೋಪವು ಪೊಲೀಸರ ಮೇಲೆ ಕೇಳಿ ಬಂದಿತು. ವಿಚಾರಣೆ ನಡೆಯುವ ಸಮಯದಲ್ಲಿಯೇ ಆರೋಪಿ ಪುರುಷೋತ್ತಮ್ ಆತ್ಮಹತ್ಯೆ ಮಾಡಿಕೊಂಡ. ಪುರುಷೋತ್ತಮ ಫೋಟೋ ಲ್ಯಾಬೊರೇಟರಿಯ ಉದ್ಯೋಗಿಯಾಗಿದ್ದು, ಈತನೇ ಸಂತ್ರಸ್ತೆಯರ ಫೋಟೋಗಳನ್ನು ಚಲಾವಣೆ ಮಾಡಿದ್ದ. ಏತನ್ಮಧ್ಯೆ ಮುಖ್ಯ ಆರೋಪಿ ಫಾರೂಕ್ ಚಿಷ್ಟಿ ತನಗೆ ಸ್ಕಿಜೋಫ್ರೇನಿಯಾ ಎಂಬ ಮಾನಸಿಕ ರೋಗವಿದೆಯೆಂದು ನ್ಯಾಯಾಲಯದಲ್ಲಿ ಹೇಳಿದ ಕಾರಣ ಅವನ ವಿರುದ್ಧದ ಪ್ರಕರಣವನ್ನು ಮುಖ್ಯಪ್ರಕರಣದಿಂದ ಬೇರ್ಪಡಿಸಲಾಯಿತು. ವಿಚಾರಣೆಯಲ್ಲಿ ಆರೋಪಿ ಜಹೂರ್ ಚಿಷ್ಟಿ ಸಂತ್ರಸ್ತನೊಬ್ಬನೊಡನೆ ಅಸ್ವಾಭಾವಿಕ ಲೈಂಗಿಕ ಕ್ರಿಯೆಯನ್ನು ನಡೆಸಿದನೆಂಬ ದೂರಿತ್ತ ಕಾರಣ ಆತನನ್ನೂ ಈ ಪ್ರಕರಣದಿಂದ ಬೇರ್ಪಡಿಸಲಾಯಿತು.
ನ್ಯಾಯಾಲಯದಲ್ಲಿ ಹಲವು ಸಂತ್ರಸ್ತೆಯರು ಆರೋಪಿಗಳನ್ನು ಗುರುತಿಸದೆ ಪ್ರತಿಕೂಲ ಸಾಕ್ಷಿಗಳಾದರು. ಅವರೆಲ್ಲರಿಗೆ ಆರೋಪಿಗಳು ಭಯ, ಇಲ್ಲವೆ ಆಮಿಷಗಳನ್ನು ಒಡ್ಡಿದ್ದರೆನ್ನುವುದರಲ್ಲಿ ಯಾವ ಅನುಮಾನವೂ ಇರಲಿಲ್ಲ. ಆದರೆ ಮೂವರು ಸಂತ್ರಸ್ತೆಯರು ಮಾತ್ರ ಯಾವ ಭಯವೂ ಇಲ್ಲದೆ ಸತ್ಯವನ್ನೇ ನುಡಿದರು. ಏತನ್ಮಧ್ಯೆ ಆರೋಪಿ ನಸೀಮ್ ಅಲಿಯಾಸ್ ಟಾರ್ಜಾನ್ ಪರಾರಿಯಾದ.
6 ವರ್ಷಗಳ ಕಾಲ ಸುದೀರ್ಘ ವಿಚಾರಣೆಯನ್ನು ಮಾಡಿದ ಅಜ್ಮೇರ್ ಸೆಷನ್ಸ್ ನ್ಯಾಯಾಲಯ 1998ರಲ್ಲಿ ಎಂಟು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ನೀಡಿತು. ಎಲ್ಲರೂ ಈ ತೀರ್ಪಿನ ವಿರುದ್ಧ ರಾಜಸ್ಥಾನ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದರು. 2001ರ ಜುಲೈನಲ್ಲಿ ಹೈಕೋರ್ಟ್ ನಾಲ್ಕು ಜನರನ್ನು ಬಿಡುಗಡೆ ಮಾಡಿ ಉಳಿದವರ ಶಿಕ್ಷೆಯನ್ನು ಕಾಯಂ ಮಾಡಿತು. ಮುಂದೆ ಈ ಪ್ರಕರಣ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿತು. 2003ರಲ್ಲಿ ಶಿಕ್ಷಿತ ನಾಲ್ಕು ಜನರ ಶಿಕ್ಷೆಯನ್ನು ಹತ್ತುವರ್ಷಗಳ ಸೆರೆವಾಸಕ್ಕೆ ಇಳಿಸಲಾಯಿತು.
ಭೂಗತನಾಗಿದ್ದ ನಫೀಜ್ ಚಿಷ್ಟಿಯನ್ನು ದೆಹಲಿ ಪೊಲೀಸರು 2003ರ ಏಪ್ರಿಲ್ನಲ್ಲಿ ಬಂಧಿಸಿದರು. ಅವನ ವಿರುದ್ಧ ಸೆಷನ್ಸ್ ನ್ಯಾಯಾಲಯದಲ್ಲಿ ಮತ್ತೆ ವಿಚಾರಣೆ ಆರಂಭವಾಯಿತು. 2005ರಲ್ಲಿ ಇನ್ನೊಬ್ಬ ಆರೋಪಿಯನ್ನು ಬಂಧಿಸಲಾಯಿತು. ಇಷ್ಟರಲ್ಲಿ ಮುಖ್ಯ ಆರೋಪಿ ಫರೂಕ್ ಚಿಷ್ಟಿಯ ವಿರುದ್ಧ ವಿಚಾರಣೆ ಮುಗಿದು ಅವನಿಗೆ 2007ರಲ್ಲಿ ಜೀವಾವಧಿ ಶಿಕ್ಷೆ ಕೊಡಲಾಯಿತು. ಇದರ ವಿರುದ್ಧ ಆತ ಮೇಲ್ಮನವಿ ಸಲ್ಲಿಸಿದ. 2013ರಲ್ಲಿ ಫಾರೂಕ್ನ ಜೀವಾವಧಿ ಶಿಕ್ಷೆಯನ್ನು ಕಡಿಮೆ ಮಾಡಿದ ರಾಜಸ್ಥಾನ ಹೈಕೋರ್ಟ್ ಅವನನ್ನು ಜೈಲಿನಿಂದ ಬಿಡುಗಡೆ ಮಾಡಿತು. ಐ.ಪಿ.ಸಿ ಕಲಂ 377ರ ಆರೋಪಿಯಾಗಿದ್ದ ಜಹೂರ್ ಚಿಷ್ಟಿಗೆ ಆ ಪ್ರಕರಣದಲ್ಲಿ ಶಿಕ್ಷೆಯಾಯಿತು.
ಸರಣಿ ರೇಪ್ ಪ್ರಕರಣದಲ್ಲಿ ಮುಖ್ಯ ಆರೋಪಿಗಳಲ್ಲಿ ಒಬ್ಬನಾಗಿದ್ದ ಸುಹೇಲ್ ಘನಿ 26 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದು 2018ರಲ್ಲಿ ನ್ಯಾಯಾಲಯಕ್ಕೆ ಶರಣಾದ. ಇಷ್ಟರಲ್ಲಿ ತಪ್ಪಿಸಿಕೊಂಡಿದ್ದ ನಸೀಮ್ ಅಲಿಯಾಸ್ ಟಾರ್ಜಾನ್ನನ್ನೂ ಬಂಧಿಸಲಾಯಿತು. ಇವರಿಬ್ಬರ ಜತೆಗೆ ಉಳಿದಿದ್ದ ನಾಲ್ಕು ಆರೋಪಿಗಳಾದ ಸಲೀಂ ಚಿಷ್ಟಿ, ನಫೀಜ್ ಚಿಷ್ಟಿ, ಸಯೀದ್ ಜಮೀರ್ ಹುಸೇನ್ ಮತ್ತು ಇಕ್ಬಾಲ್ ಭಾಟಿ ಇವರ ವಿರುದ್ಧ ಅಜ್ಮೇರಿನ ಪೋಕ್ಸೋ ನ್ಯಾಯಾಲಯದಲ್ಲಿ ವಿಚಾರಣೆಯು 2020ರಲ್ಲಿ ಆರಂಭವಾಯಿತು. ಅಜ್ಮೇರ್ ಸರಣಿ ರೇಪ್ಗೆ ಸಂಬಂಧಿಸಿದ ಮೊದಲೆರಡು ಪ್ರಕರಣದಲ್ಲಿ ಪ್ರತಿಕೂಲ ಸಾಕ್ಷ್ಯ ನೀಡಿದ್ದ ಸಂತ್ರಸ್ತೆ ಸುಷ್ಮಾ (ಹೆಸರನ್ನು ಬದಲಾಯಿಸಿದೆ) ನ್ಯಾಯಾಲಯದ ವಿಚಾರಣೆಯಲ್ಲಿ ಹೀಗೆ ನುಡಿದಳು:
‘ನಾನು 8ನೇ ತರಗತಿಯಲ್ಲಿದ್ದಾಗ ಮನೋದೌರ್ಬಲ್ಯದ ಕಾರಣ ಶಾಲೆ ಬಿಟ್ಟೆ. ಮನೆಯ ಬಳಿ ಕೈಲಾಸ್ ಸೋನಿ ಎನ್ನುವವನಿದ್ದ. ಆತನ ಮುಖಪರಿಚಯವಿತ್ತು. ಒಂದು ದಿನ ದರ್ಗಾದಿಂದ ಮನೆಗೆ ಮರಳುತ್ತಿರುವಾಗ ಭೇಟಿಯಾದ ಸೋನಿ ನನ್ನೊಡನೆ ಮಾತಿಗೆ ನಿಂತ. ಸ್ವಲ್ಪ ಸಮಯ ಮಾತುಗಳನ್ನಾಡಿದ ನಂತರ ಪುಸಲಾಯಿಸಿ ಹಾಳುಬಿದ್ದ ಮನೆಗೆ ಕರೆದೊಯ್ದು ಅತ್ಯಾಚಾರ ಮಾಡಿದ. ಆನಂತರ ಅವನ ಸ್ನೇಹಿತರ ಬಳಿಗೆ ಕರೆದೊಯ್ದ. ಅವರೆಲ್ಲರೂ ಒಬ್ಬರ ನಂತರ ಒಬ್ಬರಂತೆ ರೇಪ್ ಮಾಡಿದರು. ಅವರ ಗುಂಪಿನಲ್ಲಿ ಹತ್ತು ಜನರಿದ್ದರು. ಅವರಲ್ಲಿ ನಫೀಸ್ ಚಿಷ್ಟಿ ಸಹ ಇದ್ದ. ಒಬ್ಬರು ನನ್ನನ್ನು ರೇಪ್ ಮಾಡುತ್ತಿದ್ದಾಗ ಇತರರು ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದರು. ನನ್ನ ಕೈಕಾಲುಗಳನ್ನು ಬಟ್ಟೆಯಿಂದ ಕಟ್ಟಿದ್ದರು. ಚೀರದಂತೆ ಬಾಯಿಯನ್ನು ಒತ್ತಿಹಿಡಿದಿದ್ದರು. ಎಲ್ಲರೂ ರೇಪ್ ಮಾಡಿದ ನಂತರ ನಫೀಸ್ ಚಿಷ್ಟಿ ನನ್ನ ಕೈಗೆ 200 ರೂ.ಗಳನ್ನಿತ್ತು ಲಿಪ್ಸ್ಟಿಕ್ ಮತ್ತು ಪೌಡರ್ ಖರೀದಿಸಲು ಹೇಳಿದ. ಈ ವಿಷಯ ಯಾರಿಗಾದರೂ ತಿಳಿಸಿದರೆ ನನ್ನ ಫೋಟೋಗಳನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡುವುದಾಗಿ ಬೆದರಿಸಿದ. ಆಗ ನನಗೆ 18 ವರ್ಷ ವಯಸ್ಸಾಗಿತ್ತು. ಈ ಪ್ರಕರಣ ದಾಖಲಾದ ನಂತರ ನನ್ನನ್ನು ವೈದ್ಯರು ಪರಿಶೀಲಿಸಿದರು. ನಾನು ಗರ್ಭಿಣಿಯಾಗಿದ್ದೆ. ತಂದೆ-ತಾಯಿ ಗರ್ಭಪಾತ ಮಾಡಿಸಿಕೊಳ್ಳಲು ಸೂಚಿಸಿದರು. ಎಷ್ಟೇ ಪ್ರಯತ್ನಪಟ್ಟರೂ ಗರ್ಭಪಾತವಾಗಲಿಲ್ಲ. ಕಡೆಗೆ ಗಂಡುಮಗು ಜನಿಸಿತು. ಸುದೈವದಿಂದ ಅದು ಹುಟ್ಟುವಾಗಲೇ ಸತ್ತಿತ್ತು. ಈ ನಡುವೆ ಮಾನಸಿಕ ಅಸ್ವಸ್ಥತೆ ಇನ್ನಷ್ಟು ಉಲ್ಬಣಗೊಂಡಿತು.
ಮುಂದೆ ರಿಕ್ಷಾ ಚಾಲಕನೊಬ್ಬ ಅಪಹರಿಸಿ ತನ್ನ ಮನೆಯಲ್ಲಿಟ್ಟಿಕೊಂಡ. ಮತ್ತೊಮ್ಮೆ ಗರ್ಭಿಣಿಯಾದೆ. ಆಗ ಆತ ನನ್ನನ್ನು ಬಿಟ್ಟು ಓಡಿಹೋದ. ತವರಿಗೆ ಬಂದೆ. ಗಂಡುಮಗು ಹುಟ್ಟಿತು. ಅದನ್ನು ಸಂಬಂಧಿಕರಿಗೆ ಸಾಕಲು ಕೊಟ್ಟೆ. ಆನಂತರ ನನ್ನ ಮಾನಸಿಕ ಸಮಸ್ಯೆ ಇನ್ನಷ್ಟು ಬಿಗಡಾಯಿಸಿತು. ಹಲವು ಹತ್ತು ಜನರಿಗೆ ತೋರಿಸಿದೆ. ಏನೂ ಪ್ರಯೋಜನವಾಗಲಿಲ್ಲ. ನನಗೆ 22 ವರ್ಷವಾದಾಗ ತಂದೆ-ತಾಯಿ ಬೇರೆ ಊರಿನ ವ್ಯಕ್ತಿಯೊಬ್ಬನೊಡನೆ ಲಗ್ನ ಮಾಡಿದರು. ಮದುವೆಯ ಮೊದಲ ರಾತ್ರಿಯೇ ನನ್ನ ಚರಿತ್ರೆಯನ್ನು ಅವನಿಗೆ ಹೇಳಿದೆ. ಆತ ಮಾರನೆಯ ದಿನ ನನ್ನನ್ನು ನನ್ನ ತವರುಮನೆಯಲ್ಲಿ ಬಿಟ್ಟು ಪರಾರಿಯಾದ. 6 ವರ್ಷಗಳ ನಂತರ ಇನ್ನೋರ್ವ ವ್ಯಕ್ತಿ ಲಗ್ನವಾದ. 10 ವರ್ಷಗಳ ವೈವಾಹಿಕ ಜೀವನದ ನಂತರ ಕ್ಷುಲ್ಲಕ ಕಾರಣಕ್ಕಾಗಿ ಡೈವೋರ್ಸ್ ನೀಡಿದ. ಅವನಿಂದ ಒಬ್ಬ ಮಗನಿದ್ದಾನೆ. ನನ್ನ ಗಂಡನ ತಾಯಿಯ ಜತೆ ಅವನಿದ್ದಾನೆ. ನನಗೀಗ 50 ವರ್ಷಗಳಾಗಿವೆ. ಈ ಹಿಂದೆ ನ್ಯಾಯಾಲಯದಲ್ಲಿ ನಾನು ಆರೋಪಿಗಳ ವಿರುದ್ಧ ಯಾವ ಹೇಳಿಕೆಯನ್ನೂ ಕೊಡಲಿಲ್ಲ. ಏಕೆಂದರೆ ನಫೀಸ್ ತೊಂದರೆ ಕೊಡುತ್ತಾನೆಂಬ ಭಯವಿತ್ತು. ಈಗ ಯಾರ ಭಯವೂ ಇಲ್ಲ. ಜೀವನದಲ್ಲಾದ ಈ ಕಹಿಘಟನೆಗಳನ್ನು ಮರೆಯಲು ಪ್ರಯತ್ನಿಸುತ್ತಿದ್ದೇನೆ’.
ನ್ಯಾಯಾಲಯದಲ್ಲಿ ಆರೋಪಿಗಳಾದ ನಫೀಸ್, ಜಮೀರ್ ಮತ್ತು ಟಾರ್ಜಾನ್ರನ್ನು ಸುಷ್ಮಾ ಗುರುತಿಸಿದಳು. ವಿಪರ್ಯಾಸವೆಂದರೆ ಈ ಹಿಂದೆ ಅವಳು ಇದೇ ಪ್ರಕರಣದಲ್ಲಿ ಸಾಕ್ಷ್ಯ ನುಡಿದಾಗ ಆರೋಪಿಗಳನ್ನು ಗುರುತಿಸದೇ ಹೋದ್ದರಿಂದ ಕೈಲಾಸ್ ಸೋನಿ ಮತ್ತು ಪರ್ವೆಜ್ ಅನ್ಸಾರಿ ಬಿಡುಗಡೆ ಹೊಂದಿದ್ದರು. ಈ ಪ್ರಕರಣದ ವಿಚಾರಣೆ ಮುಗಿದ ನಂತರ 2024ರ ಆಗಸ್ಟ್ 20ರಂದು ನ್ಯಾಯಾಧೀಶರು ಎಲ್ಲ ಆರೋಪಿಗಳು ತಪಿತಸ್ಥರೆಂದು ಘೋಷಿಸಿ ಜೀವಾವಧಿ ಶಿಕ್ಷೆ ನೀಡಿರುವುದಲ್ಲದೆ ತಲಾ ಐದು ಲಕ್ಷ ರೂ.ಗಳ ದಂಡ ವಿಧಿಸಿದ್ದಾರೆ. ಪ್ರಕರಣದ ಒಬ್ಬ ಆರೋಪಿ ಸೈಯದ್ ಅಲ್ಮಾಸ್ ಇಂದಿಗೂ ನಾಪತ್ತೆಯಾಗಿದ್ದು, ಆತ ಅಮೆರಿಕದಲ್ಲಿ ಇರಬಹುದೆಂದು ಶಂಕಿಸಲಾಗಿದೆ. ಅವನಿಗಾಗಿ ಸಿ.ಬಿ.ಐ ಕೆಂಪು ಅಂಚಿನ ನೋಟೀಸನ್ನು ಜಾರಿಮಾಡಿದೆ. ಈ ಪ್ರಕರಣ ನಿರ್ಣಾಯಕ ಹಂತಕ್ಕೆ ತಲುಪಬೇಕಾದರೆ ಕೆಲ ಸಂತ್ರಸ್ತೆಯರಲ್ಲಿದ್ದ ಛಲವೂ ಕಾರಣವೆನ್ನಬಹುದು. ಪರಾರಿಯಾಗಿದ್ದ ಆರೋಪಿಗಳಲ್ಲಿ ಯಾರಾದರೂ ಪ್ರತಿಬಾರಿ ನ್ಯಾಯಾಲಯಕ್ಕೆ ಬಂದಾಗಲೂ ಸಂತ್ರಸ್ತೆಯರು ತಮಗಾದ ನೋವಿನ ಹೇಳಿಕೆಯನ್ನು ಮತ್ತೊಮ್ಮೆ ನ್ಯಾಯಾಲಯದಲ್ಲಿ ಹೇಳಬೇಕಾಗಿತ್ತು. ಮೇಲಾಗಿ ಅವರು ತಮ್ಮ ಹಾಗೂ ತಮ್ಮ ಕುಟುಂಬಗಳ ಮೇಲೆ ಆರೋಪಿಗಳು ಹಾಕಿದ್ದ ಒತ್ತಡಗಳನ್ನು ಸಹಿಸಿಕೊಂಡು ಧೈರ್ಯದಿಂದ ಹೇಳಿಕೆ ನೀಡಬೇಕಾಗಿತ್ತು. ವಿಚಾರಣೆಗಳು ತೀವ್ರ ವಿಳಂಬಕ್ಕೊಳಗಾದ ಕಾರಣ ಸಂತ್ರಸ್ತರಿಗೆ ನ್ಯಾಯ ದೊರಕುತ್ತದೆಂದು ಬಹಳಷ್ಟು ಜನರು ಭಾವಿಸಿಯೇ ಇರಲಿಲ್ಲ. ಆದರೆ ಪೊಲೀಸರು, ಪ್ರಾಸಿಕ್ಯೂಟರ್ಗಳು ಮತ್ತು ನ್ಯಾಯಾಲಯಗಳು ಸಂತ್ರಸ್ತೆಯರಿಗೆ ಕಡೆಗೂ ನ್ಯಾಯ ಕೊಡಿಸಿದರು. ಈ ಘೊರ ಪ್ರಕರಣದಲ್ಲಿ ತಪ್ಪಿತಸ್ಥರು ತಪ್ಪಿಸಿಕೊಂಡಿದ್ದರೆ ನ್ಯಾಯದ ಬಗ್ಗೆ ಸಾರ್ವಜನಿಕರಿಗೆ ವಿಶ್ವಾಸವೇ ಉಳಿಯುತ್ತಿರಲಿಲ್ಲ.