ಅಂತಾರಾಷ್ಟ್ರೀಯ ರಂಗದಲ್ಲಿ ಚೀನಾಗೆ ಮಹತ್ವದ ಸ್ಥಾನವನ್ನು ಗಳಿಸಿಕೊಡುವ ಉದ್ದೇಶದಿಂದ ವಿದೇಶಾಂಗ ನೀತಿಯಲ್ಲಿ ಮಾವೋ ಝೆದಾಂಗ್ ಅನುಸರಿಸಿದ ನೀತಿಗಳು ರಾಷ್ಟ್ರನಾಯಕರಿಗೆ ಪಾಠಗಳ ಸರಣಿಯಂತಿವೆ. 1950ರ ದಶಕದ ಆರಂಭದಲ್ಲಿನ ಕೊರಿಯನ್ ಯುದ್ಧದಲ್ಲಿ ಅಮೆರಿಕನ್ ಶಸ್ತ್ರಾಸ್ತ್ರಗಳ ವಿರುದ್ಧ ತನ್ನ ದೇಶದ ಜನಸಂಖ್ಯೆಯನ್ನೇ ಪರಿಣಾಮಕಾರಿ ಅಸ್ತ್ರವಾಗಿ ಬಳಸಿ ಯಶಸ್ವಿಯಾಗಬಹುದೆಂದು ತೋರಿಸಿದ ಮಾವೋ ನಂತರ ಅದೇ ದಶಕದ ಅಂತ್ಯದಲ್ಲಿ ಪ್ರದರ್ಶಿಸಿದ್ದು ನುಂಗಲಾಗದಷ್ಟು ಭಾರಿ ತುತ್ತಿಗೆ ಬಾಯಿ ಹಾಕಬಾರದೆಂಬ ವಿವೇಕವನ್ನು. ಚೀನಾದಿಂದ ಹೊರಹೋಗಿದ್ದ ತೈವಾನ್ನ ಹಿಡಿತದಲ್ಲಿದ್ದ ಆಯಕಟ್ಟಿನ ಕ್ವಿಮೋಯ್ ಮತ್ತು ಮತ್ಸು ದ್ವೀಪಗಳನ್ನು ವಶಪಡಿಸಿಕೊಳ್ಳಲು 1958ರಲ್ಲಿ ಮಾವೋರ ಪೀಪಲ್ಸ್ ಲಿಬರೇಷನ್ ಆರ್ವಿು (ಪಿಎಲ್ಓ) ಪ್ರಯತ್ನ ಆರಂಭಿಸಿದಾಗ ಅದು ಇಡೀ ತೈವಾನ್ ಅನ್ನು ನುಂಗುವ ಚೀನೀ ಸೇನಾಯೋಜನೆಯ ಮೊದಲ ಹಂತ ಎಂದರಿತ ಅಮೆರಿಕ ಉಗ್ರ ಬೆದರಿಕೆ ಒಡ್ಡಿತು. ಚೀನಾ ಮೇಲೆ ಅಣ್ವಸ್ತ್ರ ಪ್ರಯೋಗಿಸುವುದಾಗಿ ಅಧ್ಯಕ್ಷ ಐಸೆನ್ ಹೋವರ್ ಎಚ್ಚರಿಸಿದಾಗ ಮಾವೋ ಸದ್ದಿಲ್ಲದೇ ಹಿಂತೆಗೆದುಬಿಟ್ಟರು.
ಅಂತರ್ಯುದ್ಧದಲ್ಲಿ ಜಯಗಳಿಸಿ ಅಧಿಕಾರ ಗಳಿಸಿಕೊಳ್ಳಲು ಸಿಸಿಪಿಗೆ ಎಲ್ಲ ಬಗೆಯ ಸಹಕಾರ ನೀಡಿದ ಸೋವಿಯೆತ್ ಯೂನಿಯನ್ ನಂತರ ಕಮ್ಯೂನಿಸ್ಟ್ ಚೀನಾದ ವೈಜ್ಞಾನಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿತು. ಒಂದು ಹಂತದಲ್ಲಿ ಒಂದು ಲಕ್ಷದಷ್ಟು ರಷ್ಯನ್ ವಿಜ್ಞಾನಿಗಳು ಮತ್ತು ತಂತ್ರಜ್ಞರು ಚೀನಾದಲ್ಲಿದ್ದರು! ಆದರೆ ಕ್ವಿಮೋಯ್ ಹಾಗೂ ಮತ್ಸು ಹಿನ್ನಡೆ ಮಾಸ್ಕೋ ಜತೆಗಿನ ಸ್ನೇಹದ ಇತಿಮಿತಿಯನ್ನು ಮಾವೋಗೆ ಮನವರಿಕೆ ಮಾಡಿಕೊಟ್ಟಿತು. ವಿದೇಶಾಂಗ ನೀತಿಯಲ್ಲಿ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾದ ಸೋವಿಯೆತ್ ಸ್ನೇಹದಿಂದ ತನ್ನ ದೇಶಕ್ಕೆ ಅಂತಾರಾಷ್ಟ್ರೀಯ ರಂಗದಲ್ಲಿ ಗೌರವದ ಸ್ಥಾನ ಸಿಗಲಾರದು ಎಂದೆಣಿಸಿದ ಮಾವೋ ತಮ್ಮದೇ ಸ್ವತಂತ್ರ ಹಾದಿ ಹುಡುಕಿಕೊಂಡರು. ಅಂತಾರಾಷ್ಟ್ರೀಯ ರಾಜಕಾರಣದ ವಿದ್ವಾಂಸರು ಜಗತ್ತನ್ನು ವಿಭಾಗಿಸಿದ್ದ ಪ್ರಕಾರ ಬಂಡವಾಳಶಾಹಿ ಅಮೆರಿಕ ಮತ್ತದರ ಮಿತ್ರದೇಶಗಳು ‘ಪ್ರಥಮ ಜಗತ್ತು’, ಸೋವಿಯೆತ್ ಯೂನಿಯನ್ ಜತೆಗೆ ಚೀನಾವೂ ಸೇರಿದ ಕಮ್ಯೂನಿಸ್ಟ್ ದೇಶಗಳು ‘ದ್ವಿತೀಯ ಜಗತ್ತು’, ಹಾಗೂ ಉಳಿದೆಲ್ಲ ದೇಶಗಳು ‘ತೃತೀಯ ಜಗತ್ತು’. ಇದನ್ನು ತಿರಸ್ಕರಿಸಿದ ಮಾವೋ ಮೂರು ಜಗತ್ತುಗಳ ಪರಿಕಲ್ಪನೆಯನ್ನೇ ಬದಲಾಯಿಸಿ ಚೀನಾವನ್ನು ‘ತೃತೀಯ’ ಜಗತ್ತಿನಲ್ಲಿಟ್ಟರು. ಅವರ ಸಿದ್ಧಾಂತದ ಪ್ರಕಾರ ‘ಶೋಷಕ’ ರಾಷ್ಟ್ರಗಳಾದ ಅಮೆರಿಕ ಮತ್ತು ಸೋವಿಯೆತ್ ಯೂನಿಯನ್ಗಳೆರಡಷ್ಟೇ ಪ್ರಥಮ ಜಗತ್ತಿನಲ್ಲಿ, ಅವುಗಳ ಹಿಂಬಾಲಕರಾದ ಪಶ್ಚಿಮ ಮತ್ತು ಪೂರ್ವ ಯುರೋಪಿಯನ್ ರಾಷ್ಟ್ರಗಳು ದ್ವಿತೀಯ ಜಗತ್ತಿನಲ್ಲಿ, ಚೀನಾ ಸೇರಿದಂತೆ ಉಳಿದೆಲ್ಲ ಏಷ್ಯನ್, ಆಫ್ರಿಕನ್ ಮತ್ತು ಲ್ಯಾಟಿನ್ ಅಮೆರಿಕನ್ ರಾಷ್ಟ್ರಗಳು ತೃತೀಯ ಜಗತ್ತಿನಲ್ಲಿ!
ಅದೇ ಸಮಯದಲ್ಲಿ ಬಂಡವಾಳಶಾಹಿ ಮತ್ತು ಕಮ್ಯೂನಿಸ್ಟ್ ವ್ಯವಸ್ಥೆಗಳ ನಡುವೆ ‘ಶಾಂತಿಯುತ ಸಹಬಾಳ್ವೆ’ಯನ್ನು ಪ್ರತಿಪಾದಿಸಿದ ಸೋವಿಯೆತ್ ನೇತಾರ ನಿಕಿತಾ ಖ್ರುಶ್ಚೆವ್ರ ನೀತಿಗಳನ್ನು ‘revisionist‘ ಎಂದು ಬಹಿರಂಗದಲ್ಲಿ ಉಗ್ರವಾಗಿ ಖಂಡಿಸುತ್ತಲೇ 1959ರಲ್ಲಿ ಸೋವಿಯೆತ್ ಮೂಗಿನ ಕೆಳಗೇ ವಾರ್ಸಾದಲ್ಲಿ ಅಮೆರಿಕನ್ನರೊಂದಿಗೆ ರಹಸ್ಯ ಮಾತುಕತೆಗಳನ್ನು ಆರಂಭಿಸಿದ ಮಾವೋ ಮಾಡಿದ್ದು ರಾಜತಾಂತ್ರಿಕ ಕ್ರಾಂತಿ. ತನ್ನ ದೇಶದ ಹಿತ ಕಾಪಾಡುವುದಾದರೆ ಯಾವ ರಾಜತಂತ್ರವೂ ನ್ಯಾಯಸಮ್ಮತ ಎಂದು ಚಾಣಕ್ಯ ಹೇಳಿದ್ದನ್ನು ನಾವೂ, ಮೆಕಿಯಾವೆಲ್ಲಿ ಹೇಳಿದ್ದನ್ನು ಯುರೋಪಿಯನ್ನರೂ ಪುಸ್ತಕದ ಬದನೆಕಾಯಿಯಾಗಷ್ಟೇ ಇಟ್ಟುಕೊಂಡು ಉರುಹೊಡೆಯುತ್ತಿದ್ದರೆ ಮಾವೋ ಅದನ್ನು ಅಕ್ಷರಶಃ ಆಚರಣೆಗೆ ತಂದರು. ಚೀನಾದ ಹಿತಾಸಕ್ತಿಗಳಿಗೆ ಅಮೆರಿಕಗಿಂತಲೂ ಸೋವಿಯೆತ್ ಯೂನಿಯನ್ನಿಂದಲೇ ಹೆಚ್ಚು ಹಾನಿ, ಜತೆಗೆ, ಅಮೆರಿಕನ್ನರನ್ನು ಎದುರು ಹಾಕಿಕೊಳ್ಳುವುದಕ್ಕಿಂತ ರಷ್ಯನ್ನರನ್ನು ಎದುರು ಹಾಕಿಕೊಳ್ಳುವುದು ‘ಕಡಿಮೆ ಅಪಾಯಕರ’ ಮತ್ತು ‘ಲಾಭದಾಯಕ’ವೆಂದರಿತ ಮಾವೋ 1959ರಲ್ಲಿ ಮಾಸ್ಕೋ ಜತೆ ಆರಂಭವಾಗಿದ್ದ ಸೈದ್ಧಾಂತಿಕ ಸಂಘರ್ಷವನ್ನು ಮುಂದಿನ ಅರ್ಧ ದಶಕದಲ್ಲಿ ಮತ್ತೊಂದು ಹಂತಕ್ಕೊಯ್ದರು. ಪರಿಣಾಮವಾಗಿ 1964ರಲ್ಲಿ ಅಂತಾರಾಷ್ಟ್ರೀಯ ಕಮ್ಯೂನಿಸ್ಟ್ ಚಳವಳಿ ಎರಡಾಗಿ ಸೀಳಿ, ಮಾಸ್ಕೋ ಮತ್ತು ಬೀಜಿಂಗ್ ನಾಯಕತ್ವಗಳಲ್ಲಿ ಎರಡು ಪರಸ್ಪರ ಪ್ರತಿಸ್ಪರ್ಧಿ ಬಣಗಳು ಸೃಷ್ಟಿಯಾದವು. ಮುಂದಿನ ಇನ್ನರ್ಧ ದಶಕ ಎರಡೂ ಕಮ್ಯೂನಿಸ್ಟ್ ದೈತ್ಯರ ನಡುವೆ ಸೇನಾ ಸಂಘರ್ಷವನ್ನು ಕಂಡಿತು. ಚೀನಾಗೆ ವಿಶ್ವದಲ್ಲಿ ಎರಡನೆಯ ಸೂಪರ್ ಪವರ್ ಸ್ಥಾನ ದೊರಕಿಸಲು ಸೋವಿಯೆತ್ ಯೂನಿಯನ್ ಅನ್ನು ನಿರ್ವೀರ್ಯಗೊಳಿಸುವುದು ಅಗತ್ಯ ಮತ್ತು ಈ ಕ್ರಿಯೆ ಅಮೆರಿಕವನ್ನು ನಿರ್ವೀರ್ಯಗೊಳಿಸುವುದಕ್ಕಿಂತ ಸುಲಭ ಎಂಬ ಅರಿವು ಮಾವೋರ ತಂತ್ರದ ಹಿಂದಿತ್ತು. ಪರಿಣಾಮವಾಗಿ ಎರಡೂ ಕಮ್ಯೂನಿಸ್ಟ್ ಸೇನೆಗಳು ಸೈಬೀರಿಯಾ-ಮಂಚೂರಿಯಾ ಗಡಿಯಾಗಿರುವ ಉಸ್ಸೂರಿ ನದಿತೀರದಲ್ಲಿ ಪರಸ್ಪರ ಕಾದಾಡಿದವು.
ಎರಡು ದೇಶಗಳನ್ನು ನದಿಯೊಂದು ವಿಭಾಗಿಸಿದರೆ ನದಿಯ ಹರಿವಿನ ನಡುಮಧ್ಯದಲ್ಲಿ ಅಂತಾರಾಷ್ಟ್ರೀಯ ಗಡಿರೇಖೆ ಹಾದುಹೋಗಬೇಕೆನ್ನುವುದು ವಿಶ್ವದ ಎಲ್ಲೆಡೆ ಮಾನ್ಯತೆ ಪಡೆದ ನೀತಿ. ಇದನ್ನು ತಿರಸ್ಕರಿಸಿದ ಸೋವಿಯೆತ್ ಯೂನಿಯನ್ ಇಡೀ ಉಸ್ಸೂರಿ ನದಿ ತನಗೆ ಸೇರಿದ್ದೆಂದೂ, ತನ್ನ ಪರಮಾಧಿಕಾರ ನದಿಯ ಚೀನೀ ದಡದವರೆಗೂ ಹರಡಿರುವುದೆಂದೂ ವಾದಿಸಿ ಚೀನೀ ದಡಕ್ಕೆ ಹತ್ತಿರದಲ್ಲಿದ್ದ ದಮೋನ್ಸ್ಕಿ ದ್ವೀಪವನ್ನು ವಶದಲ್ಲಿಟ್ಟುಕೊಂಡಿತ್ತು. ಹಲವು ವರ್ಷಗಳ ವಿಫಲ ಮಾತುಕತೆಗಳ ನಂತರ 1969ರ ಮಾರ್ಚ್ನ ಒಂದು ಬೆಳಗ್ಗೆ ಚೀನಿ ಸೈನಿಕರು ಸೋವಿಯೆತ್ ಠಿಕಾಣೆಯ ಮೇಲೆ ಹಠಾತ್ ದಾಳಿಯೆಸಗಿ ದಮೋನ್ಸ್ಕಿ ದ್ವೀಪವನ್ನು ಕಿತ್ತುಕೊಂಡರು. ಈ ಪ್ರಕರಣ ಕ್ರೆಮ್ಲಿನ್ ನಾಯಕರಿಗೆ ಅದೆಂತಹ ಆಘಾತ ನೀಡಿ ಅವರು ಮೈ ಪರಚಿಕೊಳ್ಳುವಂತೆ ಮಾಡಿತೆಂಬುದನ್ನು, ಅನಂತರ ಅಮೆರಿಕಕ್ಕೆ ಹಾರಿ ರಾಜಕೀಯ ಆಶ್ರಯ ಪಡೆದ ಸೋವಿಯೆತ್ ರಾಜತಂತ್ರಜ್ಞ ಅರ್ಕಾದಿ ಶೆವ್ಚೆಂಕೋ ತಮ್ಮ ‘Breaking with Moscow‘ ಕೃತಿಯಲ್ಲಿ ಚಿತ್ರಿಸಿದ್ದಾರೆ.
ಕಮ್ಯೂನಿಸ್ಟ್ ದೈತ್ಯರ ನಡುವಿನ ಕದನ ಮತ್ತೊಮ್ಮೆ ಮುಂಚೂಣಿಗೆ ತಂದದ್ದು ಅಗಾಧ ಚೀನೀ ಜನಸಂಖ್ಯೆಯನ್ನು. ಕಮ್ಯೂನಿಸ್ಟ್ ಬಣದ ಯಾವುದೇ ರಾಷ್ಟ್ರ ತನ್ನ ಹಿಡಿತದಿಂದ ಹೊರಗೆ ನುಸುಳಿಹೋಗಲು ಪ್ರಯತ್ನಿಸಿದರೆ ಅದನ್ನು ಬಲಪ್ರಯೋಗದ ಮೂಲಕ ಹಿಂದಕ್ಕೆ ತರುವುದು ಮಾಸ್ಕೋ ಅದುವರೆಗೆ ಪಾಲಿಸಿಕೊಂಡು ಬಂದಿದ್ದ ನೀತಿ. 1952ರಲ್ಲಿ ಪೂರ್ವ ಜರ್ಮನಿ, 1956ರಲ್ಲಿ ಹಂಗೆರಿ ಮತ್ತು 1968ರಲ್ಲಿ ಜೆಕೋಸ್ಲೊವೇಕಿಯಾ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಿ ಅವುಗಳನ್ನು ಮಾಸ್ಕೋ ಯಶಸ್ವಿಯಾಗಿ ತನ್ನ ಹಿಡಿತದಲ್ಲಿಟ್ಟುಕೊಂಡಿತ್ತು. ಆದರೆ ಅಂತಹದೇ ಬಲಪ್ರಯೋಗವನ್ನು ಚೀನಾ ಮೇಲೆ ಮಾಡಲು ಮಾಸ್ಕೋ ಹಿಂಜರಿಯಿತು. ಈ ಹಿಂಜರಿಕೆಗೆ ಮುಖ್ಯ ಕಾರಣ ಅದಾಗಲೇ ಚೀನಾದ ಕೈಯಲ್ಲಿದ್ದ ಅಣ್ವಸ್ತ್ರಗಳೂ ಅಲ್ಲ; ವಿಶ್ವದಲ್ಲೇ ಅತಿದೊಡ್ಡ ಸೇನೆಯಾದ ಆದರೆ ಆಧುನಿಕ ಶಸ್ತ್ರಾಸ್ತ್ರಗಳಿಲ್ಲದ, ಇದ್ದವುಗಳನ್ನು ಸರಿಯಾಗಿ ಉಪಯೋಗಿಸಲು ಬಾರದ ಚೀನಿ ಸೇನೆಯೂ ಅಲ್ಲ. ಈ ಬಗ್ಗೆ ಅಂತಾರಾಷ್ಟ್ರೀಯ ರಾಜಕಾರಣದ ವಿಶ್ಲೇಷಕರು ಒಂದು ಕುತೂಹಲದ ಸಂಗತಿ ಹೇಳುತ್ತಾರೆ. ನಿಜವೋ, ಕಲ್ಪಿತವೋ, ಆ ವಿವರಗಳ ಪ್ರಕಾರ ಚೀನಾದ ಮೇಲೆರಗಿ ಅಲ್ಲಿನ ಸರ್ಕಾರವನ್ನು ಬದಲಾಯಿಸುವುದರಲ್ಲಿ ಯಶಸ್ವಿಯಾಗುವ ಸಾಧ್ಯತೆಯನ್ನು ವಿಶ್ಲೇಷಿಸಿ ವರದಿ ಸಲ್ಲಿಸುವಂತೆ ರಕ್ಷಣಾ ತಂತ್ರಜ್ಞರ ತಂಡವೊಂದನ್ನು ಕ್ರೆಮ್ಲಿನ್ ಕೇಳಿಕೊಂಡಿತು. ಆ ತಂಡ ಸಲ್ಲಿಸಿದ ವರದಿಯ ಸಂಕ್ಷಿಪ್ತ ರೂಪ ಹೀಗಿತ್ತು- ‘ಸೋವಿಯೆತ್-ಚೀನಾ ಯುದ್ಧ ಐದು ದಿನಗಳವರೆಗೆ ಮಾತ್ರ ನಡೆಯುತ್ತದೆ. ಮೊದಲ ದಿನ ನಾವು ಒಂದುಸಾವಿರ ಚೀನೀಯರನ್ನು ಯುದ್ಧ ಕೈದಿಗಳನ್ನಾಗಿ ತೆಗೆದುಕೊಳ್ಳುತ್ತೇವೆ, ಎರಡನೆಯ ದಿನ ಹತ್ತುಸಾವಿರ, ಮೂರನೆಯ ದಿನ ಒಂದು ಲಕ್ಷ, ನಾಲ್ಕನೆಯ ದಿನ ಹತ್ತು ಲಕ್ಷ, ಐದನೆಯ ದಿನ ಒಂದು ಕೋಟಿ ಚೀನಿಯರನ್ನು ಕೈದಿಗಳನ್ನಾಗಿ ತೆಗೆದುಕೊಳ್ಳುತ್ತೇವೆ, ಮತ್ತು... ಆರನೆಯ ದಿನ ನಾವು ಶರಣಾಗತರಾಗುತ್ತೇವೆ!’ ನಂಬಿಕೆಯಾಗುತ್ತಿಲ್ಲವೇ? ಯುದ್ಧಕೈದಿಗಳ ಸಂಖ್ಯೆ ದಿನದಿನಕ್ಕೆ ಹತ್ತುಪಟ್ಟು ಹೆಚ್ಚುತ್ತ ಹೋದಂತೆ ಆರನೆಯ ದಿನ ರಷ್ಯನ್ನರು ಹತ್ತುಕೋಟಿ ಚೀನೀ ಕೈದಿಗಳನ್ನು ಸೈಬೀರಿಯಾಗೆ ಕರೆತಂದರೆ ಅಲ್ಲಿ ರಷ್ಯನ್ನರಿಗಿಂತ ಚೀನೀಯರೇ ಅಧಿಕವಾಗಿಬಿಡುತ್ತಾರೆ! ವಿಶಾಲ ಸೈಬೀರಿಯಾ ನಿರಾಯಾಸವಾಗಿ ಚೀನೀ ನೆಲವಾಗಿಬಿಡುತ್ತದೆ! ಇಂತಹ ಸನ್ನಿವೇಶದಲ್ಲಿ ಶರಣಾಗತಿಯಲ್ಲದೆ ಬೇರಿನ್ನಾವ ಮಾರ್ಗ ರಷ್ಯನ್ನರಿಗೆ ಉಳಿದಿರುತ್ತದೆ?
ನಂತರದ ದಿನಗಳಲ್ಲಿ ಅಮೆರಿಕ ತಾನಾಗಿಯೇ ಚೀನಾದ ಸ್ನೇಹ ಬಯಸುವಂತಹ ಸ್ಥಿತಿ ನಿರ್ವಣವಾಯಿತು. ವಿಯೆಟ್ನಾಂ ಯುದ್ಧವೆಂಬ ಹುದುಲುಮರಳಿನಿಂದ ಹೊರಬರಲು ದಾರಿ ಹುಡುಕಿದ ಅಮೆರಿಕನ್ನರಿಗೆ ಕಂಡ ಮಾರ್ಗ ಚೀನೀಯರ ಸ್ನೇಹ ದಕ್ಕಿದರೆ ಅವರು ಯುದ್ಧ ನಿಲ್ಲಿಸಿ ರಾಜಿಗೆ ಮುಂದಾಗುವಂತೆ ವಿಯೆಟ್ನಾಮೀಯರ ಮನವೊಲಿಸುತ್ತಾರೆ ಎಂದು. ಅಂತಿಮವಾಗಿ ಆದದ್ದು ಅದೇ. ತನ್ನ ಹಿತಾಸಕ್ತಿಗಳನ್ನು ಸಾಧಿಸಿಕೊಳ್ಳುವ ಅತ್ಯುತ್ತಮ ವಿಧಾನವೆಂದರೆ ಇತರರ ಮೇಲೆ ತನ್ನನ್ನು ಹೇರುವುದಕ್ಕಿಂತಲೂ ತನ್ನ ಸ್ನೇಹದ ಅಗತ್ಯ ಅವರಿಗಾಗುವಂತಹ ಪರಿಸ್ಥಿತಿಯನ್ನು ನಿರ್ವಿುಸುವುದು ಎಂಬುದು ಮಾವೋ ಅನುಸರಿಸಿದ ಸುವರ್ಣಸೂತ್ರ.
ಹೀಗೆ ತನ್ನ ಚತುರ ನೀತಿಗಳಿಂದ ಸಿಸಿಪಿಗೆ ಅಂತಾರಾಷ್ಟ್ರೀಯ ಕಮ್ಯೂನಿಸ್ಟ್ ಚಳವಳಿಯಲ್ಲಿ, ಚೀನಾಗೆ ಅಂತಾರಾಷ್ಟ್ರೀಯ ರಂಗದಲ್ಲಿ ಗೌರವದ ಸ್ಥಾನವನ್ನು ತಂದುಕೊಟ್ಟ ಮಾವೋ ಆಂತರಿಕವಾಗಿ ಮಹಾಪರಾಧ ಎನ್ನುವಂತಹ ತಪ್ಪುಗಳನ್ನೆಸಗಿದ್ದು ವಿಪರ್ಯಾಸ. ಅದು ಮೊದಲಿಗೆ ದೊಡ್ಡದಾಗಿ ಕಾಣಿಸಿ ಕೊಳ್ಳುವುದು 1958-62ರ ನಡುವಿನ ‘The Great Leap Forward‘ (ಮಹಾ ಮುಂಜಿಗಿತ) ಎಂಬ ವಿನಾಶಕಾರಿ ಆರ್ಥಿಕ ಯೋಜನೆಯಲ್ಲಿ. ರೈತರ ಮೇಲೆ ಬಲವಂತವಾಗಿ ಹೇರಿದ ವ್ಯವಸಾಯದ ಸಾಮುದಾಯೀಕರಣ ಯೋಜನೆಯಿಂದಾಗಿ ಕೃಷಿ ಉತ್ಪಾದನೆ ಕುಗ್ಗಿದ್ದು, ಗುಬ್ಬಚ್ಚಿಗಳನ್ನೂ ಕೀಟಗಳೆಂದು ಸಾರಿ ಅವುಗಳನ್ನು ಸಾರಾಸಗಟಾಗಿ ಕೊಂದದ್ದರಿಂದ ನಿಜವಾದ ಕೀಟಗಳ ಸಂಖ್ಯೆ ಅಪಾರವಾಗಿ ವೃದ್ಧಿಸಿ ಅಗಾಧ ಪ್ರಮಾಣದ ಫಸಲು ಅವುಗಳಿಗೆ ತುತ್ತಾದದ್ದು ದೇಶದಲ್ಲಿ ಎಂತಹ ಪ್ರಮಾಣದ ಆಹಾರಧಾನ್ಯಗಳ ಕೊರತೆಯನ್ನು ತಂದಿಟ್ಟಿತೆಂದರೆ ಆ ಅವಧಿಯಲ್ಲಿ ಒಂದೂವರೆಯಿಂದ ಐದೂವರೆ ಕೋಟಿ ಚೀನೀಯರು ಹಸಿವಿನಿಂದ ಜೀವ ಕಳೆದುಕೊಂಡರು. ಆ ವಿನಾಶ ವಿಶ್ವದ ಅತಿದೊಡ್ಡ ಬರಗಾಲವೆಂದು ಗುರುತಿಸಲ್ಪಟ್ಟಿದೆ. ಮಾವೋರ ‘ಮಹಾ ಮುಂಜಿಗಿತ’ ಹೀಗೆ ಅಂತಿಮವಾಗಿ ಸಾಧಿಸಿದ್ದು ‘ಮಹಾ ಹಿಂಜಿಗಿತ’. ಈ ವಿನಾಶಕಾರಿ ಯೋಜನೆಯನ್ನು ನಿಲುಗಡೆಗೆ ತಂದ ನಾಲ್ಕೇ ವರ್ಷಗಳಲ್ಲಿ ಮಾವೋ ಮತ್ತೊಂದು ಸಾಂಸ್ಕೃತಿಕ, ಬೌದ್ಧಿಕ ವಿನಾಶವನ್ನು ಚೀನೀಯರ ಮೇಲೆ ಹೇರಿದರು.
ಚೀನಾದಲ್ಲಿ ಕಮ್ಯೂನಿಸ್ಟ್ ತತ್ತ್ವಗಳನ್ನು ಸಾರ್ವತ್ರಿಕವಾಗಿ ಬಿತ್ತಲು, ಆ ಮೂಲಕ ಕಮ್ಯೂನಿಸ್ಟ್ ಪಕ್ಷದ ಆಳ್ವಿಕೆಯನ್ನು ಅನೂಚಾನಗೊಳಿಸಲು ಇರುವ ತೊಡಕೆಂದರೆ ಚೀನೀಯರು ಶತಮಾನಗಳಿಂದಲೂ ನಂಬಿ ಪಾಲಿಸಿಕೊಂಡು ಬಂದ ಬೌದ್ಧ, ಕನ್ಫ್ಯೂಸಿಯನ್, ತಾವೋ ಮೌಲ್ಯಗಳು ಎಂದು ತಿಳಿದ ಮಾವೋ ಅವೆಲ್ಲವನ್ನೂ ನಾಶಮಾಡಲು ಹೂಡಿದ ಹೂಟವೇ ತಥಾಕಥಿತ ಸಾಂಸ್ಕೃತಿಕ ಕ್ರಾಂತಿ. 1966-74ರ ನಡುವಿನ ಎಂಟುವರ್ಷಗಳಲ್ಲಿ ಸಾವಿರಸಾವಿರ ಪುಸ್ತಕಭಂಡಾರಗಳಿಗೆ ಬೆಂಕಿ ಹಚ್ಚಲಾಯಿತು, ಲಕ್ಷಲಕ್ಷ ಧಾರ್ವಿುಕ, ತತ್ತ್ವಶಾಸ್ತ್ರೀಯ ಗ್ರಂಥಗಳನ್ನು ಸುಟ್ಟುಹಾಕಲಾಯಿತು. ಇಡೀ ಪಠ್ಯಕ್ರಮವನ್ನು ಬದಲಾಯಿಸಿ, ಧಾರ್ವಿುಕ, ತತ್ತ್ವಶಾಸ್ತ್ರೀಯ ವಿಷಯಗಳನ್ನು ತೆಗೆದುಹಾಕಿ; ಕಮ್ಯೂನಿಸಂನ ಗುಣಗಾನಗಳು, ಮಾವೋನ ತತ್ತ್ವಗಳು, ಕಮ್ಯೂನಿಸ್ಟ್ ಸರ್ಕಾರದ ಗುರಿಗಳು ಮತ್ತು ಅವುಗಳನ್ನು ಸಾಧಿಸುವಲ್ಲಿ ಪ್ರತಿಯೊಬ್ಬ ಚೀನೀಯನ ಕರ್ತವ್ಯಗಳೇನು ಎಂದು ಕಟ್ಟುನಿಟ್ಟಾಗಿ ಹೇಳುವ ವಿಷಯಗಳನ್ನು ತುಂಬಲಾಯಿತು. ಒಟ್ಟಿನಲ್ಲಿ ತಮ್ಮದೇ ಸಾಂಸ್ಕೃತಿಕ ಪರಂಪರೆಯನ್ನು, ಹಿರಿಯರು ನಂಬಿ ಪಾಲಿಸಿಕೊಂಡು ಬಂದಿದ್ದ ಧಾರ್ವಿುಕ ಮೌಲ್ಯಗಳನ್ನು ಚೀನೀಯರ ಮನಸ್ಸಿನಿಂದ ಅಳಿಸಿಹಾಕಿಬಿಡಲಾಯಿತು. ಹೊಸಬರಿಗೆ ಶಾಲೆಗಳಲ್ಲಿ ಈ ಶಿಕ್ಷಣಕ್ರಮ ಜಾರಿಯಾದರೆ ಹಳಬರನ್ನು ಪುನರ್ವಿದ್ಯಾಭ್ಯಾಸ ಶಿಬಿರಗಳಿಗೆ ಅಟ್ಟಲಾಯಿತು. ಇದೊಂದು ಭಯಾನಕ ಬ್ರೇನ್ವಾಷಿಂಗ್ ಕಸರತ್ತು. ಅಲ್ಲಿಂದಾಚೆಗೆ ಚೀನೀಯ ಸಂಪೂರ್ಣವಾಗಿ ಬದಲಾಗಿಹೋದ. ಈ ಹೊಸ ಚೀನೀಯ ಅಧಾರ್ವಿುಕನಾಗಿದ್ದ, ಆಕ್ರಮಣಕಾರಿಯೂ ಆಗಿದ್ದ.
ಇಷ್ಟಾಗಿಯೂ, ಚೀನಾದಲ್ಲಿ ಬಡತನವನ್ನು ನಿಮೂಲನಗೊಳಿಸುವಲ್ಲಿ, ಚೀನೀಯರ ಬದುಕನ್ನು ಉತ್ತಮಗೊಳಿಸುವಲ್ಲಿ ಮಾವೋ ಸಂಪೂರ್ಣವಾಗಿ ವಿಫಲರಾದರೆಂದೇ ಹೇಳಬೇಕು. ಹೊರಜಗತ್ತಿನಲ್ಲಿ ಪ್ರಭಾವಶಾಲಿಯಾಗುತ್ತ ಬೆಳೆದ ಚೀನಾ ಆಂತರಿಕವಾಗಿ ಜಝುರಿತವಾಗುತ್ತ ಸಾಗಿತ್ತು. ಅದನ್ನು ಸರಿಪಡಿಸಿದ್ದು ವಿವೇಕಿ ನಾಯಕ ಡೆಂಗ್ ಷಿಯಾವೋಪಿಂಗ್. ರಾಜಕೀಯ ಕ್ಷೇತ್ರದಲ್ಲಿ ಕಮ್ಯೂನಿಸಂ, ಆರ್ಥಿಕ ಕ್ಷೇತ್ರದಲ್ಲಿ ಅಗತ್ಯವಿರುವಷ್ಟು ಕ್ಯಾಪಿಟಲಿಸಂಗೆ ಒತ್ತುಕೊಟ್ಟ ಅವರ ನೀತಿಗಳಿಂದಾಗಿ ಚೀನಾ ಸಾಧಿಸಿದ ಅದ್ಭುತ ಆರ್ಥಿಕ ಪ್ರಗತಿಯ ಜತೆಗೇ ಸಿಸಿಪಿಗೆ ಇಂದು ಎದುರಾಗಿರುವ ಸವಾಲುಗಳ ಅವಲೋಕನ ಮುಂದಿನವಾರ, ಲೇಖನದ ಮೂರನೆಯ ಹಾಗೂ ಅಂತಿಮ ಭಾಗದಲ್ಲಿ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)