ಅಂಕಣ

ಸಂಜೀವಿನಿ ಪರ್ವತದ ಅನನ್ಯ ಸೊಬಗು

ಬಹುಶಃ ನನ್ನ ಹತ್ತಿರ ಈಗಿನಂತೆ ಮೊಬೈಲ್ ಕ್ಯಾಮರಾ ಅಥವಾ ಡಿಜಿಟಲ್ ಯುಗದ ಬೆಂಬಲವಿದ್ದರೆ ಆ ದೇವರ ಕಾಡಿನ ಚಿತ್ರಗಳನ್ನು ಹೇಗೆ ತೆಗೆದುಕೊಂಡು ಬಿಡುತ್ತಿದ್ದೇನೋ ಗೊತ್ತಿಲ್ಲ, ಆದರೆ ಆಗ ಏನಿದ್ದರೂ ರೀಲು ಹಾಕಿಟ್ಟು ಎಣಿಸಿ ಚಿತ್ರ ತೆಗೆಯುವ ಕಾಲ. ಖರ್ಚಿನ ಬಾಬತ್ತು ಬೇರೆ. ಹಾಗಾಗಿ ಚಪ್ಪಲಿ ನಿಷೇಧದ ಈ ದೇವರ ಕಾಡಿನ ಕತೆ ಹೇಳುವ ಮೊದಲು ಚಿತ್ರಗಳನ್ನು ಹುಡುಕಿಕೊಂಡಿದ್ದೆ. ಕಾರಣ ಇದು ಈಗಿನ ಕತೆಯಲ್ಲ, ಅನಾಮತ್ತು ಒಂದೂವರೆ ಶತಮಾನದ ಹಿಂದೆ, ಇಲ್ಲಿಗೆ ಬ್ರಿಟಿಷ್ ಅಧಿಕಾರಿಯೊಬ್ಬ ಮೊದಲಿಗೆ ಕಾಲಿಟ್ಟಿದ್ದ. ಆದರೆ ಅವನಿಗೆ ಕುದುರೆಯಿಂದ ಇಳಿಯಲೇ ಬಿಟ್ಟಿರಲಿಲ್ಲ ಇಲ್ಲಿನ ಆದಿವಾಸಿಗಳು. ಕಾರಣ ಬ್ರಿಟಿಷ್ ಎಂದಲ್ಲ ಅವನು ಕಾಲಿಗೆ ಬೂಟು ಧರಿಸಿ ಕುದುರೆ ಏರಿ ಕುಳಿತಿದ್ದ.

ಅಲ್ಲಿಗೆ ಅವರ ಪ್ರವೇಶ ಮತ್ತು ಅವಕಾಶ ಎರಡೂ ಕಿತ್ತುಕೊಂಡಿದ್ದರು ಆ ಬುಡಕಟ್ಟಿನ ಜನಾಂಗದವರು. ಆದರೆ ಆ ಅಧಿಕಾರಿಯೇನೂ ಸಾಮಾನ್ಯನಲ್ಲ. ಬಳಿಕ ಆ ಪ್ರದೇಶವನ್ನು ತಲುಪುವ ಮೂರು ಮೈಲಿ ಮೊದಲೇ ಬೂಟು ಕಳಚಿಟ್ಟು ಬೆಟ್ಟವೇರಿದ್ದ. ಬರಿಗಾಲಲ್ಲಿ ಬೊಬ್ಬೆ ಹರಿದು ರಕ್ತ ಸುರಿದರೂ ಬಿಡದೆ ಅಲ್ಲಿಗೆ ಎಡತಾಕಿದ್ದ. ಬೆಟ್ಟ ಅವನನ್ನು ಒಳಕ್ಕೆ ಬಿಟ್ಟುಕೊಂಡಿತು. ಆವತ್ತು ಬೆಟ್ಟ ಏರಿದವನು ಇಳಿದು ನಗರಕ್ಕೆ ಹಿಂದಿರುಗಿದ್ದು ಒಂದೂವರೆ ತಿಂಗಳ ನಂತರ. ಕಾರಣ ದೇವರ ಕಾಡಿನ ಹೆಸರಿನ ಬೆಟ್ಟ ದೇವರಿಗೆ ಮಾತ್ರವಲ್ಲ ಸರಿಸುಮಾರು ಐದು ಸಾವಿರಕ್ಕೂ ಹೆಚ್ಚು ಔಷಧ ಸಸ್ಯಗಳನ್ನು ಹೊತ್ತು ಒಳಗೊಳಗೇ ಸಂಜೀವಿನಿ ಪರ್ವತವಾಗಿ ನಿಂತಿತ್ತು.

ಸಸ್ಯ ಸಗ್ಗದ ವೈದ್ಯಕೀಯ ಮಹತ್ವ ಅರಿತಿದ್ದ ಆ ಅಧಿಕಾರಿಯ ಹೆಸರು ಗ್ರಿಫಿತ್ ಗ್ಯಾನ್ಮಾರ್. ಇದು ನಡೆದದ್ದು 1878ರ ಕಾಲಾವಧಿಯಲ್ಲಿ, ಹಾಗೆ ಬರಿಗಾಲಿನಲ್ಲಿ ಮಾತ್ರವೇ ಈ ನೆಲ ತುಳಿಯಬಹುದೆಂಬ ದೈವ ಭಾವದಿಂದ ಕಾಯ್ದುಕೊಂಡ ಭಕ್ತಿಯ ಪರಾಕಾಷ್ಠೆಯಲ್ಲಿ ಸಮೃದ್ಧ ಸಂಜೀವಿನಿ ಪರ್ವತವಾಗಿ ಬದಲಾದ ಬೆಟ್ಟವೇ ಮಾವ್​ಪ್ಲಾಂಗ್. ಮೇಘಾಲಯ ಎಂಬ ಮೇಘಗಳ ನಾಡಿನ ಸಮೃದ್ಧ ಕಾಡಿನ ಒಳಭಾಗದಲ್ಲಿ ಕಲ್ಲುಹಾಸಿನ ಈ ಬೆಟ್ಟ ಇವತ್ತಿಗೂ ಹೊರಜಗತ್ತಿಗೆ ಹೆಚ್ಚಾಗಿ ಅಪರಿಚಿತವೇ. ವಿಪರೀತ ಮಳೆಯ ಕಾಡಿನ ಒಳಕ್ಕೆ ಹೋದಲ್ಲಿ, ಫ್ಯಾಂಟಸ್ಸಿ ಜಗತ್ತಿಗೆ ಹೋದ ಅನುಭವ ಆದಲ್ಲಿ ಅಚ್ಚರಿ ಬೇಡ.

ಮಾವ್ ಎಂದರೆ ಹೆಬ್ಬಂಡೆ ಅಥವಾ ಶಿಲಾ ಬೆಟ್ಟ ಎಂದರ್ಥ ಕೊಡುವ ಮೇಘಾಲಯದ ಈ ಪರ್ವತ ಅರ್ಧದ ಮೇಲ್ಭಾಗದಲ್ಲಿ ಸಾವಿರಾರು ಬಳ್ಳಿ, ಹಸಿರ ಚಿಗುರು ಮತ್ತು ಔಷಧ ಸಸ್ಯಗಳಿಗೆ ನೇರ ತಾಣ. ನನ್ನ ಜೊತೆ ಗೈಡ್ ಆಗಿದ್ದವನು ಮಾತಿಗೊಮ್ಮೆ ಅಲ್ಲಿನ ಮಹತ್ವ ವಿವರಿಸುತ್ತ ಬೆಟ್ಟವೇರುವ ಪರಿಗೆ ನಾನು ದಂಗಾಗಿದ್ದೆ.

‘ಇದೋ ನೋಡಿ ಈ ಬಳ್ಳಿ ಜಗಿದರೆ ಎರಡೇ ನಿಮಿಷದಲ್ಲಿ ನೋವು ನಿವಾರಕ ಕೆಲ್ಸ ಶುರು ಮಾಡುತ್ತದೆ. ಇದು ಉಳುಕಿಗೆ, ಇದನ್ನು ಹಿಂಡಿ ರಸ ಗಂಟಲಿಗೆ ಹೋಗುವ ಮೊದಲೇ ಬೇಧಿ ಬಂದ್, ತಪ್ಪಿಯೇನಾದರೂ ಈ ಬಳ್ಳಿ ಬೇರನ್ನು ಅರೆದು ಕುಡಿದಿರೋ ನೀವು ಕುಂಭಕರ್ಣನಾಗುತ್ತೀರಿ. ಕನಿಷ್ಠ ನಾಲ್ಕೆ ೖದು ದಿನ ಬಿದ್ದುಕೊಳ್ಳೊದು ನಿಶ್ಚಿತ, ಅನಸ್ತೇಷೀಯಾ ತರಹದ್ದು. ಅದರ ಪಕ್ಕದ ಗೆರಟೆ ತರಹದ ಕಾಯಿಯಿದೆಯಲ್ಲ ಅದು ಹಸಿವಿನಿಂದ ರಕ್ಷಿಸುತ್ತದೆ, ಆದರೆ ದಿನವಿಡೀ ನೀರು ಕುಡಿಸುತ್ತದೆ. ಆ ಕಡುಕಪ್ಪಗಿನ ಬಳ್ಳಿ ಮುಪ್ಪು ಮುಂದೂಡಿದರೆ, ಕೂದಲು ಕಪ್ಪಾಗಿಯೇ ಇರಲು ನಾವು, ಇದೇ ಬೇರು ಬಳಸೋದು, ನೋಡಿ ನಾನು ಈಗಲೂ ಹೇಗಿದ್ದೇನೆ..?’ ಎನ್ನುತ್ತ ನನಗಿಂತಲೂ ವೇಗವಾಗಿ, ಸರಾಗವಾಗಿ ಬೆಟ್ಟವೇರುವ 79ರ ಹರೆಯದ ಗೈಡ್​ನ ನಿಲುವು, ಬಣ್ಣ, ಬಿಗಿಯಾದ ಮುಖದ ಸ್ನಾಯುಗಳನ್ನು ಗಮನಿಸುತ್ತಿದ್ದರೆ ಅವನು ಹೇಳಿದ್ದೆಲ್ಲವೂ ಸತ್ಯ ಎನ್ನಲೇಬೇಕು. ಆದರೆ ಹಾಗಂತ ‘ಹೌದಾ’ ಎಂದು ಆ ಬಳ್ಳಿಗಳ ರುಚಿ ನೋಡಲು ತಪ್ಪಲುಗಳನ್ನೆಲ್ಲ ಅರೆದು ಬಾಯಿಗಿಟ್ಟುಕೊಳ್ಳುವ ಮೀಟರೂ ಬೇಕಲ್ಲ. ಅದು ನನ್ನಿಂದಾಗಿರಲಿಲ್ಲ.

ಇವತ್ತು ಜಗತ್ತಿನ ಖ್ಯಾತ ಆಯುರ್ವೆದ ಚಿಕಿತ್ಸಾ ಸಂಶೋಧಕರೆಲ್ಲ ಚಪ್ಪಲಿ ಮಾತ್ರವಲ್ಲ ಪ್ಯಾಂಟೂ ಕಳಚಿಟ್ಟು, (ಕಾರಣ ಪ್ಯಾಂಟಿನ ಜೇಬಿನಲ್ಲಿ ಕದ್ದು ಇಲ್ಲಿನ ಸೊಪ್ಪು ಸದೆ ಒಯ್ಯುತ್ತಾರೆಂದು ನಾಲ್ಕೆ ೖದು ದಶಕದ ಹಿಂದೆಯೇ ವಸ್ತ್ರಸಂಹಿತೆ ರೂಪಿಸಾಗಿದೆ) ಸದ್ದೇ ಮಾಡದೆ ಒಳಹೊಕ್ಕು ಕಣ್ಣಿಗೆ ಕಂಡದ್ದು, ಅನುಭವಕ್ಕೆ ದಕ್ಕಿದ್ದನ್ನೆಲ್ಲ ತಲೆಯಲ್ಲಿ ತುಂಬಿಕೊಂಡು ಹೋಗಿ ಪ್ರಯೋಗ ಮಾಡುತ್ತಿದ್ದರೆ ನಮ್ಮವರ ಕಣ್ಣಿಗೆ ಇದೆಲ್ಲ ಯಾಕೆ ಬಿದ್ದಿಲ್ಲವೋ ಎಂಬ ಪ್ರಶ್ನೆ ಕಾಡುತ್ತದೆ. ಹೆಚ್ಚಿನ ಪ್ರವಾಸಿಗರಿಗೂ ಈ ದೇವರ ಕಾಡು ದಕ್ಕಿದ್ದು ಕಡಿಮೆಯೇ. ಶಿಲ್ಲಾಂಗ್​ನಿಂದ ಕೇವಲ 35 ಕಿ.ಮೀ. ದೂರ ಇರುವ ಮಾವ್​ಪ್ಲಾಂಗ್ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಬಲಕ್ಕಿರುವ ಅಪ್ಪಟ ನಿತ್ಯ ಹರಿದ್ವರ್ಣದ ಕಾಡು. ಖಾಸಿ ಮತ್ತು ಪೈನ್ ವೃಕ್ಷಗಳ ಜೊತೆಗೆ ಅಗಾಧ ಬಿದಿರು ಕಾಡುಗಳು ಇದರ ದಟ್ಟತೆಯನ್ನು ಹೆಚ್ಚಿಸಿದ್ದರೆ ಹತ್ತಾರು ಕಿ.ಮೀ. ದೂರದವರೆಗೂ ಒಳಭಾಗಕ್ಕೆ ಚಾಚಿಕೊಂಡಿರುವ ದುರ್ಗಮ ಕಣಿವೆಯ ಉದ್ದಕ್ಕೂ ಹಸಿರು ಹಾಸು ಹುಲ್ಲಿನ ಮೆತ್ತೆಯಂತೆ ಇರುತ್ತದೆ. ಯಾವ ರತ್ನಗಂಬಳಿಯೂ ನೀಡದ ಅನುಭವ ಕಾಲ ಕೆಳಗೆ.

ಬದುಕಿನ ಧಡಾಪಡಿಯ ಪ್ರವಾಹಕ್ಕೆ, ಜನರ ಹಪಾಹಪಿಯ ಕೈಗೆ ದಕ್ಕದಂತೆ ಆದಿವಾಸಿಗಳ ಮೂಲಕ ಕಾಯ್ದುಕೊಳ್ಳಲಾದ ಕಾರಣ ಪ್ರತಿ ಮರ, ರೆಂಬೆ ಕೊಂಬೆಯಾದಿಯಗಿ ಎಲ್ಲೆಲ್ಲೂ ಜೌಗು ಹಿಡಿದ ಪರಿಸರದಲ್ಲಿ ಹಾವಸೆ ಕಟ್ಟಿ, ಬಳ್ಳಿ ಕುರುಚಲು ಬೆಳೆದು ಎಲ್ಲೆಲ್ಲೂ ಹಸಿರೋ ಹಸಿರು. ರಾಜಧಾನಿ ಶಿಲಾಂಗ್​ನಿಂದ ಒಂದೂವರೆ ಗಂಟೆ ಪಯಣ ಬೇಡುವ ದಾರಿ, ತೀರ ಏರಿಳಿತ ಮತ್ತು ಕೊರಕಲು. ಇವತ್ತಿಗೂ ಟಾರು ಬಿಡಿ ಸರಿಯಾಗಿ ಮಣ್ಣು ಕೆದಕಿ ಸರಿಪಡಿಸಿದರೂ ದಕ್ಕಿದ್ದಿಲ್ಲ. ಆಗೀಗ ಇಳಿಯುತ್ತಲೇ ಕುಸಿಯುತ್ತಲೇ ಇರುತ್ತದೆ. ಅಲ್ಲಿಂದ ಒಂದಷ್ಟು ಬೆಟ್ಟ, ಗುಡ್ಡ ಕಣಿವೆ, ಕೊರಕಲು ನದಿಪಾತ್ರ ಹೀಗೆ ಏರಿಳಿಯುತ್ತ ಸಾಗಿದರೆ ಖಾಸಿ ಹಿಲ್ಸ್​ನ ದೇವರ ಕಾಡು ಎದುರಿಗೆ ತೆರೆದುಕೊಳ್ಳಲಾರಂಭಿಸುತ್ತದೆ.

ಒಂದು ಪ್ರದೇಶದ ಆವರಣ ನಮ್ಮನ್ನು ಹೇಗೆ ಪ್ರಭಾವಕ್ಕೆ ಸಿಲುಕಿಸುತ್ತದೆ ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆ. ಕಾರಣ ಕಾಡಿನ ಅಲ್ಲಲ್ಲಿ ನೈಜ ಶಬ್ದ ಬಿಟ್ಟರೆ ಇರುವ ನಿಶಬ್ದತೆ ನಮ್ಮನ್ನು ಕೂಡಲೇ ಪಿಸುಗುಡುತ್ತ ಮಾತನಾಡಲು ಪ್ರೇರೇಪಿಸಿದರೆ ಕ್ರಮೇಣ ಒಳಭಾಗದಲ್ಲಿ ಅಕ್ಷರಶಃ ಬಾಯಿ ಮುಚ್ಚಿಕೊಂಡು ನಡೆಯತೊಡಗುತ್ತೇವೆ. ನೀರವತೆಗೆ ಮನಸ್ಸು ಅಧ್ಯಾತ್ಮ ಭಾವ ಪಡೆಯುತ್ತದೆ. ಅಗಾಧ ಸೈಜಿನ ಮರಮಟ್ಟುಗಳ ಜೊತೆಗೆ ಕಪ್ಪು ಶಿಲಾ ಸಾಲುಗಳ ಮೇಲೆಲ್ಲ ಎಲ್ಲೆಂದರಲ್ಲಿ ಹಸಿರು ಹರಿದ್ವರ್ಣ ಆವರಿಸಿಕೊಂಡ ರೀತಿ ಮೂಕವಿಸ್ಮಿತರನ್ನಾಗಿಸುತ್ತದೆ. ಬಳ್ಳಿಗಳು ಆವರಿಸಿದ ಕಾರಣ ಎಲ್ಲೆಡೆಯೂ ಚಪ್ಪರದಂತಾಗಿ, ವಾಪಸ್ಸು ನೆಲಕ್ಕೂ ನೆಲೆಯೂರಿ ಯಾವಾಗಲೂ ಕತ್ತಲಡರಿದಂತೆ ಮಾಡಿರುವುದರಿಂದ ಎಂಥ ಹೊತ್ತಿನಲ್ಲೂ ಒಳಾವರಣದ ಛಾಯಾಗ್ರಹಣ ವಿಫಲವಾಗುತ್ತದೆ. ಉತ್ತಮ ಕ್ಯಾಮರಾಗೆ ಅದೆಲ್ಲ ಸಾಧ್ಯವೇನೋ. ಆದರೆ ಆಗ ರೀಲು ಕ್ಯಾಮರಾದ ಕಾಲಾವಧಿ. ರ್ದಲಲ ಎಣಿಸಿ ಕ್ಲಿಕ್ಕಿಸುವ ಅನಿವಾರ್ಯತೆ. ಈಗ ಅಲ್ಲಿ ಕ್ಯಾಮರಾವನ್ನೇ ನಿಷೇಧಿಸಿದ ಸುದ್ದಿ ಇದೆ.

ಖಾಸಿ ಹಿಲ್ಸ್ ಡೆವಲಪ್​ವೆುಂಟ್ ಅಥಾರಿಟಿ ಇದನ್ನೆಲ್ಲ ನಿಂತು ನೋಡಲು ಮತ್ತು ಶೆಲ್ಟರಿಂಗ್​ಗೆ ಎಂದು ಸಣ್ಣ ಸಣ್ಣ ಅದಿವಾಸಿಗಳ ಸಿದ್ಧ ಮಾದರಿಯ ಅಟ್ಟಣಿಗೆ ಮನೆ ನಿರ್ವಿುಸಿ ಇಟ್ಟಿದೆ. ಅದಕ್ಕಾಗಿ ಶಿಲಾಂಗ್​ನಲ್ಲಿ ಬುಕಿಂಗ್ ಮತ್ತು ಎಲ್ಲ ಸಕಲ ವ್ಯವಸ್ಥೆ ಮಾಡಿಕೊಳ್ಳಲೇಬೇಕು. ಮಾವ್​ಪ್ಲಾಂಗ್​ನಲ್ಲೂ ಅಧಿಕಾರಿ ವರ್ಗ ಇದ್ದರೂ ಒಳಭಾಗದ ಪ್ರವೇಶ ಈಗೀಗ ಕೆಲವೇ ಕೆಲವು ಪ್ರದೇಶಕ್ಕೆ ಸೀಮಿತ. ಮೊದಲೆಲ್ಲ ಆದಿವಾಸಿಗಳ ಗೈಡ್​ನಲ್ಲಿ (ಈಗಲೂ ಅವರೇ ಗೈಡ್​ಗಳು) ಎಷ್ಟೆಲ್ಲ ದೂರ ಒಳಸಂಚಾರ ಸಾಧ್ಯವಿತ್ತು. ನೆಲಕ್ಕೆ ಕಾಲಿಟ್ಟಲೆಲ್ಲ ಅನೂಹ್ಯ ಅನುಭವಕ್ಕೆ ಮಾವ್​ಪ್ಲಾಂಗ್ ಈಡು ಮಾಡುತ್ತಿದ್ದುದು ಸುಳ್ಳಲ್ಲ. ಆದರೆ ಆಧುನಿಕ ಪ್ರಪಂಚದ ದಾಳಿ ಮತ್ತು ನೈಜ ಶಕ್ತಿಯ ನಿಸರ್ಗ ಸಂಪತ್ತನ್ನು ರಕ್ಷಿಸಲು ಮಾವ್​ಪ್ಲಾಂಗ್​ನ ಬಾಗಿಲು ಮುಚ್ಚುವ ಅನಿವಾರ್ಯತೆ ಇದ್ದೇ ಇತ್ತು. ಅದಾಗಿದೆ ಅನ್ನಿಸುತ್ತದೆ. ಕಾರಣ, ಇಲ್ಲಿ ಸಂಜೀವಿನಿ ಇದೆ ಎನ್ನುವವರೆಗೂ ಕತೆಗಳಿವೆ.

ಅಮೆರಿಕದ ಮೆಡಿಕಲ್ ಫೌಂಡೇಷನ್ ಪ್ರಕಾರ ಇದೊಂದೇ ಕಾಡಿನಲ್ಲಿ ಆರು ಸಾವಿರ ಔಷಧ ಪ್ರಬೇಧಗಳಿದ್ದರೆ, ಇಲ್ಲಿ ಬಂದು ಸಂಶೋಧನೆಗಾಗಿ ಉಳಿದು ಇಲ್ಲೇ ಮುದುಕನಾದರೂ ಊರು ಬಿಡಲೊಲ್ಲದ ಅಸ್ಟ್ರೇಲಿಯಾದ ಗೋವ್​ಹಾಡ್ಸ್, ಇಲ್ಲೆ ಪಕ್ಕದ ಚಿನಾಂಗ್ ಎಂಬ ಹಳ್ಳಿಯಲ್ಲಿ ಜೀವನ ಮಾಡುತ್ತಿದ್ದರೆ, ಇತ್ತ ಅಮೆರಿಕ ಅರ್ಧಸತ್ಯ ಮಾತ್ರ ನುಡಿಯುತ್ತಿದೆ. ಇಲ್ಲಿ ಅದರ ಎರಡರಷ್ಟು ಗುರುತಿಸಬಹುದಾದ ಪ್ರಭೇದಗಳಿದ್ದರೆ ಲೆಕ್ಕಕ್ಕೆ ಸಿಗದಿರುವುದೇ ಶೇಕಡ 90ಕ್ಕೂ ಹೆಚ್ಚು ಎನ್ನುತ್ತಾರೆ ಹಾಡ್ಸ್. ಇವನೊಂಥರಾ ಮಾವ್​ಪ್ಲಾಂಗ್​ನ ನಡೆದಾಡುವ ವಿಶ್ವಕೋಶ. ಅಸೆಂಟೂ ಪಕ್ಕಾ ಇಂಡಿಯನ್ ಶೈಲಿ. ಹಾಗಾಗಿ ಮಾತುಕತೆ ಮುಗಿಯುವುದೇ ಬೇಡ ಎನ್ನಿಸುತ್ತದೆ ಹಾಡ್ಸ್​ನ ಜೊತೆ. ಅವನು ವಿವರಿಸುತ್ತ ಇದ್ದರೆ ಹೌದೇ, ಹೇಗೆ ನಂಬುವುದು, ಏನು ಪ್ರಶ್ನೆ ಕೇಳುವುದು ಎಂದು ಗೊತ್ತಾಗದೆ ತಬ್ಬಿಬ್ಬಾಗುತ್ತೇವೆ. ಆಗೊಮ್ಮೆ ಹೋಗಿ ಸಂಜೀವಿನ ಕಾಡಿಗೆ ಕಾಲಿಕ್ಕಿದ್ದಷ್ಟೆ ಭಾಗ್ಯ. ಈಗ ಏನಿದ್ದರೂ ಅಟ್ಟಣಿಗೆ ಮೇಲೆ ನಿಂತು ನೋಡುವ ವ್ಯವಸ್ಥೆ.

ಅಪ್ಪಟ ಒದ್ದೆ ಮರುಭೂಮಿ ಮೇಘಾಲಯದಲ್ಲಿ ಸಾಮಾನ್ಯವಾಗಿ ಕಾಡು ನಿಲ್ಲುವುದಿಲ್ಲ. ಮಳೆಗೆ ತೊಳೆದು ಹೋಗುವುದೇ ಜಾಸ್ತಿ. ಆದರೂ ಪೂರ್ವ ಖಾಸ್ಸಿಯಲ್ಲೆಕೇ ದೇವರ ಕಾಡು ತಡೆದಿದೆ? ಕಾರಣ ಮೌಸನ್​ರಯಾಮ್ ಮತ್ತು ಅದರ ಬೆನ್ನಿಗೆ ಇರುವ ಇಳಿಜಾರ ನಂತರದ ಪರಿಧಿಯಲ್ಲಿ ಇದು ಬರುವುದರಿಂದ ಹೊಡೆತ ತಪ್ಪಿಸಿಕೊಳ್ಳುವ ಮಾವ್​ಪ್ಲಾಂಗ್​ಗೆ ದೇವರ ಶ್ರೀರಕ್ಷೆಯೂ ಇದೆಯಂತೆ. ಎಷ್ಟೆಂದರೂ ದೇವರ ಕಾಡಲ್ಲವೇ? ಇರಬಹುದೆನ್ನುತ್ತ ನನ್ನ ಬರಿಗಾಲನ್ನು ಅಂಗೈನಿಂದ ನೇವರಿಸಿಕೊಳ್ಳುತ್ತ ಆ ತೇವಕ್ಕೆ ಮುದವಾಗುತ್ತ ಹೊರಕ್ಕೆ ಹೆಜ್ಜೆ ಇಟ್ಟಿದ್ದೆ. (ಲೇಖಕರು ಕತೆಗಾರರು)