ಕಾರಿನಿಂದಿಳಿದ ಒಬ್ಬ ವ್ಯಕ್ತಿ ಅಬ್ದುಲ್ನನ್ನು ಮಾತನಾಡಿಸಿ ಅವನನ್ನು ಚಹಾ ಕುಡಿಯಲು ಪಕ್ಕದಲ್ಲೇ ಇದ್ದ ಅಂಗಡಿಗೆ ಕರೆದುಕೊಂಡು ಹೋದ. ಕಾರಿನಲ್ಲಿದ್ದ ಮೂವರು ವ್ಯಕ್ತಿಗಳು ಕೂಡಲೇ ಹಣದ ವ್ಯಾನಿನತ್ತ ಹೋದರು. ಅದರಲ್ಲಿ್ಲ್ದ ಒಂದು ಪೆಟ್ಟಿಗೆಯನ್ನು ಹೊರತೆಗೆದು ಕಾರಿನ ಡಿಕ್ಕಿಗೆ ಹಾಕಿಕೊಂಡರು. ಇದನ್ನು ನೋಡಿದ ಕೆಲವು ಹಾದಿಹೋಕರು ‘ಹಣದ ಪೆಟ್ಟಿಗೆಯನ್ನು ಕಾರಿಗೆ ಏಕೆ ಒಯ್ಯುತ್ತಿದ್ದೀರಿ?’ ಎಂದು ಪ್ರಶ್ನಿಸಿದಾಗ, ‘ಈ ವ್ಯಾನ್ ಕೆಟ್ಟಿದೆ, ಹೀಗಾಗಿ ಕಾರಿನಲ್ಲಿ ಹಣವನ್ನು ಒಯ್ಯಬೇಕಾಗಿದೆ’ ಎಂದರು.
ಅಷ್ಟರಲ್ಲಿ ಅಬ್ದುಲ್ ಮತ್ತವನ ಜತೆಗಿದ್ದ ವ್ಯಕ್ತಿ ಚಹಾ ಕುಡಿದು ಬಂದರು. ಚಾಲೂ ಸ್ಥಿತಿಯಲ್ಲೇ ಇದ್ದ ಕಾರಿನಲ್ಲಿ ಇಬ್ಬರೂ ಕುಳಿತರು. ಕಾರು ಅಲ್ಲಿಂದ ಹೊರಟುಹೋಯಿತು. ಈ ಘಟನೆ ಹತ್ತು ನಿಮಿಷದ ಒಳಗೆ ಮುಗಿದಿತ್ತು. ಎಟಿಎಂನಲ್ಲಿ ಹಣ ತುಂಬಿಸಿದ ನಂತರ ಆ ಸಿಬ್ಬಂದಿ ವ್ಯಾನಿನ ಬಳಿ ವಾಪಸಾದಾಗ ಚಾಲಕ ಅಬ್ದುಲ್ ಇರದಿದ್ದುದನ್ನು ಕಂಡು ಗಾಬರಿಯಾದರು. ವ್ಯಾನಿನ ಒಳಗೆ ಪರೀಕ್ಷಿಸಿದಾಗ ಹಣದ ಪೆಟ್ಟಿಗೆಯೊಂದು ನಾಪತ್ತೆಯಾಗಿತ್ತು. ಅಕ್ಕಪಕ್ಕದವರು ನಡೆದ ಘಟನೆಯನ್ನು ತಿಳಿಸಿದರು. ಬಂದಿದ್ದ ಕಾರು ಸ್ವಿಫ್ಟ್ ಎಂದು ತಿಳಿದರೂ ಅದರ ನೋಂದಣಿ ಸಂಖ್ಯೆ ತಿಳಿಯಲಿಲ್ಲ. ಸಿಬ್ಬಂದಿ ಕೂಡಲೇ ಸಂಸ್ಥೆಯ ಮ್ಯಾನೇಜರಿಗೆ ಕರೆ ಮಾಡಿದರು. ಅವರು ಅಲ್ಲಿಗಾಗಮಿಸಿ ‘ಚಾಲಕ ಅಬ್ದುಲ್ ಇತರರ ಸಹಾಯದಿಂದ ವ್ಯಾನಿನಲ್ಲಿದ್ದ -ಠಿ; 75 ಲಕ್ಷ ಕಳವು ಮಾಡಿದ್ದಾನೆ’ ಎಂದು ದೂರಿತ್ತರು. ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು.
ಪೊಲೀಸರು ವ್ಯಾನ್ ನಿಂತಿದ್ದ ಪ್ರದೇಶದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಚಾಲಕ ಅಬ್ದುಲ್ ಇತರ ಮೂವರೊಡನೆ ಕಾರಿನಲ್ಲಿ ಹೋದದ್ದು ದಾಖಲಾಗಿತ್ತು. ಅಬ್ದುಲ್ನ ಸೆಲ್ಫೋನ್, ಮನೆವಿಳಾಸ ಮುಂತಾದ ವಿವರಗಳನ್ನು ಸಂಗ್ರಹಿಸಿದಾಗ ಆತ ಅಸ್ಸಾಂ ಮೂಲದವನಾಗಿದ್ದು, ಒಂದು ರೂಮಿನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಎಂದು ತಿಳಿಯಿತು. ಅವನ ಫೋನನ್ನು ಲೊಕೇಷನ್ ಸರ್ಚ್ಗೆ ಹಾಕಿದಾಗ ಅದು ಹಾಸನದ ಬಳಿ ಇದ್ದು, ನಂತರ ಸ್ವಿಚ್ ಆಫ್ ಆಗಿತ್ತು. ಪೊಲೀಸ್ ತಂಡಗಳು ಹಾಸನ ಮತ್ತು ಅಸ್ಸಾಂಗೆ ಹೋದವು. ಅಸ್ಸಾಂನಲ್ಲಿ ಅಬ್ದುಲ್ನ ಮನೆಯವರು, ‘ಆತನಿಗೆ 28 ವರ್ಷ ವಯಸ್ಸಾಗಿದ್ದು, ಮದುವೆಯಾಗಿಲ್ಲ. ಕಳೆದೊಂದು ವಾರದಿಂದ ಆತ ಫೋನ್ ಮಾಡಿಲ್ಲ’ ಎಂದರು. ಹಾಸನದಲ್ಲಿಯೂ ಸುಳಿವು ಸಿಗಲಿಲ್ಲ. ಆರು ತಿಂಗಳಾದರೂ ಪ್ರಕರಣ ನಾಪತ್ತೆಯಾಗಿಯೇ ಉಳಿದು ಕಡತಗಳಲ್ಲಿ ಹೂತುಹೋಯಿತು.
ಅದೇ ನವೆಂಬರ್ 26ರಂದು ಹಾಸನ ಜಿಲ್ಲೆಯ ಸಕಲೇಶಪುರ ಗ್ರಾಮೀಣ ಠಾಣೆಗೆ ಶಿರಾಡಿಘಾಟಿಯ ವ್ಯೂಪಾಯಿಂಟಿನ ಬಳಿ ದೇಹವೊಂದು ಬಿದ್ದಿದೆ ಎಂಬ ಮಾಹಿತಿ ಬಂತು. ಪೊಲೀಸರು ಘಟನಾ ಸ್ಥಳಕ್ಕೆ ಹೋದರು. ಮೃತ ವ್ಯಕ್ತಿ ಪುರುಷನಾಗಿದ್ದು, ದೇಹ ಕೊಳೆತ ಸ್ಥಿತಿಯಲ್ಲಿತ್ತು. ಶವದ ಯಾವುದೇ ಗುರುತು ಸಿಗಲಿಲ್ಲ. ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿದ ಪೊಲೀಸರು ಶವದ ಮಹಜರ್ ಮಾಡಿ ಮರಣೋತ್ತರ ಪರೀಕ್ಷೆಗಾಗಿ ಅದನ್ನು ಸರ್ಕಾರಿ ಆಸ್ಪತ್ರೆಗೆ ಕಳಿಸಿದರು. ಸಾವಿನ ಕಾರಣವೇನೆಂದು ವೈದ್ಯರಿಗೂ ತಿಳಿಯಲಿಲ್ಲ. ಮೃತನ ತಲೆಬುರುಡೆ ಮತ್ತು ಡಿಎನ್ಎ ಮಾದರಿ ರಕ್ಷಿಸಿ ಶವವನ್ನು ದಫನ್ ಮಾಡಲಾಯಿತು. ತನಿಖೆ ಅಲ್ಲಿಯೇ ನಿಂತಿತು.
2020ರ ಅಂತ್ಯಭಾಗದಲ್ಲಿ ಪೊಲೀಸ್ ಮಾಹಿತಿದಾರನೊಬ್ಬ ಕೆ.ಜಿ.ಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್ ಬಳಿ ಬಂದು ತಾನು ಅದೇ ಬಡಾವಣೆಯ ಬಾರಿನಲ್ಲಿ ಕುಳಿತಿದ್ದಾಗ ಮೂವರು ಕ್ಯಾಬ್ ಚಾಲಕರು ಕಂಠಪೂರ್ತಿ ಮದ್ಯಪಾನ ಮಾಡಿ ತಾವು ಹಣ ಕದ್ದ ವಿಷಯ ಎರಡು ವರ್ಷವಾದರೂ ಬೆಳಕಿಗೆ ಬರಲಿಲ್ಲ, ಚಿಯರ್ಸ್ ಎನ್ನುತ್ತಿದ್ದುದನ್ನು ಕೇಳಿಸಿಕೊಂಡೆ ಎಂದ. ಕೆಲವೇ ತಿಂಗಳ ಹಿಂದೆ ಆ ಠಾಣೆಯ ಪ್ರಭಾರ ವಹಿಸಿಕೊಂಡಿದ್ದ ಪ್ರಕಾಶ್ ಸಿಬ್ಬಂದಿಯನ್ನು ಈ ಬಗ್ಗೆ ವಿಚಾರಿಸಿದಾಗ ಬ್ಯಾಂಕಿನ ನಗದನ್ನು ಕದ್ದ ಪ್ರಕರಣದ ಬಗ್ಗೆ ತಿಳಿಯಿತು. ಸದರಿ ಚಾಲಕರ ಬಗ್ಗೆ ವಿಚಾರಿಸಿ ಅವರಲ್ಲೊಬ್ಬನಾದ ಕುಮಾರ್ (23 ವರ್ಷ)ನನ್ನು ಪೊಲೀಸರು ಠಾಣೆಗೆ ಕರೆತಂದರು. ಆತನನ್ನು ಕೂಲಂಕಶವಾಗಿ ವಿಚಾರಿಸಿದಾಗ ಹೀಗೆ ಹೇಳಿದ:
‘‘ನಾನು ಮತ್ತು ನನ್ನ ಸ್ನೇಹಿತ ಪ್ರಸನ್ನ ಕೆಲವು ತಿಂಗಳ ಕಾಲ ಎಟಿಎಂಗಳಿಗೆ ಹಣ ತುಂಬುವ ಸಂಸ್ಥೆಯಲ್ಲಿ ವ್ಯಾನಿನ ಚಾಲಕರಾಗಿದ್ದು, ಕೆಲವೇ ತಿಂಗಳುಗಳ ಹಿಂದೆ ಕೆಲಸಕ್ಕೆ ರಾಜೀನಾಮೆ ನೀಡಿದ್ದೆವು. ನಂತರ ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದೆವು. ಮಧುಸೂದನ್ ಮತ್ತು ಮಹೇಶ್ ಎನ್ನುವ ಕ್ಯಾಬ್ ಚಾಲಕರು ನಮ್ಮ ಸ್ನೇಹಿತರಾದರು. ಒಂದು ರಾತ್ರಿ ನಾವೆಲ್ಲರೂ ಮದ್ಯಪಾನ ಮಾಡುತ್ತಿರುವಾಗ ಪ್ರಸನ್ನ ತನಗೆ ಬೇಗನೇ ಹಣಮಾಡುವ ಉಪಾಯ ಗೊತ್ತೆಂದು ಹೇಳಿ ನಾವಿದ್ದ ಸಂಸ್ಥೆಯ ವ್ಯಾನಿನಿಂದ ನಗದನ್ನು ಕದಿಯುವ ಯೋಜನೆ ತಿಳಿಸಿದ. ನಾವು ಅವನ ಸಹಚರರಾಗಲು ಒಪ್ಪಿದೆವು.
ಮೂರು ದಿನಗಳ ಕಾಲ ಅದೇ ವ್ಯಾನನ್ನು ಹಿಂಬಾಲಿಸಿ ಯಾವ ಜಾಗದಲ್ಲಿ ಎಷ್ಟು ಕಾಲ ನಿಲ್ಲುತ್ತದೆ ಎನ್ನುವುದನ್ನು ತಿಳಿದುಕೊಂಡೆವು. ಕೆ.ಜಿ.ಹಳ್ಳಿಯಲ್ಲಿ ಹೆಚ್ಚು ಸಮಯ ಅದು ನಿಲ್ಲುವುದರಿಂದ ಅಲ್ಲಿಯೇ ಹಣ ದೋಚುವ ಕಾರ್ಯತಂತ್ರ ರೂಪಿಸಿದೆವು. ಪ್ರಸನ್ನನಿಗೆ ವ್ಯಾನಿನ ಚಾಲಕ ಅಬ್ದುಲ್ನ ಪರಿಚಯವಿದ್ದು ಅವನ ಸಹಕಾರ ಕೋರಲಾಯಿತು. ಆತ ಕೃತ್ಯದಲ್ಲಿ ಶಾಮೀಲಾಗಲು ಒಪ್ಪಿದ. ಘಟನೆಯ ದಿನ ನಾವು ನಾಲ್ಕೂ ಜನರು ನಮ್ಮ ಮೊಬೈಲ್ ಫೋನುಗಳನ್ನು ಬೇಕೆಂತಲೇ ನಮ್ಮೊಡನೆ ಒಯ್ಯಲಿಲ್ಲ. ನನ್ನ ಕಾರನ್ನೇ ಕೃತ್ಯಕ್ಕೆ ಬಳಸಿದೆವು. ಹಣ ದೋಚಿದ ಬಳಿಕ ಮಂಗಳೂರಿನ ಕಡೆಗೆ ಹೊರಟೆವು. ಕುಣಿಗಲ್ ತಲುಪಿದ ನಂತರ ನಿರ್ಜನ ಪ್ರದೇಶದಲ್ಲಿ ಕಾರನ್ನು ನಿಲ್ಲಿಸಿ ಹಣದ ಪೆಟ್ಟಿಗೆ ಒಡೆದೆವು. ಅದರಲ್ಲಿ -ಠಿ; 75 ಲಕ್ಷ ನಗದು ಇತ್ತು. ಆ ಹಣವನ್ನು ಬ್ಯಾಗಿಗೆ ಹಾಕಿಕೊಂಡ ಪ್ರಸನ್ನ ಖಾಲಿ ಪೆಟ್ಟಿಗೆಯನ್ನು ರಸ್ತೆ ಪಕ್ಕದ ಕೆರೆಗೆ ಎಸೆದ. ನಂತರ ಆತ ಅಬ್ದುಲ್ಗೆ 5 ಲಕ್ಷ ರೂ. ಕೊಟ್ಟು, ‘ನೀನು ಮಂಗಳೂರು ತಲುಪಿದ ನಂತರ ಊರಿಗೆ ಹೋಗಿಬಿಡು’ ಎಂದ.
ಕಾರು ಹಾಸನಕ್ಕೆ ಬಂದಾಗ ಅಬ್ದುಲ್ಗೆ ತನ್ನ ಮೇಲೆ ಹಣ ಕದ್ದ ಆರೋಪ ಬರುತ್ತದೆ ಎಂದು ಹೆದರಿಕೆಯಾಗತೊಡಗಿತು. ‘ನನಗೆ ನಿಮ್ಮ ಹಣ ಬೇಡ, ನನ್ನನ್ನು ಇಲ್ಲಿಯೇ ಇಳಿಸಿ, ಊರಿಗೆ ವಾಪಸಾಗುತ್ತೇನೆ’ ಎಂದ. ಅವನನ್ನು ಅಲ್ಲಿಯೇ ಇಳಿಸಿದರೆ ಆತ ನಮ್ಮ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬಹುದೆಂದು ಊಹಿಸಿ ಅವನನ್ನು ಕೊಲೆ ಮಾಡಲು ತೀರ್ವನಿಸಿದೆವು. ಕಾರು ಹಾಸನ ದಾಟಿದ ಕೂಡಲೇ ಮಹೇಶ್ ಮತ್ತು ಮಧು ಟವಲ್ನಲ್ಲಿ ಅಬ್ದುಲ್ ಕುತ್ತಿಗೆಯನ್ನು ಬಿಗಿದು ಅವನನ್ನು ಕೊಲೆ ಮಾಡಿದರು. ನಂತರ ಅವನ ಜೇಬಿನಲ್ಲಿದ್ದ ಹಣ, ಮೊಬೈಲ್, ಐಡಿ ಕಾರ್ಡ್ ಮತ್ತಿತರ ವಸ್ತುಗಳನ್ನು ತೆಗೆದಿಟ್ಟುಕೊಂಡೆವು. ಅವನ ಮೊಬೈಲ್ ರಸ್ತೆಗೆಸೆದೆವು. ಶಿರಾಡಿ ಘಾಟಿಯ ಬಳಿ ಕಾರನ್ನು ನಿಲ್ಲಿಸಿ ಅಬ್ದುಲ್ ಶವವನ್ನು ಪ್ರಪಾತಕ್ಕೆ ಎಸೆದೆವು. ನಂತರ ಮಂಗಳೂರಿಗೆ ಹೋಗಿ ಅಲ್ಲಿ ಕೆಲವು ದಿವಸ ಕಳೆದು ಅಲ್ಲಿಂದ ಶ್ರೀರಂಗಪಟ್ಟಣಕ್ಕೆ ಬಂದೆವು.
ಅಲ್ಲಿ ನಾವೆಲ್ಲರೂ ಹಣ ಹಂಚಿಕೊಂಡು ಮನೆ ಮತ್ತು ಜಮೀನನ್ನು ಖರೀದಿಸಿದೆವು. ಪ್ರಸನ್ನ ಮೈಸೂರಿಗೆ ಹೋಗಿ ಎಳನೀರು ವ್ಯಾಪಾರ ಪ್ರಾರಂಭಿಸಿದ. ನಾವು ಮೂರು ಜನ ಬೆಂಗಳೂರಿನಲ್ಲಿ ಓಲಾ ಕ್ಯಾಬ್ ಓಡಿಸಿಕೊಂಡು ಜೀವಿಸುತ್ತಿದ್ದೇವೆ’’.
ಅವನ ಹೇಳಿಕೆ ಮೇರೆಗೆ ಎರಡೇ ದಿನಗಳಲ್ಲಿ ಮಧುಸೂದನ್, ಪ್ರಸನ್ನ ಮತ್ತು ಮಹೇಶ್ ಎನ್ನುವವರನ್ನು ಬಂಧಿಸಲಾಯಿತು. ಮೂವರೂ 23ರಿಂದ 25 ವರ್ಷ ವಯಸ್ಸಿನವರಾಗಿದ್ದು ಅಬ್ದುಲ್ನ ಶವವನ್ನು ಶಿರಾಡಿಯಲ್ಲಿ ಎಸೆದಿದ್ದ ಜಾಗವನ್ನು ತೋರಿಸಿದರು. ‘ಆ ಜಾಗದಲ್ಲಿ ಯಾವುದಾದರೂ ಶವ ದೊರಕಿತ್ತೇ?’ ಎಂದು ಸಕಲೇಶಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದಾಗ ಸೆಪ್ಟೆಂಬರ್ ತಿಂಗಳಾಂತ್ಯದಲ್ಲಿ ಸಿಕ್ಕ ಶವದ ಮಾಹಿತಿ ದೊರಕಿತು. ಆ ಪ್ರಕರಣದ ಕಡತದಲ್ಲಿದ್ದ ಮೃತನ ಚಿತ್ರವನ್ನು ಅಬ್ದುಲ್ನದ್ದೇ ಎಂದು ಆರೋಪಿಗಳು ತಿಳಿಸಿದರು.
ಆರೋಪಿಗಳು ನೀಡಿದ ಮಾಹಿತಿ ಮೇರೆಗೆ 3.50 ಲಕ್ಷ ನಗದು ಹಣ, ಕೆರೆಯಲ್ಲಿ ಎಸೆದಿದ್ದ ಎಟಿಎಂ ಹಣದ ಖಾಲಿ ಪೆಟ್ಟಿಗೆ, ಎರಡು ಕಾರು ಮತ್ತು 122 ಗ್ರಾಂ ಚಿನ್ನಾಭರಣಗಳನ್ನು ಇನ್ಸ್ಪೆಕ್ಟರ್ ಪ್ರಕಾಶ್ ಜಪ್ತಿ ಮಾಡಿದರು. ಆರೋಪಿಗಳು ಕಳ್ಳತನ ಮಾಡಿದ ಹಣದಿಂದ ಖರೀದಿಸಿದ ಆಸ್ತಿಗಳನ್ನು ಮುಟ್ಟುಗೋಲು ಹಾಕುವ ಪ್ರಯತ್ನ ನಡೆದಿದೆ. ಎಲ್ಲರೂ ಜೈಲಿನಲ್ಲಿದ್ದಾರೆ.
‘ಸುರೆಯ ಹಿರಿದುಂಡವನು ಕರಿಯ ಕರ ತುಡುಕುವನು, ಪರನರಿಗೆರಡ ಎಣಿಸುವನು ಇವರಿಗೆ ಮರಣ ಕಂಡಯ್ಯ ಸರ್ವಜ್ಞ’ ಎಂಬಂತೆ ಕುಡಿತದ ಅಮಲಿನಲ್ಲಿ ಆರೋಪಿಗಳು ಕೃತ್ಯದ ಬಗ್ಗೆ ಮಾತನಾಡದೇ ಹೋಗಿದ್ದಲ್ಲಿ ಈ ಭೀಕರ ಅಪರಾಧ ಬೆಳಕಿಗೇ ಬರುತ್ತಿರಲಿಲ್ಲವೇನೋ?
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)