ಔಷಧಗಳ ಸೇವನೆಯ ಹೊತ್ತಿಗೆ ಸಂಬಂಧಿಸಿ ಪ್ರಾಚೀನ ವೈದ್ಯವಿಜ್ಞಾನಿಋಷಿಗಳು ಕುತೂಹಲಕಾರಿ ಸಂಗತಿಗಳನ್ನು ಉಪದೇಶಿಸಿದ್ದಾರೆ. ಆಧುನಿಕ ವೈದ್ಯವಿಜ್ಞಾನವು ಆಹಾರದ ಮೊದಲು, ಆಹಾರದ ನಂತರ, ಆಗಾಗ, ಅಗತ್ಯವಿದ್ದಾಗ, ರಾತ್ರಿ ಮಲಗುವ ಮುಂಚೆ ಹೀಗೆ ಐದು ಕಾಲಗಳನ್ನಷ್ಟೇ ಹೇಳಿದೆ. ಆಯುರ್ವೆದದ ಗ್ರಂಥಗಳಲ್ಲಿ ಹನ್ನೊಂದು ಔಷಧ ಸೇವನಾ ಕಾಲಗಳನ್ನು ಪರಾಮಶಿಸಲಾಗಿದೆ. ಚರಕ ಸಂಹಿತೆಯಲ್ಲಿ ಒಂಬತ್ತು, ಸುಶ್ರುತ ಸಂಹಿತೆಯಲ್ಲಿ ಹತ್ತು, ಅಷ್ಟಾಂಗ ಸಂಗ್ರಹ ಗ್ರಂಥದಲ್ಲಿ ಹನ್ನೊಂದು ಕಾಲಗಳನ್ನು ಔಷಧ ಸೇವನೆಗೆ ಯುಕ್ತವೆಂದು ನಿರ್ದೇಶಿಸಿದ್ದಾರೆ.
ಅಭಕ್ತ: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಔಷಧ ಸೇವನೆ. ಪ್ರಾಗ್ಭಕ್ತ: ಆಹಾರ ಸೇವನೆಗೆ ಮೊದಲು ಔಷಧದ ಸೇವನೆ. ಅಂದರೆ 48 ನಿಮಿಷಗಳ ಅವಧಿಯಲ್ಲಿ ಎಂಬುದಾಗಿ ಗ್ರಾಹ್ಯವಾಗುತ್ತದೆ. ಅಧೋಭಕ್ತ: ಆಹಾರ ತೆಗೆದುಕೊಂಡ ಬಳಿಕ ಅಂದರೆ ಆಹಾರ ಸೇವನೆ ಮುಗಿಸಿದ 48 ನಿಮಿಷಗಳ ಒಳಗಾಗಿ ಎಂದರ್ಥ. ಮಧ್ಯಭಕ್ತ: ಆಹಾರ ಸೇವನೆಯ ಮಧ್ಯದ ಸಮಯದಲ್ಲಿ. ಅಂತರ್ಭಕ್ತ : ಎರಡು ಮುಖ್ಯ ಆಹಾರ ಸೇವನೆಯ ಮಧ್ಯದ ಸಮಯದಲ್ಲಿ. ಸಾಮುದ್ಗ: ಆಹಾರ ತೆಗೆದುಕೊಳ್ಳುವುದರ ಮೊದಲು ಹಾಗೂ ನಂತರ ಎರಡು ಬಾರಿ ಔಷಧವನ್ನು ಸೇವಿಸುವುದು. ಸಮಭಕ್ತ: ಆಹಾರದ ಜೊತೆ ಮಿಶ್ರಣ ಮಾಡಿ ಸೇವಿಸುವುದು. ಇದಕ್ಕೆ ಸಭಕ್ತ, ಸಂಯುಕ್ತ ಭಕ್ತ ಎಂಬ ಹೆಸರುಗಳೂ ಇವೆ. ಔಷಧವನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳಲು ಹೇಸುವವರಲ್ಲಿ ಹಾಗೂ ಚಿಕ್ಕ ಮಕ್ಕಳಲ್ಲಿ ಇದು ಅನುಕೂಲಕರ ವಿಧಾನ. ಮುಹುರ್ವುುಹು : ಆಗಾಗ ಔಷಧವನ್ನು ನೀಡುವುದು. ಇಲ್ಲಿ ಆಹಾರದ ವೇಳೆಗೂ ಔಷಧಕ್ಕೂ ನೇರ ಸಂಬಂಧವಿಲ್ಲ. ವಾಂತಿ, ಬಿಕ್ಕಳಿಕೆ, ಅತಿ ಬಾಯಾರಿಕೆ, ಅಸ್ತಮಾ, ವಿಷಬಾಧೆ, ಮುಂತಾದ ಸಂದರ್ಭಗಳಲ್ಲಿ ಔಷಧವನ್ನು ಆಗಾಗ ನೀಡಲಾಗುತ್ತದೆ. ಸಗ್ರಾಸ : ಭೋಜನದ ಮೊದಲ ತುತ್ತಿನೊಂದಿಗೆ ಸೇವಿಸುವುದು. ಪಚನಕ್ಕೆ ಸಂಬಂಧಿಸಿದ ರೋಗಗಳಲ್ಲಿ, ಹಸಿವು ಹೆಚ್ಚಿಸುವ ಅಗತ್ಯವಿದ್ದಾಗ ಹಾಗೂ ಲೈಂಗಿಕಶಕ್ತಿ ವರ್ಧಕ ಔಷಧಗಳನ್ನು ಈ ರೀತಿಯಲ್ಲಿ ನೀಡುವುದು ಪದ್ಧತಿ. ಗ್ರಾಸಾಂತರ : ಗ್ರಾಸ ಅಂದರೆ ತುತ್ತು. ಊಟದಲ್ಲಿ ಎರಡು ತುತ್ತುಗಳ ಮಧ್ಯೆ ಬಳಸುವುದು. ಹೃದಯರೋಗಗಳಲ್ಲಿ, ಪ್ರಾಣವಾಯುವಿನ ವ್ಯತ್ಯಯದಲ್ಲಿ ಇಂತಹ ಕ್ರಮವನ್ನು ಕಾಣಬಹುದು. ನಿಶಾ: ಕಣ್ಣು, ಕಿವಿ, ಮೂಗುಗಳ ವ್ಯಾಧಿಗಳಿದ್ದಾಗ, ವಾಂತಿಯಿದ್ದಾಗ, ಮಾನಸಿಕ ರೋಗಗಳಲ್ಲಿ ಹಾಗೂ ನಿದ್ರೆಗೆ ಸಂಬಂಧಿಸಿದ ತೊಂದರೆಗಳಲ್ಲಿ ಔಷಧಿಗಳನ್ನು ರಾತ್ರಿಯ ಊಟದ ಬಳಿಕ ಮಲಗುವ ಮುನ್ನ ನೀಡುವುದಿದೆ. ಇಂತಹ ವಿಶಿಷ್ಟ, ವಿವಿಧತೆಯ ವಿವರಗಳನ್ನು ನೋಡಿದಾಗ ಪ್ರತಿಯೊಂದು ಸೂಕ್ಷ್ಮ ವಿಚಾರಗಳಿಗೂ ಆಯುರ್ವೆದ ನೀಡಿದ ಮಹತ್ವ ಗೋಚರವಾಗುತ್ತದೆ. ಚಿಕಿತ್ಸೆಯ ಯಶಸ್ಸು ಹಾಗೂ ಆರೋಗ್ಯದ ಮರ್ಮ ಚಿಕಿತ್ಸೆಯ ಪ್ರತಿಯೊಂದು ಹೆಜ್ಜೆಯಲ್ಲಿದೆ.