ಅಂಕಣ

ಸಿಂಹಪರಾಕ್ರಮ ಪ್ರಯತ್ನದಿಂದಲೇ ಸಫಲತೆಯ ಸಿಹಿ

'Nothing in this world can prevent you from getting what you deserve' ಅರ್ಥಾತ್ ‘ನಿನ್ನ ಅರ್ಹತೆಯಿಂದ ನೀನು ಪಡೆಯಬೇಕಾದದ್ದನ್ನು ತಡೆಯಲು ಈ ಪ್ರಪಂಚದಲ್ಲಿ ಯಾವುದಕ್ಕೂ ಸಾಧ್ಯವಿಲ್ಲ’ ಎಂದು ವಿಶ್ವ ವಿಜೇತ ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಇಂಥ ಅದ್ಭುತ ಚಿಂತನೆಗಳೇ ಯಶಸ್ವಿ ಜೀವನಕ್ಕೆ ಮೆಟ್ಟಿಲುಗಳು! ಎಂಥ ಭರವಸೆಯನ್ನು ಹುಟ್ಟಿಸುತ್ತೆ ಈ ಮಾತು! ನಾನೇಕೆ ಜಯಶಾಲಿಯಾಗಲಿಲ್ಲ ಎಂದು ಹಗಲೂ ಇರುಳೂ ಕರುಬುವುದರ ಬದಲು ನಮ್ಮನ್ನೇ ನಾವು ಕನ್ನಡಿಯಲ್ಲಿ ನೋಡಿಕೊಂಡು ಎಲ್ಲಿ ಎಡವುತ್ತಿದ್ದೇವೆ, ಎಲ್ಲಿ ಕೊರತೆಗಳನ್ನು ಅನುಭವಿಸುತ್ತಿದ್ದೇವೆ, ಎಲ್ಲಿ ಇನ್ನೂ ಪರಿಪೂರ್ಣತೆಯ ಅಭಾವವಿದೆ ಎಂಬುದನ್ನು ವಿಶ್ಲೇಷಿಸುವತ್ತ ಗಮನಹರಿಸಬೇಕಾದ್ದೇ ವಿವೇಕಿಯ ಮುಂದಿರುವ ಪರ್ಯಾಯ.

ಕತ್ತಲಲ್ಲಿ ತಡಕಾಡುತ್ತಿರುವ ವ್ಯಕ್ತಿಗೆ ದೀಪವನ್ನು ಹಿಡಿದು ದಾರಿಯನ್ನು ತೋರಿಸುವ ಅದ್ಭುತ ಮಾತುಗಳು ಇವು. ಇವೆಲ್ಲ ಅವರ ಅನುಭವದ ಅಮೃತ. ಅನುಭವಕ್ಕಿಂತ ದೊಡ್ಡ ಗುರು ಈ ಜಗತ್ತಿನಲ್ಲೇ ಇಲ್ಲ. ಅನುಭವಗಳು ಕಹಿಯಾಗಿರಲಿ, ಸಿಹಿಯಾಗಿರಲಿ ಮಹಾತ್ಮ ಅದನ್ನು ದೀಪವನ್ನಾಗಿಸಿ ಮುಂದಿನ ತಲೆಮಾರಿಗೆ ದಾನ ಮಾಡುತ್ತಾನೆ. ಈ ದೀಪದಾನಕ್ಕಿಂತ ದೊಡ್ಡದಾನ ಯಾವುದೂ ಇಲ್ಲ. ಅದು ನಮ್ಮನ್ನು ಎಷ್ಟೋ ಅಪಾಯಗಳಿಂದ ರಕ್ಷಿಸುತ್ತದೆ. ತನಗೆ ಬಂದ ಕಷ್ಟಗಳು ಇತರರಿಗೆ ಬರುವುದು ಬೇಡ; ಮುಂದಿನ ತಲೆಮಾರು ಈ ಕಷ್ಟಗಳಿಂದ ಪಾರಾಗಿ ಸುಸೂತ್ರವಾಗಿ ಜೀವನವನ್ನು ನಡೆಸಿಕೊಂಡು ಹೋಗಲಿ ಎಂದು ಚಿಂತಿಸಿದ ಮಹಾತ್ಮ ತನ್ನ ನಲ್ನುಡಿ, ಜಾಣ್ಣುಡಿಗಳ ಮೂಲಕ ಈ ವಿವೇಕವನ್ನು ಎಳೆಯರಿಗೆ ವರ್ಗಾಯಿಸುತ್ತಾನೆ. ಆದ್ದರಿಂದಲೇ ಯಾವುದೇ ಜ್ಞಾನವಿತರಣಾ ಕಾರ್ಯಕ್ರಮವು ದೀಪ ಬೆಳಗುವುದರೊಂದಿಗೆ ಪ್ರಾರಂಭವಾಗುತ್ತದೆ. ಶ್ರೀಕೃಷ್ಣ ಕೂಡ ಭಗವದ್ಗೀತೆಯಲ್ಲಿ ಅರ್ಜುನನಿಗೆ ಹಿರಿಯರ ಮಾರ್ಗದರ್ಶನ ಮತ್ತು ಅನುಭವಗಳ ಬೆಳಕಿನಲ್ಲೇ ಬದುಕಬೇಕು ಅದು ಬಿಟ್ಟು ತನ್ನಿಷ್ಟದಂತೇ ನಡೆದರೆ ಇಹವೂ ಇಲ್ಲ ಪರವೂ ಇಲ್ಲ ಎಂದಿದ್ದಾನೆ.

ಯಃ ಶಾಸ್ತ್ರ ವಿಧಿಂ ಉತ್ಸೃಜ್ಯ ವರ್ತತೇ ಕಾಮಕಾರತಃ |

ನ ಸ ಸಿದ್ಧಿಂ ಅವಾಪ್ರೋತಿ ಅಸುಖಂ ನ ಪರಾಂಗತಿಂ ||

ತಸ್ಮಾತ್ ಶಾಸ್ತ್ರಂ ಪ್ರಮಾಣಂ ತೇ ಕಾರ್ಯಾಕಾರ್ಯೌ ವ್ಯವಸ್ಥಿತೌ |

ಎಂದು ಎಚ್ಚರಿಸುತ್ತಾನೆ. ಇಂತಹ ಜಾಣ್ಣುಡಿಗಳನ್ನೇ ಶಾಸ್ತ್ರ ಎಂದು ಕರೆಯುವುದು. ಎಷ್ಟೋ ಜನ ಇದನ್ನು ಗಮನಿಸದೆ ಶಾಸ್ತ್ರವೆಂದರೆ ಕುಹಕವಾಡುವುದುಂಟು. ಏಕೆಂದರೆ ಅವರ ಜ್ಞಾನದ ಪರಿಧಿಯಲ್ಲಿ ಶಾಸ್ತ್ರ ಎಂದರೆ ಗಿಣಿಶಾಸ್ತ್ರವೋ ಮತ್ತೇನೋ ಅಷ್ಟೇ ಆದರೆ ನಿಜವಾಗಿಯೂ ಶಾಸ್ತ್ರ ಎಂದರೆ ವಿಧಿ ಮತ್ತು ನಿಷೇಧಗಳ ಸಂಗ್ರಹ. ಅರ್ಥಾತ್ ಏನು ಮಾಡಬೇಕು, ಏನು ಮಾಡಬಾರದು ಎಂಬುದರ ವಿವರಣೆ.

ಇಲ್ಲಿ ವಿವೇಕಾನಂದರು ಎಚ್ಚರಿಸುತ್ತಿರುವುದು ‘ನಿನಗೆ ನೀನು ಬಯಸಿದ್ದು ಸಿಗಲಿಲ್ಲವೆಂದಲ್ಲಿ ನಿನ್ನ ಅರ್ಹತೆ ಇನ್ನೂ ಸಾಲದೆಂದು’. ಪ್ರತಿಯೊಂದು ಸ್ಥಾನಕ್ಕೂ ಒಂದು ಅರ್ಹತೆ ಇದೆ. ಅರ್ಹತೆ ಎಂದರೆ ಒಂದು ಸ್ಥಾನದಲ್ಲಿ ಯಶಸ್ವಿಯಾಗಲು, ಅದಕ್ಕೆ ಸಂಬಂಧಿಸಿದ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಲು ಅವಶ್ಯಕವಿರುವ ಕೆಲವು ಲಕ್ಷಣಗಳು! ಲಕ್ಷಣಗಳು ಎಂದರೇನು? ಕೆಲವು ಸಾಮರ್ಥ್ಯಗಳು ಮತ್ತು ಕೆಲವು ಸದ್ಗುಣಗಳು; ಅಷ್ಟೇ ತಾನೇ? ಆದರೆ ಎಲ್ಲರಿಗೂ ಇವು ಹುಟ್ಟಿನಿಂದಲೇ ಬಂದಿರುವುದಿಲ್ಲ. ಅಷ್ಟೇಕೆ! ಬಹಳಷ್ಟು ಜನರಿಗೆ ಶಿಕ್ಷಣದ ನಂತರವೂ ಇರುವುದಿಲ್ಲ. ಇವುಗಳನ್ನು ಕಲಿಯುವುದಕ್ಕಾಗಿಯೇ ಸಂಬಂಧಿಸಿದ ಕೋರ್ಸ್​ಗಳನ್ನು ತೆಗೆದುಕೊಂಡು ತರಬೇತಿ ಪಡೆಯುತ್ತಾರೆ. ಒಂದು ಪರೀಕ್ಷೆಯಲ್ಲಿ ತೇರ್ಗಡೆಯಾದ ತಕ್ಷಣ ಆ ತರಬೇತಿ ಮುಗಿದಿದೆ ಎಂದೂ ಭಾವಿಸಿ ಬಿಡುತ್ತಾರೆ. ಇಂದಿನ ಭಾರತದ ಹಲವಾರು ಇಲಾಖೆಗಳಲ್ಲಿ ದಕ್ಷತೆ, ಕಾರ್ಯಶೀಲತೆ, ಸೇವಾತತ್ಪರತೆ, ವೃತ್ತಿಧರ್ಮ, ಬದ್ಧತೆಗಳು ಕಣ್ಮರೆಯಾಗಿ ಭ್ರಷ್ಟತೆ ಮಾತ್ರ ಸರ್ವವ್ಯಾಪಿಯಾಗಿರುವುದಕ್ಕೂ ಕಾರಣ ಈ ಅರ್ಹತೆಯನ್ನು ಸದ್ಗುಣ ಮತ್ತು ಸಾಮರ್ಥ್ಯಗಳ ಸಂಯೋಗ ಎನ್ನುವುದರ ಬದಲು ಪರೀಕ್ಷೆಯಲ್ಲಿ ತೇರ್ಗಡೆ ಎಂಬ ಅವೈಜ್ಞಾನಿಕ ಸೂಚಕದೊಂದಿಗೆ ಸಮೀಕರಿಸುತ್ತಿರುವುದೇ ಆಗಿದೆ.

ಆದರೆ ಸ್ವಾಮಿ ವಿವೇಕಾನಂದರು ಇನ್ನೂ ಮುಂದೆ ಹೋಗಿ ಈ ಸದ್ಗುಣ ಮತ್ತು ಸಾಮರ್ಥ್ಯಗಳು ನಮ್ಮ ಸ್ವಭಾವವೇ ಆಗಿಬಿಡುವುವವರೆಗೂ ಬಿಡಬಾರದು ಎನ್ನುತ್ತಾರೆ. ಅವು ಸ್ವಭಾವವೇ ಆಗಬೇಕಾದರೆ ಏನು ಮಾಡಬೇಕು? ಇಂಗ್ಲಿಷಿನಲ್ಲಿ ಇದನ್ನು ಚೆನ್ನಾಗಿ ಹೇಳುತ್ತಾರೆ. ನಿನ್ನ "Nature' ನಲ್ಲಿಲ್ಲದಿರುವುದನ್ನು Nurture ಮಾಡು ಎಂದು. ಏಕೆಂದರೆ ಯಾವುದನ್ನು ತೀವ್ರವಾಗಿ Nurture ಮಾಡುತ್ತೇವೆಯೋ ಅದೊಂದು ದಿನ ನಮ್ಮ Nature ಆಗಿಬಿಡುವುದು. Nurture ಎಂದರೆ ನಮ್ಮ ಸ್ವಭಾವವನ್ನು ಇಚ್ಛಿಸಿದ ರೀತಿಯಲ್ಲಿ ಬದಲಾಯಿಸಲು ನಮ್ಮ ಸುತ್ತಲಿನ ವಾತಾವರಣವನ್ನು ಪುನರ್ನಿರ್ವಿುಸುವುದು. ಪ್ರತಿನಿತ್ಯದ ದಿನಚರಿ, ಹವ್ಯಾಸಗಳು ಮತ್ತು ಆದ್ಯತೆಗಳನ್ನು ವ್ಯವಸ್ಥಿತಗೊಳಿಸುವುದು. ಹವ್ಯಾಸಗಳನ್ನು ಆದ್ಯತೆಯ ಆಧಾರದ ಮೇಲೆ ಪುನರ್ರಚಿಸಿಕೊಂಡು ಭವಿಷ್ಯದ ವ್ಯಕ್ತಿತ್ವಕ್ಕೆ ಯಾವ ಗುಣಗಳು ಮತ್ತು ಸಾಮರ್ಥ್ಯಗಳು ನಮ್ಮ ಸ್ವಭಾವವೇ ಆಗಿಬಿಡಬೇಕೋ ಅವುಗಳು ಕ್ರಮೇಣ ನಮ್ಮಲ್ಲಿ ಬೆಳೆಯುತ್ತಿರುವುದನ್ನು ಖಾತ್ರಿಯಾಗಿಸಿಕೊಂಡು ಕ್ರಮಾಗತವಾಗಿ, ಪ್ರಜ್ಞಾಪೂರ್ವಕವಾಗಿ ನಿಶ್ಚಿತ ದಿಕ್ಕಿನಲ್ಲಿ ಪಯಣಿಸುವುದೇ ಈ Nurturing ನ ನಿಜವಾದ ಅರ್ಥ.

"Sow an action and reap a habit; sow a habit and reap a character; sow a character and reap a destiny' ಅರ್ಥಾತ್ ‘ದಿನಚರಿಯಂತೆ ಅಭ್ಯಾಸಗಳು, ಅಭ್ಯಾಸಗಳಂತೆ ವ್ಯಕ್ತಿತ್ವ ಮತ್ತು ವ್ಯಕ್ತಿತ್ವದಂತೆ ಭವಿಷ್ಯ’ ಎಂಬ ಪ್ರಖ್ಯಾತ ಪಾಶ್ಚಾತ್ಯ ಚಿಂತಕ ಸ್ಯಾಮ್ಯುಯೆಲ್ ಸ್ಮೆಲ್ಸ್ರ ಹೇಳಿಕೆ ಎಷ್ಟು ಅರ್ಥಪೂರ್ಣವಾಗಿದೆ. ಇವೆಲ್ಲ ನಮ್ಮ ಜನರಿಗೆ ಗೊತ್ತೇ ಇಲ್ಲ ಎಂದೇನೂ ಅಲ್ಲ. ಕನಿಷ್ಠಪಕ್ಷ ಸಂಬಂಧಿಸಿದ ಕೋರ್ಸ್ ಮಾಡುವ ವ್ಯಕ್ತಿಗಳಂತೂ ಇದನ್ನು ಓದಿಯೇ ಇರುತ್ತಾರೆ. ಆದರೆ ಮೊದಲನೆಯದಾಗಿ ಇಂಥ ನಿಯಮಗಳು ನಾನಾಗಲೇ ಹೇಳಿದ ಹಾಗೆ ಕೇವಲ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದಕ್ಕೆ ಬೇಕಾದ ಸಾಮಗ್ರಿಯಾಗಿ ಉಳಿಯುತ್ತದೆಯೇ ಹೊರತು ಅದನ್ನು ಅಳವಡಿಸಿಕೊಂಡು deserve- ನಾನು ಅರ್ಹನಾಗಿದ್ದೇನೆ- ಎಂದು ಆತ್ಮವಿಶ್ವಾಸದಿಂದ ಎದೆಯುಬ್ಬಿಸಿ ನಡೆಯುವುದಕ್ಕೆ ಆಗುತ್ತಿಲ್ಲ.

ಕೆಲವು ವ್ಯಕ್ತಿಗಳ ಪ್ರಯತ್ನ, ಅದೂ ಆಂಶಿಕವಾಗಿ ಎಂಬ ಸ್ಥಿತಿ ಆಶಾದಾಯಕವೆನಿಸುವುದಿಲ್ಲ. ‘ಗುರಿ ಮುಟ್ಟುವವರೆಗೂ ನಿಲ್ಲದಿರು’ ಎಂಬ ಸಿಂಹಪರಾಕ್ರಮ ಇಂದು ಬೇಕಿರುವುದು. ದೇವರನ್ನೋ, ಮತ್ತಾರನ್ನೋ ನಂಬದೆಯೂ ಮನುಷ್ಯ ಪಾರಾಗಬಲ್ಲ. ಆದರೆ ಪ್ರಯತ್ನಶೀಲತೆಯಲ್ಲಿ, ತೀವ್ರ ಪ್ರಯತ್ನದಲ್ಲಿ ನಂಬದವನು ಎಂದಿಗೂ ಉದ್ಧಾರ ಆಗಿಲ್ಲ. ದೇವರ ಕೃಪೆ ಎಲ್ಲರ ಮೇಲೂ ಏಕಪ್ರಕಾರವಾಗಿಯೇ ಸದಾಕಾಲ ಇದೆ.

ಆದರೆ ಪ್ರಯತ್ನಿಸಿದವರಿಗೆ ಮಾತ್ರ ಅದರ ಪ್ರಯೋಜನ ಸಿಗುತ್ತದೆ ಅಷ್ಟೇ. ಶ್ರೀರಾಮಕೃಷ್ಣರು ಹೇಳುತ್ತಿದ್ದರು, ‘ಅವನ ಕೃಪೆಯ ಗಾಳಿ ಬೀಸುತ್ತಲೇ ಇದೆ. ಯಾರ ದೋಣಿಯಲ್ಲಿ ಲಂಗರು ಹಾಕಿದೆಯೋ ಅವರು ಮಾತ್ರ ಮುಂದಕ್ಕೆ ಚಲಿಸುತ್ತಿದ್ದಾರೆ’ ಎಂದು. ‘ಮೃಗರಾಜನಾದ ಸಿಂಹವು ಕೂಡ ಪ್ರಯತ್ನಿಸದೆ, ಕೂತ ಜಾಗದಲ್ಲೇ ಕುಳಿತಿದ್ದರೆ ಯಾವ ಪ್ರಾಣಿಯೂ ತಾನಾಗಿಯೇ ಬಂದು ಅದರ ಬಾಯಲ್ಲಿ ಬೀಳುವುದಿಲ್ಲ. ಅದು ಕೂಡ ಪ್ರಯತ್ನಿಸಬೇಕು’ ಎನ್ನುತ್ತದೆ ಸುಭಾಷಿತ. ಹುಟ್ಟಿನಿಂದಲೋ ಮತ್ತಾವ ರೀತಿಯಲ್ಲೋ ಎಷ್ಟೇ ಬಲಶಾಲಿಯಾಗಿದ್ದರೂ ಪ್ರಯತ್ನಿಶೀಲನು ಮಾತ್ರ ತನ್ನ ಬಯಕೆಯನ್ನು ಈಡೇರಿಸಿಕೊಳ್ಳುತ್ತಾನೆ ಎಂದೂ ಅರ್ಥೈಸಬಹುದು ಇದನ್ನು. ಈ ತೀವ್ರ ಪ್ರಯತ್ನ , ಛಲ ಬಿಡದ ಪ್ರಯತ್ನವನ್ನೇ ಇಂಗ್ಲಿಷ್​ನಲ್ಲಿ Perseverance ಎಂದು ಕರೆಯುತ್ತಾರೆ. ಪ್ರತಿಭಾಶಾಲಿ ಕೂಡ ಪ್ರಯತ್ನಿಸದಿದ್ದಲ್ಲಿ ಏನನ್ನೂ ಪಡೆಯಲಾರ.

ಮಹತ್ತರವಾದುದನ್ನು ಸಾಧಿಸಬೇಕೆಂಬ ಸ್ಪೂರ್ತಿ ತುಂಬಿ ತುಳುಕುತ್ತಿರಲಿ. ಅದು ಕೂಡ ಸಾಕಾಗುವುದಿಲ್ಲ. ಸ್ಪೂರ್ತಿಯಂತೂ ಬುನಾದಿ. ಭದ್ರ ತಳಪಾಯ. ಆದರೆ ಅಷ್ಟೇ ಸಾಲದು. ಅದು ಶೇಕಡ ಒಂದರಷ್ಟು ಮಾತ್ರ ; ಮಿಕ್ಕ ತೊಂಬಂತ್ತೊಂಬತ್ತು ಬೆವರಿಳಿಸಿದ ಶ್ರಮವೇ ಗತಿ ಎನ್ನುತ್ತಾನೆ ಮೂರು ತಿಂಗಳಷ್ಟೇ ಶಾಲೆಗೆ ಹೋಗಿ ಮುಂದೆ ತನ್ನ ತಾಯಿಯ ಮಾರ್ಗದರ್ಶನದಲ್ಲಿ ವಿಶ್ವವಿಖ್ಯಾತ ವಿಜ್ಞಾನಿಯಾಗಿ ಅರಳಿನಿಂತ ಥಾಮಸ್ ಆಲ್ವಾ ಎಡಿಸನ್ ಅವನ ಸುಪ್ರಸಿದ್ಧ "Genius is one percent inspiration and ninety nine percent perspiration'ಎಂಬ ಸೂಕ್ತಿ ನಮಗೆ ಗೊತ್ತೇ ಇದೆ. ಇದರ ಜೊತೆಗೇ ನಾವು ಇಷ್ಟೇ ಅವಶ್ಯವಾಗಿ ನೆನಪಿಡಬೇಕಾದ್ದೂ ಒಂದಿದೆ. ಅದೇ ಎಷ್ಟೇ ಪ್ರತಿಭೆಯ ಕೊರತೆಯಿದ್ದರೂ, ಇನ್ನಿಲ್ಲದ ಅನಾನುಕೂಲಗಳಿದ್ದರೂ ಛಲ ಮತ್ತು ತೀವ್ರ ಪ್ರಯತ್ನಗಳು ನಾವು ಬಯಸಿದ ಮಟ್ಟಕ್ಕೆ ನಮ್ಮನ್ನು ಕೊಂಡೊಯ್ಯಬಲ್ಲ ಅದ್ಭುತಗಳು ಎನ್ನುವುದು.

ಒಂದು ರೀತಿಯಲ್ಲಿ ‘ಈ ಪ್ರಯತ್ನ ಎಂಬ ಮಹಾಮೌಲ್ಯವೊಂದನ್ನು ನಿರ್ವಿುಸಿ ನಮಗೆಷ್ಟು ಉಪಕಾರ ಮಾಡಿದ್ದಾನೆ ಪರಮಾತ್ಮ’ ಎಂದು ಪ್ರಖ್ಯಾತ ವಿಜ್ಞಾನಿ ಪ್ಯಾಸ್ಕಲ್ ಭಗವಂತನಿಗೆ ಕೃತಜ್ಞತೆಯನ್ನೇ ಸಮರ್ಪಿಸುತ್ತಾನೆ. "Oh! Lord, thou givest us everything at the price of an effort' ಎಂದು. ಇಲ್ಲಿ ಶ್ರೀರಾಮಕೃಷ್ಣರ ಮಾತೇ ಪ್ರತಿಧ್ವನಿತಗೊಂಡಿದೆ. ಹಾಗೇ ಯೋಚಿಸಿ ನೋಡಿ! ಚಮ್ಮಾರನ ಮಗ, ಸಮಾಜದ ಅವರಿವರ ಚಪ್ಪಲಿ, ಬೂಟುಗಳನ್ನು ಹೊಲಿದು ರಿಪೇರಿ ಮಾಡುವ ಹುಡುಗ ಅಮೆರಿಕದ ಅಧ್ಯಕ್ಷನಾಗುವುದು ಎಂದರೇನು? ಅದೇನು ಸರಳವೇ?! ಸುಲಭವೇ?! ಲಿಂಕನ್​ರ ಈ ಯಶೋಗಾಥೆ ನಮ್ಮ ಯುವಕರಿಗೆ ಅದ್ಭುತವಾದ ಪಾಠಗಳನ್ನು ಕಲಿಸಬಲ್ಲದು. ಆರಂಭಶೂರತ್ವ, ಸಿಂಹ ಪರಾಕ್ರಮವಿಲ್ಲದ ಪ್ರಯತ್ನ ಯಾವುದಕ್ಕೂ ಪ್ರಯೋಜನವಿಲ್ಲ. ಸೋಲೊಪ್ಪಿಕೊಳ್ಳದ ಪ್ರಯತ್ನವೇ ಪರಮೇಶ್ವರನ ಕೃಪೆ ಎಂಬ ಪಾಠವನ್ನು ಕಲಿಸಬಲ್ಲದು. ಲಿಂಕನ್ ತನ್ನ 22ನೇ ವಯಸ್ಸಿನಲ್ಲಿ ಉದ್ಯೋಗಾರ್ಥಿಯಾಗಿ ಉದ್ದಿಮೆಯೊಂದರಲ್ಲಿ ತೊಡಗಲು ಪ್ರಯತ್ನಿಸಿದ. 22ನೇ ವಯಸ್ಸಿನಿಂದ 52ನೇ ವಯಸ್ಸಿನವರೆಗೂ ಕೈಯಿಟ್ಟಲ್ಲೆಲ್ಲ ಸೋಲು.

ಸುಮಾರು 30 ವರ್ಷಗಳ ಕಾಲ ಒಂದೇ ಒಂದು ಪ್ರಯತ್ನದಲ್ಲೂ ಗೆಲವು ಕಾಣದೇ ಒಂದರ ಮೇಲೊಂದರಂತೆ ಸೋಲುಗಳೇ ಸಾಲು ಸಾಲಾಗಿ ಬರುತ್ತಿದ್ದರೆ ಯಾವ ವ್ಯಕ್ತಿ ವಿಚಲಿತನಾಗುವುದಿಲ್ಲ? ಆದರೆ ಲಿಂಕನ್ ಆಗಲಿಲ್ಲ. ಇದೇ ನಾನು ಪ್ರಾರಂಭದಲ್ಲಿ ಹೇಳಿದ ಸದ್ಗುಣ. ಸದ್ಗುಣವಾಗಲಿ ಸಾಮರ್ಥ್ಯವಾಗಲಿ ತನ್ನ ಮೊದಲ ಲಕ್ಷಣವಾಗಿ ಇಟ್ಟುಕೊಂಡಿರುವುದೇ ಛಲ, ಸೋಲೋಪ್ಪಿಕೊಳ್ಳದೆ, ಮುಂದೆ ಸಾಗುತ್ತ, ಪ್ರಯತ್ನವನ್ನು ಇಮ್ಮಡಿಗೊಳಿಸುತ್ತ ಸಾಗುವ ಧೀರತೆಯೇ ಛಲ. ಇದೇ ಭರವಸೆ, ಹುರುಪು, ಉತ್ಸಾಹವನ್ನು ಕಳೆದುಕೊಳ್ಳದಿರುವುದು ಎಂದರೆ. ಲಿಂಕನ್ನರ ತಾಳ್ಮೆಯನ್ನಾದರೂ ಗಮನಿಸಿ. ತಾಳ್ಮೆ ಅಷ್ಟೇ ಅಲ್ಲ ಎದೆಗುಂದದ ಧೀರತೆಯ ದುಂದುಬಿ ಅವರ ನಡೆ. ಇದೇ ಪುರುಷ ಪ್ರಯತ್ನ. ತನ್ನ 21ನೇ ವಯಸ್ಸಿನಲ್ಲಿ ಲಿಂಕನ್ ಉದ್ದಿಮೆಗೆ ಕೈಹಾಕಿದರು, ಸೋತರು.

22ನೇ ವಯಸ್ಸಿನಲ್ಲಿ ಲೆಜಿಸ್ಲೇಟಿವ್ ಚುನಾವಣೆಗೆ ಸ್ಪರ್ಧಿಸಿ ಸೋತರು. 24ನೇ ವಯಸ್ಸಿನಲ್ಲಿ ಮತ್ತೆ ಉದ್ದಿಮೆದಾರರಾಗಲು ಹೊರಟು ಕೈ ಸುಟ್ಟುಕೊಂಡರು. 26ನೇ ವಯಸ್ಸಿನಲ್ಲಿ ಬರಸಿಡಿಲೆರಗಿದಂತೆ ಬಂತು ಪ್ರಿಯಪತ್ನಿಯ ಮರಣ. 27ನೇ ವಯಸ್ಸಿನಲ್ಲಿ ನರಗಳ ದೌರ್ಬಲ್ಯದಿಂದ ಏಳು ವರ್ಷ ಬಹಳಷ್ಟು ಒದ್ದಾಡಬೇಕಾಯಿತು. 34ನೇ ವಯಸ್ಸಿನಲ್ಲಿ ಕಾಂಗ್ರೆಸ್​ನ ಸ್ಥಾನಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು. 45ನೇ ವಯಸ್ಸಿನಲ್ಲಿ ಸೆನೇಟರ್ ಸ್ಥಾನಕ್ಕಾಗಿ ಸ್ಪರ್ಧಿಸಿ ಸೋತರು. 47ನೇ ವಯಸ್ಸಿನಲ್ಲಿ ಉಪರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿ ಸೋಲುಂಡರು.

52ನೇ ವಯಸ್ಸಿನಲ್ಲಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿ ವಿಜಯಶಾಲಿಗಳಾದರು. ಸುಮಾರು ಮೂವತ್ತು ವರ್ಷಗಳ ಕಾಲ ಕೈಯಿಟ್ಟಲ್ಲೆಲ್ಲ ಸುಟ್ಟುಕೊಂಡಿದ್ದೇ ಆಯಿತು. ಯಾರೂ ಕುಸಿದುಬಿಡುವ ಸಂಭವ. ಆದರೆ ಲಿಂಕನ್​ರದ್ದು ಗಂಡೆದೆ. ಜಯ ಒಲಿಯುವುದೇ ಇಂತಹವರಿಗೆ. ಇಷ್ಟೇ ರೋಚಕ ಬರಾಕ್ ಒಬಾಮರ ಕಥೆಯೂ ಕೂಡ. ನಾನು ಅಮೆರಿಕದಲ್ಲಿದ್ದಾಗ ಒಬಾಮ ಪ್ರಸಿದ್ಧರಾಗಿದ್ದೇ ತಾವು ಬರೆದ ಪುಸ್ತಕ ‘Audacity of hope’ ಎನ್ನುವುದರಿಂದ ಎಂದು ಅಲ್ಲಿಯವರು ಹೇಳಿದ್ದರು. ತಾವು ಬರೆದಿದ್ದಷ್ಟೇ ಅಲ್ಲ ಹಾಗೆಯೇ ಬದುಕಿದರು ಕೂಡ ಅವರು. ಅಧ್ಯಕ್ಷ ಪದವಿಗೆ ಏರಿದ ಮೊಟ್ಟ ಮೊದಲ ನೀಗ್ರೋ ಅವರು. ಅದು ಲಿಂಕನ್ ಆಗಲಿ, ಎಡಿಸಸ್ ಆಗಲಿ, ಒಬಾಮ ಆಗಲಿ ಯಶಸ್ಸು ಅರ್ಹರಿಗೆ ಮಾತ್ರ ಮತ್ತು ಈ ಅರ್ಹತೆ ಬಂದ ದಿನವೇ ಸ್ವಾಮಿ ವಿವೇಕಾನಂದರು ಹೇಳಿದಂತೆ ಪದವಿಯೂ ಬಂದಂತೆಯೇ. ಶ್ರೀರಾಮಕೃಷ್ಣರು ಹೇಳುತ್ತಿದ್ದರು ‘ತಪಸ್ಸಿಲ್ಲದೇ ಏನೂ ಸಿಗಲಾರದು. ಸ್ವಯಂ ಭಗವತಿಯೂ ಶಿವನನ್ನು ಪಡೆಯಲು ಅದೆಷ್ಟು ತಪಸ್ಸು ಮಾಡಬೇಕಾಯಿತು’ ಎಂದು. ಆಗಲೂ ಅಷ್ಟೇ, ಈಗಲೂ ಅಷ್ಟೇ! ಅಲ್ಲೂ ಅಷ್ಟೇ, ಇಲ್ಲೂ ಅಷ್ಟೇ! ಧೀರನಿಗೆ ಮಾತ್ರ ಕಟ್ಟಿಟ್ಟದ್ದು ಸಫಲತೆ. ಧೀರತೆಯೇ ಅರ್ಹತೆ.

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)