‘ವಾಕ್ಯ’ವೆಂದರೆ, ಅರ್ಥಪೂರ್ಣವಾದ ಒಂದು ಪದಸಮೂಹ. ‘ಮಹಾವಾಕ್ಯ’ಕ್ಕೆ ಮಹತ್ವಪೂರ್ಣವಾದ ಅರ್ಥವಿದೆ. ವೇದವಾಙ್ಮಯದಿಂದ ಆರಿಸಲ್ಪಟ್ಟ ಮಹಾವಾಕ್ಯಕ್ಕೆ ಮಹತ್ವಪೂರ್ಣವಾದ ಅರ್ಥವಿರುವುದು ಮಾತ್ರವಲ್ಲದೆ, ಅದು ಪರಮಾರ್ಥದ ಸಾರಸರ್ವಸ್ವವೇ ಆಗಿದೆ.
ಈಗ ನಾವು ಸಾಮವೇದದ ಛಾಂದೋಗ್ಯ ಉಪನಿಷತ್ತಿನ ಆರನೆಯ ಅಧ್ಯಾಯದಿಂದ ಆಯಲ್ಪಟ್ಟ ‘ತತ್ ತ್ವಂ ಅಸಿ’ (6.8.7) ಎಂಬ ಮಹಾವಾಕ್ಯವನ್ನು ತೆಗೆದುಕೊಳ್ಳೋಣ. ಇದನ್ನು ಇಲ್ಲಿ ಪ್ರಪ್ರಥಮವಾಗಿ ಆರಿಸಿಕೊಳ್ಳಲು ಮುಖ್ಯ ಕಾರಣವಿದೆ. ‘ನೀನು ಅದೇ ಆಗಿದ್ದೀಯೇ’ ಎಂದು ಈ ಮಹಾವಾಕ್ಯದ ಅರ್ಥ. ಈ ಮಹಾವಾಕ್ಯವನ್ನು ನಾವು ತಂದೆಯಾದ ಉದ್ದಾಲಕ ಹಾಗೂ ಅವನ ಮಗ ಶ್ವೇತಕೇತುವಿನ ಮಧ್ಯೆ ನಡೆದ ಸಂವಾದದಲ್ಲಿ ಒಂಭತ್ತು ಬಾರಿ ಕಾಣುತ್ತೇವೆ. ಶ್ವೇತಕೇತು ಅದೇ ತಾನೇ ಒಂದು ಗುರುಕುಲದಲ್ಲಿ ವಿದ್ಯಾಭ್ಯಾಸ ಪೂರೈಸಿ ಸ್ವಗೃಹಕ್ಕೆ ಹಿಂತಿರುಗಿದ್ದ. ತಾನು ಮಹಾವಿದ್ಯಾವಂತನೆಂಬ ಯುವಸಹಜ ಗರ್ವವು ಅವನ ತಲೆಯಲ್ಲಿ ತುಂಬಿತ್ತು. ತಂದೆ ಉದ್ದಾಲಕನಾದರೋ ಲೌಕಿಕ ಹಾಗೂ ಆಧ್ಯಾತ್ಮಿಕ ವಿದ್ಯೆಗಳೆರಡರಲ್ಲೂ ಪರಿಣಿತ, ಪರಿಪಕ್ವ ಮೇಧಾವಿ. ತನಗೆ ಎಲ್ಲವೂ ಗೊತ್ತಿದೆಯೆಂದು ಬೀಗುತ್ತಿದ್ದ ಮಗನ ಜ್ಞಾನವನ್ನು ಪರೀಕ್ಷಿಸಲು ಪರಮಸತ್ಯವಾದ ಪರಬ್ರಹ್ಮದ ಬಗ್ಗೆ ತಂದೆ ಕೇಳಿದ ಒಂದು ಪ್ರಶ್ನೆ ಮಗನನ್ನು ತಬ್ಬಿಬ್ಬಾಗುವಂತೆ ಮಾಡಿತು. ಇದರಿಂದ ಮಗನಿಗೆ ತನ್ನ ಅಜ್ಞಾನದ ಅರಿವು ತಲೆದೋರಿ ಬ್ರಹ್ಮದ ಬಗ್ಗೆ ತಿಳಿದುಕೊಳ್ಳಬೇಕೆಂಬ ಹಂಬಲ ಮೂಡಿತು. ಆಗ ತಂದೆ ಹಲವು ನಿದರ್ಶನಗಳ ಮೂಲಕ, ‘ನೀನು ಅದೇ ಆಗಿದ್ದೀಯೇ’ ಎಂಬ ಸತ್ಯವನ್ನು ಮಗನಿಗೆ ತಿಳಿಸಿಕೊಟ್ಟ. ಉದಾಹರಣೆಗೆ, ಹೇಗೆ ಬೃಹತ್ತಾದ ವೃಕ್ಷ ಕೇವಲ ಒಂದು ಸಣ್ಣ ಬೀಜದಲ್ಲಿ ಅಡಗಿದೆಯೋ, ಹೇಗೆ ವಿವಿಧ ರೂಪಗಳ ಮಡಿಕೆಗಳು ಒಂದೇ ಮಣ್ಣಿನಿಂದ ಮಾಡಲ್ಪಟ್ಟಿವೆಯೋ, ಹಾಗೆಯೇ ಆ ಪರಮೋನ್ನತ ಸತ್ಯ ವಿವಿಧ ನಾಮ-ರೂಪಗಳಲ್ಲಿ ಕಂಡುಬಂದರೂ, ಅದು ಒಂದೇ ಆಗಿರುತ್ತದೆ. ಅದುವೇ ಪರಬ್ರಹ್ಮ.
ಯಥಾ ಸೋಮೈಕೇನ ಮೃತ್ಪಿಂಡೇನ ಸರ್ವಂ ಮೃಣ್ಮಯಂ ವಿಜ್ಞಾತಂ ಸ್ಯಾದ್ವಾಚಾರಂಭಣಂ ವಿಕಾರೋ ನಾಮಧೇಯಂ ಮೃತ್ತಿಕೇತ್ಯೇವ ಸತ್ಯಂ || (6.1.4)
‘ಓ ವತ್ಸ! ಇದು ಹೇಗೆಂದರೆ, ಒಂದು ಚೂರು ಮಣ್ಣಿನ ಸತ್ಯಸ್ವರೂಪವನ್ನು ನೀನು ಅರಿತಿದ್ದೇ ಆದರೆ, ಮಣ್ಣಿನಿಂದ ಮಾಡಲ್ಪಟ್ಟ ಸಮಸ್ತ ವಸ್ತುಗಳ ಸತ್ಯಸ್ವರೂಪನ್ನೂ ನೀನು ಅರಿತಂತೆಯೇ. ಏಕೆಂದರೆ, ಎಲ್ಲ ವಸ್ತುಗಳ ಮೂಲತತ್ತ್ವವು ಮಣ್ಣು ಮಾತ್ರವೇ; ಎಲ್ಲ ವಸ್ತುಗಳೂ ಅದೇ ಮಣ್ಣಿನ ವಿವಿಧ ರೂಪ-ನಾಮಗಳಷ್ಟೇ’.
ಹೀಗೆ ಶ್ವೇತಕೇತುವಿಗೆ, ಉದ್ದಾಲಕನು ‘ನೀನು ಅದೇ ಆಗಿದ್ದೀಯೇ’ ಎಂಬ ಸತ್ಯವನ್ನು ಬೋಧಿಸಿದ. ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯವಿದೆ. ಇಲ್ಲಿ ಇಂತಹ ಮಹಾವಾಕ್ಯವನ್ನು ಒಬ್ಬ ಅಜ್ಞಾನಿಯಾದ ಯುವ ಶಿಷ್ಯನನ್ನು ತನ್ನ ಹಾಗೂ ಬ್ರಹ್ಮದ ಏಕತ್ವದೆಡೆಗೆ ಮುನ್ನಡೆಸಲು ಹೇಳಲಾಗಿದೆ. ಬ್ರಹ್ಮದ ಕಲ್ಪನೆ ಶಿಷ್ಯನಿಗೆ ಹೊಸದಾಗಿರುವುದರಿಂದ, ಉದ್ದಾಲಕನು ದೈ ್ವ ಭಾವದಿಂದ ಪ್ರಾರಂಭಿಸಿದ. ತಿಳಿಯಬೇಕಾದುದು, ಬ್ರಹ್ಮ; ತಿಳಿಯಬೇಕಾದವನು, ಇಲ್ಲಿ ಶಿಷ್ಯನಾದ ಶ್ವೇತಕೇತು. ಅಜ್ಞಾನಿಯಾದ ಶ್ವೇತಕೇತು ಬ್ರಹ್ಮದ ಅನ್ವೇಷಣೆ ಮಾಡುವಂತೆ ಹೀಗೆ ಹುರಿದುಂಬಿಸಿ, ಅವನನ್ನು ಅಂತರಂಗಪಯಣದಲ್ಲಿ ತೊಡಗಿಸಿದ.
ಬ್ರಹ್ಮದೆಡೆಗೆ ಪಯಣವನ್ನು ಮುಂದುವರಿಸಲು ಸಹಾಯವಾಗುವಂತೆ, ಅಥರ್ವವೇದದ ಮಾಂಡೂಕ್ಯ ಉಪನಿಷತ್ತಿನಿಂದ ಎರಡನೆಯ ಮಹಾವಾಕ್ಯ ಆರಿಸಲಾಗಿದೆ- ‘ಅಯಂ ಆತ್ಮಾ ಬ್ರಹ್ಮ’ (1.2) ‘ಈ ಆತ್ಮವೇ ಬ್ರಹ್ಮ’. ಈ ಮಹಾವಾಕ್ಯ ಮೊದಲಿನ ಮಹಾವಾಕ್ಯವಾದ ‘ನೀನು ಅದೇ ಆಗಿದ್ದೀಯೇ’ ಎಂಬುದರಿಂದ ಸಾಧಕನಲ್ಲಿ ಉದ್ಭವವಾಗುವ ಪ್ರಶ್ನೆಗೆ ಉತ್ತರ ನೀಡುತ್ತದೆ. ಇಲ್ಲಿ ಉದ್ಭವಿಸುವ ಪ್ರಶ್ನೆಯೆಂದರೆ- ‘ನೀನು’ ಎಂದರೆ ಏನು ಹಾಗೂ ‘ಅದು’ ಅಂದರೆ ಯಾವುದು? ಒಂದುವೇಳೆ ‘ನೀನು’ ಎಂದರೆ ಈ ದೇಹವೆಂದು ಭಾವಿಸಿದರೆ, ಅದು ಸರಿಯಾಗುವುದಿಲ್ಲ. ಏಕೆಂದರೆ, ಈ ದೇಹ ಕ್ಷಣ ಕ್ಷಣದಲ್ಲಿ ವ್ಯತ್ಯಾಸ ಹೊಂದುತ್ತಿರುತ್ತದೆ. ಹಾಗಾದರೆ ‘ನೀನು’ ಎಂದರೆ ಮನಸ್ಸೇ? ಅದೂ ಸಾಧ್ಯವಿಲ್ಲ. ಏಕೆಂದರೆ ಮನಸ್ಸಿನಲ್ಲಿ ಹಲವಾರು ಯೋಚನೆ ಹಾಗೂ ಭಾವನೆಗಳು ವ್ಯತ್ಯಾಸವಾಗುತ್ತ ಬಂದು ಹೋಗುತ್ತಿರುತ್ತವೆ. ಹೀಗೆ ಸಾಧಕನು ಸತತ ಸಾಧನೆಯಿಂದಾಗಿ ‘ನೀನು’ ಎಂದರೆ ಬದಲಾಗುವ ದೇಹವೂ ಅಲ್ಲ; ಮನಸ್ಸೂ ಅಲ್ಲ ಎಂಬುದನ್ನು ಅರಿತು, ‘ನೀನು’ ಎಂದರೆ ಬದಲಾಗದಿರುವ ‘ಆತ್ಮ’ ಅಥವಾ ‘ಜೀವಾತ್ಮ’ವೆಂದು ಅರಿಯುತ್ತಾನೆ. ಈ ಜೀವಾತ್ಮ ಪರಮಾತ್ಮನ ಅಥವಾ ಬ್ರಹ್ಮದ ಪ್ರತಿಬಿಂಬವಾಗಿದ್ದು, ಅದು ಜೀವಿಯ ದೇಹ ಅಥವಾ ಮನಸ್ಸುಗಳ ರೀತಿಯಲ್ಲಿ ಬದಲಾಗುವುದಿಲ್ಲವೆಂಬ ಸತ್ಯವನ್ನು ತಿಳಿದುಕೊಳ್ಳುತ್ತಾನೆ.
ಇದನ್ನೇ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೀಗೆ ಹೇಳಿದ್ದಾನೆ-
ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋಪರಾಣಿ |
ತಥಾ ಶರೀರಾಣಿ ವಿಹಾಯ ಜೀರ್ಣಾನ್ಯನ್ಯಾನಿ ಸಂಯಾತಿ ನವಾನಿ ದೇಹೀ || (2.22)
‘ಒಬ್ಬ ಮನುಷ್ಯನು ಹೇಗೆ ಹರಿದ ವಸ್ತ್ರವನ್ನು ತ್ಯಜಿಸಿ ನವವಸ್ತ್ರವನ್ನು ಧರಿಸುತ್ತಾನೆಯೋ, ಹಾಗೆಯೇ ದೇಹಿಯಾದ ಆತ್ಮನು ಜೀರ್ಣವಾದ ಶರೀರವನ್ನು ತ್ಯಜಿಸಿ ನವದೇಹವನ್ನು ಧರಿಸುತ್ತಾನೆ’.ಹೀಗೆ ಎರಡನೆಯ ಮಹಾವಾಕ್ಯದ ಮೂಲಕ ಸಾಧಕನು ಅಶಾಶ್ವತವಾದ ದೇಹದಲ್ಲಿ, ಎಂದೂ ವ್ಯತ್ಯಾಸವಾಗದ ಹಾಗೂ ಮರಣರಹಿತ ಶಾಶ್ವತ ಆತ್ಮವು ಇದ್ದು, ಅದು ಬ್ರಹ್ಮವೇ ಎಂದು ಅರಿತುಕೊಳ್ಳುತ್ತಾನೆ. ಹಾಗೂ ಈ ಆತ್ಮವನ್ನೇ ‘ತತ್ ತ್ವಂ ಅಸಿ’ ಮಹಾವಾಕ್ಯದಲ್ಲಿ ‘ತ್ವಂ’ (ನೀನು) ಎಂದು ಹೇಳಲಾಗಿದೆಯೆಂದು ಅರಿಯುತ್ತಾನೆ.
ಆತ್ಮ (ಜೀವಾತ್ಮ) ಹಾಗೂ ಬ್ರಹ್ಮ (ಪರಮಾತ್ಮ) ಏಕತ್ವದ ಕುರಿತಾಗಿ ಹೆಚ್ಚೆಚ್ಚು ಮನನ ಮಾಡಿದಂತೆ ನಾವು, ‘ಅಹಂ ಬ್ರಹ್ಮಾಸ್ಮಿ’ ಎಂಬ ಮೂರನೆಯ ಮಹಾವಾಕ್ಯದ ಹಂತಕ್ಕೆ ಸೇರುತ್ತೇವೆ. ಇದನ್ನು ಶುಕ್ಲ ಯಜುರ್ವೆದದ ಬ್ರಹದಾರಣ್ಯಕ ಉಪನಿಷತ್ತಿನಲ್ಲಿ (1.4.10) ಕಾಣುತ್ತೇವೆ. ಇಲ್ಲಿ ಸಾಧಕನು ತನ್ನ ದೇಹದಲ್ಲಿರುವ ಆತ್ಮವೇ ಬ್ರಹ್ಮವೆಂಬ ಹಂತದಿಂದ ‘ನಾನೇ ಬ್ರಹ್ಮ’ ಎಂಬ ಹಂತಕ್ಕೇರುತ್ತಾನೆ. ಮೊದಲು ತನ್ನೊಳಗಿನ ಆತ್ಮ ಬ್ರಹ್ಮದ ಒಂದು ಭಾಗವೆಂದು ಭಾವಿಸುತ್ತಿದ್ದ ಸಾಧಕ, ಈಗ ಈ ಆತ್ಮವೂ ಪರಿಪೂರ್ಣ ಬ್ರಹ್ಮವೇ ಎಂದರಿತು, ತಾನು ಬ್ರಹ್ಮಕ್ಕಿಂತ ಭಿನ್ನವಲ್ಲ, ತಾನು ಆ ಬ್ರಹ್ಮವೇ ಎಂದು ತಿಳಿಯುತ್ತಾನೆ. ಇದು ಪ್ರಮುಖ ವ್ಯತ್ಯಾಸ. ಏಕೆಂದರೆ, ಸಾಧಕನು ಮೊದಲು ತನ್ನನ್ನು ದೇಹ ಮತ್ತು ಮನಸ್ಸುಗಳಿಗೆ ಸೀಮಿತವಾದ ಜೀವಾತ್ಮವೆಂಬ ಪರಿಮಿತಿ ದಾಟಿ, ಅನಂತವಾದ ಬ್ರಹ್ಮವೇ ಎಂದು ಅರಿಯುತ್ತಾನೆ. ಈ ಹಂತದಲ್ಲಿ ಅವನು ಪ್ರತ್ಯಕ್ಷಾನುಭವದಿಂದ ಸರ್ವ ಅಸ್ತಿತ್ವಕ್ಕೆ ಆಧಾರಭೂತವಾದ ‘ನಾನು’ ಬ್ರಹ್ಮವೇ ಎಂಬ ಸಾಕ್ಷಾತ್ಕಾರ ಪಡೆಯುತ್ತಾನೆ. ನಾವು ನಮ್ಮ ಬಗ್ಗೆ ಏನನ್ನಾದರೂ ಹೇಳಬೇಕಾದರೆ, ಮೊದಲು ‘ನಾನು’ ಎಂಬುದರಿಂದಲೇ ಪ್ರಾರಂಭಿಸುತ್ತೇವೆ. ಉದಾಹರಣೆಗೆ, ‘ನಾನು ಪುರುಷ’, ‘ನಾನು ಸ್ತ್ರೀ’ ಇತ್ಯಾದಿ ಎಲ್ಲ ವಾಕ್ಯಗಳೂ ಯಾವುದೇ ಲಿಂಗಬೇಧವಿಲ್ಲದ ‘ನಾನು’ ಎಂಬುದರಿಂದಲೇ ಪ್ರಾರಂಭವಾಗಿವೆಯಲ್ಲವೇ? ಹೀಗೆ ಯಾವುದೇ ಗುಣರಹಿತವಾದ ‘ನಾನು’ ಸರ್ವ ಅಸ್ತಿತ್ವದ ಮೂಲ. ಅದುವೇ ಬ್ರಹ್ಮ, ಅದುವೇ ಸತ್ಯ ಅಥವಾ ಅಳಿವಿಲ್ಲದ ಅಸ್ತಿತ್ವ.
ಹೀಗೆ ಸಾಧಕನ ಅಂತರಂಗಪಯಣ ಅಜ್ಞಾನದಿಂದ ಪ್ರಾರಂಭವಾಗಿ ಸತ್ಯಾನ್ವೇಷಣೆ ಮಾಡುತ್ತ, ತಾನೇ ಆ ಸತ್ಯವೆಂಬುದನ್ನು ತಿಳಿಯುತ್ತಾನೆ. ಹಾಗಾದರೆ ಇನ್ನು ನಾಲ್ಕನೇ ಮಹಾವಾಕ್ಯದ ಅಗತ್ಯ ಹಾಗೂ ಪಾತ್ರಗಳೇನು? ‘ಪ್ರಜ್ಞಾನಂ ಬ್ರಹ್ಮ’ ಎಂಬುದು ನಾಲ್ಕನೆಯ ಮಹಾವಾಕ್ಯ. ಇದರ ಅರ್ಥ ‘ಪರಿಪೂರ್ಣ ಅರಿವೇ ಬ್ರಹ್ಮ’. ಇದನ್ನು ಋಗ್ವೇದದ ಐತರೇಯ ಉಪನಿಷತ್ತಿನ ಮೂರನೆಯ ಅಧ್ಯಾಯದಲ್ಲಿ ಕಾಣುತ್ತೇವೆ (3.3). ಸಾಧಕನು ‘ಜ್ಞಾತಾ’-ತಿಳಿಯುವವನು, ಬ್ರಹ್ಮವು ‘ಜ್ಞೇಯ’- ತಿಳಿಯಲ್ಪಡುವ ಪರವಸ್ತು ಹಾಗೂ ತಿಳಿಯುವ ಪ್ರಕ್ರಿಯೆ ‘ಜ್ಞಾನ’. ಸಾಮಾನ್ಯವಾಗಿ ಈ ಮೂರು ಪ್ರತ್ಯೇಕವಾಗಿರುತ್ತವೆ. ಉದಾಹರಣೆಗೆ, ಕಲ್ಲುಸಕ್ಕರೆಯ ರುಚಿಯನ್ನು ತಿಳಿಯಬೇಕಾದರೆ, ರುಚಿ ನೋಡುವವನು ಕಲ್ಲುಸಕ್ಕರೆಗಿಂತ ಭಿನ್ನವಾಗಿರುತ್ತಾನೆ. ಇದರಲ್ಲಿ ರುಚಿ ನೋಡುವವನು ಜ್ಞಾತಾ ಹಾಗೂ ಕಲ್ಲುಸಕ್ಕರೆ ಜ್ಞೇಯ. ಇದಕ್ಕಿಂತ ಭಿನ್ನವಾದ ಸಿಹಿರುಚಿಯು ಜ್ಞಾನ. ಅದೈ ್ವ ವೇದಾಂತವನ್ನು ಪ್ರತಿಪಾದಿಸುವ ಈ ಮಹಾವಾಕ್ಯ ಪ್ರಜ್ಞಾನಂ ಬ್ರಹ್ಮ- ಜ್ಞಾತಾ, ಜ್ಞೇಯ ಮತ್ತು ಜ್ಞಾನಗಳ ಏಕತ್ವ ಸಾರುತ್ತದೆ. ಮೊದಲನೆಯ ಮೂರು ಮಹಾವಾಕ್ಯಗಳಲ್ಲಿ ಜ್ಞಾತಾ ಹಾಗೂ ಜ್ಞೇಯ ಒಂದೇ ಎಂಬುದು ಸಿದ್ಧವಾದರೆ, ಈ ನಾಲ್ಕನೆಯ ಮಹಾವಾಕ್ಯ ಜ್ಞಾನವೂ ಕೂಡ, ಜ್ಞಾತಾ ಹಾಗೂ ಜ್ಞೇಯಗಳಿಗಿಂತ ಭಿನ್ನವಾಗಿಲ್ಲವೆಂದೂ, ಈ ಮೂರೂ ಒಂದೇ ಎಂದು ಸಾರುತ್ತದೆ. ಇದಕ್ಕೆ ನಿದರ್ಶನ- ಒಂದು ಪಾತ್ರೆಯಲ್ಲಿನ ನೀರಿನಲ್ಲಿ ಕಾಣುವ ಸೂರ್ಯನ ಪ್ರತಿಬಿಂಬವನ್ನು, ನಾವು ಸೂರ್ಯನ ಬೆಳಕಿನ ಆಧಾರದಲ್ಲಿಯೇ ನೋಡುತ್ತೇವೆ. ಹೀಗೆ ಪ್ರತಿಬಿಂಬವೂ ಸೂರ್ಯನೇ, ಪ್ರತಿಬಿಂಬವನ್ನು ಕಾಣಲು ನಮಗೆ ಆಧಾರವಾದ ಪ್ರಕಾಶವೂ ಸೂರ್ಯನೇ ಹಾಗೂ ಎಲ್ಲಕ್ಕೂ ಮೂಲವಾಗಿ ಆಕಾಶದಲ್ಲಿರುವವನೂ ಸೂರ್ಯನೇ.
ಮುಂಡಕೋಪನಿಷತ್ತು ‘ಬ್ರಹ್ಮ ವೇದ ಬ್ರಹ್ಮೈವ ಭವತಿ’ (3.2.9) ಎಂದು ಘೊಷಿಸುತ್ತದೆ. ಬ್ರಹ್ಮವನ್ನು ತಿಳಿದವನು ಬ್ರಹ್ಮವೇ ಆಗುತ್ತಾನೆ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ತಾನು ಬ್ರಹ್ಮವೇ ಆಗಿ, ಸಾಧಕನು ಬ್ರಹ್ಮವನ್ನು ತಿಳಿಯುತ್ತಾನೆ. ಈ ರೀತಿಯಲ್ಲಿ ಈ ನಾಲ್ಕು ಮಹಾವಾಕ್ಯಗಳು ಸಾಧಕನನ್ನು ಜ್ಞಾತಾ, ಜ್ಞೇಯ ಮತ್ತು ಜ್ಞಾನಗಳ ಏಕತ್ವ ಸಂಗಮಕ್ಕೆ ಕೊಂಡೊಯ್ಯುತ್ತವೆ.
2020ರ ಮಧ್ಯದಲ್ಲಿ ಕೋವಿಡ್ ಸಾಂಕ್ರಾಮಿಕದಿಂದಾಗಿ ಜಗತ್ತಿನಾದ್ಯಂತ ಯಾರೂ ಹೊರಗೆ ಬರಲು ಸಾಧ್ಯವಾಗದೆ, ಎಲ್ಲರೂ ತಮ್ಮ ವಾಸಸ್ಥಳಗಳಿಗೆ ಸೀಮಿತವಾಗಿದ್ದರು. ಈ ಸಂದರ್ಭದಲ್ಲಿ ಮುದ್ದೇನಹಳ್ಳಿಯ ನಮ್ಮ ಆಶ್ರಮ, ಸತ್ಯಸಾಯಿ ಗ್ರಾಮದಲ್ಲಿ ನಾವು ವೇದಾಂತದ ಪರಮೋನ್ನತ ಸತ್ಯಗಳ ಅಧ್ಯಯನದಲ್ಲಿ ತೊಡಗಿದ್ದೆವು. ನಾನು ಅದ್ವೈತದ ಸಿದ್ಧಾಂತಗಳನ್ನು ಆಶ್ರಮ ನಿವಾಸಿಗಳಿಗೆ ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಬೋಧಿಸುತ್ತಿದ್ದೆ. ಬೃಹದಾರಣ್ಯಕೋಪನಿಷತ್ತಿನ ‘ಅಹಂ ಬ್ರಹ್ಮಾಸ್ಮಿ’ (1.4.10) ಹಾಗೂ ಛಾಂದೋಗ್ಯೋಪನಿಷತ್ತಿನ ‘ಸರ್ವಂ ಖಲ್ವಿದಂ ಬ್ರಹ್ಮ’ (3.14.1)- ಈ ಎರಡು ವಾಕ್ಯಗಳನ್ನು ಎಲ್ಲರೂ ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕೆಂದು ಹೇಳಿದೆ. ಈ ಎರಡೂ ವಾಕ್ಯಗಳನ್ನು ಒಟ್ಟಿಗೇ ಅರ್ಥಮಾಡಿಕೊಂಡಾಗ, ತಾನು ಮಾತ್ರ ಬ್ರಹ್ಮವಲ್ಲ, ಎಲ್ಲರೂ ಬ್ರಹ್ಮವೇ ಎಂಬುದು ಸಿದ್ಧವಾಗುತ್ತದೆ. ‘ಅಹಂ ಬ್ರಹ್ಮಾಸ್ಮಿ’ ಎಂಬ ಮೊದಲನೆಯ ವಾಕ್ಯವನ್ನು ಮಾತ್ರ ತಿಳಿದುಕೊಂಡರೆ, ‘ತಾನು ಇತರರಿಗಿಂತ ಹೆಚ್ಚು ಅಥವಾ ಪವಿತ್ರವಾದವನು’ ಎಂಬ ತಪ್ಪುಭಾವನೆ ಬರಬಹುದಲ್ಲವೇ? ಆದ್ದರಿಂದ ‘ಸರ್ವಂ ಖಲ್ವಿದಂ ಬ್ರಹ್ಮ’ ಎಂಬ ಎರಡನೆಯ ವಾಕ್ಯವನ್ನು ಜೊತೆಯಲ್ಲಿಯೇ ಸ್ಮರಿಸಿದರೆ ಇಂತಹ ಭಾವನೆಗೆ ಎಡೆ ಇರುವುದಿಲ್ಲ. ಈ ಸಂದರ್ಭದಲ್ಲಿ ಒಂದು ಆಧ್ಯಾತ್ಮಿಕ ಆಕಸ್ಮಿಕ ಶೋಧನಾ ಘಟನೆಯು ನಡೆದು, ಅದೈ ್ವ ಸಿದ್ಧಾಂತದ ಸಾರಸರ್ವಸ್ವವನ್ನು ಪ್ರತಿಬಿಂಬಿಸುವ ಒಂದು ಮಹಾಮಂತ್ರವೇ ಹೊರಹೊಮ್ಮಿತು. ಸಂಸ್ಕೃತವೇ ಗೊತ್ತಿಲ್ಲದ ಆಶ್ರಮವಾಸಿಯೊಬ್ಬರು, ತನಗೆ ಎರಡನೆಯ ವಾಕ್ಯದ ‘ಖಲ್ವಿದಂ’ ಎಂಬುದನ್ನು ಉಚ್ಚರಿಸಲು ಕಷ್ಟವಾಗುತ್ತಿದೆಯೆಂದು ನನಗೆ ತಿಳಿಸಿದರು. ಆಗ ನಾನು ಅವರಿಗೆ ‘ಖಲ್ವಿದಂ’ ಎಂಬುದನ್ನು ಬಿಟ್ಟುಬಿಡಲು ಹೇಳಿದೆ. ಇದರಿಂದಾಗಿ ‘ಅಹಂ ಬ್ರಹ್ಮ-ಸರ್ವಂ ಬ್ರಹ್ಮ’ ಎಂಬ ಮಂತ್ರದ ಉದಯವಾಯಿತು. ಇದು ಈಗ ನಮ್ಮ ಆಶ್ರಮದ ಧ್ಯೇಯವಾಕ್ಯವಾಗಿದೆ. ಈ ಮಂತ್ರ ಆಧುನಿಕ ಯುಗಕ್ಕೆ ಸಮಂಜಸವಾಗಿ ಅದ್ವೈತವನ್ನು ಸಾರುವ ಇನ್ನೊಂದು ಸರಳ ಮಹಾವಾಕ್ಯವೆಂದೇ ಹೇಳಬಹುದಲ್ಲವೇ?
(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)