ರಾಷ್ಟ್ರೀಯ ಸ್ವಯಂಸೇವಕ ಸಂಘದ ಎರಡನೇ ಸರಸಂಘಚಾಲಕ ಗೊಳ್ವಲ್ಕರ್ರ ಕುರಿತಂತಹ ಒಂದು ಹೇಳಿಕೆ ಕೆಲವು ದಿನಗಳ ಹಿಂದೆ ವಾಟ್ಸಪ್ನಲ್ಲಿ ಬಂದಿತ್ತು. ಸಂತರೊಬ್ಬರು ಇದನ್ನು ಕಳಿಸಿ ‘ಇದು ಸತ್ಯವೇ’ ಎಂದು ಕೇಳಿದ್ದರು. ಬ್ರಾಹ್ಮಣರನ್ನು ಹೊಗಳುತ್ತಾ ಇತರೆ ಜಾತಿಯವರನ್ನು ಅತ್ಯಂತ ತುಚ್ಛವಾಗಿ ಕಾಣುವಂತಹ ಹೇಳಿಕೆ ಅದು. ಮೇಲ್ನೋಟಕ್ಕೆ ಗೊಳ್ವಲ್ಕರರು ಹಾಗೆ ಹೇಳುವುದು ಸಾಧ್ಯವೇ ಇಲ್ಲವೆಂದೆನಿಸಿದರೂ ಅವರ ‘ಚಿಂತನಗಂಗಾ’ ಪುಸ್ತಕವನ್ನು ಜಾಲಾಡಿ ನೋಡಿದಾಗಲೂ ದೂರ-ದೂರಕ್ಕೂ ಇಂತಹ ಹೇಳಿಕೆಗಳು ಕಂಡುಬರಲಿಲ್ಲ. ದೇಶ ‘ಗುರೂಜಿ’ ಎಂದೇ ಗೌರವಿಸಿದ ಗೊಳ್ವಲ್ಕರರು ಬದುಕಿದ ರೀತಿ-ನೀತಿಯನ್ನು ಕಂಡವರೆಂದೂ ಅವರು ಹೀಗೆ ಹೇಳಿರಬಹುದೆಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇದಕ್ಕೆ ಪ್ರತಿಯಾಗಿ ಲಾಹೋರ್ ಪ್ರವಾಸದಲ್ಲಿದ್ದಾಗ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಅವರು ಮಾತನಾಡುವ ಅಗತ್ಯವಿಲ್ಲದಿದ್ದರೂ ಅವರ ದಾಡಿಯನ್ನೂ, ವ್ಯಕ್ತಿತ್ವವನ್ನೂ ಕಂಡ ಅಲ್ಲಿನ ಮುಖ್ಯೋಪಾಧ್ಯಾಯರು ಮಾತನಾಡುವಂತೆ ಒತ್ತಡ ಹಾಕಿದರು. ಧರ್ಮದ ಬಗ್ಗೆ ಇವರು ತುಂಬ ತಿಳಿದುಕೊಂಡಿರಬಹುದು ಎಂಬುದು ಅವರ ಸಹಜ ಅಭಿಮತ. ಗುರೂಜಿ 15 ನಿಮಿಷಗಳಲ್ಲಿ ಧರ್ಮದ ಪರಿಕಲ್ಪನೆಯನ್ನು ವಿಸ್ತಾರವಾಗಿ ಮುಂದಿಟ್ಟು ಇಂದಿನ ಹಿಂದೂ ಧರ್ವಿುಯರ ಅಗತ್ಯವನ್ನು ಸುಂದರವಾಗಿ ಕಟ್ಟಿಕೊಟ್ಟರು. ‘ನಾವಾರೂ ಬ್ರಾಹ್ಮಣರಲ್ಲ. ಬದಲಾಗಿ ಚಾಂಡಾಲರು. ಕಾರಣವೇನು ಗೊತ್ತೇ? ಮೂರು ದಿನಗಳ ಕಾಲ ಮ್ಲೇಚ್ಛರ ಮನೆಯಲ್ಲಿದ್ದವನು ಚಾಂಡಾಲನಾಗುತ್ತಾನೆ ಎಂದು ನಮ್ಮ ಧರ್ಮಶಾಸ್ತ್ರಗಳಲ್ಲಿ ಹೇಳಲಾಗಿದೆ’ ಎಂದರು. ಮ್ಲೇಚ್ಛರ ಆಳ್ವಿಕೆಯಲ್ಲಿ ಕೆಲವು ಕಾಲ ಕಳೆದು ಈಗ ಬ್ರಾಹ್ಮಣತ್ವದ ಹೆಸರಿನಲ್ಲಿ ಸವೋತ್ಕೃಷ್ಟತೆಯನ್ನು ಸಾರುವುದು ಅವರ ಮನಸ್ಸಿಗೆ ಒಪ್ಪುವ ಸಂಗತಿಯಾಗಿರಲಿಲ್ಲ. ಹೀಗಾಗಿಯೇ ಸಂಪ್ರದಾಯವಾದಿಗಳ ಮುಂದೆ ಹೀಗೆ ಅನಿಸಿಕೆಯನ್ನು ಅವರು ಬಿಚ್ಚಿಟ್ಟಿದ್ದು. ಮಾತಿನ ಕೊನೆಯಲ್ಲಿ ‘ನಾವೆಲ್ಲರೂ ಈಗ ಕ್ಷತ್ರಿಯ ಧರ್ಮವನ್ನು ಪಾಲಿಸಬೇಕಾಗಿದೆ’ ಎಂದು ಹೇಳುವುದನ್ನು ಅವರು ಮರೆಯಲಿಲ್ಲ.
ಸಂಘದ ಅಂದಿನ ನಾಯಕರ ವೈಶಿಷ್ಟ್ಯವೇ ಅದು. ಡಾಕ್ಟರ್ಜಿಯವರಿರಲಿ, ಗುರೂಜಿಯವರೇ ಇರಲಿ ಮಾಡಬೇಕಾದ ಕೆಲಸಗಳ, ಸಾಗಬೇಕಾದ ಹಾದಿಯ ನಿಚ್ಚಳ ಅರಿವು ಅವರಿಗಿತ್ತು. ಅನಾರೋಗ್ಯಪೀಡಿತರಾಗಿದ್ದ ಡಾಕ್ಟರ್ಜಿಯವರನ್ನು ಗುರೂಜಿ ನೋಡಿಕೊಳ್ಳುವ ಸಂದರ್ಭ ಬಂದಿತ್ತಲ್ಲ ಆಗ ದೈಹಿಕ ಪ್ರಜ್ಞೆ ಕಳೆದುಕೊಂಡಿರುವ ಹೊತ್ತಿನಲ್ಲೂ ಡಾಕ್ಟರ್ಜಿ ಒಮ್ಮೆಯಾದರೂ ಹಾಂ! ಹೂಂ! ಎಂದು ನರಳಲಿಲ್ಲ. ಅವರ ಉದ್ಗಾರಗಳು ಸಂಘ, ಶಾಖೆ, ಸ್ವಯಂಸೇವಕರು, ವ್ಯವಸ್ಥೆ, ಕಾರ್ಯಕ್ರಮಕ್ಕೆ ತಡವಾಯ್ತು, ಕಾರ್ಯ ಇನ್ನೂ ಅಪೇಕ್ಷೆಯಂತೆ ಬೆಳೆಯಲಿಲ್ಲ, ಸ್ವರಾಜ್ಯ ಪ್ರಾಪ್ತಿ ತಡವಾಗುತ್ತಿರುವುದಕ್ಕೆ ಮನದ ತಲ್ಲಣ ಇವುಗಳ ಕುರಿತಂತೆ ಇರುತ್ತಿತ್ತು. ಗುರೂಜಿಯವರೇನು ಕಡಿಮೆಯಲ್ಲ. ಒಂದೆಡೆ ಆದರ್ಶದ ಮಾರ್ಗ ಹಾಕಿಕೊಟ್ಟ ಡಾಕ್ಟರ್ಜಿಯವರು ಈ ವ್ಯಕ್ತಿತ್ವವನ್ನು ಪ್ರದರ್ಶಿಸಿದವರಾದರೆ, ಮತ್ತೊಂದೆಡೆ ದೀಕ್ಷೆ ಕೊಟ್ಟ ಅಖಂಡಾನಂದರ ಬದುಕು ‘ನಾನಲ್ಲ, ನೀನು’ ಎಂಬ ಶ್ರೇಷ್ಠ ಆದರ್ಶದ ಮೇಲೆ ನಿಂತಿದ್ದರಿಂದ ಅವರೂ ಹೀಗೆ ಇತರರಿಗಾಗಿಯೇ ಬದುಕುವ ಚಿಂತನೆಯನ್ನು ರೂಢಿಸಿಕೊಂಡುಬಿಟ್ಟಿದ್ದರು.
ಡಾಕ್ಟರ್ಜಿ ಅನಾರೋಗ್ಯಪೀಡಿತರಾಗಿ ಸಾವು-ಬದುಕಿನ ನಡುವೆ ತೀವ್ರ ಹೋರಾಟ ನಡೆಸುತ್ತಿರುವಾಗ ಸರಕಾರ್ಯವಾಹ ಜವಾಬ್ದಾರಿಯಿದ್ದ ಗುರೂಜಿಯವರೇ ಎಲ್ಲರಿಗೂ ಮಾಹಿತಿ ಮುಟ್ಟಿಸಬೇಕಾದ ಮತ್ತು ಬಂದ ಪತ್ರಗಳಿಗೆ ಉತ್ತರಿಸಬೇಕಾದ ಹೊಣೆ ಹೊತ್ತಿದ್ದರು. ಸಾಧಾರಣವಾಗಿ ಇಂತಹ ಸಂದರ್ಭದಲ್ಲಿ ನೋವು-ದುಃಖ ವ್ಯಕ್ತಪಡಿಸುವುದು ಸಹಜ. ಆದರೆ ಗುರೂಜಿ ಹಾಗಲ್ಲ. ಪ್ರತಿಯೊಬ್ಬರಿಗೂ ಡಾಕ್ಟರ್ಜಿಯವರ ಸಂಬಂಧ ಹೇಗಿತ್ತು ಎಂಬುದನ್ನು ಗ್ರಹಿಸಿ ಅದಕ್ಕೆ ತಕ್ಕಂತೆ ಆತ್ಮಸಮರ್ಪಣೆಯ ಪ್ರೇರಣೆಯನ್ನೂ ಹೆಚ್ಚಿನ ಸಹಕಾರಕ್ಕಾಗಿ ವಿನಂತಿಯನ್ನೂ ಮಾಡುತ್ತಾ ಪತ್ರ ಬರೆಯುತ್ತಿದ್ದರು. ಹಿರಿಯ ಕಾರ್ಯಕರ್ತರೊಬ್ಬರಿಗೆ ಬರೆದ ಪತ್ರದಲ್ಲಿ ‘ನಮ್ಮೀ ಸಂಘಕಾರ್ಯವನ್ನು ಇನ್ನಷ್ಟು ಬೆಳೆಸುವುದು ಪರಮಪೂಜನೀಯ ಡಾಕ್ಟರ್ಜಿಯವರಿಗೆ ನಾವು ಸಲ್ಲಿಸಬಹುದಾದ ಶಾಶ್ವತವಾದ ಸ್ಮಾರಕವಾಗಲಿದೆ. ಈಗ ಇನ್ನುಳಿದಿರುವುದು ಆ ಕೆಲಸ ಮಾತ್ರ. ಅವರು ಬದುಕಿದ್ದಾಗ ನಾವು ಸಾಧಿಸಲಾಗದಿದ್ದ ಕೆಲಸವನ್ನು ಈಗ ಅವರ ಪುಣ್ಯಸ್ಮರಣೆಯನ್ನು ಸಾಕ್ಷಿಯಾಗಿ ಇರಿಸಿಕೊಂಡು ನಮ್ಮ ಕರ್ತೃತ್ವ ಮತ್ತು ತ್ಯಾಗದಿಂದ ಪೂರ್ಣಗೊಳಿಸುವ ಪ್ರತಿಜ್ಞೆ ಧರಿಸಿ ಅದರಲ್ಲಿ ಸಫಲರಾಗೋಣ. ಎಲ್ಲರನ್ನೂ ಉತ್ಸಾಹ ಸಹಿತ ಮತ್ತು ಸ್ಪರ್ಧಾತ್ಮಕ ಮನೋಭಾವದಿಂದ ಕಾರ್ಯಕ್ಷೇತ್ರದಲ್ಲಿ ದುಡಿಯಲು ಪ್ರೇರೇಪಿಸೋಣ’ ಎಂದಿದ್ದರು. ಡಾಕ್ಟರ್ಜಿ ನಿಧನದ ನಂತರ ಅವರು ಶಾಖೆಗಳಿಗೆ ಕಳಿಸಿದ ಸುತ್ತೋಲೆಯಲ್ಲಿ ಮೊದಲ ಪ್ಯಾರಾದಲ್ಲಿ ಸಾವಿಗೆ ಸಂಬಂಧ ಮಾಹಿತಿ ಕೊಟ್ಟರೆ ಎರಡನೇ ಪ್ಯಾರಾದಲ್ಲಿ ಸಾಂತ್ವನದ ಮಾತುಗಳಿದ್ದವು. ಮೂರನೇ ಪ್ಯಾರಾದಲ್ಲಿ 13ನೆಯ ದಿನದ ಆಚರಣೆಯನ್ನು ಹೇಗೆ ಮಾಡಬೇಕು ಎಂಬುದರ ವಿವರವಲ್ಲದೇ ಇಡಿಯ ಸಮಾಜಕ್ಕೆ ಅದೊಂದು ಹೇಗೆ ಆದರ್ಶವಾಗಬೇಕು ಎಂಬುದರ ಕುರಿತಂತೆ ಸೂಕ್ತ ಸಂದೇಶಗಳೂ ಇದ್ದವು. ಕೆಲಸವನ್ನು ಬಿಟ್ಟು ಮತ್ತೊಂದನ್ನು ಅವರು ಯೋಚಿಸಿದ್ದೇ ಇಲ್ಲ.
ಇಂಥ ವ್ಯಕ್ತಿ ಇಷ್ಟು ಕರ್ಮಠರಾದದ್ದಾದರೂ ಹೇಗೆ? ಅದು ಅವರ ಬಾಲ್ಯದಲ್ಲೇ ಅಡಗಿರುವಂಥದ್ದು. ಅವರಿಗೆ ಬಾಲ್ಯದಲ್ಲಿ ಸಿಕ್ಕ ಸಂಸ್ಕಾರ, ಯೌವ್ವನದಲ್ಲಿ ಬದುಕಿನ ಉದ್ದೇಶವನ್ನು ಅವರು ಗುರುತಿಸಿಕೊಂಡ ರೀತಿ, ಮತ್ತು ವೈರಾಗ್ಯದಲ್ಲಿ ಅವರಿಗಿದ್ದ ತುಡಿತ ಇವೆಲ್ಲವೂ ಅವರನ್ನು ಸಾಕ್ಷಾತ್ ಗುರೂಜಿಯಾಗಿಸಿತು. ತಾಯಿ ಮಗನಿಗೆ ಒತ್ತಾಯ ಹಾಕಿ ಮದುವೆಯಾಗಲೇಬೇಕೆಂದು ಹಠ ಹಿಡಿದು, ತಾನೇ ಹುಡುಗಿಯನ್ನು ನೋಡಿ ಸಂಬಂಧಿಕರೊಡನೆ ಪ್ರೀತಿಯ ಮಧುವನ್ನು ಕಳಿಸಿದರು. ಮರಳಿ ಬಂದೊಡನೆ ಸಹಜವಾಗಿ ಕಾತರತೆಯಿಂದ ‘ಹುಡುಗಿಯನ್ನು ನೋಡಿದೆಯಾ’ ಎಂದು ಕೇಳಿದರೆ, ಆಳೆತ್ತರ ಬೆಳೆದಿದ್ದ ಈ ಹುಡುಗ ‘ಇಲ್ಲವಲ್ಲ, ನಾನು ಕಣ್ಣುಮುಚ್ಚಿಕೊಂಡಿದ್ದೆ’ ಎಂದುಬಿಟ್ಟರು. ಆನಂತರ ತಾಯಿ ಈ ಕುರಿತಂತೆ ಮಾತು ಕಡಿಮೆ ಮಾಡಿದರು. ಒಮ್ಮೆ ಮಾತ್ರ ಆತ ಮದುವೆಯಾಗದಿದ್ದರೆ ವಂಶ ಮುಂದುವರಿಯುವುದಿಲ್ಲ ಎಂಬ ತಾಯಿಯ ಹೇಳಿಕೆಗೆ ‘ವಂಶ ಕೊನೆಗೊಳ್ಳುವ ಬಗ್ಗೆ ನನಗೆ ಹೇಳಬೇಡಿ. ನಮ್ಮ ಸಮಾಜವನ್ನು ಸಕ್ಷಮ ಸುಭದ್ರವಾಗಿ ಉಳಿಸಬೇಕಾದಲ್ಲಿ ನಮ್ಮ ವಂಶವಷ್ಟೇ ಅಲ್ಲ, ಇನ್ನೂ ಅನೇಕ ವಂಶಗಳು ಕೊನೆಗೊಳ್ಳುವುದು ಅನಿವಾರ್ಯವಾಗಬಹುದು. ನನಗದರಿಂದ ಕೂದಲೆಳೆಯಷ್ಟೂ ದುಃಖವಾಗದು’ ಎಂದುಬಿಟ್ಟರು. ಸಹಜವಾಗಿಯೇ ಅವರ ಈ ತುಡಿತಕ್ಕೆ ವಿವೇಕಾನಂದರ ಚಿಂತನೆಯ ಪ್ರಭಾವವಿತ್ತು. ಅವರು ರಾಮಕೃಷ್ಣಾಶ್ರಮದೆಡೆಗೆ ವಿಶೇಷವಾಗಿ ಸೆಳೆಯಲ್ಪಟ್ಟು ಅಲ್ಲಿನ ಅಧ್ಯಕ್ಷರಾಗಿದ್ದ ಸ್ವಾಮಿ ಅಖಂಡಾನಂದಜಿಯವರ ಶಿಷ್ಯತ್ವ ಬಯಸಿ ಸಾರಗಾಛಿಗೆ ಹೋದರು. ಸ್ವಾಮಿ ಅಖಂಡಾನಂದರು ವಿವೇಕಾನಂದರ ಸೋದರ ಸನ್ಯಾಸಿಯಾಗಿದ್ದು ಅಖಂಡವಾಗಿ ಕರ್ಮಮಾರ್ಗದಲ್ಲಿ ದೇಹವನ್ನು ಸವೆಸಿದವರು. ಇಂಥವರ ಶಿಷ್ಯತ್ವ ಪಡೆದುಕೊಂಡ ಮಾಧವರಾವ್ ಗೊಳ್ವಲ್ಕರರು ಗುರುಗಳ ಸೇವೆಯನ್ನು ಮನತುಂಬುವಷ್ಟು ಮಾಡಿದರು. ದೇಹ ತೊರೆಯುವ ಮುನ್ನ ಗುರುಗಳು ಈ ತರುಣನನ್ನು ಬಳಿಗೆ ಕರೆದು ‘ನನ್ನಲ್ಲಿರುವ ಎಲ್ಲ ಒಳ್ಳೆಯ ಸಂಗತಿಗಳನ್ನು ನಿನಗೆ ನೀಡುತ್ತಿರುವೆ. ನನ್ನ ಹಿತಕ್ಕಾಗಿ ಇರುವುದೆಲ್ಲವೂ ನಿನಗೆ ಲಭಿಸಲಿ. ನಿನ್ನಲ್ಲಿರುವ ಎಲ್ಲ ಕೆಟ್ಟ ಸಂಗತಿಗಳನ್ನು ನನಗೆ ಕೊಡು. ನಿನ್ನ ಸ್ವಂತದ ಅಹಿತಕಾರಿ ಸಂಗತಿಗಳನ್ನು ನನಗೆ ಒಪ್ಪಿಸು’ ಎಂದು ಹೇಳಿದರಲ್ಲದೇ ‘ನಿನಗೆ ಆತ್ಮದರ್ಶನವಾಗಲಿ. ಇದೇ ರಾಮಕೃಷ್ಣರ ಬಳಿ ನಾನು ಸಲ್ಲಿಸುವ ಪ್ರಾರ್ಥನೆ’ ಎಂದುಬಿಟ್ಟರು.
ಗುರುವಿನ ಮಹಾಸಮಾಧಿಯ ನಂತರ ಅವರ ನೆನಪಿನ ಕೆಲವು ವಸ್ತುಗಳೊಂದಿಗೆ ಅಲ್ಲಿಂದ ಮರಳಿ ಬಂದ ತರುಣನ ಸಾಮರ್ಥ್ಯವನ್ನು ಗುರುತಿಸಿದ್ದು ಡಾಕ್ಟರ್ಜಿ. ಮುಂದೊಮ್ಮೆ ಗುರೂಜಿಯವರೇ ಹೇಳಿದ್ದುಂಟು- ‘ನಾನೊಮ್ಮೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಡಾಕ್ಟರ್ಜಿ ನನ್ನನ್ನು ನೋಡಿ ಹತ್ತಿರ ಬಂದು ಪರಿಚಯ ಮಾಡಿಕೊಂಡರು ಮತ್ತು ಬೆಕ್ಕು ಇಲಿಯನ್ನು ಹಿಡಿದಂತೆ ನನ್ನನ್ನೂ ಹಿಡಿದುಕೊಂಡರು’. ಈ ಮಾತಿನಲ್ಲಿ ಹಾಸ್ಯದ ಲೇಪವಿದ್ದರೂ ಡಾಕ್ಟರ್ಜಿಯವರ ಗುಣಗ್ರಾಹಿತನದ ನಯವಾದ ವರ್ಣನೆಯೇ ಆಗಿತ್ತು ಅದು. ತಮ್ಮ ನಿಷ್ಕಾಮ ಕರ್ಮದಿಂದಲೇ ಡಾಕ್ಟರ್ಜಿಯವರ ಮನಸ್ಸನ್ನು ಸೆಳೆದುಕೊಂಡ ಈ ತರುಣ ಡಾಕ್ಟರ್ಜಿಯವರ ನಂತರದ ಸ್ಥಾನಕ್ಕೆ ಸಹಜವಾದ ಆಯ್ಕೆಯಾಗಿ ಹೊರಹೊಮ್ಮಿದರು. ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಡಾಕ್ಟರ್ಜಿ ಗೊಳ್ವಲ್ಕರ್ರನ್ನು ಕರೆದು ‘ನನ್ನ ನಂತರದ ಜವಾಬ್ದಾರಿ ನಿಮ್ಮದ್ದೇ’ ಎಂದಾಗ ಅವರು ಸ್ಥಿತಪ್ರಜ್ಞರಂತೆ ಅದನ್ನು ಸ್ವೀಕರಿಸಿದ್ದರು. ಮುಂದೆ ಸರಸಂಘಚಾಲಕರಾಗಿ ಮೊದಲ ಭಾಷಣ ಮಾಡುವಾಗ ‘ನನ್ನ ಊಹೆಗೂ ಮೀರಿದ್ದ ಮಹತ್ವವುಳ್ಳ ಹೊಣೆಯನ್ನು ಡಾಕ್ಟರ್ಜಿ ನನಗೆ ಒಪ್ಪಿಸಿದ್ದಾರೆ. ಆದರೆ ಇದು ವಿಕ್ರಮಾದಿತ್ಯನ ಸಿಂಹಾಸನ. ಇದರ ಮೇಲೆ ಕೂರುವ ವ್ಯಕ್ತಿ ಕುರಿ ಮೇಯಿಸುವ ಬಾಲಕನೇ ಆದರೂ ಸರಿಯಾದ ತೀರ್ವನವನ್ನೇ ನೀಡುತ್ತಾನೆ. ಅಂತೆಯೇ ಡಾಕ್ಟರ್ಜಿಯವರು ನನ್ನ ಮುಖದಿಂದಲೂ ಸರಿಯಾದ ಸಂಗತಿಯನ್ನೇ ಹೇಳಿಸುವವರಿದ್ದಾರೆ. ಅವರ ಪುಣ್ಯದ ಫಲವಾಗಿ ನನ್ನ ಕೈಗಳಿಂದಲೂ ಯೋಗ್ಯವಾದ ಕೆಲಸಗಳೇ ಆದಾವು ಎಂಬ ಬಗ್ಗೆ ಸಂದೇಹವೇ ಬೇಡ’ ಎಂದಿದ್ದರು.
ಅನೇಕ ಬಾರಿ ನನಗನಿಸುವುದುಂಟು. ಡಾಕ್ಟರ್ಜಿಯವರು ಸಂಘವನ್ನು ನಿರ್ಮಾಣ ಮಾಡಿ ಅದಕ್ಕೊಂದು ತಾತ್ವಿಕ ನೆಲೆಗಟ್ಟನ್ನು ಒದಗಿಸಿಕೊಟ್ಟರೆ ಗುರೂಜಿಯವರು ಸಂಘಟನೆ ದೀರ್ಘವಾಗಿ ಇರಲು ಬೇಕಾದ ಆಧ್ಯಾತ್ಮಿಕ ಆಳವನ್ನು ಒದಗಿಸಿಕೊಟ್ಟರು. ಆನಂತರದ ದಿನಗಳಲ್ಲಿ ಈ ಅಡಿಪಾಯದ ಮೇಲೆ ಬೆಳೆದುಬಂದದ್ದು ಸಂಘ. ನೂರನೇ ವರ್ಷದ ಆಚರಣೆಯ ಹೊಸ್ತಿಲಲ್ಲಿ ಇವೆಲ್ಲವೂ ಸ್ಮರಿಸಿಕೊಳ್ಳಲು ಯೋಗ್ಯವಾದ್ದೇ. ರಂಗಾಹರಿಯವರು ಹಿಂದಿಯಲ್ಲಿ ಬರೆದ ‘ರಾಷ್ಟ್ರ ತಪಸ್ವಿ ಶ್ರೀ ಗುರೂಜಿ’ ಎನ್ನುವ ಕೃತಿಯನ್ನು ಸಂಘದ ಪ್ರಚಾರಕರಾಗಿದ್ದ ಚಂದ್ರಶೇಖರ ಭಂಡಾರಿ ಕನ್ನಡಕ್ಕೆ ತಂದಿದ್ದಾರೆ. ಸಾಹಿತ್ಯ ಸಿಂಧು ಪ್ರಕಾಶಿಸಿರುವ ಈ ಕೃತಿ ಸಂಘವನ್ನು ಪ್ರೀತಿಸುವವರು ಮತ್ತು ವಿರೋಧಿಸುವವರು ಕೂಡ ಓದಲೇಬೇಕಾದಂಥದ್ದು. ಗುರೂಜಿಯವರ ಮೇಲೆ ಅನವಶ್ಯಕವಾಗಿ ಆಪಾದನೆಗಳನ್ನು ಮಾಡುವ, ಸುಳ್ಳು ಹೇಳುವ ಮಂದಿಯನ್ನು ಕಂಡಾಗ ಪಿಚ್ಚೆನಿಸುತ್ತದೆ. ಗುರೂಜಿಯವರ ವ್ಯಕ್ತಿತ್ವವನ್ನು ಒಮ್ಮೆ ಅರಿತರೆ ಮತ್ತೆ ಇಂತಹ ಮಾತುಗಳನ್ನಾಡುವ ಧೈರ್ಯ ಬರಲಾರದು. ಚಂದ್ರಶೇಖರ ಭಂಡಾರಿಯವರು ಅನೇಕ ಸ್ವತಂತ್ರ ಕೃತಿಗಳನ್ನು ರಚಿಸಿದ್ದಾರೆ, ಅನುವಾದಗಳನ್ನು ಮಾಡಿದ್ದಾರೆ. ಇದು ಅವರ ಬದುಕಿನ ಕೊನೆಯ ಕೃತಿ. ಇತ್ತೀಚೆಗಷ್ಟೆ ದೇಹತ್ಯಾಗ ಮಾಡಿದ ಅವರು ಕನ್ನಡಿಗರಿಗೆ ಹಬ್ಬದ ಊಟವನ್ನೇ ಉಣಬಡಿಸಿದ್ದಾರೆ. ಗುರೂಜಿ ಕುರಿತಂತೆ ಓದುತ್ತಾ ಹೋದಂತೆಲ್ಲ ಒಂದು ಸಂಘಟನೆ ಆಳಕ್ಕೆ ಬೇರುಬಿಡಲು ಇರಬಹುದಾಗಿರುವ ಮಹತ್ವದ ಸಂಗತಿಗಳೇನೆಂಬುದು ಅರಿವಾಗುತ್ತದೆ. ಪ್ರತಿಯೊಬ್ಬ ಸಂಘಟನಕಾರನೂ ಈ ತ್ಯಾಗ ಮತ್ತು ಸೇವೆಯ ಮಹತ್ವವನ್ನು ರೂಢಿಸಿಕೊಂಡಾಗ ಮಾತ್ರ ಆತ ಕಟ್ಟಿದ ಸಂಘಟನೆ ನಿಸ್ವಾರ್ಥವಾಗಿ ಸುದೀರ್ಘಕಾಲ ಕೆಲಸ ಮಾಡಬಲ್ಲದು. ಆ ಕಾರಣಕ್ಕೂ ಇದೊಂದು ಅಧ್ಯಯನಯೋಗ್ಯ ಕೃತಿ.
ಗುರೂಜಿಯವರಂತೂ ಬದುಕಿನುದ್ದಕ್ಕೂ ಒಮ್ಮೆಯೂ ಸುಮ್ಮನೆ ಕುಳಿತವರಲ್ಲ. 33 ವರ್ಷಗಳಲ್ಲಿ ಸುಮಾರು 60 ಬಾರಿ ಅವಿಶ್ರಾಂತವಾಗಿ ದಣಿವಿಲ್ಲದಂತೆ ಅವರು ದೇಶ ಸುತ್ತಿದ್ದಾರೆ. ಅವರೇ ಹೇಳುತ್ತಿದ್ದಂತೆ ‘ಮಲಗಿದ್ದಾಗ ಕಲಿ, ಎಚ್ಚರಗೊಂಡಾಗ ದ್ವಾಪರ, ಎದ್ದುನಿಂತರೆ ತ್ರೇತ, ನಡೆದರೆ ಕೃತ. ಯುಗಗಳು ಉರುಳುವುದು ಹೀಗೆಯೇ.’ ಈ ಹಿನ್ನೆಲೆಯಲ್ಲೇ ಅವರು ಬದುಕಿದ ಕಾಲ ಬಹುತೇಕ ಕೃತಯುಗದ್ದೇ ಆಗಿತ್ತೆನಿಸುತ್ತದೆ. ‘ನನ್ನ ಮನೆ ರೈಲುಗಾಡಿ’ ಎಂದು ಅವರು ತಮಾಷೆಗೆ ಹೇಳುತ್ತಿದ್ದರಾದರೂ ಅದು ಸತ್ಯವೇ ಆಗಿತ್ತು. ಸಂಘದ ಪ್ರಚಾರಕರು ಮನೆಗಳಲ್ಲೇ ಉಳಿದುಕೊಳ್ಳುವ ಪಾರಿವಾರಿಕ ರೀತಿಯ ಕಾರ್ಯಶೈಲಿಯನ್ನೇ ಡಾಕ್ಟರ್ಜಿಯವರಿಂದ ಬಳುವಳಿಯಾಗಿ ಪಡೆದ ಗುರೂಜಿಯವರು ಅದನ್ನು ಇನ್ನಷ್ಟು ವ್ಯವಸ್ಥಿತ ಮತ್ತು ವಿಸõತಗೊಳಿಸಿದರು. ವಿಮಾನದಿಂದ ಮೊದಲುಗೊಂಡು ಸೈಕಲ್, ಎತ್ತಿನಬಂಡಿಯವರೆಗೆ ಎಲ್ಲ ವಾಹನಗಳಲ್ಲೂ ಪಯಣಿಸಿದ ಅವರು ಅಂದಿನ ದಿನಗಳ ರಿಕ್ಷಾದಲ್ಲಿ ಮಾತ್ರ ಓಡಾಡುತ್ತಿರಲಿಲ್ಲ. ಅದನ್ನು ಮನುಷ್ಯರು ಎಳೆಯುತ್ತಾರೆ ಎಂಬ ಕಾರಣಕ್ಕೆ. ಒಮ್ಮೆ ಹೀಗೆ ರಿಕ್ಷಾವೊಂದನ್ನು ತರಿಸಿದ್ದಾಗ ಗುರೂಜಿ ನಾಲ್ಕು ಕಿಮೀ ನಡೆದು ಹೊರಟರೆ ಹೊರತು ರಿಕ್ಷಾ ಏರಲಿಲ್ಲ. ಮಿತ್ರರೊಬ್ಬರು ಪರಾನ್ನ ಊಟ ಮಾಡುವುದಿಲ್ಲವೆಂದಾಗ ಗುರೂಜಿ ನಗುತ್ತಾ ‘ನಾನು ಕೂಡ ಪರಾನ್ನ ತಿನ್ನುವುದಿಲ್ಲ’ ಎಂದರಂತೆ. ಉಳಿದವರೆಲ್ಲ ಹುಬ್ಬೇರಿಸಿ ‘ಕಾರ್ಯಕರ್ತರ ಮನೆಯಲ್ಲಿ ಉಣ್ಣುವಿರಲ್ಲ’ ಎಂದಿದ್ದಕ್ಕೆ ‘ಅವರು ನನಗೆ ಎಂದಿಗೂ ಪರ ಅಲ್ಲ, ನನ್ನ ಪರಿವಾರ’ ಎಂದವರು ಗುರೂಜಿ. ಸಂಘಟನೆಯ ವಿಚಾರದಲ್ಲಷ್ಟೇ ಅಲ್ಲ ರಾಷ್ಟ್ರಕಟ್ಟುವ ವಿಚಾರದಲ್ಲೂ ಅವರು ಅಗ್ರಣಿಯೇ. ಪಾಕಿಸ್ತಾನದಿಂದ ಬಂದ ನಿರಾಶ್ರಿತರಿಗೆ ಸಹಾಯ ಮಾಡುವಲ್ಲಿ, ಗಾಂಧೀಜಿಯವರನ್ನು ಮುಸಲ್ಮಾನ್ ಗೂಂಡಾಗಳಿಂದ ರಕ್ಷಿಸುವಲ್ಲಿ ಸಂಘದ ಸ್ವಯಂಸೇವಕರಿಗೆ ಜವಾಬ್ದಾರಿ ನೀಡಲು ಎಂದೂ ಹಿಂದೇಟು ಹಾಕಲಿಲ್ಲ. ಇಡಿಯ ಕೃತಿಯಲ್ಲಿ ಇಂತಹ ನೂರಾರು ಘಟನೆಗಳ ಉಲ್ಲೇಖವಿದೆ. ನಿಸ್ಸಂಶಯವಾಗಿ ಗುರೂಜಿ ನಮ್ಮ ಹೃದಯವನ್ನು ಆವರಿಸಿಕೊಂಡುಬಿಡುತ್ತಾರೆ.
(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)