ಸನಾತನ ಧರ್ಮವು ಜಗತ್ತಿನ ಪ್ರಾಚೀನ ಆಧ್ಯಾತ್ಮಿಕ ಸಿದ್ಧಾಂತ. ಸಹಸ್ರ ಶತಮಾನಗಳ ಕಾಲ ಬದುಕುಳಿಯಲು ಸಹಾಯಕವಾದ ಸನಾತನ ಧರ್ಮದ ರಹಸ್ಯವೆಂದರೆ, ಕಾಲಕ್ಕೆ ತಕ್ಕಂತೆ ತನ್ನನ್ನು ತಾನು ಪುನಶೋಧಿಸಿಕೊಂಡು (Reinvent), ಅಂತರಂಗದ ಸತ್ವವನ್ನು ಹಾಗೆಯೇ ಉಳಿಸಿಕೊಂಡು ತನ್ನ ಹೊರಗಿನ ರೂಪದಲ್ಲಿ ಸೂಕ್ತ ಪರಿವರ್ತನೆಗಳನ್ನು ಮಾಡಿಕೊಳ್ಳುವ ಅದರ ಸಾಮರ್ಥ್ಯ. ಅಲ್ಲದೆ ಸನಾತನ ಧರ್ಮದ ತಿರುಳನ್ನು ಸಮಾಜದ ಅತ್ಯಂತ ಕೆಳವರ್ಗದ ಸಾಮಾನ್ಯ ಜನರಿಗೂ ಮುಟ್ಟಿಸುವಲ್ಲಿ ಲಲಿತ ಕಲೆಗಳ (Fine Arts) ಹಾಗೂ ಪ್ರದರ್ಶನ ಕಲೆಗಳ (Performing Arts) ಅನೇಕ ರೂಪಗಳು ಮಹತ್ತರ ಪಾತ್ರ ವಹಿಸಿವೆ. ಕಲೆಯನ್ನು ಸಮಾಜದ ಕನ್ನಡಿಯೆಂದು ಹೇಳುತ್ತಾರೆ. ಭಾರತದಲ್ಲಿ ಕಲೆಯು ಮೂಲತಃ ಸನಾತನ ಧರ್ಮದ ಕನ್ನಡಿಯಂತೆ ರೂಪುಗೊಂಡಿದ್ದು, ಅದರಲ್ಲೂ ಮುಖ್ಯವಾಗಿ ಪ್ರದರ್ಶನ ಕಲೆಗಳು ಸನಾತನ ಧರ್ಮದ ಸಿದ್ಧಾಂತಗಳನ್ನು ಕಥೆ, ನಾಟಕ, ಸಂಗೀತ, ಇತ್ಯಾದಿಗಳ ಮೂಲಕ ಸಮಾಜದಲ್ಲಿ ಜನಪ್ರಿಯಗೊಳಿಸಿವೆ.
ಒಂದು ದಂತಕಥೆಯ ಪ್ರಕಾರ, ಪ್ರಾಚೀನ ಕಾಲದಲ್ಲಿ ಒಮ್ಮೆ ಸಮಾಜದಲ್ಲಿ ಸಂಪೂರ್ಣ ನೈತಿಕ ಅಧಃಪತನವಾಗಿತ್ತು. ಇದಕ್ಕೆ ಕಾರಣ, ಸಾಮಾನ್ಯ ಜನರಲ್ಲಿ ವೇದೋಪದೇಶಗಳು ಹಾಗೂ ಆಧ್ಯಾತ್ಮಿಕತೆ ಬಗ್ಗೆ ಆಸಕ್ತಿ ನಶಿಸಿ ಹೋಗಿತ್ತು. ಈ ಸಮಸ್ಯೆಯನ್ನು ಬಗೆಹರಿಸಲು ದೇವತೆಗಳ ಅಧಿಪತಿಯಾದ ಇಂದ್ರನು ಸೃಷ್ಟಿಕರ್ತ ಪ್ರಜಾಪತಿ ಬ್ರಹ್ಮನಲ್ಲಿಗೆ ಹೋಗಿ ಪ್ರಾರ್ಥಿಸಿದ. ಆಗ ಪ್ರಜಾಪತಿಬ್ರಹ್ಮನು ನಾಲ್ಕು ವೇದಗಳ ಕುರಿತು ಧ್ಯಾನಿಸಿ, ಅವುಗಳಲ್ಲಿ ಒಂದೊಂದರಿಂದಲೂ ಒಂದೊಂದು ಅಂಶವನ್ನು ತೆಗೆದುಕೊಂಡು ಸಂಯೋಜಿಸಿ ‘ನಾಟ್ಯವೇದ’ವೆಂಬ ಐದನೆಯ ವೇದವನ್ನು ಸೃಷ್ಟಿಸಿದ. ಏವಂ ಸಂಕಲ್ಪ ್ಯ ಭಗವಾನ್ ಸರ್ವವೇದಾನನುಸ್ಮರನ್ |
ನಾಟ್ಯವೇದಂ ತತಶ್ಚಕ್ರೇ ಚತುರ್ವೆದಾಂಗಸಂಭವಮ್ ||
‘ಭಗವಂತನು ನಾಟ್ಯವೇದದ ಸೃಷ್ಟಿಯನ್ನು ಸಂಕಲ್ಪಿಸಿ, ನಾಲ್ಕು ವೇದಗಳ ಕುರಿತು ಧ್ಯಾನಿಸಿ ಅವುಗಳ ಕೆಲವು ಅಂಶಗಳನ್ನು ಸಂಗ್ರಹಿಸಿ ಈ ಐದನೆಯ ವೇದವನ್ನು ರಚಿಸಿದ’.
ಜಗ್ರಾಹ ಪಾಠ್ಯಮೃಗ್ವೇದಾತ್ಸಾಮಭ್ಯೋ ಗೀತಮೇವ ಚ |
ಯಜುರ್ವೆದಾದಭಿನಯಾನ್ ರಸಾನಾಥರ್ವಣಾದಪಿ ||
‘ಋಗ್ವೇದದಿಂದ ಪಠ್ಯ, ಸಾಮವೇದದಿಂದ ಗೀತೆ, ಯಜುರ್ವೆದದಿಂದ ಅಭಿನಯ ಹಾಗೂ ಅಥರ್ವಣವೇದದಿಂದ ರಸ- ಈ ನಾಲ್ಕು ಅಂಶಗಳ ಸಂಗಮರೂಪವೇ ನಾಟ್ಯವೇದ’.
ತದನಂತರ ಪ್ರಜಾಪತಿಬ್ರಹ್ಮನು ಆಧ್ಯಾತ್ಮಿಕ ಹಾಗೂ ನೈತಿಕ ಮೌಲ್ಯಗಳನ್ನೊಳಗೊಂಡ ಐತಿಹಾಸಿಕ ಹಾಗೂ ಪೌರಾಣಿಕ ಕಥೆಗಳನ್ನು ನಾಟಕಗಳ ರೂಪದಲ್ಲಿ ದೇವತೆಗಳು ಪ್ರದರ್ಶಿಸಬೇಕೆಂದು ದೇವೇಂದ್ರನಿಗೆ ಆಜ್ಞಾಪಿಸಿದ. ಆದರೆ ದೇವೇಂದ್ರನು, ‘ನಾಟ್ಯವೇದವನ್ನು ಅಧ್ಯಯನ ಮಾಡಿ ಅನುಷ್ಠಾನಕ್ಕೆ ತರಲು ಪಾಪರಹಿತರಾದ ಋಷಿಗಳಿಗೆ ಮಾತ್ರ ಸಾಧ್ಯ’ ಎಂದು ಬಿನ್ನವಿಸಿದ. ಆಗ ಪ್ರಜಾಪತಿ ಆ ಕಾರ್ಯವನ್ನು ಭರತಮುನಿ ಹಾಗೂ ಅವನ ನೂರು ಪುತ್ರರಿಗೆ ವಹಿಸಿಕೊಟ್ಟ. ಭರತಮುನಿ ಪ್ರಜಾಪತಿಯಿಂದ ನೀಡಲ್ಪಟ್ಟ ಎಲ್ಲ ಆದೇಶಗಳನ್ನೂ ಸಂಗ್ರಹಿಸಿ ನಾಟ್ಯಶಾಸ್ತ್ರವನ್ನು ರಚಿಸಿದ. ನಾಟ್ಯಶಾಸ್ತ್ರವು ಪ್ರದರ್ಶನ ಕಲೆಗಳಿಗೆ ಆಧಾರ ಗ್ರಂಥವಾಗಿರುವುದು ಮಾತ್ರವಲ್ಲದೆ, ರಂಗಸ್ಥಳ, ವೇದಿಕೆ, ಗೀತೆಗಳ ರಚನೆ ಹಾಗೂ ಸಂಗೀತವಾದ್ಯಗಳ ಕುರಿತಾಗಿಯೂ ತಿಳಿಸಿಕೊಡುತ್ತದೆ. ಹೀಗೆ ನಾಟ್ಯವೇದದ ಉನ್ನತ ಜ್ಞಾನವು ಜನಸಾಮಾನ್ಯರಿಗೂ ಲಭ್ಯವಾಗಿ ನಿತ್ಯಜೀವನದಲ್ಲಿ ಮನರಂಜನೆಯ ಜೊತೆಯಲ್ಲಿ ಅವರು ಆಧ್ಯಾತ್ಮಿಕ-ನೈತಿಕ ಕರ್ತವ್ಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತು. ನಾಟ್ಯಶಾಸ್ತ್ರವು ಅಂದಿನ ಭರತ ಉಪಖಂಡವಾಗಿದ್ದ, ಪೂರ್ವದಲ್ಲಿ ಸಿಂಧೂ ಕಣಿವೆಯಿಂದ ಹಿಡಿದು ಪಶ್ಚಿಮದ ಥೈಲ್ಯಾಂಡಿನವರೆಗೆ ಅನೇಕ ತಲೆಮಾರುಗಳ ಕಲಾವಿದರಿಗೆ ಸ್ಪೂರ್ತಿ ನೀಡಿ, ಅವರು ಆಧ್ಯಾತ್ಮಿಕ-ನೈತಿಕ ಮೌಲ್ಯಗಳನ್ನು ತಮ್ಮ ಪ್ರದರ್ಶನಗಳ ಮೂಲಕ ಜನಜೀವನದಲ್ಲಿ ಬಿತ್ತರಿಸಲು ಅನುವು ಮಾಡಿಕೊಟ್ಟಿತು. ಹೀಗೆ ಆಧ್ಯಾತ್ಮಿಕತೆಯು ಜನಜೀವನದಲ್ಲಿ ಹಾಸುಹೊಕ್ಕಾಗಿ ಬೆಳೆಯಿತು.
ನಾಟ್ಯಶಾಸ್ತ್ರ, ಯಾಜ್ಞವಲ್ಕ್ಯ, ಸ್ಮೃತಿ ಇತ್ಯಾದಿ ಗ್ರಂಥಗಳು, ಸರ್ವ ಕಲೆಗಳಿಗೂ ಆಧ್ಯಾತ್ಮಿಕತೆಯೇ ಜೀವಾಳವೆಂದು ಸಾರಿ, ಅವುಗಳು ಮಾನವನಿಗೆ ಮನಸ್ಸಿನ ಏಕಾಗ್ರತೆಯನ್ನು ಪ್ರಸಾದಿಸಿ, ಅವನು ಆಧ್ಯಾತ್ಮಿಕ ಪಥದಲ್ಲಿ ಮುನ್ನಡೆಯುವಂತೆ ಮಾಡಿ ಮೋಕ್ಷ ಸಾಧನೆಗೆ ನೆರವಾಗಬೇಕೆಂದು ಬೋಧಿಸಿದವು. ಹೀಗೆ ಜನಸಾಮಾನ್ಯರಿಗೆ ಕಲೆಗಳು ಆಧ್ಯಾತ್ಮಿಕ ಪಥದಲ್ಲಿ ಯೋಗಕ್ಕೆ ಪರ್ಯಾಯ ಮಾರ್ಗಗಳಾಗಿ ರೂಪುಗೊಂಡವು. ಕಲೆಗಳ ಜ್ಞಾನ-ಶಕ್ತಿಗಳು ವೇದೋಪನಿಷತ್ತುಗಳ ಜ್ಞಾನ-ಶಕ್ತಿಗಳಿಗೆ ಸಮಾನವೆಂಬ ಭಾವನೆ ಜನಜೀವನದಲ್ಲಿ ಮೂಡಿತು. ನಾಟ್ಯಶಾಸ್ತ್ರದ ಪ್ರಕಾರ, ಪ್ರದರ್ಶನ ಕಲೆಗಳ ಮುಖ್ಯ ಉದ್ದೇಶವೆಂದರೆ, ಪ್ರೇಕ್ಷಕನ ಪ್ರಜ್ಞೆಯ ಸ್ತರವನ್ನು ಉನ್ನತ ಮಟ್ಟಕ್ಕೆ ಕೊಂಡುಹೋಗುವುದು. ಇದರರ್ಥ, ಅವನನ್ನು ದೇಹಪ್ರಜ್ಞೆಯಿಂದ ಹಂತ-ಹಂತವಾಗಿ ಮೇಲೇರಿಸಿ, ಆತ್ಮಪ್ರಜ್ಞೆಗೆ ತಲುಪಿಸುವುದಾಗಿದೆ. ಎಂದರೆ, ಪ್ರದರ್ಶನ ಕಲೆಗಳ ಮುಖ್ಯ ಉದ್ದೇಶ ಆಧ್ಯಾತ್ಮಿಕವಾಗಿದೆ. ನಾಟಕದ ಲೇಖಕ, ನಟರು ಹಾಗೂ ನಿರ್ದೇಶಕ- ಈ ಮೂವರೂ ಸೇರಿ ಪ್ರೇಕ್ಷಕನಿಗೆ ಅಂತರಂಗ-ಸೌಂದರ್ಯಾನುಭೂತಿ ನೀಡಿ, ಅವನ ಪ್ರಜ್ಞಾಮಟ್ಟವನ್ನು ಲೌಕಿಕದಿಂದ ದಿವ್ಯತೆಯೆಡೆಗೆ ಕೊಂಡೊಯ್ಯುವುದಾಗಿದೆ.
ಪ್ರದರ್ಶನ ಕಲಾಕಾರರ ಇಂತಹ ಪರಂಪರೆಯನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಮುಟ್ಟಿಸುವ ಕಾರ್ಯಕ್ಕೆ ನೆರವಾದದ್ದು, ಕಲಾಪೋಷಕರಾದ ರಾಜರು ಹಾಗೂ ದೇವಸ್ಥಾನಗಳ ನಿರ್ವಾಹಕರು. ಇವರು ಕಲೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಿದ್ದು ಮಾತ್ರವಲ್ಲದೆ, ಪ್ರೇಕ್ಷಕರು ಈ ಪ್ರದರ್ಶನಗಳನ್ನು ನೋಡಿ ಜೀವನದ ಉನ್ನತ ಪಾಠಗಳನ್ನು ಕಲಿಯಲು ನೆರವಾಗುತ್ತಿದ್ದರು. ಕಾಲಕಳೆದಂತೆ ರಾಜರ ಆಸ್ಥಾನಗಳಲ್ಲಿ ಕಲಾಪ್ರದರ್ಶನಗಳು ಮೂಲ ಉದ್ದೇಶವನ್ನು ಕಳೆದುಕೊಂಡು ಮನರಂಜನೆಯ ಮಟ್ಟಕ್ಕೆ ಮುಟ್ಟಿದರೂ, ದೇವಸ್ಥಾನಗಳ ಉತ್ಸವಗಳಲ್ಲಿ ಕಲಾಪ್ರದರ್ಶನಗಳು ಮೂಲ ಉದ್ದೇಶವಾದ ಆಧ್ಯಾತ್ಮಿಕ ಪ್ರೇರಣೆಯನ್ನು ಮುಂದುವರಿಸಿಕೊಂಡು ಬಂದವು. ಜನಸಾಮಾನ್ಯರಿಗೆ ಅಗತ್ಯವಾದ ಮೌಲ್ಯಬೋಧನೆಯನ್ನು ಪ್ರದರ್ಶನಕಲೆಗಳ ವೇದಿಕೆಗಳ ಮೂಲಕ ಮಾಡಲಾಗುತ್ತಿತ್ತು. ಸಾಮಾನ್ಯವಾಗಿ ಇಂಥ ಪ್ರದರ್ಶನಗಳು ನಾಟಕಗಳಲ್ಲಿ ಗದ್ಯ ಮತ್ತು ಪದ್ಯಗಳ ಸುಂದರ ಸಂಗಮ, ಹಾಗೂ ಸುಮಧುರ ಸಂಗೀತ ಕಾರ್ಯಕ್ರಮಗಳಾಗಿ ಹೊರಹೊಮ್ಮುತ್ತಿದ್ದವು.
ಕಲೆಯ ಮಾಧ್ಯಮದ ಮೂಲಕ ಸಾಮಾಜಿಕ ಮೌಲ್ಯಗಳನ್ನು ಬಿತ್ತರಿಸುವ ಕಾರ್ಯವಿಧಾನವು ಜಗತ್ತಿನ ಎಲ್ಲ ಪ್ರಾಚೀನ ನಾಗರಿಕತೆಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ನಾಟ್ಯಶಾಸ್ತ್ರದಲ್ಲಿ ಹೇಳಿರುವಂತೆ, ಪ್ರದರ್ಶನ ಕಲೆಗಳ ಉದ್ದೇಶವು ಭಾರತದಲ್ಲಿ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಉತ್ಕರ್ಷವಾಗಿತ್ತು. ಇದರಿಂದಾಗಿ ಇಲ್ಲಿ ಪ್ರದರ್ಶನಗಳ ಗುಣಮಟ್ಟ ಇತರ ನಾಗರಿಕತೆಗಳಿಗೆ ಹೋಲಿಸಿದರೆ ಉನ್ನತ ಸ್ತರದಲ್ಲಿರುತ್ತಿತ್ತು. ಸಾಮಾನ್ಯವಾಗಿ ಸಂಸ್ಕೃತ ನಾಟಕಗಳ ಮೂಲಕ ವ್ಯಕ್ತವಾಗುತ್ತಿದ್ದ ನಾಟ್ಯಶಾಸ್ತ್ರದ ವಿಧಿ-ವಿಧಾನಗಳು, ಕಾಲಕ್ರಮೇಣ ದೇಶೀಯ ಭಾಷೆಗಳಲ್ಲಿಯೂ ವ್ಯಕ್ತವಾದವು. ಅಲ್ಲಿಂದ ಮುಂದುವರಿದು ಹಲವು ಜಾನಪದ ಕಲೆಗಳೂ ಜನ್ಮತಳೆದವು. ಇದಕ್ಕೆ ನಿದರ್ಶನಗಳೆಂದರೆ, ಕರ್ನಾಟಕದಲ್ಲಿ ಯಕ್ಷಗಾನ, ಗುಜರಾತಿನಲ್ಲಿ ಅಖ್ಯಾನ, ಮಧ್ಯಪ್ರದೇಶದಲ್ಲಿ ಪಂಡ್ವಾಣಿ, ಆಂಧ್ರಪ್ರದೇಶದಲ್ಲಿ ಬುರ್ರಕಥೆ, ಉತ್ತರಭಾರತದಲ್ಲಿ ರಾಮಲೀಲಾ, ದಕ್ಷಿಣ ಭಾರತದಲ್ಲಿ ಹರಿಕಥೆ, ಇತ್ಯಾದಿ.
ಹಲವು ಪರಕೀಯ ಆಕ್ರಮಣ ಹಾಗೂ ಪ್ರಭಾವಗಳಿಂದ ಸನಾತನ ಧರ್ಮದ ಪರಿಶುದ್ಧತೆ ಕಾಪಾಡುವಲ್ಲಿ ಕಲೆಗಳ ಪಾತ್ರ ಮಹತ್ತರವಾಗಿದೆ. ಕ್ರಿಸ್ತಶಕ 12ನೇ ಶತಮಾನದಿಂದ 17ನೇ ಶತಮಾನದವರೆಗೆ, ದೇಶದಲ್ಲಿ ನಡೆದ ಪರಮತೀಯ ಆಕ್ರಮಣ ಹಾಗೂ ಯುದ್ಧಗಳು ಭಾರತೀಯರನ್ನು ಆಧ್ಯಾತ್ಮಿಕ ಪರಂಪರೆಯಿಂದ ವಿಚಲಿತಗೊಳಿಸುತ್ತಿದ್ದ ಕಾಲದಲ್ಲಿ, ಆಗ ಉದಯವಾದ ಭಕ್ತಿಸಂಪ್ರದಾಯದ ಭಕ್ತ-ಕವಿಗಳು ಸರಳ ಹಾಗೂ ಹೃದಯಪೂರ್ವಕ ಗೀತೆಗಳಿಂದ ಜನ-ಮನದಲ್ಲಿ ಭಕ್ತಿಯ ಪ್ರವಾಹವನ್ನು ಹರಿಸಿದರು. ಉತ್ತರ ಭಾರತದಲ್ಲಿ ಕಬೀರದಾಸ್, ತುಲಸೀದಾಸ್ ಹಾಗೂ ಸೂರದಾಸ್; ಪೂರ್ವ ಭಾರತದಲ್ಲಿ ಚೈತನ್ಯ ಮಹಾಪ್ರಭು ಹಾಗೂ ಶಂಕರದೇವ; ದಕ್ಷಿಣ ಭಾರತದಲ್ಲಿ ಪುರಂದರದಾಸ, ಬಸವಣ್ಣ, ಅಲ್ಲಮಪ್ರಭು, ತ್ಯಾಗರಾಜ ಮತ್ತು ಆಂಡಾಳ್ ಹಾಗೂ ಪಶ್ಚಿಮ ಭಾರತದಲ್ಲಿ ಜ್ಞಾನೇಶ್ವರ, ನಾಮದೇವ ಮತ್ತು ಮೀರಾಬಾಯಿ, ಭಕ್ತಿಗೀತೆಗಳು ಹಾಗೂ ಸಂಗೀತಗಳ ಮೂಲಕ ಸನಾತನ ಧರ್ಮದ ಆಧ್ಯಾತ್ಮಿಕ ಸಂದೇಶವನ್ನು ಜೀವಂತವಾಗಿಟ್ಟರು. ಮುಖ್ಯವಾಗಿ ಭಗವಂತನು ಸರ್ವಜೀವಿಗಳ ಹೃದಯನಿವಾಸಿಯೆಂಬ ಭಾವನೆಯನ್ನು ಜನರ ಹೃದಯಗಳಲ್ಲಿ ಉದ್ದೀಪನಗೊಳಿಸಿದರು.
ಉದಾಹರಣೆಗೆ, ಬಸವಣ್ಣನವರು ಹೇಳುವಂತೆ ಭಗವಂತನು ವಿಶ್ವವ್ಯಾಪಿಯಾದ ನಿರಾಕಾರ ಸ್ವರೂಪಿ-
ಉದಕದೊಳಗೆ ಬೈಚಿಟ್ಟ ಬಯಕೆಯ ಕಿಚ್ಚಿನಂತೆ ಇದ್ದಿತ್ತು;/ ಸಸಿಯೊಳಗಣ ರಸದ ರುಚಿಯಂತೆ ಇದ್ದಿತ್ತು;/ ನನೆಯೊಳಗಣ ಪರಿಮಳದಂತೆ ಇದ್ದಿತ್ತು;/ ಕೂಡಲಸಂಗಮದೇವರ ನಿಲವು ಕನ್ನೆಯ ಸ್ನೇಹದಂತೆ ಇದ್ದಿತ್ತು!
ಅಂತೆಯೇ ಕಬೀರದಾಸರು ಹಾಡಿರುವಂತೆ:/ ಖೋಜೀ ಹೊಯತೋ ತುರಂತ ಮಿಲಿ ಹೌಂ/ಪಲ ಭರ ಕೀ ತಲಾಶ್ ಮೆ/ಕಹೈ ಕಬೀರ ಸುನೋ ಭಾಯಿ ಸಾಧೋ/ ಮೈ ತೋ ಹೂಂ ವಿಶ್ವಾಸ ಮೆ/ಮೌಕೆ ಕಹಾ ಢೂಂಡೆ ಹೈ ರೇ ಬಂದೇಮೈ ತೋ ತೇರೇ ಪಾಸ ಮೆ
‘ಹೃದಯಾಂತರಾಳದಿಂದ ಅನ್ವೇಷಿಸಿದರೆ ನಾನು ನಿನಗೆ ಒಂದು ಕ್ಷಣದಲ್ಲಿಯೇ ಲಭ್ಯವಾಗುತ್ತೇನೆ. ಸಾಧುಗಳೇ, ಕಬೀರನ ಮಾತನ್ನು ಕೇಳಿ. ನನಗಾಗಿ ನೀವು ಎಲ್ಲಿ ಹುಡುಕುತ್ತಿದ್ದೀರಿ? ನಾನು ನಿಮ್ಮ ಜೊತೆಯಲ್ಲಿಯೇ ಇದ್ದೇನೆ; ನಿಮ್ಮ ವಿಶ್ವಾಸದಲ್ಲಿಯೇ ಇದ್ದೇನೆ!’
ಒಂದೆಡೆ ಸಂಗೀತ ಹಾಗೂ ಕಲೆಗಳು ಜಾನಪದರೂಪಗಳನ್ನು ಪಡೆಯುತ್ತಿದ್ದರೆ, ಇನ್ನೊಂದೆಡೆ ಉತ್ತರ ಭಾರತದಲ್ಲಿ ಸಂತ ಹರಿದಾಸ್, ದಕ್ಷಿಣಭಾರತದಲ್ಲಿ ಪುರಂದರದಾಸ, ತ್ಯಾಗರಾಜರಂತಹ ಮಹಾನ್ ಸಂಗೀತಕಾರರು ಭಾರತದೇಶಕ್ಕೆ ಶಾಸ್ತ್ರೀಯ ಸಂಗೀತದ ಮಹತ್ತರ ಕೊಡುಗೆಯನ್ನು ಸಮರ್ಪಿಸಿದರು. ಶಾಸ್ತ್ರೀಯ ಸಂಗೀತದಲ್ಲಿ ರಾಗ-ತಾಳಗಳ ವೈಜ್ಞಾನಿಕ ಸಂಯೋಜನೆಗಳು ಮುಖ್ಯವಾದರೂ, ಭಾವವೇ ಜೀವಾಳವಾಗಿತ್ತು. ಇಂದು ಶಾಸ್ತ್ರೀಯಸಂಗೀತ ಜ್ಞಾನವು ಕೆಲವರಿಗೆ ಸೀಮಿತವಾಗಿರುವುದು ದುರದೃಷ್ಟಕರ.
ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿಯೂ ಕಾವ್ಯ ಹಾಗೂ ಸಂಗೀತ ಕಲೆಗಳು ಪ್ರಭಾವ ಬೀರಿದವು. ಸುಬ್ರಹ್ಮಣ್ಯ ಭಾರತಿ, ಬಂಕಿಮಚಂದ್ರ, ರವೀಂದ್ರನಾಥ ಟ್ಯಾಗೋರ್, ಸರೋಜಿನಿ ನಾಯ್ಡುರಂತಹ ಕವಿಗಳು ಜನಸಾಮಾನ್ಯರ ಹೃದಯಗಳಲ್ಲಿ ದೇಶಭಕ್ತಿಯ ಕಿಚ್ಚನ್ನು ಹೊತ್ತಿಸಿ ರಾಷ್ಟ್ರವು ಒಗ್ಗೂಡುವಂತೆ ಮಾಡಿದರು. ಹೀಗೆ ಪ್ರಾಚೀನಕಾಲದಿಂದ ಕಲೆಗಳು ಸಮಾಜದಲ್ಲಿ ಸನಾತನ ಧರ್ಮದ ಆಧ್ಯಾತ್ಮಿಕ ಮೌಲ್ಯಗಳನ್ನು ಉಳಿಸಿಬೆಳೆಸುವ ಕಾರ್ಯದಲ್ಲಿ ಮಹತ್ತರ ಪಾತ್ರ ವಹಿಸಿವೆ. ದುರದೃಷ್ಟವಶಾತ್ ನಮ್ಮ ಆಧುನಿಕ ಕಾಲದಲ್ಲಿ ಭಾರತೀಯ ಕಲೆಗಳು ಮೂಲ ಉದ್ದೇಶವನ್ನು ಕಳೆದುಕೊಂಡು ಕೇವಲ ಮನರಂಜನೆಯ ಮಾಧ್ಯಮಗಳಾಗಿ ಮಾರ್ಪಟ್ಟಿವೆ. ಇದರಿಂದ ಜನಜೀವನದಲ್ಲಿ ನೈತಿಕಮಟ್ಟ ಕುಸಿದು ಸ್ವೇಚ್ಛಾವೃತ್ತಿ ತಾಂಡವವಾಡುತ್ತಿದೆ. ನಮ್ಮ ದೇಶದ ಔನ್ನತ್ಯವನ್ನು ಹೆಚ್ಚಿಸಿದ ಲಲಿತಕಲೆ ಹಾಗೂ ಪ್ರದರ್ಶನಕಲೆಗಳಿಗೆ ಇಂದು ಪೋಷಣೆ-ಪ್ರೋತ್ಸಾಹ-ಬೆಂಬಲಗಳು ಮಾಯವಾಗುತ್ತಿರುವುದು ಸನಾತನ ಧರ್ಮದ ಮೌಲ್ಯಗಳಿಗೆ ಕಂಟಕಕಾರಿಯಾಗಿದೆ. ಇದನ್ನು ತಡೆಗಟ್ಟಬೇಕಾದಲ್ಲಿ ನಾವು ಆಧ್ಯಾತ್ಮಿಕ ಹಾಗೂ ನೈತಿಕ ಮೌಲ್ಯಪ್ರಧಾನವಾದ ಕಲೆಗಳಿಗೆ ಹಾಗೂ ಕಲಾವಿದರಿಗೆ ಹೆಚ್ಚಿನ ಪೋಷಣೆ ನೀಡುವುದು ಮಾತ್ರವಲ್ಲದೆ, ಯುವಜನತೆಯಲ್ಲಿ ಅಭಿರುಚಿ ಬೆಳೆಸಬೇಕಾಗಿದೆ. ಜೊತೆಗೆ ಇಂತಹ ಕಲೆಗಳ ಪ್ರದರ್ಶನಕ್ಕೆ ದೇವಸ್ಥಾನಗಳು ಹಾಗೂ ಸಾರ್ವಜನಿಕ ರಂಗಸ್ಥಳಗಳಲ್ಲಿ ಹೆಚ್ಚಿನ ಪ್ರೋತ್ಸಾಹ-ಬೆಂಬಲಗಳನ್ನು ನೀಡುವುದು ಅತ್ಯಗತ್ಯ.
(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)